ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಳಿವಳಿಕೆಗೆ ಕುರುಡು

ತಂತ್ರಾಂಶ ಅವಾಂತರ
Last Updated 31 ಜನವರಿ 2014, 19:30 IST
ಅಕ್ಷರ ಗಾತ್ರ

ಸಮಕಾಲೀನ ಸಂದರ್ಭದಲ್ಲಿ  ಕನ್ನಡಕ್ಕೆ ಅಗತ್ಯವಿರುವ ತಾಂತ್ರಿಕತೆಯ ಅರಿವು, ಪರಿಣತಿ ಇಲ್ಲದ ಸಂಸ್ಥೆ­ಯೊಂದು ಅಭಿವೃದ್ಧಿಪಡಿಸಿದ ತಂತ್ರಾಂಶವನ್ನು ಬಳಸ­ದೆಯೇ ‘ಬಳಕೆಗೆ ಯೋಗ್ಯ’ ಎಂದು ಶಿಫಾರಸು ಮಾಡಿದರೆ ಆಗುವುದಿ­ನ್ನೇನು? ಅಂಧರಿಗಿದ್ದ ಅನುಕೂಲಗಳನ್ನೆಲ್ಲ ಸ್ಥಗಿತಗೊಳಿಸುವ ವಿಕೃತ ಬ್ರೈಲ್‌ ತಂತ್ರಾಂಶ; ಆಂಡ್ರಾಯ್ಡ್‌ ಗೊತ್ತಿರುವ ಪ್ರಾಥ­ಮಿಕ ಹಂತದವರೂ ಕೆಲ ತಾಸು­ಗಳಲ್ಲಿ  ರೂಪಿಸಬಹುದಾದ ಮೊಬೈಲ್‌ ಕೀಲಿಮಣೆ;  ಒಮ್ಮೆ ವಕ್ಕರಿಸಿದರೆ ಎಂದೆಂದೂ ಬೇರೆ ಫಾಂಟ್‌ಗಳನ್ನು ಬಳ­ಸಲು ಬಿಡದ ಕೀಲಿಮಣೆ ಎಂಜಿನ್‌ ಮತ್ತು ಪ್ರಸ್ತುತತೆ  ಕಳೆದುಕೊಂಡಿರುವ ಯೂನಿ­ಕೋಡ್‌ ಪರಿವರ್ತಕ!

ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ‘ಮಾರ್ಗದರ್ಶನ’ದ ಗೈರು: ಹಿರಿಯ ಸಾಹಿತಿಗಳಿರುವ ಈ ಸಮಿತಿ­ಯಲ್ಲಿ ಕೆಲವು ತಜ್ಞರೂ ಇದ್ದಾರೆ. ತಂತ್ರಾಂಶ­ಗಳು ಹೇಗಿರಬೇಕು ಎಂಬು­ದರಿಂದ ಹಿಡಿದು ತಂತ್ರಾಂಶ ತಯಾ­ರಕರ ತಾಂತ್ರಿಕ ಅರ್ಹತೆಯನ್ನು ಗಮನಿಸು­ವವರೆಗೆ, ಅವರು ತಂತ್ರಾಂಶ ರೂಪಿಸುವ ವಿವಿಧ ಹಂತಗಳಲ್ಲಿ ಸಲಹೆ ನೀಡು­ವು­ದಕ್ಕೆ, ಆಮೇಲೆ ತಂತ್ರಾಂಶ­ಗಳನ್ನು ದೃಢೀಕರಿಸುವುದಕ್ಕೆ, - ಹೀಗೆ ಎಲ್ಲ ಹಂತಗಳಲ್ಲೂ ಇದೊಂದೇ ಸಮಿತಿಯ ಅದೇ ತಜ್ಞರ ತಂಡ ಕೆಲಸ ಮಾಡಿದ್ದು ಸರಿಯೇ? ಈ ತಂತ್ರಾಂಶಗಳನ್ನು ಪರಿಶೀಲಿಸುವ ತಜ್ಞ, ಬಾಹ್ಯ ತಂಡವೇ ಈ ಪ್ರಕ್ರಿಯೆಯಲ್ಲಿ ಇರಲಿಲ್ಲ. ಇದು ಸಂಪೂರ್ಣ ಅವೈಜ್ಞಾನಿಕ ಮತ್ತು ಏಕ­ಪಕ್ಷೀಯ ನಡೆ. ನಿಷ್ಪ್ರಯೋಜಕ, ಅಂಧ­ವಿರೋಧಿ  ಬ್ರೈಲ್‌ ತಂತ್ರಾಂಶ, ಮೈಸೂ­ರಿನ ವಾಕ್‌ ಶ್ರವಣ ಸಂಸ್ಥೆ, ಅಧಿಕೃತವಾಗಿ  ದೃಢೀ­ಕರಿಸುವ ಮುನ್ನವೇ ಬಿಡುಗಡೆ ಆಗಿಹೋಗಿದೆ!

ಕನ್ನಡ ಸಮೂಹದ ಅರಿವಿನ ನಿರ್ಲಕ್ಷ್ಯ: ಕನ್ನಡ ತಂತ್ರಾಂಶದ ಕೆಲಸ­ವನ್ನು ಸಮಿತಿಯೊಳಗಿರುವ ತಂತ್ರಜ್ಞರೇ ಮಾಡ­­ಬೇಕೆಂದು ಎಲ್ಲೂ ಯಾರೂ ಹೇಳಿರ­ಲಿಲ್ಲ. ಆದರೆ ಸಮಿತಿಯಾಗಲೀ, ಸರ್ಕಾರ­ವಾಗಲೀ ಯುವ  ( ಉದಾ: ಲಿನಕ್ಸ್‌ ಗುಂಪು)  ಮತ್ತು ಅನುಭವಿ  ಕನ್ನಡ ತಂತ್ರಜ್ಞರ (ಉದಾ: ಕೆ.ಪಿ.­ರಾವ್‌)  ಸಮೂಹದ ನೆರವನ್ನು ಪಡೆ­ಯಲು ಮುಂದಾಗಲೇ ಇಲ್ಲ. ಕ್ಷಣ­ಕ್ಷಣಕ್ಕೂ ಬದಲಾಗುವ ತಂತ್ರಜ್ಞಾನ­ವನ್ನು ಒಳಗೊಳ್ಳಲೆಂದೇ ಈಗ ಬಳಕೆ­ಯಲ್ಲಿರುವ ‘ಕ್ರೌಡ್‌ಸೋರ್ಸಿಂಗ್‌’  ವಿಧಾನ­­ವನ್ನು ಎಲ್ಲರೂ ಜಾಣತನದಿಂದ ಮರೆತರು. ಸರ್ಕಾರಕ್ಕೆ ಇರುವ ತಾಂತ್ರಿಕ ತಜ್ಞತೆಯ ಕೊರತೆಯನ್ನು ಸಮಿತಿಯು ಸಮೂ­ಹದ ಸಕ್ರಿಯ ಭಾಗಿತ್ವದಿಂದ ನೀಗ­ಬಹು­ದಾಗಿತ್ತು. ಅದಾಗಲಿಲ್ಲ.   

ಬಳಕೆಯ ಬೇಡಿಕೆ ಕಡೆಗಣನೆ: ಈಗ ಎಂತೆಂಥ ಹಳೆಯ ಫಾಂಟ್‌ಗಳಲ್ಲಿ ಇರುವ ಏನೆಲ್ಲ ದಾಖಲೆಗಳನ್ನು ಯೂನಿ­ಕೋಡ್‌ಗೆ ಪರಿವರ್ತಿಸಬೇಕಾದ ಅಗತ್ಯ­ವಿದೆ ಎಂಬ ಬೇಡಿಕೆಯ ಪ್ರಮಾಣವನ್ನು ಸಮಿತಿ­ಯಾಗಲೀ  ಸರ್ಕಾರವಾಗಲೀ ಅಂದಾ­ಜಿಸಲು ಹೋಗಿಲ್ಲ. ಹೊಸ ಫಾಂಟ್‌­ಗಳಿಗೆ ಹಲವು ಕನ್ನಡ ತಂತ್ರಾಂಶ­ಗಳಿಂದ ಪರಿವರ್ತಕಗಳು ಸಿಗುತ್ತಿವೆ. ಈಗ ಬಿಡುಗಡೆಯಾದ ಕೀಲಿಮಣೆಗಿಂತ ಸುಧಾರಿತ ಕನ್ನಡ ಎಂಜಿನ್‌ಗಳೇ ಇವೆ. ಹೀಗಿರು­ವಾಗ ಈ ಸಾಧನಗಳನ್ನು ಮತ್ತೆ ರೂಪಿ­ಸುವ ಅಗತ್ಯವೇ ಇರಲಿಲ್ಲ. 

ಲಭ್ಯ ತಂತ್ರಜ್ಞಾನದ ಬಗ್ಗೆ ಗೊತ್ತಿದ್ದೂ ನಿರ್ಲಕ್ಷ್ಯ: ಮುದ್ರಿತ ಕನ್ನಡ ಪುಸ್ತಕಗಳನ್ನೇ ಯೂನಿ­ಕೋಡ್‌ನಲ್ಲಿ ಓದುವ ತಂತ್ರ­ಜ್ಞಾನವೇ (ಸಾಫ್ಟ್‌ ಓಸಿಆರ್‌)  ಹೆಚ್ಚೂಕಡಿಮೆ ಬಂದಿರುವಾಗ ಫಾಂಟ್‌ ಆಧಾ­ರಿತ ಪರಿವರ್ತಕದ ಅಗತ್ಯ ಏನಿತ್ತು? ಯೂನಿಕೋಡ್‌ ಅಕ್ಷರಗಳನ್ನೇ ಬ್ರೈಲ್‌ಗೆ ಪರಿ­ವರ್ತಿಸುವ ಸಾಧನ ಇದ್ದಾಗ, ೭೦ರ ದಶಕದ ಪ್ರೆಸ್‌ಗೆ ಅಗತ್ಯವಾದ ಕೀಲಿ­ಮಣೆ ಏಕೆ ಬೇಕಿತ್ತು? ಖಾಸಗಿ ತಂತ್ರಾಂಶ ತಯಾರಕರೇ ತಮ್ಮೆಲ್ಲ ಸಾಧನಗಳನ್ನು, ಫಾಂಟ್‌­ಗಳನ್ನು ಸರ್ಕಾರದ ಮೂಲಕ ಕನ್ನಡಿಗ­ರಿಗೆ ಉಚಿತವಾಗಿ ಕೊಡಲು ಮುಂದೆ ಬಂದರೂ ಸರ್ಕಾರ ಏಕೆ ಪರಿಗಣಿಸಲಿಲ್ಲ?  

ಸಮಷ್ಟಿ ಪ್ರಜ್ಞೆಯ ಕೊರತೆ: ಈ ತಂತ್ರಾಂಶಗಳನ್ನೆಲ್ಲ ವಿಂಡೋಸ್‌ ೭ರಲ್ಲಿ ಮಾತ್ರ ಬಳಸಲೆಂದೇ ರೂಪಿಸಲಾಗಿದೆ. ಸರ್ಕಾರದ ಹೆಚ್ಚಿನಂಶ ಕಂಪ್ಯೂಟರ್‌ಗಳು ಹಳೆಯ ವಿಂಡೋಸ್‌ ಎಕ್ಸ್‌ಪಿಯಲ್ಲೇ ಕಾರ್ಯಾಚರಿಸುತ್ತಿವೆ. ಅಲ್ಲದೆ ಮುಕ್ತ ಆಪರೇಟಿಂಗ್‌ ಸೋರ್ಸ್‌ಗಳನ್ನು ಲೆಕ್ಕಕ್ಕೇ ಹಿಡಿದಿಲ್ಲ. ಇದು ಕಾರ್ಪೊರೇಟ್‌ ಪ್ರಭಾವ­ದಿಂದ ಸಮಿತಿ ಮತ್ತು ಸರ್ಕಾರ­ಗಳು ಹೊರತಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ.

ಅವೈಜ್ಞಾನಿಕ ಮಾರ್ಗ: ಬಿಡುಗಡೆ­ಯಾದ ಎಲ್ಲ ತಂತ್ರಾಂಶಗಳೂ ಈಗಾ­ಗಲೇ ಬಳಕೆಯಲ್ಲಿರುವ ಅಂಥದ್ದೇ ತಂತ್ರಾಂ­ಶ­ಗಳಿಗಿಂತ ಕಳಪೆಯಾಗಿವೆ ಎಂದರೆ  ಇಡೀ ಪ್ರಕ್ರಿಯೆಯೇ ದೋಷ­ಪೂರಿತ. ಅಲ್ಲದೆ ಫಾಂಟ್‌ನ ಸೌಂದ­ರ್ಯ­ದ ಬಗ್ಗೆ ಯಾವುದೇ ಅಧ್ಯಯನ, ದಾಖಲೀ­­ಕರಣವನ್ನೂ ಈ ಪ್ರಕ್ರಿಯೆ­ಯಲ್ಲಿ ಕಂಡಿಲ್ಲ.  ಬೇರೆ ಭಾಷೆಗಳಿಗೆ ಮಾದರಿ­­ಯಾಗುವಂತೆ ತಂತ್ರಾಂಶ ರಚನಾ ಪ್ರಕ್ರಿಯೆಗಳನ್ನು, ಮಾನದಂಡ­ಗ­ಳನ್ನು ರೂಪಿಸಬೇಕಾದ ನಾವು ಯಾವುದೇ ಪ್ರಕ್ರಿಯೆಯನ್ನೂ ದಾಖ­ಲಿಸದೆ,  ಮೊದಲು ತಂತ್ರಾಂಶವನ್ನು ಅನು­­ಮೋದಿಸಿ ಆಮೇಲೆ ವ್ಯಾಲಿಡೇಷನ್‌ ಪ್ರಕ್ರಿಯೆ ವರದಿಯನ್ನು ಸಲ್ಲಿಸಿದ್ದೇವೆ! ಬೀಟಾ ವರ್ಶನ್‌ ಎಂಬ ಹೆಸರು ಕೊಟ್ಟು ಅದ­­ಕ್ಕಿಂತ ಹಿಂದಿನ ಆವೃತ್ತಿಗಳ ಬಗ್ಗೆ ಉಸಿ­ರೆತ್ತು­ವುದಿಲ್ಲ! ತಂತ್ರಾಂಶ ಕುರಿತ ದೂರು­­ಗಳನ್ನು ಇ-ಮೇಲ್‌ ಮೂ­ಲಕ ಪಡೆಯುವವರೂ ಇದೇ ಸಂಸ್ಥೆ, ತಜ್ಞರೇ ಹೊರತು ಸರ್ಕಾರವಲ್ಲ! ಇಂಥ ಏಕ­ಪಕ್ಷೀಯ ಅನುಮೋದನಾ ವ್ಯವ­ಸ್ಥೆ­ಯ­ನ್ನು ಧಿಕ್ಕರಿಸಲೇಬೇಕಿದೆ.

ಕನ್ನಡ ತಂತ್ರಾಂಶಗಳನ್ನು ರೂಪಿಸಿದ ಪ್ರಕ್ರಿಯೆ­ಯು ನಾವೆಲ್ಲರೂ ಅವಮಾನ­ದಿಂದ ನಾಚಿಕೆ­ಪಟ್ಟು­ಕೊಳ್ಳು­ವಷ್ಟು ಅವೈ­ಜ್ಞಾ­ನಿಕ­­ವಾಗಿದೆ; ಸಾರ್ವಜನಿಕ ನಿಧಿಯ ಬೇಜ­ವಾಬ್ದಾರಿ ದುರ್ಬಳಕೆ­ಯಾಗಿದೆ. ಮುಖ್ಯವಾಗಿ ಕನ್ನಡಿಗರ ಸಮೂಹ­ದಲ್ಲೇ ಲಭ್ಯವಿರುವ, ವಿಶ್ವ­ಸ್ತರದ  ತಿಳಿವಳಿಕೆಗೆ ಮಾಡಿದ ಘೋರ ಅವ­ಮಾನವೂ ಆಗಿದೆ
(ರಿವರ್‌ಥಾಟ್ಸ್‌ ಮೀಡಿಯಾ ಸಂಸ್ಥೆಯನ್ನು ನಡೆಸುತ್ತಿರುವ ಲೇಖಕರು ಮುಕ್ತ ಮಾಹಿತಿ ಆಂದೋಲನದಲ್ಲಿ ಸಕ್ರಿಯರು ಮತ್ತು ಡೆಸ್ಕ್ ಟಾಪ್ ತಂತ್ರಾಂಶಗಳಲ್ಲಿ ಪರಿಣತರು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT