ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲಿಲಿಯೊ ಪಾತ್ರದ ಲೋಕನಾಥ್ ತೆಂಗಿನಕಾಯಿ ಒಡೆದು ಪೂಜೆ ಮಾಡಬೇಕು ಹಟ ಹಿಡಿದಿದ್ದರು

Last Updated 31 ಡಿಸೆಂಬರ್ 2018, 7:06 IST
ಅಕ್ಷರ ಗಾತ್ರ

ಪ್ರಸಿದ್ಧ ರಂಗ ನಿರ್ದೇಶಕ, ಪ್ರಾಧ್ಯಾಪಕ ಸಿ.ಜಿ.ಕೃಷ್ಣಸ್ವಾಮಿ (CGK) ಮೇಷ್ಟರು ಒಂದು ದಿನ‌ ಫೋನ್ ಮಾಡಿ ‘ಬಂದು ಸಂಸ ಬಯಲು ರಂಗಮಂದಿರದ ಹತ್ತಿರ ಶರಣಾಗು’ಅಂತಾ ತಮ್ಮ ಮಾಮೂಲಿ ವರಸೆಯಲ್ಲಿ ಧಮಕಿ ಹಾಕಿದರು.

ಆಗ CGK ಮೇಷ್ಟರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ದಿನಗಳು.ಸರಿ ಸಂಸ ಬಯಲು ರಂಗಮಂದಿರದ ಜಗುಲಿ ಮೇಲೆ ಕುಳಿತಿದ್ದ ಅವರ ಮುಂದೆ ಶರಣಾದೆ. ‘ಒಂದಿನ ಏನಾಯ್ತು ಗೊತ್ತೇನೊ, ಮೈಸೂರಿಗೆ ಹೋಗ್ತಾ ಇದ್ದೆ, ಕಾವೇರಿ ನದಿ ಸಿಕ್ತಲ್ಲ, ನನ್ನ ಪರ್ಸಿಗೆ ಕೈ ಹಾಕಿ ರೂಪಾಯಿ ನಾಣ್ಯಗಳನ್ನ ತೆಗೆದು ಕಾವೇರಿ ನದಿಗೆ ಎಸೆದೆ!’

‘ಹಂಗ್ಯಾಕ್ ಮಾಡಿದ್ದು, ತಪ್ಪಲ್ವಾ!’

‘ನಮ್ಮಮ್ಮ ಹಂಗೆ ಮಾಡ್ತಿದ್ಳಪ್ಪ, ನಾನೂ ಹಂಗೇ ಮಾಡಿದೆ; ಅಂತಃಕರಣ ಅದು, ನಿಂಗೆ ಅವೆಲ್ಲ ಗೊತ್ತಾಗಲ್ಲ’

‘ಸರಿ ಮೇಷ್ಟ್ರೆ, ಮುಂದಕ್ಕೆ ಹೇಳಿ’

‘ಸಮುದಾಯದವರು ಗೆಲಿಲಿಯೊ ನಾಟಕ ಮಾಡ್ತಿದ್ವಿ, ಪ್ರದರ್ಶನದ ದಿನ ಗೆಲಿಲಿಯೊ ಪಾತ್ರ ಮಾಡಿದ್ದ ಲೋಕನಾಥ್, ತೆಂಗಿನ ಕಾಯಿ ಒಡೆದು ಪೂಜೆ ಮಾಡಬೇಕು ಅಂತಾ ಹಟ ಹಿಡಿದು ಕುಂತು ಬಿಟ್ರಲ್ಲ’

‘ತಪ್ಪಲ್ವಾ, ಗೆಲಿಲಿಯೊ ನಾಟಕದ ಸೈಂಟಿಫಿಕ್ ಟೆಂಪರಮೆಂಟನ್ನ ಕಾಂಟ್ರಡಿಕ್ಟ್ ಮಾಡಲ್ವ ಅದು!’

‘ಸುಮ್ನೆ ಕೇಳುಸ್ಕೊ!’

‘ಹೂ ಸರಿ’

ಗೆಲಿಲಿಯೊ ನಿರ್ದೇಶನ ಮಾಡಿದ್ದು ಪ್ರಸನ್ನ, ಲೋಕನಾಥ್ ತೆಂಗಿನಕಾಯಿ ಒಡೆದು ಪೂಜೆ ಮಾಡೊ ವಿಷಯ ಕೇಳಿ ನಿಗಿನಿಗಿ ಉರೀತಾ ....’

‘ಮತ್ತೆ ನಗಬೇಕಾಗಿತ್ತಾ’

‘ಹಂಗಲ್ಲ ಕಣೊ, ಲೋಕನಾಥ್ ಒಬ್ಬ ಕಲಾವಿದ, ವಿಶ್ವಾಸಿ ಕಲಾವಿದ, ಪೂಜೆ ಮಾಡದೇ...’

‘ನಿಮ್ ತರಾನೇ ತಗಳಿ , ನದಿಗೆ ಕಾಸು ಎಸೆದಂಗೆ!’

‘ಅವೆಲ್ಲ ಮನುಷರ ಅಂತಃಕರಣ ಕಣ್ ಟೀ ಕುಡ್ಯೋ, ನೀನು ಏನು ಬೇಕಾದ್ರೂ ಆಗು, ಆದ್ರೆ ನಿನ್ನೊಳಗೆ ನಿನ್ನ ತಾಯಿ ಇರದಿದ್ರೆ ಎಂಥದೋ ಅದು!’

CGK ಮೇಷ್ಟರ ‘ಕತ್ತಾಲು ಬೆಳದಿಂಗಳೊಳಗಾ...’ಜೀವನ ಕಥಾನಕದಲ್ಲೂ ಲೋಕನಾಥ್ ಅವರೊಳಗಿನ ಮತ್ತು ತಮ್ಮೊಳಗಿನ ನದಿಗೆ ಹಂಬಲಿಸುವ ಈ ಪ್ರಸಂಗ ಇದೆ.

ಉಪ್ಪಿನಕಾಯಿಯ ಖಾಲಿ ಜಾಡಿಯನ್ನ ಭೂತಯ್ಯನ ಮಗ ಅಯ್ಯುವಿಗೆ ಹಿಂತಿರುಗಿಸುವ, ಮಿಂಚಿನ ಓಟದಲ್ಲಿ ರಂಜಿಸಿದ ಕಲಾವಿದ ಲೋಕನಾಥ್ ಸಿನಿಮಾಗಳಿಗಿಂತ ರಂಗಭೂಮಿಗೆ ಮೊದಲ ಆದ್ಯತೆ ಕೊಡುತ್ತಿದ್ದ ಕಲಾವಿದರು.

ಈ ಚಳಿಗಾಲ ಫ್ರೀಜರಿಗಿಂತ ಕೊಂಚ ಮಾತ್ರ ಬೆಚ್ಚಗಿದೆ ಅಷ್ಟೇ.

ವಿದಾಯಗಳು ಗೆಲಿಲಿಯೊ ಮೇಷ್ಟ್ರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT