ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ರಕ್ಷಣೆಗೆ ಮಠದಲಿ ‘ಗ್ಯಾಸಿಫಯರ್’

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಆಧುನೀಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ನಿಡಸೋಸಿಯ ಮಠ ದಿಟ್ಟ ಹೆಜ್ಜೆ ಇಟ್ಟಿದೆ. ಕಟ್ಟಿಗೆ ದಹಿಸಿ ಅನಿಲ ತಯಾರಿಸುವ ‘ಗ್ಯಾಸಿಫಯರ್’ ಎಂಬ ಅಡುಗೆ ಮಾಡುವ ಸಾಧನದ ಮೂಲಕ ಪರಿಸರ ರಕ್ಷಣೆಯಲ್ಲಿ ಕೊಡುಗೆ ನೀಡುವತ್ತ ದಾಪುಗಾಲು ಹಾಕಿದೆ. ಹಸಿರು ಶಕ್ತಿ ಬಳಸಿ ನಿಡಸೋಸಿಮಠದಲ್ಲಿ ಗ್ಯಾಸಿಫಯರ್ ತಂತ್ರಜ್ಞಾನದ ಒಲೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವುದು ಇಡೀ ದೇಶದಲ್ಲೇ ಪ್ರಥಮ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ನಿಡಸೋಸಿ ಗ್ರಾಮದಲ್ಲಿ ಇರುವ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠಾಧೀಶ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಇದರ ರೂವಾರಿ. ಈ ಮಠದಲ್ಲಿ ನಿತ್ಯವೂ ದಾಸೋಹ. ಪ್ರತಿದಿನ ಎರಡು ಸಾವಿರಕ್ಕೂ ಅಧಿಕ ಮಂದಿಗೆ ದಾಸೋಹ ಇಲ್ಲಿ ನಡೆಯುತ್ತದೆ. ಇವರಿಗೆಲ್ಲ ಊಟ ತಯಾರಿಸುವುದಕ್ಕೆ ದಿನವೂ ಕ್ವಿಂಟಲ್‌ಗಟ್ಟಲೆ ಕಟ್ಟಿಗೆ ಬೇಕಾಗುತ್ತಿತ್ತು. ರೊಟ್ಟಿಯನ್ನೇ ಭಕ್ತರಿಗೆ ಹೆಚ್ಚಾಗಿ ನೀಡುವುದರಿಂದ ದಿನವೂ ಹೆಚ್ಚಿನ ಪ್ರಮಾಣದ ಕಟ್ಟಿಗೆ ಉರಿಸಲಾಗುತ್ತಿತ್ತು. ಇಷ್ಟೊಂದು ಪ್ರಮಾಣದ ಕಟ್ಟಿಗೆ ತರುವುದು ಕಷ್ಟದ ಮಾತಾಗಿತ್ತು. ಬಹುತೇಕ ಮಹಿಳೆಯರು ಸೌದೆ ಒಲೆಯ ಮುಂದೆ ಕುಳಿತು ರೊಟ್ಟಿ ಮಾಡುತ್ತ ಧರ್ಮ ಸಂಕಟ ಎದುರಿಸುತ್ತಿದ್ದರು.

ಆದರೆ, ಇದೀಗ ಸೌದೆ, ಒಲೆಗಳಿಗೆ ಈ ಮಠದಲ್ಲಿ ಜಾಗವೇ ಇಲ್ಲ! ಇವುಗಳ ಬದಲಾಗಿ ಗ್ಯಾಸಿಫಯರ್ ವ್ಯವಸ್ಥೆ ಬಂದಿದೆ. ಗ್ಯಾಸಿಫಯರ್ ವ್ಯವಸ್ಥೆಯಿಂದ ಮಹಿಳೆಯರು ದಿನವೂ ಖುಷಿಯಾಗಿ ಅಡುಗೆ ಮಾಡುತ್ತಿದ್ದಾರೆ. ಕಟ್ಟಿಗೆ ಕಡಿಮೆ ಪ್ರಮಾಣದಲ್ಲಿ ಉರಿಸಲಾಗುತ್ತಿದೆ. ಅಡುಗೆ ಮಾಡುವಾಗ ಕಣ್ಣಲ್ಲಿ ನೀರು ಬರುವುದು, ಮೈಗೆ ಶಾಖ ಹತ್ತುವುದು ತಪ್ಪಿದೆ.

ವಿಜಯಪುರ ಮೂಲದ ಸಿ.ಎಂ.ಶಿವಯೋಗಿಮಠ ಹಾಗೂ ಉಮೇಶ ಕುಲಕರ್ಣಿ ಸ್ನೇಹಿತರ ಪ್ರಯತ್ನದ ಫಲವಾಗಿ ಇಂಥದ್ದೊಂದು ದೊಡ್ಡ ಪ್ರಮಾಣದ ಗ್ಯಾಸಿಫಯರ್ ತಂತ್ರಜ್ಞಾನ ಜೀವತಳೆದಿದೆ. ಇವರು ಈ ಒಲೆ ತಯಾರಿಸುವುದಕ್ಕೆ ಮುನ್ನ ಇಂತಹ 5–6 ಬೃಹತ್ ಪ್ರಮಾಣದ ಯಂತ್ರ ತಯಾರಿಸಿ ಯಶಸ್ವಿಯಾಗಿದ್ದಾರೆ.

ಇದೇ ವರ್ಷದ ಶಿವರಾತ್ರಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಭಕ್ತರಿಗೆ ಇದೇ ಗ್ಯಾಸಿಫಯರ್ ಯಂತ್ರ ಬಳಸಿ ಸಜ್ಜಕದ ಹುಗ್ಗಿ, ಅನ್ನ-ಸಾರು ಮತ್ತು ರೊಟ್ಟಿ ಮುಂತಾದವುಗಳನ್ನು ತಯಾರಿಸಿ ಉಣಬಡಿಸಲಾಗಿದೆ. ಕಟ್ಟಿಗೆಯಿಂದ ಮಾಡಿದ ಅಡುಗೆಯಷ್ಟೇ ಇದೂ ರುಚಿಯಾಗಿರುತ್ತದೆ. ಅಲ್ಲದೆ, ಒಲೆಗಳಿಂದ ಹೊರಬರುವ ಕಾರ್ಬನ್‌ ಅನ್ನು ಹೊಲ-ಗದ್ದೆಗಳಿಗೆ ಉತ್ತಮ ಗೊಬ್ಬರವಾಗಿ ಬಳಸಬಹುದು. ಇದರಿಂದ ಬರುವ ಟಾರ್ ಕೂಡ ಉಪಯೋಗಿ. ಒಂದು ಕೆ.ಜಿ ಟಾರ್‌ ಅನ್ನು ನೂರು ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಗೆ ಕೀಟನಾಶಕ ರೀತಿಯಲ್ಲಿ ಸಿಂಪರಣೆ ಮಾಡಿದರೆ ಕೀಟಬಾಧೆಯಿಂದ ಬೆಳೆಯನ್ನು ನಿಯಂತ್ರಿಸಬಹುದಾಗಿದೆ.ಮಠಕ್ಕೆ ಇಂತಹ ಗ್ಯಾಸಿ

ಫಯರ್ ನೀಡಿರುವುದು ಮಠದ ಭಕ್ತರಾದ ಉಮೇಶ ಕುಲಕರ್ಣಿ ಹಾಗೂ ಸಿ ಎಂ ಶಿವಯೋಗಿಮಠ. ಇವರು ಮೂರು ತಿಂಗಳ ಹಿಂದೆ ಸ್ವಾಮೀಜಿಯವರ ದರ್ಶನ ಪಡೆಯುವುದಕ್ಕೆ ಬಂದ ಸಂದರ್ಭದಲ್ಲಿ ಮಹಿಳೆಯರು ಹೊಗೆಯ ನಡುವೆಯೇ ಅಡುಗೆ ಮಾಡುತ್ತಿರುವುದನ್ನು ನೋಡಿದ್ದರು. ಹೊಗೆಯಿಂದ ಮುಕ್ತಿ ಕೊಡಿಸಬೇಕು ಎಂದುಕೊಂಡು ಈ ತಂತ್ರಜ್ಞಾನ ಅಳವಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT