
ಬೆಂಗಳೂರು: ‘ಲೀಗ್ ಹಂತದ ಆರಂಭದಲ್ಲಿ ಸತತ ಐದು ಪಂದ್ಯ ಗೆದ್ದ ಮೇಲೆ ಎರಡು ಪಂದ್ಯಗಳಲ್ಲಿ ಸೋತಿದ್ದು ಒಳ್ಳೆಯದೇ ಆಯಿತು. ಸೋಲು ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ. ಆದ್ದರಿಂದಲೇ ಫೈನಲ್ ವರೆಗೂ ಗೆಲುವಿನ ಯಾತ್ರೆ ಮುಂದುವರಿಯಿತು’
* ಸತತ ಗೆಲುವುಗಳ ನಂತರ ಎರಡು ಸೋಲುಗಳು ತಂಡದ ಮೇಲೆ ಯಾವ ರೀತಿ ಪರಿಣಾಮ ಬೀರಿದ್ದವು. ಅದರಿಂದ ಹೊರಬಂದಿದ್ದು ಹೇಗೆ?
ನಮ್ಮ ತಂಡದಲ್ಲಿ ಒಂದಿಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ಅನುಭವಿ ಆಟಗಾರ್ತಿಯರು. ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಕ್ರಿಕೆಟ್ ಆಡಿದ್ದಾರೆ. ಆದ್ದರಿಂದ ತಮ್ಮ ಹೊಣೆಯನ್ನು ಚೆನ್ನಾಗಿ ಅರಿತವರು. ಬಹಳಷ್ಟು ಪೈಪೋಟಿ ಇರುವ ಕ್ರಿಕೆಟ್‌ನಲ್ಲಿ ಸೋಲು, ಗೆಲುವುಗಳು ಸಹಜ. ಆದರೆ ಸೋತಾಗ ಕಲಿಯುವ ಪಾಠಗಳು ಅತ್ಯಮೂಲ್ಯ. ಈ ಟೂರ್ನಿಯಲ್ಲಿ ಮೊದಲನೇಯದಾಗಿ ನಾವು ನವೀ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಕೆಲವು ಪಂದ್ಯಗಳನ್ನು ಆಡಿದೆವು. ನಂತರ ವಡೋದರಾದಲ್ಲಿ ಉಳಿದೆಲ್ಲ ಪಂದ್ಯಗಳನ್ನು ಆಡಿದೆವು. ಎರಡೂ ಕಡೆಯ ಹವಾಗುಣ, ಪರಿಸ್ಥಿತಿಗಳು ವಿಭಿನ್ನ. ಅದಕ್ಕೆಲ್ಲ ಹೊಂದಿಕೊಂಡು ಆಡುವುದರಲ್ಲಿ ಯಶಸ್ವಿಯಾಗಿದ್ದು ಗೆಲುವಿನ ಗುಟ್ಟು.
* ಹೋದ ವರ್ಷ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿದ್ದ ಕೆಲವು ಆಟಗಾರ್ತಿಯರು ಆರ್‌ಸಿಬಿಯಲ್ಲಿದ್ದರು. ದೊಡ್ಡ ಸಾಧನೆಯನ್ನೇ ಮಾಡಿದ್ದೇವೆ. ಡಬ್ಲ್ಯುಪಿಎಲ್ ದೊಡ್ಡದಲ್ಲ ಎಂಬ ಭಾವನೆ ಅವರಲ್ಲಿತ್ತಾ?
ಖಂಡಿತ ಇಲ್ಲ. ಪ್ರತಿಯೊಬ್ಬ ಆಟಗಾರ್ತಿಯೂ ವೃತ್ತಿಪರ ಮನೋಭಾವ ಹೊಂದಿದ್ದರು. ವಿಶ್ವಕಪ್ ಜಯಿಸಿದ್ದೇವೆ ಇದೇನೂ ದೊಡ್ಡದಲ್ಲ ಎಂಬ ಮನೋಭಾವ ಅವರಲ್ಲಿ ಇರಲಿಲ್ಲ. ಬದಲಿಗೆ ವಿಶ್ವಕಪ್ ಜಯವು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತ್ತು. ಗೆಲುವಿನ ಓಟವನ್ನು ಮುಂದುವರಿಸುವ ಮನೋಬಲ ಅವರದ್ದಾಗಿತ್ತು.
* ಮಯಂಕ್ ಅಗರವಾಲ್ ಸೇರಿದಂತೆ ಹಲವು ಪುರುಷ ಕ್ರಿಕೆಟಿಗರಿಗೆ ತರಬೇತಿ ನೀಡಿದ್ದೀರಿ. ಆದರೆ ಮಹಿಳೆಯರಿಗೆ ತರಬೇತಿ ನೀಡುವಾಗ ಎದುರಿಸಿದ ಸವಾಲುಗಳು ಯಾವುವು?
ಪುರುಷರು ಮತ್ತು ಮಹಿಳೆಯರ ತಂಡಗಳಿಗೆ ತರಬೇತಿ ನೀಡುವುದು ವಿಭಿನ್ನ ಅನುಭವ. ನಾನು ಎನ್‌ಸಿಎ (ಪ್ರಸ್ತುತ ಬಿಸಿಸಿಐ ಶ್ರೇಷ್ಠತಾ ಕೇಂದ್ರ)ನಲ್ಲಿ ಶೈಕ್ಷಣಿಕ ವಿಭಾಗದ ಕೋಚ್ ಆಗಿದ್ದೇನೆ. ಅಲ್ಲಿ ಒಂದು ಪಾಠವಿದೆ. ಅದರಲ್ಲಿ ಮಹಿಳೆಯರು ಯಾವಾಗಲೂ ಪುರುಷರಿಗಿಂತ ಭಿನ್ನವಾಗಿ ಯೋಚಿಸುತ್ತಾರಂತೆ. ಅದು ನಿಜವೂ ಹೌದು. 2005ರಲ್ಲಿ ಹೆಣ್ಣುಮಕ್ಕಳ ತಂಡಕ್ಕೆ ಕೆಲಕಾಲ ತರಬೇತಿ ನೀಡಿದ್ದೆ. ಆದರೆ ಇಷ್ಟು ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ ಸಂಪೂರ್ಣ ಬದಲಾಗಿದೆ. ಆಟಗಾರ್ತಿಯರಲ್ಲಿನ ಆತ್ಮವಿಶ್ವಾಸವೂ ಚೆನ್ನಾಗಿ ಬೆಳೆದಿದೆ.
*ಪ್ರಶಸ್ತಿ ಜಯದಲ್ಲಿ ಸ್ಮೃತಿ ಮಂದಾನ ಅವರ ನಾಯಕತ್ವದ ಪಾತ್ರವೇನು?
ಚಲನಶೀಲತೆ ಇರುವ ನಾಯಕಿ. ಸ್ವಭಾವತಃ ಸ್ನೇಹಜೀವಿಯಾಗಿರುವ ಸ್ಮೃತಿ ತಮ್ಮ ತಂಡದಲ್ಲಿ ಪ್ರತಿಯೊಬ್ಬರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಪಂದ್ಯಕ್ಕೆ ಮುನ್ನ ರೂಪುಗೊಳ್ಳುವ ತಂಡದ ಯೋಜನೆಯನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುತ್ತಾರೆ. ಅಲ್ಲದೇ ಪಂದ್ಯ ನಡೆಯುವ ಹಂತದಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ತಂತ್ರಗಾರಿಕೆಯನ್ನೂ ಹೆಣೆಯುವ ಚಾಣಾಕ್ಷತೆ ಅವರಲ್ಲಿದೆ. ನೆಟ್ಸ್ ಅಭ್ಯಾಸದ ಸಂದರ್ಭದಲ್ಲಿಯೇ ಪ್ರತಿಯೊಬ್ಬರೊಂದಿಗೆ ಮಾತನಾಡುತ್ತ ಅನುಮಾನಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಅದರಿಂದಾಗಿ ಅವರಲ್ಲಿ ಹೆಚ್ಚು ಸ್ಪಷ್ಟತೆ ಇರುತ್ತದೆ.
* ಕರ್ನಾಟಕದವರೇ ಆದ ಶ್ರೇಯಾಂಕಾ ಪಾಟೀಲರು ದೀರ್ಘ ಸಮಯದ ವಿಶ್ರಾಂತಿಯ ನಂತರ ತಂಡಕ್ಕೆ ಮರಳಿದ್ದರು. ಕಣಕ್ಕಿಳಿದಾಗ ಅವರು ಒತ್ತಡದಲ್ಲಿ ಇದ್ದರೆ?
ಹೆಚ್ಚು ಒತ್ತಡವೇನೂ ಇರಲಿಲ್ಲ. ಏಕೆಂದರೆ ಅವರು ಗಾಯದಿಂದಾಗಿ ಸುಮಾರು ಒಂದು ವರ್ಷ ಆಟದಿಂದ ದೂರವಿದ್ದಾಗಲೂ ಆರ್‌ಸಿಬಿಯ ಕುಟುಂಬದೊಂದಿಗೆ ನಂಟು ಕಡಿದಿರಲಿಲ್ಲ. ಅವರಿಗೆ ಆರ್‌ಸಿಬಿಯು ತನ್ನ ಎಲ್ಲ ಚಟುವಟಿಕೆಗಳಲ್ಲಿಯೂ ಒಳಗೊಳ್ಳುತ್ತಿತ್ತು. ಅಲ್ಲದೇ ಕಳೆದ ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಯಿತು. ಇದರಿಂದಾಗಿ ಅವರಿಗೆ ಅಭದ್ರತೆ ಕಾಡಲಿಲ್ಲ. ವೃತ್ತಿಜೀವನದಲ್ಲಿ ಸ್ಥಾನ ಮತ್ತು ಭವಿಷ್ಯದ ಜೀವನದ ಕುರಿತು ಭದ್ರತೆ ಪಡೆಯುವ ವ್ಯಕ್ತಿಯು ತನ್ನ ಸಂಸ್ಥೆಗೆ ಹೆಚ್ಚಿನ ಯಶಸ್ಸು ತಂದುಕೊಡಲು ಶ್ರಮಿಸುವುದು ಸಹಜ. ಶ್ರೇಯಾಂಕಾ ಕೂಡ ತಮ್ಮ ಪೂರ್ಣ ಸಾಮರ್ಥ್ಯವನ್ನು ಒಡ್ಡಿದರು. ಇನ್ನೂ ಮಾನಸಿಕ ಸುದೃಢತೆ ಬರಲು ಅವರ ಕುಟುಂಬ, ವೈಯಕ್ತಿಕ ಕೋಚ್, ಪುನಶ್ಚೇತನ ಪ್ರಕ್ರಿಯೆ ಮತ್ತು ತಂಡದಲ್ಲಿ ನಮ್ಮ ನೆರವು ಸಿಬ್ಬಂದಿಯ ಮಾರ್ಗದರ್ಶನಗಳೆಲ್ಲವೂ ಸಹಾಯಕವಾದವು.
* ಈ ಬಾರಿಯ ಡಬ್ಲ್ಯುಪಿಎಲ್‌ನಲ್ಲಿ ಭವಿಷ್ಯದ ತಾರೆಗಳಾಗುವಂತಹ ಆಟಗಾರ್ತಿಯರು ಯಾರು?
ಎಲ್ಲ ತಂಡಗಳಲ್ಲಿಯೂ ಯುವ ಆಟಗಾರ್ತಿಯರು ಭರವಸೆ ಮೂಡಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಟೂರ್ನಿಯು ಉತ್ತಮಗೊಳ್ಳುತ್ತಿದೆ. ಪೈಪೋಟಿ ಹೆಚ್ಚುತ್ತಿದೆ. ಗುಜರಾತ್ ಜೈಂಟ್ಸ್‌ನ ಅನುಷ್ಕಾ ಶರ್ಮಾ ಸೇರಿದಂತೆ ಇನ್ನೂ ಕೆಲವು ಆಟಗಾರ್ತಿಯರು ಭರವಸೆ ಮೂಡಿಸಿದ್ದಾರೆ.
ಮಯಂಕ್ ಅಗರವಾಲ್ ಸೇರಿದಂತೆ ಹಲವು ಪುರುಷ ಕ್ರಿಕೆಟಿಗರಿಗೆ ತರಬೇತಿ ನೀಡಿದ್ದೀರಿ. ಆದರೆ ಮಹಿಳೆಯರಿಗೆ ತರಬೇತಿ ನೀಡುವಾಗ ಎದುರಿಸಿದ ಸವಾಲುಗಳು ಯಾವುವು?
ಪುರುಷರು ಮತ್ತು ಮಹಿಳೆಯರ ತಂಡಗಳಿಗೆ ತರಬೇತಿ ನೀಡುವುದು ವಿಭಿನ್ನ ಅನುಭವ. ನಾನು ಎನ್‌ಸಿಎ (ಪ್ರಸ್ತುತ ಬಿಸಿಸಿಐ ಶ್ರೇಷ್ಠತಾ ಕೇಂದ್ರ)ನಲ್ಲಿ ಶೈಕ್ಷಣಿಕ ವಿಭಾಗದ ಕೋಚ್ ಆಗಿದ್ದೇನೆ. ಅಲ್ಲಿ ಒಂದು ಪಾಠವಿದೆ. ಅದರಲ್ಲಿ ಮಹಿಳೆಯರು ಯಾವಾಗಲೂ ಪುರುಷರಿಗಿಂತ ಭಿನ್ನವಾಗಿ ಯೋಚಿಸುತ್ತಾರಂತೆ. ಅದು ನಿಜವೂ ಹೌದು. 2005ರಲ್ಲಿ ಹೆಣ್ಣುಮಕ್ಕಳ ತಂಡಕ್ಕೆ ಕೆಲಕಾಲ ತರಬೇತಿ ನೀಡಿದ್ದೆ. ಆದರೆ ಇಷ್ಟು ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ ಸಂಪೂರ್ಣ ಬದಲಾಗಿದೆ. ಆಟಗಾರ್ತಿಯರ ಆತ್ಮವಿಶ್ವಾಸವೂ ಚೆನ್ನಾಗಿ ಬೆಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.