ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls HIGHLIGHTS: 2ನೇ ಹಂತ ಶೇ 60ರಷ್ಟು ಮತದಾನ; ತ್ರಿಪುರಾದಲ್ಲಿ ಗರಿಷ್ಠ

Published 26 ಏಪ್ರಿಲ್ 2024, 15:08 IST
Last Updated 26 ಏಪ್ರಿಲ್ 2024, 15:08 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಶುಕ್ರವಾರ ನಡೆದಿದ್ದು, ಬಿಸಿಲ ಝಳ ಹಾಗೂ ಅಲ್ಲಲ್ಲಿ ಸಣ್ಣ ಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಕೊನೆಗೊಂಡಿತು.

ದೇಶದ 13 ರಾಜ್ಯಗಳ 88 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಅಲ್ಲಲ್ಲಿ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟವು. ಕೇರಳ ಹಾಗೂ ಪಶ್ಚಿಮ ಬಂಗಾಳದ ಕೆಲವೆಡೆ ಬೋಗಸ್ ಮತದಾನ ನಡೆದ ಕುರಿತೂ ವರದಿಯಾಗಿದೆ. ಉತ್ತರಪ್ರದೇಶದ ಮಥುರಾ, ರಾಜಸ್ಥಾನದ ಬನ್ಸ್ವಾರಾ, ಮಹಾರಾಷ್ಟ್ರದ ಪರ್ಭನಿ, ತ್ರಿಪುರಾದ ಕೆಲ ಪ್ರದೇಶಗಳಲ್ಲಿ ಮತದಾನ ಬಹಿಷ್ಕರಿಸಿದ ಉದಾಹರಣೆಗಳೂ ನಡೆದವು.

ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಸಂಜೆ 6ರವರೆಗೂ ನಡೆಯಿತು. ಬಿಸಿಲ ಝಳದ ನಡುವೆಯೂ ತ್ರಿಪುರಾದಲ್ಲಿ ಅತ್ಯಧಿಕ ಶೇ 77.53ರಷ್ಟು ಮತದಾನವಾಗಿದೆ. ಉತ್ತರ ಪ್ರದೇಶದಲ್ಲಿ ಕನಿಷ್ಠ ಶೇ 52.74ರಷ್ಟು ಮತದಾನ ಇದೆ. 

ಕೇರಳದ 20, ಕರ್ನಾಟಕದ 14, ರಾಜಸ್ಥಾನದ 13, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ತಲಾ 8, ಮಧ್ಯಪ್ರದೇಶದ 6, ಅಸ್ಸಾಂ ಹಾಗೂ ಬಿಹಾರದ ತಲಾ 5, ಛತ್ತೀಸಗಢ ಮತ್ತ ಪಶ್ಚಿಮ ಬಂಗಾಳದ ತಲಾ 3, ಮಣಪುರ, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಿತು.

2ನೇ ಹಂತದಲ್ಲಿ ಕಣದಲ್ಲಿ ಹಲವು ಪ್ರಮುಖರು

ಕಾಂಗ್ರೆಸ್ ಮುಖಂಡ ಶಶತಿ ತರೂರ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ನಟ ಅರುಣ ಗೋವಿಲ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋದರ ಡಿ.ಕೆ.ಸುರೇಶ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಹೇಮಾ ಮಾಲಿನಿ, ಓಂ ಬಿರ್ಲಾ, ಗಜೇಂದ್ರ ಸಿಂಗ ಶೇಖಾವತ್ ಹಾಗೂ ಇತರ ಪ್ರಮುಖರು ಕಣದಲ್ಲಿದ್ದರು.

ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.

ಕೇರಳದಲ್ಲಿ ಶೇ 63.97ರಷ್ಟು ಮತದಾನವಾಗಿದೆ. ಅಲ್ಲಲ್ಲಿ ಇವಿಎಂಗಳು ಕೈಕೊಟ್ಟು ಕೆಲಕಾಲ ಮತದಾನಕ್ಕೆ ಸಮಸ್ಯೆ ಉಂಟಾಯಿತು. ಪಾಲಕ್ಕಾಡ್, ಅಲಪ್ಪುಳ, ಮಲಪ್ಪುರಂನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕೋಯಿಕ್ಕೋಡ್‌ನಲ್ಲಿ ಪೋಲಿಂಗ್ ಬೂತ್ ಏಜೆಂಟ್ ಮೃತಪಟ್ಟಿರುವುದಾಗಿ ವರದಿಯಾಗಿದೆ.

ತ್ರಿಪುರ ಪೂರ್ವ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5ರ ಹೊತ್ತಿಗೆ ದಾಖಲೆಯ ಶೇ 77.53ರಷ್ಟು ಮತದಾನವಾಗಿತ್ತು. ಕೆಲ ಬೂತ್‌ಗಳಲ್ಲಿ ಮಾತ್ರ ಸಮಸ್ಯೆ ಕಂಡುಬಂತು.

ಗುಂಡು ಹಾರಿಸಿಕೊಂಡು ಮೃತಪಟ್ಟ ಕರ್ತವ್ಯ ನಿರತ ಯೋಧ

ಛತ್ತೀಸಗಢದ ಗರಿಯಾಬಂದ್ ಜಿಲ್ಲೆಯಲ್ಲಿ ಶಾಲೆಯೊಂದರಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಧ್ಯಪ್ರದೇಶದ ವಿಶೇಷ ಸಶಸ್ತ್ರ ಪಡೆಯ ಯೋಧ ತನ್ನ ಸೇವಾ ರಿವಾಲ್ವಾರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಸಂಜೆ 5ರ ಹೊತ್ತಿಗೆ ಶೇ 72.13ರಷ್ಟು ಮತದಾನವಾಗಿತ್ತು.

ಕನಕೇರ್ ಕ್ಷೇತ್ರ ವ್ಯಾಪ್ತಿಯ ಬಲೋದ್ ಜಿಲ್ಲೆಯ ಸಿವ್ನಿ ಗ್ರಾಮದಲ್ಲಿ ಮತಗಟ್ಟೆಯನ್ನು ಮದುವೆ ಮಂಟಪದಂತೆ ಸಿಂಗರಿಸಲಾಗಿತ್ತು. ಕೆಲ ವಧು, ವರರು ಮದುವೆ ವಸ್ತ್ರಾಭರಣದಲ್ಲೇ ಮತಗಟ್ಟೆಗೆ ಭೇಟಿ ನೀಡಿ ತಮ್ಮ ಹಕ್ಕುಗಳನ್ನು ಚಲಾಯಿಸಿದರು.

ಮಧ್ಯಪ್ರದೇಶದಲ್ಲಿ ಶೇ 54.83ರಷ್ಟು ಮತದಾನವಾಗಿದೆ. ಅಸ್ಸಾಂನಲ್ಲಿ ಶೇ 70.66ರಷ್ಟು, ಮಣಿಪುರದಲ್ಲಿ ಶೇ 76.06ರಷ್ಟು, ಕರ್ನಾಟಕದಲ್ಲಿ ಶೇ 63.90ರಷ್ಟು ಮತದನವಾಗಿತ್ತು. ಸಂಜೆ 5ರೊಳಗೆ ಮತಗಟ್ಟೆಯೊಳಗೆ ಪ್ರವೇಶಿಸಿದವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಧರ್ಮದ ಆಧಾರದಲ್ಲಿ ಮತಯಾಚಿಸಿದ ಆರೋಪದಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ. ಬೆಂಗಳೂರಿನ ಕೆಲ ಹೋಟೆಲ್‌ಗಳು ಮತ ಹಾಕಿದವರಿಗೆ ಉಚಿತ ಉಪಾಹಾರ ನೀಡಿ, ಮತದಾನ ಉತ್ತೇಜಿಸಿದ ಉದಾಹರಣೆಗಳು ನಡೆದಿವೆ.

ರಾಜಸ್ಥಾನದ ಬಾರ್ಮೆರ್–ಜೈಸಲ್ಮೇರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಕೆಲವೆಡೆ ಬೋಗಸ್ ಮತದಾನವಾಗಿರುವ ಕುರಿತು ದೂರುಗಳು ದಾಖಲಾಗಿವೆ.

ಹಿರಿಯ ನಾಗರಿಕರಿಗೆ ಬ್ಯಾಟರಿ ಚಾಲಿತ ವಾಹನ

ಉತ್ತರಪ್ರದೇಶದಲ್ಲಿ ಶೇ 52.74ರಷ್ಟು ಮತದಾನವಾಗಿದೆ. ನೊಯಿಡಾದಲ್ಲಿ ಬೆಳಿಗ್ಗೆ ಮತದಾನ ಆರಂಭವಾಗುತ್ತಿದ್ದಂತೆ ಹಿರಿಯ ನಾಗರಿಕರು ಮತ ಚಲಾಯಿಸಲು ಉತ್ಸುಕತೆ ತೋರಿದ್ದು ಕಂಡುಬಂತು. ಇವರಿಗಾಗಿ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಬಿಹಾರದಲ್ಲಿ ಶೇ 53.03ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇ 71.84ರಷ್ಟು, ಜಮ್ಮು ಹಾಗೂ ಕಾಶ್ಮೀರದಲ್ಲಿ ಶೇ 67.9ರಷ್ಟು ಮತದಾನವಾಗಿದೆ. ಮತದಾನದ ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ.

ಕಳೆದ ಶುಕ್ರವಾರ (ಏ. 19) ತಮಿಳುನಾಡಿನ 39, ಉತ್ತರಾಖಂಡ–5, ಅರುಣಾಚಲ ಪ್ರದೇಶ– 2, ಮೇಘಾಲಯ– 2, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ– 1, ಮಿಜೋರಾಂ–1, ನಾಗಾಲ್ಯಾಂಡ್–1, ಪುದುಚೇರಿ–1, ಸಿಕ್ಕೀಂ–1, ಲಕ್ಷದ್ವೀಪ–1 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

3ನೇ ಹಂತದ ಚುನಾವಣೆ ಮೇ 7ರಂದು ನಡೆಯಲಿದೆ. ಕರ್ನಾಟಕದ 14 ಕ್ಷೇತ್ರ ಒಳಗೊಂಡಂತೆ ದೇಶದ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿ 94 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆಗೆ ದಿನಾಂಕ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT