ಅರ್ಥಪೂರ್ಣವಾಗಿ ಬಾಳುವುದು ರೂಢಿಸಿಕೊಳ್ಳಿ: ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ

ಶನಿವಾರ, ಮೇ 25, 2019
27 °C
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೆಜಿನ ವಾರ್ಷಿಕ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ

ಅರ್ಥಪೂರ್ಣವಾಗಿ ಬಾಳುವುದು ರೂಢಿಸಿಕೊಳ್ಳಿ: ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ನಾವು ಎಷ್ಟು ದಿನ ಬದುಕಿದೆವು ಎನ್ನುವುದಕ್ಕಿಂತಲೂ, ಹೇಗೆ ಬದುಕಿದೆವು ಎನ್ನುವುದು ಮುಖ್ಯವಾಗಬೇಕು. ಆದ್ದರಿಂದ, ವ್ಯರ್ಥವಾಗಿ ಕಾಲ ಕಳೆಯುವ ಬದಲು ಜೀವನದಲ್ಲಿ ರೀತಿನೀತಿ ರೂಢಿಸಿಕೊಂಡು ಅರ್ಥಪೂರ್ಣವಾಗಿ ಬಾಳುವುದು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೆಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಲವಾದ ಸಮಸ್ಯೆಗಳು ವ್ಯಕ್ತಿಯನ್ನು ಜೀವನದಲ್ಲಿ ಬಲಿಷ್ಠನನ್ನಾಗಿ ಮಾಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳೆಲ್ಲ ಸಣ್ಣಪುಟ್ಟ ಸಮಸ್ಯೆಗಳಿಗೆ ಅಂಜಬಾರದು. ಸವಾಲುಗಳಿಗೆ ಸಜ್ಜಾಗುವುದು ಜೀವನದ ನಿರಂತರ ಪ್ರಕ್ರಿಯೆ ಎಂಬುದು ಅರಿತು ಬಾಳಬೇಕು. ಸ್ವತಂತ್ರವಾಗಿ ಯೋಚಿಸಿ, ಉತ್ತಮ ನಿರ್ಧಾರ ಕೈಗೊಳ್ಳುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಇವತ್ತು ನಾವು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಶ್ರಮಪಟ್ಟು ಓದಲೇಬೇಕು. ವಿದ್ಯಾರ್ಥಿ ಜೀವನದಲ್ಲಿ ಶ್ರಮವಹಿಸಿದರೆ, ನಂತರ ಮೂರ್ನಾಲ್ಕು ದಶಕಗಳ ಕಾಲ ನೆಮ್ಮದಿ ಮತ್ತು ಸಂತೃಪ್ತ ಜೀವನ ನಡೆಸಬಹುದು’ ಎಂದರು.

‘ಪ್ರತಿಯೊಬ್ಬರಿಗೂ ಕಷ್ಟ ಇದ್ದೇ ಇರುತ್ತೆ. ಮನುಷ್ಯನಿಗೆ ಕಷ್ಟ ಬರದೇ ಇದ್ದರೆ ಅವರಲ್ಲಿರುವ ಚೈತನ್ಯ ಹೊರಗಡೆ ಬರಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗಾಗಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕಿದೆ. ಇತ್ತೀಚೆಗೆ ವಿದ್ಯಾರ್ಥಿಗಳು ಟಿ.ವಿ ಮತ್ತು ಧಾರಾವಾಹಿಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅವುಗಳಿಂದ ನಮಗೆ ಏನಾದರೂ ಸ್ಫೂರ್ತಿ ಸಿಗುತ್ತದೆಯೇ ಎಂದು ಯೋಚಿಸಬೇಕಿದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಓದಿನ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹ ತಯಾರಿ ನಡೆಸಬೇಕು. ನಾವು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ನಮ್ಮ ಜಿಲ್ಲೆಗೆ ಎರಡು ಭಾರತ ರತ್ನಗಳ ಕೀರ್ತೀ ತಂದ ಮಹನೀಯರೇ ಉದಾಹರಣೆ. ಇಂತಹ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರು ಐಎಎಸ್, ಕೆಎಎಸ್ ಅಧಿಕಾರಿಗಳು ಆಗುವುದು ಕಷ್ಟವೇನಲ್ಲ. ಅವೇನೂ ಕಬ್ಬಿಣದ ಕಡಲೆಯಲ್ಲ’ ಎಂದು ಹೇಳಿದರು.

ಕಾಲೇಜಿನ ಉಪನ್ಯಾಸಕಿ ಗೀತಾ ಮಾತನಾಡಿ, ‘ನಮ್ಮ ಕಾಲೇಜಿನಲ್ಲಿ 600ಕ್ಕೂ ಅಧಿಕ ವಿದ್ಯಾರ್ಥಿನಿಯರಿದ್ದಾರೆ. ಅವರಲ್ಲಿ ಬಹುತೇಕರು ಗ್ರಾಮೀಣ ಭಾಗದಿಂದ ಬರುವವರಿದ್ದಾರೆ. ಆದರೆ, ನಮಗೆ ಕೊಠಡಿಗಳ ಸಮಸ್ಯೆ ಎದುರಾಗುತ್ತಿದೆ. ಕೊಠಡಿಗಳು ಇದ್ದಿದ್ದರೆ ವಿಜ್ಞಾನ ವಿಭಾಗವನ್ನು ಸಹ ಪ್ರಾರಂಭ ಮಾಡಬಹುದಿತ್ತು’ ಎಂದು ತಿಳಿಸಿದರು. ಅದಕ್ಕೆ ಆರತಿ ಅವರು, ‘ಈ ಬಗ್ಗೆ ಜಿಲ್ಲಾಧಿಕಾರಿ ಅವರ ಜತೆಗೆ ಚರ್ಚಿಸಿ, ಆದಷ್ಟು ಬೇಗ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ಕಾಲೇಜು ಸ್ಥಳಾಂತರಕ್ಕೆ ಕ್ರಮಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು. ಜಿಲ್ಲಾ ಶಸ್ತ್ರ ಚಿಕಿತ್ಸಕ ಎಂ.ವಿ ವಿಜಯ್ ಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಲ್.ರೂಪಾ, ಪ್ರಾಂಶುಪಾಲ ನಾಗರಾಜಯ್ಯ, ಕಾಲೇಜಿನ ಉಪನ್ಯಾಸಕರಾದ ನರಸಿಂಹಮೂರ್ತಿ, ಅಬ್ದುಲ್ ಹಮೀದ್, ನಾರಾಯಣಸ್ವಾಮಿ, ಶಿವಾನಂದ, ಅಶ್ವತ್ಥಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !