ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕನಾಥ್ ಸಂದರ್ಶನ: ನನ್ನ ಮನದ ಬೆಂಗಳೂರು ಕೆಂಪು ತಂಪು

ನಾ ಕಂಡ ಬೆಂಗಳೂರು
Last Updated 31 ಡಿಸೆಂಬರ್ 2018, 7:12 IST
ಅಕ್ಷರ ಗಾತ್ರ

ಹುಟ್ಟಿದ್ದು ಕಬ್ಬನ್‌ಪೇಟೆ. ಆರು ವರ್ಷದವನಿದ್ದಾಗ ಆ ಜಾಗ ಬಿಟ್ಟೆವು. 1929ರ ಸುಮಾರಿಗೆ ಬಸವನಗುಡಿ, ಗಾಂಧಿನಗರ ಎಂದೆಲ್ಲ ಇರಲೇ ಇಲ್ಲ. ಕಬ್ಬನ್‌ಪೇಟೆ, ಗಾಣಿಗರ ಪೇಟೆ ತುಂಬಾ ಚಿಕ್ಕದಾಗಿದ್ದವು.

ಆಗ ಬೆಂಗಳೂರಿನ ವಾತಾವರಣ ತುಂಬ ಚೆನ್ನಾಗಿತ್ತು. ರಸ್ತೆಯ ಎರಡೂ ಬದಿ ಗಿಡ ಮರಗಳು ತುಂಬಿರುತ್ತಿದ್ದವು. ಗುಲ್‌ಮೊಹರ್‌ ಹೂ ಬಿಡುವ ಕಾಲದಲ್ಲಿ ಬೆಂಗಳೂರು ಕೆಂಪುಕೆಂಪಾಗಿ ಕಂಗೊಳಿಸುತ್ತಿತ್ತು. ನಕ್ಷತ್ರ ಮತ್ತು ಕಾಲಕ್ಕೆ ಅನುಗುಣವಾಗಿ ಮಳೆ, ಬಿಸಿಲು, ಚಳಿ ಕಾಣಿಸಿಕೊಳ್ಳುತ್ತಿತ್ತು.

ಸ್ವಾತಂತ್ರ್ಯದ ಸಮಯದಲ್ಲಿ ದೇಶ ವಿಭಜನೆ ಆಯಿತು. ಸುರಕ್ಷಿತ ಜಾಗ ಎಂದು ಎಲ್ಲ ಬೆಂಗಳೂರಿಗೆ ಬಂದರು. ಎಲ್ಲ ಕಡೆಯಿಂದಲೂ ಜನ ಇಲ್ಲಿ ವಲಸೆ ಬಂದಿದ್ದರಿಂದ ಇಲ್ಲಿನ ಜನರಿಗೆ ಹೊಡೆತ ಬಿತ್ತು. ಏಕಾಏಕಿ ಜನಸಂಖ್ಯೆ ಹೆಚ್ಚಾಯಿತು. ಈಗ ಬಿಡಿ ಬೆಂಗಳೂರಿನ ಸಂಖ್ಯೆ ವಿಪರೀತ ಎನಿಸುವಷ್ಟು ಸ್ಫೋಟಿಸಿದೆ.

ನನಗೆ ನೆನಪಿರುವಂತೆ ಒಂದು ಕಾಲದಲ್ಲಿ ಬೆಂಗಳೂರಿನ ಜನಸಂಖ್ಯೆ ಕೇವಲ 3 ಲಕ್ಷ. ಈಗ ಕೋಟಿ ಮೀರಿಲ್ಲವೇ? ಇಡೀ ನಗರವನ್ನು ಆವರಿಸಿದ್ದ ಹಸಿರು ಹೊದಿಕೆ ಈಗ ಕಬ್ಬನ್‌ ಪಾರ್ಕ್‌ ಹಾಗೂ ಲಾಲ್‌ಬಾಗ್‌ಗೆ ಮಾತ್ರ ಸೀಮಿತ ಎನ್ನುವಂತಾಗಿದೆ.

ಬೇಸಿಗೆ ಕಾಲದಲ್ಲಿಯೂ ಎಷ್ಟು ತಂಪಿತ್ತು ಗೊತ್ತಾ. ನಾನು ಹೆಚ್ಚಾಗಿ ಸೈಕಲ್‌ನಲ್ಲೇ ಓಡಾಡುತ್ತಿದ್ದೆ. ಚಿಕ್ಕಪೇಟೆಯಿಂದ ಮಾರುಕಟ್ಟೆ ದಾಟಿ ಕೆ.ಆರ್‌.ರಸ್ತೆಗೆ ಬಂದರೆ ಹಾಯ್‌ ಎನಿಸುತ್ತಿತ್ತು. ಅಷ್ಟು ತಂಪಿತ್ತು ಆ ಜಾಗದಲ್ಲಿ. ಬಿಸಿಲ ಝಳಪಿಗೆ, ಬೆವರ ಸೆಲೆಗೆ ತಂಪೆರೆಯುವ ಆ ಮರಗಳನ್ನು ಯಾವ ಪುಣ್ಯಾತ್ಮ ಹಾಕಿದ್ದನೋ ಎಂದುಕೊಳ್ಳುತ್ತಿದ್ದೆ.

ಬಸವನಗುಡಿ ಬಲು ಇಷ್ಟ
ಹುಟ್ಟಿದ್ದು, ಓದಿದ್ದು, ಮದುವೆಯಾದದ್ದು, ಸಿನಿಮಾ ಸೇರಿದ್ದು ಎಲ್ಲವೂ ಬೆಂಗಳೂರಲ್ಲೇ. ಬೇರೆಲ್ಲೂ ನಾನು ಹೋಗಲೇ ಇಲ್ಲ. ಅದರಲ್ಲೂ ಬಸವನಗುಡಿ ತುಂಬಾ ಇಷ್ಟ.

ಅಲ್ಲಿ ಸಾಹಿತಿಗಳು ಜಾಸ್ತಿ. ವಿದ್ಯಾವಂತರು, ತಂತ್ರಜ್ಞರು ಇದ್ದಾರೆ. ಸುಸಂಸ್ಕೃತರ ಸ್ಥಳವದು. ಈಗ ನನಗೆ 89 ವರ್ಷ. ಬೆಂಗಳೂರನ್ನು ಚಿಕ್ಕಂದಿನಿಂದ ಸವಿದಿದ್ದರೂ ಈಗ ರಸೆಲ್‌ ಮಾರ್ಕೆಟ್‌ ಬಿಟ್ಟು ಮುಂದೆ ಹೋದರೆ ಇದು ಬೆಂಗಳೂರೇ ಅಲ್ಲ ಎನಿಸುತ್ತದೆ. ಅಷ್ಟು ಬದಲಾಗಿದೆ. ಮೊದಲು ಈ ಊರು ಇಷ್ಟು ದೊಡ್ಡದಿರಲೇ ಇಲ್ಲ. ಪುಟ್ಟ ಪ್ರದೇಶವಾಗಿತ್ತು. ಗಿಡಮರಗಳು ಹೆಚ್ಚಿದ್ದವು. ಈಗ ಎಲ್ಲ ಕಡೆಗಳಿಂದಲೂ ಬೆಳೆದುಬಿಟ್ಟಿದೆ. ಇದು ದೊಡ್ಡ ಡಿಸ್‌ಅಡ್ವಾಂಟೇಜ್‌.

ನಾನು ತುಂಬಾ ತುಂಟ
ಬಾಲ್ಯದಲ್ಲಿ ನಾನು ಬಹಳ ತುಂಟ. ಕ್ರೀಡೆಯ ಬಗೆಗೆ ಹೆಚ್ಚು ಒಲವು. ಕ್ರಿಕೆಟ್‌, ಫುಟ್‌ಬಾಲ್‌, ಹಾಕಿ ಆಡುತ್ತಿದ್ದೆ. ಮನೆ ಎದುರಿಗೇ ಪಾರ್ಕ್‌. ಆಗ ಗಾಂಧಿ ನಗರದಲ್ಲಿದ್ದೆವು. ಆಟ ಹೊಡೆದಾಟ ಜೋರೇ ಇತ್ತು. ತುಸು ದಷ್ಟಪುಷ್ಟವೂ ಆಗಿದ್ದರಿಂದ ಕೈ ಜೋರಿತ್ತು. ಸದ್ಯ ಜೈಲಿಗೊಂದು ಹಾಕಲಿಲ್ಲ, ಅಷ್ಟು ಹುಡುಗಾಟದ ಬುದ್ಧಿಯವ ನಾನು. ಕೆಲವೊಮ್ಮೆ ಮುಖದಲ್ಲಿ ರಕ್ತ ಬರುವಂತೆ ಗೆಳೆಯರಿಗೆ ಹೊಡೆದಿದ್ದು ನೆನಪಿದೆ. ನಾನೂ ಅದೇ ಥರ ಹೊಡೆಸಿಕೊಂಡಿದ್ದೆ ಅನ್ನಿ.

ಆ ಕಾಲದಲ್ಲಿ ತುಂಬಾ ಜನಪ್ರಿಯರಾಗಿದ್ದ ಕೆ.ವಿ.ಅಯ್ಯರ್‌ ಅವರ ವ್ಯಾಯಾಮ ಶಾಲೆಗೆ 13ನೇ ವಯಸ್ಸಿನಿಂದಲೇ ಹೋಗುತ್ತಿದ್ದೆ. ಸಾಮು ಮಾಡಿ ಮೈಕೈ ತುಂಬಿಕೊಂಡು ಗಟ್ಟಿಯಾಗಿದ್ದೆ. ಯಾರು ಮಾತನಾಡಿಸಿದರೂ ತಾಳ್ಮೆಯಿಂದ ಯೋಚಿಸುವ ಶಕ್ತಿ ಇರಲಿಲ್ಲ. ಕೈಯೇ ಮುಂದಾಗುತ್ತಿತ್ತು.
ಅಯ್ಯರ್ ಅವರು ನನ್ನನ್ನು ಪ್ರೀತಿಯಿಂದ ‘ಲೋಕಯ್ಯ’ ಎನ್ನುತ್ತಿದ್ದರು. 25 ವರ್ಷ ನನ್ನನ್ನು ಪ್ರೀತಿಯಿಂದ ನೋಡಿಕೊಂಡರು.

ಆಟ ಹುಡುಗಾಟಕ್ಕೆ ಬ್ರೇಕ್‌
ಅಯ್ಯರ್‌ ಅವರು 1945 ರ ಸುಮಾರಿಗೆ ‘ರವಿ ಕಲಾವಿದರು’ ಎಂಬ ರಂಗಭೂಮಿಗೆ ಸಂಬಂಧಿಸಿದ ಸಂಘ ಪ್ರಾರಂಭಿಸಿದರು. ಗೆಳೆಯರ ಬಲವಂತದಿಂದ ನಾನು ಅದರಲ್ಲಿ ತೊಡಗಿಸಿಕೊಂಡೆ. ನಂತರದ ದಿನಗಳಲ್ಲಿ ಆಟ, ಹುಡುಗಾಟಗಳು ಕಡಿಮೆಯಾದವು. ಚಿಕ್ಕಪೇಟೆಯಲ್ಲಿ ನಮ್ಮದೊಂದು ಜವಳಿ ಅಂಗಡಿ ಇತ್ತು. ಕಾಲೇಜು, ಅಂಗಡಿ, ನಾಟಕ, ಸಂಜೆ ಆರು ಗಂಟೆಗೆ ವ್ಯಾಯಾಮ ಶಾಲೆ. ಇಷ್ಟೇ ನನ್ನ ಪ್ರಪಂಚವಾಯಿತು.

ನಾಟಕವಾಗಿ ಜನಪ್ರಿಯವಾಗಿದ್ದ ‘ಸಂಸ್ಕಾರ’ಕ್ಕೆ ಸಿನಿಮಾ ರೂಪ ಕೊಡಲು ಗಿರೀಶ್‌ ಕಾರ್ನಾಡರು ಮುಂದಾದರು. ನಾಟಕ ತಂಡದಲ್ಲಿದ್ದ ನನಗೂ ಆ ಸಿನಿಮಾದಲ್ಲಿ ಅವಕಾಶ ಸಿಕ್ಕಿತು.

ಸೀಬೇ ತೋಟ
ನನಗೆ ಬೆಂಗಳೂರು ಎಂದರೆ ಬಸವನಗುಡಿ. ಅದನ್ನು ಬಿಟ್ಟರೆ ಬೇರೆ ಪ್ರಪಂಚವೇ ಇರಲಿಲ್ಲ. ಅದಕ್ಕೂ ಮೊದಲು ಗಾಂಧಿ ನಗರದಲ್ಲಿದ್ದೆ. ಅದರ ತುಂಬೆಲ್ಲಾ ಸೀಬೆಹಣ್ಣಿನ ತೋಟವಿತ್ತು. ಮನೆಯ ಮುಂದೆ ಅಲಹಾಬಾದ್‌ ಸೀಬೆಹಣ್ಣಿನ ಗಿಡಗಳಿದ್ದವು.

ಮಗನಿಗಾಗಿ ಮನೆ ಕಟ್ಟಿದೆ
1972ರಲ್ಲಿ ಹನುಮಂತನಗರದಲ್ಲಿ ಮನೆ ಕಟ್ಟಿಸಿದೆ. ಅದಕ್ಕೆ ಮೂರನೇ ಮಗಳು ‘ರಕ್ಷತಾ’ ಹೆಸರನ್ನೇ ಇಟ್ಟಿದ್ದೆ. ಅದಕ್ಕೂ ಮುಂಚೆ 20 ವರ್ಷ ಬಾಡಿಗೆ ಮನೇಲಿದ್ದೆ. ಮಗ ಅಮೆರಿಕಕ್ಕೆ ಹೋದ. ವಾಪಸ್‌ ಬರೋಕೆ ಮೂರು ವರ್ಷ ಬೇಕು ಎಂದ. ‘ಅಲ್ಲೇ ಉಳಿದುಕೊಂಡಾನು’ ಎಂಬ ಭಯಕ್ಕೆ ಪದ್ಮನಾಭನಗರದಲ್ಲಿ ಅವನಿಗೆಂದೇ ಮನೆ ಕಟ್ಟಿಸಿದೆ. ಆ ಮನೆಗೆ ‘ಪುಟ್ಟಿ’ ಎಂದು ಹೆಸರಿಟ್ಟೆ. ಅದು ನನ್ನಾಕೆ ಗಂಗಮ್ಮಳ ಹೆಸರು. ಆದರೆ ಆತ ಅಮೆರಿಕದಲ್ಲೇ ಉಳಿದ. ಅಲ್ಲಿಗೆ ಹೋಗಿ 38 ವರ್ಷವಾಯಿತು.

ಮೊಮ್ಮಗನಿಗೆ ಅಮೆರಿಕದ ಪೌರತ್ವ ಸಿಕ್ಕಿದೆ. ಈ ಮೊದಲು ಅವನು ಇಲ್ಲಿಗೆ ಬಂದಾಗ, ‘ಏನಜ್ಜ ಎಷ್ಟೊಂದು ಹಕ್ಕಿಗಳು ಕೂಗುತ್ತವೆ. ಅಲ್ಲಿ ಹೀಗಿಲ್ಲ’ ಎನ್ನುತ್ತಿದ್ದ. ಈಗ ಅವನ ಭಾಷೆ ನನಗೆ ಸರಿಯಾಗಿ ಅರ್ಥವಾಗಲ್ಲ. ಹತ್ತು ಸಲ ಕೇಳಬೇಕು. ಕೊನೆಗೊಮ್ಮೆ, ‘ವಾಟ್‌ ಈಸ್‌ ದಿಸ್‌ ತಾತಾ’ ಎನ್ನುತ್ತಾನೆ. ಆ ತಾತಾ ಎನ್ನುವ ಶಬ್ದ ಮಾತ್ರ ತುಂಬಾ ಅಪ್ಯಾಯಮಾನವಾಗಿ ಕೇಳುತ್ತೆ. ಮನಸ್ಸು ಖುಷಿಯಲ್ಲಿ ಕುಣಿಯುತ್ತೆ.

ಈಗ ಮನೆಯಲ್ಲಿ ನಾನು, ನನ್ನಾಕೆ ಮಾತ್ರ ಇದ್ದೇವೆ. ನನಗೆ ನಾಲ್ಕು ಹೆಣ್ಣು ಮಕ್ಕಳು. ಒಬ್ಬಳು ಅಮೆರಿಕದಲ್ಲಿದ್ದಾಳೆ, ಒಬ್ಬಳು ರಾಜಾಜಿನಗರ, ಇಬ್ಬರು ನನ್ನ ಹತ್ತಿರವೇ ಇದ್ದಾರೆ. ಮೊಮ್ಮಗ ಅಮೆರಿಕದಲ್ಲಿ ಎಂಜಿನಿಯರ್‌. ಮೊಮ್ಮಗಳು ವೈಟ್‌ಫೀಲ್ಡ್‌ನಲ್ಲಿರುತ್ತಾಳೆ.

ಪಣ ತೊಟ್ಟ ಪುಟ್ಟಣ್ಣ
ನಮ್ಮದು ತೀರಾ ಸಂಪ್ರದಾಯಸ್ಥ ಕುಟುಂಬ. ನನಗೆ ಸಿನಿಮಾಗಳ ಬಗ್ಗೆ ಹೆಚ್ಚು ಒಲವಿರಲಿಲ್ಲ. ಸ್ನೇಹಿತರ ಒತ್ತಾಯಕ್ಕೆ ‘ಸಂಸ್ಕಾರ’ ಚಿತ್ರದಲ್ಲಿ ಮಾಡಿದೆ. ನಂತರ ಪುಟ್ಟಣ್ಣ ಕಣಗಾಲ್‌ ಹೇಳಿ ಕಳಿಸಿದರು. ‘ನಂಗೆ ಯಾವ ಛಾನ್ಸೂ ಬೇಡ. ನಾನು ಬರಲ್ಲ’ ಎಂದುಬಿಟ್ಟೆ. ಅವರು ಯಾರು ಎಂದೂ ಗೊತ್ತಿರಲಿಲ್ಲ. ‘ನಿನ್ನನ್ನು ದೊಡ್ಡ ಕಲಾವಿದನಾಗಿಸುತ್ತೇನೆ ಬಾ’ ಎಂದರು. ನಾನು ‘ಏನೂ ಬೇಕಾಗಿಲ್ಲ’ ಎಂದುಬಿಟ್ಟಿದ್ದೆ. ಕೊನೆಗೂ ಒಪ್ಪಬೇಕಾಯಿತು.

ಟಿ.ಪಿ.ಕೈಲಾಸಂ ‘ಏನೊ ಮಗೂ, ನಾಟಕ ಮಾಡ್ತಿಯಂತೆ, ಸಿನಿಮಾ ಮಾಡಕ್ಕಾಗಲ್ವೇನೋ? ಯಾಕ್‌ ಹಿಂಗ್‌ ಮಾಡ್ತೀಯಾ’ ಅಂದ್ರು. ಸರಿ ಸಿನಿಮಾ ಬದುಕು ಶುರುವಾಯ್ತು. ಪುಟ್ಟಣ್ಣ ಸಿನಿಮಾಕ್ಕೆ ಹಾಕ್ಕೊಂಡಿದಾರೆ ಎಂದ ಮೇಲೆ ಎಲ್ಲರೂ ಅಪ್ರೋಚ್‌ ಮಾಡಿದರು.

ಸುಮಾರು 1978ರವರೆಗೆ ತುಂಬಾ ಬ್ಯುಸಿ ಆಗಿದ್ದೆ. ಹಾಗೆ ಶುರುವಾದ ಪಯಣ ‘ರೇ’ ಸಿನಿಮಾದಲ್ಲಿ ಕೊನೆಗೊಂಡಿತು. ಸತತ 57 ವರ್ಷದ ಸಿನಿಮಾ ಬದುಕಿನಲ್ಲಿ 800ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸಿನಿಮಾಗಳ ಇಂಪ್ಯಾಕ್ಟ್‌ ಮೊದಲಿನಂತೆ ಈಗಿಲ್ಲ. ತಲೆ ನೋವು ಬರುತ್ತೆ.

ಲೋಕನಾಥ್ ಬಗ್ಗೆ ಒಂದಿಷ್ಟು
*ವ್ಯಾಪಾರಸ್ಥರ ಮನೆತನ
*ಎಂಜಿನಿಯರಿಂಗ್ ಪದವೀಧರ
*ಸಂಪ್ರದಾಯದ ದಟ್ಟ ಪ್ರಭಾವ. ಮೊದಲ ಬಾರಿಗೆ ಹೋಟೆಲ್‌ಗೆ ಹೋದಾಗ 38 ವರ್ಷ
*1953ರಲ್ಲಿ ರೈಲು ತಪ್ಪಿಸಿಕೊಂಡು ಪರದಾಡಿದ ನಂತರ ಈವರೆಗೆ ರೈಲು ಹತ್ತಿಲ್ಲ
*ಫುಟ್‌ಬಾಲ್‌ ಗೋಲ್‌ ಕೀಪರ್‌ ಆಗಿ ಹೆಸರು ಮಾಡಿದ್ದರು. ಕಿಬ್ಬೊಟ್ಟೆಗೆ ಪೆಟ್ಟು ಬಿದ್ದ ನಂತರ ಅದರಿಂದ ದೂರ
*ಹಾಕಿ ತಂಡವೊಂದಕ್ಕೆ ಕ್ಯಾಪ್ಟನ್‌ ಆಗಿದ್ದರು. ಗೋಲ್‌ ಹೊಡೆಯಲು ಅವಕಾಶ ಕೊಡಲಿಲ್ಲ ಎನ್ನುವ ಸಿಟ್ಟಿಗೆ ಸಹ–ಆಟಗಾರನೊಬ್ಬ ಅವರ ಕಾಲಿಗೆ ಹೊಡೆದಿದ್ದ. ಅಂದಿನಿಂದ ಹಾಕಿ ಆಡಲಿಲ್ಲ
*ಕ್ರಿಕೆಟ್‌, ಬ್ಯಾಡ್ಮಿಂಟನ್‌, ವಾಲಿಬಾಲ್‌ ಇತರ ಮೆಚ್ಚಿನ ಆಟಗಳು
*ಥಿಯೇಟರ್‌ಗೆ ಹೋಗದೆ ಸುಮಾರು 20 ವರ್ಷವಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT