ಶುಕ್ರವಾರ, ಜುಲೈ 30, 2021
22 °C

‘ನಟಿಸುವಾಗಲೇ ಜೀವ ಹೋಗಬೇಕು’ ಎಂದು ಆಸೆಪಟ್ಟಿದ್ದರು ನಟ ಲೋಕನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಟನೆ ಮಾಡುತ್ತಿರುವಾಗಲೇ ನನ್ನ ಜೀವ ಹೋಗಬೇಕು ಎಂಬುದು ನನ್ನ ಕೊನೆಯ ಆಸೆ~ ಎಂದು ಹಿರಿಯ ನಟ ಲೋಕನಾಥ್ ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಏರ್ಪಡಿಸಿದ್ದ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ತಮ್ಮ ಸಿನಿ ಬದುಕಿನ ಪಯಣದ ಸವಿ ನೆನಪುಗಳನ್ನು ಬಿಚ್ಚಿಟ್ಟರು. 

‘ಸುಮಾರು 650 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈಚೆಗೆ ಭೀಮಾ ತೀರದಲ್ಲಿ ನಾನು ಅಭಿನಯಿಸಿದ ಕೊನೆಯ ಚಿತ್ರ. ಚಿತ್ರರಂಗದಲ್ಲಿ ಎಲ್ಲರೂ ನನ್ನ ಆತ್ಮೀಯರು. ಒಬ್ಬ ನಟನಿಗೆ ಶಿಸ್ತು ಮತ್ತು ಸಮಯಪ್ರಜ್ಞೆ ಅತಿ ಮುಖ್ಯ. ಅದನ್ನು ನನ್ನ ಸಿನಿಮಾ ಬದುಕಿನುದ್ದಕ್ಕೂ ಕಾಪಾಡಿಕೊಂಡು ಬಂದಿದ್ದೇನೆ’ ಎಂದು ಅವರು ನೆನಪಿಸಿಕೊಂಡರು.

‘ನಾಟಕದವರು, ಸಿನಿಮಾದವರು ಎಂದರೆ ಮನೆಯನ್ನು ಬಾಡಿಗೆಗೂ ನೀಡುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಸಂಪ್ರದಾಯಸ್ಥ ಕುಟುಂಬದಿಂದ ಸಿನಿಮಾ ವೃತ್ತಿಗೆ ಬಂದು ವಿಭಿನ್ನ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ನನಗೆ ನನ್ನ ಪಾತ್ರಗಳು ತೃಪ್ತಿ ನೀಡಿವೆ.

‘ಸಂಸ್ಕಾರ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾರಂಗಕ್ಕೆ ಪ್ರವೇಶ ಪಡೆದರೂ, ಮೊದಲು ಬಿಡುಗಡೆಯಾದ ನನ್ನ ಚಿತ್ರ ‘ಗೆಜ್ಜೆಪೂಜೆ’. ನಂತರ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಲು ಸಾಧ್ಯವಾಯಿತು. ನಮ್ಮ ಕುಟುಂಬದ ವೃತ್ತಿ ಜವಳಿ ವ್ಯಾಪಾರ. ನಮ್ಮದು ಜವಳಿ ಅಂಗಡಿ ಇತ್ತು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಸಂಜೆಯ ಒಳಗೆ ಮನೆ ಸೇರಬೇಕು ಎನ್ನೋದಿದೆ. ಆದರೆ ಗಂಡು ಮಕ್ಕಳಾದ ನಮಗೂ ಅದೇ ಕಟ್ಟುಪಾಡಿತ್ತು.

‘ಅಂತಹ ಸಂಪ್ರದಾಯಸ್ಥ ಸುಮಾರು 40 ಜನರಿದ್ದ ಅವಿಭಕ್ತ ಕುಟುಂಬ ನಮ್ಮದು. ಸಂಗೀತದ ಮೇಲಿನ ಆಸೆಯಿಂದ ಸಂಗೀತವನ್ನು ಸುಮ್ಮನೇ ಗುನುಗುತ್ತಿದ್ದೆ. ತಬಲಾ ಕಲಿಯಬೆಕೆಂಬ ಆಸೆಗೆ  ತಬಲಾ ತಂದಿಟ್ಟುಕೊಂಡಾಗ ನಮ್ಮ ಮನೆಯ ವಾತಾವರಣ ಅದಕ್ಕೆ ಸರಿಹೋಗುವುದಿಲ್ಲ ಎಂದು ಅದನ್ನು ಕೈ ಬಿಡಬೇಕಾಯಿತು. 

‘ಮೂಲತಃ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ನಾನು ಕೆ.ವಿ.ಅಯ್ಯರ್ ಅವರ ವ್ಯಾಯಾಮ ಶಾಲೆಯಲ್ಲಿ 13 ವರ್ಷಗಳ ಕಾಲ ಅಭ್ಯಾಸ ನಡೆಸಿದೆ.  ಈ ಸಂದರ್ಭದಲ್ಲಿ   ಕೈಲಾಸಂ ಅವರಿಂದಾಗಿ ನಾಟಕ ರಂಗಕ್ಕೆ ಪ್ರವೇಶ ಮಾಡುವಂತಾಯಿತು ನಂತರ ಅವರ `ರವಿ ಕಲಾ ಕೇಂದ್ರ~ದಲ್ಲಿ  ಕಾಕನಕೋಟೆ, ಚಂದ್ರಹಾಸ, ರಕ್ತಾಕ್ಷಿ ನಾಟಕಗಳಲ್ಲಿ ಸರಣಿಯಾಗಿ ಅಭಿನಯಿಸಿದೆ.

‘ಅದು ಸುದೀರ್ಘವಾದ 272 ಪುಟಗಳ ನಾಟಕ, ಪ್ರಾರಂಭದಿಂದ ಕೊನೆಯ ದೃಶ್ಯದವರೆಗೂ ಗೆಲಿಲಿಯೋ ಪಾತ್ರದಾರಿ ಆದ ನಾನು ಆ ನಾಟಕದಲ್ಲಿರಬೇಕು. ಸಂಭಾಷಣೆಗಳನ್ನು ಎಲ್ಲಿಯೂ ತಪ್ಪದೆ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದೆ ನಾಟಕ ಯಶಸ್ವಿಯಾಯಿತು ಅದು ನನ್ನ ಬದುಕಿನ ಅವಿಸ್ಮರಣಿಯ ಕ್ಷಣ. ಗೆಲಿಲಿಯೋ ನಾಟಕದ ನಂತರ ನನಗೆ ನೆನಪಿನ ಶಕ್ತಿ ಕಡಿಮೆಯಾದಂತೆನಿಸಿತು. ಅದು ಗುಣಮುಖ ನಾಟಕದಲ್ಲಿ ಮುಂದುವರೆದಾಗ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಾಗಲಿಲ್ಲ. ಪಾತ್ರಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎನ್ನಿಸಿ ನಂತರ ನಾಟಕಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸಿದೆ.

‘ಪ್ರತಿಯೊಬ್ಬ ಕಲಾವಿದನನ್ನೂ ಅವನು ಮಾಡಿದ ಪಾತ್ರಗಳ ಮೂಲಕ ಅವನನ್ನು ಪ್ರಶಂಸಿಸಿದರೆ ಅವನಿಗೆ ಅದಕ್ಕಿಂತ ಬೇರೆ ಪ್ರಶಸ್ತಿ ಬೇಕಿಲ್ಲ. ನನಗೂ ಅಂತಹ ಅನುಭವ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಾಯಿತು. ಚಿತ್ರ ಯಶಸ್ವಿಯಾದ ನಂತರ ಮಂಡ್ಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಲ್ಲಿನ ಮಹಿಳೆಯೊಬ್ಬರು ಉಪ್ಪಿನಕಾಯಿ ಜಾಡಿಯನ್ನು ತಂದು ನನ್ನ ಮುಂದಿಟ್ಟು ಎಷ್ಟು ಬೇಕಾದರೂ ತಿನ್ನು. ಆದರೆ ಕದಿಯಬೇಡ ಎಂದು ಹೇಳಿದಾಗ ನನ್ನ ಪಾತ್ರದ ಜನಪ್ರಿಯತೆ ನನಗೆ ತಿಳಿಯಿತು’ ಎಂದು ನೆನಪಿಸಿಕೊಂಡು ಭಾವುಕರಾದರು ಲೋಕನಾಥ್.

ರಂಗಕರ್ಮಿ ಸತ್ಯಮೂರ್ತಿ ಆನಂದ್ ಅವರು ಲೋಕನಾಥ್ ಅವರ ಜತೆ ಸಂವಾದದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.