‘ಶಾಸ್ತ್ರ’ಕ್ಕೆ ಸೀಮಿತವಾದ ಬರ ವೀಕ್ಷಣೆ

7
ಕೋಲಾರ–ಚಿಕ್ಕಬಳ್ಳಾಪುರ ಮುಖ್ಯರಸ್ತೆಗೆ ಹೊಂದಿಕೊಂಡಂತೆ ನಡೆದ ಸಚಿವ ಸಂಪುಟದ ಉಪ ಸಮಿತಿ ಸದಸ್ಯರ ಬರ ಪರಿಶೀಲನೆ ‘ಪ್ರಹಸನ’

‘ಶಾಸ್ತ್ರ’ಕ್ಕೆ ಸೀಮಿತವಾದ ಬರ ವೀಕ್ಷಣೆ

Published:
Updated:
Prajavani

ಚಿಕ್ಕಬಳ್ಳಾಪುರ: ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟದ ಉಪ ಸಮಿತಿ ಸದಸ್ಯರು ಶುಕ್ರವಾರ ಜಿಲ್ಲೆಯಲ್ಲಿ ನಡೆಸಿದ ಬರ ಪರಿಸ್ಥಿತಿ ಮತ್ತು ಪರಿಹಾರ ಕಾಮಗಾರಿಗಳ ವೀಕ್ಷಣೆ ‘ಶಾಸ್ತ್ರ’ಕ್ಕೆ ಸೀಮಿತವಾದಂತೆ ಕಂಡುಬಂತು.

ಸಚಿವರಾದ ಶಿವಶಂಕರರೆಡ್ಡಿ, ವೆಂಕಟರಮಣಪ್ಪ, ಎಸ್.ಆರ್. ಶ್ರೀನಿವಾಸ್ ಅವರನ್ನು ಒಳಗೊಂಡ ತಂಡ ಬೆಳಿಗ್ಗೆ ಕೋಲಾರಕ್ಕೆ ಭೇಟಿ ನೀಡಿತ್ತು. ನಿಗದಿತ ಸಮಯಕ್ಕಿಂತ ಸುಮಾರು ಒಂದು ಗಂಟೆ ತಡವಾಗಿ ಜಿಲ್ಲೆಯ ಗಡಿ ಪ್ರವೇಶಿಸಿದ ತಂಡ, ಹೋದ ಕಡೆಗಳೆಲ್ಲೆಲ್ಲ ತೋರುತ್ತಿದ್ದ ಧಾವಂತ ‘ಯಾವ ಪುರುಷಾರ್ಥಕ್ಕೆ ಇಂತಹದೊಂದು ಸಮೀಕ್ಷೆ ನಡೆಸಬೇಕಿತ್ತು’ ಎಂಬ ಪಿಸುಮಾತುಗಳನ್ನು ನೆರೆದವರ ನಡುವೆ ಕೇಳಿ ಬರುವಂತೆ ಮಾಡಿತು.

ತಂಡ ಮೊದಲು ಕೋಲಾರ–ಚಿಕ್ಕಬಳ್ಳಾಪುರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಶಿಡ್ಲಘಟ್ಟ ತಾಲ್ಲೂಕಿನ ಗಂಭೀರನಹಳ್ಳಿ ಗ್ರಾಮದ ರೈತ ಜಿ.ಕೆ.ಮುನಿಶಾಮಿಗೌಡ ಅವರ ಜಮೀನಿಗೆ ಭೇಟಿ ನೀಡಿ, ತೊಗರಿ ಮತ್ತು ಅವರೆ ಬೆಳೆಯ ಬೆಳೆ ಹಾನಿ ಪರಿಶೀಲನೆ ನಡೆಸಿತು.

ಮುನಿಶಾಮಿಗೌಡ, ‘ತಲಾ ಒಂದು ಎಕರೆಯಲ್ಲಿ ರಾಗಿ, ತೊಗರಿ, ಅವರೆ ಬೆಳೆದಿದ್ದೆ. ಮಳೆ ಇಲ್ಲದೆ ಎಲ್ಲಾ ಬೆಳೆಗಳು ಹಾಳಾಗಿವೆ. ಕೊಳವೆಬಾವಿ ಬತ್ತಿ ಐದು ವರ್ಷಗಳಾಗಿವೆ. ಮಳೆ ಆಶ್ರಿತ ಬೆಳೆ ಮಾತ್ರ ಬೆಳೆಯುತ್ತಿದ್ದೇವೆ. ಈ ಬಾರಿ ನನಗೆ ಸುಮಾರು ₨6 ಲಕ್ಷ ನಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.

ಇದೇ ವೇಳೆ ರೈತ ಸಂಘದ ಪದಾಧಿಕಾರಿಗಳು ಸಚಿವರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಂದಾದರು. ಆದರೆ ಅಲ್ಲಿ ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸುವ ಸ್ಥಿತಿಯಲ್ಲಿ ಯಾವೊಬ್ಬ ಸಚಿವರು ಇರಲಿಲ್ಲ.

ಬಳಿಕ ಸಚಿವ ತಂಡ ಹೊಸಪೇಟೆ ಪಂಚಾಯಿತಿ ವ್ಯಾಪ್ತಿಯ ಕಳ್ಯಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ನೀರು ಸರಬರಾಜು ವ್ಯವಸ್ಥೆ ಪರಿಶೀಲಿಸಲು ತೆರಳಿತು. ಆದರೆ ಆ ಗ್ರಾಮದಲ್ಲಿ ಸಚಿವರು ಐದು ನಿಮಿಷ ಸಹ ನಿಂತು ಜನರ ಅಹವಾಲು ಆಲಿಸುವ ಸಮಾಧಾನದ ನಡೆ ತೋರಲಿಲ್ಲ.

ಸಚಿವರ ಭೇಟಿ ಕಾರಣಕ್ಕೆ ಅಧಿಕಾರಿಗಳು ಮೊದಲೇ ತಂದು ನಿಲ್ಲಿಸಿದ್ದ ನೀರಿನ ಟ್ಯಾಂಕರ್‌ನತ್ತ ಮುಖ್ಯ ರಸ್ತೆಯಲ್ಲೇ ನಿಂತು ಕಣ್ಣು ಹಾಯಿಸಿದ ಸಚಿವರು, ಒಬ್ಬಿಬ್ಬರನ್ನು ಮಾತನಾಡಿಸಿದಂತೆ ಮಾಡಿ, ಎಂದಿನ ಧಾಟಿಯಲ್ಲಿ ಅಧಿಕಾರಿಗಳಿಗೆ ವಾರದೊಳಗೆ ನೀರಿನ ವ್ಯವಸ್ಥೆ ಮಾಡಿ ಎಂದು ಸೂಚಿಸಿ ವಾಹನ ಏರಿದರು. ಆದರೆ, ಅದೇ ದಾರಿಯ ಬದಿಯಲ್ಲಿ ಖಾಲಿ ಕೊಡಗಳನ್ನು ಹಿಡಿದು ನೀರಿಗಾಗಿ ಚಾತಕಪಕ್ಷಿಗಳಂತೆ ಸಾಲುಗಟ್ಟಿ ನಿಂತಿದ್ದ ಮಹಿಳೆಯರನ್ನು ಮಾತನಾಡಿಸಿ, ಅವರ ಸಮಸ್ಯೆ ಆಲಿಸುವ ಸೌಜನ್ಯವನ್ನು ಯಾವೊಬ್ಬ ಸಚಿವರು ತೋರಲಿಲ್ಲ.

ಬಳಿಕ ಹಿರೇಬಲ್ಲ ಕೆರೆಗೆ ಹೋಗಿ ನರೇಗಾ ಕಾಮಗಾರಿ ವೀಕ್ಷಿಸಿದ ಸಚಿವರ ತಂಡ, ಚಿಕ್ಕಬಳ್ಳಾಪುರಕ್ಕೆ ತೆರಳುವ ಮಾರ್ಗದಲ್ಲಿಯೇ ಮುಖ್ಯರಸ್ತೆ ಬದಿಗೆ ಹೊಂದಿಕೊಂಡಂತಿದ್ದ ಮಲ್ಲೇನಹಳ್ಳಿಯ ರೈತರೊಬ್ಬರ ಜಮೀನಿಗೆ ಭೇಟಿ ನೀಡಿ ತರಾತುರಿಯಲ್ಲಿಯೇ ಮುಸುಕಿನ ಜೋಳದ ಬೆಳೆ ವೀಕ್ಷಣೆ ‘ಶಾಸ್ತ್ರ’ ನೆರವೇರಿಸಿತು. ನಂತರ ಶಿಡ್ಲಘಟ್ಟದ ಪರಿವೀಕ್ಷಣಾ ಮಂದಿರದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು, ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲು ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದತ್ತ ಪ್ರಯಾಣ ಬೆಳೆಸಿತು.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಎಸ್ಪಿ ಕಾರ್ತಿಕ್ ರೆಡ್ಡಿ ಅವರು ಸಚಿವರ ತಂಡಕ್ಕೆ ಸಾಥ್ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !