ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದಲ್ಲಿ ಇಂಥವರೂ ಇದ್ದಾರೆ !

ಅಕ್ಷರ ಗಾತ್ರ

ಈ ತಿಂಗಳ 24ರಂದು ನಮ್ಮ ಮನೆಯವ­ರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿಯ ದರ್ಶನ ಪಡೆದು  ವಾಪಸ್ ಹೊರಟಾಗ ರಾತ್ರಿ ೯ ಗಂಟೆ ಆಗಿತ್ತು. ತಿರುವು­ಗಳನ್ನು ದಾಟುತ್ತಾ ಕಾರನ್ನು ಚಲಾಯಿಸುತ್ತಿ­ದ್ದಾಗ ಎರಡು ಬೈಕ್‌ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಇಬ್ಬರು ಹುಡುಗರು ಕಾರನ್ನು ಪಕ್ಕಕ್ಕೆ ಚಲಿಸುವಂತೆ ಸೂಚಿಸುತ್ತಿದ್ದರು. 

ವೇಗದಲ್ಲಿದ್ದ ನಾನು ಬ್ರೇಕ್ ಹಾಕಿ, ಮನದ­ಲ್ಲಿಯೇ ‘ಕುಡುಕರ ಸಹವಾಸ' ಎಂದು ಬೈದು­ಕೊಳ್ಳುತ್ತಾ  ಪಕ್ಕಕ್ಕೆ ಚಲಿಸಿ ನೋಡಿದರೆ ಎದೆ ಝಲ್ ಎಂದಿತು. ಹೆಬ್ಬಾವೊಂದು ರಸ್ತೆ ದಾಟು­ತ್ತಿತ್ತು. ಈ ಯುವಕರು ಅದರ ಪ್ರಾಣ ಉಳಿಸಲು ಈ ರೀತಿ  ಮಾಡುತ್ತಿದ್ದರು. ಇಂದಿನ ಯುವ ಪೀಳಿಗೆಯನ್ನು ಸದಾ ಬೈಯುವ ನನ್ನನ್ನೂ ಸೇರಿದಂತೆ  ಎಲ್ಲರಿಗೂ ಸಂತಸ ಉಂಟು ಮಾಡಿದ  ಈ ಅನುಭವ ಹಂಚಿಕೊಳ್ಳ­ಬೇಕಾದ್ದೆ. ಹೆಬ್ಬಾವಿನ ಪ್ರಾಣ ರಕ್ಷಿಸಲು ಮುಂದಾದ ಆ ಇಬ್ಬರು ಹುಡುಗರು ಅಭಿನಂದನಾರ್ಹರು.

ಘಟನೆ ೨:  ೨೬ರಂದು ಟಿ.ಕೆ.ಬಡಾವಣೆಯಲ್ಲಿ ವೈದ್ಯರೊಬ್ಬರ ದವಾಖಾನೆ ಎದುರು ಒಬ್ಬ ಕುಡುಕ  ಗಲಾಟೆ ಮಾಡುತ್ತಾ  ವಾಂತಿ ಮಾಡಿದ. ಅಲ್ಲೇ ಹೋಗುತ್ತಿದ್ದ  ನಿವೃತ್ತ ಎ.ಸಿ.ಪಿ. ನಾಣಯ್ಯ ಅವರು ಅದನ್ನು ನೋಡಿ,  ಮಫ್ತಿಯಲ್ಲಿದ್ದ ಪೋಲಿಸರನ್ನು ಕರೆದು ಒಂದು ಕೊಡ ನೀರನ್ನು ಆ ಕುಡುಕನ ಮೇಲೆ ಸುರಿಸಿ, ಅವನಿಗೆ ಒಂದು ಬಕೆಟ್ ನೀರನ್ನು, ಪೊರಕೆಯನ್ನು ನೀಡಿ  ಆ ಜಾಗ­ವನ್ನು ಅವನಿಂದಲೇ ಸ್ವಚ್ಛ ಮಾಡಿಸಿದರು.  ಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ಅವರು ತೋರಿಸಿದ ಆಸಕ್ತಿಯನ್ನು ಮೆಚ್ಚದೆ ಇರಲು ಆಗಲಿಲ್ಲ.
ಮೇಲೆ ತಿಳಿಸಿದಂತಹ ಘಟನೆಗಳು ಸಾಮಾನ್ಯ­ವಾಗಿ ದಿನನಿತ್ಯ ಘಟಿಸುತ್ತವೆಯಾದರೂ ಇವು ಹಲವು ರೀತಿಯಲ್ಲಿ ನಾಗರಿಕರ ಕಣ್ಣು ತೆರೆಸು­ವಂತಿರುತ್ತವೆ.

ಮನುಷ್ಯರ ಸ್ವಭಾವವನ್ನು ಅವರ ಮೇಲ್ನೋಟದ ಕುರುಹುಗಳಿಂದ, ನಡವಳಿಕೆ­ಯಿಂದ, ಸಿನಿಕತನದಿಂದ ಪೂರ್ವ ನಿರ್ಧಾರ ಮಾಡುವುದು ಸರಿಯಲ್ಲ. ಎಲ್ಲರಲ್ಲೂ ದುಷ್ಟತನ, ಸಮಾಜ ವಿರೋಧಿ ನಡವಳಿಕೆ ಇರಲೇಬೇಕೆಂದಿಲ್ಲ. ಸಮಷ್ಟಿ ಹಿತದ ಸಮಾಜಮುಖಿ ಧೋರಣೆಗಳು ಕೆಲವರಲ್ಲಿ ಮೇಲ್ನೋಟಕ್ಕೇ ಕಾಣುವಂತಿದ್ದರೆ ಕೆಲವರಲ್ಲಿ ಸುಪ್ತವಾಗಿರುತ್ತವೆ.

ಬಹಿರಂಗವಾಗಿ, ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜದ ಹಿತದೃಷ್ಟಿ­ಯಿಂದ ಕೈಗೊಳ್ಳುವ ಇಂತಹ ಕೈಂಕರ್ಯಗಳು ನಮ್ಮನ್ನು ನಿರ್ಲಿಪ್ತತೆ­ಯಿಂದ ಹೊರತಂದು ನಾವೂ ಇಂತಹ ನಡವಳಿಕೆಗಳನ್ನು ಸಾರ್ವಜನಿಕ­ವಾಗಿ ರೂಢಿ­ಸಿಕೊಳ್ಳಲು ಸಹಾಯಕ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT