ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಜಗಿಯುವ ಮೊದಲು ಯೋಚಿಸಿ...

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಅತಿಯಾದ ತಂಬಾಕು ಸೇವನೆಯಿಂದ ಕಳೆದ ಐದು ವರ್ಷಗಳಿಂದ 28 ವರ್ಷದ ಪುರುಷರೋಗಿಯೊಬ್ಬರು ತಮ್ಮ ದವಡೆ ಕೆಳಗೆ ಬೆಳೆಯುತ್ತಿದ್ದ ಗಡ್ಡೆಯಿಂದ ಬಳಲುತ್ತಿದ್ದರು. ಇದರ ಪರಿಣಾಮ ಅವರು ಹಲವು ಹಲ್ಲುಗಳನ್ನು ಕಳೆದುಕೊಂಡಿದ್ದರು.

ಮುಖದ ಕೆಲ ಭಾಗವನ್ನು ತೆಗೆಯಬೇಕಾಗುತ್ತದೆ ಮತ್ತು ಒಂದು ವೇಳೆ ಗಡ್ಡೆಯನ್ನು ತೆಗೆಯದಿದ್ದಲ್ಲಿ ಆಹಾರ ಸೇವನೆ ಮಾಡಲಾಗುವುದಿಲ್ಲ ಎಂದು ಆತನಿಗೆ ತಿಳಿಸಲಾಗಿತ್ತು.

***
ಭಾರತದಲ್ಲಿ ಪ್ರತಿವರ್ಷ ಎರಡು ಲಕ್ಷಕ್ಕೂ ಅಧಿಕ ಈ ಬಾಯಿ ಕ್ಯಾನ್ಸರ್ ರೋಗ ಪ್ರಕರಣಗಳನ್ನು ತಪಾಸಣೆ ಮಾಡಲಾಗುತ್ತದೆ. ಈ ರೋಗ ಬರಲು ಪ್ರಮುಖ ಕಾರಣ ಧೂಮಪಾನ, ಗುಟ್ಕಾ ಸೇವನೆ, ತಂಬಾಕು ಸೇವನೆ.

ವಿಶ್ವದ ಧೂಮಪಾನಿಗಳ ಪೈಕಿ ಭಾರತದ ಪಾಲು ಶೇ. 40ರಷ್ಟು. ಅಮೆರಿಕಾದಲ್ಲಿ  ಪ್ರತಿವರ್ಷ ಸುಮಾರು ಮೂವತ್ತು ಸಾವಿರ ಬಾಯಿ ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆ ಎಂಬುದು ಒಂದು ಸಾಮಾಜಿಕ ಮತ್ತು ಸಾರ್ವಜನಿಕ ಪಿಡುಗಾಗಿ ಬೆಳೆಯುತ್ತಿದೆ. ಕ್ಯಾನ್ಸರ್‌ನಂತಹ ಮಾರಕರೋಗಕ್ಕೆ  ಕಾರಣವಾಗುತ್ತಿರುವಂತಹ ಅಭ್ಯಾಸವನ್ನು ಕಡೆಗಣಿಸುವ ಅಗತ್ಯ ಜರೂರಾಗಿ ಆಗಬೇಕಿದೆ.

ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಅನ್ನು  ಸಾರ್ವಜನಿಕ ಅಭಿಯಾನ, ರೋಗಿಗಳಲ್ಲಿ ಜಾಗೃತಿ, ರೋಗದ ಆರಂಭದಲ್ಲಿ ಪತ್ತೆ ಮಾಡುವುದು, ತಂಬಾಕು ಸೇವನೆಯನ್ನು ತಡೆಗಟ್ಟುವ ಮೂಲಕ ನಿಯಂತ್ರಿಸಬಹುದಾಗಿದೆ.

ತಂಬಾಕುಸೇವನೆ, ಧೂಮಪಾನ, ಅನಾರೋಗ್ಯಕರ ಆಹಾರಸೇವನೆ, ಮದ್ಯಪಾನ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಕಾಣಿಸಿಕೊಳ್ಳುವ ಬಾಯಿ ಕ್ಯಾನ್ಸರ್‌ನಿಂದ ಸಾವಿಗೀಡಾಗುವ ಪ್ರಕರಣಗಳು ಹೆಚ್ಚುತ್ತಿವೆ.

ಆರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ರೋಗಿ ಈ ಮಾರಕರೋಗದಿಂದ ಹೊರಬರಲು ಸಾಧ್ಯವಾಗುತ್ತದೆ. ಈ ಬಾಯಿ ಕ್ಯಾನ್ಸರ್ ಕೇವಲ ಆಹಾರಸೇವನೆ ಮಾಡಲು ಮತ್ತು ಮಾತನಾಡಲು ಅಡ್ಡಿಯಾಗುತ್ತದೆಯಷ್ಟೇ ಅಲ್ಲ, ಮುಖದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ.

ಇದರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಗಳು ಬೇಕಾಗುತ್ತವೆ. ಚಿಕಿತ್ಸೆಯ ಸಂದರ್ಭದಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ, ಇಡೀ ಕುಟುಂಬದ ಸದಸ್ಯರನ್ನು ಈ ರೋಗ ಚಿಂತೆಗೀಡುಮಾಡುತ್ತದೆ; ಕುಟುಂಬದ ಮೇಲೆ ಆರ್ಥಿಕ, ಮಾನಸಿಕ ಹೊರೆಯನ್ನೂ ಹೇರುತ್ತದೆ.

ಬಾಯಿ ಕ್ಯಾನ್ಸರ್‌ನ ಕೆಲವು ಲಕ್ಷಣಗಳು
* ಬಾಯಿ ಅಥವಾ ಒಸಡಿನಲ್ಲಿ ಒರಟಾದ ಅಂಗಾಂಶ ಬೆಳೆಯುವುದು

ಸಾಮಾನ್ಯವಾಗಿ ಬಾಯಿಯೊಳಗಿನ ಎಲ್ಲ ಭಾಗ ಮೃದುವಾಗಿರುತ್ತದೆ. ಆಹಾರಪದಾರ್ಥಗಳನ್ನು ತಿನ್ನುವಾಗ ಈ ಒಸಡಿನಲ್ಲಿ ಬೆಳೆದಿರುವ ಒರಟಾದ ಭಾಗ ಗಾಯವನ್ನು ಉಂಟುಮಾಡುತ್ತದೆ.  ಈ ಒರಟಾದ ಭಾಗ ಬೆಳೆಯುತ್ತಿದ್ದರೆ ಕೂಡಲೇ ದಂತವೈದ್ಯರನ್ನು ಅಥವಾ ಮ್ಯಾಕ್ಸಿಲ್ಲೋಫೇಸಿಯಲ್ ಸರ್ಜನ್‌ರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು.

* ಒಸಡಿನಲ್ಲಿ ಬಿಳಿ ಅಥವಾ ಕೆಂಪು ಪ್ಯಾಚ್ ಕಾಣಿಸಿಕೊಳ್ಳುವುದು
ಒಸಡಿನಲ್ಲಿ ಬಿಳಿ ಅಥವಾ ಕೆಂಪುಬಣ್ಣದ ಮಚ್ಚೆಯಂತಹ ಅಂಶಗಳು ಕಂಡುಬಂದಲ್ಲಿ ಅದು ಕ್ಯಾನ್ಸರ್‌ನ ಮುನ್ಸೂಚನೆ. ಇದಕ್ಕೆ ಡೈಸ್‌ಪ್ಲೇಸಿಯಾ ಎನ್ನುತ್ತಾರೆ. ಇದು ಬಾಯಿ ಕ್ಯಾನ್ಸರ್‌ಗೆ ಪರಿವರ್ತಿತವಾಗುವುದು. ಈ ಹಿನ್ನೆಲೆಯಲ್ಲಿ ಲಕ್ಷಣಗಳು ಕಂಡ ಕೂಡಲೇ ದಂತವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

* ಬಾಯಿಯಲ್ಲಿ ಹುಣ್ಣಾಗುವುದು.
ತಿನ್ನುವಾಗ ಅಥವಾ ವೈರಲ್ ಇನ್‌ಫೆಕ್ಷನ್‌ನಿಂದಾಗಿ ಬಾಯಿಯಲ್ಲಿ ಹುಣ್ಣಾಗುತ್ತದೆ. ಈ ಹುಣ್ಣು ನಾಲ್ಕು ವಾರಗಳವರೆಗೆ ಮುಂದುವರೆದಲ್ಲಿ ಅದು ಬಾಯಿ ಕ್ಯಾನ್ಸರ್‌ನ ಮುನ್ಸೂಚನೆ ಅಥವಾ ಬಾಯಿ ಕ್ಯಾನ್ಸರ್‌ನ ಅಪಾಯವಾಗುವ ಸಾಧ್ಯತೆಗಳಿವೆ. ಹೀಗಾಗಿ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.

* ಬಾಯಿಯಲ್ಲಿ ರಕ್ತಸ್ರಾವ
ಬಾಯಿಯಲ್ಲಿ ನಿರಂತರವಾಗಿ ರಕ್ತಸ್ರಾವವಾದರೆ ಕೂಡಲೇ ವೈದ್ಯರ ಬಳಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಹಲ್ಲುಗಳನ್ನು ಕಳೆದುಕೊಳ್ಳುವುದು ಒಸಡಿನ ರೋಗದಿಂದ ಸಾಮಾನ್ಯವಾಗಿ ಹಲ್ಲುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಒಸಡಿನಲ್ಲಿ ಬೆಳೆದ ಗಡ್ಡೆ ಕೇವಲ ದವಡೆ ಮೇಲೆ ಪರಿಣಾಮ ಬೀರುವುದಿಲ್ಲ. ಹಲ್ಲುಗಳು ಬೀಳುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ದಂತವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

* ಬಾಯ್ತೆರೆಯಲು ಕಷ್ಟ
ಭಾರತದಲ್ಲಿ ಬಹುತೇಕ ರೋಗಿಗಳು ಗುಟ್ಕಾ ಮತ್ತು ಅಡಿಕೆ ಜಗಿಯುವುದರಿಂದ ಸಬ್‌ಮ್ಯುಕಸ್ ಫೈಬ್ರೋಸಿಸ್ ಬೆಳೆದು ಬಾಯಿಯನ್ನು ತೆರೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಿಸುತ್ತಾರೆ. ಇದು ಬಾಯಿ ಕ್ಯಾನ್ಸರ್‌ನ ಮುನ್ಸೂಚನೆ.

* ಮುಖ ಅಥವಾ ಬಾಯಿ ನೋವು
ಹಲ್ಲುನೋವು ಸಾಮಾನ್ಯವಾದ ಕಾರಣ. ಹಲ್ಲು ಹಾಳಾಗಿ ತಡೆಯಲಾರದಂತಹ ನೋವು ಬಂದರೆ ಒಸಡಿನಲ್ಲಿ ಗಡ್ಡೆಯ ಬೆಳೆಯಬಹುದು. ಹೀಗಾಗಿ ಇದಕ್ಕೆ ತಕ್ಷಣ ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕು.

ಬಾಯಿ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳೆಂದರೆ, ತಂಬಾಕು ಜಗಿಯುವುದು, ಎಲೆ–ಅಡಿಕೆ ಜಗಿಯುವುದು, ಧೂಮಪಾನ, ನಿರಂತರವಾಗಿ ಮದ್ಯಪಾನ ಮಾಡುವುದಾಗಿದೆ.

ಪ್ರತಿದಿನ ನಲವತ್ತು ಬಾರಿ ಧೂಮಪಾನ ಮಾಡುವುದು, ಪ್ರತಿವಾರ ಮೂವತ್ತು ಪಿಂಟ್‌ನಷ್ಟು ಬಿಯರ್ ಕುಡಿಯುವುದರಿಂದ ಸಾಮಾನ್ಯರಿಗಿಂತ ಐದು ಪಟ್ಟು ಹೆಚ್ಚು ಬಾಯಿ ಕ್ಯಾನ್ಸರ್ ಬರಲು ಕಾರಣವಾಗುತ್ತದೆ.

ಧೂಮಪಾನ ಮತ್ತು ಗುಟ್ಕಾ ಜಗಿಯುವುದು ಮತ್ತು ಅತಿಯಾದ ಮದ್ಯ ಸೇವನೆಯಂತಹ ಚಟಗಳನ್ನು ಬಿಟ್ಟರೆ ಮತ್ತು ನಿಗದಿತ ವೇಳೆಗೆ ಹಲ್ಲು ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಬಾಯಿ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT