ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾಗಿ ಬಂದಿದ್ದೀರಿ, ಸಂದರ್ಶನ ಕೊಡಲ್ಲ: ಲೋಕಜ್ಜ ಕಲಿಸಿದ ಪಾಠಗಳು...

Last Updated 31 ಡಿಸೆಂಬರ್ 2018, 12:38 IST
ಅಕ್ಷರ ಗಾತ್ರ

ಬೆಳ್ಳಿತೆರೆ ಬೆಳಗಿದಹಿರಿಯ ನಟನನ್ನು ಸಂದರ್ಶನ ಮಾಡುವ ಪುಲಕ ಅನುಭವಿಸುತ್ತಾ ಅವರ ಮನೆ ಬಾಗಿಲ ಕರೆಗಂಟೆ ಬಾರಿಸಿದ ಯುವ ಪತ್ರಕರ್ತೆಗೆ ಸಿಕ್ಕಿದ್ದು ‘ತಡವಾಗಿ ಬಂದಿದ್ದೀರಿ, ಸಂದರ್ಶನ ಕೊಡಲ್ಲ’ ಎನ್ನುವ ಎಚ್ಚರಿಕೆಯ ಪಾಠ. ಆದರೆ ಸಂದರ್ಶನದ ಮಾತು ಉರುಳಿದಂತೆ ದರ್ಶನವಾಗಿದ್ದುಮಾಗಿದ ಮನಸ್ಸಿನ ಅಂತಃಕರಣ. ಹಿರಿಯಜ್ಜನ ಸಂದರ್ಶನ ಮಾಡಿದ ನೆನಪುಗಳನ್ನು ಹಂಚಿಕೊಂಡಿದ್ದಾರೆ ಪತ್ರಕರ್ತೆ ಸುರೇಖಾ ಹೆಗಡೆ.

–––

ಎಳವೆಯಲ್ಲಿನ ಮುಗ್ಧ ಮನಸ್ಸಿಗೆ ಬೆರಗು ಹುಟ್ಟಿಸುತ್ತಿದ್ದುದು ಸಿನಿಮಾಗಳು. ಅದೇ ಬೆರಗಿನಲ್ಲಿ ಕಣ್ತುಂಬಿಕೊಂಡಿದ್ದ ನಟ ಲೋಕನಾಥ. ಖಳ ಪಾತ್ರಗಳಿಗಿಂತಲೂ ಮಿಗಿಲಾಗಿ ಸಭ್ಯ, ಸುಸಂಸ್ಕೃತ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಸಾವಿರಾರು ಸಿನಿಮಾ ಅಭಿಮಾನಿಗಳಿಗೆ ಅಣ್ಣನಾಗಿ, ತಂದೆಯಾಗಿ, ತಾತನಾಗಿ, ಸ್ನೆಹಿತನಾಗಿ ಆಪ್ತವಾಗಿದ್ದರು.

ನಾನು ‘ಪ್ರಜಾವಾಣಿ’ ಪತ್ರಿಕೆಯ ಮೆಟ್ರೊ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ (ಎರಡು ವರ್ಷಗಳ ಹಿಂದೆ) ಲೋಕನಾಥ್ಅವರನ್ನು ನಾ ಕಂಡ ಬೆಂಗಳೂರು ಅಂಕಣಕ್ಕಾಗಿ ಸಂದರ್ಶನ ಮಾಡಿದ್ದೆ. ಅವರಿಗೆ ಕರೆ ಮಾಡಿ (ಲ್ಯಾಂಡ್‌ಲೈನ್ ಮಾತ್ರ ಉಪಯೋಗಿಸುತ್ತಿದ್ದರು) ಸಂದರ್ಶನಕ್ಕೆ ಸಮಯ ನಿಗದಿ ಮಾಡಿಕೊಂಡಾಗ ನನ್ನಲ್ಲಿ ಪುಳಕ. ನೆಚ್ಚಿನ ನಟ, ಚಿಕ್ಕಂದಿನಲ್ಲಿ ನಾವೆಲ್ಲ ಹೇಳುತ್ತಿದ್ದ ಲೋಕನಾಥ ಅಜ್ಜನನ್ನು ಮಾತನಾಡಿಸಲು ಹೋಗುತ್ತಿದ್ದೇನೆಎಂಬುದುನನಗೆವಿಸ್ಮಯದ ಸಂಗತಿಯಾಗಿತ್ತು.

ಅಂದು ಮುಂಜಾನೆ ‘ಪುಟ್ಟಿ’(ಹೆಂಡತಿಯನ್ನುಕರೆಯುತ್ತಿದ್ದಹೆಸರನ್ನೇಮನೆಗೆ ಇಟ್ಟಿದ್ದಾರೆ) ಎನ್ನುವ ಅವರ ಮನೆಯ ಮುಂದೆ ನಿಂತು ಬೆಲ್ ಮಾಡುವಾಗ ನಾನು ಒಂದು ಅಡಿ ಎತ್ತರದಲ್ಲಿದ್ದೇನೆಎನ್ನುವ ಭಾವ ಇತ್ತು. ಆದರೆ ಒಳಗಿನಿಂದ ಬಂದ ಅವರ ಮನೆಯ ಕೆಲಸದವ, ‘ಸರ್ ನಿಮಗೆ 10ಗಂಟೆಗೆ ಬರೋಕೆ ಹೇಳಿದ್ದರು. ಈಗ 10.05ಆಗಿದೆ. ತಡವಾಗಿ ಬಂದಿದ್ದಕ್ಕೆ ಸಂದರ್ಶನನೀಡುವುದಿಲ್ಲ ಎಂದಿದ್ದಾರೆ. ನೀವಿನ್ನು ಹೊರಡಿ’ಎಂದುಬಿಟ್ಟರು. ಮನೆ ಹುಡುಕಲಾರದೆ ಅದೇ ಬೀದಿಯಲ್ಲಿ ಅರ್ಧಗಂಟೆಯಿಂದ ಸುತ್ತಾಡುತ್ತಿದ್ದೆವು ಎಂದು ತಿಳಿಸಿದ ಮೇಲೆ ಮನೆ ಪ್ರವೇಶಿಸಲು ಒಪ್ಪಿಗೆ ಸಿಕ್ಕಿತು.

ಬಾಗಿಲು ದಾಟುತ್ತಿದ್ದಂತೆ ಪುಟ್ಟ ಹಾಲ್‌ನಲ್ಲಿಕಣ್ಣಿಗೆ ಬಿದ್ದಿದ್ದು ದೊಡ್ಡ ಅಕ್ವೇರಿಯಂ. ಅತ್ತಿತ್ತ ಓಡಾಡುವ ಬಣ್ಣಬಣ್ಣದ ಮೀನುಗಳತ್ತ ಕಣ್ಣು ಸಾಗುವ ಹೊತ್ತಿಗೆ ‘ಕುಳಿತುಕೊಳ್ಳಿ’ಎನ್ನುವ ಲೋಕಜ್ಜನ ದನಿ. ನಿಧಾನವಾಗಿ ನಡೆದುಬಂದ ಅವರದ್ದು ಗಂಭೀರ ವದನ. ‘ನೀವೆಲ್ಲ ಚಿಕ್ಕವರು. ಈಗಿನಿಂದಲೇ ಸಮಯಕ್ಕೆ ಹೆಚ್ಚು ಬೆಲೆ ಕೊಡಬೇಕು. ಶೂಟಿಂಗ್‌ಗೆ ಹೋಗೋಕೆ ಕಾರಿನವ ಐದು ನಿಮಿಷ ತಡವಾಗಿ ಬಂದರೂ ನಾನು ಸಹಿಸುತ್ತಿರಲಿಲ್ಲ. ನಾನು ಮುಲಾಜಿಲ್ಲದೆ ಮಾತನಾಡಿಬಿಡುತ್ತೇನೆ. ಹೀಗಾಗಿ ನನ್ನನ್ನು ಬೈದುಕೊಳ್ಳುವವರೂ ಅನೇಕರಿದ್ದಾರೆ’ಎಂದುತಮ್ಮದು ಖಡಕ್ ವ್ಯಕ್ತಿತ್ವ ಎನ್ನುವುದನ್ನು ಬಿಚ್ಚಿಟ್ಟರು.

ಕುಶಲೋಪರಿ ವಿಚಾರಿಸುತ್ತ ಮೊದಲು ಅವರು ಕೇಳಿದ್ದು ಯಾವೆಲ್ಲಾ ಸ್ಥಳಗಳನ್ನು ನೋಡಿದ್ದೀರಿ ಎನ್ನುವ ಪ್ರಶ್ನೆ. ಮಂತ್ರಾಲಯ ಸೇರಿದಂತೆ ಅವರು ಕೇಳಿದ ಕೆಲವು ಪ್ರದೇಶಗಳನ್ನು ನಾನು ನೋಡಿಲ್ಲ ಎಂದೆ. ‘ದೇಶ ಸುತ್ತು, ಕೋಶ ಓದು ಅಂತ ಕೇಳಿಲ್ವೇ. ನಮ್ಮ ಕೈಲಿ ಎಷ್ಟಾಗತ್ತೋ ಅಷ್ಟು ಸುತ್ತಾಡಬೇಕು. ಅದೇ ನಮಗೆ ಆಸ್ತಿ’ಎಂದು ಕಿವಿಮಾತು ಹೇಳಿದರು.

ಅಲ್ಲಿಂದ ಸುಮಾರು ಒಂದುವರೆ ಗಂಟೆಗಳ ಕಾಲ ಬೆಂಗಳೂರಿನ ಸೊಬಗು, ಬಾಲ್ಯದ ನೆನಪು, ಸಿನಿಮಾ ಬದುಕಿನ ಬಗ್ಗೆ ಮಾತನಾಡಿದರು. ಬಾಲ್ಯದಲ್ಲಿನ ತನ್ನಲ್ಲಿದ್ದ ತುಂಟತನದ ಬಗೆಗೆ ತಾವೇಆಶ್ಚರ್ಯಪಟ್ಟುಕೊಳ್ಳುತ್ತಿದ್ದರು.ಕ್ರಿಕೆಟ್, ಫುಟ್‌ಬಾಲ್ ಹೀಗೆ ಕ್ರೀಡೆಯ ಬಗ್ಗೆತಮಗಿದ್ದ ವಿಶೇಷ ಆಸಕ್ತಿಯನ್ನು ನೆನಪಿಸಿಕೊಂಡು ಹಿಗ್ಗಿದರು. ಕಟ್ಟುಮಸ್ತಾಗಿದ್ದ ತಾನು ಮಾತಾತ್ತಿದರೆ ಹೊಡೆದಾಟಕ್ಕೆ ಹೋಗುವಷ್ಟು ಪುಂಡನಾಗಿದ್ದೆ. ಬಾಲ್ಯದಲ್ಲಿ ಮಾಡಿದ ಕಿತಾಪತಿಗೆ ಲೆಕ್ಕವೇ ಇಲ್ಲ. ಈಗ ನೆನಪಿಸಿಕೊಂಡರೆ ನನಗೇಆಶ್ಚರ್ಯವಾಗುತ್ತೆ’ಎನ್ನುತಿದ್ದರು.

ಕೆ.ವಿ.ಅಯ್ಯರ್ ಅವರ ವ್ಯಾಯಾಮ ಶಾಲೆ ಹಾಗೂ ರಂಗಭೂಮಿ ನಂಟು ನನ್ನ ಆಟ, ಹುಡುಗಾಟಗಳಿಗೆ ಬ್ರೇಕ್ ಹಾಕಿತು. ಅಲ್ಲಿ ಕಲಿತ ಪಾಠಗಳೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿವೆ ಎಂಬುದನ್ನು ಸ್ಮರಿಸಿಕೊಂಡರು. ಆಗೆಲ್ಲ ಸೆಟ್‌ಗಳಲ್ಲಿಯೇ, ಕೆಲವೊಮ್ಮೆ ನಮ್ಮ ದೇಶದಲ್ಲಿಯೇ ಇರುವ ಸ್ಥಳಗಳಲ್ಲಿ ಸಿನಿಮಾ ಚಿತ್ರೀಕರಿಸುತ್ತಿದ್ದರು. ಹೀಗಿದ್ದೂ ಉತ್ತಮ ಸಿನಿಮಾಗಳು ಬರುತ್ತಿದ್ದವು. ಈಗ ವಿದೇಶಕ್ಕೆ ಹೋಗಿ ಶೂಟಿಂಗ್ ಮಾಡುವುದು ಶೋಕಿ ಎಂದು ಬದಲಾದ ವಿದ್ಯಮಾನದ ಬಗೆಬೇಸರವನ್ನೂ ತೋಡಿಕೊಂಡಿದ್ದರು.

ಹೆಚ್ಚಿನ ಸಿನಿಮಾಗಳಲ್ಲಿ ಪೋಷಕ ನಟನಾಗಿಯೇ ಕಾಣಿಸಿಕೊಂಡ ಅವರು, ‘ಇಂಥ ಪಾತ್ರಗಳೇ ನನಗೆ ಕರ್ನಾಟಕದತುಂಬೆಲ್ಲಾ ಸಾವಿರಾರು ಬಂಧುಗಳನ್ನು ಕೊಟ್ಟಿತು. ಎಲ್ಲಿಗೆಹೋದರೂನಿಮ್ಮ ಪಾತ್ರ ನನ್ನ ಅಣ್ಣನನ್ನು ನೆನಪಿಸಿತು. ನನ್ನ ತಂದೆಯೇ ನೆನಪಿಗೆ ಬಂದರು ಎಂದೆಲ್ಲಾ ಜನರು ಹೇಳುವಾಗ ಆಗುವ ಆನಂದ ಅಷ್ಟಿಷ್ಟಲ್ಲ. ನಾಯಕ ನಟ ಅಥವಾ ಖಳನಟ ಪಾತ್ರಕ್ಕಿಂತಲೂ ಈ ಪಾತ್ರಗಳ ಮೂಲಕವೇ ನಾನು ಅನೇಕರ ಮನದಲ್ಲಿ ಜಾಗ ಪಡೆದುಕೊಂಡೆ’ಎಂದು ಕಣ್ಣರಳಿಸುತ್ತಿದ್ದರು.

ಲೋಕನಾಥ್ಅವರ ಮಾತು, ನಗು, ವಿಷಯವನ್ನು ವಿಸ್ತರಿಸುವ ರೀತಿ ಎಲ್ಲವೂ ಅವರ ಸಿನಿಮಾ ಪಾತ್ರಗಳಿಗಿಂತ ವಿಭಿನ್ನವಾಗಿರಲಿಲ್ಲ. ಅಷ್ಟು ಸಹಜವಾದ ಅಭಿನಯವನ್ನು ಅವರು ಮೈಗೂಡಿಸಿಕೊಂಡಿದ್ದರು. ಸಿನಿಮಾ, ರಂಗಭೂಮಿ, ಬಾಲ್ಯದ ವಿಷಯಗಳ ಬಗೆಗೆ ಮಾತನಾಡುವಾಗ ಲವಲವಿಕೆಯಿಂದಿದ್ದ ಅವರು ವೈಯಕ್ತಿಕ ಬದುಕಿನ ಬಗೆಗೆ ಪ್ರಶ್ನಿಸಿದಾಗ ಮಾತ್ರ ತುಸು ಭಾವುಕರಾದಂತೆ ಕಂಡರು.

ಮುದ್ದಾಗಿ ಬೆಳೆಸಿದ ಮಗ ಇಳಿವಯಸ್ಸಿನಲ್ಲಿ ತಮ್ಮ ಜೊತೆಯಲ್ಲಿ ವಾಸಿಸುತ್ತಿಲ್ಲ. ದೂರದ ಅಮೆರಿಕದಲ್ಲಿದ್ದಾನೆ ಎನ್ನುವುದನ್ನು ಬಹಳ ನೊಂದುಕೊಂಡು ಹೇಳಿಕೊಂಡಿದ್ದರು. ‘ಮಗ ಓದಿ ಅಮೆರಿಕಕ್ಕೆ ಹೋದ. ಬರೋಕೆ ಮೂರು ವರ್ಷಆಗುತ್ತೆ ಎಂದ. ಅವನಲ್ಲೇಉಳಿದುಬಿಟ್ಟರೆ ಏನು ಗತಿ ಎಂಬ ಚಿಂತೆಯಲ್ಲಿ ಪದ್ಮನಾಭನಗರದಲ್ಲಿ ಅವನಿಗಿಷ್ಟವಾಗುವಂತೆ ಮನೆ ಕಟ್ಟಿಸಿದೆ. ಅವನಲ್ಲಿ ಉಳಿದು 38 ವರ್ಷವಾಯಿತು.ಈಗ ಇಷ್ಟು ದೊಡ್ಡ ಮನೆಯಲ್ಲಿ ನನಗೆ ಅವಳು, ಅವಳಿಗೆ ನಾನು. ಜೊತೆಗೆ ಈ ಮೀನಗಳು’ ಎಂದು ಬೇಸರ ತೋಡಿಕೊಂಡಿದ್ದರು.

ಮೊಮ್ಮಗನಿಗೂ ಅಲ್ಲಿಯದೇ ಪೌರತ್ವ ಸಿಕ್ಕಿದೆ. ಚಿಕ್ಕಂದಿನಲ್ಲಿ ತಾತಾ ತಾತಾ ಎನ್ನುತ್ತ ಕೇಳುವ ಪ್ರಶ್ನೆಗಳು ನನ್ನನ್ನು ಖುಷಿಯ ಕಡಲಲ್ಲಿ ತೇಲಿಸುತ್ತಿತ್ತು. ಈಗ ಅವನ ಅಮೆರಿಕಾ ಆಕ್ಸೆಂಟ್ ನನಗೆ ಅರ್ಥಆಗಲ್ಲ. ನನ್ನ ಕನ್ನಡ ಅವನಿಗೆ ಬರಲ್ಲ. ನನಗೆ ಹುಷಾರಿಲ್ಲದಿದ್ದರೆ ನನ್ನ ಹೆಣ್ಣುಮಕ್ಕಳಿಬ್ಬರು ಓಡಿ ಬರುತ್ತಾರೆ. ಒಬ್ಬಳು ಮೊಮ್ಮಗಳು ಬೆಂಗಳೂರಿನಲ್ಲಿಯೇ ಇರುತ್ತಾಳೆ. ಮಕ್ಕಳು ಚೆನ್ನಾಗಿ ಓದಿದರೂ ಸಮಸ್ಯೆಯೇ’ಎನ್ನುವಾಗ ಅವರ ಕಣ್ಣಲ್ಲಿ ನೀರು ಜಿನುಗಿತು. ಇಳಿವಯಸ್ಸಿನಲ್ಲಿ ಮಕ್ಕಳ ಸಾಮೀಪ್ಯ ಎಷ್ಟು ಮುಖ್ಯ ಎಂಬುದು ಅವರ ಭಾವನೆಗಳಲ್ಲಿ ವ್ಯಕ್ತವಾಗುತ್ತಿತ್ತು.

‘ನಾನು ನಿಮ್ಮನ್ನು ಲೋಕಜ್ಜ ಎಂದು ಕರೆಯುತ್ತೇನೆಎಂದಿದ್ದಕ್ಕೆ ಖುಷಿಯಲ್ಲೇ ಒಪ್ಪಿಗೆ ಸೂಚಿಸುತ್ತಾ, ಚಿಕ್ಕವಯಸ್ಸಿನಲ್ಲಿಯೇ ನಾನು ಸಿನಿಮಾಗಳಲ್ಲಿ ಅಜ್ಜನ ಪಾತ್ರ ಮಾಡಿದ್ದೇನೆಈಗ ನನಗೆ 89 ವರ್ಷ. ಧಾರಾಳವಾಗಿ ಅಜ್ಜ ಎನ್ನಬಹುದು. ಹಾಗೇ ಕರಿಯಮ್ಮ’ಎಂದರು.

ಭಯದಲ್ಲೇಮನೆ ಪ್ರವೇಶಿಸಿದ್ದವಳಿಗೆ ಲೋಕಜ್ಜನ ಆಪ್ತ ಮಾತುಗಳು ಮನೆಯಿಂದ ಹೊರಡುವಾಗ ಮನಸು ಭಾರವಾಗುವಂತೆ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT