ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ

Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಪ್ಪ ಕುಡ್ದು ಬಿದ್ದೋಗದೆ; ಉಸ್ರೇ ಆಡ್ತಾಯಿಲ್ಲ’ ತಂಗಿ ಗಿರಿಜಾಳ ಏದುಸಿರಿನ ಮಾತುಗಳು ಮುಗಿಯುವ ಮೊದಲೇ ಫೋನನ್ನು ಕಿವಿಗೆ ಆತು ಹಿಡಿದುಕೊಂಡಿದ್ದ ವೆಂಕಟೇಶನ ಕೈಗಳು ನಡುಗತೊಡಗಿದವು. ‘ಉಸ್ರು ಇನ್ನೂ ಐತ ನೋಡು’ ಪಸೆ ಒಣಗಿದ ಬಾಯಿಂದ ಬಂದ ಶಬ್ದಗಳು ಅಸ್ಪಷ್ಟವಾಗುತ್ತಿದ್ದವು. ಆ ಕಡೆಯಿಂದ ತಂಗಿಯ ಉಸಿರಿನ ಏರಿಳಿತ ಮಾತ್ರ ಕೇಳಿಸುತ್ತಿತ್ತು.

ಗೆಳೆಯನ ಬೈಕಿಗೆ ಪೆಟ್ರೋಲು ಹಾಕಿಸಿಕೊಂಡು ಅವನ ಹಿಂದೆ ಕೂತು ಊರು ತಲುಪಿದಾಗ ಗವ್ವನೆ ಕತ್ತಲು. ಅಜ್ಜನ ಕಾಲದ ಮಾಳಿಗೆ ಮನೆ ಸೋರುತ್ತಿದ್ದರೂ ಹೊಲದ ಸುತ್ತ ಇದ್ದ ಜಾಲಿಮರಗಳನ್ನು ಕಡಿದು ಕಳೆದ ತಿಂಗಳಷ್ಟೇ ಮಾಡಿಸಿಕೊಂಡಿದ್ದ ದಿವಾನದ ಮೇಲೆ ತಣ್ಣಗೆ ಮಲಗಿದ್ದ ಅಪ್ಪನನ್ನು ನೋಡಿ ಏನು ಮಾಡಬೇಕೆಂದು ತೋಚದೆ ಚಡಪಡಿಕೆ ಶುರುವಾಯಿತು.

ಅಪ್ಪನ ತಲೆಯ ಹತ್ತಿರ ಹಚ್ಚಿಟ್ಟಿದ್ದ ದೊಡ್ಡ ಹಣತೆ ಹೆಣದ ಸುತ್ತಲೂ ಕುಳಿತು ಬಿಕ್ಕಳಿಸುತ್ತಿದ್ದವರ ಮುಖಗಳನ್ನು ಗುರುತು ಹಿಡಿಯುತ್ತಿತ್ತು. ಅವರೆಲ್ಲರ ಬಾಯಿಯ ಸಾರಾಯಿ ವಾಸನೆಯನ್ನು ಮುಚ್ಚಿಡಲು ಯತ್ನಿಸುತ್ತಿದ್ದ ದಪ್ಪನೆಯ ಪೊರಕೆಯಾಕಾರದ ಸಾಂಬ್ರಾಣಿ ಕಡ್ಡಿಯ ಕಂತೆಯಿಂದ ಏಳುತ್ತಿದ್ದ ಹೊಗೆ ಇಂದ್ರಿಯಗಳನ್ನೆಲ್ಲಾ ಒಂದೇ ಏಟಿಗೆ ಆವರಿಸಿ ರೇಜಿಗೆ ಹುಟ್ಟಿಸುತ್ತಿತ್ತು.

ಇನ್ನೆರಡು ನಿಮಿಷ ಅಲ್ಲೇ ನಿಂತರೆ ವಾಂತಿಯಾಗಿಬಿಡುವ ಸಾಧ್ಯತೆಯನ್ನರಿತ ವೆಂಕಟೇಶ ತಲೆಯ ಮೇಲೆ ಕೈಹೊತ್ತು ಅಪ್ಪನ ಕಾಲಬುಡದಲ್ಲಿ ಕೂತಿದ್ದ ಅವ್ವ ಮತ್ತು ತಂಗಿಯನ್ನು ಮಾತನಾಡಿಸಲು ಯತ್ನಿಸಿದ. ಆಗಲಿಲ್ಲ. ಗೆಳೆಯನೊಟ್ಟಿಗೆ ಹಿತ್ತಿಲಿನ ಕಡೆಗೆ ಹೆಜ್ಜೆ ಹಾಕಿದ. ಅಲ್ಲಿದ್ದ ಸೀಬೇಹಣ್ಣಿನ ಮರಕ್ಕೆ ಆತುಕೊಂಡು ಯಾರೋ ನಿಂತಂತೆ ಕಂಡಿತು. ಹಾಗೆ ನಿಂತಿರುವುದು ಅಪ್ಪ ಅನ್ನಿಸಿ ಎದೆ ದಸಕ್ಕೆಂದಿತು.

ಮೊಬೈಲ್ ಟಾರ್ಚ್ ಆನ್ ಮಾಡಿದ ಗೆಳೆಯ ‘ಯಾರ‍್ದೋ ಷರಟು.. ನಿಮ್ಮಪ್ಪುಂದಿರ್ಬೇಕು’ ಎಂದು ಕೊಂಬೆಗೆ ತಗಲಿಹಾಕಿದ್ದ ಶರಟನ್ನು ತೆಗೆದು ಮುಂದೆ ಹಿಡಿದ. ‘ಓದೊರ್ಷ ಮಾರ್ಲಾಮಿಗೆ ನಾನು ಕೊಡಿಸಿದ ನೀಲಿ ಶರ್ಟು... ನಮ್ಮಪ್ಪುಂಗೆ ತುಂಬಾ ಇಷ್ಟ’ ಅಂದ ವೆಂಕಟೇಶ ಅಪ್ಪನನ್ನೇ ತಬ್ಬಿಕೊಂಡ ಹಾಗೆ ಷರಟನ್ನು ತಬ್ಬಿ ಅತ್ತುಬಿಟ್ಟ.

ಅಪ್ಪನ ಷರಟಿನ ಜೇಬಿನಲ್ಲಿದ್ದ ಸಿಗರೇಟು ಪ್ಯಾಕಿನಲ್ಲಿ ಇನ್ನೂ ಮೂರು ಉಳಿದಿದ್ದವು. ಗೆಳೆಯನಿಗೊಂದು ಕೊಟ್ಟು ತಾನೊಂದಕ್ಕೆ ಬೆಂಕಿಹಚ್ಚಿದ ವೆಂಕಟೇಶ ‘ನೋಡು ಇದು ನನ್ನ ಅಪ್ಪ; ಮನೆಯಲ್ಲಿ ಉಪ್ಪು ಮೆಣಸಿನಕಾಯಿ ಇಲ್ಲದಿದ್ದರೂ ಇವನ ಜೇಬಲ್ಲಿ ಸಿಗರೇಟು...’ ಅಂದು ಒತ್ತರಿಸಿಕೊಂಡು ಬಂದ ದುಃಖವನ್ನು ನಗುವನ್ನಾಗಿ ಮಾರ್ಪಡಿಸಿದ.

ರಾಜ್‌ಕುಮಾರ್ ಮೀಸೆ, ಕೈಯಲ್ಲಿ ಎಚ್‌.ಎಂ.ಟಿ ವಾಚು, ಇಸ್ತ್ರಿ ಮಾಡಿದ ಕೆಂಪು ಕಲರಿನ ಪ್ಯಾಂಟಿಗೆ ಹೊಂದದಿದ್ದರೂ ಆಕಾಶವನ್ನೇ ಮೈಮೇಲೆ ಹೊದ್ದುಕೊಂಡಂತಿದ್ದ ತಿಳಿನೀಲಿ ಷರಟು ಹಾಕಿಕೊಂಡು ಉದ್ದಕ್ಕೆ ಬೆಳೆಸಿದ್ದ ಎಡಗೈ ಕಿರುಬೆರಳಿನ ಉಗುರಿನಲ್ಲಿ ಹಲ್ಲು ಚುಚ್ಚುತ್ತಾ... ಅಪ್ಪ ಗಹಗಹಿಸಿ ನಕ್ಕಂತಾಯಿತು. ವೆಂಕಟೇಶ ಗೆಳೆಯನ ಆಸರೆಯಿಂದ ಕೆಳಗೆ ಕೂತು ಉಳಿದಿದ್ದ ಸಿಗರೇಟು ಹಚ್ಚಿದ.

ಹಿತ್ತಿಲಿನ ಮರಗಳು ಸಣ್ಣಗೆ ಅಳುತ್ತಿರುವ ಹಾಗೆನಿಸಿ ಭಯವಾಯಿತು. ಹೆಣದ ಮುಂದೆ ಯಾರೋ ‘ಈ ದೇಹದಿಂದ ದೂರವಾದೆ ಏಕೆ ಆತ್ಮನೆ’ ಹಾಡು ಶುರುಮಾಡಿದರು; ಇನ್ಯಾರೋ ‘ಅಯ್ಯೋ ಹೋಗ್ಬುಟ್ಟೇನೋ...’ ರಾಗ ತೆಗೆದರು; ಗಂಡಸೋ ಹೆಂಗಸೋ ಅಸ್ಪಷ್ಟವಾಗಿತ್ತು.

‘ಮಗ ಬಂದ್ನೇನಮ್ಮಾ..? ನೆಂಟ್ರುಗೆಲ್ಲಾ ಏಳಿ ಕಳ್ಸಿದೀರಾ..? ಬೆಳಿಗ್ಗೆ ಹೊತ್ತುಟ್ಟಿದ್ಮೇಲೆ ಗುಂಡಿ ತೋಡೋರ‍್ಗೆ, ವಾಲ್ಗದೋರ‍್ಗೆ ಏಳಿ ಕಳಿಸ್ಬೇಕು.. ಬಿದ್ರು ಬಂಬು, ಬಟ್ಟೆ, ಪೂಜೆ ಸಾಮಾನು ಎಲ್ಲಾ ತರಕೆ ಯಾರ‍್ನನ ಕಳುಸ್ಬೇಕು. ನಾಳೆ ಒಂಬತ್ತು ಗಂಟ್ಗೆಲ್ಲಾ ರಾವುಗಾಲ ಮುಗ್ದೋತದೆ ಎಲ್ಲ ಬಂದು ಮಕ ನೋಡುದ್ಮೇಲೆ ಮಣ್ಣು ಮಾಡನ...’ ನೆನಪಾಗದ ಪರಿಚಿತ ವ್ಯಕ್ತಿಯ ಧ್ವನಿ, ವೆಂಕಟೇಶನಿಗೆ ಬೆಳಕರಿಯುವುದೆಂದರೆ ಉಟ್ಟ ಬಟ್ಟೆಯೆಲ್ಲಾ ಬಿಚ್ಚಿಹಾಕಿದ ಹಾಗೆ ಅನ್ನಿಸಿತು.

ವೆಂಕಟೇಶ ಗೆಳಯನನ್ನ ಕೇಳಿದ ‘ದುಡ್ಡು ಎಷ್ಟದೆ..?’
‘ಒಂದೆರಡು ಸಾವಿರ ಇರಬೋದು; ತಮ್ಮುಂಗೆ ಫೀಜ್ ಕಟ್ಟಕೆ ಅಂತ ಅಮ್ಮ ಕೊಡ್ತು’ ಅಂದ ಗೆಳೆಯ. ‘ನನ್ನತ್ರ ಆರುನೂರು ರುಪಾಯಿ ಅದೆ ಸಾಕಾತದ..?’ ಕೇಳಿದ. ‘ಸಾಕಾಗಲ್ಲ ಕಣೋ...’ ಅಂದ ಗೆಳೆಯ. ‘ಏನ್ ಮಾಡದು ಈಗ..? ಅಮ್ಮುನ್ನ, ಗಿರಿಜಾನ ಕೇಳುದ್ರೆ ಇನ್ನೂರೋ ಮುನ್ನೂರೊ ಸಿಗಬೋದು.. ಯಾರ‍್ನನ ಸಾಲ ಕೇಳನ ಅಂದ್ರೆ ಇಷ್ಟೊತ್ತಲ್ಲಿ ಎಲ್ಲಾ ಮನಿಕಂಡಿರ‍್ತಾರೆ...’ ಅಂದು ಥಂಡಿಗೆ ಆರಿಹೋದ ಸಿಗರೇಟನ್ನು ಮತ್ತೆ ಹಚ್ಚಿಕೊಳ್ಳಲು ಬೆಂಕಿಕಡ್ಡಿಗಾಗಿ ತಡಕಾಡಿದ ವೆಂಕಟೇಶ.

‘ಬೆಳಿಗ್ಗೆ ನೋಡನ ಬಿಡೋ... ಈಗ ನಮ್ಮತ್ರ ಇರೋ ದುಡ್ಡಲ್ಲೇ ಗುಂಡಿ ತೋಡೋರ‍್ಗೆ ವಾಲಗದವರ‍್ಗೆ ಕೊಡಬೋದು’ ಅಂದ ಗೆಳೆಯನ ಮಾತಿಗೆ ತಲೆಯಾಡಿಸಿ ಕಡ್ಡಿ ಗೀಚಿದ.

ಮೂರು ವರ್ಷಗಳ ಹಿಂದೆ ಬಿ.ಎ ಮುಗಿಸಿ ಮುಂದೆ ಓದಲಾಗದೆ ಬೆಂಗಳೂರಿನ ಒಂದು ಝೆರಾಕ್ಸ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ ವೆಂಕಟೇಶ, ಅಲ್ಲೇ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತನ್ನ ಬಾಲ್ಯದ ಗೆಳೆಯನ ರೂಮಿನಲ್ಲಿ ಉಳಿದುಕೊಂಡಿದ್ದ. ಮೊದಲು ಅಪ್ಪನ ಪೇಂಟಿಂಗ್ ಕೆಲಸದಿಂದ ಹೇಗೋ ಸಂಸಾರ ನಡೆಯುತ್ತಿತ್ತಾದರೂ ಇವನು ದುಡಿಯಲು ಶುರುಮಾಡಿದ ಮೇಲೆ ಅಪ್ಪ ತನ್ನ ಕುಡಿತಕ್ಕೆ, ಶೋಕಿಗೆ ಎಷ್ಟು ಬೇಕೋ ಅಷ್ಟನ್ನೇ ಸಂಪಾದಿಸಿಕೊಳ್ಳುತ್ತಿದ್ದುದರಿಂದ ತಂಗಿಯ ಓದು, ಅಮ್ಮನ ಆರೋಗ್ಯ, ಅರ್ಧ ಎಕರೆ ಹೊಲ ಎಲ್ಲವೂ ವೆಂಕಟೇಶನ ಮೇಲೇ ಬಿದ್ದಿತ್ತು.

ಮೊದಲು ಇವನ ಆರೋಗ್ಯ, ಹೊಟ್ಟೆ ಬಟ್ಟೆ ಬಗ್ಗೆ ವಿಚಾರಿಸಿಕೊಳ್ಳಲು ಫೋನ್ ಮಾಡುತ್ತಿದ್ದ ಅಮ್ಮ ಮತ್ತವನ ತಂಗಿ ಇತ್ತೀಚೆಗೆ ಅಪ್ಪನ ಉಪಟಳದ ಬಗ್ಗೆ ದೂರು ಹೇಳಲೆಂದೇ ಫೋನ್ ಮಾಡುತ್ತಿದ್ದರು. ಕಳೆದ ಮೂರ‍್ನಾಲ್ಕು ತಿಂಗಳಿಂದ ಇದು ಜಾಸ್ತಿಯಾಗಿ, ಊರಿಂದ ಫೋನ್ ಬಂತೆಂದರೆ ವೆಂಕಟೇಶ ಬೆಚ್ಚುತ್ತಿದ್ದ.

ಅಪ್ಪನ ಬಗ್ಗೆ ಯೋಚನೆ ಮಾಡಿದಂತೆಲ್ಲಾ ವೆಂಕಟೇಶನಿಗೆ ನಿಗೂಢದೊಳಗಡೆ ಇಳಿಯುವ ಅನುಭವವಾಗುತ್ತಿತ್ತು. ತನ್ನನ್ನು ಅಷ್ಟು ಚೆನ್ನಾಗಿ ಸಾಕಿದ ಅಪ್ಪ, ತಾನೇ ಅಷ್ಟು ಚೆನ್ನಾಗಿ ಬದುಕಿದ್ದ ಅಪ್ಪ... ಮಕ್ಕಳು ದೊಡ್ಡವರಾಗುತ್ತಿದ್ದ ಹಾಗೆ ಅದ್ಯಾಕೋ ಒಂಟಿಯಂತಾಗಿಬಿಟ್ಟಿದ್ದ. ತನ್ನ ಜಾತಿ, ಬಡತನ ಎಲ್ಲದರಾಚೆಗೆ ಒಂದು ಪುಟ್ಟ ಸುಂದರ ಸಂಸಾರವನ್ನು ಕಟ್ಟಿ ಊರಿನ ಸರೀಕರ ಮುಂದೆ ತಲೆಯೆತ್ತಿ ಬದುಕುತ್ತಿದ್ದವನು ಕೊನೆಕೊನೆಗೆ ತನ್ನ ಹೆಂಡತಿ, ಮಕ್ಕಳಿಗೂ ತನಗೂ ಸಂಬಂಧವಿಲ್ಲದಹಾಗೆ ಬದುಕಿದ್ದು, ತನ್ನೊಳಗೇ ಬಚ್ಚಿಟ್ಟುಕೊಂಡಿದ್ದು ವೆಂಕಟೇಶನಿಗೆ ಚಿದಂಬರ ರಹಸ್ಯವಾಗಿ ಕಂಡಿತ್ತು; ಕಾಡಿತ್ತು.

ವೆಂಕಟೇಶ ಸಿಟ್ಟಿನಿಂದ ‘ಯಾಕಿಂಗೆ ಕುಡ್ದೂ ಕುಡ್ದೂ ಸಾಯ್ತಿಯಾ..?’ ಅಂತ ಕೇಳಿದಾಗೆಲ್ಲಾ ಅವನ ಅಪ್ಪ ವಿಚಿತ್ರವಾಗಿ ಕಣ್ಣುಬಿಡುತ್ತಾ ಸೇದುತ್ತಿದ್ದ ಬೀಡಿಯನ್ನು ಮುಖದ ಮುಂದೆ ಹಿಡಿದು ‘ಏಯ್... ನೋಡೋ... ಮಗನೆ... ಜೀವ್ನ ಇಷ್ಟೇ... ನಾನ್ ಇದುನ್ನ ಸೇದ್ತಾ ಇದೀನಿ ಅಂದ್ರೆ ಇದು ಮುಗ್ದು ಹೋಗ್ಲೇಬೇಕು... ಇದು ಲೋಕಾರೂಡಿ... ನೀನ್ ಏನ್ ಏಳದು ನನ್...’ ಅಂತ ಅಂದು ಭಕ್ತ ಪ್ರಹ್ಲಾದ ಸಿನಿಮಾದ ಹಿರಣ್ಯ ಕಶಿಪುವಿನ ಶೈಲಿಯಲ್ಲಿ ನಕ್ಕಿಬಿಡುತ್ತಿದ್ದ.

ನೆನಪಿನಲ್ಲಿ ಅಪ್ಪನ ನಗುವಿನ ಅಲೆ ತರಂಗಗಳನ್ನು ಎಬ್ಬಿಸುತ್ತಿದ್ದಂತೆ ವೆಂಕಟೇಶ ಸೇದುತ್ತಿದ್ದ ಸಿಗರೇಟು ಮುಗಿಯುತ್ತಾ ಬಂದು ಕೈಸುಟ್ಟಿತು. ಬೆಚ್ಚಿ ಕೈ ಒದರಿದವನು ಮೊಬೈಲ್ ತೆಗೆದು ಟೈಮ್ ನೋಡಿಕೊಂಡ; ರಾತ್ರಿ ಒಂದೂವರೆ ಗಂಟೆ ಆಗಿತ್ತು. ಗೆಳೆಯ ಸೀಬೇಮರಕ್ಕೆ ಒರಗಿ ತೂಕಡಿಸುತ್ತಿದ್ದ. ಬೆಳಿಗ್ಗೆ ಮಾಡಬೇಕಾದ ಕೆಲಸಗಳು ಭಯ ಹುಟ್ಟಿಸುತ್ತಿದ್ದವು; ಟೀ ಕುಡಿಯಬೇಕೆನ್ನಿಸಿತು. ಒಂದರ್ಧ ಕಿಲೋಮೀಟರ್ ಉತ್ತರಕ್ಕೆ ನಡೆದುಕೊಂಡು ಹೋದರೆ ಹೆದ್ದಾರಿಯಲ್ಲಿ ಲಾರಿಗಳಿಗಾಗಿ ಟೀ ಅಂಗಡಿಗಳು ತೆರೆದಿರುತ್ತವೆ ಅನ್ನಿಸಿ ತೂಕಡಿಸುತ್ತಿದ್ದ ಗೆಳೆಯನನ್ನು ಎಬ್ಬಿಸಲು ನೋಡಿದ; ಮತ್ತೆ ಬೇಡ ಅನ್ನಿಸಿ ಒಬ್ಬನೇ ಹೋಗಲು ನೋಡಿದ; ಕಾಲುಗಳು ಎಳೆದಂತೆನಿಸಿ ನಿಂತಲ್ಲೇ ಕುಸಿದ.



ನಿದ್ದೆಯೋ, ಅರೆನಿದ್ದೆಯೋ, ಕನಸೋ, ಕಲ್ಪನೆಯೋ.. ನೀಲಿ ಷರ್ಟಿನ ಅಪ್ಪ ಅಮ್ಮನ ಹಣೆಯ ಕುಂಕುಮವನ್ನು ತೋರಿಸಿ ‘ನೋಡ್ಲಾ ನಿಮ್ಮಮ್ಮ ಎಷ್ಟಗಲ ಕುಂಕುಮ ಇಕ್ಕಂಡವ್ಳೆ...’ ಅಂತಾ ಗೊಳ್ಳನೆ ನಕ್ಕ; ಅಮ್ಮ ‘ಏಯ್ ಮಾನಗೆಟ್ಟೋನೆ.. ನಾನ್ ಎಷ್ಟಗಲನ ಇಕ್ಕಂತಿನಿ ನಿನಗೇನು..? ಒತ್ತಾರಿಂದ ಸಂಜೆಗಂಟ ಒಟ್ಟೆಒಳಿಕೆ ಉಯ್ಕಂಡ್ ಉಯ್ಕಂಡ್ ಎಲ್ಲಂದ್ರಲ್ಲಿ ಬಿದ್ದಿರ‍್ತಿಯಲ್ಲಾ..

ತಡಿ, ನನ್ನೆಂಡ್ರವ್ಳೆ ಮಕ್ಳವ್ರೆ ಅಂತ ಒಂದು ರುಪಾಯಿಂದ್ ಏನನ ಕಟ್ಟುಸ್ಕಂಡ್ ಬಂದ್ ಕೊಡ್ತಿಯಾ..? ನಿನ್ನಂಥೋರ‍್ಗೆ ಯಂಡ್ರು ಮಕ್ಳು ಯಾಕೆ... ಮುಚ್ಕಂಡ್ ಕುಂತ್ಕೋ...’ ಅಂತ ಉಗಿತು. ಅದಕ್ಕೆ ಅಪ್ಪ ‘ಲೇ ಬೋಸುಡಿ...’ ಅಂತ ಇನ್ನೇನೋ ಅಂದ... ತಂಗಿ ಹರಿದ ಲಂಗ ಜಾಕೆಟ್ಟಿನಲ್ಲೇ ಸ್ಕೂಲಿಗೆ ಹೊರಟಳು... ಇವನ ಸವೆದುಹೋದ ಚಪ್ಪಲಿಯಲ್ಲಿ ತೂರಿಕೊಂಡಿದ್ದ ದೊಡ್ಡ ಮುಳ್ಳೊಂದು ಚುಚ್ಚಿ ರಕ್ತ ಬಂತು...

‘ವೆಂಕ್ಟೇಶಾ...’ ಗೆಳೆಯನ ಮಾತಿಗೆ ಬೆಚ್ಚಿ ಎದ್ದವನ ಎದುರಿಗೆ ಪಕ್ಕದ ಮನೆಯ ನಂಜಕ್ಕ ಟೀ ಲೋಟ ಹಿಡಿದು ನಿಂತಿತ್ತು. ‘ಎದ್ದೇಳಪ್ಪಾ ನೆನ್ನೆಯಿಂದಾ ಏನೂ ತಿಂದಿಲ್ವಂತೆ... ಈ ಟೀನಾದ್ರೂ ಕುಡಿ; ಅವ್ವುಂಗೆ, ತಂಗಿಗೆ ದೈರ‍್ಯ ಏಳ್ಬೇಕಾದೋನು ನೀನೇ ಇಂಗೆ ಕುಂತ್ರೆ ಎಂಗೆ..? ಇಂಗೇ ಇದ್ರೆ ಆತದ..? ಇನ್ನೇನು ಎಲ್ರೂ ಬಂದ್ಬುಡ್ತರೆ.. ಕಾರ್ಯ ಎಲ್ಲಾ ನೀನೇ ನಿಂತು ಮಾಡ್ಬೇಕು’ ಅಂದು ಟೀ ಕೈಗಿಟ್ಟು ಹೋಯಿತು ನಂಜಕ್ಕ. ಟೀ ಕುಡಿದು ಹಟ್ಟಿ ಮುಂದಕ್ಕೆ ಬಂದ ವೆಂಕಟೇಶನಿಗೆ ಮೊದಲು ಕಂಡಿದ್ದು ಅಷ್ಟಗಲ ಕುಂಕುಮ ಇಟ್ಟುಕೊಂಡು ಕುಳಿತಿದ್ದ ಅವನ ಅಮ್ಮ. ಪಕ್ಕದಲ್ಲೇ ಮಲಗಿದ್ದ ಅಪ್ಪನ ಮುಖ ನೋಡುವ ಧೈರ್ಯ ಸಾಲದೆ ಪಕ್ಕಕ್ಕೆ ಬಂದುಬಿಟ್ಟ.

ನೆಂಟರೆಲ್ಲಾ ಬಂದರು. ವೆಂಕಟೇಶನ ಮುಂದೆ ಕ್ಷಣ ನಿಂತು ಬೆನ್ನಿನ ಮೇಲೆ ಕೈಯಾಡಿಸಿದರು.. ಇದ್ದ ಹಣದಲ್ಲೇ ಗುಂಡಿ ತೋಡಿದವರಿಗೆ, ವಾಲಗದವರಿಗೆ ಕೊಟ್ಟಿದ್ದಾಯಿತು. ಅಪ್ಪ ಯಾವಾಗಲೂ ಕುಳಿತು ಬೀಡಿ ಸೇದುತ್ತಿದ್ದ ಮೇಲಿನ ತುಂಡದ ಬದುವಿನ ಕೆಳಗೆ ಮಣ್ಣು ಮಾಡಲಾಯಿತು. ಮಣ್ಣು ಹಾಕುವಾಗಲೂ ವೆಂಕಟೇಶನಿಗೆ ಅಪ್ಪನ ಮುಖವನ್ನು ನೋಡಲಾಗಲಿಲ್ಲ; ಮಣ್ಣಾದ ಕ್ಷಣ ಇನ್ನು ಮುಂದೆ ಅಪ್ಪ ಇರುವುದಿಲ್ಲ ಅನ್ನಿಸಿ ನೆನ್ನೆಯಿಂದ ತಡೆದಿದ್ದ ದುಃಖವೆಲ್ಲಾ ಒತ್ತರಿಸಿಕೊಂಡು ಬಂತು. ಗೆಳೆಯನನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ.. ಅತ್ತೂ ಅತ್ತೂ ಹಗುರಾಗಬೇಕಾದವನು ಯಾಕೋ ಇಡೀ ದೇಹ ಮನಸ್ಸು ಭಾರವಾದಂತೆ ಕುಸಿಯತೊಡಗಿದ್ದ.

‘ಮೂರ್ ದಿನ್ಕೆ ಆಲು ತುಪ್ಪ ಸಾಸ್ತ್ರ ಮಾಡ್ಬೇಕು ಕಣಪ್ಪಾ..’ ಎರಡು ದಿನಗಳಲ್ಲಿ ಮೊದಲು ಮಾತನಾಡಿದ ಅಮ್ಮನ ಕಡೆ ನೋಡಿದ ವೆಂಕಟೇಶ; ತನ್ನ ಅಮ್ಮ ಅಲ್ಲ ಅನ್ನಿಸಿತು. ‘ಸರಿ ಇವತ್ತೋಗಿ ಇಂದಿಷ್ಟು ಕಾಸ್ ಒಂಚ್ಕಂಡು ನಾಡ್ದು ಬತ್ತಿನಿ ತಗೋ.. ತಿತಿಗೂ ದುಡ್ಡು ಬೇಕಲ್ಲ..’ ಅಂದು ಹೊರಟ. ಅಪ್ಪನ ನೀಲಿ ಷರ್ಟು ನೆನಪಾಯಿತು. ಹಿತ್ತಲಿಗೆ ಹೋಗಿ ಸೀಬೆ ಮರದ ಕೆಳಗೆ ಬಿದ್ದಿದ್ದನ್ನು ಎತ್ತಿಕೊಂಡ; ಅಲ್ಲೇ ಪಕ್ಕದಲ್ಲಿ ರಾತ್ರಿ ಜೇಬಿನಲ್ಲಿದ್ದ ಸಿಗರೇಟು ಪ್ಯಾಕು ಬಿದ್ದಿತ್ತು. ಥಂಡಿಗೆ ಕೊಂಚ ನೆಂದಂತೆ ಕಂಡ ಅರೆತೆರೆದ ಪ್ಯಾಕಿನ ಒಳಗೆ ಒಂದು ಮಡಿಚಿಟ್ಟ ಚೀಟಿ ಇದ್ದಂತೆ ಕಂಡಿತು. ಅದನ್ನು ಕೈಗೆತ್ತಿಕೊಂಡ ವೆಂಕಟೇಶನ ಕೈ ನಡುಗುತ್ತಿತ್ತು...

ಚೀಟಿಯನ್ನು ಹರಿಯದಂತೆ ನಿಧಾನಕ್ಕೆ ಬಿಚ್ಚಿದ. ಅದೆಷ್ಟೋ ವರ್ಷದ ನಂತರ ಅಪ್ಪನ ಶಿಸ್ತಿನ ಕೈಬರಹ ನೋಡಿದವನಿಗೆ ವಿಚಿತ್ರ ಅನುಭವ.. ನಾಲ್ಕನೇ ತರಗತಿವರೆಗೆ ಓದಿ ದೇಶ ಸುತ್ತಲು ಶುರು ಮಾಡಿದ ಅಪ್ಪ ಬರೆಯುತ್ತಿದ್ದ ಕನ್ನಡ ಅಕ್ಷರಗಳು ಮುತ್ತು ಪೋಣಿಸಿದ ಹಾಗಿರುತ್ತಿದ್ದವು. ಸುಮಾರು ತಿಂಗಳಿನ ಹಿಂದೆಯೇ ಬರೆದು ಮಡಚಿಟ್ಟಿರಬಹುದಾದ ನೋಟ್ ಬುಕ್ಕಿನ ಅನ್‌ರೂಲ್ಡ್ ಪೇಜಿನಲ್ಲಿ ಗೆರೆ ಎಳೆದಂತೆ ಸ್ಫುಟವಾಗಿ ಬರೆಯಲಾಗಿತ್ತು..

‘ಪ್ರೀತಿಯ ಮಗ ವೆಂಕಟೇಶನಿಗೆ.. ಬಹಳ ವರ್ಷಗಳ ನಂತರ ನನ್ನ ಕೈಯಿಂದ ಅಕ್ಷರಗಳು ಮೂಡುತ್ತಿವೆ. ಪ್ರತಿ ಅಕ್ಷರದಲ್ಲೂ ನೀನೇ ಮೂಡಿದಂತೆನಿಸಿ ನಿನ್ನ ಮುಂದೆಯೇ ಇದನ್ನೆಲ್ಲಾ ಬರೆಯಬೇಕಲ್ಲಾ ಎಂದು ನಾಚಿಕೆಯಾಗುತ್ತಿದೆ. ಇದು ನನ್ನ ಆತ್ಮಹತ್ಯೆಯ ಪತ್ರವಲ್ಲ; ನಾನು ಹೆಚ್ಚುದಿನ ಬದುಕುತ್ತೇನೆ ಅನ್ನುವ ನಂಬಿಕೆಯಿಲ್ಲದ ಕಾರಣ ಇವತ್ತೋ ನಾಳೆಯೋ ಸತ್ತುಬಿಟ್ಟರೆ ಈ ಪತ್ರ ನಿನಗೆ ಸಿಗಲಿ ಅನ್ನುವ ಕಾರಣಕ್ಕೆ ಮೊದಲೇ ಬರೆದಿಡುತ್ತಿದ್ದೇನೆ.

ನಿನ್ನನ್ನು ಚೆನ್ನಾಗಿ ಸಾಕಿದ್ದೇನೆ ಎಂದು ಹೇಳುವ ಧೈರ್ಯವಿಲ್ಲ ನನಗೆ; ನೀನು ದೊಡ್ಡವನಾಗುತ್ತಿದ್ದರೆ ನಾನು ಸಣ್ಣವನಾಗುವ ಅನುಭವವಾಗುತ್ತಿತ್ತು ಯಾಕೋ ಗೊತ್ತಿಲ್ಲ. ಬದುಕನ್ನು ತುತ್ತ ತುದಿಯವರೆಗೂ ಅನುಭವಿಸಬೇಕು ಅನ್ನುವ ಹಂಬಲವಿದ್ದವನು ನಾನು. ಕಳೆದ ಎರಡು ವರ್ಷಗಳಿಂದ ಸಾವಿನ ವಾಸನೆ ನನ್ನ ಬೆನ್ನತ್ತಿತ್ತು. ಅದಕ್ಕೇ ತೀವ್ರವಾಗಿ ಬದುಕಿಬಿಟ್ಟೆ.’

‘ಇದೆಲ್ಲದರ ಹೊರತಾಗಿ ನಿನಗೆ ನಾನು ಹೇಳಬೇಕಾದದ್ದು ಇದಲ್ಲ ಹಾಗೂ ಏನು ಹೇಳಬೇಕೋ ಅದನ್ನು ಹೇಳಲು ಆಗುತ್ತಿಲ್ಲ. ನೀನು ಮಾತ್ರ ಈ ಊರಿನಲ್ಲಿರಬೇಡ. ಇದೊಂದು ಜಾತಿ ಹುಳಗಳ ತಿಪ್ಪೆ. ಇರುವ ಹೊಲ ಮಾರಿಕೊಂಡು ಇಬ್ಬರನ್ನೂ ಕರೆದುಕೊಂಡು ಎಲ್ಲಾದರೂ ದೂರ ಹೋಗಿ ಬದುಕು.. ನನ್ನನ್ನು ಕ್ಷಮಿಸು.. ಬರುತ್ತೇನೆ..’

‘ಇನ್ನೊಂದು ವಿಷಯ.. ಏನೋ ಹುಡುಕುತ್ತಿದ್ದಾಗ ನಿನ್ನದೊಂದು ನೋಟ್ ಬುಕ್ ಸಿಕ್ಕಿತು.. ಅದರಲ್ಲೇ ಹರಿದದ್ದು ಈ ಹಾಳೆ.. ಇದರ ಹಿಂದೆ ನೀನು ಬರದುಕೊಂಡಿದ್ದೀಯಲ್ಲಾ.. ಈ ಸಾಲುಗಳು ನನ್ನ ಯೌವನದ ದಿನಗಳಲ್ಲಿ ನನಗೆ ಸಿಗಲಿಲ್ಲ.. ನಿನಗೆ ಸಿಕ್ಕಿವೆ.. ಚೆನ್ನಾಗಿ ಬದುಕು..’

ಕಣ್ಣಲ್ಲಿ ನೀರು ತುಂಬಿಕೊಂಡು ಹಾಳೆಯನ್ನು ತಿರುವಿದ ವೆಂಕಟೇಶ; ಅದರಲ್ಲಿ ಎರಡು ಸಾಲುಗಳಿದ್ದವು: ನಿನಗೆ ಗೌರವವಿಲ್ಲದ ಜಾಗದಲ್ಲಿ ನಿನ್ನ ಚಪ್ಪಲಿಯನ್ನೂ ಬಿಡಬೇಡ- ಡಾ.ಬಿ.ಆರ್. ಅಂಬೇಡ್ಕರ್. ನಿಂತಲ್ಲೇ ಕುಸಿದ ವೆಂಕಟೇಶ ಆಕಾಶಕ್ಕೆ ತಲೆ ಎತ್ತಿ ಅಳತೊಡಗಿದ. ಇದ್ದಕಿದ್ದಂತೆ ಸುರಿದ ಮಳೆ ಅವನನ್ನು ಪೂರ್ತಿ ತೋಯಿಸಿಬಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT