ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾಶ್ಚಿಮಾತ್ಯರು ಬರೆದ ಪುರಾಣಗಳಿಂದ ಮುಕ್ತವಾಗಬೇಕು’

ಧಾರವಾಡ ಸಾಹಿತ್ಯ ಸಂಭ್ರಮ
Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಧಾರವಾಡ: ಪಾಶ್ಚಿಮಾತ್ಯರು ಬರೆದ ಪುರಾಣಗಳಿಂದ ಬಿಡುಗಡೆ ಹೊಂದಿ ಹೊಸದಾಗಿ ವ್ಯಾಖ್ಯಾನ ಮಾಡುವ ಅಗತ್ಯ ಇದೆ ಎಂದು ಪ್ರಸಿದ್ಧ ಪುರಾಣಗಳ ಕುರಿತ ಸಾಹಿತಿ ದೇವದತ್ತ ಪಟ್ಟನಾಯಕ ಹೇಳಿದರು.

ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಶ್ಚಾತ್ಯರು ಅವರ ಕಲ್ಪನೆಗೆ ತಕ್ಕಂತೆ ಭಾರತೀಯ ಪುರಾಣಗಳನ್ನು ಬರೆದಿದ್ದಾರೆ. ನಾವು ಬಾಲ್ಯದಲ್ಲಿ ಕೇಳಿದ ಕಥೆಗಳಿಗೂ, ಪಾಶ್ಚಾತ್ಯರು ನೀಡಿರುವ ವ್ಯಾಖ್ಯಾನಗಳಿಗೂ ತಾಳೆಯಾಗುವುದಿಲ್ಲ. ಹೀಗಾಗಿ 19ನೇ ಶತಮಾನದಲ್ಲಿ ಯುರೋಪಿಯನ್ನರು ನೀಡಿದ ವ್ಯಾಖ್ಯಾನಗಳಿಂದ ಮುಕ್ತಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ವೇದ, ಉಪನಿಷತ್ತು, ಪುರಾಣ ಒಂದಕ್ಕೊಂದು ಪರಸ್ಪರ ಸಂಬಂಧ ಹೊಂದಿವೆ. ವೇದ ಬೀಜ ಆಗಿದ್ದರೆ, ಉಪನಿಷತ್ತು ಮತ್ತು ಪುರಾಣ ಅದೇ ಬೀಜದಿಂದ ಹುಟ್ಟಿದ ಮರದ ಹಣ್ಣುಗಳು. ಅದೇ ರೀತಿ ಮಹಾಭಾರತ, ರಾಮಾಯಣ, ವಿಷ್ಣು ಪುರಾಣ, ಶಿವಪುರಾಣ, ದೇವಿ ಪುರಾಣ, ತಂತ್ರ ಪರಂಪರೆಗಳನ್ನು ಭಿನ್ನವಾಗಿ ನೋಡಲು ಸಾಧ್ಯವಿಲ್ಲ. ಅವು ಒಂದಕ್ಕೊಂದು ಸಂಬಂಧ ಹೊಂದಿವೆ.ಒಂದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡರೆ ಮಾತ್ರ ಮತ್ತೊಂದು ಅರ್ಥವಾಗುತ್ತದೆ’ ಎಂದರು.

ಪುರಾಣಗಳ ಬಗ್ಗೆ ಬಲಪಂಥೀಯರು ಮತ್ತು ಎಡಪಂಥೀಯರು ಅತಿರೇಕ ಎನ್ನುವ ರೀತಿಯಲ್ಲಿ ಅವರ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಅವೆರಡೂ ಸರಿಯಲ್ಲ. ನಿಜವಾದ ಪುರಾಣ ಯಾವುದೋ ಒಂದು ಪಂಥಕ್ಕೆ ಸೀಮಿತವಾಗಿಲ್ಲ ಎಂದು ಅವರು ಹೇಳಿದರು.

ಗೋಷ್ಠಿ ನಿರ್ದೇಶಕ ಬಿ.ಜಿ. ಹರೀಶ್, ‘ವೃತ್ತಿಯಿಂದ ನೀವು ವೈದ್ಯರು. ಆದರೆ, ಪುರಾಣದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದು ಹೇಗೆ. ಬಾಲ್ಯದಲ್ಲಿಯೇ ಈ ಬಗ್ಗೆ ಆಸಕ್ತಿ ಇತ್ತೇ’ ಎಂಬ ಪ್ರಶ್ನೆಗೆ, ‘ನನ್ನ ತಾಯಿಯೂ ವೈದ್ಯೆ. ಪುರಾಣಗಳ ಬಗ್ಗೆ ನನ್ನ ಆಸಕ್ತಿ ವ್ಯಕ್ತಪಡಿಸಿದಾಗ ಇದರಿಂದ ಉದ್ಯೋಗ ಸಿಗುವುದಿಲ್ಲ ಎಂದು ಹೇಳಿದರು. ನಾನು ವೈದ್ಯ ಪದವಿ ಪಡೆದರೂ  ಪುರಾಣಗಳ ಬಗ್ಗೆ ಆಸಕ್ತಿ ಹೆಚ್ಚುತ್ತಾ ಹೋಯಿತು. ಅನೇಕ ಪುಸ್ತಕಗಳನ್ನು ಓದಿದ್ದೇನೆ. ಇಂದಿನ ಯುವ ಪೀಳಿಗೆ ಗಮನದಲ್ಲಿಟ್ಟುಕೊಂಡು ಮರು ವ್ಯಾಖ್ಯಾನ  ಮಾಡುತ್ತಿದ್ದೇನೆ’ ಎಂದು ಹೇಳಿದರು.

ಪುರಾಣ ಎಂಬುದೇ ಹಳೆಯದು. ಈ ಕಾಲಕ್ಕೆ ಅದು ಮತ್ತೆ ಬೇಕೆ? ಮರು ವ್ಯಾಖ್ಯಾನ ಮಾಡಿದರೆ ಮರುಸೃಷ್ಟಿ ಮಾಡಿದಂತಾಗುತ್ತದೆಯಲ್ಲವೆ ಎಂದು ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಪ್ರಶ್ನೆಗೆ ಉತ್ತರಿಸಿದ ದೇವದತ್ತ, ‘ಶಬರಿ ರಾಮನಿಗಾಗಿ ಹಣ್ಣುಗಳನ್ನು ಹಿಡಿದು ಕಾದು ಕುಳಿತ ಪ್ರಸಂಗ ವಾಲ್ಮೀಕಿ ರಾಮಾಯಣದಲ್ಲೂ ಇಲ್ಲ, ತುಳಸಿ ರಾಮಯಣದಲ್ಲೂ ಇಲ್ಲ. ಅದು ಸೇರ್ಪಡೆಯಾಗಿದ್ದು 15ನೇ ಶತಮಾನದಿಂದ ಈಚೆಗೆ ರಚಿತವಾದ ಕೃತಿ ಭಾಷಾ ರಾಮಾಯಣದಲ್ಲಿ. ಲಕ್ಷ್ಮಣ ರೇಖೆಯ ಪ್ರಸಂಗವೂ ಮೂಲ ರಾಮಾಯಣದಲ್ಲಿ ಇಲ್ಲ. ಕಾಲಕಾಲಕ್ಕೆ ಮಾರ್ಪಾಡು ಆಗುತ್ತಾ ಹೋಗುತ್ತಿವೆ’ ಎಂದರು.

‘ಹಿಂದೂ ಧರ್ಮ ಮತ್ತು  ಸನಾತನ ಧರ್ಮ’
ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ಕೆಲ ಹಿಂದೂ ಮೂಲಭೂತವಾದಿ ಗಳು ಹಿಂದೂ ಧರ್ಮ ಮತ್ತು  ಸನಾತನ ಧರ್ಮ ಎಂದು ಎರಡನ್ನೂ ಹೇಳುತ್ತಾರೆ. ಅವೆರಡಕ್ಕೂ ಇರುವ ವ್ಯತ್ಯಾಸ ಏನು ಎಂದು ಪ್ರಶ್ನಿಸಿದರು.

‘ಸನಾತನ ಎಂಬುದು ಆರಂಭದಿಂದ ಅಂತ್ಯದವರೆಗೂ ಇರುವಂಥದ್ದು. ಹಿಂದೆಯೂ ಇತ್ತು, ಈಗಲೂ ಇದೆ ಮತ್ತು ಮುಂದೆಯೂ ಇರುತ್ತದೆ. ಜೀವಾತ್ಮ ಮತ್ತು ಪರಮಾತ್ಮ ಎರಡೂ ಇದೆ ಎಂದು ಹೇಳಿದ್ದು ಹಿಂದೂ ಧರ್ಮ’ ಎಂದು ದೇವದತ್ತ ಉತ್ತರಿಸಿದರು.

‘ಅದಾಗಲೇ ಚರ್ಚಿತ ಆಗಿದ್ದ ಭೈರಪ್ಪ ಅವರ ಕೃತಿ ಪ್ರಸ್ತಾಪಿಸಿ ಮಾತ ನಾಡಿದ ಚಂಪಾ ಅವರು, ‘ಉತ್ತರ ಕಾಂಡ ಕೃತಿಯನ್ನು ನಾನು ಇನ್ನೂ ಓದಿಲ್ಲ. ಅಲಕ್ಷಿತ ಪಾತ್ರಗಳಿಗೆ ನ್ಯಾಯ ಒದಗಿಸಲು ಬರೆದಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ ಇದು ಹೊಸತಲ್ಲ. ಅಲಕ್ಷಿತ ಪಾತ್ರಗಳ ಬಗ್ಗೆ ಅನೇಕ ಕೃತಿಗಳು ಬಂದಿವೆ. ಮೈಸೂರಿನ ಪೋಲಂಕಿ ರಾಮಮೂರ್ತಿ ಅವರ ‘ಸೀತಾಯಣ’ ಕೃತಿಯಿಂದ ಪ್ರಭಾವ, ಪ್ರೇರಣೆ, ಸ್ಫೂರ್ತಿ ಪಡೆದು ಭೈರಪ್ಪ ‘ಉತ್ತರಕಾಂಡ’ ರಚಿಸಿದ್ದಾರೆ ಎಂಬುದು ನನ್ನ ಅನಿಸಿಕೆ’ ಎಂದರು.

ವಾಗ್ವಾದ
ಭಾರತದಲ್ಲಿ ಜಾತಿಯ ಹುಟ್ಟಿಗೆ ಸಂಬಂಧಿಸಿದಂತೆ ನಡೆದ ಚರ್ಚೆ ಸಂದರ್ಭದಲ್ಲಿ ಗೋಷ್ಠಿಯ ನಿರ್ದೇಶಕ ಜಿ.ಬಿ. ಹರೀಶ್ ಮತ್ತು ಚಂದ್ರಶೇಖರ ಎಂಬುವರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು. ಹಿಂದೂ ಧರ್ಮದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆ ಇರುವುದನ್ನು ನೀವು ಒಪ್ಪುತ್ತೀರಾ? ಎಂದು ದೇವ ದತ್ತ ಪಟ್ಟನಾಯಕ ಅವರನ್ನು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ದೇವದತ್ತ, ‘ಭಾರತದಲ್ಲಿ 3000 ದಿಂದ 6000 ಜಾತಿಗಳು ಇವೆ. ಬ್ರಾಹ್ಮಣರು ಅವುಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದರು. ಬ್ರಿಟಿಷ್ ಸರ್ಕಾರ ಮತ್ತು ಭಾರತ ಸ್ವತಂತ್ರ ಆದನಂತರ ವರ್ಣವ್ಯವಸ್ಥೆಗೆ ಅಧಿಕೃತ ಮುದ್ರೆ ಹಾಕಲಾಯಿತು ಎಂದು ವಿವರಿಸುತ್ತಿ   ದ್ದಾಗ, ಮಧ್ಯ ಎದ್ದ ಚಂದ್ರಶೇಖರ, ‘12 ನೇ ಶತಮಾನದಿಂದಲೇ ಜಾತಿ ಪದ್ಧತಿ ಇತ್ತು’ ಎಂದರು.

ಆಗ ಹರೀಶ್‌, ಮಧ್ಯ ಮಾತನಾಡಲು ಅವಕಾಶ ನೀಡುವುದಿಲ್ಲ’ ಎಂದರು. ಇದರಿಂದ ಹರೀಶ್ ಮತ್ತು ಚಂದ್ರಶೇಖರ ನಡುವೆ ಮಾತಿಗೆ ಮಾತು ಬೆಳೆಯಿತು. ಕಾರ್ಯಕ್ರಮ ಸಂಘಟಕರು ಮಧ್ಯಪ್ರವೇಶಿಸಿದರೂ ವಾಗ್ವಾದ ತಣ್ಣಗಾಗಲಿಲ್ಲ. ದೇವದತ್ತ ಮಧ್ಯಪ್ರವೇಶಿಸಿದ ಚರ್ಚೆಗೆ ಅಂತ್ಯ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT