ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೀ ಬುದ್ಧಿವಂತಿಕೆ ನೀಡಿತು ಸುಳಿವು...!

ಕಟಕಟೆ–59
Last Updated 25 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕೆಲ ವರ್ಷಗಳ ಹಿಂದಿನ ಮಾತಿದು. ಸೋಮಪ್ಪ ಎನ್ನುವವರು ಆತಂಕದಿಂದ ನನ್ನ ಕಚೇರಿಗೆ ಬಂದರು. ‘ಸಾರ್‌, ಸಾರ್... ನನ್ನ ಮಗ ಪರಶಿವನನ್ನು (ಬೆಂಗಳೂರಿನ) ಬನಶಂಕರಿ ಪೊಲೀಸರು  ಠಾಣೆಗೆ ಬರಹೇಳಿದ್ದಾರೆ. ಕೊಲೆ ಕೇಸು ಎನ್ನುತ್ತಿದ್ದಾರೆ. ನನ್ನ ಮಗ ತುಂಬಾ ಮುಗ್ಧ. ಪೊಲೀಸರು ಅದೇನು ಮಾಡಿಬಿಡ್ತಾರೋ ಗೊತ್ತಿಲ್ಲ. ದಯವಿಟ್ಟು ಸಹಾಯ ಮಾಡಿ ಸಾರ್....’ ಎಂದು ಒಂದೇ ಸಮನೆ ಗೋಗರೆದರು.

ಅವರನ್ನು ಸಮಾಧಾನಪಡಿಸಿ, ‘ಸುಖಾಸುಮ್ಮನೇ ಯಾರನ್ನಾದರೂ ಪೊಲೀಸರು ಹೀಗೆಲ್ಲಾ ಬಂಧಿಸುವುದಿಲ್ಲ. ನಿಮ್ಮ ಮಗ ಯಾವುದೇ ತಪ್ಪು ಮಾಡದಿದ್ದಲ್ಲಿ ಧೈರ್ಯವಾಗಿ ಹೋಗಿ ಪೊಲೀಸರನ್ನು ಕೇಳಿ. ನಿಮಗೇನಾದರೂ ತೊಂದರೆ ಆದಲ್ಲಿ ಅಥವಾ ಸುಳ್ಳು ಕೇಸಿನಲ್ಲಿ ಮಗನನ್ನು ಸಿಕ್ಕಿಸಿದ್ದಲ್ಲಿ ನಾನು ಕಾನೂನಿನ ನೆರವು ನೀಡುತ್ತೇನೆ’ ಎಂದು ಧೈರ್ಯ ತುಂಬಿ ಕಳಿಸಿದೆ.

ಒಂದೆರಡು ದಿನಗಳ ನಂತರ ಸೋಮಪ್ಪ ಅವರು ಮಗನನ್ನು ಕರೆದುಕೊಂಡು ಪುನಃ ಕಚೇರಿಗೆ ಬಂದರು. ‘ಸಾರ್‌, ನೀವು ಹೇಳಿದ್ದು ಸರಿ. ಮಗನನ್ನು ಪೊಲೀಸರು ಹಲವು ಗಂಟೆ ವಿಚಾರಿಸಿದರಂತೆ. ಇವನು ಯಾವುದೇ ಕೇಸ್‌ನಲ್ಲಿ ಭಾಗಿಯಾಗಿಲ್ಲ ಎಂದು ಕೊನೆಗೂ ಅವರಿಗೆ ಮನವರಿಕೆ ಆಗಿರಬೇಕು. ಅವನನ್ನು ಬಿಟ್ಟರು’ ಎಂದರು. ಮುಗ್ಧ ಮುಖದ ಪರಶಿವನನ್ನು ನೋಡಿದಾಗ ನನಗೂ ಅಯ್ಯೋ ಪಾಪ ಅನ್ನಿಸಿತು.

ಅದಾದ ಕೆಲ ತಿಂಗಳಿನ ನಂತರ ಸೋಮಪ್ಪನವರು ಪುನಃ ಅದೇ ದುಗುಡದ ಮುಖ ಹೊತ್ತು, ನನ್ನ ಮಗನನ್ನು ಬಚಾವು ಮಾಡಿಕೊಡಿ ಎಂದು ಗೋಗರೆದರು. ವಿಚಾರಿಸಿದಾಗ, ಅವರು ‘ಬನಶಂಕರಿ ಬಳಿಯ ಮಹಿಳೆಯ ಕೊಲೆ ಕೇಸಿನಲ್ಲಿ ಪೊಲೀಸರು ಮಗನನ್ನು ಬಂಧಿಸಿದ್ದಾರೆ. ಅವನನ್ನು ಬಿಡಿಸಿಕೊಡುವ ಜವಾಬ್ದಾರಿ ನಿಮ್ಮದು...’ ಎಂದರು.



ಪೊಲೀಸರು ಪದೇಪದೇ ಏಕೆ ಇವನನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ ಎಂದು ನನಗೆ ಸಂಶಯ ಶುರುವಾಯಿತು. ಮಗನ ಪರವಾಗಿ ವಕಾಲತ್ತು ವಹಿಸುವುದಾಗಿ ಸೋಮಪ್ಪ ಅವರಿಗೆ ಹೇಳಿ, ಈ ಬಗ್ಗೆ ವಿಷಯ ಕಲೆ ಹಾಕಿದೆ.

ಆಗ ನನಗೆ ತಿಳಿದದ್ದೆಂದರೆ; ಗೋವಾದ ಹೋಟೆಲ್‌ ಒಂದರಲ್ಲಿ ನಿಖಿಲ್‌ ಎಂಬಾತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೂ ಮುನ್ನ ಪೊಲೀಸರಿಗೆ ಬರೆದ ಪತ್ರದಲ್ಲಿ ‘ಬನಶಂಕರಿ ಠಾಣೆಯ ಸರಹದ್ದಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಮಹಿಳೆಯ ಕೊಲೆಗೆ ಪರಶಿವನಾಗಲಿ, ಜಾನ್ಸನ್ ಆಗಲಿ ಕಾರಣರಲ್ಲ, ಅದಕ್ಕೆ ನಾನೊಬ್ಬನೇ ಕಾರಣ’ ಎಂದು ಬರೆದಿಟ್ಟಿದ್ದ. ಇದರ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ತಾವು ಈ ಹಿಂದೆ ಸಂಶಯಪಟ್ಟು ಠಾಣೆಗೆ ಕರೆತಂದಿದ್ದ ಪರಶಿವನೇ, ಈ ಪತ್ರದಲ್ಲಿ ತಿಳಿಸಿರುವ ಪರಶಿವ ಎಂದು  ತಿಳಿದು ಬಂಧಿಸಿದ್ದರು.

ಪೊಲೀಸರಲ್ಲಿ ಈ ಬಗ್ಗೆ ವಿಸ್ಕೃತವಾಗಿ ವಿಚಾರಿಸಿದಾಗ ದಂಗಾಗಿ ಹೋದೆ! ಮುಗ್ಧ ಮುಖದ ಪರಶಿವನ ಕ್ರೌರ್ಯದ ಜಗತ್ತು ಅಲ್ಲಿ ಅನಾವರಣಗೊಂಡಿತ್ತು.
***

ಮಲೆನಾಡು, ಕರಾವಳಿ ತೀರದ ಪರಶಿವ, ನಿಖಿಲ್, ಜಾನ್ಸನ್ ಆಪ್ತ ಸ್ನೇಹಿತರು. ಐಷಾರಾಮಿ ಜೀವನವನ್ನು ಬಯಸಿದ ಈ ಮೂವರೂ ಅಪರಾಧ ಜಗತ್ತನ್ನು ಪ್ರವೇಶಿಸಿದ್ದರು. ಇವರ ಗುರಿ ಶ್ರೀಮಂತ ಒಂಟಿ ಮಹಿಳೆಯರು.

ಮನೆಯ ಸಲಕರಣೆಗಳನ್ನು ರಿಪೇರಿ ಮಾಡುವ ಪ್ರತಿಷ್ಠಿತ ಕಂಪೆನಿಯೊಂದರ ಗುರುತಿನ ಚೀಟಿ ತಯಾರಿಸಿಕೊಂಡಿದ್ದರು. ಈ ಗುಂಪಿನ ಮುಖ್ಯಸ್ಥ 21 ವರ್ಷದ ನಿಖಿಲ್‌. ತಾವು ಗುರಿಯಾಗಿಸಿಕೊಂಡ ಮನೆಗೆ ಹೋಗಿ ಗುರುತಿನ ಚೀಟಿ ತೋರಿಸಿ ಕಂಪೆನಿಯ ಪ್ರತಿನಿಧಿ ಎಂದು ಗುರುತಿಸಿಕೊಳ್ಳುತ್ತಿದ್ದ. ಮನೆಯಲ್ಲಿರುವ ಸಲಕರಣೆಗಳನ್ನು ರಿಪೇರಿ ಮಾಡುವುದಾಗಿಯೋ ಅಥವಾ ಅವುಗಳನ್ನು ಸರಿಯಾಗಿ ನಿಭಾಯಿಸುವುದು ಹೇಗೆ ಎಂದು ತಿಳಿಸಿಕೊಡುವುದಾಗಿಯೋ ಮಹಿಳೆಯರಿಗೆ ಹೇಳುತ್ತಿದ್ದ.  ಎಂಥ ಮಹಿಳೆಯರೂ ಸುಲಭದಲ್ಲಿ ನಂಬಿಬಿಡುವಷ್ಟು ಮಾತಿನ ಮೋಡಿಗೆ ಅವರನ್ನು ಸಿಲುಕಿಸುತ್ತಿದ್ದ.

ಮನೆಯೊಳಕ್ಕೆ ಹೋಗುತ್ತಲೇ ನೀರು ಕೇಳುತ್ತಿದ್ದ. ಮಹಿಳೆ ಅಡುಗೆ ಮನೆಗೆ ಹೋಗುತ್ತಿದ್ದಂತೆಯೇ ಜೇಬಿನಲ್ಲಿದ್ದ ವೈರ್‌ ಅನ್ನು ಆಕೆಯ ಕುತ್ತಿಗೆಗೆ ಬಿಗಿದು ಉಸಿರುಕಟ್ಟಿಸುತ್ತಿದ್ದ. ಒಂದೇ ಕ್ಷಣದಲ್ಲಿ ಮಹಿಳೆ ವಿಲವಿಲ ಒದ್ದಾಡಿ ಸಾಯುತ್ತಿದ್ದಳು.

ಇಷ್ಟೆಲ್ಲಾ ಆಗುವವರೆಗೆ, ಅಲ್ಲಿಯೇ ಹೊಂಚು ಹಾಕುತ್ತಿದ್ದ ಇನ್ನಿಬ್ಬರು ಸ್ನೇಹಿತರು ಒಳಕ್ಕೆ ಬಂದು ಹಣ, ಚಿನ್ನಾಭರಣಗಳನ್ನು ದೋಚುತ್ತಿದ್ದರು. ಹೊರಗೆ ಯಾರಾದರೂ ನೋಡಿದರೆ ಸಂದೇಹ ಬರಬಾರದು ಎಂಬ ಕಾರಣಕ್ಕೆ ಮೂವರೂ ಬೇರೆ ಬೇರೆ ದಿಕ್ಕಿನಲ್ಲಿ ಹೋಗಿ ಗೊತ್ತುಮಾಡಿದ ಜಾಗದಲ್ಲಿ ಒಂದೆಡೆ ಸೇರುತ್ತಿದ್ದರು.

ದೋಚಿದ್ದ ಚಿನ್ನಾಭರಣಗಳನ್ನು  ಮಾರಾಟ ಮಾಡಲು ಮಾರ್ವಾಡಿ ಅಂಗಡಿಯನ್ನು ಗೊತ್ತು ಮಾಡಿಕೊಂಡಿದ್ದರು. ಚಿನ್ನಾಭರಣ ಅಲ್ಲಿ ಕೊಟ್ಟು ಬಂದಷ್ಟು ಹಣದಿಂದ ವಿಲಾಸಿ ಜೀವನ ನಡೆಸುತ್ತಿದ್ದರು. ತಾವು ಮಾಡುವ ಕೃತ್ಯಗಳಿಗೆ ಯಾವುದೇ ಸಾಕ್ಷ್ಯ ಸಿಗದಂತೆ ಕಟ್ಟೆಚ್ಚರ ವಹಿಸುತ್ತಿದ್ದರು. ಹೀಗೆ ಇವರ ವೈರ್‌ಗೆ ಅನೇಕ ಜೀವಗಳು ಬಲಿಯಾದವು.

ಈ ‘ವೈರ್‌ ಕೊಲೆಪಾತಕಿ’ಗಳನ್ನು ಹುಡುಕಲು ಪೊಲೀಸರ ಮೇಲೆ ಒತ್ತಡ ಹೆಚ್ಚಾಯಿತು.  ಇದು ಪೊಲೀಸರಿಗೆ ದೊಡ್ಡ ತಲೆನೋವಾಯಿತು. ಹೇಗಾದರೂ ಮಾಡಿ ಆರೋಪಿಗಳನ್ನು ಹಿಡಿಯಬೇಕು ಎಂದು ಯೋಚಿಸಿದ ಅವರಿಗೆ ಸಿಕ್ಕ ಸುಲಭದ ಮಾರ್ಗ ಎಂದರೆ ಇನ್ಯಾರನ್ನೋ ಕೊಲೆ ಪ್ರಕರಣಗಳಲ್ಲಿ ‘ಫಿಕ್ಸ್‌’ ಮಾಡುವುದು. ಬೇರೆ ಅಪರಾಧ ಪ್ರಕರಣಗಳಲ್ಲಿ ತಾವು ಹಿಡಿಯುವ ಆರೋಪಿಗಳೇ ಈ ಕೊಲೆ ಮಾಡುತ್ತಿದ್ದಾರೆ ಎಂದು ‘ಸಾಬೀತು ಮಾಡಲು’ ಪೊಲೀಸರಿಗೆ ಹೆಚ್ಚೇನೂ ಕಷ್ಟವಾಗಲಿಲ್ಲ. ಘಟನೆ ನಡೆದ ಸ್ಥಳಗಳಲ್ಲಿ ಸಾಕ್ಷ್ಯದ ರೂಪದಲ್ಲಿ ಸಿಗುವ ವಸ್ತುಗಳ ಮೇಲಿನ ಬೆರಳಿನ ಗುರುತುಗಳು ತಮಗೆ ಸಿಕ್ಕ ಆರೋಪಿಗಳ ಬೆರಳಿನ ಗುರುತುಗಳೇ ಎಂದು ಸಾಬೀತು ಮಾಡತೊಡಗಿದರು. ಅಲ್ಲಿಗೆ ತನಿಖಾ ಶಾಸ್ತ್ರವನ್ನು ಮುಗಿಸುತ್ತಿದ್ದರು.

ಪೊಲೀಸರ ನಾಮಕಾವಸ್ತೆ ತನಿಖೆಯಿಂದ ಪ್ರೇರೇಪಿತಗೊಂಡ ಈ ಸ್ನೇಹಿತರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ನಿರಾತಂಕವಾಗಿ ತಮ್ಮ ಕುಕೃತ್ಯ ಮುಂದುವರಿಸಿದರು.   ಪೊಲೀಸರ ಸುಳ್ಳು ತನಿಖೆಯ ಪರಮಾವಧಿ ಯಾವ ಹಂತ ತಲುಪಿತ್ತು ಎಂದರೆ ಚಿಕ್ಕಮಗಳೂರಿನಲ್ಲಿ ನಡೆದ ವೈದ್ಯರೊಬ್ಬರ ಹೆಂಡತಿಯ ಕೊಲೆ ಮಾಡಿದ್ದು ಆ ವೈದ್ಯರೇ ಎಂದು ಹೇಳಿ ಅವರನ್ನು ಜೈಲಿಗೆ ತಳ್ಳಿದ್ದರು! ಹೆಂಡತಿಯ ಶೀಲವನ್ನು ಶಂಕಿಸಿ ಈ ಕೊಲೆ ಮಾಡಿರುವುದಾಗಿ ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ದರು!

ಹೀಗಿರಲು ಒಂದು ದಿನ ಈ ಮೂವರೂ ಬೆಂಗಳೂರಿನ ಬನಶಂಕರಿ ವ್ಯಾಪ್ತಿಯ ಒಂಟಿ ಮಹಿಳೆಯ ಕೊಲೆ ಮಾಡಿ ಚಿನ್ನಾಭರಣ ದೋಚಿದರು. ಅದನ್ನು ಮಾರಿ ಬಂದ ಹಣದಿಂದ  ತನ್ನ ಪ್ರೇಯಸಿ ಲೈಲಾಳನ್ನು ಭೇಟಿಯಾಗಲು ಮಂಗಳೂರಿಗೆ ಹೋದ ನಿಖಿಲ್‌. ಆಕೆಗೆ ಸರ್‌ಪ್ರೈಸ್‌ ಕೊಡಬೇಕೆಂದು ತಾನು ಬರುವ ವಿಷಯವನ್ನು ಹೇಳಿರಲಿಲ್ಲ.

ತಾನೇ ಕೊಡಿಸಿದ್ದ ಲೈಲಾಳ ಮನೆಗೆ ಹೋಗಿ ಬಾಗಿಲು ತಟ್ಟಿದಾಗ ಆಕೆ ಸ್ವಲ್ಪ ಸಮಯ ಬಿಟ್ಟು ಬಾಗಿಲು ತೆಗೆದಳು. ಅವಳ ಮುಖದಲ್ಲಿ ಆತಂಕ ಕಾಣಿಸಿತು ನಿಖಿಲ್‌ಗೆ. ಅನುಮಾನಗೊಂಡ ಆತ ಮನೆಯೊಳಗೆ ಹೋದ. ಅವನ ಸಂಶಯಕ್ಕೆ ಇನ್ನಷ್ಟು ಇಂಬು ನೀಡಲು ಎಂಬಂತೆ ಹಾಸಿಗೆಯನ್ನು ಲಗುಬಗೆಯಿಂದ ಸರಿಪಡಿಸಿ ಇಟ್ಟಿರುವಂತೆ ಅವನಿಗೆ ಕಾಣಿಸಿತು. ಮೊದಲೇ ಕ್ರಿಮಿನಲ್‌ ತಲೆ, ಕೇಳಬೇಕೆ? ಅತ್ತಿತ್ತ ನೋಡಿದ. ಆಗ ಅವನಿಗೆ ಮಂಚದ ಕೆಳಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಧರಿಸುವ ಬೆಲ್ಟ್‌ ಕಾಣಿಸಿತು.

ನಿಖಿಲ್‌ ಕೆಂಡಾಮಂಡಲನಾದ. ಆದರೆ ಆ ಬಗ್ಗೆ ಲೈಲಾಳ ಮುಂದೆ ಅನುಮಾನ ತೋರಗೊಡಲಿಲ್ಲ. ಅವರಿವರಲ್ಲಿ ವಿಚಾರಿಸಿದಾಗ ಸ್ಫುರದ್ರೂಪಿ ಪೊಲೀಸ್‌ ಕಾನ್‌ಸ್ಟೆಬಲ್‌ ವಿಠಲ್ ಎಂಬಾತ  ಲೈಲಾಳ ಮನೆಗೆ  ಆಗಾಗ್ಗೆ ಬಂದುಹೋಗುತ್ತಿದ್ದ ವಿಷಯ ತಿಳಿಯಿತು.

ತನಗೆ ಮೋಸ ಮಾಡಿದ ಪ್ರೇಯಸಿಗೆ ಬುದ್ಧಿ ಕಲಿಸಬೇಕು ಎಂದುಕೊಂಡ ನಿಖಿಲ್, ಅವಳನ್ನು ಗೋವಾಗೆ ಕರೆದುಕೊಂಡು ಹೋದ. ಐಷಾರಾಮಿ ಹೋಟೆಲ್‌ ಒಂದರಲ್ಲಿ ಕೊಠಡಿ ಪಡೆದ. ಆ ರಾತ್ರಿ ಕಂಠಪೂರ್ತಿ ಕುಡಿದ. ಲೈಲಾ ನಿದ್ದೆಗೆ ಜಾರುತ್ತಿದ್ದಂತೆಯೇ ತಾನು ತಂದಿದ್ದ ವೈರ್‌ ಅನ್ನು ಆಕೆಯ ಕುತ್ತಿಗೆಗೆ ಬಿಗಿದ. ಅಷ್ಟೇ... ಮಲಗಿದಲ್ಲಿಯೇ ಲೈಲಾ ಶವವಾದಳು.

ಲೈಲಾಳಿಗೆ ಐಷಾರಾಮಿ ಜೀವನ ನೀಡುವ ಸಂಬಂಧ ಕಂಡಕಂಡ ಮಹಿಳೆಯರ ಕೊಲೆ ಮಾಡಿ ದುಡ್ಡು ಸಂಪಾದಿಸುತ್ತಿದ್ದ ನಿಖಿಲ್‌. ಇಷ್ಟೆಲ್ಲಾ ಮಾಡಿದರೂ ಅವಳು ತನಗೇ ಮೋಸ ಮಾಡಿದ್ದನ್ನು ಅವನಿಗೆ ಅರಗಿಸಿಕೊಳ್ಳಲಾಗಲಿಲ್ಲ. ಇನ್ನೊಂದೆಡೆ ತನ್ನ ಪ್ರೇಯಸಿ, ತನ್ನ ಕೈಯಿಂದಲೇ ಕೊಲೆಯಾಗಿದ್ದೂ ಅವನನ್ನು ಇನ್ನಷ್ಟು ಕುಗ್ಗಿಸಿತು.

ನಿಖಿಲ್‌ ಖಿನ್ನನಾದ. ತಾನು ಬದುಕಿದ್ದು ಪ್ರಯೋಜನ ಇಲ್ಲ ಎಂದುಕೊಂಡ. ವಿಷ ಸೇವಿಸಿ ಸಾಯುವ ನಿರ್ಧಾರಕ್ಕೆ ಬಂದ. ಆಗ ಅವನಿಗೆ ತನ್ನ ಆಪ್ತ ಸ್ನೇಹಿತರಾದ ಜಾನ್ಸನ್‌ ಮತ್ತು ಪರಶಿವ ನೆನಪಾದರು. ತನ್ನ ಸ್ನೇಹಿತರು ಯಾವುದೇ ಕಾರಣಕ್ಕೂ ಪೊಲೀಸರ ಕೈಗೆ ಸಿಕ್ಕಿಬೀಳಬಾರದು ಎಂದುಕೊಂಡ. ಅದಕ್ಕಾಗಿ ಅವನು ಬನಶಂಕರಿ ಇನ್‌ಸ್ಪೆಕ್ಟರ್‌ ಅವರ ಹೆಸರಿಗೆ ಪತ್ರ ಬರೆದ. ಪತ್ರದಲ್ಲಿ ತಾನು ಮಾಡಿದ ಪಾಪ ಕೃತ್ಯಗಳನ್ನೆಲ್ಲಾ ಉಲ್ಲೇಖಿಸಿದ.

‘ನಾನು ಮಾಡಿದ ಕೊಲೆಗಳಲ್ಲಿ ನನ್ನೊಬ್ಬನದ್ದೇ ಕೈವಾಡವಿದೆ. ಇದರಲ್ಲಿ ನನ್ನ ಸ್ನೇಹಿತರಾದ ಪರಶಿವ ಅಥವಾ ಜಾನ್ಸನ್ ಅವರ ಕೈವಾಡವಿಲ್ಲ’ ಎಂದು ಬರೆದ. ಅಂತೂ ಸಾಯುವ ಮುನ್ನ ತನ್ನ ಸ್ನೇಹಿತರನ್ನು ಬಚಾವು ಮಾಡಿ ಮಹಾನ್‌ ಕೆಲಸ ಮಾಡಿದೆ ಎಂದುಕೊಂಡ. ಆದರೆ ಅವನ ಈ ಅತೀ ಬುದ್ಧಿವಂತಿಕೆಯೇ ಸ್ನೇಹಿತರನ್ನು ಪೇಚಿಗೆ ಸಿಲುಕಿಸುತ್ತದೆ ಎಂಬುದು ಕೊನೆಗೂ ತಿಳಿಯಲೇ ಇಲ್ಲ!

ಇನ್‌ಸ್ಪೆಕ್ಟರ್‌ ಪತ್ರ ಓದಿದರು. ‘ಅವರಿಬ್ಬರ ಕೈವಾಡ ಇಲ್ಲ’ ಎಂಬ ವಾಕ್ಯ ಓದಿದ ಅವರಿಗೆ ಅಪರಾಧಿಗಳ ಸುಳಿವು ಕೂತಲ್ಲಿಯೇ ಸಿಕ್ಕಿಹೋಯಿತು! ಹಳೇ ಕೇಸಿನ ದಾಖಲೆಗಳನ್ನು ಶೋಧಿಸಿದರು. ಅವುಗಳಿಗೆ ಮರುಜೀವ ಕೊಟ್ಟರು. ತನಿಖೆ ಶುರುವಾಗಿ ಪರಶಿವನನ್ನು ಬಂಧಿಸಲಾಯಿತು. ‘ಪೊಲೀಸ್‌ ಶೈಲಿ’ಯಲ್ಲಿ ವಿಚಾರಿಸಿದಾಗ ಕೊಲೆಗಳ ವಿಷಯಗಳನ್ನು ಆತ ಬಿಚ್ಚಿಟ್ಟ.
***

ಪರಶಿವನ ಪರವಾಗಿ ವಕಾಲತ್ತು ವಹಿಸುವುದಾಗಿ ಅವನ ತಂದೆಗೆ ಭರವಸೆ ಕೊಟ್ಟಿದ್ದ ಕಾರಣ, ಕೋರ್ಟ್‌ನಲ್ಲಿ ಅವನ ಪರ ವಾದ ಮಂಡಿಸಲು ಸಿದ್ಧನಾದೆ. ಆಗ ನಡೆಯುತ್ತಿದ್ದುದು ಬನಶಂಕರಿ ವ್ಯಾಪ್ತಿಯ ಮಹಿಳೆಯ ಕೊಲೆ ಪ್ರಕರಣ ಮಾತ್ರ. ವಿಚಾರಣೆ ಶುರುವಾಯಿತು. ಪ್ರಮುಖ ಸಾಕ್ಷಿಗಳು ಎನಿಸಿಕೊಂಡಿದ್ದ ಮಾರ್ವಾಡಿಗಳೆಲ್ಲಾ ತಮಗೆ ಇದರ ಬಗ್ಗೆ ಗೊತ್ತೇ ಇಲ್ಲ ಎಂದು ಹೇಳಿಕೆ ನೀಡಿದರು. ಆರೋಪಿಯ ವಕೀಲನಾದ ನನಗೂ ಇದು ನೆರವಾಯಿತು. ಪೊಲೀಸರ ತನಿಖೆಯಲ್ಲಿ ಆದ ಲೋಪ ಸೇರಿದಂತೆ ಪರಶಿವನ ಪರವಾಗಿ ಇದ್ದ ಒಂದಿಷ್ಟು ಅಂಶಗಳನ್ನು ಕೋರ್ಟ್‌ ಮುಂದಿಟ್ಟೆ. ನನ್ನ ವಾದ ಗೆದ್ದಿತು. ಬನಶಂಕರಿ ಪ್ರಕರಣದಲ್ಲಿ ಪರಶಿವನ ಬಿಡುಗಡೆಯಾಯಿತು. ಅಲ್ಲಿಗೆ ವಕೀಲನಾಗಿ ನನ್ನ ಕೆಲಸ ಮುಗಿಯಿತು.

ಆದರೆ ಈ ಬಿಡುಗಡೆಯ ಖುಷಿ ತುಂಬಾ ದಿನ ಉಳಿಯಲಿಲ್ಲ. ಅದಾಗಲೇ ಚಿಕ್ಕಮಗಳೂರಿನ ವೈದ್ಯರ ಹೆಂಡತಿಯ ಪ್ರಕರಣವನ್ನು ಪೊಲೀಸರು ಭೇದಿಸಿದ್ದರು. ವೈದ್ಯರ ಮೇಲೆಯೇ ಅನುಮಾನಪಟ್ಟು ಅವರನ್ನು ಹಿಂದೆಯೇ ಬಂಧಿಸಿದ್ದ ಪೊಲೀಸರು ಅವರ ಮೇಲಿನ ಆರೋಪವನ್ನು ಹಿಂದಕ್ಕೆ ಪಡೆದು ಪರಶಿವ ಮತ್ತು ಜಾನ್ಸನ್‌ ಅವರನ್ನು ಬಂಧಿಸಿದರು.

ಈ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ಬೇರೊಬ್ಬ ವಕೀಲರು ವಾದಿಸಿದರು. ಅಲ್ಲಿ ಕೂಡ ಹಲವು ಸಾಕ್ಷಿಗಳು ಉಲ್ಟಾ ಹೊಡೆದರು. ಆರೋಪಿಗಳ ವಿರುದ್ಧವಾಗಿ ಇದ್ದುದು ತನಿಖಾಧಿಕಾರಿ ಸೇರಿದಂತೆ ಕೇವಲ ಐದು ಮಂದಿ ಸಾಕ್ಷಿಗಳ ಹೇಳಿಕೆ. ಆದರೆ ನ್ಯಾಯಾಧೀಶರು ಇವಿಷ್ಟೇ ಆಧಾರದ ಮೇಲೆ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದರು (ಉಳಿದ ಕೊಲೆ ಪ್ರಕರಣಗಳಲ್ಲಿ ಏನಾಯಿತೋ ನನಗೆ ತಿಳಿದಿಲ್ಲ). ಅಲ್ಲಿಗೆ ಅಪರಾಧಿಗಳಿಗೆ ಕೊನೆಗೂ ಜೈಲೇ ಗತಿಯಾಯಿತು.

ಕೋರ್ಟ್‌, ಪೊಲೀಸ್‌ ಠಾಣೆ ಎಂದೆಲ್ಲಾ ಅಲೆದು ಪರಶಿವ ಅವರ ತಂದೆ ಹಣ್ಣುಹಣ್ಣಾಗಿ ಹೋದರು. ಮಗನನ್ನು ಉಳಿಸಿಕೊಳ್ಳಲು ಇದ್ದ ಆಸ್ತಿಯನ್ನೆಲ್ಲಾ ಮಾರಿ ನಿರ್ಗತಿಕರಾದರು. ಆದರೂ ಮಗ ಜೈಲುಪಾಲಾದ. ಎಳೆ ವಯಸ್ಸಿನಲ್ಲಿ ಕೆಟ್ಟ ಹಾದಿ ಹಿಡಿದರೆ ಅಂತ್ಯವೂ ಅಷ್ಟೇ ಕ್ರೂರವಾಗಿರುತ್ತದೆ ಎಂಬುದಕ್ಕೆ ಈ ಪ್ರಕರಣವೂ ಸಾಕ್ಷಿಯಾಗಿದೆ.

ಕೆಲವರ ಹೆಸರು ಬದಲಾಯಿಸಲಾಗಿದೆ. ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT