ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ತಲಾಖ್‌: ಚರ್ಚೆಗೆ ಮುಕ್ತವಾದಲ್ಲಿ ತಪ್ಪೇನಿದೆ ?

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸಮಾನ ನಾಗರಿಕ ಸಂಹಿತೆ ಎಂದೊಡನೆ ಮುಸ್ಲಿಮರು ಮಾತ್ರ ಹೃದಯ ಒಡೆದು ಹೋದಂತೆ ಯಾಕೆ ವರ್ತಿಸುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ. ಈ ದೇಶದಲ್ಲಿ ಮುಸ್ಲಿಮರು ಮಾತ್ರವಲ್ಲದೆ, ಕ್ರೈಸ್ತರು, ಯಹೂದ್ಯರು, ಪಾರ್ಸಿಗಳು, ಜೈನರು, ಸಿಖ್ಖರು, ಬೌದ್ಧರು ಎಂದು ಹಲವು ಧರ್ಮಾನುಯಾಯಿಗಳು ಅಲ್ಪಸಂಖ್ಯಾತರಾಗಿದ್ದಾರೆ. ಇವರೂ ಸಮಾನ ನಾಗರಿಕ ಸಂಹಿತೆ ಕುರಿತು ತಲೆ ಕೆಡಿಸಿಕೊಂಡಿಲ್ಲ. ಆದಿವಾಸಿಗಳಿಗೂ ಅವರದೇ ಆದ ನಿಯಮಗಳಿರುತ್ತವೆ. ಹೀಗಿರುವಾಗ ಮುಸ್ಲಿಮರು ಮಾತ್ರ ಇದರ ವಿರುದ್ಧ ಹೋರಾಡುವುದೇಕೆ ? ಕೆಲವು ವರ್ಷಗಳ ಹಿಂದೆ ಕ್ರೈಸ್ತರ ನಾಗರಿಕ ಸಂಹಿತೆಯಲ್ಲಿನ ಆಸ್ತಿಯ ಹಕ್ಕಿನ ನಿಯಮಗಳ ಕುರಿತು ಕೇರಳದ ಮೇರಿ ರಾಯ್‌ ಎಂಬಾಕೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇವರು ಖ್ಯಾತ ಲೇಖಕಿ ಅರುಂಧತಿ ರಾಯ್‌ ಅವರ ತಾಯಿಯಾಗಿದ್ದರು. ಸಮಾನ ನಾಗರಿಕ ಸಂಹಿತೆಯೊಂದು ಜಾರಿಯಾದರೆ ಇಂತಹ ತಾರತಮ್ಯಗಳು ಮರೆಯಾಗಿ ನಮ್ಮ ದೇಶದ ಸಂವಿಧಾನದ ಆಶಯದಂತೆ ಸರ್ವರೂ ಸಮಾನತೆಯಿಂದ, ಸಹಬಾಳ್ವೆ ನಡೆಸಬಹುದು ಅಲ್ಲವೇ.

ಮುಸ್ಲಿಂ ವೈವಾಹಿಕ ಸಂಬಂಧಗಳಲ್ಲಿ ಮಹಿಳೆಯರಿಗೆ ಏನೇನೂ ರಕ್ಷಣೆ ಇಲ್ಲದ ಕಾರಣ, ಈಗಿರುವ ತ್ರಿವಳಿ ತಲಾಖ್‌ ಪದ್ಧತಿಯನ್ನು ರದ್ದುಪಡಿಸಿ ಮಹಿಳೆಯರಿಗೆ ಭದ್ರತೆ ದೊರೆಯುವಂತೆ, ವಿಚ್ಛೇದನವು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದಂತಹ ನಿಯಮ ಜಾರಿ ಆಗಬೇಕು ಎಂದು ಮಹಿಳೆಯರು ಹೋರಾಡತೊಡಗಿದೊಡನೆ ‘ಅದು ನಮ್ಮ ಧಾರ್ಮಿಕ ನಿಯಮ, ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಮುಸ್ಲಿಂ ಪುರುಷರು ಕಿರುಚಾಡತೊಡಗುತ್ತಾರೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಹೋರಾಟದ ಮುಂಚೂಣಿಯಲ್ಲಿದ್ದು, ಇದಕ್ಕೆ ಕರ್ನಾಟಕದಲ್ಲಿರುವ ಎಲ್ಲ ಮುಸ್ಲಿಂ ಸಂಘಟನೆಗಳೂ ಬೆಂಬಲ ಸೂಚಿಸಿವೆ. ನನ್ನಂತಹ ಮಹಿಳೆಯರ ಬೆಂಬಲ ಈ ಮಂಡಳಿಗೆ ಖಂಡಿತಾ ದೊರೆಯಲಾರದು.

ಮುಸ್ಲಿಂ ವೈವಾಹಿಕ ನಿಯಮಗಳು ಧಾರ್ಮಿಕ ನಿಯಮ ಹೇಗಾಗುತ್ತದೆ? ಮುಸ್ಲಿಂ ವಿವಾಹದ ಮುಖ್ಯ ಕ್ರಮ ‘ನಿಕಾಹ್‌’ ಆಗಿದೆ. ಇದು ಹುಡುಗಿಯ ತಂದೆ ಮತ್ತು ಹುಡುಗನ ತಂದೆಯ ನಡುವೆ ನಡೆಯುವ ಒಂದು ಒಪ್ಪಂದ. ಅಲ್ಲಿಯೂ ಆ ಕ್ರಮ ನಡೆಯುವಾಗ ಆ ಹೆಣ್ಣಿನ ಉಪಸ್ಥಿತಿ ಇಲ್ಲ. ಇದಕ್ಕೆ ನಾಲ್ಕು ಜನ ಸಾಕ್ಷಿ ಗಳೂ ಇರುತ್ತಾರೆ. ಇಬ್ಬರು ಗಂಡಸರ ನಡುವೆ ನಡೆಯುವ ಈ ಒಪ್ಪಂದ ಹೇಗೆ ಧರ್ಮವಾಗುತ್ತದೆ? ಈ ಸಂದರ್ಭದಲ್ಲಿ ಹುಡುಗನ ಕಡೆಯವರು ಎಷ್ಟು ಮೆಹರ್‌ ನೀಡಬೇಕು ಎಂಬುದನ್ನು ಹುಡುಗಿಯ ಕಡೆಯವರು ನಿರ್ಧಾರ ಮಾಡುತ್ತಾರೆ. ಕೊಲ್ಲಿ ದೇಶಗಳಲ್ಲಿ ಮೆಹರ್‌ ಹಣ ಲಕ್ಷಗಟ್ಟಲೆ ಇದ್ದು, ಈ ದುಬಾರಿ ಹಣ ನೀಡಲಾಗದೆ ಅಲ್ಲಿನ ಪುರುಷರು ಆಫ್ರಿಕಾದ ಬಡ ದೇಶಗಳಿಗೆ ಹೋಗಿ ಮದುವೆಯಾಗುವ ಕಾರಣ, ಹೆಣ್ಣು ಮಕ್ಕಳ ಮದುವೆ ತಡವಾಗುತ್ತದೆ. ಕೆಲವು ಹೆಣ್ಣುಮಕ್ಕಳು  ವಯಸ್ಸಾದ ಪುರುಷನ ಎರಡನೆ, ಮೂರನೆ ಪತ್ನಿಯಾಗುವುದೂ ಇದೆ.

ಹನಫಿ ಸಮಾಜದಲ್ಲಿ ಮೆಹರ್‌ ಹಣ ಶಾಫಿ ಸಮಾಜಕ್ಕಿಂತ ಸ್ವಲ್ಪ ಜಾಸ್ತಿ ಇದೆಯಂತೆ. ಅದನ್ನು ನೀಡಲಾಗದೇ ಇದ್ದಾಗ, ‘ನನಗೆ ಮೆಹರ್‌ ನೀಡಲು ಸಾಧ್ಯವಿಲ್ಲ. ಕುರ್‌ಆನ್‌ ಗ್ರಂಥ ಮುಂದಿಟ್ಟುಕೊಂಡು, ನನಗೆ ಮೆಹರ್‌ ಮಾಫ್‌ ಮಾಡಬೇಕು’ ಎಂದು ಗಂಡ ಕೇಳಿದಾಗ ಹೆಂಡತಿ ಒಪ್ಪಿಗೆ ಸೂಚಿಸುತ್ತಾಳೆ. ಇದು ಕೂಡ ಧರ್ಮ.

ಪ್ರವಾದಿಗಳು ಹುಟ್ಟಿದ ಸಂದರ್ಭದಲ್ಲಿ ಅರಬ್‌ ದೇಶದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು. ಆರೇಳು ವರ್ಷ ಪ್ರಾಯದ ಹೆಣ್ಣುಮಕ್ಕಳನ್ನು ಅಲಂಕರಿಸಿ ಜೀವಂತ ಗೋರಿಯಲ್ಲಿಟ್ಟುಬಿಡುತ್ತಿದ್ದರು. ಹೆಣ್ಣೆಂದರೆ ತಮ್ಮ ಸುಖ ಸಂತೋಷಗಳಿಗಾಗಿ ದೇವರು ಸೃಷ್ಟಿಸಿದ ಜೀವಿ ಎಂದಷ್ಟೇ ಅವರು ತಿಳಿದುಕೊಂಡಿದ್ದರು. ಬೀದಿಯಲ್ಲಿ ಸುಂದರಿಯರಾದ ಮಹಿಳೆಯರು ಕಣ್ಣಿಗೆ ಬಿದ್ದರೆ  ಆಕ್ರಮಣ ಮಾಡಿ ಬಲಾತ್ಕಾರದಿಂದ ಎತ್ತಿಕೊಂಡು ಹೋಗುತ್ತಿದ್ದರು. ಆ ಮರುಭೂಮಿಯಲ್ಲಿ ಬಿರುಗಾಳಿ ಬೀಸಿದಾಗ ಈ ಜನರ ಕಣ್ಣು ಕಿವಿ ಮೂಗುಗಳಿಗೆ ಮರಳು ತುಂಬುವುದನ್ನು ತಡೆಯಲು ಸ್ತ್ರೀ ಪುರುಷರೆಲ್ಲರೂ ತಲೆಯ ಮೇಲೆ ಉದ್ದ  ಬಟ್ಟೆಗಳನ್ನು ಹಾಕಿಕೊಳ್ಳುವ ಪದ್ಧತಿ ಅಲ್ಲಿದೆ. ‘ಪುರುಷರ ಆಕ್ರಮಣವನ್ನು ತಡೆಯಲು ನೀವು ಹೊರಹೋಗುವಾಗ ಆದಷ್ಟು ಸೌಂದರ್ಯವನ್ನು ಮರೆಮಾಡಿಕೊಳ್ಳಿ. ನಿಮ್ಮ ತಲೆಯ ಮೇಲಿನ ಬಟ್ಟೆಯನ್ನು ಎದೆಯ ಮೇಲೆ ಎಳೆದುಕೊಳ್ಳಿ’ ಎಂದರು. ಮಹಿಳೆಯರ ತಲೆಕೂದಲು ಕಾಣಬಾರದೆಂದೋ, ಸ್ಕಾರ್ಫ್‌ ಧರಿಸಬೇಕು ಎಂದೋ ಅವರು ಹೇಳಿಲ್ಲ. ಹಜ್‌ ಯಾತ್ರೆಗೆ ಹೋಗುವಾಗ ಮುಖ ಮುಚ್ಚಿಕೊಳ್ಳಲೇ ಬಾರದು. ‘ಸೌಂದರ್ಯವನ್ನು ಮರೆಮಾಡಿಕೊಳ್ಳಿ’ ಎಂದು ಹೇಳಿದಲ್ಲಿ ಇನ್ನೊಂದು ವಾಕ್ಯವಿದೆ. ‘ಗುಲಾಮ ಸ್ತ್ರೀಯರಿಗೆ ಇಂತಹ ಮರೆಮಾಚುವಿಕೆಯೇನೂ ಬೇಕಾಗಿಲ್ಲ’. ಹಾಗಾದರೆ ಗುಲಾಮ ಸ್ತ್ರೀಯರನ್ನು ಪುರುಷರು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳಬಹುದು ಎಂಬುದು ಈ ವಾಕ್ಯದ ಅರ್ಥವೇ?

ನಮ್ಮ ಚರಿತ್ರೆ ಮತ್ತು ಪುರಾಣಗಳೆಲ್ಲವನ್ನೂ  ಇಂದು ತಿರುಚಲಾಗಿದೆ. ಧರ್ಮದ ವಿಷಯದಲ್ಲಿ ಕರ್ನಾಟಕದ  ಮುಸ್ಲಿಮರು ತಿಳಿದುಕೊಳ್ಳಬೇಕಾದ ಬಹಳ ವಿಷಯಗಳಿವೆ. ಪ್ರವಾದಿಗಳ ಜೀವಿತ ಕಾಲದಲ್ಲಿ ಕುರ್‌ಆನ್‌ ಸೂರಾ ಮತ್ತು ವಾಕ್ಯಗಳನ್ನು ಯಾರೂ ಬರೆದಿಡಲಿಲ್ಲ. ಪ್ರವಾದಿಗಳು ಹೇಳಿದ ಮಾತುಗಳು, ವಾಕ್ಯಗಳೆಲ್ಲವೂ ಜನರ ಬಾಯಿಯಿಂದ ಬಾಯಿಗೆ ಹರಡುತ್ತಿದ್ದವು. ಪ್ರವಾದಿಗಳ ಮರಣಾನಂತರ ಅವರ ಮೂರನೇ ಅನುಯಾಯಿ ಉಸ್ಮಾನ್‌ ಅವರ ಕಾಲದಲ್ಲಿ ಕುರ್‌ಆನ್‌ ವಾಕ್ಯಗಳು ಜನರಿಗೆ ಮರೆತುಹೋಗಬಹುದು ಎಂಬ ಕಾರಣಕ್ಕಾಗಿ, ಅದನ್ನು ಸಂಗ್ರಹಿಸಿ ಪವಿತ್ರ ಗ್ರಂಥ ನಿರ್ಮಾಣ ಮಾಡಿದರು. ಕುರ್‌ಆನ್‌ನಲ್ಲಿ ಆರುಸಾವಿರ ವಾಕ್ಯಗಳಿವೆ. ಹೆಚ್ಚೆಂದರೆ ಸುಮಾರು ಐನೂರು ವಾಕ್ಯಗಳಿಗಷ್ಟೇ ಸ್ಪಷ್ಟವಾದ, ಸಮನಾದ ಅರ್ಥವನ್ನು ಹೇಳಲು ವಿದ್ವಾಂಸರಿಗೆ ಸಾಧ್ಯವಾಗಿದೆ. ಇನ್ನುಳಿದ ವಾಕ್ಯಗಳಿಗೆ ಇಂದಿಗೂ ಸಮನಾದ ಅರ್ಥ ತಿಳಿದುಕೊಳ್ಳಲು ವಿದ್ವಾಂಸರಿಗೆ ಸಾಧ್ಯವಾಗಿಲ್ಲ. ಕುರ್‌ಆನ್‌ ಕಾವ್ಯ ಭಾಷೆಯಾಗಿದ್ದು, 1,400 ವರ್ಷಗಳ ಹಿಂದೆ ರಚಿಸಿದ್ದು, ಇಂದು ವಿದ್ವಾಂಸರಿಂದ ಅದನ್ನು ಸಮನಾಗಿ ಅರ್ಥೈಸಲು ಸಾಧ್ಯವಾಗಿಲ್ಲ ಮತ್ತು ಅದು ಸುಲಭದ ಕೆಲಸವೂ ಅಲ್ಲ.

ಮುಸ್ಲಿಂ ಕರ್ಮಶಾಸ್ತ್ರ(ಶರಿಯತ್‌) ನಿರ್ಮಾಣಗೊಂಡದ್ದು, ಮತ್ತೂ ಐವತ್ತು ವರ್ಷಗಳ ನಂತರ. ಕುರ್‌ಆನ್‌ ವಾಕ್ಯಗಳು, ಪ್ರವಾದಿಗಳ ನಡವಳಿಕೆ ಮತ್ತು ಅವರೊಡನೆ ನಡೆದ ಪ್ರಶ್ನೋತ್ತರಗಳನ್ನು ಸೇರಿಸಿ ಶರಿಯತ್‌ ರಚಿಸಲಾಯಿತು. ಪ್ರವಾದಿಗಳೊಡನೆ ನಡೆದ ಪ್ರಶ್ನೋತ್ತರವನ್ನು ಸೇರಿಸಿ ಕೆಲವರು ಹದೀಸ್‌ ಎಂಬ ಗ್ರಂಥವನ್ನು ರಚಿಸಿದ್ದರು. ರಷ್ಯಾದ ಬುಕಾರಾ ಎಂಬ ಊರಿನಿಂದ ಬುಕಾರಿ ಎಂಬುವವರು ಪ್ರವಾದಿಗಳ ಮರಣದ ನೂರ ಐವತ್ತು ವರ್ಷಗಳ ಬಳಿಕ ಮಕ್ಕಾ ಮತ್ತು ಮದೀನಾಕ್ಕೆ ಬಂದು, ಅಲ್ಲಿದ್ದವರೊಡನೆ ಪ್ರವಾದಿಗಳ ಕುರಿತು ಮತ್ತು ಅವರ ಬೋಧನೆಗಳ ಕುರಿತು ಕುತ್ತ ಬರೆದು ಹದೀಸ್‌ ಗ್ರಂಥ ರಚಿಸಿದ್ದರು. ಪ್ರವಾದಿಗಳ ಮರಣವಾಗಿ ನೂರ ಐವತ್ತು ವರ್ಷಗಳ ಬಳಿಕ ಪ್ರವಾದಿಗಳೊಡನೆ ಸಂವಾದ ನಡೆಸಿದವರು ಸಿಗುತ್ತಾರೆಯೇ? ಅವರ ಮೊಮ್ಮಕ್ಕಳೂ ದೊರೆಯುವ ಸಾಧ್ಯತೆ ಇಲ್ಲ. ಹೀಗಿರುವಾಗ ‘ಪ್ರವಾದಿಗಳು ಹೀಗಂದಿದ್ದರು’ ಎಂದು ತಮಗೆ ಬೇಕಾದಂತೆ ತಿಳಿಸಿರಬಹುದಲ್ಲವೇ. ಬುಕಾರಿ ರಚಿಸಿದ ಹದೀಸ್‌ ಹೆಚ್ಚು ವಿಶ್ವಸನೀಯವಾದುದು ಎಂಬುದು ವಿದ್ವಾಂಸರ ಅಭಿಪ್ರಾಯ. ಇಂತಹ ಹದೀಸ್‌ಗಳ ವಿಶ್ವಸನೀಯತೆಯಲ್ಲಿಯೇ ಸಂದೇಹ ಮೂಡುತ್ತದೆ. ಕೆಲವು ವ್ಯಾಪಾರಿಗಳು ತಮ್ಮ ಹಣ್ಣುಗಳ ಮಾರಾಟಕ್ಕಾಗಿ ‘ಈ ಹಣ್ಣನ್ನು ತಿಂದರೆ ನೀವು ನೇರವಾಗಿ ಸ್ವರ್ಗಕ್ಕೆ ಹೋಗಬಹುದು ಎಂದು ಪ್ರವಾದಿಗಳು ಹೇಳಿದ್ದಾರೆ !’ ಎಂದು ಹೇಳುತ್ತಿದ್ದರೆಂದು ಕೇರಳದ ವಿದ್ವಾಂಸರೊಬ್ಬರು ಬರೆದಿದ್ದಾರೆ.
ಪ್ರವಾದಿಗಳ ಕಾಲದಲ್ಲಿಯೇ ಪುರುಷರಂತೂ ‘ಪ್ರವಾದಿಗಳು ಮಹಿಳೆಯರಿಗೆ ಬಹಳಷ್ಟು ಸ್ವಾತಂತ್ರ್ಯವನ್ನು ಹಕ್ಕುಗಳನ್ನೂ ಕೊಡುತ್ತಿದ್ದಾರೆ’ ಎಂದು ಪ್ರವಾದಿಗಳ ಹಿಂದಿನಿಂದ ಗೊಣಗುತ್ತಿದ್ದರು ಎನ್ನಲಾಗುತ್ತಿದೆ. ಯಾವುದೇ ಧರ್ಮವು ಮಹಿಳೆಯರಿಗೆ ಗಂಡನ ಅಥವಾ ಹೆತ್ತವರ ಆಸ್ತಿಯಲ್ಲಿ ಪಾಲು ನೀಡದೇ ಇರುವಾಗ ಇಸ್ಲಾಂ ಧರ್ಮ ಹೆಣ್ಣು ಮಕ್ಕಳಿಗೆ ಮತ್ತು ಪತ್ನಿಯರಿಗೆ ಪಾಲು ನೀಡಬೇಕು ಎಂದಿದ್ದೇ ಈ ಗೊಣಗಾಟಕ್ಕೆ ಕಾರಣ ಆಗಿರಬಹುದು. ಅದರಿಂದಾಗಿಯೇ ಸುಲಭವಾದ ವಿವಾಹ ವಿಚ್ಛೇದನ, ಹೆಣ್ಣಿಗೆ ತೀರಾ ಅವಮಾನಕರವಾದ ಹಲಾಲಾ ಮದುವೆ ಮುಂತಾದ ನಿಯಮಗಳು ಪುರುಷರ ಈ ಗೊಣಗಾಟದ ಪರಿಣಾಮವೇ ಇರಬಹುದು. ‘ನಾನು ಹೆಣ್ಣಿನಿಂದ ಗಂಡನ್ನೂ ಗಂಡಿನಿಂದ ಹೆಣ್ಣನ್ನೂ ಸೃಷ್ಟಿಸಿದೆ’ ಎಂಬ ವಾಕ್ಯ ಕುರ್‌ಆನ್‌ನಲ್ಲಿದೆ. ಹೀಗೆ ಹೇಳುವ ಕುರ್‌ಆನ್‌ ಗುಲಾಮ ಸ್ತ್ರೀಯರಿಗೆ ಯಾವುದೇ ಹಕ್ಕಿಲ್ಲ ಎನ್ನುವುದು ಸಾಧ್ಯವಿಲ್ಲ. ಮನುಷ್ಯ ವ್ಯಾಪಾರವೇ ಹೇಗೆ ಧರ್ಮ ಸಮ್ಮತವಾಗುತ್ತದೆ ?

ಬಹುಪತ್ನಿತ್ವದ ಕುರಿತು ಪ್ರವಾದಿಗಳ ಬೋಧನೆ ಬೇರೆಯೇ ಇದೆ. ಪ್ರವಾದಿಗಳು ನ್ಯಾಯ ನೀತಿಗಳಿಗಾಗಿ ಬಹಳಷ್ಟು ಯುದ್ಧ ಮಾಡಿದ್ದರು. ಆಗ ಬಹಳಷ್ಟು ಪುರುಷರು ಮರಣ ಹೊಂದಿ, ಬಹಳ ಮಂದಿ ಅನಾಥ ಮಕ್ಕಳೂ, ವಿಧವೆಯರೂ ನಿರ್ಗತಿಕರಾಗುತ್ತಿದ್ದರು. ಆಗ ಪ್ರವಾದಿಗಳು ಅನಾಥ ಮಕ್ಕಳ ರಕ್ಷಣೆಗಾಗಿ, ಆ ಮಕ್ಕಳ ತಾಯಂದಿರ ಮದುವೆಯಾಗಿ ಎಂದು ಬದುಕಿರುವ ಗಂಡಸರೊಡನೆ ಹೇಳಿದ್ದರೇ ಹೊರತು, ಅರುವತ್ತು ವರ್ಷದ ಮುದುಕರು ಹದಿನಾರು ವರ್ಷ ಪ್ರಾಯದ ಹುಡುಗಿಯನ್ನು ಮದುವೆಯಾಗಿ ಎಂದು ಹೇಳಿಲ್ಲ. ಹೆಂಡತಿಯರನ್ನು ನಾಲ್ಕಕ್ಕೇ ಸೀಮಿತಗೊಳಿಸಿ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಲು ಹೇಳಿದ್ದರು. ಹಾಗೆ ಸಮಾನವಾಗಿ ನೋಡಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಓರ್ವ ಪತ್ನಿಯೊಡನೆಯೇ ಇರಬೇಕು ಎಂದೂ ಹೇಳಿದರು.

ಭಾರತದಲ್ಲಿ ಬ್ರಿಟಿಷರು ಶಿಕ್ಷಣಕ್ಕಾಗಿ ಶಾಲೆ ಕಾಲೇಜುಗಳನ್ನು ಪ್ರಾರಂಭಿಸಿದಾಗ ಮುಸ್ಲಿಮರು, ‘ಬಿಳಿಯರು ಕ್ರೈಸ್ತರಾಗಿದ್ದು, ಅವರು ಧರ್ಮ ಬೋಧನೆ ಮಾಡಿ ನಮ್ಮ ಮಕ್ಕಳನ್ನು ಮತಾಂತರಗೊಳಿಸಬಹುದು. ಆದ್ದರಿಂದ ಮದ್ರಸಾ ಶಿಕ್ಷಣವೇ ಸಾಕು’ ಎಂದು ಪ್ರಾರಂಭದಲ್ಲಿ ಹೇಳಿದ್ದರು. ಕಳೆದ ಶತಮಾನದ 30ರ ದಶಕದಲ್ಲಿ ಸರ್‌ ಸೈಯ್ಯದ್‌ ಅವರು ಆಧುನಿಕ ಶಿಕ್ಷಣವನ್ನು ಪಡಯುವಂತೆ ಒತ್ತಾಯಿಸಿದ್ದರಿಂದ ಅನೇಕ ಮಂದಿ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡರು.

ಪ್ರವಾದಿಗಳು ಶಿಕ್ಷಣ ವಿಷಯದಲ್ಲಿ ಒಳ್ಳೆಯ ಬೋಧನೆ ನೀಡಿದ್ದಾರೆ. ಶಿಕ್ಷಣಕ್ಕಾಗಿ ಗಂಡು ಮಕ್ಕಳನ್ನೂ, ಹೆಣ್ಣು ಮಕ್ಕಳನ್ನೂ ಚೀನಾದ ದೇಶಕ್ಕೆ ಕಳುಹಿಸಿ ಅವರಿಗೆ ಶಿಕ್ಷಣ ದೊರಕಿಸಿಕೊಡಬೇಕು. ನಾಳೆಯ ನಾಗರಿಕ ಪ್ರಜೆಗಳನ್ನು ಉತ್ತಮ ನಾಗರಿಕರಾಗಿ ಪಾಲಿಸಬೇಕಾದವಳು ತಾಯಿಯಾದ್ದರಿಂದ ಹೆಣ್ಣು ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕು ಎಂದಿದ್ದರು. ಜಗತ್ತಿನ ಉತ್ತಮ ಸಾಹಿತ್ಯ ಕೃತಿಗಳನ್ನು ಅರಬ್‌ ಭಾಷೆಗೆ ಅನುವಾದಿಸಬೇಕೆಂದು ಕರೆ ಕೊಟ್ಟಿದ್ದರು. ಕಾಳಿದಾಸನ ‘ಶಾಕುಂತಲಾ’ ಕೃತಿಯೂ ಅರಬ್‌ಗೆ ಅನುವಾದಗೊಂಡಿತ್ತು. ಆದರೆ 14ನೇ ಶತಮಾನದ ವೇಳೆಗೆ ಮತಾಂಧ ಧರ್ಮಗುರುಗಳು ಎಲ್ಲ ಅನುವಾದಿತ ಕೃತಿಗಳ ಓದನ್ನೂ ನಿಷೇಧಿಸಿ ಅವುಗಳನ್ನು ಸಾಗರದಾಳದಲ್ಲಿ ಮುಳುಗಿಸಿದರು!
ಕೊನೆಯದಾಗಿ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿರುವ ಒಂದು ನಿಯಮವನ್ನು ನಿಮ್ಮ ಮುಂದಿಟ್ಟು ಇದನ್ನು ಮುಗಿಸುತ್ತೇನೆ. ಮುಸ್ಲಿಂ ವ್ಯಕ್ತಿ ನಿಯಮದಂತೆ ಪುರುಷರು ನಾಲ್ಕು ಜನ ಪತ್ನಿಯರನ್ನು ಮಾತ್ರವಲ್ಲದೆ ಐದನೆಯವಳನ್ನೂ ಕಟ್ಟಿಕೊಳ್ಳಬಹುದು. ಆಗ ನಾಲ್ಕು ಜನರಲ್ಲಿ ಯಾರಾದರೂ ಒಬ್ಬಳಿಗೆ ತಲಾಖ್‌ ಕೊಡಬೇಕು. ಆತ ತಾನಾಗಿಯೇ ತಲಾಖ್‌ ನೀಡದೇ ಇದ್ದರೆ ಪ್ರಥಮ ಪತ್ನಿ ವಿಚ್ಛೇದಿತಳಾಗಿ ತಾನಾಗಿಯೇ ಹೊರಗೆ ಹೋಗಬೇಕಾಗುತ್ತದೆ. ಗಂಡನಿಗೆ ನಾಲ್ಕು ಜನ ಪತ್ನಿಯರಿದ್ದರೆ ಸಾಕು. ಇದು ವ್ಯಕ್ತಿ ನಿಯಮದಲ್ಲಿರುವ ವಾಕ್ಯವಾಗಿದೆ. ಇದು ಪ್ರವಾದಿಗಳು ರೂಪಿಸಿದ ನಿಯಮ ಆಗಿರಲಾರದು. 1937ರಲ್ಲಿ ಬ್ರಿಟಿಷರು ರೂಪಿಸಿದ ಮುಸ್ಲಿಂ ವ್ಯಕ್ತಿ ನಿಯಮದಲ್ಲಿ ರೂಪಿಸಲ್ಪಟ್ಟಿರಬಹುದು. ಇಂತಹ ನಿಯಮಗಳನ್ನು ಮುಸ್ಲಿಂ ಧರ್ಮ ಗುರುಗಳ ಸಲಹೆಯಿಂದಲೇ ರೂಪಿಸಿರಬಹುದು. ಮುಸ್ಲಿಂ ವ್ಯಕ್ತಿ ನಿಯಮ, ಮುಸ್ಲಿಮರ ಶೈಕ್ಷಣಿಕ ಪರಿಸ್ಥಿತಿ ಮುಂತಾದ ವಿಷಯಗಳ ಕುರಿತು ಯುವಜನರು ಚೆನ್ನಾಗಿ ತಿಳಿದುಕೊಳ್ಳಬೇಕು. ಧಾರ್ಮಿಕತೆ ಬೇಕು. ಆದರೆ ಮತಾಂಧರಾಗಿರಬಾರದು. ಕೆಲವು ನಿಯಮಗಳನ್ನು ಯಾವ ಸಂದರ್ಭದಲ್ಲಿ, ಯಾಕೆ ರೂಪಿಸಲಾಯಿತು ಎಂಬದನ್ನು ಕುರಿತು ಚರ್ಚಿಸುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT