ಗುರುವಾರ , ಮೇ 26, 2022
30 °C

22ರಿಂದ ಬೀದರ್‌ಲ್ಲಿ ದ.ಸಂ.ಸ. ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರವು ಜೂನ್ 22ರಿಂದ 24ರ ವರೆಗೆ ಬೀದರ್ ಅಣದೂರು ವೈಶಾಲಿನಗರದ ದಮ್ಮದರ್ಶನ ಭೂಮಿಯಲ್ಲಿ  ನಡೆಯಲಿದೆ ಎಂದು ಸಮಿತಿ ಸಂಚಾಲಕ ನಾಗಣ್ಣ ಬಡಿಗೇರ  ತಿಳಿಸಿದರು.ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಕರ್ತರ ಜಾಗೃತಿ, ದಲಿತರಲ್ಲಿ ಪ್ರಸಕ್ತ ದಿನಗಳ ತಿಳಿವಳಿಕೆ ನೀಡುವುದು, ಸಮಾಜದಲ್ಲಿನ ದೌರ್ಜನ್ಯವನ್ನು ವಿರೋಧಿಸುವ ಮನೋಭಾವನೆ ಹಾಗೂ ಚಳವಳಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.ಜೂನ್ 22ರಂದು ಬೆಳಿಗ್ಗೆ 9ಕ್ಕೆ ಧಮ್ಮಾನಂದ ಭಂತೇಜಿ ಸಾನ್ನಿಧ್ಯದಲ್ಲಿ  ಪ್ರೊ.ಎಸ್.ಜಿ. ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಇಂದಿರಾ ಕೃಷ್ಣಪ್ಪ ಧ್ವಜಾರೋಹಣ ಮಾಡುವರು. ಮಾವಳ್ಳಿ ಶಂಕರ ಅಧ್ಯಕ್ಷತೆ ವಹಿಸುವರು. ಸತ್ಯನಾರಾಯಣರಾವ್ ಅವರ ಪುಸ್ತಕ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.ಮೂರು ದಿನಗಳ ಕಾಲ ಒಟ್ಟು ಎಂಟು ಗೋಷ್ಠಿ ಹಮ್ಮಿಕೊಳ್ಳಲಾಗಿದೆ. `ಡಾ. ಬಿ.ಆರ್. ಅಂಬೇಡ್ಕರ್‌ರವರ ಅರ್ಥಿಕ ಚಿಂತನೆ ಇಂದಿಗೆ ಅದರ ಪ್ರಸ್ತುತತೆ~- ಡಾ. ಕೇಶವ್, `ಸ್ವಾತಂತ್ರ್ಯ ಪೂರ್ವ ದಲಿತ ಹೋರಾಟಗಳು~- ಡಾ. ಎಚ್.ಟಿ. ಪೋತೆ, `ದ.ಸಂ.ಸ. ಸಂವಿಧಾನದ ಪರಿಚಯ ಮತ್ತು ಚಾರಿತ್ರಿಕ ಹೋರಾಟಗಳು~- ಇಂದಿರಾ ಕೃಷ್ಣಪ್ಪ, `ಸಂವಿಧಾನದ ಆಶಯ ಮತ್ತು ಸಮಗ್ರ ಶಿಕ್ಷಣ ನೀತಿಗಳು~- ಡಾ. ನಿರಂಜನಾರಾಧ್ಯ, `ದಲಿತ/ಬಂಡಾಯ ಚಳುವಳಿಗಳು ಸಾಹಿತ್ಯ, ಸಮೂಹ ಮಾಧ್ಯಮ ಮತ್ತು ಸಾಂಸ್ಕೃತಿಕ ರಾಜಕಾರಣ~- ಡಾ. ಕೃಷ್ಣಪ್ಪ ಕೆ., `ಅಂಬೇಡ್ಕರ್ ದೃಷ್ಟಿ: ಬುದ್ಧ ಮತ್ತು ಆತನ ಧರ್ಮ~- ವಿಠ್ಠಲ್‌ದಾಸ್ ಪ್ಯಾಗೆ, `ಅಂಬೇಡ್ಕರ್ ದೃಷ್ಟಿಯಲ್ಲಿ: ಬಹುಜನ ರಾಜಕಾರಣ~- ಡಾ. ಅಪ್ಪಗೆರೆ ಸೋಮಶೇಖರ್, `ಸಾಮಾಜಿಕ ಸಂದರ್ಭ ಮತ್ತು ಮಹಿಳಾ ಹೋರಾಟಗಳು~- ಡಾ. ಅನುಸೂಯ ಕಾಂಬ್ಳೆ, `ಅಂಬೇಡ್ಕರ್ ವಾದದ ಗತಿ ತಾರ್ಕಿಕತೆ~- ಡಾ. ಶ್ರೀಕಾಂತ್ ಕುರಿತು ವಿಷಯ ಮಂಡಿಸಲಿದ್ದಾರೆ ಎಂದು ವಿಶ್ಲೇಷಿಸಿದರು.ಜೂನ್ 24 ರಂದು ಮಧ್ಯಾಹ್ನ 2 ಗಂಟೆಗೆ ಸಮಾರೋಪದಲ್ಲಿ ಸಿದ್ಧರಾಮೇಶ್ವರ ಸಮಾರೋಪದ ಭಾಷಣ ಮಾಡುವರು. ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸುವರು. ಅಬ್ದುಲ್ ಮನ್ನಾನ್ ಸೇಟ್, ರೋಹಿತಾಕ್ಷ, ಗೌತಮ ಪಾಟೀಲ, ಚಂದ್ರಕಾಂತ ಗದ್ದಗಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಸುಮಾರು 500 ಜನ ಪಾಲ್ಗೊಳ್ಳುವರು ಎಂದು ಹೇಳಿದರು.ಸಮಿತಿಯ ಜಿಲ್ಲಾ ಸಂಚಾಲಕ ಸಂಜೀವಕುಮಾರ ಜವರಕರ್, ವಿಭಾಗೀಯ ಸಂಚಾಲಕ ಅರ್ಜುನ್ ಗೊಬ್ಬುರ, ಬಸವರಾಜ ಪಾಸ್ವಾನ, ಶ್ರೀನಿವಾಸ ಖೇಳಗಿ, ಬಾಬುರಾವ್ ಶೆಳ್ಳಗಿ, ಶ್ರೀಹರಿ ಕರಕಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

`ಕೇಸರೀಕರಣದ ವಿರುದ್ಧ ಚಳವಳಿ~

ಗುಲ್ಬರ್ಗ: ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಸರೀಕರಣದ ಹೆಸರಲ್ಲಿ ಮಕ್ಕಳಲ್ಲಿ ಜಾತಿ, ಧರ್ಮದ ಮನೋಭಾವನೆ ಬಿತ್ತುತ್ತಿದ್ದಾರೆ. ಇಂತಹ ರಹಸ್ಯ ಕಾರ್ಯತಂತ್ರದ ವಿರುದ್ಧ ಚಳವಳಿ ಕೈಗೊಳ್ಳಲಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನಾ ಸಂಚಾಲಕ ನಾಗಣ್ಣ ಬಡಿಗೇರ ಎಚ್ಚರಿಕೆ ನೀಡಿದ್ದಾರೆ.ಸಚಿವರ ಈ ಕಾರ್ಯ ಜಾತ್ಯತೀತ ರಾಷ್ಟ್ರಕ್ಕೆ ಧಕ್ಕೆ ತರುವ ಕೆಲಸವಾಗಿದೆ.  ದಿನೇದಿನೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಹೆಚ್ಚಿಸಬೇಕು. ಈಗ ಇರುವ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ನೀಡಬೇಕು ಎಂದು ವಿನಂತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.