ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಹೆಗೆ ನಿಲುಕದ ಷೇರುಪೇಟೆ ವಹಿವಾಟು

Last Updated 11 ಜನವರಿ 2015, 19:31 IST
ಅಕ್ಷರ ಗಾತ್ರ

ಷೇರು ಪೇಟೆಯಲ್ಲಾಗುತ್ತಿರುವ ಬದಲಾ­ವಣೆ­ಗಳ ವೇಗ ಕಲ್ಪನಾತೀತ­ವೆನ್ನು­ವಂತಾಗಿದೆ. ಈ ತಿಂಗಳ 2 ರಂದು ಅಂತ್ಯಗೊಂಡ ವಾರದಲ್ಲಿ ಸಂವೇದಿ ಸೂಚ್ಯಂಕವು  ಹೆಚ್ಚಿನ ಏರಿಕೆ ಕಂಡುದಲ್ಲದೆ ವಿದೇಶೀ ವಿತ್ತೀಯ ಸಂಸ್ಥೆಗಳು ಮತ್ತು ಸ್ವದೇಶಿ ವಿತ್ತೀಯ ಸಂಸ್ಥೆಗಳೆರಡೂ ಕೊಳ್ಳುವ ದಿಶೆಯಲ್ಲಿದ್ದವು.

ಆದರೆ ನಂತರದ ದಿನಗಳಲ್ಲಿ ಕುಸಿದ ಅಂತರ­ರಾಷ್ಟ್ರೀಯ ಕಚ್ಚಾ ತೈಲ ಬೆಲೆ, ಗ್ರೀಕ್‌ನ ಗೊಂದಲ, ವಿದೇಶಿ ಪೇಟೆಗಳಲ್ಲುಂಟಾದ ಕುಸಿತದ ಕಾರಣ ನಮ್ಮ ದೇಶದ ಪೇಟೆಗಳು ತ್ವರಿತವಾಗಿ  ಸ್ಪಂದಿಸಿದವು. ಮಂಗಳವಾರದಂದು ಕಂಡ 854 ಅಂಶಗಳ ಕುಸಿತವು ಹೊರನೋಟಕ್ಕೆ ಆಘಾತಕಾರಿಯಾಗಿ ಕಂಡುಬಂದರೂ ಅನೇಕ ಹೂಡಿಕೆದಾರರಿಗೆ ಅವಕಾಶಗಳನ್ನು  ಕಲ್ಪಿಸಿಕೊಟ್ಟಿತು. ಅಂದು ಅಗ್ರ­ಮಾನ್ಯ ಕಂಪೆನಿಗಳನೇಕವು ಹೆಚ್ಚು ಕುಸಿತದಿಂದ ಹೂಡಿಕೆಗೆ ಉತ್ತಮವಾಗಿದ್ದವು.

ಹಿಂದಿನ ದಿನಗಳಲ್ಲಿ ಪೇಟೆಯ ಚಾಲನೆಗೆ ಮುಂಚೆ ಇಂತಹ ಕಾರಣಕ್ಕಾಗಿ ಈ ದಿಶೆಯಲ್ಲಿ ಚಲಿಸುತ್ತದೆಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ ಈಗ ಕುಸಿತ ಅಥವಾ ಏರಿಕೆ ನಂತರ ಕಾರಣವನ್ನು ನೀಡಲಾಗುತ್ತದೆ. ಮಂಗಳವಾರದಂದು ಸಂವೇದಿ ಸೂಚ್ಯಂಕದ 30 ಕಂಪೆನಿಗಳಲ್ಲಿ 29 ಕಂಪೆನಿಗಳು ಇಳಿಕೆಯಲ್ಲಿದ್ದವು.

ಕೇವಲ ಹಿಂದೂಸ್ಥಾನ್‌ ಯುನಿಲಿವರ್‌ ಮಾತ್ರ ಏರಿಕೆ ಕಂಡಿತ್ತು. ಈ ಕಂಪೆನಿಯು ವಾರಾಂತ್ಯದ ದಿನ ₹868ರ ಸಮೀಪಕ್ಕೆ ತಲುಪಿ ವಾರ್ಷಿಕ ಗರಿಷ್ಠ ದಾಖಲಿಸಿತು. ಈ ಏರಿಕೆಯ ಹಿಂದೆ ವಿದೇಶಿ ವಿತ್ತೀಯ ಸಂಸ್ಥೆಯು ತನ್ನ ರೇಟಿಂಗ್‌ನಲ್ಲಿ ಅಪ್‌ಗ್ರೇಡ್‌ ಮಾಡಿದ್ದಾಗಿದೆ.
ಒಟ್ಟಾರೆ ಸಂವೇದಿ ಸೂಚ್ಯಂಕವು 429 ಅಂಶ ಮಧ್ಯಮ ಶ್ರೇಣಿ ಸೂಚ್ಯಂಕ 104, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 109 ಅಂಶಗಳ ಕುಸಿತ ಕಂಡವು. ವಿದೇಶಿ ವಿತ್ತೀಯ ಸಂಸ್ಥೆಗಳು ₹ 2,936 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ಥಳೀಯ ವಿತ್ತೀಯ ಸಂಸ್ಥೆಗಳು ₹ 1,803 ಕೋಟಿ ಮೌಲ್ಯದ ಷೇರು ಖರೀದಿಸಿವೆ.

ಜುಬಿಲಂಟ್‌ ಲೈಫ್‌ ಸೈನ್ಸಸ್‌ ಕಂಪೆನಿಯು ₹121­ರ ಸಮೀಪದಿಂದ ₹165ರ ಸಮೀಪಕ್ಕೆ ಜಿಗಿತ ಕಂಡು ನಂತರ ₹153ರ ಸಮೀಪ ವಾರಾಂತ್ಯ ಕಂಡಿತು. ಗೃಹ ಸಾಲ ಕಂಪೆನಿಗಳಾದ ಎಲ್‌.ಐ.ಸಿ. ಹೌಸಿಂಗ್‌ ಫೈನಾನ್ಸ್, ಜಿ.ಐ.ಸಿ. ಹೌಸಿಂಗ್‌ ಫೈನಾನ್ಸ್, ಇಂಡಿಯಾ ಬುಲ್‌ ಹೌಸಿಂಗ್‌ ಫೈನಾನ್ಸ್ ಕಂಪೆನಿಗಳು ವಾರದ ಮಧ್ಯೆ ಹೆಚ್ಚಿನ ಕುಸಿತಕೊಳ್ಳಗಾಗಿ, ವಾರಾಂತ್ಯದಲ್ಲಿ ಪುಟಿದೆದ್ದು ಚೇತರಿಕೆ ಪ್ರದರ್ಶಿಸಿದವು.

ಎಲ್‌.ಐ.ಸಿ. ಹೌಸಿಂಗ್‌ ಸುಮಾರು ₹40 ರಷ್ಟು ಏರಿಳಿತ ಪ್ರದರ್ಶಿಸಿದರೆ, ಜಿ.ಐ.ಸಿ. ಹೌಸಿಂಗ್‌ ₹223­ರ ಕನಿಷ್ಠದಿಂದ ₹275ರ ಗರಿಷ್ಠ ದಾಖಲಿ­ಸಿತು. ಇಂಡಿಯಾ ಬುಲ್‌ ಹೌಸಿಂಗ್‌ ಸಹ 45 ರೂಪಾಯಿಗಳಷ್ಟು ಏರಿಳಿತ ಪ್ರದರ್ಶಿಸಿದೆ. ಕರ್ನಾಟಕ ಬ್ಯಾಂಕ್‌ ₹135ರ ಹಂತಕ್ಕೆ ಕುಸಿದು ₹145ರ ಸಮೀಪಕ್ಕೆ ಚೇತರಿಸಿಕೊಂಡಿತು. ಕ್ರಾಂಪ್ಟನ್‌ ಗ್ರೀವ್ಸ್ ಬುಧವಾರದಂದು ₹175ರ ವರೆಗೂ ಕುಸಿದು ₹192ರ ಸಮೀಪಕ್ಕೆ ವಾರಾಂತ್ಯದಲ್ಲಿ ಚೇತರಿಸಿಕೊಂಡಿತು

ಹೊಸ ಷೇರು
* ಡಿಸೆಂಬರ್ 29 ರಂದು ಆರಂಭಿಕ ಷೇರು ವಿತರಣೆ ಆರಂಭಿಸಿದ ಎನ್‌ಸಿಎಂಎಲ್‌ ಇಂಡಸ್ಟ್ರೀಸ್‌ ಕಂಪೆನಿಗೆ ಸೂಕ್ತ ಸ್ಪಂದನೆ ದೊರೆ­ಯದೆ, ಷೇರು ವಿತರಣೆಯಿಂದ ಹಿಂದೆ ಸರಿದಿದೆ.
* ಮದ್ರಾಸ್‌ ಫರ್ಟಿಲೈಸರ್ಸ್‌ ಕಂಪೆನಿ ಷೇರು­ಗಳು ಜ.12 ರಿಂದ ಮುಂಬೈ ಷೇರು ವಿನಿ­ಮಯ ಕೇಂದ್ರದ  ‘ಬಿ’ ಗುಂಪಿನಲ್ಲಿ ವಹಿವಾಟಾ­ಗಲಿದೆ.

ಕಂಪೆನಿ ವಿಲೀನ
ಸಬೆರೊ ಆರ್ಗನಿಕ್ಸ್ ಗುಜರಾತ್‌ ಲಿಮಿಟೆಡ್‌ ಕಂಪೆನಿಯನ್ನು ಕೋರಮಂಡಲ್‌ ಇಂಟರ್‌­ನ್ಯಾಶನಲ್‌ ಲಿ.ನಲ್ಲಿ ವಿಲೀನಗೊಳಿಸಲು  ಕೋರ್ಟ್‌­ಗಳು ಹಸಿರು ನಿಶಾನೆ ತೋರಿದ್ದು, ಜನವರಿ 19 ನಿಗದಿತ ದಿನವಾಗಿದೆ. 10ರ ಮುಖಬೆಲೆಯ 8 ಸಬೇರೊ ಆರ್ಗನಿಕ್‌್ಸ ಗುಜರಾತ್‌ ಷೇರಿಗೆ ಬದಲಾಗಿ ₹1 ರ ಮುಖಬೆಲೆಯ 5 ಕೋರ­ಮಂಡಲ್‌ ಇಂಟರ್‌ ನ್ಯಾಶನಲ್‌ ಷೇರನ್ನು ನೀಡುವ ಮೂಲಕ ವಿಲೀನ ಪ್ರಕ್ರಿಯೆ ಜಾರಿಗೊಳಿಸ­ಲಾಗುವುದು.

ಬೋನಸ್‌ ಷೇರು
* ಪರ್ಸಿಸ್ಟಂಟ್‌ ಸಿಸ್ಟಮ್ಸ್ ಲಿ. ಕಂಪೆನಿಯು 24 ರಂದು ಬೋನಸ್‌ ಷೇರು ವಿತರಣೆ ಪರಿಶೀಲಿಸಲಿದೆ.
* ಎಸ್‌ಆರ್‌ಎಸ್‌ ರಿಯಲ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ. ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್‌ಗೆ ಜನವರಿ 14 ನಿಗದಿತ ದಿನವಾಗಿದೆ.
* ಬಾಂಬೆ ಷೇರು ವಿನಿಮಯ ಕೇಂದ್ರದ ಟಿ ವಿಭಾಗದಲ್ಲಿ ವಹಿವಾಟಾಗುತ್ತಿರುವ ಎಸ್‌ವಿಪಿ ಗ್ಲೋಬಲ್‌ ವೆಂಚರ್ಸ್ ಲಿ. ಕಂಪೆನಿಯು ಜನವರಿ 20 ರಂದು ಬೋನಸ್‌ ಷೇರು ವಿತರಣೆ ಪರಿಶೀಲಿಸಲಿದೆ.



ವಾರದ ವಿಶೇಷ
ಪೇಟೆ ಸ್ಥಿತಿ, ವಾಸ್ತವಾಂಶ ಪರಿಶೀಲಿಸಿ ಹೂಡಿಕೆ ಮಾಡಿ

ಕೆಎಸ್‌ಎಸ್‌ ಕಂಪೆನಿಯಲ್ಲಿ ಪ್ರವರ್ತಕರ ಸ್ಟೇಕ್‌ ಇಲ್ಲ, ಆದ್ದರಿಂದ ಇದು ಪ್ರೊಫೆಷನಲ್‌ ಮೇನೇಜ್‌ಮೆಂಟ್‌ ಹೊಂದಿರುವ ಕಂಪೆನಿಯಾಗಿದೆ ಇದರಲ್ಲಿ ಹೂಡಿಕೆ ಮಾಡಬಹುದೇ ಎಂದು ಓದುಗರು ಪ್ರಶ್ನಿಸಿದ್ದಾರೆ. ಈ ಕಂಪೆನಿಯ ಹಿಂದಿನ ಹೆಸರು ಕೆ ಸೆರಾ ಸೆರಾ ಲಿ. ಎಂದಿತ್ತು. ಈ ಕಂಪೆನಿಯ ಷೇರಿನ ಬೆಲೆಯು ₹4ರ ಸಮೀಪವಿದ್ದು, ₹10ರ ಮುಖಬೆಲೆಯ ಷೇರನ್ನು ₹1ಕ್ಕೆ ಸೀಳಲು ನಿರ್ಧರಿಸಿದೆ. ಅಂದರೆ ಈಗಾಗಲೇ ಪೆನ್ನಿಸ್ಟಾಕ್‌ ಆಗಿರುವಾಗ ಮುಖಬೆಲೆ ಸೀಳಿಕೆಯಿಂದ ₹ 0.50ರ ಸಮೀಪಕ್ಕೆ ತಲುಪಿ ಷೇರಿನ ಘೋಷಣೆಯೇ ಭಾರವಾಗುವಂತಾಗುತ್ತದೆ. ಕಂಪೆನಿಯ ಮೇನೇಜ್‌ಮೆಂಟ್‌ ಪ್ರೊಫೆಷನಲ್‌ ಎಂದು ಕೇವಲ ಪ್ರವರ್ತಕರ ಭಾಗಿತ್ವವು ಸಂಪೂರ್ಣವಾಗಿ ಶೂನ್ಯವಾಗಿರುವುದರ ಆಧಾರದ ಮೇಲೆ ನಿರ್ಧರಿ­ಸು­ವುದು ಸಾಧ್ಯವಿಲ್ಲ ಈ ಕಂಪೆನಿಯು ಡಿಸೆಂಬರ್‌ 2013ರ ತ್ರೈಮಾಸಿಕದವರೆಗೂ ಶೇ53.26 ರಷ್ಟು ಭಾಗಿತ್ವದ ಪ್ರವರ್ತಕರನ್ನು ಕಂಪೆನಿಯಿಂದ ಹೊರ ಬಂದಿದ್ದಾರೆ. ಕಾರ್ಯ­ಸಾಧನೆ­ಯಲ್ಲಿ ಬದಲಾವಣೆ ತೋರಲಾಗದಿದ್ದರೆ ಈ ರೂಪದಲ್ಲಾದರೂ ಸುದ್ದಿಯಲ್ಲಿರುವ ವಿಚಾರ­ವಿರಬಹುದು.

ಪ್ರೊಪೆಷನಲ್‌ ಮೇನೇಜ್‌ಮೆಂಟ್‌ ಎಂದರೆ ಮೊದಲಿನಿಂದಲೂ ಪ್ರವರ್ತಕರಿಲ್ಲದೆ ಕಾರ್ಯಸಾಧನೆ, ಪ್ರಗತಿಪರತೆ ಇದ್ದಲ್ಲಿ ಯಶಸ್ವಿಯಾದ ವ್ಯವಸ್ಥೆ ಈ ದಿಶೆಯಲ್ಲಿ ಕಂಪೆನಿಗಳಾದ ಲಾರ್ಸನ್‌ ಅಂಡ್‌ ಟೊಬ್ರೊ, ಐಸಿಐಸಿಐ ಬ್ಯಾಂಕ್‌, ಹೆಚ್‌ಡಿಎಫ್‌ಸಿ, ಐಟಿಸಿಗಳು ಉತ್ತಮ ಮಾರ್ಗದರ್ಶಿ ಉದಾಹರಣೆಗಳಾಗಿವೆ. ಹೂಡಿಕೆದಾರರ ಭಾವನೆಗಳನ್ನು ಬಂಡವಾಳವಾಗಿಸಿಕೊಂಡು, ಸಣ್ಣ ಹೂಡಿಕೆದಾರರನ್ನು ದೀರ್ಘಕಾಲೀನ ಹೂಡಿಕೆಯ ಆಸೆ ಮೂಡಿಸಿ, ಅವರನ್ನು ಶಾಶ್ವತ ಹೂಡಿಕೆದಾರರನ್ನಾಗಿಸಿ ಪೇಟೆಯ ವಹಿವಾಟಿನಿಂದ ಮಾಯವಾದ ಅನೇಕ ಮಧ್ಯಮ, ಕೆಳಮಧ್ಯಮ ಶ್ರೇಣಿಯ ಕಂಪೆನಿಗಳ ಉದಾಹರಣೆ ಇದೆ. ಹೂಡಿಕೆದಾರರ ಪೇಟೆಯಲ್ಲಿ ತೇಲುವ ಸೂಚ್ಯಂಕಗಳ, ಪೇಟೆಗಳ ಭವಿಷ್ಯದ ಆಶಾಭಾವನೆ ಮೂಡಿಸುವ ವಿಶ್ಲೇಷಣೆಗಳಿಗೆ ಮಾರುಹೋಗಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈಗಾಗಲೇ ಉತ್ತುಂಗದಲ್ಲಿರುವ ಪೇಟೆಯ ಸ್ಥಿತಿಯನ್ನು ಮನದಲ್ಲಿಟ್ಟುಕೊಂಡು ವಾಸ್ತವ ವಿಚಾರ, ಪರಿಸ್ಥಿತಿ­ಯನ್ನಾಧರಿಸಿ ಚಟುವಟಿಕೆ ನಡೆಸಿದಲ್ಲಿ ಮಾತ್ರ ಬಂಡವಾಳವನ್ನು ಸುರಕ್ಷಿತಗೊಳಿಸಬಹುದು, ಬೆಳೆಸಲೂಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT