ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಂಥನ

Last Updated 24 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಸಾವಿತ್ರಮ್ಮ, ಪಿಚ್ಚಕುಂಟರ ಪಾಳ್ಯ, ರಾಮನಗರ ತಾಲ್ಲೂಕು
ಪ್ರಶ್ನೆ: ನಾವು ಸುಮಾರು ಎರಡು ಎಕರೆಯಲ್ಲಿ ಬಾಳೆ ಬೆಳೆದಿದ್ದೇವೆ. ಎಲೆಗಳು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ದರಿಂದ ಎರಡನೇ ಸಲ ಸ್ವಲ್ಪ ಯೂರಿಯಾ ಮತ್ತು ಪೊಟ್ಯಾಷ್ ಗೊಬ್ಬರ ಕೊಟ್ಟಿದ್ದೇವೆ. ಆದರೆ ಎಲೆಗಳು ಮುರಿದು ಬೀಳುತ್ತಿವೆ. ಇದಕ್ಕೆ ಕಾರಣ ಮತ್ತು ಪರಿಹಾರ ತಿಳಿಸಿ.

ಉತ್ತರ: ಬಾಳೆ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆ. ಕಡಿಮೆ ಬೆಲೆಗೆ ಹಣ್ಣುಗಳು ಸಿಗುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಉಪಯೋಗಿಸುತ್ತಾರೆ. ಬಾಳೆ ಹಣ್ಣಿನಲ್ಲಿ ಖನಿಜಾಂಶಗಳು ಮತ್ತು ಜೀವಸತ್ವಗಳು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಟ ಇದ್ದು ಶಕ್ತಿಯ ಮೂಲವಾಗಿದೆ.
 
ನೀವು ತಿಳಿಸಿರುವ ಲಕ್ಷಣಗಳು ಪೋಷಕಾಂಶಗಳ ಕೊರತೆಯಿಂದ ಆಗಿದ್ದಲ್ಲ. ಇದು ಮಣ್ಣಿನಲ್ಲಿರುವ ಪುಸೆರಿಯಂ ಆಕ್ಷಿಸ್ಪೊರಂ ಎಸ್ ಕುಬನ್ಸ್ ಎಂಬ ಶಿಲೀಂದ್ರದಿಂದ ಬರುವ ಸೊರಗು ರೋಗ ಅಥವಾ ಪನಾಮ ರೋಗ.
ರೋಗದ ಪ್ರಾರಂಭದ ಹಂತದಲ್ಲಿ ಕೆಳಭಾಗದ ಎಲೆಯ ತೊಟ್ಟಿನ ಭಾಗದಲ್ಲಿ ಹಳದಿಯ ಗೆರೆಗಳು ಕಾಣಿಸುತ್ತವೆ.
 
ಮುಂದುವರಿದಂತೆ ಕ್ರಮೇಣ ತೊಟ್ಟಿನ ಭಾಗದಲ್ಲಿ ಮುರಿದು ಬೀಳುತ್ತವೆ. ಎಲೆಗಳ ಅಂಚಿನ ಭಾಗ ಒಣಗುತ್ತದೆ. ಹೊಸದಾಗಿ ಬರುವ ಎಲೆಗಳು ಸಹ ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ರೋಗ ತೀವ್ರವಾದಾಗ ಕಾಂಡದಲ್ಲಿ ಉದ್ದುದ್ದನೆಯ ಗೆರೆಯಂತಿರುವ ಬಿರುಕುಗಳು ಉಂಟಾಗಿ ಗಿಡ ಮುರಿದು ಬೀಳುತ್ತದೆ.
 
ಇಂತಹ ಗಿಡಗಳನ್ನು ತೆಗೆದು ಬುಡದ ಗಡ್ಡೆಯನ್ನು ಕತ್ತರಿಸಿ ನೋಡಿದಾಗ ಒಳಗಿನ ಅಂಗಾಂಶವು ಕೂಡ ಕಂದು ಬಣ್ಣದಿಂದ ಕೂಡಿರುತ್ತದೆ. ಈ ರೋಗಾಣುಗಳು ಮಣ್ಣಿನಲ್ಲಿದ್ದು ಯಾವಾಗ ಬೇಕಾದರೂ ಬಾಳೆ ಬೆಳೆಗೆ ಬರಬಹುದು.

ಒಮ್ಮೆ ಬಾಳೆ ಬೆಳೆದ ಕಡೆ ಮತ್ತೆ ಬಾಳೆ ಬೆಳೆಯವುದರಿಂದ ರೋಗವನ್ನು ನಿಯಂತ್ರಿಸುವುದು ಕಷ್ಟ. ಈ ರೋಗವಿಲ್ಲದ ತೋಟಗಳಿಂದ ಕಂದುಗಳನ್ನು ತಂದು ನಾಟಿಗೆ ಉಪಯೋಗಿಸಬೇಕು. ಒಂದೆರಡು ಗಿಡಗಳಿಗೆ ರೋಗದ ಲಕ್ಷಣಗಳು ಕಂಡಾಗ ಅದನ್ನು ಬೇರುಸಮೇತ ಕಿತ್ತು ಸುಡಬೇಕು.

ಟ್ರೈಕೋಡರ್ಮವನ್ನು ಪ್ರತಿ ಗಿಡಕ್ಕೆ 20 ರಿಂದ 50 ಗ್ರಾಂನಂತೆ ನಾಟಿ ಮಾಡುವ ಸಮಯದಲ್ಲಿ ಮತ್ತು ನಾಟಿ ಮಾಡಿದ 3, 5 ಮತ್ತು 7 ತಿಂಗಳ ನಂತರ ಇದೇ ಪ್ರಮಾಣದಲ್ಲಿ ಹಾಕಬೇಕು.
 
ನಾಟಿ ಮಾಡುವ ಮೊದಲು ಕಂದುಗಳನ್ನು ಸ್ವಚ್ಚಗೊಳಿಸಿ, ಪ್ರತಿ ಗುಣಿಗೆ ಹತ್ತು ಗ್ರಾಂ, ಕಾರ್ಬೋಪ್ಯೂರಾನ್ ಅಥವಾ ಐದು ಗ್ರಾಂ ಪೋರೆಟ್ ಹರಳುಗಳನ್ನು ಮಣ್ಣಿನಲ್ಲಿ ಬೆರೆಸಬೇಕು.

ರೋಗಕ್ಕೆ ತುತ್ತಾದ ಗಿಡಗಳಿಗೆ ಒಂದು ಗ್ರಾಂ ಕಾರ್ಬನ್‌ಡೈಜಿನ್ ಔಷಧಿಗಳನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ, ಗಿಡದ ಸುತ್ತಲೂ ನೆಲ ನೆನೆಯುವಂತೆ ಹಾಕಬೇಕು. ಈ ಕ್ರಮಗಳನ್ನು ಅನುಸರಿಸುವುದರಿಂದ ಬಾಳೆ ಬೆಳೆಗೆ ಪನಾಮ ರೋಗ ಬರುವುದನ್ನು ತಡೆಯಬಹುದು.

ಬಸಪ್ಪನಾಯಕ, ನಂದಿಬೇವೂರು, ಹರಪನಹಳ್ಳಿ ತಾಲ್ಲೂಕು
ಪ್ರಶ್ನೆ: ಜೋಳದ ಪೈರುಗಳಲ್ಲಿ ಎಲೆಗಳ ಅಂಚುಗಳನ್ನು ಅಂಕು ಡೋಂಕಾಗಿ ಕೆಲವು ಕೀಟಗಳು ತಿಂದು ಹಾಕುತ್ತಿವೆ. ಇದರಿಂದ ಪೈರಿನ ಬೆಳವಣಿಗೆ ಕುಂಠಿತವಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ಕಷ್ಟವಾಗಿದೆ. ನಿಯಂತ್ರಣಕ್ಕೆ ಏನು ಮಾಡಬೇಕು?

ಉತ್ತರ:
  ನೀವು ಬರೆದಿರುವ  ಜೋಳದ ಪೈರಿನ ಎಲೆಗಳ ಲಕ್ಷಣಗಳನ್ನು ನಾವು ನೋಡಿದರೆ ಇದು ಖಂಡಿತವಾಗಿ ಮಿಡತೆ ಕಡಿದು ತಿಂದಿರುವ ಲಕ್ಷಣಗಳು. ಜೋಳದ ಬೆಳೆಗೆ ರೆಕ್ಕೆ ಇಲ್ಲದ ಡಕ್ಕನ್ ಮಿಡತೆಗಳು ಈ ರೀತಿ ಹಾನಿ ಮಾಡುತ್ತವೆ.
 
ಹಾವೇರಿ, ಸವಣೂರು, ಹಡಗಲಿ, ಹರಪನಹಳ್ಳಿ, ಮುಂತಾದ ಕಡೆಗಳಲ್ಲೂ ಜೋಳ ಬೆಳೆಯನ್ನು ಈ ರೀತಿ ಹಾಳು ಮಾಡುತ್ತವೆ. ಇದು ಜೋಳಕ್ಕೆ ಸೀಮಿತವಾಗಿದ್ದರೂ, ಇತರೆ ಧಾನ್ಯದ ಬೆಳೆ ಹಾಗೂ ಹುಲ್ಲಿನ ಬೆಳೆಗಳಲ್ಲೂ ಕಂಡು ಬರುತ್ತದೆ.

ರೆಕ್ಕೆ ಇಲ್ಲದ ಈ ಡಕ್ಕನ್ ಮಿಡತೆ ಮರಿ ಹಾಗೂ ಪ್ರೌಢ ಕೀಟಗಳೆರಡೂ ಎಲೆಗಳ ಅಂಚುಗಳನ್ನು ಅಂಕು ಡೊಂಕಾಗಿ ತಿನ್ನುತ್ತವೆ. ಕೆಲವೊಮ್ಮೆ ಎಲೆಗಳ ಮೇಲೆ ರಂಧ್ರ ಮಾಡುತ್ತವೆ. ಕ್ರಮೇಣ ಬೆಳೆದು ಎಳೆ ತೆನೆಗಳು ಬಿಟ್ಟಾಗ ಅವನ್ನು ಕೂಡ ಇವು ಕಡಿದು ತಿಂದು ಹಾಳು ಮಾಡುತ್ತವೆ.  ಪ್ರೌಢ ಮತ್ತು ಮರಿ (ಅಪ್ಸರೆ) ಕೀಟಗಳೆರಡಕ್ಕೂ ರೆಕ್ಕೆಗಳಿರುವುದಿಲ್ಲ. ಕೆಂಪು ಮಿಶ್ರಿತ ಕಂದು ಬಣ್ಣದ ಈ ಕೀಟಗಳ ಎರಡು ಕಡೆ ಹಳದಿ ಮಿಶ್ರಿತ ಹಸಿರು ಪಟ್ಟಿಗಳಿರುತ್ತವೆ.

ಹೊಲದ ಬದುಗಳ ಹತ್ತಿರ ಸಡಿಲವಾದ ಮಣ್ಣಿನಲ್ಲಿ ಹೆಣ್ಣು ಕೀಟಗಳು ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಗುಂಪಾಗಿ ಮೊಟ್ಟೆಗಳನ್ನಿಡುತ್ತವೆ. ಮುಂಗಾರಿನ ಮೊದಲ ಮಳೆಯ ನಂತರ ಈ ಮೊಟ್ಟೆಗಳು ಒಡೆದು ಅಪ್ಸರೆ ಕೀಟಗಳು ಹೊರಬಂದು ಈ ರೀತಿ ಬೆಳೆ ನಾಶಪಡಿಸುತ್ತವೆ.

 ಐದರಿಂದ ಆರು ತಿಂಗಳ ನಂತರ ಮತ್ತೆ ಇದರ ಸಂತತಿ ಮುಂದುವರೆಯುತ್ತದೆ. ಇದರ ನಿವಾರಣೆಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ಅಲ್ಲಲ್ಲಿ ಬೆಳೆಗಳನ್ನು ನೋಡಿ, ಈ ಕೀಟಗಳ ಹಾವಳಿಯನ್ನು ಗಮನಿಸುತ್ತಿರಬೇಕು.

ಬದುಗಳ ಸಮೀಪ ಚಳಿಗಾಲದಲ್ಲಿ ಆಳವಾಗಿ ಉಳುಮೆ ಮಾಡಿ, ತತ್ತಿಗಳನ್ನು ಮಣ್ಣಿನ ಮೇಲ್ಭಾಗಕ್ಕೆ ಬರುವಂತೆ ಮಾಡಬೇಕು. ಪ್ರತಿ ಹೆಕ್ಟೇರ್‌ಗೆ 20 ರಿಂದ 25 ಕಿಲೋ ಗ್ರಾಂನಷ್ಟು ಕ್ವಿನಾಲ್ ಪಾಸ್ ಪುಡಿಯನ್ನು ಬೆಳೆ ಹಾನಿ ಕಂಡು ಬಂದಾಗ ಧೂಳೀಕರಿಸಬೇಕು. ಈ ವರ್ಷ ಜೋಳ ಬೆಳೆದಾದ ಮೇಲೆ ಮತ್ತೊಂದು ಬೆಳೆಯನ್ನು ಬೆಳೆದು ಅನಂತರ ಮತ್ತೆ ಜೋಳ ಬೆಳೆಯಬಹುದು. ಹೀಗೆ ಈ ಕೀಟವನ್ನು ನಿರ್ವಹಣೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT