ಬುಧವಾರ, ನವೆಂಬರ್ 20, 2019
20 °C
2 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ

ಡಿಕೆಶಿ ಪರ ಪ್ರತಿಭಟನೆ

Published:
Updated:
Prajavani

ಕನಕಪುರ: ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ ಮುಖಂಡರು ರಾಷ್ಟ್ರೀಯ ಹೆದ್ದಾರಿ 209 ರಸ್ತೆಯಲ್ಲಿ ಭಾನುವಾರ ರಸ್ತೆ ತಡೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಹಾಗೂ ನರೇಂದ್ರಮೋದಿ ಅಮಿತ್‌ ಶಾ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗೆ ಜೆಡಿಎಸ್‌ ಪಕ್ಷದವರು, ಆಟೋ ಚಾಲಕರು, ಕರವೇ ಸಂಘಟನೆಯವರು ಬೆಂಬಲ ನೀಡಿದ್ದರು.

ಸುಮಾರು 2 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ಮಾಡಿದ ಪ್ರತಿಭಟನಾಕಾರರು ರಸ್ತೆಯಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಸರ್ಕಾರದ ನಡೆಯನ್ನು ಖಂಡಿಸಿದರು. ಪ್ರತಿಭಟನೆ ವೇಳೆ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು.

ಈ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯ ಕುರುಬಳ್ಳಿ ಶಂಕರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್‌.ಧನಂಜಯ, ಕಾಂಗ್ರೆಸ್‌ ಹಿರಿಯ ಮುಖಂಡರಾದ ಎಚ್‌.ಕೆ.ಶ್ರೀಕಂಠು, ಜೈರಾಮೇಗೌಡ, ಬೂಹಳ್ಳಿ ಉಮೇಶ್‌, ವಿಜಯದೇವು,ಎಸ್‌.ಜೆ.ನಾಗರಾಜು, ಜೆಡಿಎಸ್‌ ಮುಖಂಡರಾದ ಚಂದ್ರು, ಕೇಬಲ್‌ ಉಮೇಶ್‌ ಮಾತನಾಡಿದರು.

‘ಡಿ.ಕೆ. ಶಿವಕುಮಾರ್‌ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ. ಮೋದಿ ಮತ್ತು ಶಾ ಇಡೀ ರಾಷ್ಟ್ರವನ್ನು ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕೆಂಬ ಕನಸಿಗೆ ಅಡ್ಡಿಯಾಗಿರುವ ಶಿವಕುಮಾರ್‌ ಅವರನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದ್ದಾರೆ’ ಎಂದು ದೂರಿದರು.

‘ಗುಜರಾತ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮೋದಿ ಮತ್ತು ಶಾ ಜೋಡಿಗೆ ಸವಾಲಾಗಿ ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿದರು. ಇದರಿಂದ ಮೋದಿ ಷಾಗೆ ಭಾರಿ ಮುಖಭಂಗವಾಯಿತು. ಇದನ್ನು ವೈಯಕ್ತಿಕ ದ್ವೇಷವಾಗಿ ಅವರು ತೀರಿಸಿಕೊಳ್ಳಲು ಹೊರಟಿದ್ದಾರೆ’ ಎಂದು ಕಿಡಿಕಾರಿದರು.

ಪ್ರತಿಭಟನಾಕಾರರು ಪ್ರತಿಭಟನಾ ಧರಣಿ ನಡೆಸಿ ಕೊನೆಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ಪ್ರತಿಕೃತಿಗಳನ್ನು ಹೆದ್ದಾರಿ ರಸ್ತೆಯಲ್ಲಿಟ್ಟು ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ವಿಚಾರಣೆ ನೆಪದಲ್ಲಿ ಡಿ.ಕೆ.ಶಿವಕುಮಾರ್‌ ಅವರಿಗೆ ಕಿರುಕುಳ ಕೊಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಮಂಗಳ ಸುರೇಶ್‌, ಸದಸ್ಯ ಚಂದ್ರಶೇಖರ್‌, ಮುಖಂಡರಾದ ಸಿ.ರಮೇಶ್‌, ನಟೇಶ್‌, ಎಲವಳ್ಳಿ ನಾಗರಾಜು, ಎಸ್.ಎಸ್‌.ಶಂಕರ್‌, ರಂಗಣ್ಣ, ಮಂಜು, ರವೀಂದ್ರ, ಆನಂದ, ತೆಂಗನಾಯ್ಕನಹಳ್ಳಿ ನಾಗೇಶ್‌, ಕುರುಬಳ್ಳಿ ನಾಗೇಶ್‌, ತೋಟಳ್ಳಿ ಸುನಿಲ್‌, ವಿ.ಆರ್‌.ದೊಡ್ಡಿ ಸಂಜಯ್‌, ಪುಟ್ಟಮಾದು, ಕುರುಬಳ್ಳಿ ಚಂದ್ರಶೇಖರ್‌, ಮಾದೇವಮ್ಮ, ಜಯಂತಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಪ್ರತಿಕ್ರಿಯಿಸಿ (+)