ಸೋಮವಾರ, ಸೆಪ್ಟೆಂಬರ್ 27, 2021
22 °C

ಆರೋಗ್ಯ ‘ಫ್ರೇಮ್’ ಮಾಡುವ ವಿಧಾನ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ರಡರಿಂದ ಮೂರು ತಾಸು ಧ್ಯಾನಸ್ಥರಂತೆ ನಿಲ್ಲಬೇಕು. ಗಮನವೆಲ್ಲ ‘ಫ್ರೇಮ್’ ಮೇಲೆಯೇ ಇರಬೇಕು. ಎದುರಾಳಿ ಆಡುವಾಗ ಕುಳಿತುಕೊಂಡು ‘ಲೆಕ್ಕ’ ಹಾಕಬೇಕು. ತನ್ನ ಸರದಿ ಬಂದಾಗ ಎದ್ದು ಹೋಗಬೇಕು. ಬಗ್ಗಬೇಕು, ಕ್ಯೂವನ್ನು ನಿಯಂತ್ರಿಸಿ ಚೆಂಡಿನ ಮೇಲೆ ಗುರಿ ಇಡಬೇಕು. ನೆರವಿಗೆ ‘ಬ್ರಿಜ್’ ಬೇಕೆಂದಾಗ ಬಗ್ಗಿ ತೆಗೆಯಬೇಕು, ವಾಪಸ್ ಇರಿಸಬೇಕು.

ನೋಡುವಾಗ ಬಹಳ ಸುಲಭ ಎಂದೆನಿಸುವ, ಆಸಲಿಗಳ, ಶ್ರೀಮಂತರ ಆಟ ಎಂದು ಹೇಳಲಾಗುವ ಬಿಲಿಯರ್ಡ್ಸ್, ಸ್ನೂಕರ್ ಮತ್ತು ಪೂಲ್ ಒಳಗೊಂಡ ‘ಕ್ಯೂ’ ಕ್ರೀಡೆಯಲ್ಲಿ ಇರುವ ದೈಹಿಕ ಶ್ರಮ ಕಡಿಮೆಯೇನಲ್ಲ. ಹೀಗಾಗಿಯೇ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡವರು ವ್ಯಾಯಾಮಕ್ಕೆ ಒತ್ತು ನೀಡುತ್ತಾರೆ. ದೈಹಿಕ ಮತ್ತು ಮಾನಸಿಕ ಫಿಟ್ ನೆಸ್ ಕಾಪಾಡಿಕೊಳ್ಳದೇ ಇದ್ದರೆ ಕ್ಯೂ ಕ್ರೀಡೆಯಲ್ಲಿ ಹೆಸರು ಗಳಿಸುವುದು ಕಷ್ಟಸಾಧ್ಯ.

ದೈಹಿಕವಾಗಿ ಹೆಚ್ಚು ಕಸರತ್ತು ಇಲ್ಲದ ಆಟಗಳು ಸ್ನೂಕರ್, ಬಿಲಿಯರ್ಡ್ಸ್ ಮತ್ತು ಪೂಲ್. ಟೇಬಲ್ ಮೇಲೆ ಇರುವ ಚೆಂಡುಗಳನ್ನು ಆರು ಪಾಕೆಟ್ ಗಳಿಗೆ ಹಾಕುವುದು ಮುಖ್ಯ ಗುರಿ. ಚೆಂಡಿನ ಮೇಲೆ ಗುರಿ ಇರಿಸುವುದಕ್ಕಾಗಿ ಆಟಗಾರ ಮೇಜಿನ ಸುತ್ತ ಗಿರಕಿ ಹೊಡೆಯಬೇಕಾಗುತ್ತದೆ. ಕ್ಯೂನಲ್ಲಿ ಚೆಂಡನ್ನು ತಳ್ಳುವ ಸಂದರ್ಭದಲ್ಲಿ ವಿವಿಧ ಭಂಗಿಗಳನ್ನು ಅನುಸರಿಸಬೇಕಾಗುತ್ತದೆ. ಇದಕ್ಕಾಗಿ ದೇಹವನ್ನು ಬಾಗಿಸಬೇಕು, ಬಳುಕಿಸಬೇಕು, ಕೆಲವೊಮ್ಮೆ ಮೇಜಿನ ಮೇಲೆ ಮಲಗಬೇಕು. ಕಾಲುಗಳನ್ನು ವಿವಿಧ ರೀತಿಯಲ್ಲಿ ಸ್ಟ್ರೆಚ್ ಮಾಡಿ ಚೆಂಡು ಇರುವಲ್ಲಿಗೆ ಕ್ಯೂ ತಲುಪುವಂತೆ ಮಾಡಬೇಕು. ಕೆಲವರು ದೇಹವನ್ನು ಮೇಜಿನ ಚಾಚಿಕೊಂಡು ಗುರಿ ತಲುಪುತ್ತಾರೆ.

ಈ ಎಲ್ಲ ಸಂದರ್ಭದಲ್ಲಿ ದೇಹಕ್ಕೆ ಫಿಟ್ ನೆಸ್ ಅಗತ್ಯ. ಆಲಸ್ಯ ಕಾಡಿದರೆ, ಉದಾಸೀನ ಮಾಡಿದರೆ ಆಟದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಇದಕ್ಕಾಗಿ ಮಾನಸಿಕವಾಗಿಯೂ ಆಟಗಾರ ಗಟ್ಟಿಯಾಗಿರಬೇಕು.

ವ್ಯಾಯಾಮ, ಆಹಾರ ಸೇವನೆ…

ನಿಲ್ಲುವ, ಕುಳಿತುಕೊಳ್ಳುವ ಮತ್ತು ಬಾಗುವ ‘ಎಕ್ಸೈಸ್’ ಹೆಚ್ಚು ಇರುವುದರಿಂದ ಕಾಲು-ಕೈ ಮತ್ತು ಸೊಂಟದ ಭಾಗದ ಮಾಂಸಪೇಶಿಗಳಿಗೆ ಶಕ್ತಿ ತುಂಬಲು ಕ್ಯೂ ಕ್ರೀಡಾಪಟುಗಳು ವಿಶೇಷ ವ್ಯಾಯಾಮಕ್ಕೆ ಮೊರೆ ಹೋಗುತ್ತಾರೆ. ಪ್ರತಿಯೊಬ್ಬರ ದೈಹಿಕ ಶಕ್ತಿಗೆ ಅನುಸಾರವಾಗಿ ವ್ಯಾಯಾಮವನ್ನು ನಿಗದಿ ಮಾಡಲಾಗುತ್ತದೆ. ಓಟ ಮತ್ತು ಈಜನ್ನು ಹೆಚ್ಚಿನವರು ಅವಲಂಬಿಸಿದ್ದಾರೆ.

ಆಹಾರ ಸೇವನೆಯಲ್ಲಿ ಕೆಲವು ಶಿಸ್ತನ್ನು ಅನುಸರಿಸುತ್ತಾರೆ. ದೇಹ ಭಾರವಾಗುವಂಥ ಆಹಾರ ಪದಾರ್ಥಗಳಿಂದ ದೂರ ಇರುವಂತೆ ಸೂಚಿಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಆಟಗಾರರು ಫಿಟ್‌ನೆಸ್‌ ಟ್ರೇನರ್ ಮತ್ತು ಡಯಟ್ ತಜ್ಞರನ್ನು ನೇಮಕ ಮಾಡಿಕೊಂಡಿರುತ್ತಾರೆ. ಆನ್‌ಲೈನ್‌ನಲ್ಲಿ ಸಲಹೆಗಳನ್ನು ಪಡೆಯುವವರೂ ಇದ್ದಾರೆ. 

ಎರಡು ಅವಧಿಗಳ ವ್ಯಾಯಾಮ

ಒಟ್ಟು 21 ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಬೆಂಗಳೂರಿನ ಪಂಕಜ್ ಅಡ್ವಾಣಿ ಅವರ ಫಿಟ್ ನೆಸ್ ಸೂತ್ರ ಸುಲಭವಾಗಿದೆ. ‘ಸ್ಟಾಮಿನಾ ಹೆಚ್ಚಿಸಲು, ಬಾಗುವ-ಬಳುಕುವ ಕ್ರಿಯೆಯನ್ನು ಸರಾಗವಾಗಿ ಮಾಡಲು, ದೈಹಿಕ ಸಾಮರ್ಥ್ಯ ಹೆಚ್ಚಿಸಲು ಮತ್ತು ಸಹಿಷ್ಣುತೆ ಹೆಚ್ಚಿಸಲು ನಾನು ಒತ್ತು ನೀಡುತ್ತೇನೆ. ಇದಕ್ಕಾಗಿ ಎರಡು ಅವಧಿಯ ವ್ಯಾಯಾಮದಲ್ಲಿ ತೊಡಗುತ್ತೇನೆ’ ಎಂದು ಅವರು ವಿವರಿಸುತ್ತಾರೆ.

ಸಣ್ಣಪುಟ್ಟ ವ್ಯಾಯಾಮಗಳಿಗೆ ಮೊರೆ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಏಷ್ಯನ್ ಟೆನ್ ರೆಡ್ ಚಾಂಪಿಯನ್‌ಷಿಪ್ ಟೂರ್‌ನಲ್ಲಿ ಬೆಳ್ಳಿ ಪದಕ ಗೆದ್ದ ಇರಾನ್‌ನ ಎಹ್ಸಾನ್ ಹೈದರಿ ನೆಶದ್ ತಮ್ಮ ಫಿಟ್ ನೆಸ್ ಸೂತ್ರವನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ಕ್ಯೂ ಕ್ರೀಡಾಪಟು ಕೆಲವು ಭಾಗಗಳ ಮಾಂಸಪೇಶಿಗಳಿಗೆ ಬಲ ತುಂಬಲು ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಹೆಚ್ಚು ಹೊತ್ತು ನಿಂತುಕೊಂಡೇ ಇರುವುದರಿಂದ ಕಾಲುಗಳಿಗೆ ಆಯಾಸ ಆಗದಂತೆ ನೋಡಿಕೊಳ್ಳಬೇಕು. ನಾನು ಇದಕ್ಕಾಗಿ ಕೆಲವು ವಿಶೇಷ ವ್ಯಾಯಾಮಗಳನ್ನು ಮಾಡುತ್ತೇವೆ. ಓಟ ಮತ್ತು ಈಜು ನಾನು ಅನೇಕ ವರ್ಷಗಳಿಂದ ರೂಢಿಸಿಕೊಂಡಿರುವ ವ್ಯಾಯಾಮ. ಯಾವುದನ್ನೂ ಅತಿಯಾಗಿ ಮಾಡುವುದಿಲ್ಲ. ಕೆಲವು ಸಣ್ಣಪುಟ್ಟ ವ್ಯಾಯಾಮಗಳನ್ನು ನಿತ್ಯವೂ ಮಾಡುತ್ತೇನೆ’ ಎಂದು ಅವರು ತಿಳಿಸಿದರು.

‘ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳು ವುದು ಮುಖ್ಯ. ಇದು ಸಾಧ್ಯವಾದರೆ ನಮ್ಮ ಟೇಬಲ್ ನಲ್ಲಿ ನಿರಾಯಾಸವಾಗಿ ಸಾಧನೆ ಮಾಡಬಹುದು. ಆಹಾರ ಸೇವನೆಯಲ್ಲೂ ಕೆಲವು ನಿರ್ಬಂಧಗಳನ್ನು ಹಾಕಿಕೊಂಡಿದ್ದೇನೆ. ಫಿಟ್‌ನೆಸ್‌ಗೆ ವಿಶೇಷ ತರಬೇತುದಾರ ಇದ್ದಾರೆ. ಡಯಟ್ ಗೂ ಆದ್ಯತೆ ನೀಡುತ್ತಿದ್ದೇನೆ’ ಎಂದು ಎಹ್ಸಾನ್ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು