ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇ‍ಪಾಳದಲ್ಲಿರುವ 336 ಕನ್ನಡಿಗರು ಸುರಕ್ಷಿತ

Last Updated 25 ಏಪ್ರಿಲ್ 2015, 20:16 IST
ಅಕ್ಷರ ಗಾತ್ರ

ಬೆಂಗಳೂರು: ನೇಪಾಳ ಪ್ರವಾಸಕ್ಕೆ ತೆರಳಿದ 336 ಮಂದಿ ಕನ್ನಡಿಗರು ಸುರಕ್ಷಿತವಾಗಿದ್ದರೆ. ಬೆಂಗಳೂರಿನ 85, ಬೆಳಗಾವಿಯ 35, ಧಾರವಾಡದ 27, ಮೈಸೂರಿನ 20, ಹಾಸನದ 120, ತುಮಕೂರು ಹಾಗೂ ಕೋಲಾರ ಜಿಲ್ಲೆಯ 35 ಮತ್ತು ವಿಜಯಪುರ ಜಿಲ್ಲೆಯ 11 ಮಂದಿ  ಮಂದಿ ತಾವು ಸುರಕ್ಷಿತವಾಗಿದ್ದಾರೆ ಎಂದು ಕುಟುಂಬದವರಿಗೆ ತಿಳಿಸಿದ್ದಾರೆ

ಮೈಸೂರು ವರದಿ
ನೇಪಾಳ ಪ್ರವಾಸಕ್ಕೆ ತೆರಳಿದ್ದ ಮೈಸೂರಿನ 20 ಮಂದಿ ಸುರಕ್ಷಿತವಾಗಿದ್ದಾರೆ.  ಭೂಕಂಪ ಸಂಭವಿಸುವುದಕ್ಕೂ ಮುನ್ನವೇ ಕಠ್ಮಂಡುವಿನಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದರಿಂದ ಕುಟುಂಬದ ಸದಸ್ಯರಲ್ಲಿ ಶನಿವಾರ ಬೆಳಿಗ್ಗೆಯಿಂದ ಮೂಡಿದ್ದ ಆತಂಕ ಸಂಜೆಯ ಬಳಿಕ ನಿವಾರಣೆಯಾಗಿದೆ.

ಪಡುವಾರಹಳ್ಳಿಯ ನಾಗರಾಜು ಅವರು ಶನಿವಾರ ಸಂಜೆ ಕುಟುಂಬದ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಸುರಕ್ಷಿತವಾಗಿರುವ ಮಾಹಿತಿ ನೀಡಿದ್ದಾರೆ. ‘ಕಠ್ಮಂಡುವಿನಿಂದ ಬೆಳಿಗ್ಗೆಯೇ ಹೊರಟಿದ್ದು, ಭಾರತದ ಗಡಿಗೆ ಸಮೀಪದಲ್ಲಿ ಇದ್ದೇವೆ. ದೆಹಲಿ ಮೂಲಕ ನಿಗದಿತ ಸಮಯಕ್ಕೆ ಮೈಸೂರಿಗೆ ಮರಳುತ್ತೇವೆ’ ಎಂದು ತಿಳಿಸಿದ್ದಾರೆ.

ಪಡುವಾರಹಳ್ಳಿಯ ಸುವರ್ಣಾಂಬೆ (45), ಅವರ ಪತಿ ನಾಗರಾಜು (60), ಪುತ್ರಿ ದುರ್ಗಾ (13), ಸಹೋದರಿ ಪುಷ್ಪಲತಾ (40), ಸಂಬಂಧಿಕರಾದ ರೋಹಿಣಿ (25), ಇವರ ಪತಿ ಮಂಜುನಾಥ (32), ಪುತ್ರಿ ಮಿಂಚು (8), ಸತೀಶ್‌ (50), ಪಡುವಾರಹಳ್ಳಿಯ ಲೇವಾದೇವಿದಾರ ಶಶಿ, ಶಾರದಾದೇವಿನಗರದ ಎಲೆಕ್ಟ್ರೀಷಿಯನ್‌ ಚಂದ್ರು, ಹೂಟಗಳ್ಳಿಯ ಇಂದು, ಅವರ ಪತಿ, ಇಬ್ಬರು ಮಕ್ಕಳು ಹಾಗೂ ಇತರ ಆರು ಮಂದಿ ಮೈಸೂರಿನಿಂದ ಉತ್ತರ ಭಾರತಕ್ಕೆ ಏ. 15ರಂದು ಪ್ರವಾಸ ಕೈಗೊಂಡಿದ್ದರು.

ಬೆಂಗಳೂರಿನ ಕರ್ನಾಟಕ ಕಿಸಾನ್‌ ಸಂಘದ ವತಿಯಿಂದ ಈ ಪ್ರವಾಸವನ್ನು ಆಯೋಜಿಸಲಾಗಿತ್ತು. 15 ದಿನಗಳ ಈ ಪ್ರವಾಸದಲ್ಲಿ ನೇಪಾಳ ಕೂಡ ಸೇರಿತ್ತು. ಬೆಂಗಳೂರಿನಿಂದ ಒಡಿಶಾದ ಭುವನೇಶ್ವರಕ್ಕೆ ರೈಲಿನಲ್ಲಿ ತೆರಳಿ, ಅಲ್ಲಿಂದ ಬಿಹಾರದ ಗಯಾ, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಉತ್ತರ ಪ್ರದೇಶದ ವಾರಣಾಸಿ ಮತ್ತು ಕಾಶಿಯನ್ನು ನೋಡಿಕೊಂಡು ಏ. 23ರಂದು ಕಠ್ಮಂಡು ತಲುಪಿದ್ದರು. ನೇಪಾಳದ ಪವಿತ್ರ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ದೆಹಲಿ ಮೂಲಕ ಏ. 30ಕ್ಕೆ ಮೈಸೂರಿಗೆ ಮರಳುವ ಯೋಜನೆ ಹಾಕಿಕೊಂಡಿದ್ದರು.

‘ಮಧ್ಯಾಹ್ನ 1.35ಕ್ಕೆ ಅಕ್ಕನ ಮಗಳು ದುರ್ಗಾ ದೂರವಾಣಿ ಕರೆ ಮಾಡಿ ಸುರಕ್ಷಿತವಾಗಿ ಇರುವುದಾಗಿ ಮಾಹಿತಿ ನೀಡಿದಳು. ಆದರೆ, ಆಬಳಿಕ ಮತ್ತೆ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ, ಎಲ್ಲರೂ ಆತಂಕಗೊಂಡಿದ್ದೆವು. ಭಾರತದ ಗಡಿ ಸಮೀಪಕ್ಕೆ ಬಂದಿರುವ ಕಾರಣಕ್ಕೆ ಈಗ ಆತಂಕ ನಿವಾರಣೆಯಾಗಿದೆ’ ಎಂದು ಸುವರ್ಣಾಂಬೆ ಅವರ ಸಹೋದರ ಮಹದೇವ ನಂದೀಶ್‌ ತಿಳಿಸಿದ್ದಾರೆ.

ತುಮಕೂರು ವರದಿ
ನೇಪಾಳಕ್ಕೆ ತೆರಳಿದ್ದ ತುಮಕೂರು ಹಾಗೂ ಕೋಲಾರ ಜಿಲ್ಲೆಯ 35 ಮಂದಿ ಶನಿವಾರ ಕಠ್ಮಂಡುವಿನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಪಾರಾಗಿದ್ದಾರೆ.

ತುಮಕೂರು ತಾಲ್ಲೂಕು ಕಾಳೇನಹಳ್ಳಿ ವೀರಭದ್ರಸ್ವಾಮಿ ಪ್ಯಾಕೇಜ್‌ ಟೂರ್‌ ಸಂಸ್ಥೆ ಏ. 16ರಂದು 35 ಜನರನ್ನು ದೆಹಲಿ, ಕಠ್ಮಂಡು, ಕಾಶಿ, ಸಾರನಾಥ, ರಾಮನಗರ, ಗಯಾ–ಬುದ್ಧಗಯಾ, ಸೀತಾಮಡಿ, ಅಲಹಾಬಾದ್‌, ಅಯೋಧ್ಯೆ, ಗೋರಕ್‌ಪುರ ಸೇರಿದಂತೆ ಇತರೆ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೋಯ್ದಿತ್ತು. ಶಿಕ್ಷಕ ರೇಣುಕಾ ಪ್ರಸಾದ್‌ ಆಯೋಜಿಸಿದ್ದ ಪ್ಯಾಕೇಜ್‌ ಟೂರ್‌ನಲ್ಲಿ ತುಮಕೂರು, ಕೋಲಾರ, ಬೆಂಗಳೂರಿನ 35 ಮಂದಿ ತೆರಳಿದ್ದರು.

ಭೂಕಂಪ ಸಂಭವಿಸಿದ ಅವಧಿಯಲ್ಲಿ ಪ್ರವಾಸಿಗರಿದ್ದ ಬಸ್‌ ಕಠ್ಮಂಡುವಿನಿಂದ 100 ಕಿ.ಮೀ ದೂರದಲ್ಲಿತ್ತು. ಹಾಗಾಗಿ ಯಾವುದೇ ಅವಘಡ ಸಂಭವಿಸಿಲ್ಲ ಎಂದು ತಂದೆ ರೇಣುಕಾ ಪ್ರಸಾದ್‌ ಮಧ್ಯಾಹ್ನ 3.30ಕ್ಕೆ ಕರೆ ಮಾಡಿ ತಿಳಿಸಿದರು ಎಂದು ಅವರ ಪುತ್ರ ಚಂದನ್‌ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರೇಣುಕಾ ಪ್ರಸಾದ್‌ ಅವರ ಮೊಬೈಲ್‌ ಸಂಖ್ಯೆ ಸಂಪರ್ಕಕ್ಕೆ ಸಿಗಲಿಲ್ಲ. ಜಿಲ್ಲೆಯಿಂದ ನೇಪಾಳಕ್ಕೆ ಹೋದ ಪ್ರವಾಸಿಗರ ಬಗ್ಗೆ ಈವರೆಗೂ ಪೊಲೀಸ್‌ ನಿಯಂತ್ರಣ ಕೊಠಡಿಗೆ ಯಾವುದೇ ಮಾಹಿತಿ ಬಂದಿಲ್ಲ. ನೇಪಾಳಕ್ಕೆ ಹೋದವರ ಬಗ್ಗೆ ತಿಳಿದುಕೊಳ್ಳಲು ವಿದೇಶಾಂಗ ಸಚಿವಾಲಯದ ಸಹಾಯವಾಣಿ ಸಂಖ್ಯೆ 011–23012113, 23014104 ಸಂಪರ್ಕಿಸಬಹುದು ಎಂದು ಎಸ್‌ಪಿ  ಕಾರ್ತಿಕ್‌ ರೆಡ್ಡಿ ತಿಳಿಸಿದರು.

ಹಾಸನ ವರದಿ
ನಗರದ ಮರ್ಚೆಂಟ್ಸ್‌ ಕ್ಲಬ್‌ ನೇತೃತ್ವದಲ್ಲಿ ಹಾಸನದಿಂದ ನೇಪಾಳ ಪ್ರವಾಸಕ್ಕೆ ತೆರಳಿದ್ದ 120 ಜನರ ತಂಡವೊಂದು ಸ್ವಲ್ಪದರಲ್ಲೇ ಭೂಕಂಪದ ಅಪಾಯದಿಂದ ಪಾರಾಗಿದೆ.

ಹಾಸನದಿಂದ ಏ.12ರಂದು ಎರಡು ಬಸ್ಸುಗಳಲ್ಲಿ ಪ್ರಯಾಣ ಆರಂಭಿಸಿದ ಸದಸ್ಯರು, ಶನಿವಾರ ಭಾರತ ಮತ್ತು ನೇಪಾಳ ಗಡಿ ಪ್ರದೇಶಕ್ಕೆ ತಲುಪಿದ್ದರು. ಮಧ್ಯಾಹ್ನ 2 ಗಂಟೆಗೆ ಕಠ್ಮುಂಡುವಿನಲ್ಲಿ ಭೂಕಂಪದ ಮಾಹಿತಿ ಲಭಿಸಿದ್ದರಿಂದ ತಮ್ಮ ಪ್ರವಾಸದ ಮಾರ್ಗ ಬದಲಿಸಿ ಕಾಶಿಯತ್ತ ತೆರಳಿದ್ದಾರೆ. ಪ್ರವಾಸದಲ್ಲಿದ್ದ ಕೆಲವರು ಹಾಸನದ ತಮ್ಮ ಕುಟುಂಬದವರಿಗೆ ಈ ಮಾಹಿತಿ ನೀಡಿದ್ದಾರೆ.

ಅಂಕಿಅಂಶ
20
 ನೇಪಾಳ ಪ್ರವಾಸಕ್ಕೆ ತೆರಳಿದ್ದ ಮೈಸೂರಿನವರು
35 ನೇಪಾಳಕ್ಕೆ ತೆರಳಿದ್ದ ತುಮಕೂರು ಹಾಗೂ ಕೋಲಾರ ಜಿಲ್ಲೆಯವರು
120 ನೇಪಾಳಕ್ಕೆ ತೆರಳಿದ ಹಾಸನದ ತಂಡ

ರಾಜ್ಯದ ಸಹಾಯವಾಣಿ
ನೇಪಾಳ ಹಾಗೂ ಉತ್ತರ ಭಾರತದಲ್ಲಿ ಸಿಲುಕಿರುವ ಕನ್ನಡಿಗರಿಗೆ   ನೆರವು ನೀಡಲು ಕರ್ನಾಟಕ ರಾಜ್ಯವು ಸಹಾಯವಾಣಿ ಆರಂಭಿಸಿದೆ.  ಸಹಾಯವಾಣಿ ಸಂಖ್ಯೆ: 1070/ 08022340676/ 22032582/ 22353980

ಬಿಎಸ್‌ಎನ್‌ಎಲ್‌ ಮುಂದಿನ ಮೂರು ದಿನಗಳ ವರೆಗೆ ನೇಪಾಳಕ್ಕೆ ಮಾಡುವ ಕರೆಯನ್ನು ಸ್ಥಳೀಯ ಕರೆಯನ್ನಾಗಿ ಪರಿಗಣಿಸಲಿದೆ ಎಂದು ಪ್ರಕಟಣೆ ತಿಳಿಸಿದೆ. ಏರ್‌ಟೆಲ್‌ ಸಂಸ್ಥೆಯು ಮುಂದಿನ 48 ಗಂಟೆಗಳ ವರೆಗೆ ನೇಪಾಳಕ್ಕೆ ಉಚಿತ ಕರೆ ಮಾಡುವ ಸೌಲಭ್ಯ ಒದಗಿಸಿದೆ.

ಕೇಂದ್ರದ ಸಹಾಯವಾಣಿ ಆರಂಭ
ಭೂಕಂಪ ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು ಹಾಗೂ ಮಾಹಿತಿಯನ್ನು ಒದಗಿಸಲು ಭಾರತದ ವಿದೇಶಾಂಗ ಸಚಿವಾಲಯ 24 ಗಂಟೆಗಳ ಕಾಲ ಸಹಾಯವಾಣಿಯನ್ನು ಆರಂಭಿಸಿದೆ. ಸಹಾಯವಾಣಿ ಸಂಖ್ಯೆ: +9111 2301 2113, +9111 2301 4104 ಹಾಗೂ +91112301 7905

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT