ಹೌದು ನಾನು ಕಣ್ಣೀರು ಹಾಕುತ್ತೇನೆ: ಮೋದಿ ಮೂದಲಿಕೆಗೆ ಸಿಎಂ ತಿರುಗೇಟು

ಸೋಮವಾರ, ಮೇ 27, 2019
33 °C

ಹೌದು ನಾನು ಕಣ್ಣೀರು ಹಾಕುತ್ತೇನೆ: ಮೋದಿ ಮೂದಲಿಕೆಗೆ ಸಿಎಂ ತಿರುಗೇಟು

Published:
Updated:

ಬಾಗಲಕೋಟೆ: ‘ಹೌದು ನಾನು ಕಣ್ಣೀರು ಹಾಕುತ್ತೇನೆ. ಜನರ ಸಂಕಷ್ಟಗಳಿಗೆ ಮಿಡಿದು ಭಾವುಕನಾಗುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅದನ್ನೂ ಮಾಡುವುದಿಲ್ಲ. ಬರೀ ಸುಬ್ಬರಾಯನಂತೆ ಕಟ್ಟೆ ಭಾಷಣ ಕುಟ್ಟಿ ಹೋಗುತ್ತಾರೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಬಾಗಲಕೋಟೆಯಲ್ಲಿ ಗುರುವಾರ ತಮ್ಮನ್ನು ಕಣ್ಣೀರು ಹಾಕುವ ಮುಖ್ಯಮಂತ್ರಿ ಎಂದು ಪ್ರಧಾನಿ ನರೇಂದ್ರ ಮೋದಿ ಮೂದಲಿಸಿದ್ದಕ್ಕೆ ತೇರದಾಳದಲ್ಲಿ ಶುಕ್ರವಾರ ಕುಮಾರಸ್ವಾಮಿ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಪುಲ್ವಾಮಾದಲ್ಲಿ ಮೈಸೂರು ಭಾಗದ ಬಡ ಕುಟುಂಬದ ಯೋಧ ಬಲಿಯಾಗಿ ಆತನ ಪತ್ನಿ 19 ವರ್ಷಕ್ಕೆ ವಿಧವೆ ಆಗಿದ್ದನ್ನು ಕಂಡು ನಾನು ಕಣ್ಣೀರಿಟ್ಟಿದ್ದೇನೆ. ಪಾಕಿಸ್ತಾನದಲ್ಲಿ ಆಗಿರೋ ನೋವಿಗಲ್ಲ. ಅಷ್ಟಕ್ಕೂ ಪಾಕಿಸ್ತಾನದಲ್ಲಿ ಏನೂ ಆಗಿಲ್ಲ. ಅಲ್ಲಿನ ಗಡಿಯಲ್ಲಿ ಜನರಿಲ್ಲದ ಯಾವುದೋ ಕಾಡಿನಲ್ಲಿ ಬಾಂಕ್ ಹಾಕಿದ್ದಾರೆ. ನಾನು ಕಾಣದಿರೋದಲ್ಲ’ ಎಂದರು.

‘ಐದು ವರ್ಷಗಳ ಆಡಳಿತ ನಡೆಸಿರುವ ಮೋದಿ ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ’ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ‘ಬಾಗಲಕೋಟೆಗೆ ಬಂದು ಬಾಲಕೋಟ್ ಬಗ್ಗೆ ಮಾತಾಡಿ ಯಥಾಶೈಲಿ ತಮ್ಮ ಭಾಷಣ ಮುಂದುವರೆಸಿ ಹೋಗಿದ್ದಾರೆ’ ಎಂದು ಟೀಕಿಸಿದರು.

‘ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದರೆ ತಪ್ಪೇನಿದೆ. ರಾಜಕೀಯದಲ್ಲಿ ಯಾರೂ ಸನ್ಯಾಸಿ ಅಲ್ಲ. ಅವರ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ. ಮುಂದಿನ ಚುನಾವಣೆ ಬಳಿಕ ಸಿ.ಎಂ ಆಗ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನೀರು ಬಳಕೆಗೆ ಬಿಡುತ್ತಿಲ್ಲ

‘ಮಹದಾಯಿ ಯೋಜನೆಯಡಿ 4.5 ಟಿಎಂಸಿ ಅಡಿ ನೀರು ಉಪಯೋಗ ಮಾಡಿಕೊಳ್ಳಲು ನ್ಯಾಯಮಂಡಳಿ (ಟ್ರಿಬ್ಯುನಲ್) ಅನುಮತಿ ನೀಡಿದೆ. ಆದರೆ ಕೆಲಸ ಆರಂಭಿಸಲು ಕೇಂದ್ರ ಸರ್ಕಾರ ಬಿಡುತ್ತಿಲ್ಲ. ಗೆಜೆಟ್‌ ನೋಟಿಫಿಕೇಶನ್ ಹೊರಡಿಸದೇ ಸತಾಯಿಸುತ್ತಿದೆ’ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

‘ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್‌ ಹೊರಡಿಸದೇ ನಾವು ಕೆಲಸ ಆರಂಭಿಸಲು ಬರೊಲ್ಲ. ಈ ಬಗ್ಗೆ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದರೂ ಉಪಯೋಗವಾಗಿಲ್ಲ. ಆದರೆ ಮೋದಿ ಮಾತ್ರ ಇಲ್ಲಿ  ಬಂದು ಬಿಜೆಪಿಗೆ ಮತ ಕೊಡಿ ಎಂದು ಭಾಷಣ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಾಡಿಕೆಯಂತೆ ಈ ವರ್ಷ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲು ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಮುಂದಾಗುತ್ತಿಲ್ಲ. ಬೇಸಿಗೆಯಲ್ಲಿ ನದಿ ಪಾತ್ರದ ಜನರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದು, ನೀರು ಕೊಡದೇ ಬಿಜೆಪಿಯವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !