ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾವ್ ದ್ವಯರ ‘ಮಾಯಾದೀಪ’

Last Updated 25 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ಮಾಯಾದೀಪ’ (The Magic Lantern) ಎಂ. ಶ್ರೀನಿವಾಸ ರಾವ್ ಹಾಗೂ ಎಸ್. ವೆಂಕೋಬ ರಾವ್ ರಚಿಸಿರುವ ವಿಜ್ಞಾನಕ್ಕೆ ಸಂಬಂಧಿಸಿದ ಕೃತಿ. ಭೌತ ವಿಜ್ಞಾನದಲ್ಲಿನ ‘ಬೆಳಕು’ ಅಧ್ಯಾಯಕ್ಕೆ ಸಂಬಂಧಿಸಿದ ಪುಸ್ತಕ. ಈ ಕೃತಿಯನ್ನು 1904ರಲ್ಲಿ ಬೆಂಗಳೂರಿನ ‘ದ ಸ್ಟ್ಯಾಂಡರ್ಡ್ ಪ್ರೆಸ್‌’ನಲ್ಲಿ ಮುದ್ರಿಸಲಾಗಿದೆ. 121 ಪುಟಗಳ ಈ ಕೃತಿಯ ಕ್ರಯ ಒಂದು ರುಪಾಯಿ.
 
ಶ್ರೀನಿವಾಸ ರಾವ್ ಅವರು ಮೈಸೂರು ವಿಭಾಗದ ದಕ್ಷಿಣ ವೃತ್ತದ ಡೆಪ್ಯುಟಿ ಇನ್‌ಸ್ಪೆಕ್ಟರ್ ಆಫ್ ಸ್ಕೂಲ್ಸ್ ಆಗಿದ್ದವರು. ವೆಂಕೋಬ ರಾವ್ ‘ಮೈಸೂರು ಮೆಡಿಕಲ್ ಸರ್ವೀಸ್‌’ನ ಅಪೋತೆಕರಿ (Apothecary = ಔಷಧಿ ತಜ್ಞರು) ಆಗಿದ್ದವರು. ಈ ಇಬ್ಬರನ್ನು ಕುರಿತು ಇನ್ನೇನೂ ಮಾಹಿತಿ ದೊರೆಯುವುದಿಲ್ಲ. 
ಭೌತ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಹೇರಳವಾದ ಪುಸ್ತಕಗಳು ರಚನೆಗೊಂಡಿದ್ದು, ಕನ್ನಡ ಭಾಷೆಯು ಎಂತಹ ಕ್ಲಿಷ್ಟವಾದ ಪರಿಕಲ್ಪನೆಗಳ ಶಿಸ್ತಿನ ವಿಷಯಗಳನ್ನೂ ಅತ್ಯಂತ ಸರಳವಾಗಿ ಅಭಿವ್ಯಕ್ತಿಗೊಳಿಸುವ ಸವಾಲನ್ನು ಸಮರ್ಥವಾಗಿ ಮುಖಾಮುಖಿ ಆಗಿಸಿಕೊಂಡಿರುವ ಭಾಷೆ ಎಂಬುದು ಈ ಕೃತಿಗಳ ಗುಣ ಹಾಗೂ ಪ್ರಮಾಣಗಳಿಂದ ಸಾಬೀತಾಗಿದೆ.
 
ಕನ್ನಡದಲ್ಲಿ ವಿಜ್ಞಾನದ ವಿವಿಧ ಶಿಸ್ತುಗಳನ್ನ ಬೋಧಿಸುವುದು ಸಾಧ್ಯವಿಲ್ಲ ಎನ್ನುವ ಶಿಕ್ಷಣ ತಜ್ಞರ ಗುಂಪು ಮುಂದೆ ನೀಡಿರುವ 19ನೇ ಶತಮಾನದಲ್ಲಿ ಮುದ್ರಣಗೊಂಡ ಕನ್ನಡ ಭಾಷೆಯಲ್ಲಿ ರಚನೆಗೊಂಡಿರುವ ವಿಜ್ಞಾನದ ವಿವಿಧ ಶಾಖಾ ಶಿಸ್ತುಗಳ ಕೆಲವು ಪುಸ್ತಕಗಳನ್ನು ಗಮನಿಸುವ ಅಗತ್ಯವಿದೆ.
 
ಅವುಗಳೆಂದರೆ: ಕೇರೋ ಲಕ್ಷ್ಮಣ ಛತ್ತೆ ಅವರ ‘ಪದಾರ್ಥ ವಿಜ್ಞಾನಶಾಸ್ತ್ರ ಸಚಿತ’ (1882), ಮಲ್ಲಪ್ಪಾ ಅಂಕಲೆ ಸಂಗಪ್ಪಾ ಅವರು ಅನುವಾದಿಸಿರುವ ಥಿಒಡರ ಕುಕ್ ಅವರ ‘ಪದಾರ್ಥ ವಿಜ್ಞಾನ ಶಾಸ್ತ್ರದ ಮೂಲತತ್ವಗಳು’ (1890), ಬೆಳ್ಳಾವೆ ವೆಂಕಟನಾರಣಪ್ಪನವರ ‘ಭೌತಿಕ ವಿಜ್ಞಾನ ವೈಚಿತ್ರ್ಯಗಳು’ (1918) ಹಾಗೂ ಅವರೇ 1918ರಲ್ಲಿ ಬರೆದ ‘ಉಷ್ಣ ವಿಷಯವಾದ ಕೆಲವು ಮುಖ್ಯಾಂಶಗಳು’ ಮತ್ತು ಅವರು ಸಂಪಾದಿಸಿ ಪ್ರಕಟಿಸುತ್ತಿದ್ದ ವಿಜ್ಞಾನ ಮಾಸಪತ್ರಿಕೆಗಳು, ತಿಪ್ಪೂರು ಸುಬ್ಬರಾಯ ಶಾಸ್ತ್ರಿ ಅವರ ‘ಭೌತ ವಿಜ್ಞಾನ’ (1905), ಬಾಲ್‌ಫರ್ ಸ್ಟೆವರ್ಟ್ ಬರೆದ ‘ಪ್ರಕೃತಿ ಶಾಸ್ತ್ರದ ಪ್ರಥಮ ಪುಸ್ತಕ’ (1884), ಎನ್. ನಾಗೇಶರಾವ್ ಅವರ ‘ವಿದ್ಯುಚ್ಛಕ್ತಿಯ ಪ್ರಭಾ’ (1932) ಹಾಗೂ ಇದೇ ಲೇಖಕರ ‘ಯಂತ್ರಗತಿ ಶಾಸ್ತ್ರ ಮತ್ತು ಪದಾರ್ಥಗಳ ಧರ್ಮಗಳು’ (1931), ಸಾಸ್ವಿಹಳ್ಳಿ ನರಸಿಂಹಾಚಾರ್ಯ ಸಂಕಲ್ಪಾಚಾರ್ಯ ಅವರು ರಚಿಸಿದ ‘ನೂತನ ವಿದ್ಯುತ್ ಜ್ಞಾನಾಮೃತ’ (1929), ಎಂ.ಆರ್. ಶ್ರೀನಿವಾಸಮೂರ್ತಿ ಅವರ ‘ಆಯಸ್ಕಾಂತತೆ ಮತ್ತು ವಿದ್ಯುಚ್ಛಕ್ತಿ’ (1933).
 
ಪ್ರಸ್ತುತ ‘ಮಾಯಾದೀಪ’ ಕೃತಿಯಲ್ಲಿ, ಶ್ರೀನಿವಾಸ ರಾವ್ ಅವರು ಅಂದಿನ ಕಾಲಘಟ್ಟದ ಮೈಸೂರು ಪಾಂತ್ಯದ ಇನ್‌ಸ್ಪೆಕ್ಟರ್ ಜನರಲ್ ಆಫ್ ಎಜುಕೇಷನ್ ಆಗಿದ್ದಂತಹ ಎಚ್. ಜೆ. ಬಾಬಾ ಅವರನ್ನು ಅವರು ನೀಡಿದ ನೆರವಿಗಾಗಿ ಮನಃಪೂರ್ವಕವಾಗಿ ಸ್ಮರಿಸಿಕೊಂಡಿರುತ್ತಾರೆ. 1890ರಲ್ಲಿ ಸ್ಥಾಪನೆಗೊಂಡ ‘ದ ರಿವ್ಯೂ ಆಫ್ ರಿವ್ಯೂಸ್’ ಪತ್ರಿಕೆಯಲ್ಲಿ ‘ಮ್ಯಾಜಿಕ್ ಲ್ಯಾಂಟ್ರನ್‌’ನ ಅನಿವಾರ್ಯತೆಯನ್ನು ಕುರಿತು ಪ್ರಕಟಗೊಂಡ ಪುಟ್ಟ ವಾಕ್ಯವೃಂದ ಒಂದನ್ನು ಕೃತಿಯ ಆರಂಭದಲ್ಲಿ ಘೋಷವಾಕ್ಯಗಳ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ.
 
‘‘ಮಾಯಾದೀಪವೆಂದರೆ ಕತ್ತಲೆ ಕೋಣೆಯಲ್ಲಿಯ ಬಿಳಿಯ ಪರದೆಯ ಮೇಲೆ, ಗಾಜುಹಲಗೆಯ ಮೇಲಿನ ಚಿತ್ರದ ಪ್ರತಿಬಿಂಬವು ದೊಡ್ಡದಾಗಿ ಬೀಳುವಂತೆ ಮಾಡುವ ಒಂದು ಬಗೆಯ ವೈಜ್ಞಾನಿಕ ಯಂತ್ರವಾದ ದೀಪಯಂತ್ರ ಎಂದರ್ಥ. ಇದಕ್ಕೆ ಇಂಗ್ಲಿಷಿನಲ್ಲಿ ಮ್ಯಾಜಿಕ್ ಲ್ಯಾಂಟ್ರನ್ ಎನ್ನುತ್ತಾರೆ. ಈ ಯಂತ್ರದ ಆಕಾರ, ಸ್ವರೂಪ, ಬಗೆಗಳು, ಅದರ ನಿರ್ಮಿತಿ, ಉಪಯೋಗಗಳು, ಅದರ ಮನರಂಜನಾ ಆಯಾಮ, ಅದರ ಕಾರ್ಯ ವೈಖರಿಯ ಪ್ರಕ್ರಿಯೆ  ಈ ಎಲ್ಲವುಗಳನ್ನು ಬಿಡಿಬಿಡಿಯಾಗಿ ಹಾಗೂ ಇಡಿಯಾಗಿ ಮಾಯಾ ಲಾಂದ್ರವನ್ನು ಕುರಿತ ಸಮಗ್ರ ಪರಿಕಲ್ಪನೆ ಸರಳವಾಗಿ ಕನ್ನಡ ವಾಚಕರ ಗ್ರಹಿಕೆಗೆ ದಕ್ಕುವಂತೆ ಸಿಕ್ಕುವಂತೆ ಮಾಡಲು ಪ್ರಸಕ್ತ ಕೃತಿಯು ಪ್ರಾಮಾಣಿಕವಾಗಿ ಪ್ರಯತ್ನಿಸಿ ಅದರಲ್ಲಿ ಪೂರ್ಣವಾಗಿ ಸಫಲವಾಗಿದೆ ಎಂದೇ ಹೇಳಬಹುದು’’.
 
ಅನುಕ್ರಮಣಿಕೆಯಲ್ಲಿ ಕ್ರಮವಾಗಿ ಪೀಠಿಕೆ, ಪ್ರದೀಪ ಅಥವಾ ಲಾಂದ್ರ, ದೀವಿಗೆಗಳು ಅಥವಾ ದೀಪಗಳು, ಜ್ಯೋತಿಗಳು, ಸುಣ್ಣದ ದೀಪ, ವಾಯೂತ್ಪತ್ತಿ ಕ್ರಮ, ವೈದ್ಯುತ ದೀಪ, ಯಂತ್ರಕಾಚಗಳು, ವಿಧವಿಧವಾದ ಲಾಂದ್ರಗಳು, ತೆರೆ, ಚಿತ್ರದ ಕನ್ನಡಿಗಳು, ವಸ್ತು ಪ್ರಕ್ಷೇಪಣ, ಶಾಸ್ತ್ರೀಯ ನಿದರ್ಶನಗಳು, ಪ್ರದರ್ಶನಕ್ರಮ ಸೂಚನೆಗಳು ಎನ್ನುವ ಹದಿಮೂರು ಪ್ರಕರಣಗಳು ಕೃತಿಯಲ್ಲಿವೆ.  
 
ಇಂಗ್ಲಿಷ್ ಶಬ್ದಗಳಿಗೆ ಸಂವಾದಿಯಾಗಿ ಲೇಖಕರು ರೂಪಿಸಿಕೊಂಡಿರುವ ಕನ್ನಡ ಶಬ್ದಗಳು ಸೂಕ್ತವಾಗಿಯೂ ಕುತೂಹಲಕಾರಿಯಾಗಿಯೂ ಇವೆ. ವಿಜ್ಞಾನದ ಪಠ್ಯಗಳಲ್ಲಿ ಇಂತಹ ಕನ್ನಡ ಶಬ್ದಗಳನ್ನು ಧಾರಾಳವಾಗಿ ಬಳಸಿಕೊಳ್ಳಬಹುದು. ಅಪ್ರವಾಹಕ (Non-Conductor), ಉತ್‌ಕ್ಷೇಪಕ (Jet), ಉರಿಗೂಡು (Combustion Chamber), ಒತ್ತುಹಲಿಗೆಗಳು (Pressure Boards), ಕ್ರಕಚಾಯತ (Prism), ಕಾಂತಿಮಂಡಲ (Disc), ಕೊಬ್ಬೆಣ್ಣೆ (Fatty Oil), ಗಾಳಿಯ ಗಾಣ (Wind – mill), ಚಿತ್ರವಾಹಕ (Slide Carrier), ಜೂಳಿ (Stop-Cock), ದರ್ಶಕ (Objective), ಧವಳೀಕರಣ (Bleaching), ಪನ್ನಾಲೆ (Funnel), ಪ್ರಕಂಪನ (Vibration), ಪಾತ್ರಕ (Cell of a Battery), ಮಡುಪುಕದ (Valve), ಮರಸುತ್ತುಮೊಳೆ (Screw), ಯಂತ್ರಕಾಚ (Lens), ಲೋಹಚುಂಬಕ (Magnet), ವಾಯುರೇಚಕಯಂತ್ರ (Air-Pump), ವೈದ್ಯುತಮಾಪಕ (Galvanameter), ಹರಿತ್ಪೀತವಾಯು (Chlorine) – ಇಂತಹ ಭೌತ ವಿಜ್ಞಾನೀಯ ಕನ್ನಡ ಪಾರಿಭಾಷಿಕ ಶಬ್ದಗಳು ರಾವ್‌ದ್ವಯರು ಕನ್ನಡ ನುಡಿಕೋಶಕ್ಕೆ ಸಲ್ಲಿಸಿರುವ ಕಾಣಿಕೆ ಎನ್ನಬಹುದು.
ಲೇಖಕರ ನಿರೂಪಣಾ ಕೌಶಲಕ್ಕೆ ಒಂದು ವಾಕ್ಯವೃಂದವನ್ನು ನಿದರ್ಶನವಾಗಿ ಗಮನಿಸಬಹುದು:
 
‘‘ಹದಿನಾರನೆಯ ಶತಮಾನದಲ್ಲಿ ಇಟಲಿ ದೇಶದ ಫ್ಲಾರೆನ್ಸ್ ಪಟ್ಟಣದಲ್ಲಿ ಸೆಲಿನಿ ಎಂಬ ಅಕ್ಕಸಾಲಿಗನಿದ್ದನು. ಇವನು ಕಲ್ಲಿನಲ್ಲೂ ಚಿತ್ರಕೆಲಸವನ್ನು ಮಾಡುತ್ತಿದ್ದನು. ಒಬ್ಬ ಪೂಜಾರಿಯು ಇವನಿಗೆ ಪಿಶಾಚಗಳನ್ನು ತೋರಿಸುವೆನೆಂದು ಹೇಳಿದನು. ಸೆಲಿನಿಯು ಅವುಗಳನ್ನು ನೋಡುವುದಕ್ಕೆ ಒಪ್ಪಿಕೊಂಡನು. ರೋಮ್ ಪಟ್ಟಣದ ಒಂದು ಪ್ರಸಿದ್ಧವಾದ ನಾಟಕಶಾಲೆಯಲ್ಲಿ ಮಂತ್ರ ಹಾಕುವುದಕ್ಕೆ ನಿಷ್ಕರ್ಷೆಯಾಯಿತು. ಸೆಲಿನಿಯೂ, ಒಬ್ಬ ಹುಡುಗನೂ, ಇನ್ನೂ ಇಬ್ಬರೂ ಮೂವರೂ ಅಲ್ಲಿಗೆ ಹೋದರು.
 
ಪೂಜಾರಿಯು ನೆಲದ ಮೇಲೆ ಮಂಡಲಗಳನ್ನು ಬರೆದು, ಮಂತ್ರಗಳನ್ನು ಹೇಳಿ, ಪರಿಮಳದ್ರವ್ಯಗಳನ್ನೂ ಗಿಡಮೂಲಿಕೆಗಳನ್ನೂ ಸುಟ್ಟನು. ಹೊಗೆ ಎದ್ದಿತು. ಗಿಡಮೂಲಿಕೆಗಳ ಧೂಮದಿಂದ ಅಲ್ಲಿದ್ದವರಿಗೆ ಸ್ವಲ್ಪ ಜ್ಞಾನ ತಪ್ಪಿ ಚಿತ್ತಭ್ರಮಣೆಯುಂಟಾಯಿತು...’’. 
ಕನ್ನಡದಲ್ಲಿ ವಿಜ್ಞಾನದ ಬರವಣಿಗೆಗೆ ಮಾದರಿಯಾಗುವಷ್ಟರ ಮಟ್ಟಿಗೆ ಇಲ್ಲಿನ ಭಾಷೆಯ ಬಳಕೆ ಇದೆ. ಒಂದು ಶತಮಾನಕ್ಕೂ ಹಿಂದೆ ಇಂತಹ ಅಪೂರ್ವ ಕೃತಿ ಕನ್ನಡದಲ್ಲಿ ಪ್ರಕಟವಾಗಿರುವುದು ಕನ್ನಡದಲ್ಲಿನ ವಿಜ್ಞಾನ ಸಾಹಿತ್ಯದ ಪರಿಚಯವಿದ್ದವರಿಗೆ ಆಶ್ಚರ್ಯವೇನಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT