ಸಮ್ಮಿಶ್ರ ಸರ್ಕಾರದ ಆಯಸ್ಸು ಮುಗಿದಿದೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

7

ಸಮ್ಮಿಶ್ರ ಸರ್ಕಾರದ ಆಯಸ್ಸು ಮುಗಿದಿದೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

Published:
Updated:

ಕೋಲಾರ: ‘ಕಾಂಗ್ರೆಸ್ ನಾಯಕರು ಮಾಡಿದ ಅವಮಾನದಿಂದ ಬೇಸತ್ತು ಸಚಿವ ಮಹೇಶ್ ರಾಜೀನಾಮೆ ನೀಡಿದ್ದು, ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆಯಸ್ಸು ಮುಗಿದಿದೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಚಿವ ಮಹೇಶ್‌ ಅವರ ರಾಜೀನಾಮಗೆ ಕಾಂಗ್ರೆಸ್‌ ನಾಯಕರೇ ಕಾರಣ. ಸರ್ಕಾರದ ಮೊದಲ ವಿಕೆಟ್ ಪತನವಾಗಿದ್ದು, ಶೀಘ್ರದಲ್ಲೇ ಸರ್ಕಾರ ಉರುಳುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್‌ನ ಕೆಲ ಹಿರಿಯ ಸಚಿವರು ಸೇರಿ ಮಾಡಿದ ಅವಮಾನದಿಂದ ಬೇಸತ್ತು ಶಂಕರ್‌ ರಾಜೀನಾಮೆ ಕೊಟ್ಟಿದ್ದಾರೆ. ಮಹಾಘಟ ಬಂಧನದಿಂದ ಬಿಎಸ್‍ಪಿ ಹೊರ ಹೋಗಿರುವುದು ಸಹ ಮಹೇಶ್‌ರ ರಾಜೀನಾಮೆಗೆ ಮತ್ತೊಂದು ಕಾರಣ’ ಎಂದರು.

‘ಜೆಡಿಎಸ್‌ನವರು ಅಧಿಕಾರಕ್ಕಾಗಿ ಕಾಂಗ್ರೆಸ್‌ನ ಮನೆ ಬಾಗಿಲಿಗೆ ಹೋಗಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮತ್ತು ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಭ್ರಷ್ಟಾಚಾರ ಮುಚ್ಚಿಹಾಕಲು ಕಾಂಗ್ರೆಸ್‌ ಮುಖಂಡರೇ ಜೆಡಿಎಸ್‌ನ ದೇವೇಗೌಡರ ಮನೆ ಬಾಗಿಲಿಗೆ ಹೋದರು. ಬಿಜೆಪಿ ಮುಖಂಡರು ತಮ್ಮ ತಪ್ಪು ಸರಿಪಡಿಸಿಕೊಂಡು ಉತ್ತಮ ಆಡಳಿತ ನೀಡುವ ಕಾಲ ಹತ್ತಿರವಾಗಿದೆ’ ಎಂದು ಹೇಳಿದರು.

ಕುತಂತ್ರದಿಂದ ಗೆಲುವು: ‘ಸಂಸದ ಕೆ.ಎಚ್.ಮುನಿಯಪ್ಪ ಕುತಂತ್ರದಿಂದಲೇ ಏಳು ಸಾರಿ ಗೆದ್ದಿದ್ದಾರೆ. ಹಿಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತರಾತುರಿಯಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಆರಂಭಿಸುವ ನಾಟಕವಾಡಿ ಜನರನ್ನು ನಂಬಿಸಿದರು. ಆದರೆ, ಜಿಲ್ಲೆಯಲ್ಲಿ ಕಾರ್ಖಾನೆ ಸ್ಥಾಪಿಸಲು ಅವರಿಗೆ ಆಸಕ್ತಿಯಿಲ್ಲ’ ಎಂದು ಟೀಕಿಸಿದರು.

₹ 2 ಸಾವಿರ ಕೋಟಿ ಆಸ್ತಿ: ‘ಮುನಿಯಪ್ಪ ಮೊದಲ ಬಾರಿಗೆ 1991ರಲ್ಲಿ ಸಂಸದರಾದಾಗ ಚುನಾವಣಾ ಆಯೋಗಕ್ಕೆ ನೀಡಿರುವ ದಾಖಲೆಪತ್ರಗಳಲ್ಲಿ ₹ 61 ಸಾವಿರ ಆದಾಯ ತೋರಿಸಿದ್ದಾರೆ. ಈಗ ಅವರ ಒಟ್ಟಾರೆ ಆಸ್ತಿ ಮೌಲ್ಯ ₹ 2 ಸಾವಿರ ಕೋಟಿ ಮೀರಿದೆ. ಅವರು ಕೊಡಗು ಜಿಲ್ಲೆಯಲ್ಲಿ 500 ಎಕರೆ ಜಮೀನು ಖರೀದಿಸಿದ್ದಾರೆ’ ಎಂದು ಆರೋಪಿಸಿದರು.

‘ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅಭ್ಯರ್ಥಿಪರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜಿಲ್ಲೆಯ ಶೇ 80ರಷ್ಟು ಮತದಾರರು ಮುನಿಯಪ್ಪ ವಿರುದ್ದ ತಿರುಗಿಬಿದ್ದಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ’ ಎಂದು ಭವಿಷ್ಯ ನುಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ಪಿ.ಗೋಪಾಲ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !