ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳೊಂದಿಗಿನ ಒಡನಾಟದ ಮೆಲುಕು

ಧಾರವಾಡ ಸಾಹಿತ್ಯ ಸಂಭ್ರಮ
Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಧಾರವಾಡ: ಸಾಹಿತ್ಯ ಸಂಭ್ರಮದಲ್ಲಿ ‘ಸಾಹಿತಿಗಳೊಂದಿಗೆ ನಾವು’ ಗೋಷ್ಠಿಯಲ್ಲಿ ನಿವೃತ್ತ ಡಿಜಿಪಿ ಡಿ.ವಿ.ಗುರುಪ್ರಸಾದ್, ಸಾಹಿತಿಗಳಾದ ಗುರುಲಿಂಗ ಕಾಪಸೆ, ಚ.ಸರ್ವಮಂಗಳ, ಬಾಳಣ್ಣ ಶೀಗೀಹಳ್ಳಿ, ಚಂದ್ರಶೇಖರ ಪಾಟೀಲ ಅವರು, ಸಾಹಿತಿಗಳೊಂದಿಗಿನ ತಮ್ಮ ಒಡನಾಟದ ಕೆಲವು ಪ್ರಸಂಗಗಳನ್ನು ಹಂಚಿಕೊಂಡರು. ಇದರಲ್ಲಿ ನಗು ಉಕ್ಕಿಸುವ ಘಟನೆಗಳಷ್ಟೇ ಅಲ್ಲದೆ ಸಾವಿನ ವಿಷಯವೂ ಸೇರಿತ್ತು.

ತಮ್ಮ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಆದ ಹಾಸ್ಯದ ಅನುಭವಗಳನ್ನು ಗುರುಪ್ರಸಾದ್‌ ಹಂಚಿಕೊಂಡು ನಗೆ ಉಕ್ಕಿಸಿದರು.

‘ಮೊದಲ ಪುಸ್ತಕ ಬಿಡುಗಡೆಗೆ ಸಾಹಿತಿಯನ್ನೇ ಕರೆಸಬೇಕು ಎಂದುಕೊಂಡಿದ್ದೆ. ಪಾಟೀಲ ಪುಟ್ಟಪ್ಪ (ಪಾಪು) ಅವರ ಅಧ್ಯಕ್ಷತೆ ಇತ್ತು. ಜಿ.ಎಸ್. ಆಮೂರ ಪುಸ್ತಕ ಬಿಡುಗಡೆ ಮಾಡಿದ್ದರು. ಪಾಪು ಅವರು ನನ್ನ ಬಗ್ಗೆ ಅಥವಾ ಪುಸ್ತಕದ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳುತ್ತಾರೆ ಎಂದು ಭಾವಿಸಿದ್ದೆ. ಆದರೆ, ಪೊಲೀಸರು ಪುಸ್ತಕ ಬರೆಯುವುದು ಏಕೆ ಎಂದು ನನಗೆ ಗೊತ್ತಿದೆ. ಬೇರೆ ಸಾಹಿತಿಗಳಂತೆ ಅವರಿಗೆ ಪುಸ್ತಕ ಮಾರಾಟ ಮಾಡಲು ತೊಂದರೆ ಆಗುವುದಿಲ್ಲ. ಎಲ್ಲಾ ಠಾಣೆಗಳಿಗೂ 10-20 ಪ್ರತಿಗಳನ್ನು ನೀಡಿದರೂ, ಮುದ್ರಣ ಮಾಡಿದ ಸಾವಿರ ಪ್ರತಿಗಳು ಖರ್ಚಾಗುತ್ತವೆ ಎಂದರು.

ಕೈ ತೋರಿಸಿ ಅವಲಕ್ಷಣವಾಯಿತು ಎಂದು ಭಾವಿಸಿ, ಇನ್ನು ಮುಂದೆ ಪುಸ್ತಕ ಬಿಡುಗಡೆಗೆ ಸಾಹಿತಿಗಳನ್ನು ಕರೆಯಬಾರದು ಎಂದು ನಿರ್ಧರಿಸಿದ್ದೆ’ ಎಂದು ಅವರು ನೆನಪಿಸಿಕೊಂಡರು.

‘ಡೊಂಕು ಬಾಲದ ನಾಯಿಯ ಬುದ್ಧಿಯಂತೆ ಮತ್ತೊಂದು ಹಾಸ್ಯ ಪುಸ್ತಕದ ಬಿಡುಗಡೆಗೆ ಚಿತ್ರ ಸಾಹಿತಿ ಆರ್.ಎನ್. ಜಯಗೋಪಾಲ್ ಅವರನ್ನು ಆಹ್ವಾನಿಸಿದ್ದೆ. ಅನಾರೋಗ್ಯದ ಕಾರಣ ಅವರ ಬದಲಿಗೆ ಅವರ ಪತ್ನಿ ಲಲಿತಾ ಜಯಗೋಪಾಲ್ ಬಂದಿದ್ದರು. ಪುಸ್ತಕ ಬಿಡುಗಡೆ ಮಾಡಿ, ‘ಗುರುಪ್ರಸಾದ್ ಅವರು ಬಹಳ ಒಳ್ಳೆಯ ಪೋಲಿ ಸಾಹಿತಿ’ ಎಂದರು. ಸರಿಯಾಗಿ ಕೇಳಿಸದ ಕಾರಣ ‘ಮತ್ತೊಮ್ಮೆ ಹೇಳಿ ಮೇಡಂ’ ಎಂದೆ. ಅವರು ಪುನಃ ಅದನ್ನೇ ಹೇಳಿದರು. ‘ಇನ್ನು ಖಂಡಿತವಾಗಿಯೂ ಸಾಹಿತಿಗಳನ್ನು ಆಹ್ವಾನಿಸಬಾರದು ಎಂದು ತೀರ್ಮಾನಿಸಿದೆ’ ಎಂದಾಗ ಸಭಾಂಗಣದಲ್ಲಿದ್ದವರು ನಗೆಗಡಲಲ್ಲಿ ತೇಲಿದರು.

ಮಧುರಚೆನ್ನ– ಬೇಂದ್ರೆ ಸಖ್ಯದ ನೆನಪು: 1953ರ ಆಗಸ್ಟ್ 15ರಂದು ಮಧುರಚೆನ್ನ ಅವರು ದೇಹ ಬಿಟ್ಟ ಸಂದರ್ಭವನ್ನು ಭಾವಪೂರ್ಣವಾಗಿ ನೆನೆದವರು ಗುರುಲಿಂಗ ಕಾಪಸೆ.

‘ಸೊಲ್ಲಾಪುರದಲ್ಲಿದ್ದ ಬೇಂದ್ರೆ ಸಂಜೆ ಬಂದ ಬಳಿಕವೇ ಅಂತ್ಯಕ್ರಿಯೆ ನಡೆದದ್ದು. ಬಸವಣ್ಣ ಹೋದ, ಅಲ್ಲಮಪ್ರಭು ಬಂದ. ಹಿಡಿಮಣ್ಣು ಹಾಕಪ್ಪ ಎಂದು ಮಧುರಚೆನ್ನರ ಪತ್ನಿ ಬಸಮ್ಮ ಹೇಳಿದರು. ಅಂತ್ಯಕ್ರಿಯೆ ನಂತರ, ವಿಷಣ್ಣರಾಗಿದ್ದ ನಮ್ಮನ್ನು ಬದಲಿಸಲು, ಕಿಸೆಯೊಳಗಿಂದ ಕಾಗದ ತೆಗೆದ ಬೇಂದ್ರೆ, ತಮ್ಮ ಮತ್ತು ಮಧುರಚೆನ್ನರ ಸ್ನೇಹ ಆರಂಭವಾದ ಸಂದರ್ಭದಲ್ಲಿ ಬರೆದ ಮಾತಾಡು ಮಾತಾಡು ಲಿಂಗವೆ... ಪದ್ಯ ಓದಿದರು’ ಎಂದು ಸ್ಮರಿಸಿಕೊಂಡರು.

‘ಮಧುರಚೆನ್ನರನ್ನು ನಾವು ಇಲ್ಲಿ ಹುಗಿದಿಲ್ಲ, ಬಿತ್ತೀವಿ. ಇನ್ನು ಮುಂದೆ ಬೆಳೆ ಬರ್ತದೆ’ ಎಂದು ಬೇಂದ್ರೆ ಅವರು ಹೇಳಿದ್ದನ್ನು ಕಾಪಸೆ ಉಲ್ಲೇಖಿಸಿದಾಗ, ಸಭಾಂಗಣದಲ್ಲಿ ಮೌನ ಆವರಿಸಿತ್ತು.

‘ಕುಣಿಯೋಣು ಬಾರಾ’ದ ಬೇಂದ್ರೆ ಹಾವಭಾವ: ಸಾಹಿತಿ ಚ.ಸರ್ವಮಂಗಳ ಮಾತನಾಡಿ, ‘ನಾನು ಶಿವಮೊಗ್ಗದ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವೇಳೆ ಬೇಂದ್ರೆ, ಕುವೆಂಪು ಶಾಲೆಗೆ ಬಂದಿದ್ದರು. ಅಂದು ಬೇಂದ್ರೆ ಅವರು ತಮ್ಮ ಕುಣಿಯೋಣು ಬಾರಾ ಕವನ ವಾಚಿಸಿದ್ದರು’ ಎಂದು ಸ್ಮರಿಸಿಕೊಂಡ ಅವರು, ಬೇಂದ್ರೆ ಅವರ ಹಾವಭಾವಗಳನ್ನು ಯಥಾವತ್ತಾಗಿ ಅನುಕರಿಸಿದರು.
*
‘ವರಲಕ್ಷ್ಮಿ ಎಷ್ಟು ರೌಂಡ್ ಅದಾವ’

‘ವರಲಕ್ಷ್ಮಿ ಎಷ್ಟು ರೌಂಡ್ ಅದಾವ ಅಂತನೆ ಮೊದಲು ಪ್ರಶ್ನೆ ಕೇಳ್ಬೇಕಂತ ಮಾಡಿದ್ದೆ’ – ಹೀಗೆಂದದ್ದು ಸಾಹಿತಿ ಚಂದ್ರಶೇಖರ ಪಾಟೀಲ. ಇದಕ್ಕೆ ಉತ್ತರಿಸಿದ ಗೋಷ್ಠಿಯ ನಿರ್ವಾಹಕಿ ಅಪರ್ಣಾ ಅವರು, ‘ಇಲ್ಲಿ ಕಣವಿಯಂತಹ ಹಿರಿಯರಿದ್ದಾರೆ. ಆದರೂ ಒಂದು ಅಧಿಕ ಪ್ರಸಂಗದ ಉತ್ತರ. ಸಂಜೆ ಕೇಳುವ ಪ್ರಶ್ನೆ ಈಗ ಕೇಳುತ್ತಿದ್ದೀರಿ’ ಎಂದು ಹೇಳಿದರು. ಇದಕ್ಕೆ ಮಾರುತ್ತರ ನೀಡಿದ ಪಾಟೀಲರು, ‘ಇಂಥಾ ಪ್ರಶ್ನೆ ಕೇಳೋರಿಗೆ ಮಧ್ಯಾಹ್ನ ಸಂಜೆ ಎಲ್ಲಾ ಖಬರ ಇರಲ್ಲ’ ಎಂದಾಗ ಸಭಾಂಗಣದಲ್ಲಿ ಚಪ್ಪಾಳೆ, ನಗು ತುಂಬಿ ತುಳುಕಿತು. ‘ಅವರ ಬಲ್ಲ ಮೂಲಗಳಿಂದ ಗೋಷ್ಠಿಯಲ್ಲಿ ಎರಡು ರೌಂಡ್ ಅದಾವ ಎಂದು ತಿಳೀತು. ನಮಗ ಎರಡು ರೌಂಡ್ ಸಾಕಾಗುದಿಲ್ರಿ. ರಂಗೇರ್ಬೇಕು ಅಂದ್ರ ಕರೆಕ್ಟ್ ಮೂರು ರೌಂಡ್ ಆದ್ರು ಆಗ್ಬೇಕ್ರಿ’ ಎಂದರು.
*
ಕಳೆದು ಹೋದ ಕಾಲ್ಮರಿ
ಸಾಹಿತಿ ಎನ್.ಕೆ. ಕುಲಕರ್ಣಿ ಅವರು ರಿಯಾಯಿತಿ ದರದಲ್ಲಿ ಖಾದಿ ಬಟ್ಟೆ ಖರೀದಿಸಲು ಹೋಗಿ, ಅಂಗಡಿ ಹೊರಗೆ ಬಿಟ್ಟ ಕಾಲ್ಮರಿ (ಚಪ್ಪಲಿ) ಕಳೆದುಕೊಂಡ ಸ್ವಾರಸ್ಯಕ ಘಟನೆಯನ್ನು ತೆರೆದಿಟ್ಟವರು ಬಾಳಣ್ಣ ಶೀಗೀಹಳ್ಳಿ. ‘ಎಂಟಾಣೆ ಉಳಿಸಲು ಹೋಗಿ ₹ 5 ಮೌಲ್ಯದ ಕಾಲ್ಮರಿ ಕಳೆದುಕೊಂಡಿದ್ದ ಕುಲಕರ್ಣಿ ಅದೇ ಖೇದದಲ್ಲಿ, ಕಳೆದು ಹೋದ ಕಾಲ್ಮರಿ ಎನ್ನುವ ಪ್ರಬಂಧ ಬರೆದು ಪತ್ರಿಕೆಗೆ ಕಳಿಸಿದ್ದರು. ಪ್ರಕಟಗೊಂಡ ಆ ಪ್ರಬಂಧಕ್ಕೆ ಪತ್ರಿಕೆಯವರು ₹ 5  ಗೌರವಧನ ಕಳಿಸಿದ್ದರು. ಕಳಕೊಂಡಿದ್ದ ಕಾಲ್ಮರಿಯ ಬೆಲೆಯೂ ಅಷ್ಟೆ ಇದ್ದಿದ್ದರಿಂದ, ಕಳಕೊಂಡಿದ್ದು ಸಿಕ್ಕಿತು ಎಂದು ಸಂತಸಪಟ್ಟರು’ ಎಂದರು ಶೀಗೀಹಳ್ಳಿ.
*
ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೊ ಕಾದಂಬರಿ ಕುರಿತು ಕೇಳಿದ ಮರಾಠಿ ಸಾಹಿತಿ ಕುಸುಮಾಗ್ರಜ ಅವರು, ಇದು ನಮ್ಮೆಲ್ಲರ ಬರಹಕ್ಕಿಂತ 50 ವರ್ಷ ಮುಂದಿದೆ ಎಂದು ಮೆಚ್ಚುಗೆ ಸೂಚಿಸಿದ್ದರು.
ಗುರುಲಿಂಗ ಕಾಪಸೆ,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT