ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಜಿಲ್ಲೆಗಳಲ್ಲಿ ಹಸ್ತಪ್ರತಿಗಳ ಡಿಜಿಟಲೀಕರಣ

Last Updated 26 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮೈಸೂರು: ಹಳಗನ್ನಡ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಡಿಜಿಟಲೀಕರಣಗೊಳಿಸುವ ವಿಶೇಷ ಯೋಜನೆಗೆ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿರುವ ಕನ್ನಡ ಶಾಸ್ತ್ರೀಯ ಭಾಷೆ ಅತ್ಯುನ್ನತ ಕೇಂದ್ರವು ಸಿದ್ಧತೆ ನಡೆಸಿದೆ. ಹಸ್ತಪ್ರತಿ ಸಂಗ್ರಹ ಕ್ಷೇತ್ರದಲ್ಲಿ ತೀರಾ ಹಿಂದುಳಿದಿರುವ 8 ಜಿಲ್ಲೆಗಳಲ್ಲಿ ಈ ಕಾರ್ಯ ನಡೆಯಲಿದೆ.
ತಾಳೆಗರಿಗಳಲ್ಲಿ ಬರೆಯಲಾಗುತ್ತಿದ್ದ ಹಸ್ತಪ್ರತಿಗಳು ಬಹುತೇಕ ಈಗ ನಶಿಸುವ ಹಂತ ತಲುಪಿವೆ. ಸಂಗ್ರಹಿಸಿ ನಕಲು ಮಾಡಿದ ಪ್ರತಿಗಳು ಉಳಿದುಕೊಂಡಿದೆ. ಅವನ್ನು ಸಂರಕ್ಷಿಸುವ ಕಾರ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಪುರಾತತ್ವ ಸಂಶೋಧನಾ ಸಂಸ್ಥೆಯು ನಡೆಸಿದೆ. ಆದರೂ ರಕ್ಷಣೆಯಾಗದ ಹಸ್ತಪ್ರತಿಗಳು ದೊಡ್ಡ ಸಂಖ್ಯೆಯಲ್ಲಿವೆ. ಈ ಕ್ಷೇತ್ರದಲ್ಲಿ ತುಂಬಾ ಹಿಂದುಳಿದಿರುವ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು, ಹಸ್ತಪ್ರತಿ ರಕ್ಷಿಸುವ ಕೆಲಸಕ್ಕೆ ಚಾಲನೆ ನೀಡಲಾಗುತ್ತಿದೆ.

ಯಾವ್ಯಾವ ಜಿಲ್ಲೆ?: ಚಾಮರಾಜನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಹಸ್ತಪ್ರತಿಗಳ ವೈಜ್ಞಾನಿಕ ಸಂಗ್ರಹ ಹಾಗೂ ರಕ್ಷಣೆ ಆಗಿಲ್ಲ. ಇದನ್ನು ಮನಗಂಡಿರುವ ಅತ್ಯುನ್ನತ ಕೇಂದ್ರವು ಈ ಜಿಲ್ಲೆಗಳಲ್ಲಿ ಹಸ್ತಪ್ರತಿ ಸಂಗ್ರಹಿಸಲಿದೆ. ನಂತರ, ಸಂಗ್ರಹಗೊಂಡ ಹಸ್ತಪ್ರತಿಗಳನ್ನು ಸಂಸ್ಕರಿಸಿ, ಶುಚಿಗೊಳಿಸಿ, ಅವನ್ನು ಡಿಜಿಟಲೀಕರಣಗೊಳಿಸಲಾಗುವುದು.
ಈ ಪ್ರಕ್ರಿಯೆಯನ್ನು ಅಂತಿಮವಾಗಿ ಅಂತರ್ಜಾಲಕ್ಕೆ ಸೇರಿಸಲಾಗುವುದು. ಹಸ್ತಪ್ರತಿಗಳನ್ನು ಅತ್ಯಂತ ಸುಲಭವಾಗಿ ಸಾಕ್ಷಕರರಿಗೆ ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಕೇಂದ್ರದ ನಿರ್ದೇಶಕ ಪಿ.ಕೆ.ಖಂಡೋಬ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯದಲ್ಲಿ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕದ ಭಾಗದಲ್ಲೇ ಹಸ್ತಪ್ರತಿಗಳ ಸಂಗ್ರಹ ಹಾಗೂ ಡಿಜಿಟಲೀಕರಣ ಉತ್ತಮವಾಗಿದೆ ನಡೆದಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಈ ಕಾರ್ಯ ಭರದಿಂದ ಆಗಿದೆ. ಆದರೆ, ಕರ್ನಾಟಕದ ದಕ್ಷಿಣ ಭಾಗದಲ್ಲಿ ತೀರಾ ಕಳವಳಕಾರಿ ಪ್ರಮಾಣದಲ್ಲಿ ಡಿಜಿಟಲೀಕರಣವಾಗಿದೆ. ಮೈಸೂರು, ಬೆಂಗಳೂರಿನಲ್ಲಿ ಈ ಕಾರ್ಯ ಕೊಂಚ ನಡೆದಿದೆ ಎನ್ನಬಹುದಾದರೂ, ಸಮಾಧಾನಕರವಾಗಿಲ್ಲ ಎಂದು ಹೇಳಿದರು.

ಕಟ್ಟಾಳುಗಳ ಸಾಕ್ಷ್ಯಚಿತ್ರ

ಕನ್ನಡದ ಕಟ್ಟಾಳುಗಳನ್ನು ಕುರಿತ ಸಾಕ್ಷ್ಯಚಿತ್ರ ನಿರ್ಮಾಣವನ್ನೂ ಕೇಂದ್ರ ನಡೆಸುತ್ತಿದೆ. ಕನ್ನಡವನ್ನು ಶಾಸ್ತ್ರೀಯವಾಗಿ ಶ್ರೀಮಂತಗೊಳಿಸಲು ಶ್ರಮಿಸಿದ ಜೀವಂತ ಸಾಹಿತಿಗಳನ್ನು ಕುರಿತು ಈ ಸಾಕ್ಷ್ಯಚಿತ್ರ ಹೊರಬರಲಿವೆ. ಪ್ರೊ.ಕೆ.ಚಿದಾನಂದ ಮೂರ್ತಿ, ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ, ಪ್ರೊ.ಜಿ.ವೆಂಕಟಸುಬ್ಬಯ್ಯ, ಪ್ರೊ.ಸಿ.ಪಿ.ಕೃಷ್ಣಕುಮಾರ್‌ ಅವರಿಗೆ ಈ ಗೌರವ ಸಿಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಾಹಿತಿಗಳು ಬದುಕಿರುವಾಗಲೇ ಸಾಕ್ಷ್ಯಚಿತ್ರಗಳ ನಿರ್ಮಾಣ ಆಗಬೇಕು. ದೇಜಗೌ ಅವರೂ ಈ ಪಟ್ಟಿಯಲ್ಲಿದ್ದರು. ಅವರು ನಿಧನರಾಗಿದ್ದು, ಪಟ್ಟಿಯಿಂದ ಕೈಬಿಡಲಾಯಿತು ಎಂದು ಖಂಡೋಬ ತಿಳಿಸಿದರು.

ಎಂಟು ಜಿಲ್ಲೆಗೆ 10 ಸಂಶೋಧಕರು
ಮೇಲಿನ 8 ಜಿಲ್ಲೆಗಳಿಗೆ ತಲಾ 10 ಸಂಶೋಧಕರನ್ನು ನಿಯೋಜಿಸಲಾಗುತ್ತದೆ. ತಲಾ ಒಬ್ಬರು ಸಂಯೋಜಕರೂ ಇರುತ್ತಾರೆ. ಈ ತಂಡಗಳು ಹಸ್ತಪ್ರತಿ ಸಂಶೋಧನೆ, ಸಂಗ್ರಹ, ರಕ್ಷಣೆ ಹಾಗೂ ಡಿಜಿಟಲೀಕರಣ ಕಾರ್ಯ ನಡೆಸಲಿವೆ. ನಂತರ, ಇಡೀ ರಾಜ್ಯಕ್ಕೇ ಅನ್ವಯಿಸುವಂತೆ ಡಿಜಿಟಲೀಕರಣಗೊಂಡ ಹಸ್ತಪ್ರತಿಗಳನ್ನು ಒಂದು ವೇದಿಕೆಯ ಅಡಿಯಲ್ಲಿ ಸಿಗುವಂತೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT