ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಪರ ಅಂದರೆ ‘ಜನಪ್ರಿಯ’ ಅಲ್ಲ!

ಸಿದ್ದರಾಮಯ್ಯ ಸರ್ಕಾರಕ್ಕೆ 4 ವರ್ಷ
Last Updated 22 ಮೇ 2017, 20:18 IST
ಅಕ್ಷರ ಗಾತ್ರ

ಬಡವರ ಪರ ಚುನಾವಣಾ ಪ್ರಚಾರ ನಡೆಸಿ, ಅವರ ಪರ ಪ್ರಣಾಳಿಕೆ ರೂಪಿಸಿ ಸಿದ್ದರಾಮಯ್ಯ ಅವರು 2013ರಲ್ಲಿ ಅಧಿಕಾರಕ್ಕೆ ಬಂದರು. ರಾಜ್ಯದಲ್ಲಿ ಲಂಚಗುಳಿತನ ಹಾಗೂ ಭ್ರಷ್ಟಾಚಾರವನ್ನು ನಿಯಂತ್ರಿಸುವುದಾಗಿ, ಉತ್ತಮ ಆಡಳಿತ ನೀಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಭ್ರಷ್ಟಾಚಾರದ ಹಗರಣಗಳು ಹಿಂದಿನ ಬಿಜೆಪಿ ಸರ್ಕಾರದ ಪ್ರತಿಷ್ಠೆ ಹಾಳು ಮಾಡಿದ್ದರಿಂದ, ಈ ಮಾತುಗಳು ಮತದಾರರ ಕಿವಿಯಲ್ಲಿ ಅನುರಣಿಸಿದವು.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ‘ಸಮರ್ಥ, ದಿಟ್ಟ, ನಿರ್ಣಾಯಕ ಮತ್ತು ಭ್ರಷ್ಟನಾಗದ’ ನಾಯಕ ಎಂದು ಪ್ರಶಂಸಿಸಲಾಗಿತ್ತು. ಸಿದ್ದರಾಮಯ್ಯ ಅವರನ್ನು ಸಾಮಾಜಿಕ ನ್ಯಾಯದ ಪರವಿರುವ, ಶೋಷಣೆಗೆ ಗುರಿಯಾದವರನ್ನು ಉದ್ಧರಿಸುವ ವ್ಯಕ್ತಿ
ಯೆಂಬಂತೆಯೂ ಕಾಣಲಾಗಿತ್ತು. ಮುಖ್ಯಮಂತ್ರಿಯವರು ತಮ್ಮ ಸಾಧನಾ ಪತ್ರದಲ್ಲಿ ಶೇಕಡ 95ರಷ್ಟು ಅಂಕ ಪಡೆದಿದ್ದರೂ, ನಾಲ್ಕು ವರ್ಷಗಳ ಅವಧಿಯಲ್ಲಿ ಅವರ ಹೆಸರು ತುಸು ಮುಕ್ಕಾಗಿದೆ.

ದುರದೃಷ್ಟದ ಸಂಗತಿಯೆಂದರೆ ಈಗಿನ ಸರ್ಕಾರವು ‘ಬಡವರ ಪರ’ ಎನ್ನುವುದನ್ನು ‘ಜನಪ್ರಿಯ’ ಎನ್ನುವುದರ ಜೊತೆ ಸಮೀಕರಿಸುತ್ತಿದೆ. ಇದನ್ನು ಸರ್ಕಾರದ ಎಲ್ಲ ಪ್ರಮುಖ ನೀತಿ ನಿರ್ಧಾರಗಳಲ್ಲಿ ಗಮನಿಸಬಹುದು. ಇದಕ್ಕೆ ಉದಾಹರಣೆಯಾಗಿ ಬಜೆಟ್‌ ಅನ್ನು ಗಮನಿಸಬಹುದು. ರಾಜ್ಯದ ಬೆಳವಣಿಗೆಗೆ ಕಾರಣವಾಗುವ, ಬಡವರನ್ನು ಬಡತನದಿಂದ ಹೊರತರುವ ಸುಧಾರಣೆಗಳಿಗಿಂತ ಹೆಚ್ಚಾಗಿ ಜನಪ್ರಿಯ ಯೋಜನೆಗಳು, ಕೊಡುಗೆಗಳೇ ಇವೆ.

‘ಇಂದಿರಾ ಕ್ಯಾಂಟೀನ್‌’, ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಇನ್ನೊಂದು ಸುತ್ತಿನ ಯೋಜನೆ, ಅನ್ನ ಭಾಗ್ಯ ಯೋಜನೆಯ ವ್ಯಾಪ್ತಿ ವಿಸ್ತರಣೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌, ಕೊಳೆಗೇರಿ ನಿವಾಸಿಗಳಿಗೆ ಉಚಿತ ನೀರು, ಶಾಲಾ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ, ಐದು ಲಕ್ಷ ಬಡ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಕೊಡುವ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಒಂದೇ ಬಜೆಟ್‌ನಲ್ಲಿ ಪ್ರಕಟಿಸಿದರು. ಹಿಂದಿನ ವರ್ಷಗಳ ಬಜೆಟ್‌ನಲ್ಲಿ ಕೂಡ, ದೀರ್ಘಾವಧಿ ಬೆಳವಣಿಗೆಗೆ ಕಾರಣವಾಗುವ ನೀತಿಗಳಿಗಿಂತ ಹೆಚ್ಚಾಗಿ ಜನಪ್ರಿಯ ಕ್ರಮಗಳ ಬಗ್ಗೆಯೇ ಹೆಚ್ಚಿನ ಆದ್ಯತೆ ಇತ್ತು.

ಹಳೆಯ ಸಮಾಜವಾದಿ ಮಾದರಿಯ ಆಡಳಿತದ ಮೇಲೆ ಸಿದ್ದರಾಮಯ್ಯ ಅವರು ಹೊಂದಿರುವ ನಂಬಿಕೆಯು ಜನರನ್ನು ಮೆಚ್ಚಿಸಲು ವಿಫಲವಾಗಿದೆ. ಯೋಜನೆಗಳ ಫಲಾನುಭವಿಗಳು ಎನ್ನಲಾದವರು ಕೂಡ ಇದನ್ನು ಮೆಚ್ಚಿಕೊಂಡಿಲ್ಲ. ಅವರ ಹಲವು ನೀತಿಗಳು ಮಾರುಕಟ್ಟೆಯ ಸ್ವರೂಪವನ್ನು ತೀವ್ರ
ವಾಗಿ ಹಾಳು ಮಾಡಿ, ರಾಜ್ಯದ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತವೆ. ಇದಕ್ಕಿಂತಲೂ ಮುಖ್ಯವಾಗಿ, ಇವು ಬಡಜನರ ಆಕಾಂಕ್ಷೆಗಳನ್ನು ಈಡೇರಿಸುವು
ದಿಲ್ಲ. ರಾಜ್ಯ ಸರ್ಕಾರ ಘೋಷಿಸಿರುವ ಕೊಡುಗೆಗಳು ತೀರಾ ಅಲ್ಪಾವಧಿಯ ಕ್ರಮಗಳು, ಅವು ಬಡತನ ಹೋಗಲಾಡಿಸಲು ಏನನ್ನೂ ಮಾಡಲಾರವು ಎಂಬುದು ಈ ವೇಳೆಗೆ ಸ್ಪಷ್ಟವಾಗಬೇಕಿತ್ತು. ಹಲವು ಸಂದರ್ಭಗಳಲ್ಲಿ ಇವು ಮಾರುಕಟ್ಟೆಯನ್ನು  ಅಸ್ತವ್ಯಸ್ತಗೊಳಿಸಿ, ಆರ್ಥಿಕ ಬೆಳವಣಿಗೆ ಕುಂದಿಸಿ ದೀರ್ಘಾ
ವಧಿಯಲ್ಲಿ ಬಡವರಿಗೆ ಸಂಕಷ್ಟ ತಂದಿಡುತ್ತವೆ. ದುರ್ಬಲ ವರ್ಗಗಳ ಆಕಾಂಕ್ಷೆಗಳು ಬೃಹತ್ ಆಗಿರುವ ಸಂದರ್ಭ ಇದು. ಅವರನ್ನು ಮೇಲೆತ್ತಲು ಬೇಕಿರುವುದು ಉತ್ತಮ ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ವಿಪುಲ ಆರ್ಥಿಕ ಅವಕಾಶಗಳು.

ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಈ ಕಾಲದ ಅವಶ್ಯಕತೆಗಳಿಗೆ ಅನುಗುಣವಾಗಿರುವಂತೆ ಕಾಣುತ್ತಿಲ್ಲ. ಕೇಂದ್ರ, ಹಲವು ರಾಜ್ಯ ಸರ್ಕಾರಗಳು ‘ಚಿಕ್ಕ ಸರ್ಕಾರ’ದ ಮಂತ್ರ ಹೇಳುತ್ತಿರುವ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರು ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸಾಗಿದ್ದಾರೆ. ಇದು ವಾಣಿಜ್ಯ ವಹಿವಾಟುಗಳಿಗೆ, ಉದ್ಯೋಗ ಸೃಷ್ಟಿಯ ಸಾಧ್ಯತೆಗಳಿಗೆ ಧಕ್ಕೆ ತಂದಿದೆ. ರಾಜ್ಯದಲ್ಲಿ ಕ್ಯಾಬ್‌ ಸೇವೆಗಳನ್ನು ನಿಯಂತ್ರಿಸಲು ತಂದ ನಿಯಮ ಪ್ರತಿಗಾಮಿ ನಡೆ. ಎರಡನೆಯ ಹಾಗೂ ಮೂರನೆಯ ಹಂತದ ನಗರಗಳಿಂದ ಬೆಂಗಳೂರಿಗೆ ವಲಸೆ ಬರುವ ಲಕ್ಷಾಂತರ ಯುವಕರಿಗೆ ಓಲಾ ಮತ್ತು ಉಬರ್‌ ಕಂಪೆನಿಗಳು ಉದ್ಯೋಗ ನೀಡುತ್ತಿರುವ ಹೊತ್ತಿನಲ್ಲಿ, ಆಟೊ ರಿಕ್ಷಾಗಳು ಹಾಗೂ ಇತರ ಟ್ಯಾಕ್ಸಿಗಳನ್ನು ನಿಯಂತ್ರಿಸಿದ ಮಾದರಿಯಲ್ಲಿ, ಸರ್ಕಾರವು ಇವುಗಳ ವಹಿವಾಟಿಗೆ ಲಗಾಮು ಹಾಕಲು ಯತ್ನಿಸಿದ್ದು ಆಶ್ಚರ್ಯಕರ.

ಸರ್ಕಾರದಿಂದ ವಿನಾಯಿತಿಗಳನ್ನು ಪಡೆಯುವ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇಕಡ 100ರಷ್ಟು ಮೀಸಲಾತಿ ಕಲ್ಪಿಸುವ ಪ್ರಸ್ತಾವ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ಇರುವ ಮೀಸಲಾತಿಯ ಪ್ರಮಾಣವನ್ನು ಶೇಕಡ 70ಕ್ಕೆ ಹೆಚ್ಚಿಸುವ ಪ್ರಸ್ತಾವ ಕೂಡ ಈ ಸರ್ಕಾರದ ಪ್ರತಿಗಾಮಿ ನಡೆಗಳು. ಬೆಂಗಳೂರು ಎಂಬ ನಗರ ಹೊಸತನದ ಹುಡುಕಾಟಗಳ ಕೇಂದ್ರ. ಭಾರಿ ಬದಲಾವಣೆ ತರುವ ಆಲೋಚನೆಗಳನ್ನು ನವೋದ್ಯಮಗಳು ಹೊತ್ತು ತಂದಿವೆ. ಇವುಗಳನ್ನು ಅತಿಯಾಗಿ ನಿಯಂತ್ರಿಸುವುದರಿಂದ ಉದ್ಯಮಿಗಳಿಗೆ ಹಾಗೂ ಅರ್ಥ ವ್ಯವಸ್ಥೆಗೆ ತೊಂದರೆ ಆಗುತ್ತದೆ. ಅರ್ಥ ವ್ಯವಸ್ಥೆ ಬೆಳೆಯಬೇಕು ಎಂದಾದರೆ ಕರ್ನಾಟಕದಲ್ಲಿ ವಾಣಿಜ್ಯ ವಹಿವಾಟು ನಡೆಸುವುದು ಸುಲಲಿತ ಎಂಬಂತಾಗಬೇಕು. ರಾಜ್ಯಗಳ ತಂಡ ಸುಧಾರಣೆಯ ಆಧಾರದಲ್ಲಿ ‘ಭಾರತ
ದಲ್ಲೇ ತಯಾರಿಸಿ’ ಅಭಿಯಾನದ ವೆಬ್‌ಸೈಟ್‌ನಲ್ಲಿ ರಾಜ್ಯಗಳಿಗೆ ರ್‌್ಯಾಂಕ್‌ ನೀಡಲಾಗಿದೆ. ಇದರಲ್ಲಿ ಕರ್ನಾಟಕದ ಸ್ಥಾನ 13ನೆಯದ್ದು. ಕರ್ನಾಟಕವು ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ ರಾಜ್ಯಗಳಿಗಿಂತಲೂ ಹಿಂದಿದೆ.

ಇತರ ಕೆಲವು ರಾಚನಿಕ ಸುಧಾರಣೆಗಳು ಇನ್ನಷ್ಟೇ ಆಗಬೇಕಿವೆ. ಸರ್ಕಾರಗಳು ಇಂಧನ ಇಲಾಖೆಯ ಗೊಡವೆಗೇ ಹೋಗದ ಕಾರಣ ಬೆಂಗಳೂರಿನಲ್ಲಿ ವಿದ್ಯುತ್ ಕೊರತೆ ಬೃಹತ್ಪ್ರಮಾಣದಲ್ಲಿದೆ. ನೀರಿನ ಕೊರತೆಯು ಬೆಂಗಳೂರಿನವರ ಪಾಲಿಗೆ, ಅದರಲ್ಲೂ ಪ್ರಮುಖವಾಗಿ ನಗರದ ಹೊರವಲಯದಲ್ಲಿ ಇರುವವರಿಗೆ, ಮುಂದಿನ ದಿನಗಳಲ್ಲಿ ಸಮಸ್ಯೆ ತಂದೊಡ್ಡಲಿದೆ. ‘ನಮ್ಮ ಮೆಟ್ರೊ’ ರೈಲು ನಗರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಲು ಇನ್ನಷ್ಟು ವರ್ಷಗಳು ಬೇಕಾಗಬಹುದು. ಆ ಹೊತ್ತಿಗೆ ‘ನಮ್ಮ ಮೆಟ್ರೊ’ ಎಂಬುದು ‘ಬಹಳ ತಡವಾಗಿ ಸಿಕ್ಕ ತೀರಾ ಸಣ್ಣ ನೆರವು’ ಎಂಬಂತೆ ಆಗಬಹುದು.

ವಿಮಾನ ನಿಲ್ದಾಣಕ್ಕೆ ಇಂದಿಗೂ ರೈಲು ಸಂಪರ್ಕ ಇಲ್ಲ. ಇದಕ್ಕೆ ಸರ್ಕಾರ ರೂಪಿಸಿದ ಪರ್ಯಾಯ ಯೋಜನೆ ಉಕ್ಕಿನ ಸೇತುವೆ. ಆದರೆ ಇದನ್ನು ಸಾರ್ವಜನಿಕರು ಭಾರಿ ಪ್ರಮಾಣದಲ್ಲಿ ವಿರೋಧಿಸಿದರು. ಬೆಂಗಳೂರಿನ ತ್ಯಾಜ್ಯ ಮತ್ತು ಘನತ್ಯಾಜ್ಯ ವಿಲೇವಾರಿಗೆ ದೂರಗಾಮಿ ಪರಿಹಾರೋಪಾಯಗಳನ್ನು ಇನ್ನೂ ಕಂಡುಕೊಂಡಿಲ್ಲ. ಬೆಂಗಳೂರಿನ ಮೂಲ ಸೌಕರ್ಯ ಹಾಗೂ ಸಂಚಾರ ದಟ್ಟಣೆಯ ಸಮಸ್ಯೆಗಳು ನಗರದ ಆರ್ಥಿಕ ಬೆಳವಣಿಗೆಯ ಹಳಿ ತಪ್ಪಿಸುವುದು ಮುಂದುವರಿದಿದೆ.

ದೇಶದಲ್ಲೇ ಅತಿಹೆಚ್ಚು ಒಣಭೂಮಿಯನ್ನು ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿರುವ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ಕಳವಳಕ್ಕೆ ಕಾರಣವಾಗುವ ಇನ್ನೊಂದು ಸಂಗತಿ. ಆಯ್ದ ಕೆಲವರಿಗೆ ಉಚಿತವಾಗಿ ನೀರು ಪೂರೈಸುವುದಕ್ಕಿಂತಲೂ, ನೈಜವಾದ ನೀರಾವರಿ ಯೋಜನೆಗಳು ಬರಬೇಕು. ಈ ಹಿಂದಿನ ಹಲವು ಸರ್ಕಾರಗಳ ಅವಧಿಯಲ್ಲಿ ಆದಂತೆಯೇ, ಈ ಸರ್ಕಾರದಲ್ಲಿ ಕೂಡ ಉತ್ತರ ಕರ್ನಾಟಕಕ್ಕೆ ಸಿಕ್ಕ ಆದ್ಯತೆ ತೀರಾ ಕಡಿಮೆ, ಆಗಿರುವ ಹೂಡಿಕೆಗಳ ಮೊತ್ತವೂ ಕಡಿಮೆ. ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದ ಮೂಲಸೌಕರ್ಯ ಯೋಜನೆಗಳು ಈ ಭಾಗಕ್ಕೆ ಸಿಕ್ಕಿಲ್ಲ. ಕಲಬುರ್ಗಿ, ವಿಜಯಪುರ ಮತ್ತು ಬೆಳಗಾವಿ ನಗರಗಳಿಗೆ ಅಪಾರ ಸಾಮರ್ಥ್ಯವಿದೆ. ಆದರೆ ಅದನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಆಗಿಲ್ಲ.

ಹಾಗಂತ, ಈ ಸರ್ಕಾರದ ಅವಧಿಯಲ್ಲಿ ಒಳ್ಳೆಯದು ಆಗಿಯೇ ಇಲ್ಲವೆಂದಲ್ಲ. ಕೆಲವು ಉತ್ತೇಜನಕಾರಿ, ಧನಾತ್ಮಕ ಕ್ರಮಗಳನ್ನು ಈ ಸರ್ಕಾರ ಕೈಗೊಂಡಿದೆ. ಆದರೆ ಇವುಗಳ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಅದರ ಬಗ್ಗೆ ಹೊಂದಿದ್ದ ನಿರೀಕ್ಷೆಗಳಿಗೆ ಹೋಲಿಸಿದರೆ, ಇವು ಕಡಿಮೆಯಾದವು ಎಂದೂ ಹೇಳಬಹುದು. ಸಿದ್ದರಾಮಯ್ಯ ಅವರು ಸ್ಥಿರ ಸರ್ಕಾರ ನೀಡಿದ್ದಾರೆ, ಒಂದೆರಡು ಚಿಕ್ಕ ಘಟನೆಗಳನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ.

ಕೃಷಿ ಉತ್ಪನ್ನಗಳ ಮಾರುಕಟ್ಟೆ ಸುಧಾರಣೆಯಲ್ಲಿ ಕರ್ನಾಟಕವು ನಿಜಕ್ಕೂ ಮುಂಚೂಣಿಯಲ್ಲಿ ನಿಂತಿದೆ. ನಿಯಮಗಳ ಸುಧಾರಣೆ, ಮಾರುಕಟ್ಟೆ ಕ್ಷಮತೆ ಹೆಚ್ಚಿಸುವುದು, ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತಿಗೆ ಉತ್ತೇಜನ, ಕೃಷಿ ಮತ್ತು ತೋಟಗಾರಿಕೆ ಮೂಲಸೌಕರ್ಯ ಒದಗಿಸುವುದಕ್ಕೆ ಗಮನ ನೀಡಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಆಡಳಿತಕ್ಕೆ ಅತ್ಯುತ್ತಮವಾದ ವ್ಯವಸ್ಥೆಯೊಂದನ್ನು ರೂಪಿಸಿ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕವು ಮಾದರಿಯಾಗಿ ನಿಂತಿದೆ. ರಾಜ್ಯದ ವಿವಿಧ ಕೃಷಿ ಮಾರುಕಟ್ಟೆಗಳನ್ನು ಒಂದೇ ಸೂರಿನಡಿ ತರಲು ಸರ್ಕಾರವು ರಾಷ್ಟ್ರೀಯ ಇ–ಮಾರುಕಟ್ಟೆ ಸೇವಾ ನಿಯಮಿತ (ಆರ್‌ಇಎಂಎಸ್‌) ಹೆಸರಿನಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ.

ಒಂದೇ ಪರವಾನಗಿ ವ್ಯವಸ್ಥೆ, ಹೆಚ್ಚಿನ ಸ್ಪರ್ಧಾತ್ಮಕತೆ, ಸುಲಭ ಮತ್ತು ತ್ವರಿತ ವ್ಯಾಪಾರ, ಉತ್ತಮ ಬೆಲೆ ಕಂಡುಕೊಳ್ಳುವ ಅವಕಾಶ ಮುಂತಾದವುಗಳು ಈ ವ್ಯವಸ್ಥೆಯ ಪ್ರಮುಖ ಪ್ರಯೋಜನಗಳು. ರಾಗಿಯ ಬಳಕೆಗೆ ಉತ್ತೇಜನ ನೀಡುವಲ್ಲಿ ಸರ್ಕಾರ ಉತ್ತಮ ಕೆಲಸ ಮಾಡಿದೆ. ಸಚಿವ ಕೃಷ್ಣ ಬೈರೇಗೌಡ ಅವರು ರಾಗಿ ಬಳಕೆ ಉತ್ತೇಜನಕ್ಕೆ ಆರಂಭಿಸಿದ ಅಭಿಯಾನವು ಈ ಧಾನ್ಯದ ಬಳಕೆಯನ್ನು ಈ ಕಾಲದ ಫ್ಯಾಷನ್ ಆಗಿ  ಪರಿವರ್ತಿಸಿದೆ. ಪಾರಂಪರಿಕವಾಗಿ ರಾಗಿ ಬೆಳೆಯುತ್ತಿರುವ ರೈತರಿಗೆ ಇದರಿಂದ ಸಹಾಯ ಆಗಿದೆ.

ಜೈವಿಕ ತಂತಜ್ಞಾನ ಕ್ಷೇತ್ರಕ್ಕೆ ಕೂಡ ಸರ್ಕಾರ ಆದ್ಯತೆ ನೀಡಿದೆ. ಈ ಕ್ಷೇತ್ರದ 26 ನವೋದ್ಯಮಗಳಿಗೆ ಒಟ್ಟು ₹ 10.7 ಕೋಟಿ ಅನುದಾನವನ್ನು ಸರ್ಕಾರ ಘೋಷಿಸಿದೆ. ನಾಗರಿಕರಿಗೆ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಬೆಂಗಳೂರು ವನ್ ಮತ್ತು ಕರ್ನಾಟಕ ವನ್ ಕೇಂದ್ರಗಳನ್ನು ಜನ ಇಷ್ಟ
ಪಟ್ಟಿದ್ದಾರೆ. ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಇರುವ ಕಾರಣ ಪ್ರಮುಖ ಸುಧಾರಣೆಗಳನ್ನು ಕಾಣುವ ಸಾಧ್ಯತೆ ಕಡಿಮೆ. ಬರುವ ವರ್ಷದಲ್ಲಿ ಇನ್ನಷ್ಟು ಜನಪ್ರಿಯ ಯೋಜನೆಗಳ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ. ಈಗ ಹಿಂದಿರುಗಿ ನೋಡಿದರೆ, ಆರಂಭದ ದಿನಗಳಲ್ಲಿ ಕೆಲವು ಪ್ರಮುಖ, ದಿಟ್ಟ ಸುಧಾರಣೆಗಳನ್ನು ತರುವ ಅವಕಾಶವನ್ನು ಈ ಸರ್ಕಾರ ಕಳೆದುಕೊಂಡಿತು ಅನಿಸುತ್ತಿದೆ. ಆಗ ಈ ಸುಧಾರಣೆಗಳನ್ನು ಜಾರಿಗೆ ತಂದಿದ್ದರೆ, ಈ ವೇಳೆಗೆ ಅವುಗಳ ಫಲ ಜನರಿಗೆ ದೊರೆಯಲು ಆರಂಭ ವಾಗುತ್ತಿತ್ತು.

(ಲೇಖಕ ಬೆಂಗಳೂರಿನ ತಕ್ಷಶಿಲಾ ಪ್ರತಿಷ್ಠಾನದಲ್ಲಿ ಫೆಲೊ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT