ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನತ್ತ ನೂಕುವ ‘ಬ್ಲೂವೇಲ್‌’

ಭಾರತಕ್ಕೂ ಬಂದಿದೆ’ ಇರಲಿ ಎಚ್ಚರ
Last Updated 8 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಬ್ಲೂ ವೇಲ್’ – ಸದ್ಯ ಭಾರತದಲ್ಲೂ ಭೀತಿ ಹುಟ್ಟಿಸಿರುವ ಅನ್‌ಲೈನ್‌ ಭೂತ ಇದು. ಸ್ಮಾರ್ಟ್‌ ಫೋನ್‌, ಟ್ಯಾಬ್‌,  ಲ್ಯಾಪ್‌ಟಾಪ್‌ ಮುಂತಾದ ಗ್ಯಾಜೆಟ್‌ಗಳ ಮೂಲಕ ಅಂತರ್ಜಾಲ ಸಂಪರ್ಕ ಮಕ್ಕಳ ಕೈಗೂ ಬಂದಿರುವ ಈ ಕಾಲದಲ್ಲಿ ಇಂಥದ್ದೊಂದು ಆತಂಕದ ಭೂತ ಈಗ ಹಲವರ ಮನೆ ಬಾಗಿಲಿಗೇ ಬಂದು ಕುಂತಂತಾಗಿದೆ. ಅದರಲ್ಲೂ ಕಳೆದ ವಾರ ಮುಂಬೈನ ಬಾಲಕನೊಬ್ಬ ಈ ‘ಕೆಟ್ಟಾಟ’ದ ಬಲೆಗೆ ಸಿಲುಕಿ ಪ್ರಾಣ ಕಳೆದುಕೊಂಡ ವರದಿ ಬಂದ ಮೇಲಂತೂ ಈ ಆತಂಕ ಇನ್ನೂ ಹೆಚ್ಚಾಗಿದೆ.

ಆನ್‌ಲೈನ್‌ ಆಟಗಳ ಹುಚ್ಚು ಹಿಡಿಸಿಕೊಂಡಿರುವ, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮುಂತಾದ ಸಾಮಾಜಿಕ ಜಾಲಗಳ ಮೋಹಕ್ಕೆ ಸಿಲುಕಿರುವ ಮಕ್ಕಳ ಹಾಗೂ ಹದಿಹರೆಯದವರ ಬಗ್ಗೆ ಈಗ ಪೋಷಕರು ಹೆಚ್ಚು ಗಮನ ಕೊಡಲೇಬೇಕಾಗಿದೆ. ಏಕೆಂದರೆ ಬ್ಲೂವೇಲ್‌ನಂಥ ಆನ್‌ ಲೈನ್‌ ಆಟಗಳಿಗೆ ಮಾನಸಿಕವಾಗಿ ದುರ್ಬಲವಾಗಿರುವ ಯಾರು ಬೇಕಾದರೂ ಬಲಿಯಾಗಬಹುದು.

ಬ್ಲೂ ವೇಲ್‌ ಎಂಬ ಹುಚ್ಚಾಟ ಹುಟ್ಟಿಕೊಂಡಿದ್ದು ನಾಲ್ಕು ವರ್ಷಗಳ ಹಿಂದೆ ರಷ್ಯಾದಲ್ಲಿ. ಅಲ್ಲಿಂದ ಇಲ್ಲಿಯವರೆಗೆ ರಷ್ಯಾದಲ್ಲಿ ಸುಮಾರು 130 ಮಂದಿ ಈ  ಮಾರಣಾಂತಿಕ ಆಟದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಫಿಲಿಪ್‌ ಬಡೈಕಿನ್‌ ಎಂಬಾತ ಈ ಆಟ ಹುಟ್ಟುಹಾಕಿದ್ದಾಗಿ ಹೇಳಿಕೊಂಡಿದ್ದಾನೆ. ಈ ಕೆಟ್ಟಾಟದ ಹಿಂದಿನ ಮಾಸ್ಟರ್‌ ಮೈಂಡ್‌ ಎಂದು ಹೇಳಲಾಗಿರುವ ಇಲ್ಯಾ ಸಿಡೊರೋವ್‌ ಎಂಬಾತನನ್ನು ಮಾಸ್ಕೊದಲ್ಲಿ ಬಂಧಿಸಲಾಗಿದೆ.

ಆನ್‌ಲೈನ್ ಆಟವೆಂದು ಹೇಳಲಾಗುವ ಈ ಬ್ಲೂ ವೇಲ್‌ ನಿಜಕ್ಕೂ ಒಂದು ಆಟವಲ್ಲ. ಇದಕ್ಕಾಗಿ ಒಂದು ನಿರ್ದಿಷ್ಟ ವೆಬ್‌ ಸೈಟ್‌ ಆಗಲೀ, ಇದರ ಆ್ಯಪ್‌ ಆಗಲೀ ಇಲ್ಲ. ಇದು ಆನ್‌ಲೈನ್‌ ನಲ್ಲಿ ಹೇಗೆ ಬೇಕಾದರೂ ಗಾಳ ಹಾಕಬಹುದು. ಈ ಗಾಳಕ್ಕೆ ಸಿಲುಕುವುದು ಮಾನಸಿಕವಾಗಿ ದುರ್ಬಲರಾಗಿರುವವರು, ಖಿನ್ನತೆಗೆ ಒಳಗಾಗಿರುವವರು ಹಾಗೂ ಬದುಕಿನಲ್ಲಿ ಸತತ ಸೋಲು ಕಂಡವರು ಎಂಬುದೇ ದುರಂತ. ಅಂತರ್ಜಾಲ ಬಳಸುತ್ತಿರುವ ವೇಳೆ ಪಾಪ್‌ ಅಪ್‌ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್‌ ಮೂಲಕ ಈ ಗಾಳ ಬೀಳಬಹುದು. ಒಮ್ಮೆ ಈ ಗಾಳಕ್ಕೆ ಸಿಲುಕಿದರೆ ಅದರಿಂದ ಬಿಡಿಸಿಕೊಳ್ಳುವುದು ಕಷ್ಟ.

ಬ್ಲೂ ವೇಲ್‌ ಎಂಬ ಈ ಕೆಟ್ಟಾಟದ ಅವಧಿ 50 ದಿನ ಮಾತ್ರ. ಈ ಗಾಳಕ್ಕೆ ಸಿಲುಕಿದವರ ಆಯಸ್ಸೂ 50 ದಿನವೇ. ಕೆಟ್ಟಾಟಕ್ಕೆ ಸೈನ್‌ ಇನ್ ಆದ 50 ದಿನಗಳ ಅವಧಿಯಲ್ಲಿ ಹಲವು ಬಗೆಯ ಟಾಸ್ಕ್‌ (ಸವಾಲಿನ ಕೆಲಸ) ನೀಡಲಾಗುತ್ತದೆ. ಮೊದಮೊದಲು ಒಂಟಿಯಾಗಿ ದೆವ್ವದ ಸಿನಿಮಾ ನೋಡುವಂಥ ಟಾಸ್ಕ್‌. ಬಳಿಕ ದೇಹದ ಮೇಲೆ ಚೂಪಾದ ವಸ್ತುವಿನಿಂದ ಕುಯ್ದುಕೊಳ್ಳುವಂಥ ಟಾಸ್ಕ್‌. ಈ ಟಾಸ್ಕ್‌ಗಳನ್ನು ಮುಗಿಸಲು ತಡರಾತ್ರಿಯಲ್ಲೂ ನಿದ್ದೆಯಿಂದ ಏಳಬೇಕಾಗಿಬರಬಹುದು.

ಕೊನೆಯ ದಿನ ಅಂದರೆ 50ನೇ ದಿನ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್‌. ಈ ಟಾಸ್ಕ್‌ನಿಂದ ಹಿಂದೆ ಸರಿಯಲು ಮುಂದಾದರೆ ಅತ್ತಲಿಂದ ಹಲವು ಬಗೆಯ ಬೆದರಿಕೆಗಳು ಬರಬಹುದು. ಈ ಹಿಂದಿನ 49 ದಿನ ನೀವು ಮಾಡಿದ ಟಾಸ್ಕ್‌ಗಳ ವಿಷಯ ಮನೆಯವರಿಗೆ ಗೊತ್ತಾದರೆ ಅವರು ನಿಮ್ಮಿಂದಾಗಿ ಎಷ್ಟು ನೊಂದುಕೊಳ್ಳುತ್ತಾರೆ ಎಂಬ ಭಾವನಾತ್ಮಕ ಬ್ಲ್ಯಾಕ್‌ ಮೇಲ್ ತಂತ್ರವೂ ಇಲ್ಲಿರುತ್ತದೆ.

‘ಮಾನಸಿಕವಾಗಿ ದುರ್ಬಲವಾಗಿರುವವರಿಗೆ ಬ್ಲೂ ವೇಲ್‌ನಂಥ ಆಟಗಳು ಆಕರ್ಷಣೆಯಾಗಿ ಕಾಣುತ್ತವೆ. ಅದರಲ್ಲೂ ಹದಿಹರೆಯದವರ ಖಿನ್ನತೆ, ಸೋಲುಗಳ ಸಂದರ್ಭದಲ್ಲಿ ಬ್ಲೂ ವೇಲ್‌ ನಂಥ ಆಟಗಳು ಅವರಿಗೆ ಬೇರೊಂದು ದಾರಿಯಾಗಿ ಕಾಣಬಹುದು. ಕೊನೆಗೆ ಈ ದಾರಿ ಸಾವಿನಲ್ಲಿ ಅಂತ್ಯವಾಗುತ್ತದೆ.

‘ಈ ಜಗತ್ತಿನಲ್ಲಿ ಮಾನಸಿಕವಾಗಿ ದುರ್ಬಲವಾಗಿರುವವರೂ ಬದುಕಲು ಸಾಧ್ಯವಿದೆ. ಖಿನ್ನತೆ, ಮಾನಸಿಕ ಸಮಸ್ಯೆಗಳು ಶಾಶ್ವತವಲ್ಲ. ಮನಸ್ಸು ದುರ್ಬಲವಾಗಿರುವವರಿಗೆಲ್ಲಾ ಆತ್ಮಹತ್ಯೆಯೇ ಪರಿಹಾರವಲ್ಲ’ ಎನ್ನುತ್ತಾರೆ ಮನೋವೈದ್ಯ ಡಾ. ಪುಲ್ಕಿತ್‌ ಶರ್ಮಾ.

‘ಆನ್‌ ಲೈನ್‌ ಕೆಟ್ಟಾಟಗಳ ಜಾಲಕ್ಕೆ ಮಕ್ಕಳು ಹಾಗೂ ಹದಿಹರೆಯದವರು ಸಿಲುಕದಂತೆ ನೋಡಿಕೊಳ್ಳುವುದು ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿ. ಯಾರು ಖಿನ್ನತೆಗೆ ಒಳಗಾಗಿರುತ್ತಾರೋ ಅವರ ಬಗ್ಗೆ ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರು ನಿಗಾ ವಹಿಸಬೇಕು. ಅವರು ಬ್ಲೂ ವೇಲ್‌ ನಂಥ ಕೆಟ್ಟಾಟದ ಬಲೆಗೆ ಸಿಲುಕದಂತೆ ಕಾಪಾಡಬೇಕು. ಮಾನಸಿಕವಾಗಿ ಕುಗ್ಗಿರುವವರನ್ನು ಇನ್ನಷ್ಟು ಕುಗ್ಗಿಸಿ ಅವರನ್ನು ಆತ್ಮಹತ್ಯೆಗೆ ಪ್ರಚೋದಿಸುವಂಥ ಯಾವುದೇ ಬಗೆಯ ಆಟಗಳಿಂದ ಅವರು ದೂರವಿರುವಂತೆ ನೋಡಿಕೊಳ್ಳಬೇಕು’ ಎಂಬುದು ಅವರ ಸಲಹೆ. ಬ್ಲೂ ವೇಲ್‌ ನಂಥ ಕೆಟ್ಟಾಟಗಳಿಗೆ ನಿರ್ದಿಷ್ಟ ವೆಬ್‌ ಸೈಟ್‌ ಅಥವಾ ಆ್ಯಪ್‌ ಆಗಲೀ ಇಲ್ಲದಿರುವುದರಿಂದ ಇವುಗಳನ್ನು ನಿಯಂತ್ರಿಸುವುದೂ ಕಷ್ಟ. ಆ್ಯಂಟಿ ವೈರಸ್‌ ಅಥವಾ ವೆಬ್ ಬ್ಲಾಕ್‌ ನಂಥ ಮಾರ್ಗಗಳ ಮೂಲಕ ಇವನ್ನು ತಡೆಯುವುದು ಅಸಾಧ್ಯ.

ಕೆಟ್ಟಾಟ ಎಂದು ಕರೆದರೂ ಇವು ಆಟಗಳಲ್ಲ. ಇವುಗಳ ಸ್ವರೂಪವೇ ವಿಚಿತ್ರ. ಕೆಲ ವರ್ಷಗಳ ಹಿಂದೆ ಐಸ್‌ ಬಕೆಟ್‌ ಚಾಲೆಂಜ್‌ ಆನ್‌ ಲೈನ್‌ ನಲ್ಲಿ ಸಂಚಲನ ಉಂಟುಮಾಡಿತ್ತು. ಆದರೆ, ಅದು ಒಳ್ಳೆಯ ಉದ್ದೇಶಗಳ ಅಭಿಯಾನದಂತೆ ನಡೆದಿತ್ತು. ನಿರ್ದಿಷ್ಟ ಉದ್ದೇಶಕ್ಕಾಗಿ ಈ ಸವಾಲು ಎದುರಿಸುವುದು ಆಗ ಹೆಚ್ಚಾಗಿತ್ತು. ಸಾಕಷ್ಟು ಜನಪ್ರಿಯ ವ್ಯಕ್ತಿಗಳೂ ಈ ಸವಾಲು ಸ್ವೀಕರಿಸಿ ಐಸ್‌ ಸುರಿದುಕೊಂಡಿದ್ದೂ ಇದೆ. ಆದರೆ, ಬ್ಲೂ ವೇಲ್‌ನಂಥವು ಒಡ್ಡುವುದು ಕೆಟ್ಟ ಹಾಗೂ ಮಾರಕ ಸವಾಲುಗಳನ್ನು. ಪ್ರಾಣಕ್ಕೇ ಮುಳುವಾಗುವ ಇಂಥ ಸವಾಲುಗಳನ್ನು ಸ್ವೀಕರಿಸಲೇಬಾರದು.

ಮಾನಸಿಕವಾಗಿ ದುರ್ಬಲರಾಗಿರುವವರು ಮಾತ್ರವಲ್ಲ ಧೈರ್ಯವಂತರೂ ಈ ಕೆಟ್ಟಾಟದ ಸವಾಲಿಗೆ ಬಲಿಯಾಗಬಹುದು. ಹದಿಹರೆಯದವರಲ್ಲಿ ಒಂದು ಬಗೆಯ ಭಂಡ ಧೈರ್ಯವಿರುತ್ತದೆ. ಈ ಭಂಡ ಧೈರ್ಯದವರನ್ನೂ ಈ ಕೆಟ್ಟಾಟದ ಗಾಳ ಸೆಳೆಯಬಲ್ಲದು. ‘ನಿಮ್ಮಿಂದ ಈ ಕೆಲಸ ಸಾಧ್ಯವೇ ಇಲ್ಲ’ ಎಂದಾಗ ‘ಇಲ್ಲ ಇದನ್ನೂ ನಾನು ಮಾಡಬಲ್ಲೆ’ ಎಂದು ಮೂಡುವ ಧೈರ್ಯವೂ ಈ ಜಾಲದಲ್ಲಿ ಜೀವಕ್ಕೆ ಕುತ್ತು ತರಬಲ್ಲದು. ಹೀಗಾಗಿ ಆನ್‌ಲೈನ್‌ ಅತಿರೇಕಗಳಿಂದ ದೂರವಿದ್ದಷ್ಟೂ ಒಳ್ಳೆಯದು.

***

ಕೆಟ್ಟಾಟಗಳಿಂದ ರಕ್ಷಿಸಿಕೊಳ್ಳಲು

* ಯಾವುದೇ ಟಾಸ್ಕ್‌ನ ಆನ್‌ಲೈನ್‌ ಆಟಗಳ ಜಾಲಕ್ಕೆ ಸೈನ್‌ ಇನ್‌ ಆಗಬೇಡಿ

* ಮಾನಸಿಕವಾಗಿ, ದೈಹಿಕವಾಗಿ ಘಾಸಿ ಉಂಟುಮಾಡುವಂಥ ಸವಾಲು ಒಡ್ಡುವ ಆಟಗಳಿಂದ ದೂರವಿರಿ

* ರಕ್ತ ಸುರಿಯುತ್ತಿರುವ ವ್ಯಕ್ತಿಯ ಚಿತ್ರ, ದೆವ್ವ– ಭೂತಗಳ ಚಿತ್ರ, ಭಯ ಮೂಡಿಸುವಂಥ ಯಾವುದೇ ಚಿತ್ರಗಳಿರುವ ವೆಬ್‌ ಸೈಟ್‌ಗಳಿಗೆ ಭೇಟಿ ನೀಡಬೇಡಿ

* ಚಾಕು, ಬ್ಲೇಡ್‌, ಪಿನ್‌ಗಳಿಂದ ಮೈ ಮೇಲೆ ಗೀಚಿಕೊಳ್ಳುವಂತೆ ಹೇಳುವ ಟಾಸ್ಕ್‌ಗಳನ್ನು ನೀಡುವ ಆಟಗಳನ್ನು ಆಡಲೇಬೇಡಿ

‌* ನಿಮ್ಮ ಸಮಸ್ಯೆಗಳು, ಕನಸುಗಳು, ನಿಮಗೆ ಭಯವಾಗುವ ಸಂಗತಿಗಳು, ನಿಮ್ಮ ದೌರ್ಬಲ್ಯಗಳನ್ನು ಆನ್‌ಲೈನ್‌ ನಲ್ಲಿ ಹೇಳಿಕೊಳ್ಳಬೇಡಿ

* ಕುತೂಹಲಕ್ಕೂ ಯಾವುದೇ ಟಾಸ್ಕ್‌ಗಳ ತೆಗೆದುಕೊಳ್ಳಬೇಡಿ

***

ಪೋಷಕರ ಟಾಸ್ಕ್‌

* ಮಕ್ಕಳ ಮಾನಸಿಕ ಸ್ಥಿತಿಯನ್ನು ಗಮನಿಸುತ್ತಿರಿ

* ಮಕ್ಕಳು ಮಾನಸಿಕವಾಗಿ ಕುಗ್ಗಿದ್ದರೆ, ಖಿನ್ನತೆಗೆ ಒಳಗಾಗಿದ್ದರೆ, ತಡರಾತ್ರಿಯವರೆಗೂ ಆನ್‌ ಲೈನ್‌ನಲ್ಲಿದ್ದರೆ, ಯಾರೊಂದಿಗೂ ಬೆರೆಯದೆ ದಿನದ ಹೆಚ್ಚು ಸಮಯ ಕೋಣೆಯಲ್ಲಿ ಒಂಟಿಯಾಗಿದ್ದರೆ ಆದಷ್ಟು ಬೇಗ ಅವರನ್ನು ಮನೋವೈದ್ಯರಲ್ಲಿಗೆ ಕರೆದುಕೊಂಡು ಹೋಗಿ

* ಮಕ್ಕಳು ಆನ್‌ಲೈನ್‌ ಚಟದಿಂದ ದೂರಾಗಲು ಕ್ರೀಡೆ, ಸಂಗೀತ, ಚಿತ್ರಕಲೆ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಿ

* ಬ್ಲೂ ವೇಲ್‌ ಮಾತ್ರವಲ್ಲ ಯಾವುದೇ ಬಗೆಯ ಕೆಟ್ಟ ಸವಾಲಿನ ಆನ್‌ ಲೈನ್ ಆಟಗಳಿಗೆ ಮಕ್ಕಳು ಸಿಲುಕದಂತೆ ಎಚ್ಚರ ವಹಿಸಿ

* ಮಕ್ಕಳ ಗ್ಯಾಜೆಟ್‌ಗಳ ಮೇಲೆ ನಿಗಾ ಇಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT