ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಮೇಲೆ ಇರಾಕ್‌ ಪ್ರಭಾವ!

Last Updated 15 ಜೂನ್ 2014, 19:30 IST
ಅಕ್ಷರ ಗಾತ್ರ

ಇದು ಬದಲಾವಣೆಯ ಯುಗ. ಬದಲಾವ­ಣೆಗಳು ಹೆಚ್ಚು ವೇಗವಾಗಿ, ಅನಿರೀ­ಕ್ಷಿತವಾಗಿ ಘಟಿಸುವುದರಿಂದ ಪರಿಣಾಮ­ವೂ ಊಹಿಸಲ­ಸಾಧ್ಯ. ಈ ಬದಲಾವಣೆಗಳು ಷೇರು­ಪೇಟೆಯಲ್ಲಿ ಹೆಚ್ಚು ತ್ವರಿತ, ಬಹಳಷ್ಟ ಬಾರಿ ತುಂಬಾ ಹರಿತ. ಷೇರುಪೇಟೆಯಲ್ಲಿ ಹೂಡಿಕೆಗೆ ಮುನ್ನ ಇಂತಹವುಗಳ ಪ್ರಭಾವದಿಂದ ಉಂಟಾಗಬಹು­ದಾದ ಸಕಾರಾತ್ಮಕ ಅಥವಾ ನಕಾರಾತ್ಮಕವಾದ ಬೆಳವಣಿಗೆಗಳಿಗೆ ಹೂಡಿಕೆದಾರರು ಸಿದ್ಧರಿರಬೇಕು.

ಷೇರುಪೇಟೆಯ ಸಂವೇದಿ ಸೂಚ್ಯಂಕಗಳು ಕಳೆದ ಬುಧವಾರದವರೆಗೂ ಜಾತ್ಯಾತೀತ ಭಾವನೆಯ ಏರಿಕೆ ಪ್ರದರ್ಶಿಸಿದವು. ರಿಯಾಲ್ಟಿ ವಲಯದ ಸೂಚ್ಯಂಕವು ಹೆಚ್ಚು ಏರಿಕೆ ಕಂಡಿತ್ತು.

ಶುಕ್ರವಾರದ ಪರಿಸ್ಥಿತಿಯು ಭಿನ್ನವಾಗಿತ್ತು. ದಿನದ ಮಧ್ಯಾಂತರದ ಚಟುವಟಿಕೆಯಲ್ಲಿ ಸೂಚ್ಯಂಕ­ಗಳು ತಮ್ಮ ಪಥ ಬದಲಿಸುವಂತೆ ಮಾಡಿತು. ದೇಶದ ಷೇರುಪೇಟೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಏರಿಕೆಯನ್ನು ಕಂಡಿದ್ದು ದಿಶೆ ಬದಲಿಸಲು ಸಣ್ಣ ನೆಪ ಬೇಕಿತ್ತು. ಅದಕ್ಕೆ ಇರಾಕ್‌ನಲ್ಲಿನ ಬೆಳವಣಿಗೆಯು ಪುಷ್ಟಿ ನೀಡಿತು. ಲಾಭದ ನಗದೀಕರಣ ಹೆಚ್ಚು ಇಳಿಕೆಗೆ ಕಾರಣವಾದರೆ, ಹೊಸದಾಗಿ ಹೂಡಿಕೆ ಮಾಡಲು ಮುಂದಾದವರಿಗೆ ನಿರಾಶೆ ಮೂಡಿಸಿತು.

ಇರಾಕ್‌ನ ಬೆಳವಣಿಗೆಯು ಅಂತರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿತು. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಾದ ಬಿಪಿಸಿಎಲ್‌, ಎಚ್‌ಪಿಸಿಎಲ್‌, ಐಒಸಿ ಮೊದಲಾದ ಕಂಪೆನಿಗಳ ಷೇರುಗಳು ಹೆಚ್ಚಿನ ಮಾರಾಟದ ಒತ್ತಡದಿಂದ ಭಾರಿ ಕುಸಿತಕ್ಕೊಳಗಾದವು.

ಹಿಂದಿನ ದಿನ ವಿಜೃಂಭಣೆಯ ಏರಿಕೆ ಕಂಡಿದ್ದ ಬಯೋಕಾನ್‌ ಕಂಪೆನಿಯ ಷೇರು 23 ರೂಪಾಯಿಗಳಷ್ಟು ಕುಡಿತ ಕಂಡಿತು. ರೂಪಾಯಿ ಮೌಲ್ಯ ಡಾಲರ್‌ ವಿರುದ್ಧ ತಗ್ಗಿದ ಪರಿಣಾಮ ಬ್ಯಾಂಕಿಂಗ್‌ ವಲಯದ ಷೇರುಗಳು, ಲೋಹ ವಲಯದ ಕಂಪೆನಿಗಳೂ ಆಮದು ಕಂಪೆನಿಗಳೂ ಇಳಿಕೆಗೆ ಒಳಪಟ್ಟವು. ರಿಯಾಲ್ಟಿ ವಲಯದ ಡಿಎಲ್‌ಎಫ್‌, ಎಚ್‌ಡಿಐಎಲ್‌. ಯೂನಿಟೆಕ್‌, ಒಬೆರಾಯ್‌ ರಿಯಾಲ್ಟಿ ಅಲ್ಲದೆ ಮೂಲಸೌಕರ್ಯ ವಲಯದ ಕಂಪೆನಿಗಳಾದ ಜೆಪಿ ಅಸೋಸಿಯೇಟ್‌್ಸ, ಜಿ.ಎಂ.ಆರ್‌ ಇನ್‌ಫ್ರಾ, ಜೆಪಿ ಇನ್‌ಫ್ರಾ ಮೊದಲಾದ ಕಂಪೆನಿಗಳ ಷೇರುಗಳೂ ಗಣನೀಯವಾಗಿ ಕುಸಿತ ಕಂಡವು.

ಸಣ್ಣ ಹೂಡಿಕೆದಾರರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪೆನ್ನಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತಲಿದ್ದು, ಅವರೆಲ್ಲರೂ ಶುಕ್ರವಾರ ಹೆಚ್ಚಿನ ಷಾಕ್‌ಗೆ ಒಳಗಾಗಬೇಕಾಯಿತು!

ಪೆನ್ನಿ ಸ್ಟಾಕ್‌ಗಳಲ್ಲಿ ಹೆಚ್ಚಿನವು ತ್ಯಾಜ್ಯ ಸಮೂಹ­ದ­ವಾಗಿವೆ. ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗ­ಳನ್ನು ಈಗ ಬಹಳವಾಗಿ ಕಾಡುತ್ತಿರುವ ಎನ್‌.ಪಿ.ಎ  (ವಸೂಲಾದಗ ಸಾಲ) ಸಮಸ್ಯೆಗೆ ಇಂತಹ ಕಂಪೆನಿಗಳೇ ಹೆಚ್ಚು ಕಾರಣವಾಗಿರುವ ಅಂಶವನ್ನು ನೆನಪಿನಲ್ಲಿಡುವುದು ಅವಶ್ಯಕ. ಇತ್ತೀಚೆಗೆ ಗಜ್ರಾ ಬೆವಲ್‌ಗೇರ್‌ ಕಂಪೆನಿಯ ಷೇರನ್ನು ಐಡಿಬಿಐ ಬ್ಯಾಂಕ್‌  ಮಾರಾಟ ಮಾಡಿ ಹೊರಬಂದಿರು­ವುದು, ಮಂಗಳವಾರ ಕೆಎಸ್‌ ಆಯಿಲ್‌ ಕಂಪೆನಿಯ 25 ಲಕ್ಷ ಷೇರುಗಳನ್ನು ಎಸ್‌ ಬ್ಯಾಂಕ್‌ ಮಾರಾಟ ಮಾಡಿರುವುದು ಗಮನಾರ್ಹ ಅಂಶ.

ಷೇರುಪೇಟೆಯು ಉತ್ತುಂಗದಲ್ಲಿರುವಾಗಲೇ ಈ ಹಣಕಾಸು ಸಂಸ್ಥೆಗಳು ತಮ್ಮಲ್ಲಿರುವ ಜೊಳ್ಳನ್ನು ಹೊರಹಾಕುತ್ತಿವೆ. ಹಾಗಿರುವಾಗಲೇ ಅಂತಹ ಷೇರುಗಳನ್ನು ತಮ್ಮ ಹೂಡಿಕೆ ಗುಚ್ಚದಲ್ಲಿ ಸೇರಿಸಿ­ಕೊಂಡು ಬಾಧಗೆ ಒಳಗಾಗುವುದು ಶ್ರೇಯಸ್ಕರವಲ್ಲ.

ಮತ್ತೊಂದು ಪ್ರಮುಖ ಅಂಶವೆಂದರೆ ಪೆನ್ನಿ ಸ್ಟಾಕ್‌ಗಳಲ್ಲಿ ಹೆಚ್ಚಿನವು ಶೇ 5ರ ಆವರಣದ ಮಿತಿಯಲ್ಲೇ ಇರುವುದರಿಂದ ಇಳಿಕೆಯೂ ಸುಲಭ, ಏರಿಕೆಯೂ ಸುಲಭ. ಹಾಗಾಗಿ ಅಪಾಯವೇ ಹೆಚ್ಚು. ಸುಲಭ ಹಣ ಗಳಿಕೆಯ ಆಸೆಯಿಂದ ಇರುವ ಬಂಡವಾಳವನ್ನು ಹಾಳು  ಮಾಡಿಕೊಳ್ಳುವುದು ಬೇಡ.

ಸಂವೇದಿ ಸೂಚ್ಯಂಕ ಜೂ. 11ರಂದು 25,725 ಅಂಶಗಳಿಗೆ ತಲುಪುವುದರ ಮೂಲಕ ಸಾರ್ವ­ಕಾಲಿಕ ಗರಿಷ್ಠ ಮಟ್ಟದ ದಾಖಲೆ ನಿರ್ಮಿಸಿದೆ. ಸಾಮಾನ್ಯವಾಗಿ ಸೂಚ್ಯಂಕವು ದಾಖ­ಲೆಯ ಮಟ್ಟ ತಲುಪಿದ ನಂತರ ಕ್ಷಿಪ್ರ ಇಳಿಕೆಗೆ ಒಳಪಡುವುದು ಸಹಜ ಕ್ರಿಯೆಯಾಗಿದೆ.

ಇದಕ್ಕೆ ಸೂಕ್ತ ಕಾರಣಗಳೂ ಸಹ ಸೃಷ್ಟಿಯಾಗುತ್ತವೆ. ಮತ್ತೊಂದು ಪ್ರಮುಖ ಅಂಶವೆಂದರೆ ಪೇಟೆಯ ಬಂಡವಾಳೀಕರಣ ಮೌಲ್ಯ ಜೂನ್‌ 6ರಂದು (ಶುಕ್ರವಾರ) ರೂ.89.30 ಲಕ್ಷ ಕೋಟಿಯಲ್ಲಿತ್ತು. ಅದು ಸೋಮವಾರದ ವೇಳೆಗೆಲ್ಲಾ ರೂ.90.37 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಅಂದರೆ ಮಾರುಕಟ್ಟೆ ಮೌಲ್ಯದಲ್ಲಿ ಸಾರ್ವಕಾಲಿಕ ಗರಿಷ್ಠ ದಾಖಲೆ ನಿರ್ಮಾಣವಾಯಿತು. ಆದರೂ ನಂತರದ ದಿನಗಳಲ್ಲಿ ಕೆಳಕ್ಕಿಳಿಯಿತು. ರೂ.87.89 ಲಕ್ಷ ಕೋಟಿಗಳ ಮಟ್ಟದಲ್ಲಿ ವಾರಾಂತ್ಯ ಕಂಡಿದೆ. ಹೂಡಿಕೆದಾರರ ಸಂಪತ್ತು ಕರಗುವ ವೇಗವನ್ನೂ ತೋರಿದೆ.

ಈ ವಾರ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಒಟ್ಟು 168 ಅಂಶಗಳ ಇಳಿಕೆಯನ್ನು ಕಂಡಿದೆ. ಮಧ್ಯಮ ಶ್ರೇಣಿ ಸೂಚ್ಯಂಕವು 167 ಅಂಶ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 108 ಅಂಶಗಳ ಇಳಿಕೆ ದಾಖಲಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ರೂ.2,657 ಕೋಟಿ ಹೂಡಿಕೆ ಮಾಡಿದ್ದರೆ, ಸ್ಥಳೀಯ ಹೂಡಿಕೆದಾರ ಸಂಸ್ಥೆಗಳು ರೂ.2,* 96 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ.

ಹೊಸ ಷೇರು
* ವರ್ಥ್ ಇನ್ವೆಸ್ಟ್‌ಮೆಂಟ್‌ ಅಂಡ್‌ ಟ್ರೇಡಿಂಗ್‌ ಕಂಪೆನಿ ಲಿ.. ಕೋಲ್ಕತ್ತಷೇರು ವಿನಿಮಯ ಕೇಂದ್ರ­ದಲ್ಲಿ ವಹಿವಾಟಾಗುತ್ತಿದ್ದು, ಜೂನ್ 12ರಿಂದ  ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

* ಧನುಕಾ ಕಮರ್ಷಿಯಲ್‌ ಲಿ., ಎಂ. ಟಿ ಗುಂಪಿನಲ್ಲಿ ರೂ.10 ಸಾವಿರ ವಹಿವಾಟು ಗುಚ್ಚದೊಂ­ದಿಗೆ ಜೂ. 11ರಿಂದ ವಹಿವಾಟಿಗೆ ಬಿಡುಗಡೆ­ಯಾಗಿದೆ.

* ಧ್ಯಾನ್‌ ಫಿನ್‌ ಸ್ಟಾಕ್‌ ಲಿ. ಕಂಪೆನಿಯು ಅಹ್ಮದಾಬಾದ್‌ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿದ್ದು, ಜೂ. 12ರಿಂದ ‘ಟಿ’ ಗುಂಪಿನಲ್ಲಿ  ವಹಿವಾಟಿಗೆ ಬಿಡುಗಡೆಯಾಗಿದೆ.

* ಪಾಸಾರ್‌ ಇಂಡಿಯಾ ಕಂಪೆನಿಯು ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾ­ಗುತ್ತಿ­ದ್ದು, ಜೂ. 16ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ‘ಟಿ’ ಗುಂಪಿನಲ್ಲಿ ವಹಿವಾಟಾಗಲಿದೆ.

* ಕೋಲ್ಕತ್ತ ಪ್ರಾಜೆಕ್ಟ್ಸ್ ಲಿ. ಕಂಪೆನಿಯು ಜೂ. 16ರಿಂದ ‘ಟಿ’ ಗುಂಪಿನಲ್ಲಿ ವಹಿವಾಟಾಗಲಿದೆ.

* ಅಮರನಾಥ್ ಸೆಕ್ಯುರಿಟೀಸ್‌ ಲಿ. ಕಂಪೆನಿಯು ದೆಹಲಿ  ಮತ್ತು ಅಹ್ಮದಾಬಾದ್‌ ಷೇರು ವಿನಿಮ­ಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿದ್ದು, ಇದೇ 19ರಿಂದ ‘ಟಿ’ ಗುಂಪಿನಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ಬಿಡುಗಡೆ­ಯಾಗಲಿದೆ.

ಬೋನಸ್‌ ಷೇರು
* ದೀಪಕ್‌ ನೈಟ್ರೇಟ್‌ ಲಿ. ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್‌ ಷೇರಿಗೆ ಜೂನ್‌ 23 ನಿಗದಿತ ದಿನವಾಗಿದೆ.

* ಜೆ.ಎಂ.ಟಿ ಆಟೋ ಲಿ. ಕಂಪೆನಿಯು 5:2ರ ಅನುಪಾತದ ಬೋನಸ್‌ ಷೇರು ವಿತರಣೆ ಪ್ರಕಟಿಸಿದೆ.

* ಚಾನಲ್ ನೈನ್‌ ಎಂಟರ್‌ಟೇನ್‌ಮೆಂಟ್‌ ಕಂಪೆನಿಯ 1:2ರ ಅನುಪಾತದಲ್ಲಿ ಹಕ್ಕಿನ ಷೇರು ವಿತರಿಸಲಿದೆ.

* ಬಿನ್ನಿ ಲಿ. ಕಂಪೆನಿಯು ಜೂ. 12ರಂದು ಹಕ್ಕಿನ ಷೇರು ಪರಿಶೀಲನೆ ಮಾಡಬೇಕಿತ್ತು. ಅದನ್ನು ಮುಂದೂಡಿದೆ.

ಮುಖ ಬೆಲೆ ಸೀಳಿಕೆ
* ಜಮ್ಮು ಅಂಡ್‌ ಕಾಶ್ಮೀರ್‌ ಬ್ಯಾಂಕ್‌ ತನ್ನ ಷೇರಿನ ಮುಖಬೆಲೆಯನ್ನು ರೂ.10ರಿಂದ ರೂ.1ಕ್ಕೆ ಸೀಳಲಿದೆ.

* ದೀಪಕ್‌ ನೈಟ್ರೈಟ್‌ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ.10ರಿಂದ ರೂ.2ಕ್ಕೆ ಸೀಳಲು ಜೂ. 23 ನಿಗದಿತ ದಿನ ಎಂದು ಪ್ರಕಟಿಸಿದೆ.

* ಸದರ್ನ್ ಇಸ್ಪಾಟ್‌ ಅಂಡ್‌ ಎನರ್ಜಿ ಕಂಪೆನಿಯು ಷೇರಿನ ಮುಖ ಬೆಲೆ ರೂ.10ರಿಂದ ರೂ.1ಕ್ಕೆ ಸೀಳಲಿದೆ.

ವಾರದ ವಿಶೇಷ
ಆರಂಭಿಕ ಸಾರ್ವಜನಿಕ ಷೇರು ವಿತರಣೆ (ಐಪಿಒ) ಪ್ರಕ್ರಿಯೆಗಳು ಕಡಿಮೆ ಆಗುತ್ತಿರುವುದರಿಂದ ಷೇರು ವಿನಿಮಯ ಕೇಂದ್ರಗಳ ವಹಿವಾಟು ಸೀಮಿತಗೊಳ್ಳುತ್ತಿವೆ. ಈ ವಿಚಾರವಾಗಿ  ಹಾಗೂ ಸಣ್ಣ ಹೂಡಿಕೆದಾರರು ಷೇರುಪೇಟೆಗಳಿಗೆ ಮರಳಿ ಬರುವಂತೆ ಮಾಡಲು ಅನುಕೂಲವಾಗುವಂತೆ ಷೇರುಪೇಟೆಯ ನಿಯಂತ್ರಕ ಸಂಸ್ಥೆ ‘ಸೆಬಿ’ ಪರಿಶೀಲಿಸುತ್ತಿದೆ ಎಂಬ ವಿಚಾರ ಸ್ವಾಗತಾರ್ಹ. ಆರಂಭಿಕ ಷೇರು ವಿತರಣೆಗಳಲ್ಲಿ ಮಹತ್ತರವಾದ ಬದಲಾವಣೆ ಮಾಡುವ ಬಗೆಗೂ ‘ಸೆಬಿ’ ಚಿಂತನೆ ನಡೆಸುತ್ತಿದೆ.

‘ಈ ಹಿಂದೆ ವಿತರಣೆ ‘ಐಪಿಒ’ ವಿತರಣೆ ಮಾಡಿರುವ ಕಂಪೆನಿಗಳು ಹೆಚ್ಚು ಪ್ರೀಮಿಯಂ ಸಂಗ್ರಹಿಸಿ ಹೂಡಿಕೆದಾರರಿಗೆ ನಷ್ಟ ಉಂಟು ಮಾಡಿವೆ. ಆಗಲೂ ಆ ವಿತರಣೆಗಳು ಸೆಬಿಯಿಂದ ಅಂಗೀಕಾರ ಪಡೆದೇ ನಡೆದಿರುವುದರಿಂದ ಭಾರಿ ಪ್ರಮಾಣದ ಪ್ರೀಮಿಯಂ ನಿಗದಿ ಪಡಿಸುವಲ್ಲಿ ‘ಸೆಬಿ’ಯೂ ಕಾರಣವಲ್ಲವೇ?’ ಎಂದು ಓದುಗರೊಬ್ಬರು ಪ್ರಶ್ನಿಸಿದ್ದಾರೆ.

ಪ್ರತಿಯೊಂದು ‘ಐ.ಪಿ.ಒ’ ಅಥವಾ ‘ಎಫ್‌.ಜಿ 2’ಗಳು ವಿತರಣೆಗೆ ಮುಂಚೆ ‘ಸೆಬಿ’ಗೆ ಪ್ರಾಸ್ಪೆಕ್ಟಸ್‌ನ ಕರಡು ಪ್ರತಿಯನ್ನು  ಸಲ್ಲಿಸುತ್ತವೆ. ಅದನ್ನೆಲ್ಲ ಪರಿಶೀಲಿಸಿದ ನಂತರವೇ ಸೆಬಿ ಅಂಗೀಕಾರ ನೀಡುತ್ತದೆ. ಆನಂತರವೇ ‘ಐಪಿಒ’ ವಿತರಣೆ ಮಾಡಬಹುದಾಗಿದೆ.

‘ಸೆಬಿ’ಯ ಅನುಮತಿ ಪಡೆದ ಕಂಪೆನಿಗಳು ‘ಐಪಿಒ’ ವಿತರಣೆ ಮಾಡಲೇಬೇಕು ಎಂದೇನಿಲ್ಲ. ಹಲವಾರು ಕಂಪೆನಿಗಳು ‘ಸೆಬಿ’ಯ ಅನುಮತಿ ಪಡೆದ ನಂತರವೂ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿ) ವಿತರಣೆ ಮಾಡದೆ ಅವಕಾಶವನ್ನು ಕೈಬಿಟ್ಟ ನಿದರ್ಶನಗಳೂ ಇವೆ.
‘ಸೆಬಿ’ ಅಂಗೀಕಾರ ನೀಡುವುದು ವಿತರಣೆ ಮಾಡಬೇಕೆಂದಿರುವ ಪ್ರೀಮಿಯಂ ಮೊತ್ತಕ್ಕೆ ಅಲ್ಲ ಎಂಬುದು ಗಮನಿಸಬೇಕಾದ ಅಂಶ.

ಇಲ್ಲಿ ಪ್ರಾಸ್ಪೆಕ್ಟಸ್‌ನ ಕರಡುಪ್ರತಿ ಪೂರ್ಣವಾದ ಮಾಹಿತಿಯನ್ನು ಒದಗಿಸುತ್ತಿದೆಯೇ? ಒದಗಿಸುವ ಮಾಹಿತಿ ಕ್ರಮಬದ್ಧವಾಗಿದೆಯೇ? ಹಾಗೂ ಪಾರದರ್ಶಕತೆಯನ್ನು ಅಳವಡಿಸಿಕೊಂಡಿದೆಯೇ? ಎಂಬುದನ್ನು ಮಾತ್ರ ‘ಸೆಬಿ’ ಪರಿಶೀಲಿಸುತ್ತದೆ. ಅವಶ್ಯವಿದ್ದಲ್ಲಿ ಮಾತ್ರವೇ ಬದಲಾವಣೆ ಅಥವಾ ತಿದ್ದುಪಡಿಗಳಿಗೆ ‘ಸೆಬಿ’ ಆದೇಶಿಸುತ್ತದೆ. ಆದರೆ ‘ಐಪಿಒ’ ವಿತರಣೆಯ ಪ್ರೀಮಿಯಂ ಗಾತ್ರದ ಬಗ್ಗೆ ಯಾವುದೇ ನಿರ್ದೆಶನವನ್ನು ಮಾತ್ರ ನೀಡುವುದಿಲ್ಲ.

ಜಾಗತೀಕರಣಕ್ಕೆ ಮುಂಚೆ ಇದ್ದ ‘ಕಂಟ್ರೋಲರ್‌ ಆಫ್‌ ಕ್ಯಾಪಿಟಲ್‌ ಇಷ್ಯೂಸ್‌’ ಸಂಸ್ಥೆಯು ಪ್ರೀಮಿಯಂ ನಿಯಂತ್ರಣವನ್ನು ಮಾಡುತ್ತಿತ್ತು. ಆದರೆ ‘ಸೆಬಿ’ಯ ಫ್ರೀ ಪ್ರೈಸಿಂಗ್ ಪದ್ಧತಿಯ ಕಾರಣ ವಿತರಣೆಯ ಬೆಲೆಯ ಬಗ್ಗೆ ಯೋಚಿಸುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT