ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಝಳಕ್ಕೆ ವೃದ್ಧರು, ಮಹಿಳೆಯರು, ಮಕ್ಕಳು ತತ್ತರ

ದೊಡ್ಡಬಾತಿ ಸಮೀಪ ಸ್ಥಳಾಂತರಗೊಂಡ ರಾಮಕೃಷ್ಣ ಹೆಗಡೆ ನಗರ, ಚಂದ್ರೋದಯ ನಗರ ನಿವಾಸಿಗಳ ಸಂಕಷ್ಟ
Published 10 ಮಾರ್ಚ್ 2024, 6:04 IST
Last Updated 10 ಮಾರ್ಚ್ 2024, 6:04 IST
ಅಕ್ಷರ ಗಾತ್ರ

ದಾವಣಗೆರೆ: ರಾಮಕೃಷ್ಣ ಹೆಗಡೆ ನಗರ ಹಾಗೂ ಚಂದ್ರೋದಯ ನಗರದ ನಿವಾಸಿಗಳನ್ನು ದೊಡ್ಡಬಾತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಲಿ ಜಾಗಕ್ಕೆ ಸ್ಥಳಾಂತರಿಸಿ ಮೂರು ತಿಂಗಳು ಕಳೆದರೂ, ಮನೆಗಳನ್ನು ನಿರ್ಮಿಸಿಕೊಡುವ ಕೆಲಸಕ್ಕೆ ಚಾಲನೆಯೇ ಸಿಕ್ಕಿಲ್ಲ. ಇದರಿಂದಾಗಿ ಚಾವಣಿಯೇ ಇಲ್ಲದ ತಡಗಿನ ಶೆಡ್‌ಗಳಲ್ಲಿ ವಾಸವಾಗಿರುವ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿದ್ದಾರೆ.

ವಿದ್ಯುತ್‌ ವ್ಯವಸ್ಥೆ ಕಲ್ಪಿಸಿದ್ದರೂ, ನಿತ್ಯ ಮೂರು ತಾಸು ಮಾತ್ರವೇ ವಿದ್ಯುತ್‌ ಪೂರೈಕೆಯಾಗುವುದರಿಂದ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಎರಡು ಕೊಳವೆಬಾವಿಗಳನ್ನು ಕೊರೆಯಿಸಿದ್ದು, ವಿದ್ಯುತ್‌ ಅಭಾವದ ಕಾರಣ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಮೊಬೈಲ್‌ ಶೌಚಾಲಯ ಇರಿಸಿದ್ದರೂ ಉಪಯೋಗಕ್ಕೆ ಬರುತ್ತಿಲ್ಲ. ಆದ್ದರಿಂದ ಬಯಲು ಬಹಿರ್ದೆಸೆಗೆ ತೆರಳಬೇಕಾದ ಸ್ಥಿತಿ ಇದೆ.

‘ನಮ್ಮನ್ನು ಇಲ್ಲಿಗೆ ಸ್ಥಳಾಂತರಿಸಿದ ಆರಂಭದಲ್ಲಿ ಪಾಲಿಕೆಯಿಂದ ನಿತ್ಯವೂ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೀಗ ನಿಯಮಿತವಾಗಿ ನೀರು ಪೂರೈಸುತ್ತಿಲ್ಲ. ಅಡುಗೆ ಮಾಡಲು, ಸ್ನಾನ ಮಾಡಲು, ಬಟ್ಟೆಗಳನ್ನು ತೊಳೆದುಕೊಳ್ಳಲು ಆಗುತ್ತಿಲ್ಲ. ಅನಾಗರಿಕ ಜೀವನ ನಡೆಸುವಂತಾಗಿದೆ. ಇಲ್ಲಿನ ಅವ್ಯವಸ್ಥೆ ಕಾರಣ ಕೆಲವರು ಮಕ್ಕಳನ್ನು ಸಂಬಂಧಿಕರ ಮನೆಗಳಿಗೆ ಕಳುಹಿಸಿದ್ದಾರೆ. 45ಕ್ಕೂ ಹೆಚ್ಚು ಮಕ್ಕಳು ಟೆಂಟ್‌ ಶಾಲೆಗೆ ಹೋಗುತ್ತಿದ್ದಾರೆ. ಅಲ್ಲಿಯೂ ಯಾವುದೇ ಸೌಲಭ್ಯಗಳಿಲ್ಲ. ಮಕ್ಕಳಿಗೆ ಬಿಸಿಯೂಟ ಕೊಡುತ್ತಿಲ್ಲ. ಆಹಾರಧಾನ್ಯವನ್ನು ಕೊಡುವುದಾಗಿ ಹೇಳಿ, ತಿಂಗಳಿಗೆ ತಲಾ 1 ಕೆ.ಜಿ. ಅಕ್ಕಿಯನ್ನಷ್ಟೇ ನೀಡಲಾಗಿದೆ’ ಎಂದು ಸ್ಥಳೀಯರು ದೂರಿದರು.

‘ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ, ಸಿಟಿ ಬಸ್‌ ಬಂದು ಹೋಗುತ್ತದೆ. ಇದರಿಂದ ಅನುಕೂಲವಾಗುತ್ತಿಲ್ಲ. ಸಿಟಿಗೆ ಹೋಗಿ ಬರಲು ಆಟೊಗಳನ್ನೇ ಆಶ್ರಯಿಸಬೇಕಾಗಿದೆ. ಹೋಗಲು, ಬರಲು ಸೇರಿ ನಿತ್ಯವೂ ಒಟ್ಟು ₹ 100 ಖರ್ಚಾಗುತ್ತದೆ. ಬರುವ ಕೂಲಿ ಹಣದಲ್ಲಿ ಆಟೊಕ್ಕೇ ಇಷ್ಟು ಹಣ ನೀಡಿದರೆ ಜೀವನ ನಡೆಸುವುದು ಹೇಗೆ? ಶೆಡ್‌ಗಳಿಗೆ ಚಾವಣಿಯೇ ಇಲ್ಲದಿರುವುದರಿಂದ ರಕ್ಷಣೆ ಇಲ್ಲವಾಗಿದೆ. ಬಿಸಿಲಿನ ತಾಪ ತಡೆಯಲು ಆಗುತ್ತಿಲ್ಲ. ಹೆಣ್ಣುಮಕ್ಕಳು ಶೌಚಾಲಯಕ್ಕೆ ತೆರಳಲು ಕತ್ತಲಾಗುವುದನ್ನೇ ಕಾಯಬೇಕು. ಅನಾರೋಗ್ಯದ ಕಾರಣ ಹಗಲಿನಲ್ಲಿ ಅಕ್ಕಪಕ್ಕದ ಹೊಲಗಳಿಗೆ ಹೋದರೆ ಮಾಲೀಕರು ಬಯ್ಯುತ್ತಾರೆ. ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮನೆ, ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್‌, ಶೌಚಾಲಯ, ಅಂಗನವಾಡಿ, ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಇತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೆ ಏಕಾಏಕಿ ಜನರನ್ನು ಸ್ಥಳಾಂತರಗೊಳಿಸಿದ್ದು ಅಕ್ಷಮ್ಯ. ಅಂಗನವಾಡಿ ಇಲ್ಲದ ಕಾರಣ ಪುಟ್ಟ ಮಕ್ಕಳು ಶಿಕ್ಷಣದಿಂದ ವಂಚಿತವಾಗಿದ್ದಾರೆ. ನಾಮಕಾವಸ್ತೆಗೆ ಟೆಂಟ್‌ ಶಾಲೆ ತೆರೆದಿದ್ದು, ಮಕ್ಕಳಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ರಾತ್ರಿ ವೇಳೆ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಕಂಡುಬಂದರೆ ಚಿಕಿತ್ಸೆಗಾಗಿ ನಗರಕ್ಕೇ ಹೋಗಬೇಕಿದ್ದು, ಸಾರಿಗೆ ಸಮಸ್ಯೆಯಿಂದ ಅಲ್ಲಿಯೇ ಸಾಯಬೇಕಾದ ಸ್ಥಿತಿ ಇದೆ. ಪ್ರತಿತಿಂಗಳು ಪಡಿತರ ತರಲು ದಾವಣಗೆರೆ ನಗರಕ್ಕೆ ಬರಬೇಕಿದ್ದು, ಅಲ್ಲಿಯೇ ನ್ಯಾಯಬೆಲೆ ಅಂಗಡಿ ತೆರೆಯಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ ಒತ್ತಾಯಿಸಿದರು.

ಬಿಸಿಲ ಝಳ ತಾಳಲಾರದೆ ಶೆಡ್‌ನ ಮರೆಯಲ್ಲಿ ಮಲಗಿರುವ ವ್ಯಕ್ತಿ
ಬಿಸಿಲ ಝಳ ತಾಳಲಾರದೆ ಶೆಡ್‌ನ ಮರೆಯಲ್ಲಿ ಮಲಗಿರುವ ವ್ಯಕ್ತಿ
ತಾತ್ಕಾಲಿಕವಾಗಿ ತೆರೆದಿರುವ ಟೆಂಟ್‌ ಶಾಲೆ
ತಾತ್ಕಾಲಿಕವಾಗಿ ತೆರೆದಿರುವ ಟೆಂಟ್‌ ಶಾಲೆ

ಬಿಸಿಲ ತಾಪಕ್ಕೆ ಜನರು ಸನ್‌ಸ್ಟ್ರೋಕ್‌ಗೆ ಒಳಗಾಗುವ ಅಪಾಯವಿದೆ. ಇನ್ನೆರಡು ತಿಂಗಳಲ್ಲಿ ಮಳೆ ಆರಂಭವಾಗಲಿದ್ದು ಆಗ ಇನ್ನೂ ಕಷ್ಟವಾಗಲಿದೆ. ಮನೆ ಕಟ್ಟಿಸಿಕೊಡುವವರೆಗೂ ಬಾಡಿಗೆ ಮನೆಗಳಲ್ಲಿ ವಾಸಿಸಲು ಜಿಲ್ಲಾ ಆಡಳಿತದಿಂದ ಆರ್ಥಿಕ ನೆರವು ನೀಡಬೇಕು

–ಜಬೀನಾ ಖಾನಂ ಅಧ್ಯಕ್ಷರು ನೆರಳು ಬೀಡಿ ಕಾರ್ಮಿಕರ ಯೂನಿಯನ್‌

ನಿವಾಸಿಗಳು ಬೀಡಿ ಕಟ್ಟಿ ಹಮಾಲಿ ಕಟ್ಟಡ ಹೋಟೆಲ್‌ ಕಾರ್ಮಿಕರಾಗಿ ದುಡಿದು ಕಡುಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತುರ್ತಾಗಿ ಮನೆಗಳನ್ನು ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಬೇಕು

–ಸೈಯದ್‌ ಆರಿಫ್‌ (ಹಾಕಿ) ಮುಸ್ಲಿಂ ಸಮಾಜದ ಅಧ್ಯಕ್ಷ

ಸ್ಥಳಾಂತರಗೊಂಡ ರಾಮಕೃಷ್ಣ ಹೆಗಡೆ ನಗರ ಹಾಗೂ ಚಂದ್ರೋದಯ ನಗರದ ನಿವಾಸಿಗಳಿಗೆ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲು ಒತ್ತಾಯಿಸಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದು ಜನಪರ ಸಂಘಟನೆಗಳು ಮತ್ತು ನಗರದ ನಾಗರಿಕರು ಬೆಂಬಲಿಸಬೇಕು

–ಎಂ. ಕರಿಬಸಪ್ಪ ದಾವಣಗೆರೆ ಜಿಲ್ಲಾ ಸಂಚಾಲಕ ಸ್ಲಂ ಜನರ ಸಂಘಟನೆ–ಕರ್ನಾಟಕ

ಮನೆ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ

ಸ್ಥಳಾಂತರಗೊಂಡಿರುವ ನಿವಾಸಿಗಳಿಗೆ ತಲಾ ₹ 7.50 ಲಕ್ಷ ವೆಚ್ಚದಲ್ಲಿ 400 ಮನೆಗಳನ್ನು ನಿರ್ಮಿಸಿಕೊಡಲು ವಸತಿ ಇಲಾಖೆಯಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ. ಬಳಿಕ ಕೆಲಸ ಆರಂಭಿಸಲಾಗುವುದು. ಸದ್ಯ ಬಿಸಿಲು ಹಾಗೂ ಬರುವ ಮಳೆಗಾಲದಲ್ಲಿ ತೊಂದರೆಯಾಗದಂತೆ ಶೆಡ್‌ಗಳಿಗೆ ತಾಡಪಾಲುಗಳನ್ನು ಹೊದಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು. ₹ 1.65 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಭೂಮಿಪೂಜೆ ನೆರವೇರಿಸಲಾಗಿದೆ. ಡಾ.ಎಂ.ವಿ.ವೆಂಕಟೇಶ್‌ ಜಿಲ್ಲಾಧಿಕಾರಿ ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT