ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಶೀರ್‌ ಕೊಲೆ ಯತ್ನ: ನಾಲ್ವರ ಬಂಧನ

ಕೃತ್ಯ ದೀಪಕ್‌ ರಾವ್‌ ಕೊಲೆಗೆ ಪ್ರತೀಕಾರ ಎಂದಿರುವ ಆರೋಪಿಗಳು
Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕಾಟಿಪಳ್ಳದಲ್ಲಿ ಬುಧವಾರ ನಡೆದ ದೀಪಕ್‌ ರಾವ್‌ ಕೊಲೆಗೆ ಪ್ರತೀಕಾರವಾಗಿ ಕೊಟ್ಟಾರ ಚೌಕಿಯಲ್ಲಿ ಅದೇ ದಿನ ರಾತ್ರಿ ಅಹಮ್ಮದ್ ಬಶೀರ್‌ ಎಂಬವರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದ ಬಜರಂಗದಳದ ಇಬ್ಬರ ಸಹಿತ ನಾಲ್ವರು ಆರೋಪಿಗಳನ್ನು ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್‌ಟಿ.ಆರ್‌.ಸುರೇಶ್‌, ಮಂಗಳೂರಿನ ಪಡೀಲ್‌ನ ಅಳಪೆ ಕಂಡೇವು ಮನೆ ನಿವಾಸಿಗಳಾದ ಕಿಶನ್‌ (21), ಧನುಷ್‌ ಪೂಜಾರಿ (22), ಕಾಸರಗೋಡು ಜಿಲ್ಲೆ ಉಪ್ಪಳ ಸಮೀಪದ ಅಂಬಾರ್‌ನ ಕೃಷ್ಣನಗರ ನಿವಾಸಿ ಶ್ರೀಜಿತ್‌ ಪಿ.ಕೆ. ಅಲಿಯಾಸ್‌ ಶ್ರೀಜು (25) ಮತ್ತು ಮಂಜೇಶ್ವರದ ಕುಂಜತ್ತೂರು ಜೋಗಿಗುಡ್ಡೆ ನಿವಾಸಿ ಸಂದೇಶ್ ಕೋಟ್ಯಾನ್‌ (22) ಬಂಧಿತರು. ಇವರಲ್ಲಿ ಮೊದಲ ಇಬ್ಬರು ಬಜರಂಗದಳಕ್ಕೆ ಸೇರಿದವರು, ಇನ್ನಿಬ್ಬರು ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ’ ಎಂದರು.

ಜಾತ್ರೆಯಿಂದ ಬಂದು ಹಲ್ಲೆ: ಆರೋಪಿಗಳೆಲ್ಲರೂ ಕಂಕನಾಡಿ ಗರಡಿ ಜಾತ್ರೆಯಲ್ಲಿ ಒಟ್ಟು ಸೇರಿದ್ದರು. ದೀಪಕ್‌ ಕೊಲೆ ವಿಚಾರ ತಿಳಿದ ಬಳಿಕ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಅಲ್ಲಿಂದ ಕಿಶನ್‌ ಮತ್ತು ಧನುಷ್‌ ಮನೆಗೆ ಹೋಗಿ ಮಾರಕಾಸ್ತ್ರಗಳನ್ನು ತೆಗೆದುಕೊಂಡು ನಗರಕ್ಕೆ ಬಂದಿದ್ದರು. ಕೊಟ್ಟಾರದ ಬಳಿ ಸಿಕ್ಕ ಬಶೀರ್‌ ಮೇಲೆ ದಾಳಿಮಾಡಿ ಕೊಲೆಗೆ ಯತ್ನಿಸಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ತಿಳಿಸಿದರು.

‘ಧನುಷ್‌ ಮತ್ತು ಕಿಶನ್‌ ಅಣ್ಣ, ತಮ್ಮಂದಿರು. ಈ ಇಬ್ಬರೂ ಕೊಟ್ಟಾರ ಚೌಕಿ ಸುತ್ತಮುತ್ತ ಹಿಂದೆ ಓಡಾಡಿದ್ದರು. ಬಶೀರ್‌ ಅವರ ಫಾಸ್ಟ್‌ಫುಡ್‌ ಮಳಿಗೆಗೂ ಹೋಗಿದ್ದರು. ಮುಸ್ಲಿಂ ಧರ್ಮಕ್ಕೆ ಸೇರಿದ ಯಾವುದಾದರೂ ವ್ಯಕ್ತಿಗಳನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿಗಳೆಲ್ಲರೂ ಬುಧವಾರ ರಾತ್ರಿ ಬೈಕ್‌ನಲ್ಲಿ ಬಂದಿದ್ದರು. ಆಗ ಎದುರಿಗೆ ಸಿಕ್ಕ ಬಶೀರ್‌ ಕೊಲೆಗೆ ಯತ್ನಿಸಿದ್ದರು’ ಎಂದರು.

ಹಿಂದೆಯೂ ಮಾಡಿದ್ದರು:ಶರತ್‌ ಮಡಿವಾಳ ಹತ್ಯೆಗೆ ಪ್ರತೀಕಾರ ಎಂಬಂತೆ ಕಿಶನ್‌ ಮತ್ತು ಧನುಷ್‌ 2017ರ ಜುಲೈ 7ರಂದು ಅಡ್ಯಾರ್‌ನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಇರಿದಿದ್ದರು. ಅಡ್ಯಾರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ನಡೆಯುವ ಹೊತ್ತಿನಲ್ಲೇ ಕೃತ್ಯ ಎಸಗಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರೂ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂದರು.

ಕಿಶನ್‌ ವಿರುದ್ಧ ಅತ್ಯಾಚಾರ, ಹಫ್ತಾ ವಸೂಲಿ, ಕೊಲೆಯತ್ನ ಆರೋಪದಡಿ ಮೂರು ಪ್ರಕರಣಗಳಿವೆ. ಧನುಷ್‌ ವಿರುದ್ಧ ಕೊಲೆ ಯತ್ನ, ದೊಂಬಿ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಒಂದು ಪ್ರಕರಣವಿದೆ. ಶ್ರೀಜಿತ್‌ ವಿರುದ್ಧ ಕಾಸರಗೋಡು ಜಿಲ್ಲೆಯಲ್ಲಿ ಆರು ಹಾಗೂ ನಗರದ ಉಳ್ಳಾಲ ಠಾಣೆಯಲ್ಲಿ ಒಂದು ಪ್ರಕರಣವಿದೆ. ಈತನ ವಿರುದ್ಧ ವೇಶ್ಯಾವಾಟಿಕೆಗಾಗಿ ಮಕ್ಕಳ ಬಳಕೆ, ಉದ್ದೇಶಪೂರ್ವಕವಲ್ಲದ ಕೊಲೆ, ದರೋಡೆ ಆರೋಪಗಳಿವೆ. ಸಂದೇಶ್‌ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ದೊಂಬಿ ನಡೆಸಿದ ಆರೋಪದಡಿ ಒಂದು ಪ್ರಕರಣವಿದೆ ಎಂದರು.

ಆರೋಪಿಗಳು ರೌಡಿ ಪಟ್ಟಿಯಲ್ಲಿದ್ದಾರೆ. ಶ್ರೀಜಿತ್‌ ಮತ್ತು ಸಂದೇಶ್‌ಗೆ ಸಂಬಂಧಿಸಿದಂತೆ ಕೇರಳ ಪೊಲೀಸರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಿಶನ್‌ ಮತ್ತು ಧನುಷ್‌ ವಿರುದ್ಧ ಗೂಂಡಾ ಕಾಯ್ದೆ ಜಾರಿಗೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಕಾಟಿಪಳ್ಳದ ದೀಪಕ್‌ ರಾವ್‌ ಕೊಲೆ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ನೌಷಾದ್‌ ಮತ್ತು ಮೊಹಮ್ಮದ್‌ ಇರ್ಷಾನ್‌ರ ಪೊಲೀಸ್ ಕಸ್ಟಡಿಯ ಅವಧಿಯನ್ನು ಇನ್ನೂ ಒಂದು ವಾರ ವಿಸ್ತರಿಸಲಾಗಿದೆ.

ಬುಧವಾರ ಮಧ್ಯಾಹ್ನ ಕೊಲೆ ನಡೆದಿತ್ತು.

‘ಹಿಂದುತ್ವಪರ’ ಸಂಘಟನೆಗಳ ನಂಟು

‘ಹಿಂದುತ್ವ ಪರ ಸಂಘಟನೆಗಳ ಜತೆ ನಂಟು ಹೊಂದಿರುವುದಾಗಿ ವಿಚಾರಣೆ ವೇಳೆ ತಿಳಿಸಿರುವ ಆರೋಪಿಗಳು, ಕೆಲವು ಸಂಘಟನೆಗಳ ಹೆಸರು ಹೇಳಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ತಿಳಿಸಿದರು.

‘ಅಡ್ಯಾರ್‌ನಲ್ಲಿ ವಿದ್ಯಾರ್ಥಿಗೆ ಇರಿದ ಸಂದರ್ಭದಲ್ಲಿ ಶ್ರೀರಾಮ ಸೇನೆಯಲ್ಲಿದ್ದೆವು. ಆ ಪ್ರಕರಣದಲ್ಲಿ ಶ್ರೀರಾಮ ಸೇನೆ ನಮಗೆ ಬೆಂಬಲ ನೀಡಲಿಲ್ಲ. ಬಳಿಕ ಬಜರಂಗದಳ ಸೇರಿದ್ದೇವೆ’ ಎಂದು ಕಿಶನ್‌ ಮತ್ತು ಧನುಷ್‌ ವಿಚಾರಣೆ ವೇಳೆ ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಖ್ಯಾಂಶಗಳು

* ಜಾತ್ರೆಯಲ್ಲಿ ಒಟ್ಟು ಸೇರಿದ್ದವರಿಂದ ಪ್ರತೀಕಾರದ ಕೃತ್ಯ

* ಎಲ್ಲರೂ ಮತೀಯವಾದಿ ಅಪರಾಧ ಹಿನ್ನೆಲೆಯವರು

* ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲು ಸಿದ್ಧತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT