ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಹತ್ತಿ ನಾಡಿನಿಂದ...

Last Updated 6 ಫೆಬ್ರುವರಿ 2017, 20:28 IST
ಅಕ್ಷರ ಗಾತ್ರ
ಅಮೆರಿಕದ ಜನಸಂಖ್ಯೆಯ ಶೇ 2ರಷ್ಟು ಮಾತ್ರ ಕೃಷಿಕರು. ಆದರೆ ಈ ಕೃಷಿಕರೇ ಪೂರ್ತಿ ದೇಶಕ್ಕೆ ಆಹಾರ ಒದಗಿಸುವುದು ಮಾತ್ರವಲ್ಲದೇ ಜಪಾನ್, ವಿಯೆಟ್ನಾಂ ಮುಂತಾದ ದೇಶಗಳಿಗೂ ರಫ್ತು ಮಾಡುತ್ತಾರೆ. ತರಕಾರಿ, ಹತ್ತಿ, ಜೋಳ ಇನ್ನೂ ಕೆಲವು ಆಹಾರ ಪದಾರ್ಥಗಳಲ್ಲದೇ ಮಾಂಸ ಉತ್ಪಾದನೆ ಹಾಗೂ ರಫ್ತು ಕೂಡ ಅಮೆರಿಕದ ಪ್ರಮುಖ ಕೃಷಿಗಳು.

ಈ ಕೃಷಿಕರಲ್ಲಿ ಒಬ್ಬರಾಗಿರುವ ಲಿನ್ನರ್ಡ್ ಚಿಲ್ಡ್ರನ್ಸ್ ಅವರ ಸಂದರ್ಶನ ಮಾಡಿದ್ದಾರೆ ಅಮೆರಿಕದಲ್ಲಿ ನೆಲೆಸಿರುವಶಿವಮೊಗ್ಗ ಜಿಲ್ಲೆ ಸಾಗರದ ಕಾಂತಿ ಹೆಗಡೆ.
**
ಅಮೆರಿಕದ ಅಲಬಾಮ ರಾಜ್ಯದ ಹಂಟ್ಸ್ವಿಲ್‌ ಎಂಬ ಪ್ರಾಂತ್ಯಕ್ಕೆ ಮೂರು ದಿನಗಳ ಭೇಟಿಗೆಂದು ನಾನು ಹೋಗಿದ್ದೆ. ನಿವ್‌ಹೊಪ್‌ಗೆ ಭೇಟಿ ನೀಡಿದಾಗ ಕೃಷಿಕರಾದ ಲೋರ್ನ ಲೈಟ್ ಹಾಗೂ ಸ್ಟೀವ್ ದಂಪತಿ ಮನೆಯಲ್ಲಿ ತಂಗಿದ್ದೆ. ಆ ಪ್ರಾಂತ್ಯದ ಕೃಷಿಬದುಕಿನ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಲು ಆಗ ಅವಕಾಶ ದೊರಕಿತು. ಲೋರ್ನ ಅವರದ್ದು ಅವಿಭಕ್ತ ಕೃಷಿ ಕುಟುಂಬ. ಇವರು ತಮ್ಮಲ್ಲಿರುವ ಜಮೀನಿನ ಪೈಕಿ 50ಎಕರೆಗಳಷ್ಟು ಜಾಗದಲ್ಲಿ ಹವ್ಯಾಸಿ ಕೃಷಿ ಮಾಡುತ್ತಾರಷ್ಟೇ.
ಆದರೆ ಇವರ 800 ಎಕರೆಗಳಷ್ಟು ಜಾಗದಲ್ಲಿ 66 ವರ್ಷದ ಲಿನ್ನರ್ಡ್ ಚಿಲ್ಡ್ರನ್ಸ್ ಎಂಬ ಕೃಷಿಕ ಪ್ರತಿ ವರ್ಷ ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡುತ್ತಾರೆ. ಅವರ ಮೂಲಕ ಅಲಬಾಮ ರಾಜ್ಯದ ಕೃಷಿಬದುಕಿನ ಪಕ್ಷಿನೋಟವನ್ನು ಈ ಲೇಖನದಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೇನೆ.
* ಎಷ್ಟು ಅವಧಿಯಿಂದ ಕೃಷಿಕಾರ್ಯದಲ್ಲಿ ತೊಡಗಿರುವಿರಿ?
ಜೀವನ ಪೂರ್ತಿ ಕೃಷಿಯನ್ನೇ ನಂಬಿ ಬದುಕಿರುವವನು ನಾನು. ‘ಬಿಳಿ ಕಾಲರ್‌’ನ ಕೆಲಸಕ್ಕಿಂತ ಕೃಷಿ ಮಾಡುವುದೇ ಹೆಚ್ಚು ಖುಷಿ ಕೊಟ್ಟಿದೆ.
* ಈ ಆರು ದಶಕಗಳ ಕೃಷಿ ಬದುಕಿನಲ್ಲಿ ಅಮೆರಿಕದ ಕೃಷಿಕ್ಷೇತ್ರ ಕಂಡ ಬದಲಾವಣೆಗಳೇನು?
(ಅವರ ಸುತ್ತ ನಿಂತಿದ್ದ ದೈತ್ಯಾಕಾರದ ಬೀಜ ಬಿತ್ತನೆ, ಕಟಾವು ಮಾಡುವ ವಾಹನಗಳತ್ತ ಬೊಟ್ಟು ಮಾಡುತ್ತಾ)... ಇವೆಲ್ಲಾ ನಾನು ಚಿಕ್ಕವನಿದ್ದಾಗ ಕಂಡು ಕೇಳರಿಯದ್ದು, ನನ್ನ ಆ ದಿನಗಳ ಕಲ್ಪನೆಗಳಿಗೆ ಮೀರಿದ್ದು. ನನ್ನ ತಂದೆಯವರು ಕುದುರೆಗಳನ್ನು ಬಳಸಿ ಉಳುಮೆ ಮಾಡುತ್ತಿದ್ದರಂತೆ. ಈಗ ಅವರಿಗೆ 90 ವರ್ಷ. ಮನೆ ಮತ್ತು ಜಮೀನಿನ ಕೆಲಸವನ್ನು ಖುದ್ದು ನಿಭಾಯಿಸುತ್ತಾ ಸ್ವತಂತ್ರರಾಗಿ ಬದುಕುತ್ತಿದ್ದಾರೆ. ನನಗೆ ತಿಳಿವಳಿಕೆ ಬಂದ ಕಾಲದಲ್ಲಿ ಆಗಷ್ಟೇ ಟ್ರ್ಯಾಕ್ಟರುಗಳು ಕೃಷಿ ಕ್ಷೇತ್ರವನ್ನು ಆವರಿಸಿಕೊಳ್ಳುತ್ತಿದ್ದವು. ಆದರೂ ಬಿತ್ತನೆ, ನೀರಾವರಿಯಂಥ ಕೆಲಸಗಳನ್ನು ಸ್ವತಃ ಮಾಡಬೇಕಿತ್ತು. ಹೆಚ್ಚು ಸಮಯ, ಕಾರ್ಮಿಕರ ಅವಶ್ಯಕತೆ ಬೀಳುತ್ತಿತ್ತು. ಆದರೆ ಈಗ ಸುಮಾರು 5ಸಾವಿರ ಎಕರೆಗಳಷ್ಟು ಕೃಷಿ ಭೂಮಿಯಲ್ಲಿ ನಾನು, ನನ್ನಿಬ್ಬರು ಮಕ್ಕಳೊಂದಿಗೆ ಆರಾಮಾಗಿ ಬೆಳೆ ತೆಗೆಯುತ್ತಿದ್ದೇನೆ.
* ಶೀಘ್ರದಲ್ಲಿ ಬದಲಾಗುತ್ತಿರುವ ಕೃಷಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕಷ್ಟವಾಗಲಿಲ್ಲವೇ?
ನನ್ನ ಹೆಂಡತಿಗೆ ಮೊದಲಿನಿಂದಲೂ ಓದುವ ಹುಚ್ಚು. ಪ್ರಪಂಚದ ಆಗುಹೋಗುಗಳನ್ನು ಮಾಧ್ಯಮಗಳ ಮೂಲಕ ಕೂಲಂಕಷವಾಗಿ ತಿಳಿದುಕೊಳ್ಳುತ್ತಾಳೆ. ಕೃಷಿಯ ಹೊಸ ವಿಧಾನಗಳ ಬಗ್ಗೆ ಹೆಚ್ಚು ಹೆಚ್ಚು ಅಭ್ಯಾಸ ಮಾಡಿ ನನಗೆ ಸಲಹೆ ಕೊಡುವಲ್ಲಿ ಅವಳ ಪಾತ್ರ ಮಹತ್ವದ್ದು. ಮನೆಯ ಸುತ್ತ ಸುಮಾರು 30 ಎಕರೆಗಳಷ್ಟು ಭೂಮಿಯಲ್ಲಿ ಅವಳ ಹೊಸ ಹೊಸ ಪ್ರಯೋಗಗಳು ನಡೆಯುತ್ತವೆ. ಅವಳ ಪ್ರಯೋಗಗಳ ಫಲಿತಾಂಶ ಬಂದ ನಂತರ ಅದರಲ್ಲಿರುವ ಧನಾತ್ಮಕ ಅಂಶಗಳನ್ನು ಕಂಡು ದೊಡ್ಡ ಪ್ರಮಾಣದ ಕೃಷಿಯಲ್ಲಿ ಅಳವಡಿಸಿಕೊಳ್ಳುತ್ತೇನೆ. ಇನ್ನು ಯಂತ್ರಗಳನ್ನು ಖರೀದಿಸಲು ಬ್ಯಾಂಕಿನಿಂದ ಸಾಲ ಪಡೆಯುವುದು ಇದ್ದೇ ಇದೆ.
* ಅತಿ ಹೆಚ್ಚು ಬೆಳೆಯುವ ಬೆಳೆ ಯಾವುದು?
ಹತ್ತಿ, ಜೋಳ ಮತ್ತು ಸೋಯಾಬೀನ್ ಈ ಭಾಗದ ಹವಾಮಾನಕ್ಕೆ ಸರಿಯಾಗಿ ಒಗ್ಗುವಂಥವು. ನಿಮಗೆ ಗೊತ್ತಿರಬಹುದು... ಅಲಬಾಮ ರಾಜ್ಯದ ಹಂಟ್ಸ್ವಿಲ್‌ ಪ್ರಾಂತ್ಯ ಒಂದುಕಾಲದಲ್ಲಿ ಹತ್ತಿ ಮಿಲ್ಲುಗಳಿಗೆ ಪ್ರಖ್ಯಾತ. ‘ನಾಸಾ’ ಬಾಹ್ಯಾಕಾಶ ಕೇಂದ್ರ ಇಲ್ಲಿಗೆ ಕಾಲಿಡುವ ಶತಮಾನದ ಮೊದಲೇ ಹತ್ತಿ ಮಿಲ್ಲುಗಳು ಭಾರಿ ಪ್ರಮಾಣದಲ್ಲಿ ತಲೆಯೆತ್ತಿತ್ತು. ಅಮೆರಿಕದ ಹತ್ತಿ ಉತ್ಪಾದನೆಯಲ್ಲಿ ಈ ಪ್ರಾಂತ್ಯ ಪ್ರಥಮ ಸ್ಥಾನದಲ್ಲಿತ್ತು. ಇಲ್ಲಿಯ ಹತ್ತಿ ಮಿಲ್ಲುಗಳು ಆ ಕಾಲದ ಕೈಗಾರೀಕರಣದಲ್ಲಿ ಇತಿಹಾಸ ಸೃಷ್ಟಿಸಿದ್ದವು. ಈಗಲೂ ಹಂಟ್ಸ್ವಿಲ್‌ನ ಪ್ರಮುಖ ಪೇಟೆ ಬೀದಿಗಳಲ್ಲಿ ಸುತ್ತಾಡಿದರೆ ಹಳೆಯ ಒಂದೆರಡು ಮಿಲ್ಲುಗಳು ಕಣ್ಣಿಗೆ ಬೀಳಬಹುದು.
* ಹತ್ತಿ, ಜೋಳ, ಸೋಯಾಬೀನ್‌ಗಳನ್ನು ಪ್ರತೀ ವರ್ಷ ಒಂದೇ ಪ್ರಮಾಣದಲ್ಲಿ ಬೆಳೆಯುತ್ತೀರೋ, ಸರದಿಯಲ್ಲಿ ಬೆಳೆಯುತ್ತೀರೋ?
ಪ್ರತೀವರ್ಷ ಒಂದೇ ರೀತಿಯ ಬೆಳೆ ತೆಗೆಯುವುದರಿಂದ ಭೂಮಿ ಕೂಡ ಬೇಸತ್ತು ಹೋಗುತ್ತದೆ. ‘ಕ್ರಾಪ್ ರೊಟೇಷನ್’ ವಿಧಾನದಿಂದ ಭೂಮಿಯ ಫಲವತ್ತತೆ
ಕಾಯ್ದುಕೊಳ್ಳಬಹುದು. ಹಾಗಾಗಿ ಪ್ರತೀ ವರ್ಷ ಮಣ್ಣಿನ ಫಲವತ್ತತೆ, ವಾರ್ಷಿಕ ಹವಾಮಾನಗಳ ಅಂಕಿ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವ ಬೆಳೆ ಸೂಕ್ತವೆಂದು ನಿರ್ಧರಿಸುತ್ತೇವೆ. ಕಡಿಮೆ ಮಳೆ ಸಂಭವನೀಯತೆಯಿದ್ದರೆ ಹತ್ತಿ ಬೆಳೆಯುತ್ತೇವೆ. ಸೋಯಾಬೀನ್ ಮಣ್ಣಿನ ಸಾರಜನಕ ಮಟ್ಟವನ್ನು ಹೆಚ್ಚಿಸುವುದರಿಂದ ಸಾರಜನಕ ಕೊರತೆಯ ಅಂಶ ಕಂಡುಬಂದಲ್ಲಿ ಅದನ್ನು ಬೆಳೆಯುತ್ತೇವೆ. ಮಣ್ಣಿನ ಫಲವತ್ತತೆಯನ್ನು ಹಲವು ವಿಧಗಳಲ್ಲಿ ಅಳೆಯುತ್ತೇವೆ. ಅದರಲ್ಲಿ ಪಿ.ಎಚ್ ಮಾಪನವೂ ಒಂದು. ಹೀಗೆ ಹಲವಾರು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಪ್ರತೀವರ್ಷವೂ ತಕ್ಕ ಬೆಳೆಗಳನ್ನು ನಿರ್ಧರಿಸುತ್ತೇವೆ.
* ಅಮೆರಿಕದಲ್ಲಿನ ಕೃಷಿ ಸಾವಯವದ್ದೋ, ರಾಸಾಯನಿಕದ್ದೋ?
ಸಾವಯವ ಕೃಷಿ ಒಳ್ಳೆಯದೇ. ಆದರೆ ಅದರಿಂದ ಹೆಚ್ಚು ಇಳುವರಿ ತೆಗೆಯುವ ಸಾಧ್ಯತೆಗಳು ಕಡಿಮೆ ಎಂಬ ಕಾರಣಕ್ಕೆ ಅಮೆರಿಕದ ಕೃಷಿಕ್ಷೇತ್ರ ಕೂಡ ರಾಸಾಯನಿಕ ಮುಕ್ತವಾಗಿಲ್ಲ. ಕೃಷಿ ಯಾಂತ್ರೀಕರಣಗೊಂಡಾಗ ಅದೊಂದು ಉದ್ಯಮವಾಗುತ್ತದೆ, ಇಂಥದ್ದೊಂದು ಸನ್ನಿವೇಶದಲ್ಲಿ ಹೆಚ್ಚು ಇಳುವರಿ ತೆಗೆಯುವ ವಿಧಾನ ಅನುಸರಿಸುವುದು ಅನಿವಾರ್ಯ. ನನ್ನ ಹೆಂಡತಿ ಆಕೆಯ ಹವ್ಯಾಸಿ ಕೃಷಿ ಭೂಮಿಯಲ್ಲಿ ಮನೆಯ ಜಾನುವಾರುಗಳು ಹಾಗೂ ಕೋಳಿಫಾರಂನಿಂದ ಸಿಗುವ ತ್ಯಾಜ್ಯ ಹಾಗೂ ಸೆಗಣಿಗಳಿಂದ ತರಕಾರಿ, ಹಣ್ಣುಗಳಂಥ ಬೆಳೆಗಳನ್ನು ಬೆಳೆಯುತ್ತಾಳೆ. ಆದರೆ ನನ್ನ 5ಸಾವಿರ ಎಕರೆ ಕೃಷಿ ಭೂಮಿಗೆ ಸಂಪೂರ್ಣವಾಗಿ ಈ ರೀತಿಯ ಸಾವಯವ ಗೊಬ್ಬರವನ್ನು ಪ್ರತೀವರ್ಷ ಒದಗಿಸಲು ಸಾಧ್ಯವಿಲ್ಲ. ಆದರೆ ‘ವಿಂಟರ್ ವ್ಹೀಟ್ಸ್’ ಬೆಳೆಯುವಾಗ ಕೆಲವೊಮ್ಮೆ ಸಾವಯವ ಕೃಷಿ ವಿಧಾನ ಅನುಸರಿಸುತ್ತೇನೆ.
* ತಳೀಯವಾಗಿ ಪರಿವರ್ತಿತವಾದ ಬೀಜಗಳ ಹಾಗೂ ಅವುಗಳಿಂದ ಬೆಳೆದ ಬೆಳೆಗಳ ಬಗ್ಗೆ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಚರ್ಚೆಗಳು ನಡೆಯುತ್ತಿವೆ. ಇವುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಜಿಎಮ್ಒಗಳು ಆಹಾರ ಸರಪಣಿಗೆ ದೊಡ್ಡ ಹಾನಿ ಎನಿಸುತ್ತದೆಯೇ?
(ನಗುತ್ತಾ...) ಬದುಕು ಶಾಶ್ವತ ಅಂತಾದರೆ ಮಾತ್ರ ನಾನು ಇಂಥವುಗಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳುತ್ತಿದ್ದೆ. ನಾನು ಹಾಗೂ ನನ್ನ ಕುಟುಂಬ ಜಿಎಮ್ಒಗಳಿಂದ ಬೆಳೆದ ಆಹಾರ ತಿನ್ನುತ್ತಾ ಬಂದಿದ್ದೇವೆ. ಇನ್ನೂ ಗಟ್ಟಿಮುಟ್ಟಾಗಿಯೇ ಇದ್ದೇವಲ್ಲ!. ಜಿಎಮ್ಒಗಳಿಂದಾಗುವ ನಷ್ಟಗಳ ಬಗ್ಗೆ ನಾನು ಅಷ್ಟಾಗಿ ಯೋಚನೆ ಮಾಡಿಲ್ಲ. ಆದರೆ ಜಿಎಮ್ಒಗಳನ್ನು ಅಧಿಕ ಇಳುವರಿ ಕೊಡುವಂತೆ, ಕ್ರಿಮಿಗಳು ಹಾನಿ ಮಾಡದಂತೆ ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ಕೀಟನಾಶಕ ಬಳಸದೇ ಅಧಿಕ ಇಳುವರಿ ಪಡೆಯಬಹುದು. ಜಿಎಮ್ಒ ಬೀಜಗಳಿಂದ ಉತ್ಪಾದಿಸುವ ಬೆಳೆಗೂ ಹಾಗೂ ಸಾವಯವ ಬೀಜಗಳಿಂದ ಉತ್ಪಾದಿಸುವ ಬೆಳೆಗೂ ಪ್ರಮಾಣ ಹಾಗೂ ಗಾತ್ರಗಳಲ್ಲಿ ಬಹಳ ವ್ಯತ್ಯಾಸವಿರುತ್ತದೆ.
* ನಿಮ್ಮ ಇಷ್ಟು ವರ್ಷಗಳ ಬದುಕಿನಲ್ಲಿ ಕಂಡ ಬರಗಾಲ ನಿಮ್ಮನ್ನು ಆರ್ಥಿಕವಾಗಿ ಅಲ್ಲೋಲಕಲ್ಲೋಲಗೊಳಿಸಿದ್ದಿದೆಯೆ?
ನಾನು ನೋಡಿದಂತೆ ಅಮೆರಿಕದ ಕೆಲವು ಭಾಗಗಳಲ್ಲಿ ಬರಗಾಲವಾದರೆ ಮತ್ತೆ ಕೆಲವು ಭಾಗಗಳಲ್ಲಿ ಬರಗಾಲವಿರುವುದಿಲ್ಲ. ಹಾಗಾಗಿ ಆಹಾರಕ್ಕೇನೂ ಕೊರತೆಯಾಗುವುದಿಲ್ಲ. ಬರ ಅಬ್ಬರಿಸಿದ ಜಾಗದವರಿಗೆ ಒಂದೆರಡು ವರ್ಷ ನಷ್ಟವಾದರೆ, ಮತ್ತೊಂದು ಭಾಗದ ಜನತೆಗೆ ಬರಗಾಲವಾದಾಗ ನಮ್ಮ ಬೆಳೆಗಳಿಗೆ ಮತ್ತಷ್ಟು ಬೆಲೆ ಏರುತ್ತದೆ, ಹಾಗಾಗಿ ಸರಿದೂಗುತ್ತದೆ. ನೀರಾವರಿ ವ್ಯವಸ್ಥಿತವಾಗಿರುವುದರಿಂದ ಹಾಗೂ ನದಿಗಳು ಬತ್ತಿದ ಉದಾಹರಣೆಗಳಿಲ್ಲದ್ದರಿಂದ ಪ್ರಮುಖ ಆಹಾರ ಬೆಳೆಗಳನ್ನು ಬೆಳೆಯಲು ಯಾವತ್ತೂ ಕೊರತೆಯಾಗಿಲ್ಲ.
(ಜಾನುವಾರು, ಕುರಿ, ಕೋಳಿ ಮುಂತಾದ ಪ್ರಾಣಿ ಸಾಕಣೆಗಳನ್ನು ಪ್ರಾಣಿ ಸಾಕಣೆ ಎಂದು ಪ್ರತ್ಯೇಕವಾಗಿ ವಿಂಗಡಿಸದೆ ಕೃಷಿ ಎಂದೇ ಅಲ್ಲಿ ಹೇಳುತ್ತಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT