ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆನೆಟಿಕ್ ಚಕ್ರವ್ಯೂಹದಲ್ಲಿ ಮುಗ್ಧ ಗ್ರಾಹಕ

Last Updated 14 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಔಷಧಗಳನ್ನು ನೇರವಾಗಿ ವೈದ್ಯರ ಸಹಾಯ – ಸಂಪರ್ಕವಿಲ್ಲದೆ ಆನ್‌ಲೈನ್ ಮೂಲಕ ಖರೀದಿಸುತ್ತಾರೆ. ಔಷಧಿ ಕುರಿತ ಮಾಹಿತಿಯನ್ನೂ ಅಂತರ್ಜಾಲದಲ್ಲೇ ಹುಡುಕಿಕೊಳ್ಳುತ್ತಾರೆ. ಮೊದಲಿನಿಂದಲೂ ನಮ್ಮಲ್ಲಿ ಸುಮಾರು ಶೇ. 30ರಷ್ಟು ಜನರು, ನೇರವಾಗಿ ತಾವೇ ಔಷಧಿ ಅಂಗಡಿಯಲ್ಲಿ ವೈದ್ಯರ ಚೀಟಿ ಇಲ್ಲದೇ ಖರೀದಿಸಿ ಉಪಯೋಗಿಸುತ್ತಿದ್ದಾರೆ. ಅಂಗಡಿಯವರು ಕೇಳಿದರೆ ಯಾವುದೋ ಒಂದು ವೈದ್ಯರ ಹೆಸರು ಹೇಳುವುದಿದೆ. ಇದರಿಂದ ಅನಾಹುತ ಅನೇಕ.

ವೈದ್ಯರ ಚೀಟಿ ಇಲ್ಲದೆ ಖರೀದಿಸುವ ಔಷಧಿಗಳಲ್ಲಿ ನೋವು ನಿವಾರಕಗಳು ಹಾಗೂ ಆ್ಯಂಟಿಬಯಾಟಿಕ್ಸ್‌ಗಳು ಹೆಚ್ಚಿನವು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿರಬೇಕು ಎನ್ನುವುದು ಸರಿ. ಆದರೆ ಅದು ಈ ರೀತಿಯಾಗಿ ಅಲ್ಲ. ಗೊತ್ತಿಲ್ಲದ ಕಾಯಿಲೆಗೆ ನಾವೇ ಔಷಧವನ್ನು ತೆಗೆದುಕೊಳ್ಳುವುದು ಸಮಂಜಸವಲ್ಲ.

ವೈದ್ಯರ ಮಾರ್ಗದರ್ಶನವಿಲ್ಲದೆ ನೇರವಾಗಿ ಗ್ರಾಹಕರಿಗೆ ಔಷಧ ಮಾರಾಟ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ವಿವಿಧ ರೋಗ ತಪಾಸಣಾ ಸೇವೆಗಳನ್ನು ಜಾಹೀರಾತುಗಳ ಮೂಲಕ ಜನರಿಗೆ ತಲುಪಿಸುವ ವ್ಯವಹಾರ ನಡೆಯುತ್ತಿದೆ. ಆರೋಗ್ಯದ ಹೆಸರಿನಲ್ಲಿ ಬೇಡದ ಸೇವೆ, ಅಡ್ಡ ಪರಿಣಾಮದ ಔಷಧಗಳು ಆನ್‌ಲೈನ್ ಮೂಲಕವೇ ಸರಬರಾಜಾಗುತ್ತಿವೆ.

ಇಂಟರ್ನೆಟ್‌ ಮೂಲಕ ನಾವು ಪಡೆಯುವ ಮಾಹಿತಿ ಬಹುತೇಕ ಸಂದರ್ಭದಲ್ಲಿ ಅಪೂರ್ಣವಾಗಿರುತ್ತದೆ ತಪ್ಪುದಾರಿಗೆ ಎಳೆಯುತ್ತದೆ. ಅಂತರ್ಜಾಲದಲ್ಲಿ ನಮ್ಮ ಹುಡುಕಾಟ ಸಾಮರ್ಥ್ಯಕ್ಕೆ ತಕ್ಕಂತೆ ಮಾಹಿತಿ ಸಿಗುತ್ತದೆ. It is full of pearls, pebble and dung. ಹೆಚ್ಚುತ್ತಿರುವ ‘ಇ–ಹೆಲ್ತ್‌’ ಗ್ರಾಹಕರ ಹಿನ್ನೆಲೆಯಲ್ಲಿ ಮಾರ್ಕ್ ಟ್ವೈನ್ ಮಾತನ್ನು ನೆನಪಿಸಿಕೊಳ್ಳಬಹುದು: Be careful about reading health books. You may die of a misprint.

ಇತ್ತೀಚೆಗೆ ಅಮೆರಿಕದಲ್ಲಿ ಬಯೋಟೆಕ್ ಕಂಪೆನಿಗಳು, ಗ್ರಾಹಕರಿಗೆ ನೇರವಾಗಿ ‘ಜೆನೆಟಿಕ್ ಟೆಸ್ಟ್’ ಸೇವೆಯನ್ನು ಪಡೆಯುವ ಮುಕ್ತ ಅವಕಾಶ ಒದಗಿಸಿವೆ. ನಮ್ಮಲ್ಲೂ ಕೂಡ ಈ ಸೇವೆ ಲಭ್ಯವಿದೆ. ಇದನ್ನು ‘ಕನ್ಸ್ಯೂಮರ್ ಜೆನೆಟಿಕ್ಸ್’ ಎನ್ನುತ್ತಾರೆ.

ಆನ್‌ಲೈನ್ ಮೂಲಕ ಕಂಪೆನಿಗಳನ್ನು ಸಂಪರ್ಕಿಸಿದರೆ ಅವರು ನಿಮಗೆ ಸ್ಯಾಂಪಲ್ ಕಳುಹಿಸಲು ಒಂದು ಕಿಟ್ ಕಳುಹಿಸುತ್ತಾರೆ. ಇದನ್ನು ‘ಸ್ಪಿಟ್ ಕಿಟ್’ ಎನ್ನುತ್ತಾರೆ. ನೀವು ಅದರಲ್ಲಿ ಉಗಿದು ನಿಮ್ಮ ಎಂಜಲು ಕಳುಹಿಸಿದರೆ ಸಾಕು. ಎಂಜಲನ್ನು ಉಪಯೋಗಿಸಿಕೊಂಡು ನಿಮ್ಮ ‘ಜೆನೆಟಿಕ್ ಜಾತಕ’ ಕಂಡುಹಿಡಿದು ಕಳುಹಿಸುತ್ತಾರೆ. ನಿಮ್ಮ ಹಿಂದಿನ ಪೀಳಿಗೆ, ವಂಶವೃಕ್ಷ ಮಾತ್ರವಲ್ಲದೆ ಮುಂದೆ ನಿಮಗೆ ಯಾವ ಯಾವ ಕಾಯಿಲೆ ಬರುವ ಸಾಧ್ಯತೆ ಇದೆ ಎನ್ನುವುದುನ್ನು ತಿಳಿಸುತ್ತಾರೆ. ನಿಮಗೆ ಮಧುಮೇಹ ಬರುವುದೇ ಅಥವಾ ಮರೆವು ಕಾಯಿಲೆ ಬರುವ ಸಂಭವವುಂಟೇ ಎಂದೆಲ್ಲಾ ಮಾಹಿತಿ ಕೊಡುತ್ತಾರೆ. ಮತ್ತು ಈ ಕಾಯಿಲೆಗಳು ಬರುವ ಸಾಧ್ಯತೆ ಎಷ್ಟು, ಶೇಕಡಾ ಇಪ್ಪತ್ತೋ ಎಪ್ಪತ್ತೋ ಎಂದೆಲ್ಲಾ ವಿವರಣೆ ಇರುತ್ತದೆ. ಈ ಸಂಭವನೀಯ ಕಾಯಿಲೆಗಳ ವಿರುದ್ಧವಾಗಿ ನೀವು ಜೀವನಶೈಲಿಯನ್ನು ಬದಲಿಸಿಕೊಳ್ಳುವ ಅವಕಾಶ ಇರುತ್ತದೆ ಎನ್ನುವುದಾಗಿದೆ.

ನಮ್ಮ ಗುಣಾಣುಗಳಲ್ಲಿ ಇರುವ ದೋಷಗಳನ್ನು ಸರಿದೂಗಿಸುವಂತಹ ಆಹಾರಕ್ರಮ ಅಳವಡಿಸಿಕೊಳ್ಳಬಹುದಾಗಿದೆ. ಹಾಗೆಯೇ ಗುಣಪಡಿಸಿಕೊಳ್ಳಬಹುದಾದ ಕಾಯಿಲೆಗಳಾದರೆ, ಅವುಗಳಿಗೆ ತಕ್ಕ ಕ್ರಮ ಕೈಗೊಳ್ಳಬಹುದಾಗಿದೆ. ಎಳೆಗೂಸಿನಲ್ಲಿ ಕಾಣಿಸುವ ಗುಣಾಣು ದೋಷವಾದಲ್ಲಿ ತಕ್ಕ ಕ್ರಮ ಕೈಗೊಳ್ಳಬಹುದಾಗಿದೆ. ಆದರೆ ಜೀನ್ಸ್‌ಗಳಿಗೂ ಮತ್ತು ಕಾಯಿಲೆಗಳಿಗೂ ನೇರ ಸಂಬಂಧವಿರುವುದು ವಿರಳ. ಈ ಜೀನ್ಸ್ ಸರಿಯಿಲ್ಲ, ಅಲ್ಲದೆ ಜೀನ್ಸ್‌ಗಳ ಗುಣ, ಅಭಿವ್ಯಕ್ತಿ ಕಲ್ಲಿನ ಮೇಲಿನ  ಕೆತ್ತನೆಯಲ್ಲ. ವಾತಾವರಣ, ಆಹಾರ, ಆಲೋಚನಾ ಕ್ರಮ ಅವುಗಳ ದೋಷ ಹತ್ತಿಕ್ಕಲು ಮತ್ತು ಹೊರಹೊಮ್ಮಲು ಆಧಾರವಾಗಿರುತ್ತವೆ. ಇದನ್ನು ಇತ್ತೀಚಿನ ದಿನಗಳಲ್ಲಿ ‘ಎಪಿಜೆನೆಟಿಕ್ಸ್’ ಎನ್ನುವ ವಿಷಯದಡಿ ಅಧ್ಯಯನ ಮಾಡಲಾಗುತ್ತಿದೆ. ಹಸು, ಕರು ಹಾಕಿ ಚೆನ್ನಾಗಿ ನೆಕ್ಕಿದರೆ ಕಾಯಿಲೆಯ ಸಾಧ್ಯತೆ ಕಮ್ಮಿ ಎನ್ನುತ್ತಾರೆ! ಕರುವಿಗೆ ಜೀವನ ಎದುರಿಸುವ ಧೈರ್ಯ–ಸ್ಥೈರ್ಯ ಹೆಚ್ಚಾಗುವುದರಿಂದ ಆರೋಗ್ಯಕ್ಕೆ ಆಡಿಪಾಯವಾಗುತ್ತದೆ.

ಒಂದು ಪಕ್ಷ ಶೇ. 20ರಷ್ಟು ‘ಮರೆವಿನ ಕಾಯಿಲೆ’ ಬರುವ ಸಾಧ್ಯತೆ ಇದೆ ಎಂದು ಜೀನ್ಸ್ ಟೆಸ್ಟ್ ತಿಳಿಸಿದರೆ, ಚಿಂತೆಯೇ ಮರೆವು ಕಾಯಿಲೆಗೆ ನಾಂದಿ ಹಾಡಲೂಬಹುದು. ಅಥವಾ ಔಷಧವಿಲ್ಲದ ಕಾಯಿಲೆಯ ಸಾಧ್ಯತೆ ಉಂಟು ಎಂದು ತಿಳಿದುಬಂದಲ್ಲಿ ಮಾಡುವುದಾದರೂ ಏನು ಎನ್ನುವ ಪ್ರಶ್ನೆ ಉಂಟಾಗುತ್ತದೆ. ಐವತ್ತನೇ ವಯಸ್ಸಿಗೆ ಬೊಕ್ಕತಲೆಯಾಗಬಹುದು ಎಂದು ತಿಳಿದರೆ ತಲೆ ಕೆಡಿಸಿಕೊಂಡು ಹತ್ತು ವರ್ಷ ಮೊದಲೇ ಬೊಕ್ಕತಲೆಯಾಗಬಹುದು. ಇದರಿಂದ patient-in-waiting ಪರಿಸ್ಥಿತಿ ಉಂಟಾಗಬಹುದು.

ನಮ್ಮ ಜೆನೆಟಿಕ್ ಮಾಹಿತಿ ವಿಮಾಕಂಪೆನಿಗೆ ಸೇರಿದರೆ ಆರೋಗ್ಯವಿಮೆಗೆ ಹೆಚ್ಚು ಹಣ ಕೇಳಬಹುದು. ನಮ್ಮ ಜೆನೆಟಿಕ್ ಮಾಹಿತಿಯನ್ನು ಅನೇಕರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಉಂಟಾಗಬಹುದು. ಜೆನೆಟಿಕ್ ಮಾಹಿತಿಯನ್ನು ಸರಿಯಾಗಿ ವಿಮರ್ಶಿಸಿ ಇವತ್ತಿಗೆ ಲಭ್ಯವಿರುವ ಜ್ಞಾನಕ್ಕೆ ತಕ್ಕಂತೆ ಆರೋಗ್ಯ ಸಲಹೆ ಕೊಡುವ ಜೆನೆಟಿಕ್ ಸಲಹೆಗಾರರು (genetic counselors) ಅತೀ ವಿರಳ. ಇಡೀ ಕರ್ನಾಟಕದಲ್ಲಿ ಹುಡುಕಿದರೆ ಇಂತಹ ವೈದ್ಯರು ಐದೋ ಆರೋ ಮಂದಿ ದೊರೆಯಬಹುದು.

ಜೆನೆಟಿಕ್ ವಿಜ್ಞಾನ ಇನ್ನೂ ಹೆಚ್ಚು ಸಂಶೋಧನೆ ನಡೆಯಬೇಕಾಗಿರುವ ಕ್ಷೇತ್ರ. ಇಂಥ ಸಂದರ್ಭದಲ್ಲೇ, ಜನರ ಆರೋಗ್ಯ ಕುತೂಹಲವನ್ನು ಕಂಪೆನಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈಗಾಗಲೇ ಮುಂದುವರಿದ ರಾಷ್ಟ್ರಗಳಲ್ಲಿ ರೋಗ ತಪಾಸಣೆ, ಅದರಲ್ಲೂ ರೇಡಿಯೇಶನ್ ಇರುವ ಸಿ.ಟಿ ಮತ್ತು ಎಮ್‌ಆರ್‌ಐ ಸ್ಕ್ಯಾನಿಂಗ್ ಅವಶ್ಯಕತೆಗೂ ಮೀರಿ ಮಾಡಿರುವುದರಿಂದ ಕೂಡ ಕ್ಯಾನ್ಸರ್ ರೋಗದ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ.

ಜೆನೆಟಿಕ್ ವಿಜ್ಞಾನ ‘ಈ ಶತಮಾನದ ವಿಜ್ಞಾನ’ ಎನ್ನುವುದರಲ್ಲಿ ಸಂದೇಹವಿಲ್ಲ. ಇದರ ವಾಣಿಜ್ಯೀಕರಣದ ಬಗ್ಗೆ ಎಚ್ಚರ ಅವಶ್ಯಕ. ಜೆನೆಟಿಕ್ ವಿಜ್ಞಾನವನ್ನು ಸರಳೀಕರಿಸಿ ಈ ರೀತಿ ಹೇಳುವುದುಂಟು: DNA makes RNA, RNA makes protein. ಅಂದರೆ ನಮ್ಮ ಅನುವಂಶಿಕ ‘ಡಿಎನ್‌ಎ’, ‘ಆರ್‌ಎನ್‌ಎ’ ಎಂಬ ಜೀವರಾಸಾಯನಿಕಗಳನ್ನು ಉತ್ಪಾದಿಸಿತ್ತದೆ. ಈ ‘ಆರ್‌ಎನ್‌ಎ’ ಪ್ರೊಟೀನ್‌ಗಳನ್ನು ಉತ್ಪಾದಿಸುತ್ತದೆ. ಆ ಪ್ರೊಟೀನ್‌ಗಳು ನಮ್ಮ ದೇಹದ ಜೈವಿಕ ವ್ಯವಹಾರ ನಡೆಸುತ್ತವೆ. ಇದೇ ವಾಣಿಜ್ಯೀಕರಣಗೊಂಡಾಗ ಬೇರೆಯೇ ಹಾದಿ ಹಿಡಿಯಬಹುದು ಎಂದು ವ್ಯಾಖ್ಯಾನಿಸುವುದು ಹೀಗೆ: DNA makes RNA, RNA makes protein, protein makes money!

ಜೆನೆಟಿಕ್ ಸೂಕ್ಷ ವಿಷಯ ಹಾಗಿರಲಿ – ನಮ್ಮ ದೇಹದಲ್ಲಿ ಇನ್ನೂ ಗುರುತಿಸದ ಅಂಗಾಂಗ (organ) ಇತ್ತೀಚೆಗೆ ಪತ್ತೆಯಾಗಿದೆ! ಇದು ಇತ್ತು, ಇದಕ್ಕೆ ತನ್ನದೇ ಕೆಲಸ ಇದೆ ಎಂದು ಗೊತ್ತಿರಲಿಲ್ಲ! ಇದನ್ನು ಬರಿಗಣ್ಣಲ್ಲಿ ಗುರುತಿಸಿದ್ದಾರೆ. ಇದನ್ನು ಮೆಸೆನ್ಟೆರಿ (mesentery) ಎಂದು ಕರೆಯಲಾಗಿದೆ. ಹಿಂದೇ ನಾವು ಐದೇ ಅಂಗಾಂಗಳನ್ನು ಗುರುತಿಸುತ್ತಿದ್ದೆವು. ಅವಗಳೆಂದರೆ: ಹೃದಯ, ಮೂತ್ರಪಿಂಡ, ಶ್ವಾಸಕೋಶ, ಮೆದುಳು ಮತ್ತು ಯಕೃತ್ತು. ಈಗ ನಮ್ಮ ಅಂಗಾಂಗಳ ಸಂಖೆ 79 ಎಂದು ‘ಲ್ಯಾನ್ಸೆಟ್’ ನಿಯತಕಾಲಿಕ ವರದಿಮಾಡಿದೆ! ಕಣ್ಣಿಗೆ ಕಾಣುವ ಈ ಅಂಗಾಂಗಳ ಪತ್ತೆಯೇ ಆಗದಿರುವಾಗ ನ್ಯಾನೋ ಸೂಕ್ಷ್ಮ ವಿಷಯಗಳ ಕುರಿತು ಸ್ಪಷ್ಟವಾಗಿ ಮಾತನಾಡಲು ಇನ್ನೂ ಕಾಯಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT