ಗುರುವಾರ , ನವೆಂಬರ್ 21, 2019
26 °C
ಮಿಂಚಿದ ರಿಕಿ, ಶಿವಂ ದುಬೆ

ದಕ್ಷಿಣ ಆಫ್ರಿಕಾ ‘ಎ’ ಎದುರಿನ ‘ಟೆಸ್ಟ್’ ಪಂದ್ಯ; ಭಾರತ ‘ಎ’ ತಂಡ ಜಯಭೇರಿ

Published:
Updated:
Prajavani

ತಿರುವನಂತಪುರ: ಭಾರತ ‘ಎ’ ತಂಡವು ಗುರುವಾರ ಇಲ್ಲಿ ಮುಕ್ತಾಯವಾದ ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರಿನ ‘ಟೆಸ್ಟ್‌’ನಲ್ಲಿ ಜಯಿಸಿತು.

48 ರನ್‌ಗಳ ಅಲ್ಪಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ‘ಎ’ ತಂಡವು 9.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 49 ರನ್‌ ಗಳಿಸಿ ಜಯಿಸಿತು. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ತಂಡವು 164 ರನ್ ಗಳಿಸಿತ್ತು. ಅದಕ್ಕುತ್ತರವಾಗಿ  ಆತಿಥೇಯರು 303 ರನ್‌ ಗಳಿಸಿ ಮುನ್ನಡೆ ಪಡೆದಿತ್ತು. ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಶಹಬಾಜ್ ನದೀಂ ಅವರ ಬೌಲಿಂಗ್‌ ದಾಳಿಗೆ ತತ್ತರಿಸಿತು. ಕೇವಲ 186 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಭಾರತ ‘ಎ’ ತಂಡದ ಗೆಲುವಿಗೆ ಕಡಿಮೆ ಮೊತ್ತದ ಗುರಿ ಲಭಿಸಿತು.

ಆದರೂ ಪ್ರವಾಸಿ ಬಳಗದ ಅನುಭವಿ ವೇಗಿ ಲುಂಗಿ ಗಿಡಿ (22ಕ್ಕೆ2) ಆತಿಥೇಯರಲ್ಲಿ ತುಸು ಆತಂಕ ಮೂಡಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (5 ರನ್) ಮತ್ತು ಅಂಕಿತ್ ಭಾವ್ನೆ (6 ರನ್) ಅವರ ವಿಕೆಟ್‌ಗಳನ್ನು ಕಬಳಿಸಿದರು.

ಆದರೆ, ರಿಕಿ ಭುಯ್ (ಔಟಾಗದೆ 20; 26ಎಸೆತ, 3ಬೌಂಡರಿ) ಮತ್ತು ಶಿವಂ ದುಬೆ  (ಔಟಾಗದೆ 12; 2ಎಸೆತ, 2ಸಿಕ್ಸರ್) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರಿಂದಾಗಿ ತಂಡವು ಸರಣಿಯಲ್ಲಿ 1–0 ಮುನ್ನಡೆ ಪಡೆಯಿತು.  ಎರಡನೇ ಪಂದ್ಯವು ಮೈಸೂರಿನಲ್ಲಿ ಮುಂದಿನ ವಾರ ನಡೆಯಲಿದೆ.

ಮೂರನೇ ದಿನವಾದ ಬುಧವಾರ ಸಂಜೆ ದಕ್ಷಿಣ ಆಫ್ರಿಕಾ ತಂಡವು 55 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 179 ರನ್‌ ಗಳಿಸಿತ್ತು. ಕೊನೆಯ ದಿನ ಬೆಳಿಗ್ಗೆ ಈ ಮೊತ್ತಕ್ಕೆ ಏಳು ರನ್‌ಗಳೂ ಮಾತ್ರ ಸೇರಿದವು. ಲೂಥೊ ಸಿಪಾಮಿಯಾ ಕೊನೆಯವರಾಗಿ ಔಟಾದರು. ಶಾರ್ದೂಲ್ ಠಾಕೂರ್ ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ದಕ್ಷಿಣ ಆಫ್ರಿಕಾ ’ಎ’: 164, ಭಾರತ: 303; ದ್ವಿತೀಯ ಇನಿಂಗ್ಸ್‌ :ದಕ್ಷಿಣ ಆಫ್ರಿಕಾ: 186, ಭಾರತ: 9.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 49 (ರಿಕಿ ಭುಯ್  ಔಟಾಗದೆ 20, ಶಿವಂ ದುಬೆ ಔಟಾಗದೆ 12, ಲುಂಗಿ ಗಿಡಿ 22ಕ್ಕೆ2, ಡೇನ್ ಪೀಡ್ತ್‌ 26ಕ್ಕೆ1) ಫಲಿತಾಂಶ: ಭಾರತ ‘ಎ’ ತಂಡಕ್ಕೆ 7 ವಿಕೆಟ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ

ಪ್ರತಿಕ್ರಿಯಿಸಿ (+)