ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕುತಿಮ್ಮನ ಕಗ್ಗದ ಖ್ಯಾತಿಯ ಗುಟ್ಟೇನು?

Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ
ಕನ್ನಡ ಸಾಹಿತ್ಯದ ಬೆಳವಣಿಗೆಯ ಕಾಲದಲ್ಲಿ ಮಾಸ್ತಿಯವರು ಸರಳ, ನಿರುದ್ವಿಗ್ನ ಗದ್ಯವನ್ನು ರೂಪಿಸಿದರೆ, ಕುವೆಂಪು ಈ ಗದ್ಯಕ್ಕೆ ವಿಚಾರಶೀಲ ಭಾವತೀವ್ರತೆಯನ್ನೂ ಕಾವ್ಯ ಕಾಂತಿಯನ್ನು ತಂದು ಕೊಟ್ಟರೆ, ಡಿವಿಜಿ. ಕನ್ನಡ ಗದ್ಯಕ್ಕೆ ವೈಚಾರಿಕತೆಯ ಜೊತೆ ವೈಜ್ಞಾನಿಕ ಖಚಿತತೆ, ಶಾಸ್ತ್ರೀಯ ನಿರ್ದಿಷ್ಟತೆಯನ್ನೂ ಧಾವಂತವಿಲ್ಲದೆ ಬೆಳಕು ಚೆಲ್ಲುವ ಆಧುನಿಕ ಬರವಣಿಗೆಯ ರೀತಿಯನ್ನೂ ನಿರ್ಮಿಸಿಕೊಟ್ಟರು. ಇದು ಮಹತ್ವದ ಕೊಡುಗೆಯಾದರೂ ಇದಕ್ಕಿಂತ ಮಹತ್ವದ ಕೊಡುಗೆ ಡಿವಿಜಿಯವರಿಂದ ಕನ್ನಡಕ್ಕೆ ಲಭ್ಯವಾಯಿತು: ಅದು ಅವರ ಬದುಕಿನ ಕ್ರಮ: ಸಾಮಾಜಿಕ, ಸಾರ್ವಜನಿಕ ಜೀವನದಲ್ಲಿ ಅವರು ಬದುಕಿದ ರೀತಿ: ಇಲ್ಲಿ ಅವರು ಕಾಳಿಕೆಯೇ ಇಲ್ಲದ ಶುದ್ಧ ಅಪರಂಜಿ.  ಇದು ಬಹುಶಃ ನಾವು ಯಾರೂ ಮರೆಯಬಾರದ ಪಾಠ. ಏಕೆಂದರೆ ಫ್ಯಾಷನಬಲ್ ಪಾಶ್ಚಾತ್ಯ ಬುದ್ಧಿಜೀವಿಗಳಂತೆ ನಾವು ವೈಯಕ್ತಿಕ, ಸಾರ್ವಜನಿಕ ಬದುಕನ್ನು ಬೇರೆ ಬೇರೆ ಎಂದು ಸ್ವ–ಕ್ಷೇಮಕ್ಕೆ, ಸ್ವ–ಲಾಭಕ್ಕೆ ವಿಘಟಿಸಿ ನೋಡಲು ಕಲಿತುಬಿಟ್ಟಿದ್ದೇವೆ. ಇದಾಗಬಾರದು ಎನ್ನುವುದು ಅವರು ಕಲಿಸಿದ ಅನೇಕ ಪಾಠಗಳಲ್ಲಿ ಒಂದು ಅಮೂಲ್ಯ ಪಾಠ. ಈ ಪ್ರಾಸ್ತಾವಿಕ ಮಾತುಗಳು ನಾನೂ ಕನ್ನಡದ ಇತರ ಅನೇಕರಂತೆ ಡಿವಿಜಿ ಅವರ ಅಭಿಮಾನಿ ಎಂದು ಸ್ಪಷ್ಟಪಡಿಸಲು ಬಂದಿವೆ.    
 
ಜೀವನದಲ್ಲಿ ನಾನು, ಇನ್ನು ಉಳಿದವರಂತೆ, ಅನೇಕ ಆಶ್ಚರ್ಯಗಳನ್ನು ಕಂಡಿದ್ದೇನೆ; ಪರಮಾಶ್ಚರ್ಯ ಎನ್ನುವ ಸಂಗತಿಗಳಿಗೂ ಹಲವಾರು ಬಾರಿ ಸಾಕ್ಷಿಯಾಗಿದ್ದೇನೆ. ಆದರೆ ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’ದ ಅಗಾಧ ಜನಪ್ರಿಯತೆ ನಾನು ಕಂಡಿರುವ ಪರಮಾಶ್ಚರ್ಯಗಳಲ್ಲಿ ಒಂದು ಪರಮ ಪರಮಾಶ್ಚರ್ಯ. ಈ ಕೃತಿ ಅನೇಕ ಮರು ಮುದ್ರಣಗಳನ್ನು ಕಂಡಿದೆ. ನನ್ನ ಬಳಿ ಈಗಿರುವ ಪ್ರತಿಯೇ 2005ರ ಹದಿನಾರನೇ ಮುದ್ರಣ! ಇತ್ತೀಚೆಗೆ ಇದು ಇನ್ನೂ ಹಲವಾರು ಮುದ್ರಣಗಳನ್ನು ಕಂಡಿದ್ದರೆ ನನಗೆ ಆಶ್ಚರ್ಯವೇನೂ ಅನ್ನಿಸುವುದಿಲ್ಲ. ಇದು ಹಿಂದಿಗೆ ಅನುವಾದವಾಗಿದೆ; ಇಂಗ್ಲಿಷ್‌ಗೂ ಅನುವಾದವಾಗಿದೆ. ನನ್ನ ಬಂಧುಗಳಲ್ಲಿ ಒಬ್ಬರಾದ ಡಿ. ಶೇಷಗಿರಿರಾಯರು ಇದರ ಅನುವಾದಕರು. ‘ಕಾವ್ಯಾಲಯ’ದ ದಿ. ಕೃಷ್ಣಮೂರ್ತಿಯವರ ಸ್ನೇಹದೊಡನಾಟದಲ್ಲಿ ನಾನೇ ಈ ಅನುವಾದವನ್ನು ಪರಿಷ್ಕರಿಸಿಕೊಟ್ಟಿದ್ದೇನೆ.  
‘ಮಂಕುತಿಮ್ಮನ ಕಗ್ಗ’ದ ಜನಪ್ರಿಯತೆ ಕೇವಲ ಮುದ್ರಣ, ಮರು ಮುದ್ರಣ, ಅನುವಾದಗಳ ಚೌಕಟ್ಟಿನಲ್ಲಿ ನಿಂತಿಲ್ಲ. ಈಗ ಅನೇಕರು ಅದನ್ನು ವೇದೋಪನಿಷತ್ತು, ಗೀತೆಗಳಂತೆ ಕಂಡು ಅದಕ್ಕೆ ಭಾಷ್ಯ ವ್ಯಾಖ್ಯಾನ, ವಿವರಣೆ ಕೊಟ್ಟಿದ್ದಾರೆ. ಇನ್ನೂ ಅನೇಕರು ಗಮಕ, ಸುಗಮ ಸಂಗೀತದಂಥ ಸಾಧನಗಳ ಮುಖಾಂತರ ಅದರ ಜನಪ್ರಿಯತೆಯನ್ನು ಇನ್ನಷ್ಟು ಸದೃಢಗೊಳಿಸಿದ್ದಾರೆ. ಅನೇಕರ ಭಾಷಣಗಳಲ್ಲಿ ಇದರ ಅನೇಕ ಸಾಲುಗಳು ಸಾಮಾನ್ಯವಾಗಿ ಪದೇ ಪದೇ ಉದ್ಧೃತವಾಗುತ್ತವೆ. ಒಂದೊಂದು ಪದ್ಯವೂ ವೇದದ ಒಂದೊಂದು ಋಕ್ ಇದ್ದಂತೆ ಎನ್ನುವವರೂ ಇದ್ದಾರೆ. ಇದನ್ನೂ ನಾನಿಲ್ಲಿ ದಾಖಲಿಸಬಹುದು. ‘ಕನ್ನಡದ ಅತ್ಯುತ್ತಮ ಕವಿ ಯಾರು?’ ಎಂದು ಯಾರೋ ಶಿವರಾಮ ಕಾರಂತ ಅವರನ್ನು ಕೇಳಿದಾಗ ಅವರು ರೆಪ್ಪೆ ಬಡಿಯದೆ, ನಮ್ಮ ನವ್ಯಕವಿಗಳು ಪರಮಾಶ್ಚರ್ಯಪಡುವಂತೆ, ‘ಡಿಬಿಜಿ’ ಎಂದರಂತೆ. ಈ ಕಗ್ಗದ ಕುಗ್ಗದ ಜನಪ್ರಿಯತೆಯನ್ನು ಅರ್ಥ ಮಾಡಿಕೊಳ್ಳಲು ನಾನು ಮಾಡಿರುವ ಪ್ರಯತ್ನ ಈ ಸಣ್ಣ ಲೇಖನ.   
 
ಯಾವುದೇ ಕಾವ್ಯ ನಮಗೆ ಪ್ರಿಯವಾಗಬೇಕಾದರೆ ಅದರ ಕನ್ನಡ ನಮಗೆ ಪ್ರಿಯವಾಗಬೇಕು, ಆಪ್ತ ಅನ್ನಿಸಬೇಕು, ಹಾಗೆಯೇ ಕಿವಿಗೆ  ಹಿತ ಅನ್ನಿಸಿ, ಅದನ್ನು ಓದುವುದೇ ಮನಸ್ಸಿಗೆ ಸಂತೋಷ ಅನ್ನಿಸಬೇಕು, ಓದಿಸಿಕೊಳ್ಳುವ ಗುಣ ಅದಕ್ಕೆ ಅಗತ್ಯವಾಗಿ ಇರಬೇಕು. ಮತ್ತೆ, ಇವು ಯಾವುವೂ ದೊಡ್ಡ ಅಪೇಕ್ಷೆಗಳಲ್ಲ. ಕಗ್ಗದ ಮೊದಲ ನಾಲ್ಕು ಪಂಕ್ತಿಗಳನ್ನು ನೋಡಿ. 
 
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ l
ದೇವ ಸರ್ವೇಶ ಪರಬೊಮ್ಮನೆಂದು ಜನಂ ll
ಆವುದನು ಕಾಣದೊಡಮಳ್ತಿಯಂ ನಂಬಿಹುದೊ l
ಆ ವಿಚಿತ್ರಕೆ ನಮಿಸೊ ಮಂಕುತಿಮ್ಮ ll
 
ದ್ವಿತೀಯಾಕ್ಷರ ಪ್ರಾಸದ ಬವಣೆಯನ್ನೂ ಅನುಸ್ವಾರದ ರಗಳೆಯನ್ನೂ ಕ್ಷಣ ಮರೆತುಬಿಡೋಣ. ‘ಬೊಮ್ಮ’, ಪದ ಸ್ವಲ್ಪ ಹಿಂಸೆಯೇ:  ನಮ್ಮ ಕಾಲದವರಿಗೆ ‘ಬ್ರಹ್ಮ’ ಪರಿಚಿತ ಪದ. ‘ಅಳ್ತಿ’ ಇವೊತ್ತಿನಲ್ಲಿ ಬಳಕೆಯಲ್ಲಿ ಇಲ್ಲದ ಶಬ್ದ. ‘ಜನಂ’ನ ಅನುಸ್ವಾರ, ಮಾತ್ರಾಗಣದ ಲೆಕ್ಕಾಚಾರ ಪ್ರಪಂಚಕ್ಕೆ ಸೇರಿದ್ದು. ಇಲ್ಲಿನ ಕನ್ನಡ ಇಪ್ಪತ್ತನೆ ಶತಮಾನದ್ದಲ್ಲ. ದ್ವಿತೀಯಾಕ್ಷರ ಪ್ರಾಸ, ಅನುಸ್ವಾರದ ಭಾರದಿಂದ ಬಳಲುವ ಹಳಗನ್ನಡ, ನಡುಗನ್ನಡದ ಮಿಶ್ರಣವಾದ, ಇದು ಯಾವ ಕಾಲದ ಕನ್ನಡ? ಎಂದು ಕೇಳುವಂತೆ ಮಾಡುತ್ತದೆ. ಮಾಸ್ತಿಯಂಥವರು ಅವರ ಕಾಲಕ್ಕೇ ಈ ತೊಡರುಗಳನ್ನೆಲ್ಲ ನಿವಾರಿಸಿಕೊಂಡು ಬರೆಯುವ ಪದ್ಧತಿಯನ್ನು ತಂದಿದ್ದರು. ಹಾಗಿದ್ದೂ ಡಿವಿಜಿ ಏಕೆ ಈ ಕಷ್ಟವನ್ನು ಆಹ್ವಾನಿಸುತ್ತಾರೆ? ಕಾವ್ಯ ವಿಮರ್ಶೆಯಲ್ಲಿ ‘ಶಯ್ಯೆ’ ಎನ್ನುವುದುಂಟು. ಅದು ಪದಮೈತ್ರಿಗೆ ಸಂಬಂಧಿಸಿದ್ದು. ಇಲ್ಲಿ ಅದೇ ಇಲ್ಲ. ಮತ್ತೆ, ಪದಪ್ರಯೋಗ ನೋಡಿ ಈ ಕವನದ ಸಾಲುಗಳ ಕಾಲನಿರ್ಣಯವೂ ಕಷ್ಟವೇ. ಸಲೀಸಾದ, ಸುಭಗ ಓದಿಗೇ ಇಲ್ಲಿ ಸಂಚಕಾರ ಬಂದಿದೆ. 
 
ಮತ್ತೆ, ಯಾವುಯಾವುದೋ ಕಾಲದ ಶಬ್ದಗಳ ಜಮಾವಣೆಯ ಜೊತೆಗೆ ಹಳಗನ್ನಡ–ನಡುಗನ್ನಡ ಮಿಶ್ರಣದ ಬರವಣಿಗೆಯನ್ನು ಇಲ್ಲಿ ಹುಡುಕಬೇಕಾಗಿಲ್ಲ; ಅಂಥವು ದಂಡಿಯಾಗಿ, ಹೇರಳವಾಗಿ ಇಲ್ಲಿ ಸಿಗುತ್ತವೆ; ಈ ಕೆಲವು ಶಬ್ದಗಳ ಬಳಕೆ ನೋಡಿ: ‘ಖೇಲನವ ಬೇಡವೆನುವರು’ (ಪದ್ಯ ಸಂಖ್ಯೆ 267); ‘ರೋಹಿ ಜಾಗ್ರತದಪ್ಪೆ’ (377); ‘ವಲ್ಗುರೂಪೆ ಸುಭದ್ರೆ’ (276); ‘ಭೀತತೆಯುಮಿರದು’ (363), ‘ಪರಿರಿನೆಳೆಸದದೇನಮಂ’ (745); ‘ದೃಶ್ಯವೆಲ್ಲವು ನಶ್ಶವಾದೊಡಂ, ವಿವದಿಗಳಾದಯ ನಿರ್ಣಯಕೆ’ (814),  ‘ಪೌರುಷಾಶ್ವಕ್ಕಾಶೆ ಛಾಟಿ’ (815), ‘ಬೊಂಕು ದೀವಿಗೆ’ (45), ‘ನುಡಿಗಟ್ಟಿನಾಟದಕ್ಕರ ಚೀಟಿಯೊಟ್ಟಿನಲ್ಲಿ’ (187), ‘ಮಾನವನುಮಂತುದರಶಿಷ್ಯನವನಾ’ (278), ‘ಆರಿಹರು ಪತಗದುಡುಪನು ಹುಡುಕಿ ಮೆಚ್ಚಲ್’ (567). ಸ್ವಲ ಕನ್ನಡ ಬಲ್ಲಂಥ, ಕ್ವಚಿತ್ ಕಾವ್ಯರಚನಾ ಪರಿಶ್ರಮವಿರುವ ನನ್ನಂಥವನಿಗೂ ಇದು ಮನಸ್ಸಿನಲ್ಲಿ ಮೌನವಾಗಿ ಓದಿಕೊಳ್ಳಲು ಕಷ್ಟ; ಗಟ್ಟಿಯಾಗಿ ಓದುವುದು ಇನ್ನೂ ಕಷ್ಟ. ಇದು ಬಲು ರೂಕ್ಷ ಬರವಣಿಗೆ. 
ಇಲ್ಲಿನ ಕನ್ನಡ ಒಂದು ಸಮಸ್ಯೆಯಾದರೆ ಇಲ್ಲಿನ ವೈಚಾರಿಕತೆ ಇನ್ನೂ ಒಂದು ಸಮಸ್ಯೆಯೇ. ಏಕೆಂದರೆ ಸ್ವೋಪಜ್ಞ ಎನ್ನುವ ಬರವಣಿಗೆ ಇಲ್ಲಿ ಇಲ್ಲವೇ ಇಲ್ಲ ಎಂದರೂ ತಪ್ಪಲ್ಲ. ಡಿವಿಜಿ ಅವರದೇ ಎನ್ನಬಹುದಾದ ಒಂದೇ ಒಂದು ಸ್ವತಂತ್ರ ಆಲೋಚನೆಯೂ ಇಲ್ಲಿ ಇಲ್ಲ. ಬಹುಪಾಲು ಪದ್ಯಗಳು ವೇದೋಪನಿಷತ್ತುಗಳ, ಗೀತೆಯ, ವಿಸ್ತಾರವಾದ ಸಾಹಿತ್ಯದ ಓದಿನಿಂದ ಎರವು ಪಡೆದುಕೊಂಡವು.  ಒಂದೆರಡು ಉದಾಹರಣೆ: 
 
ಆವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ l
ಅವರೆಷ್ಟು ಯಶವಂತರ್ ಎನುತ ಕರುಬಿನಲಿ ll
ಭವಿಕ ನಿನಗೆಷ್ಟುಹುದೋ ಮರೆತು ನೀಂ ಕೊರಗುವುದು l 
ಶಿವನಿಗೆ ಕೃತಜ್ಞತೆಯೇ? ಮಂಕುತಿಮ್ಮ ll
 
ಇದು ಷೇಕ್ಸ್‌ಪಿಯರಿನ, 
Wishing me like to one more rich in hope, 
Featured like him, like him with friends possessed 
Desiring this man’s, art, and than man’s scope, 
With what I most enjoy contented least. 
 
ಸಾಲುಗಳ ಅನುವಾದ.  
‘ಹಳೆ ಧರ್ಮ ಸತ್ತಿಹುದು, ಹೊಸ ಧರ್ಮ ಹುಟ್ಟಿಲ್ಲ’ ಎನ್ನುವುದು ಡಿವಿಜಿ ಅವರ ಪ್ರಿಯಕವಿ ಮ್ಯಾಥ್ಯೂ ಆರ್ನಾಲ್ಡ್‌ನ ‘The one dead and the other powerless to be born’; ಮಲಗಿರುವ ಮೃಗವಂತಿರಲು ಬಿಡುವುದೆ ಜಾಣು ‘Let the sleeping dog lie’ನ ಅನುವಾದ. ಸಂಸ್ಕೃತದಿಂದ ಬಂದವು ಇಂಥವೆಷ್ಟೋ ಇವೆ. 
 
ಜನಪ್ರಿಯತೆಯಲ್ಲಿ ಕನ್ನಡದಲ್ಲಿ ಲಕ್ಷ್ಮೀಶನ ‘ಜೈಮಿನಿ ಭಾರತ’, ಕನಕ ದಾಸರ ‘ನಳ ಚರಿತ್ರೆ’ಗಳಿಗೆ ವಿಶಿಷ್ಟ ಸ್ಥಾನವಿದೆ; ಜನರ ನಾಲಗೆಯ ಮೇಲಿವೆ ಇವು. ಕಗ್ಗ ಉಳಿದಿರುವುದು ಕೆಲವು ಶಿಷ್ಟ ಓದುಗ ವರ್ಗದಿಂದ ಮಾತ್ರ. ಅನೇಕರಿಗೆ ಅದೊಂದು ರೀತಿಯ ಬೌದ್ಧಿಕ ವ್ಯಾನಿಟಿ ಬ್ಯಾಗ್. ಬೌದ್ಧಿಕ ಪೌರೋಹಿತ್ಯಕ್ಕೆ ಅನುಕೂಲಕರವಾದ ಒಣ ಸಮಿತ್ತು. ಇದೇ ಅದರ ಗುಟ್ಟಿರಬಹುದೇ?
 
ಈ ಲೇಖನದ ಬಗ್ಗೆ ಪ್ರತಿಕ್ರಿಯೆಗಳಿಗೆ ಸ್ವಾಗತ. 
ಇ– ಮೇಲ್‌ mukthachanda@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT