ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಡಯಾಬಿಟಿಸ್‌ಗೆ ನಮ್ಮಲ್ಲೇ ಇದೆ ಪರಿಹಾರ

Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಡಯಾಬಿಟಿಸ್ ಒಂದು ಕಾಯಿಲೆಯೇ ಅಲ್ಲ. ಅದೇನಿದ್ದರೂ ಒಂದು ಲೈಫ್ ಸ್ಟೈಲ್‌ ಡಿಸಾರ್ಡರ್ – ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಡಯಾಬಿಟಿಸ್ ಜೀವನಶೈಲಿಯ ಸಮಸ್ಯೆ ಎಂದು ಹೇಳುತ್ತಿದ್ದ ವೈದ್ಯಕೀಯ ವಿಜ್ಞಾನ 21ನೆಯ ಶತಮಾನಕ್ಕೆ ಬರುತ್ತಿದ್ದಂತೆ ‘ಸೇವೆ’ಯು ‘ಉದ್ದಿಮೆ’ಯಾದಾಗ ಅದಕ್ಕೆ ಒಂದು ಕಾಯಿಲೆಯ ಪಟ್ಟ ಅಂಟಿಸಿದ್ದಾಯಿತು; ವಂಶಪಾರಂಪರ್ಯವೇ ಅದಕ್ಕೆ ಪ್ರಮುಖ ಕಾರಣ ಎಂದೂ ಬಿಂಬಿಸಲಾಗುತ್ತಿದೆ.

ನಮ್ಮ ಮನೆಗಳ ಸದಸ್ಯರಂತಿದ್ದ ವೈದ್ಯರು ಚಿಕ್ಕ ಚಿಕ್ಕ ಕೋಣೆಗಳ ಚಿಕಿತ್ಸಾಲಯಗಳು, ಕಾರ್ಪೊರೇಟ್‌ ಆಸ್ಪತ್ರೆಗಳಾಗಿ ಬದಲಾಗುತ್ತಿದ್ದಂತೆ ರೋಗಿಗಳನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತಿದೆ. ಮನುಷ್ಯ ಡಯಾಬಿಟಿಸ್ ಅನ್ನು ಜೀವನಶೈಲಿಯ ತೊಡಕು ಅನ್ನುವುದು ಮರೆತಾಗ, ಈ ತೊಡಕನ್ನು ತಾನೇ ಸ್ವತಃ ವಾಸಿಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಅಸಹಾಯಕತೆ ಹುಟ್ಟುತ್ತದೆ.

ಈ ಅಸಹಾಯಕತೆಯೇ ವೈದ್ಯಕೀಯ ಉದ್ದಿಮೆಗೆ ಬೇಕಾಗಿರುವುದು. ಹಾಗೆ ನೋಡಿದರೆ ಮನುಷ್ಯನ ಪ್ರತಿಯೊಂದು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೂ ಅವನ ಜೀನುಗಳು ಪ್ರಮುಖವಾದ ಪಾತ್ರ ವಹಿಸುತ್ತವೆ. ಕಾಯಿಲೆಯನ್ನು ಗುಣ ಮಾಡಿಕೊಳ್ಳಲು ಏನೇ ಸ್ವ–ಪ್ರಯತ್ನ (ಆಹಾರ, ವ್ಯಾಯಾಮ) ಮಾಡಿದರೂ ಜೀನುಗಳೇ ಮೇಲುಗೈ ಎನ್ನುವುದಾರೆ ಔಷಧಗಳು ತಾನೇ ಏನು ಮಾಡೀತು? ನಮ್ಮ ಕೈಯಲ್ಲಿ ಎಷ್ಟರ ಮಟ್ಟಿಗೆ ಡಯಾಬಿಟಿಸನ್ನು ನಿಯಂತ್ರಿಸಲು ಸಾಧ್ಯವಿದೆ ಎನ್ನುವ ಅರಿವಿನ ಆವಶ್ಯಕತೆ ಈಗ ಹೆಚ್ಚಿದೆ.

ಜೀವನಶೈಲಿ ಎಂದರೆ ಏನು? ಬದಲಾಗುತ್ತಿರುವ ಕಾಲಘಟ್ಟದಲ್ಲಿ ಎಲ್ಲವೂ ಬದಲಾಗುತ್ತಿರುತ್ತವೆ. ಶತಮಾನಗಳ ಕೆಳಗೆ ಮನುಷ್ಯ ಜೀವಿಸಿದಂತೆ ಈಗ ಖಂಡಿತವಾಗಿಯೂ ಬದುಕಲು ಸಾಧ್ಯವಿಲ್ಲ. ಸರಳ ಸಾತ್ವಿಕ ಜೀವನದಿಂದ ತುಂಬ ದೂರ ಬಂದಿರುವ ನಾವು ವೇಗದ ಬದುಕಿನಲ್ಲಿದ್ದೇವೆ.

ವೇಗ ಬರೀ ಸ್ಥಳದಿಂದ ಸ್ಥಳಕ್ಕೆ ಧಾವಿಸುವ ಧಾವಂತದಲ್ಲಿ ಮಾತ್ರ ನಿಲ್ಲದೆ, ನಮ್ಮನ್ನು ಎಲ್ಲ ರೀತಿಯಲ್ಲೂ ಎಲ್ಲ ದಿಕ್ಕುಗಳಿಂದಲೂ ಅಡ್ಡಡ್ಡ ನುಂಗಿದಂತೆ ಕಾಣುತ್ತದೆ. ಆಹಾರದ ಆಯ್ಕೆ, ಅಡುಗೆ ಮಾಡುವ ಶೈಲಿ, ಅದನ್ನು ತಿನ್ನುವ ಪರಿ; ವಿದ್ಯಾಭ್ಯಾಸದ ನವನವೀನ ವಿಧಾನಗಳು, ಹಾಕಿಕೊಳ್ಳುವ ಗುರಿಗಳು, ಆ ಗುರಿಗಳನ್ನು ಮುಟ್ಟುವ ದಾರಿಗಳು; ಚಟುವಟಿಕೆ ಮತ್ತು ವ್ಯಾಯಾಮ; ವೃತ್ತಿಯ ರೀತಿ–ನೀತಿ–ರಿವಾಜುಗಳು; ಆಸ್ತಿಯ ಗಳಿಕೆ, ಸಂಪಾದಿಸಿದ ಹಣದ ವಿನಿಯೋಗ; ಮೋಜು–ಮೇಜವಾನಿಗಳು ಎಲ್ಲದರಲ್ಲೂ ರಾಕೆಟ್ ವೇಗ.

ಈ ವೇಗ ನಮ್ಮ ಅರಿವಿಗೇ ಬರದಂತೆ ನಮ್ಮನ್ನು ಮಾನಸಿಕವಾಗಿಯೂ ಶಾರೀರಕವಾಗಿಯೂ ಸುಡುತ್ತಿರುವುದು ಹೌದು. ಸುಡುವ ಬಿಸಿ ನಮ್ಮ ಅರಿವಿಗೆ ಬರುವುದರಲ್ಲಿ ಸಾಕಷ್ಟು ಅನಾಹುತಗಳಾಗುತ್ತಿರುವುದೂ ಹೌದು. ಇಂತಹ ಸುಡುವ ಬಿಸಿಯ ಅನುಭವವೇ ‘ಡಯಾಬಿಟಿಸ್’. ಡಯಾಬಿಟಿಸ್ ಅಂದರೆ ಈಗಿನ ಜನರಿಗೆ ಒಂದು ದೊಡ್ಡ ಕಾಯಿಲೆಯಾಗಿಲ್ಲ. ‘ಅಯ್ಯೋ ಡಯಾಬಿಟಿಸಾ? ಬಿಡಿ ಎಲ್ಲರಿಗೂ ಬರತ್ತೆ’.

‘ಅದಾ ಬಿಡಿ, ನಮ್ಮನೇಲಿ ಎಲ್ಲರಿಗೂ ಇದೆ; – ಅನ್ನುವಷ್ಟು ಸರ್ವೇ ಸಾಮಾನ್ಯವಾಗಿದೆ. ಸಮಸ್ಯೆ ಏನೆಂದರೆ ಈ ಸರ್ವೇಸಾಮಾನ್ಯ ಕಾಯಿಲೆಯನ್ನು ನಾವೇ ಹೇಳಿ ಕೇಳಿ ಬರಮಾಡಿಕೊಂಡಿರುವುದು ಎನ್ನುವುದರ ಅರಿವಿಲ್ಲದಿರುವುದು. ಮೊದಲೆಲ್ಲ ಶ್ರೀಮಂತ ಮತ್ತು ರಾಜಮಹಾರಾಜರ ಮತ್ತು ಅತಿಯಾಗಿ ಪ್ರಪಂಚಪರ್ಯಟಣೆ ಮಾಡುವವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆ ಈಗ  21ನೇ ಶತಮಾನದ ‘ಗಿಫ್ಟ್’ ಆಗಿ ಎಲ್ಲರನ್ನು ಆಕ್ರಮಿಸಿಕೊಂಡಿದೆ.

ಆಹಾರದ ಮೂಲಕ ಸೇವಿಸಿದ ಶರ್ಕರವು ಜೀರ್ಣಕೋಶದಲ್ಲಿ ವಿಭಜನೆಯಾಗಿ ಬಿಡುಗಡೆಯಾಗುವ ಗ್ಲುಕೊಸು ರಕ್ತಕ್ಕೆ ಸೇರುತ್ತದೆ. ಇಲ್ಲಿಂದ ಮುಂದೆ ದೇಹದಲ್ಲೆಲ್ಲಾ ಸಂಚರಿಸುತ್ತಾ ಕಣಕಣಗಳಿಗೂ ಆಹಾರವನ್ನು(ಗ್ಲೊಕೋಸ್) ಒದಗಿಸುವ ಕ್ರಿಯೆಗೆ ‘ಇನ್ಸುಲಿನ್’ ಎಂಬ ಹಾರ್ಮೊನ್ ಬೇಕಾಗುತ್ತದೆ.

ಆದರೆ ಈ ಕಾರ್ಯದಲ್ಲಿ ತೊಡಕುಂಟಾಗಿ ಇನ್ಸುಲಿನ್‌ ಸ್ರವಿಕೆಯಲ್ಲೂ ಏರುಪೇರಾಗಿ, ಇಲ್ಲವೇ ಕಾರ್ಯತತ್ಪರತೆಯಲ್ಲಿ ಹಿಂದೆ ಬಿದ್ದು, ರಕ್ತದಲ್ಲಿ ಸಂಚರಿಸುವ ಗ್ಲೊಕೋಸ್ ದೇಹದ ಕಣಕಣಗಳಿಗೆ ಸಿಕ್ಕದೇ ಸುಮ್ಮನೇ ರಕ್ತದಲ್ಲಿ ನಿಸ್ಪ್ರಯೋಜಕವಾಗಿ ಸಂಚರಿಸುತ್ತಿರುತ್ತದೆ. ಇದರಿಂದಾಗಿ ದೇಹಕ್ಕೆ ಸಿಗಬೇಕಾದ ಆಹಾರ (ಗ್ಲುಕೋಸ್‌) ಸಿಗದೆ, ರಕ್ತದಲ್ಲಿ ಇರಬೇಕಾಗಿದ್ದಿದ್ದಕಿಂತಲೂ ಹೆಚ್ಚಾಗಿ ಗ್ಲೊಕೋಸು ಇದ್ದು ದೇಹವನ್ನು ಜರ್ಜರಿತವಾಗಿಸುತ್ತದೆ.

ಆಹಾರ ಇಲ್ಲದ ಜೀವಕೋಶಗಳು ಸದಾ ಆಯಾಸ, ನೀಗದ ಹಸಿವು ಒಂದು ಕಡೆಯಾದರೆ, ಅತಿಯಾದ ಗ್ಲುಕೋಸ್‌ ಹೊಂದಿದ ರಕ್ತವು ದೇಹಕ್ಕೇ ವಿಷವಾಗಿ ದೇಹವನ್ನು ಮತ್ತಷ್ಷು ಇಕ್ಕಟ್ಟಿಗೆ ಸಿಕ್ಕಿಸುತ್ತದೆ.

ಇದಕ್ಕೆ ಪರಿಹಾರ ಏನು?
‘ಊಟ ಬಲ್ಲವನಿಗೆ ರೋಗವಿಲ್ಲ’. ಡಯಾಬಿಟಿಸ್ ವಿಷಯಕ್ಕೆ ಈ ಮಾತು ನೂರಕ್ಕೆ ನೂರು ಸತ್ಯ. ಭಾರತೀಯರಾದ ನಾವು ಗಮನಿಸಬೇಕಾದ ಅಂಶವೆಂದರೆ ನಮ್ಮ ಜನಾಂಗೀಯ ಲಕ್ಷಣಗಳಿಗೆ ಪೂರಕವಾದ ರೀತಿಯಲ್ಲಿ ನಾವು ದೇಹಕ್ಕೆ ಶಕ್ತಿಯನ್ನು ಒದಗಿಸಬೇಕು. ಹೆಚ್ಚಾಗಿ ತಿನ್ನುವ ಕ್ಯಾಲರಿಗಳು ಮತ್ತು ಆಹಾರಾಂಶಗಳ ಅಸಮತೊಲನ ದೇಹಕ್ಕೆ ಮಾರಕ.

ದೇಹಕ್ಕೆ ಒಂದು ನಿರ್ದಿಷ್ಷವಾದ ಶಕ್ತಿ ಇರುತ್ತದೆ. ಆ ಶಕ್ತಿಯನ್ನು ಮೀರಿ ಅದಕ್ಕೆ ಕೆಲಸ ಕೊಟ್ಟರೆ ಅದು ಎಡುವುವುದು ಸಹಜ. ಅಂತೆಯೇ ದೇಹಕ್ಕೆ ಲಭ್ಯವಾಗುವುದಕ್ಕಿಂತ ಹೆಚ್ಚು ಕ್ಯಾಲರಿಗಳನ್ನು ಸೇವಿಸಿದಾಗ ಅವು ದೇಹದಲ್ಲಿಯೇ ಶೆಖರಣೆ ಆಗಿ ಇನ್ಸುಲಿನ್ ಅನ್ನು ತಬ್ಬಿಬ್ಬುಮಾಡಿಸಿ, ಅದರ ಸ್ರವಿಕೆಯನ್ನು ಹೆಚ್ಚಿಸಿ, ರಕ್ತದಲ್ಲಿರುವ ಇನ್ಸುಲಿನ್‌ ಅಂಶವನ್ನು ಹೆಚ್ಚಾಗಿಸಿ, ನಂತರ ಗ್ಲೊಕೋಸನ್ನು ಸರಿಯಾಗಿ ಬಳಸಿಕೊಳ್ಳದಿರುವಂತೆ ಮಾಡುತ್ತದೆ.

ಭಾರತೀಯ ವಯಸ್ಕರಿಗೆ 1600ರಿಂದ 2200 ಕ್ಯಾಲರಿಗಳು ಸಾಕು. ಈ ಕ್ಯಾಲರಿಗಳನ್ನು ಪಡೆಯಲು ಸುಮಾರು ಶೇ. 50ರಿಂದ 60 ಭಾಗ ಶರ್ಕರವೂ, 15ರಿಂದ 20 ಭಾಗ ಪ್ರೋಟೀನ್‌, ಉಳಿದ ಭಾಗ ಕೊಬ್ಬು ಸಾಕು. ಇದರ ಜೊತೆಗೆ ಪ್ರಮಾಣಬದ್ಧವಾದ ವಿಟಮಿನ್‌ಗಳೂ ಖನಿಜಗಳೂ ಆ್ಯಂಟಿ ಆಕ್ಸಿಡೆಂಟ್‌ಗಳೂ, ಫ್ಲೇವಾನ್‌ಗಳೂ ಎಲ್ಲವೂ ಇದ್ದರೆ ದೇಹವು ಜೀನುಗಳು ನಿರ್ಧರಿಸಿರುವಷ್ಷು ಮಟ್ಟಿಗೆ ತನ್ನ ಚಯಾಪಚಯ ಕ್ರಿಯೆಯನ್ನು ಉದ್ದೀಪನಗೊಳಿಸುತ್ತದೆ.

ನಾನೇ ಕಂಡಂತೆ ಬಹಳಷ್ಟು ಟೈಪ್– 2 ಡಯಾಬಿಟ್‌ಗಳು  200 ಮೀರಿದ್ದ ಫಾಸ್ಟಿಂಗ್ ಮತ್ತು 400ಕ್ಕೂ ಮೀರಿದ್ದ ಪೋಸ್ಟ್ ಪ್ರಾಂಡಿಯಲ್ ಸಕ್ಕರೆಯನ್ನು ಒಂದು ಇಲ್ಲ, ಎರಡು ತಿಂಗಳಲ್ಲಿ ಮಾತ್ರೆಗಳಿಲ್ಲದೆ ಸಹಜಸ್ಥಿತಿಗೆ ತರಿಸಿಕೊಂಡುಬಿಡುತ್ತಾರೆ. ಇನ್ನು ಹೊರಗಿನ ಇನ್ಸುಲಿನ್ ಸೇವಿಸುತ್ತಿದ್ದರೆ ಅದರ ಆವಶ್ಯಕತೆ ಇಲ್ಲದೆಯೇ, ಇಲ್ಲವೇ ಅತಿ ಕಡಿಮೆ ಪ್ರಮಾಣದ ಇನ್ಸುಲಿನ್ ಇಂಜಕ್ಷನ್ ಸಾಕಾಗುತ್ತದೆ. ಇದರರ್ಥ, ಡಯಾಬಿಟಿಸನ್ನು ಸರಿಮಾಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ ಎಂದು.

ಇನ್ನು ವ್ಯಾಯಾಮ ಹೇಗೆ ಡಯಾಬಿಟಿಸನ್ನು ನಿಯಂತ್ರಿಸುತ್ತದೆ ಎಂದು ನೋಡೋಣ. ಆಹಾರದ ಮೂಲಕ ಶೇಖರಣೆಯಾದ ಶಕ್ತಿಯನ್ನು ಉರುವಲಾಗಿ ಬಳಸಲೇ ಬೇಕು. ಇದಕ್ಕೆ ನಡಿಗೆ, ಯೋಗ, ಕ್ರಿಯೆ ಮುಂತಾದ ಭಾರತೀಯ ಮೂಲದ ಅಭ್ಯಾಸಗಳು ರಾಮಬಾಣ. ಇವು ಶಕ್ತಿಯನ್ನು ಬಳಸಿಕೊಳ್ಳುವುದಲ್ಲದೆ ದೇಹದಲ್ಲಿ ಆಹಾರದ ಜೊತೆ ಸೇರಿ ಹಾರ್ಮೊನುಗಳ ಕಾರ್ಯತತ್ಪರತೆಯನ್ನು ಚುರುಕುಗೊಳಿಸುತ್ತದೆ.

ಕೆಲವರ ವಂಶದಲ್ಲಿ ಎಲ್ಲರಿಗೂ ಡಯಾಬಿಟಿಸ್ ಇದೆ ಅಂದಮಾತ್ರಕ್ಕೆ ಅದರ ನಿಯಂತ್ರಣ ಸಾಧ್ಯವಿಲ್ಲ ಎಂದು ತಪ್ಪು ತಿಳಿಯಬಾರದು. ದೇಹದಲ್ಲಿ ಜೀನುಗಳು ಮತ್ತು ಆಹಾರ – ಎರಡೂ ಒಂದರೊಳಗೊಂದು ಸೇರಿ ಅನುನಯದಿಂದ ಕೆಲಸ ಮಾಡುತ್ತಿರುತ್ತದೆ. ಡಯಾಬಿಟಿಸ್ ಉಂಟುಮಾಡುವ ಜೀನುಗಳ ಕ್ರೌರ್ಯತೆಯನ್ನು ಸರಿಯಾದ ಆಹಾರ, ನಡಿಗೆ, ಯೋಗಗಳು ಬಹಳಷ್ಷು ವರ್ಷಗಳ ಕಾಲ ತಣ್ಣಗಿಡುತ್ತದೆ.

ಗರ್ಭಿಣಿಯರಲ್ಲಿನ ಡಯಾಬಿಟಿಸ್‌ಗೆ ಹೆಚ್ಚಾಗಿ ಜೀನುಗಳದ್ದೇ ಮೇಲುಗೈ. ಆದರೂ ಕೂಡ ಮಗುವಿನ ಬೆಳವಣಿಗೆಗೂ ಪೂರಕವಾದ, ಡಯಾಬಿಟಿಸನ್ನೂ ನಿಯಂತ್ರಿಸುವಂತಹ ಆಹಾರ ಕೊಟ್ಟಾಗ ಸಕ್ಕರೆಯ ಅಂಶ ಸರಿಯಾದ ಪ್ರಮಾಣಕ್ಕೆ ಬಂದೇಬರುತ್ತದೆ. ಡಯಾಬಿಟಿಸ್ ಬರಲೇ ಬೇಕು ಎಂದು ಜೀನುಗಳು ನಿರ್ಧರಿಸಿದ್ದರೂ ಕೂಡ ಅದರ ತೀವ್ರತೆಯನ್ನು ತಗ್ಗಿಸಲು ಯುಕ್ತ ಆಹಾರಪದ್ಧತಿ, ವ್ಯಾಯಾಮಗಳು ಬೇಕು.

ಡಯಾಬಿಟಿಸ್‌ಗೆ ಆಹಾರಕ್ರಮ
ಒಂದು ದಿನದಲ್ಲಿ ಅಕ್ಕಿ, ಎಲ್ಲ ತರಹದ ಧಾನ್ಯಗಳೂ ತರಕಾರಿಗಳೂ ನೆಲದ ಮೂಲದ ಹಣ್ಣುಗಳೂ, ನೆಲದ ಮೂಲದ ಎಣ್ಣೆಗಳು, ಹಾಲು ಇರುವಂಥ ಆಹಾರಸೇವನೆ ಇರಬೇಕು.

ಇವೆಲ್ಲವೂ ಸೇರಿದ ಆಹಾರವು ಜೀರ್ಣಾಂಗದೊಳಗೆ ಸಾಕಷ್ಟು ಸಮಯ ಇರುವಂತೆ ನೋಡಿಕೊಳ್ಳುವ ಗೈಸಿಮಿಕ್ ಇಂಡೆಕ್ಸ್ 40–70ರಲ್ಲಿದ್ದಾಗ ಅದು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ, ಅವರವರ ದೇಹ ಪ್ರಕೃತಿಗೆ ಹೊಂದುವಂತೆ ರಚಿಸಲಾದ ಆಹಾರಕ್ರಮವು ‘ಡಯಾಬಿಟಿಸ್’ ಎಂಬ ಜೀವನಶೈಲಿಯ ಸಮಸ್ಯೆಗೆ ರಾಮಬಾಣ.

(ಡಾ. ಎಚ್. ಎಸ್. ಪ್ರೇಮಾ, ಆಹಾರತಜ್ಞೆ  (9449974580)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT