ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಶಿಫಾರಸು ವಾಪಸ್‌ ಕಳುಹಿಸಿದ ಕೇಂದ್ರ: ಜೋಸೆಫ್‌ ಬಡ್ತಿಗೆ ಸರ್ಕಾರದ ಅಡ್ಡಿ

Last Updated 26 ಏಪ್ರಿಲ್ 2018, 19:38 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಅವರನ್ನು ನೇಮಿಸುವಂತೆ ಕೊಲಿಜಿಯಂ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸ್‌ ಕಳುಹಿಸಿದೆ. ಅವರ ಬಡ್ತಿ ‘ಸಮರ್ಪಕ’ ಅಲ್ಲ ಎಂದು ಹೇಳಿದೆ.

ಈ ನಿರ್ಧಾರಕ್ಕೆ ವಕೀಲ ಸಮುದಾಯ ಮತ್ತು ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ‘ಕೇಂದ್ರ ಸರ್ಕಾರವು ನ್ಯಾಯಾಂಗದ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಧ್ವಂಸ ಮಾಡಲು ಹೊರಟಿದೆ’ ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸಿದೆ.

ಆದರೆ, ಕೊಲಿಜಿಯಂ ಮುಖ್ಯಸ್ಥ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ಬೆಂಬಲ ಸರ್ಕಾರಕ್ಕೆ ದೊರೆತಿದೆ. ಜೋಸೆಫ್‌ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಇಂದೂಮಲ್ಹೋತ್ರಾ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿತ್ತು. ಅದರಲ್ಲಿ ಒಬ್ಬರ ನೇಮಕ ಮಾಡಿ ಇನ್ನೊಬ್ಬರ ಬಗೆಗಿನ ಶಿಫಾರಸನ್ನು ಮರುಪರಿಶೀಲಿಸುವಂತೆ ಸೂಚಿಸುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಮಿಶ್ರಾ ಹೇಳಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ರಾಷ್ಟ್ರಪತಿ ಮತ್ತು ಪ್ರಧಾನಿಯ ಅನುಮೋದನೆ ಇದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್‌ ಅವರು ಮಿಶ್ರಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ದೀರ್ಘ ಕಾಲದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಪ್ರಾತಿನಿಧ್ಯವೇ ಇಲ್ಲ ಎಂಬ ಅಂಶವನ್ನೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಮುಂದೇನು: ಜೋಸೆಫ್‌ ಅವರ ಹೆಸರನ್ನು ಮತ್ತೆ ಶಿಫಾರಸು ಮಾಡುವ ಅಧಿಕಾರ ಕೊಲಿಜಿಯಂಗೆ ಇದೆ. ಕೊಲಿಜಿಯಂ ಹಟ ಹಿಡಿದರೆ ಸರ್ಕಾರ ನೇಮಕ ಮಾಡಲೇ ಬೇಕು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಿರಸ್ಕರಿಸಲು ಕಾರಣ

ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಹಿರಿತನ ಪಟ್ಟಿಯಲ್ಲಿ ಜೋಸೆಫ್‌ ಅವರದ್ದು 42ನೇ ಹೆಸರು. ಮುಖ್ಯ ನ್ಯಾಯಮೂರ್ತಿಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡರೂ ಜೋಸೆಫ್‌ ಅವರು ಹಿರಿತನದಲ್ಲಿ 11ನೆಯವರು.

ಜೋಸೆಫ್‌ ಅವರು ಕೇರಳ ಹೈಕೋರ್ಟ್‌ನಿಂದ ಬಂದವರು. ಈ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಸಾಕಷ್ಟು ಪ್ರಾತಿನಿಧ್ಯ ಇದೆ. ಕೋಲ್ಕತ್ತ, ಛತ್ತೀಸಗಡ, ಗುಜರಾತ್‌, ರಾಜಸ್ಥಾನ, ಜಾರ್ಖಂಡ್‌, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಸಿಕ್ಕಿಂ, ಮಣಿಪುರ ಮತ್ತು ಮೇಘಾಲಯ ಹೈಕೋರ್ಟ್‌ಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯ ಹೊಂದಿಲ್ಲ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ನ್ಯಾಯಮೂರ್ತಿಗಳು ಬಹಳ ಕಾಲದಿಂದಲೂ ಸುಪ್ರೀಂ ಕೋರ್ಟ್‌ನಲ್ಲಿ ಇಲ್ಲ. ಹಾಗಾಗಿ ಜೋಸೆಫ್‌ ಬದಲಿಗೆ ಈ ಸಮುದಾಯಗಳಿಗೆ ಸೇರಿದವರಿಗೆ ಆದ್ಯತೆ ನೀಡುವುದು ಉತ್ತಮ ಎಂಬ ಅರ್ಥದ ಸಲಹೆಯನ್ನು ಕೇಂದ್ರ ನೀಡಿದೆ.

ಶಿಫಾರಸಿನಲ್ಲಿ ಏನಿತ್ತು

ಹೈಕೋರ್ಟ್‌ಗಳ ಇತರ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಿರಿಯ ನ್ಯಾಯಮೂರ್ತಿಗಳಿಗಿಂತ ಸುಪ‍್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೇರಲು ಜೋಸೆಫ್‌ ಅವರು ಎಲ್ಲ ರೀತಿಯಲ್ಲಿಯೂ ಹೆಚ್ಚು ಸೂಕ್ತವಾಗಿದ್ದಾರೆ. ಅವರು ಅತ್ಯುತ್ತಮ ಆಯ್ಕೆ ಎಂದು ಶಿಫಾರಸಿನಲ್ಲಿ ಕೊಲಿಜಿಯಂ ಹೇಳಿತ್ತು.

ಈ ನಿರ್ಧಾರ ಕೈಗೊಳ್ಳುವಾಗ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಿರಿಯ ನ್ಯಾಯಮೂರ್ತಿಗಳ ಹಿರಿತನವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದೂ ಸ್ಪಷ್ಟವಾಗಿ ತಿಳಿಸಿತ್ತು.

ಉತ್ತರಾಖಂಡದಲ್ಲಿ ಅಧಿಕಾರದಲ್ಲಿದ್ದ ಹರೀಶ್‌ ರಾವತ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿದ ನಿರ್ಧಾರವನ್ನು ಉತ್ತರಾಖಂಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ನೇತೃತ್ವದ ಪೀಠವು 2016ರಲ್ಲಿ ರದ್ದು ಮಾಡಿತ್ತು. ರಾವತ್‌ ಸರ್ಕಾರವನ್ನು ಮರುಸ್ಥಾಪಿಸಿತ್ತು. ಹೈಕೋರ್ಟ್‌ ನಿರ್ಧಾರದಿಂದಾಗಿ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿತ್ತು. ಬಳಿಕ, ಜೋಸೆಫ್‌ ಅವರನ್ನು ಆಂಧ್ರಪ್ರದೇಶ ಹೈಕೋರ್ಟ್‌ಗೆ ವರ್ಗಾ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿತ್ತು. ಅದನ್ನು ಕೇಂದ್ರ ತಡೆ ಹಿಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT