ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ... ಇದು ಮೆಣಸಿನ ಬಣ್ಣ

ನೈಸರ್ಗಿಕ ಬಣ್ಣ
Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ನೈಸರ್ಗಿಕ ಬಣ್ಣ ತಯಾರಿಕೆಯಲ್ಲಿ ಮೆಣಸು ಮುಖ್ಯ ಪಾತ್ರ ವಹಿಸುತ್ತದೆ. ಅದರಲ್ಲೂ ಬ್ಯಾಡಗಿ ಮೆಣಸು ಬಣ್ಣ ತಯಾರಿಕೆಯ ಉದ್ದೇಶಕ್ಕೆ ಹೆಚ್ಚು ರಫ್ತಾಗುತ್ತದೆ. 
 
ಬಣ್ಣ ತಯಾರಿಕೆ ಹೀಗೆ...
‘ಕ್ಯಾಪ್ಸಾಇಸಿನ್‌’  ಘಾಟಿಗೆ ಮತ್ತು ‘ಪ್ಯಾಪ್ರಿಕ’ ಮೆಣಸಿನ ಬಣ್ಣಕ್ಕೆ ಕಾರಣವಾಗುವ ಅಂಶಗಳು. ಮೆಣಸಿನಲ್ಲಿ   ‘ಒಲಿಯೊರೆಸಿನ್’ ಎಂಬ ಅಂಶವಿದೆ.   ಮೆಣಸಿಗೆ ಸೂಕ್ತ ದ್ರಾವಣ ಬಳಸಿ ಅದರಲ್ಲಿರುವ ಒಲಿಯೊರೆಸಿನ್‌ ಅಂಶವನ್ನು ಹೊರ ತೆಗೆಯುತ್ತಾರೆ. 
 
ಮೆಣಸಿನಲ್ಲಿ ಅಷ್ಟೇ ಅಲ್ಲದೆ ಟೊಮೆಟೊ, ಕಾಳುಮೆಣಸು, ಚೆಂಡು ಹೂ, ಅರಿಶಿಣ, ಶುಂಠಿ, ಏಲಕ್ಕಿ ಮುಂತಾದವುಗಳಲ್ಲಿ ವಿವಿಧ ಪ್ರಮಾಣದಲ್ಲಿ ಒಲಿಯೊರೆಸಿನ್ ಇರುತ್ತದೆ. ಸೂಕ್ತ ರಾಸಾಯನಿಕ ದ್ರಾವಣ ಬಳಸಿ ಒಲಿಯೊರೆಸಿನ್‌ ತೆಗೆದು, ಶುದ್ಧೀಕರಿಸಲಾಗುತ್ತದೆ. ನಂತರ ಆಯಾ ದೇಶಗಳ ಆಹಾರ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.  
 
ಬಣ್ಣಗಳ ಬಳಕೆ ಎಲ್ಲೆಲ್ಲಿ? 
ಆಹಾರ ಸಂರಕ್ಷಕಗಳು, ಸಿದ್ಧ ಆಹಾರ ತಯಾರಿಕಾ ಉದ್ಯಮ, ಪಾನೀಯ, ಸಾಸ್, ಸಿಹಿ ತಿನಿಸು, ಔಷಧ ತಯಾರಿಕೆ ಸೇರಿದಂತೆ ಮತ್ತಿತರೆ ಉದ್ಯಮದಲ್ಲಿ  ಬಳಸಲಾಗುತ್ತದೆ.
 
ಬಳಕೆಗೆ ಕಾರಣ...
ಆಹಾರ ತಯಾರಿಕೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಒಲಿಯೊರೆಸಿನ್‌ ಬಳಸಿದರೂ ಹೆಚ್ಚು ಪ್ರಮಾಣದಲ್ಲಿ ಮೆಣಸಿನಷ್ಟೇ ರುಚಿ, ಘಾಟು, ಖಾರದಂಶ ಎಲ್ಲವೂ ದೊರೆಯುತ್ತದೆ. ಅಲ್ಲದೆ, ಒಲಿಯೊರೆಸಿನ್‌ ಬೇಗ ಕೆಡುವುದಿಲ್ಲ. ಇದರ ಸಾಗಣಿಕೆ ಮತ್ತು ಸಂಗ್ರಹಣೆ  ಸುಲಭ.  
 
ಮೆಣಸಿನ ವಹಿವಾಟು 
ವಿಶ್ವದ ಒಟ್ಟು ಒಲಿಯೊರೆಸಿನ್‌ ತಯಾರಿಕೆಯಲ್ಲಿ ಭಾರತದ ಪಾಲು ಬರೋಬ್ಬರಿ ಶೇಕಡ 70. ಭಾರತದ  ಒಲಿಯೊರೆಸಿನ್‌ ವಹಿವಾಟು ₹600 ಕೋಟಿಗೂ ಹೆಚ್ಚು. ಚೀನಾ, ಅಮೆರಿಕ, ಬ್ರೆಜಿಲ್, ಶ್ರೀಲಂಕಾ, ದಕ್ಷಿಣ ಆಫ್ರಿಕ, ಲ್ಯಾಟಿನ್‌ ಅಮೆರಿಕ ದೇಶಗಳು ಒಲಿಯೊರೆಸಿನ್‌ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಇತರ ದೇಶಗಳು. 
 
ಬ್ಯಾಡಗಿ ಮೆಣಸಿನ ಮಾರುಕಟ್ಟೆ ಜೊತೆಗೆ ಕೇರಳದ ಕೊಚ್ಚಿಯಲ್ಲಿ ಇರುವ ಮೆಣಸಿನ ಫಾರ್ಮ್‌ಗಳು ದೇಶದ ಮುಂಚೂಣಿ ಮೆಣಸು ಉತ್ಪಾದನಾ ಕ್ಷೇತ್ರಗಳು. 
 
ಒಲಿಯೊರೆಸಿನ್‌ ಅಂಶವು ಬ್ಯಾಡಗಿ ಮೆಣಸಿನಲ್ಲಿ ಹೆಚ್ಚು ಲಭ್ಯವಿದೆ. ಇದಕ್ಕೆ ಬ್ಯಾಡಗಿ ಮೆಣಸು ಬೆಳೆಯುವ ಗದಗ, ಧಾರವಾಡ, ಹಾವೇರಿ ಮುಂತಾದ ಜಿಲ್ಲೆಗಳ ಮಣ್ಣು, ನೀರು, ವಾತಾವರಣ ಪೂರಕವಾಗಿದೆ. ಬ್ಯಾಡಗಿ ಮೆಣಸನ್ನು ದೇಶದ ಎಲ್ಲ ಭಾಗಗಳಲ್ಲಿ ಬೆಳೆಯಲು ಸಾಧ್ಯವಿಲ್ಲ. ಹಾಗಾಗಿ ಬ್ಯಾಡಗಿ ಮೆಣಸಿಗೆ ವಿಶ್ವದೆಲ್ಲೆಡೆ ಬೇಡಿಕೆ ಹೆಚ್ಚು. ಮಳೆ ಆಧಾರಿತ ಕೃಷಿ ಪ್ರದೇಶದಲ್ಲಿ ಬೆಳೆ ಕುಂಠಿತವಾದರೆ ಮಾತ್ರ ಇಳುವರಿ ಕಡಿಮೆ ಆಗುತ್ತದೆ. ಆದರೂ ಚೀನಾಕ್ಕೆ ಬ್ಯಾಡಗಿ ಮೆಣಸು ರಫ್ತು ವಿಚಾರದಲ್ಲಿ ಭಾರತ ಪ್ರಬಲ ಪೈಪೋಟಿ ಒಡ್ಡುತ್ತಿದೆ. 
 
ಮನೆ ಅಗತ್ಯಕ್ಕೂ ಬಳಸಬಹುದು
ಮನೆಯಲ್ಲಿ ದಿನನಿತ್ಯದ ಆಹಾರ ತಯಾರಿಕೆಗೆ, ಮಸಾಲೆ ಪುಡಿ ತಯಾರಿಕೆಗೆ ಒಲಿಯೊರೆಸಿನ್‌ ಬಳಸಬಹುದು. ಆದರೆ ಅತಿ ಕಡಿಮೆ ಪ್ರಮಾಣದಲ್ಲಿ ಬಳಸಬೇಕು.
ಮಾರುಕಟ್ಟೆಯಲ್ಲಿ ಅಲ್ಪ ಪ್ರಮಾಣದಲ್ಲಿ ಒಲಿಯೊರೆಸಿನ್‌ ಲಭ್ಯವಿಲ್ಲ. ಅಲ್ಲದೆ, ಜನರಲ್ಲಿ ಒಲಿಯೊರೆಸಿನ್‌ ಬಳಕೆಯ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಹಾಗಾಗಿ ಒಲಿಯೊರೆಸಿನ್‌ ಬಳಕೆ ಮನೆಗಳಿಗಿಂತ ವಿವಿಧ ಉದ್ಯಮಗಳಲ್ಲಿಯೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT