ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಬದುಕಿಗೆ ಕೂದಲೇ ಆಸರೆ

ಸ್ವಾವಲಂಬಿ ಬದುಕಿಗೆ ಅನುಕೂಲವಾದ ಉದ್ಯಮ ಸಂಕಷ್ಟದಲ್ಲಿ
Published 4 ಮೇ 2024, 22:29 IST
Last Updated 4 ಮೇ 2024, 22:29 IST
ಅಕ್ಷರ ಗಾತ್ರ

ಕೊಪ್ಪಳ: ಸೂರ್ಯನ ಕಿರಣಗಳು ನೆತ್ತಿಯ ಮೇಲೆ ಬೀಳುವ ಹೊತ್ತಿಗಾಗಲೇ ಕೊಪ್ಪಳದ ಗಾಂಧಿನಗರದ 60 ವರ್ಷದ ಗಂಗಮ್ಮ ಮಂಗ್ಲಿ ತಲೆಯ ಮೇಲೆ ಪ್ಲಾಸ್ಟಿಕ್‌ ಸಾಮಗ್ರಿ, ಕೈಯಲ್ಲಿ ಚೀಲ ಹಿಡಿದುಕೊಂಡು ಹಳ್ಳಿಗಳತ್ತ ಹೋಗಲು ಅಣಿಯಾಗಿದ್ದರು.

ಹೀಗೆ ತಯಾರಾಗಿ ಬಿರುಸಿನ ಹೆಜ್ಜೆಗಳೊಂದಿಗೆ ಊರೂರು ಅಲೆದಾಡಿ ತಲೆಯ ಮೇಲಿನ ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ಮಾರಾಟ ಮಾಡಿ, ‘ತುತ್ತಿನ ಚೀಲ’ ತುಂಬಿಸಿಕೊಳ್ಳುವುದೇ ಅವರ ನಿತ್ಯದ ಬದುಕು. ಮನೆಯಿಂದ ಹೋಗುವಾಗ ಪ್ಲಾಸ್ಟಿಕ್‌ ಸಾಮಗ್ರಿಗಳು ತುಂಬಿದ್ದ ಚೀಲದಲ್ಲಿ ಸಂಜೆ ಬರುವಾಗ ಹಳ್ಳಿಗಳಲ್ಲಿ ಸಂಗ್ರಹಿಸಿದ ಕೂದಲು ಇರುತ್ತವೆ.

ಕೂದಲು ಅನೇಕರ ಪಾಲಿಗೆ ‘ಲೆಕ್ಕ’ಕ್ಕೇ ಇಲ್ಲದಿರಬಹುದು. ಇದೇ ಕಾರಣಕ್ಕೆ ತಿಪ್ಪೆ, ಅಕ್ಕಪಕ್ಕದ ಖಾಲಿ ನಿವೇಶನ ಅಥವಾ ಕಸ ಸಂಗ್ರಹಿಸುವ ವಾಹನಕ್ಕೆ ಎಸೆಯಬಹುದು. ಆದರೆ, ಗಂಗಮ್ಮ ಅವರಿಗೆ ಕೂದಲೇ ಅನ್ನದ ಮೂಲ. ಇದೇ ಬದುಕು. ನಿತ್ಯ ಹಳ್ಳಿಗಳಲ್ಲಿ ಅಲೆದಾಡಿ ತರುವ 300ರಿಂದ 350 ಗ್ರಾಂ ಕೂದಲು ಅವರಿಗೆ ನೆಮ್ಮದಿಯ ಬದುಕು ಕಟ್ಟಿಕೊಟ್ಟಿದೆ. ಐದು ದಶಕಗಳಿಂದ ಅವರು ಇದೇ ಕೆಲಸ ಮಾಡುತ್ತಿದ್ದಾರೆ. ಕೂದಲಿನ ವ್ಯಾಪಾರ ಮಾಡಿ ಮೂರು ಜನ ಮೈದುನರು ಹಾಗೂ ನಾಲ್ಕು ಜನ ಮಕ್ಕಳ ಮದುವೆ ಮಾಡಿ ಅವರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ.

ಗಾಂಧಿನಗರದಲ್ಲಿಯೇ ವಾಸವಾಗಿರುವ ಬಸಮ್ಮ ಕುಕನೂರು ಎನ್ನುವ ಬಡ ಕುಟುಂಬಕ್ಕೆ ಸೇರಿದ ಇನ್ನೊಬ್ಬ ಮಹಿಳೆಯ ಬದುಕಿನ ಕಥನವೂ ಅಷ್ಟೇ ಅರ್ಥಪೂರ್ಣ. ಇವರ ಮನೆಯಲ್ಲಿ 17 ಜನರಿದ್ದಾರೆ. ಇದರಲ್ಲಿ ಎಂಟು ಜನ ದುಡಿಯುವವರು. ಪುರುಷರು ಕೂದಲು ಸಂಗ್ರಹಕ್ಕಾಗಿ ರಾಯಚೂರು, ಬಳ್ಳಾರಿ, ಸಿಂಧನೂರು, ಮಾನ್ವಿ ಹೀಗೆ ದೂರದ ಊರುಗಳಿಗೆ ಹೋಗಿ ವಾರಕ್ಕೊಮ್ಮೆ ಮನೆಗೆ ಮರಳಿದರೆ, ಹೆಣ್ಣುಮಕ್ಕಳು ಕೊಪ್ಪಳ ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಓಡಾಡಿ ಕೂದಲು ಸಂಗ್ರಹಿಸುತ್ತಾರೆ. ನಾಲ್ಕು ದಶಕಗಳಿಂದ ಇದೇ ಕೆಲಸದಲ್ಲಿ ಇವರ ಕುಟುಂಬ ತೊಡಗಿದೆ. 57 ವರ್ಷದ ಬಸಮ್ಮ ಅವರ ಇಷ್ಟು ವರ್ಷಗಳ ಬದುಕು ಸಾಗಿಬಂದಿದ್ದು ಜನ ವ್ಯರ್ಥವೆಂದು ಬೀಸಾಡಿದ ಕೂದಲುಗಳ ಸಂಗ್ರಹದಿಂದಲೇ!

ಇವೆರೆಡು ಉದಾಹರಣೆಗಳು ಮಾತ್ರ. ಹೀಗೆ ನಿತ್ಯ ಕೂದಲು ಸಂಗ್ರಹಿಸುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಂಡ ಸಾವಿರಾರು ಜನ ಹೆಣ್ಣುಮಕ್ಕಳು ಕೊಪ್ಪಳದ ಗಾಂಧಿನಗರ, ಭಜಂತ್ರಿ ಕಾಲೊನಿ, ತಾಲ್ಲೂಕು ವ್ಯಾಪ್ತಿಯ ಪ್ರಸಿದ್ಧ ಧಾರ್ಮಿಕ ತಾಣ ಹುಲಿಗಿ ಗ್ರಾಮದಲ್ಲಿ ಸಿಗುತ್ತಾರೆ. ಅವರಿಗೆ ತಮ್ಮ ಬದುಕಿನ ಸಾಹಸದ ಕಥನ ಮುಕ್ತವಾಗಿ ಹೇಳಿಕೊಳ್ಳಲು ಹಿಂಜರಿಕೆ. ಕೆಲಸವೊಂದೇ ಬದುಕಿನ ನಂಬಿಕೆ. ಇಲ್ಲಿನ ಕೂದಲು ಉದ್ಯಮ ವ್ಯಾಪಕವಾಗಿ ಬೆಳೆಯಲು ಕಾರಣವೇ ಮಹಿಳೆಯರು ನೆಚ್ಚಿಕೊಂಡಿರುವ ಭಾಗ್ಯನಗರ. 

ಕೊಪ್ಪಳದ ಭಾಗ್ಯನಗರ ಸಾಂಪ್ರದಾಯಿಕ ಕಲಾತ್ಮಕ ಸೀರೆ ತಯಾರಿಕೆ ಮತ್ತು ಕೂದಲು ಉದ್ಯಮಕ್ಕೆ ದೇಶ, ವಿದೇಶಗಳಲ್ಲಿ ಹೆಸರಾಗಿದೆ. ಹಿಂಜಿ ಸಂಸ್ಕರಿಸುವ ಕೂದಲನ್ನು ಉದ್ಯಮಿಗಳು ವಿದೇಶಗಳಿಗೆ ರಫ್ತು ಮಾಡಿ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅನೇಕ ಮಹಿಳೆಯರು ಕೂದಲು ಹಿಂಜುವ ಕೆಲಸದಲ್ಲಿ ನೇರವಾಗಿ ಭಾಗಿಯಾದರೆ, ಇನ್ನುಳಿದವರು ಮಳೆ, ಬಿಸಿಲು ಲೆಕ್ಕಿಸದೇ ಊರೂರು ಅಲೆದಾಡಿ ಕೂದಲು ತಂದು ಈ ಉದ್ಯಮ ವ್ಯಾಪಕವಾಗಿ ಬೆಳೆಯಲು ಕಾರಣರಾಗಿದ್ದಾರೆ.

ಹಳ್ಳಿಗಳಲ್ಲಿ ಮನೆಮನೆಗೆ ಹೋಗಿ ಕೂದಲು ಸಂಗ್ರಹಿಸುವ ಮಹಿಳೆಯರು ಪ್ಲಾಸ್ಟಿಕ್ ತಾಟು, ಲೋಟ, ಡಬ್ಬಿ, ಸ್ಟೀಲ್‌ನ ಸಾಮಗ್ರಿಗಳನ್ನು ಸಗಟು ವ್ಯಾಪಾರಿಗಳ ಬಳಿ ಖರೀದಿ ಮಾಡಿ ಕೂದಲು ನೀಡುವವರಿಗೆ ಕೊಡುತ್ತಾರೆ. ಇನ್ನೂ ಕೆಲವರು ಕೂದಲಿಗೆ ಹಣದ ಬದಲು ಪಾತ್ರೆ, ಹೇರ್‌ಪಿನ್‌, ಪೌಡರ್ ಡಬ್ಬಿ ನೀಡುತ್ತಾರೆ. ಬೊಂಬಾಯಿ ಮಿಠಾಯಿ ಮಾರುವವರು ಕೂಡ ಕೂದಲು ಸಂಗ್ರಹಿಸಿ ಹೊಟ್ಟೆ ಹೊರೆಯುತ್ತಿದ್ದಾರೆ. ಕೂದಲು ಸಂಸ್ಕರಿಸುವ ಕೆಲಸದಲ್ಲಿ ಪುರುಷರೂ ಭಾಗಿಯಾಗುತ್ತಿದ್ದಾರೆ. ಆದರೆ, ಕೂದಲು ತಂದುಕೊಡುವ ಕೆಲಸದಲ್ಲಿ ಬಹುತೇಕ ಮಹಿಳೆಯರದ್ದೇ ಪಾರುಪತ್ಯ. 

ಕೂದಲು ಸಂಗ್ರಹಿಸಿ ಮಾರಾಟ ಮಾಡಿ ಬದುಕು ಕಟ್ಟಿಕೊಂಡ ಸಾವಿರಾರು ಮಹಿಳೆಯರಲ್ಲಿ ಬಹುತೇಕರು ಅನಕ್ಷರಸ್ಥರು. ಆದರೆ, ಅವರು ವ್ಯಾಪಾರಕ್ಕೆಂದು ಹೋಗುವ ಹಳ್ಳಿಗಳ ಜನರಲ್ಲಿ ಮೂಡಿಸಿರುವ ನಂಬಿಕೆ ಮತ್ತು ವಿಶ್ವಾಸ ಅದಮ್ಯವಾದದ್ದು. ಕೊಪ್ಪಳ ಜಿಲ್ಲೆ ಕೂದಲೋದ್ಯಮಕ್ಕೆ ಹೆಸರಾದ ಕಾರಣ ಬಳ್ಳಾರಿ ಹಾಗೂ ಆಂಧ್ರದಿಂದಲೂ ಮಹಿಳೆಯರು ಜಿಲ್ಲೆಯ ಹಳ್ಳಿಗಳಿಗೆ ಬಂದು ಕೂದಲು ಸಂಗ್ರಹಿಸುತ್ತಾರೆ. ಹೀಗಾಗಿ ಪೈಪೋಟಿಯೂ ಹೆಚ್ಚು. ಇದೆಲ್ಲ ಸವಾಲು ಮೀರಿ ಜಿಲ್ಲೆಯ ಮಹಿಳೆಯರು ಹಳ್ಳಿಗಳ ಜನರ ಮನಸ್ಸು ಗೆದ್ದಿದ್ದಾರೆ. ‘ನಮ್ಮೂರಿನ ಗೌರಮ್ಮ, ನಾಗಮ್ಮ, ದೇವಕ್ಕ ಬರುತ್ತಾರೆ. ಅವರಿಗೇ ಕೂದಲು ಕೊಡಬೇಕು’ ಎನ್ನುವಷ್ಟರ ಮಟ್ಟಿಗೆ ಜನರ ಮನದ ಮೇಲೆ ಪ್ರಭಾವ ಬೀರಿದ್ದಾರೆ. ಈ ನಂಬಿಕೆ ಹಾಗೂ ವಿಶ್ವಾಸದ ಕಾರಣದಿಂದಲೇ ಜಿಲ್ಲೆಯ ಮಹಿಳೆಯರು ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅನಕ್ಷರಸ್ಥ ಮಹಿಳೆಯರೂ ಗೌರವಯುತ ಬದುಕು ಸಾಗಿಸಲು ಕೂದಲು ಉದ್ಯಮ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ದಣಿವರಿಯದ ಹೆಣ್ಣುಮಕ್ಕಳ ಕಾರ್ಯ ಅವರ ಮಕ್ಕಳಿಗೆ ಭವಿಷ್ಯ ಕಟ್ಟಿಕೊಳ್ಳಲು ರಹದಾರಿಯಾಗಿದೆ.

‘ನಮ್ಮ ಸಮುದಾಯದ ಜನರಿಗೆ ಊರೂರು ಅಲೆದಾಡಿ ಕೂದಲು ಸಂಗ್ರಹಿಸುವುದಷ್ಟೇ ಗೊತ್ತಿರುವ ಉದ್ಯೋಗ. ಈ ಕೆಲಸದಲ್ಲಿ ಅನೇಕ ಬಾರಿ ಗಂಡಸರೇ ಸುಸ್ತಾಗಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಕೂದಲು ಸಂಗ್ರಹಕ್ಕೆ ಮಹಿಳೆಯರು ಯಾವತ್ತೂ ಬೇಸರಿಸಿಕೊಂಡಿಲ್ಲ. ಮಳೆ, ಗಾಳಿ, ಬಿಸಿಲು ಏನೇ ಬರಲಿ ತಮ್ಮ ಕೆಲಸ ಬಿಡುವುದಿಲ್ಲ. ಮಹಿಳೆಯರ ಗಟ್ಟಿತನದಿಂದಲೇ ಇಂದಿಗೂ ಅನೇಕ ಕುಟುಂಬಗಳು ಉಳಿದುಕೊಂಡಿವೆ’ ಎಂದು ಕೊರಮ ಸಮುದಾಯದ ಮುಖಂಡ ಹಾಗೂ ಹೋರಾಟಗಾರ ಗಾಳೆಪ್ಪ ಮುಂಗೋಲಿ ಹೇಳುತ್ತಾರೆ.

ರಾಜ್ಯದ ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ, ಬಳ್ಳಾರಿ, ದಾವಣಗೆರೆ, ವಿಜಯನಗರ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕೆಲವೆಡೆ ಕೂದಲು ಸಂಗ್ರಹಿಸುವವರು ಹೊರತುಪಡಿಸಿದರೆ ಅದನ್ನೇ ಉದ್ಯಮವಾಗಿಸಿಕೊಂಡವರು ವಿರಳ. ಕೊಪ್ಪಳದಲ್ಲಿ ಉದ್ಯಮವಾಗಿರುವ ಕಾರಣ ಇಲ್ಲಿ ಬೇಡಿಕೆಯೂ ಹೆಚ್ಚು.

ಉದ್ಯಮವಾದ ಕಥನ:

1970ರ ದಶಕದ ಹಿಂದಿನಿಂದಲೂ ಭಾಗ್ಯನಗರದಲ್ಲಿ ಸಣ್ಣ ಮಟ್ಟದಲ್ಲಿ  ಕೂದಲು ಸಂಗ್ರಹಿಸಲಾಗುತ್ತಿತ್ತು. ಇದು ಮಹಿಳೆಯರು, ಮಕ್ಕಳ ಬದುಕಿಗೆ ಆಸರೆಯಾಗಿತ್ತು. ಕೂದಲು ಸಂಗ್ರಹಿಸಿ ಅದನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲು ಅಂಗಡಿಗಳಿದ್ದವು. 

ಕ್ರಮೇಣ ಕೂದಲು ಸಂಗ್ರಹ ಕಾರ್ಯ ಹೆಚ್ಚಾಗುತ್ತಲೇ ಹೋಗಿದ್ದು, 1990ರ ಬಳಿಕ ದೊಡ್ಡ ಮೊತ್ತ ಗಳಿಕೆ ಸಾಧ್ಯವಾಯಿತು. ಈ ವೇಳೆಗಾಗಲೇ ತಿರುಪತಿಯಲ್ಲಿ ವ್ಯಾಪಕವಾಗಿದ್ದ ಕೂದಲು ಸಂಗ್ರಹ ಉದ್ಯಮದ ಜೊತೆ ಕೊಪ್ಪಳದ ಉದ್ಯಮಿ ಶ್ರೀನಿವಾಸ ಗುಪ್ತಾ ನಿಕಟ ನಂಟು ಹೊಂದಿದ್ದರು. ಇದರ ಆಳಅಗಲ ತಿಳಿದು ಕೊಪ್ಪಳದಲ್ಲಿಯೇ ಕೂದಲು ಸಂಗ್ರಹಿಸುವ ಕಾರ್ಯ ಅವರು ಆರಂಭಿಸಿದರು. 1985ರ ಆಸುಪಾಸಿನಲ್ಲಿ ಕೂದಲು ಸಂಸ್ಕರಿಸುವ ಅಂದಾಜು 30 ಘಟಕಗಳು ಭಾಗ್ಯನಗರದಲ್ಲಿದ್ದವು. 2010ರ ವೇಳೆಗೆ ಘಟಕಗಳ ಸಂಖ್ಯೆ 400ಕ್ಕೆ ಏರಿಕೆಯಾದವು! ಆಗ ಭಾಗ್ಯನಗರದ ಜನರ ಬದುಕಿಗೆ ಈ ಉದ್ಯಮವು ಭಾಗ್ಯದ ಬಾಗಿಲು ತೆರೆಯಿತು.

‘2010ರ ಅವಧಿಯಲ್ಲಿ ನಾನೊಬ್ಬನೇ ಕೂದಲೋದ್ಯಮದಿಂದ ವಾರ್ಷಿಕ ₹800 ಕೋಟಿಯಿಂದ ₹900 ಕೋಟಿ ವಹಿವಾಟು ನಡೆಸುತ್ತಿದ್ದೆ. ದೇಶದಾಂತ್ಯ ಸಾವಿರಾರು ಕೋಟಿ ವ್ಯಾಪಾರ ನಡೆಯುತ್ತಿತ್ತು. ದೇಶದ ಅನೇಕ ಹಳ್ಳಿಗಳಿಂದ ಕೂದಲು ಸಂಗ್ರಹವಾದರೂ ಪಶ್ಚಿಮ ಬಂಗಾಳದಲ್ಲಿ ಸಂಸ್ಕರಣಾ ಘಟಕಗಳಿವೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕೊಪ್ಪಳದಲ್ಲಿ ಕೂದಲು ಸಂಗ್ರಹಣಾ ಕೇಂದ್ರಗಳು ದೊಡ್ಡಮಟ್ಟದಲ್ಲಿವೆ’ ಎಂದು ಶ್ರೀನಿವಾಸ ಗುಪ್ತಾ ಹೇಳುತ್ತಾರೆ.

‘ಸ್ಥಳೀಯವಾಗಿ ಸಂಗ್ರಹಿಸುವ ಕೂದಲನ್ನು ವಿವಿಧ ಅಳತೆಗಳನ್ನಾಗಿ ಕತ್ತರಿಸಿ ಬಣ್ಣ ಹಾಕುವುದು, ಸ್ವಚ್ಛಗೊಳಿಸಿ ನಿರ್ದಿಷ್ಟ ಅಳತೆ ಕೂದಲು ಮಾಡಲಾಗುತ್ತದೆ. 2010–12ರ ಅವಧಿಯಲ್ಲಿ ಒಂದು ದಿನಕ್ಕೆ ಮೂರರಿಂದ ನಾಲ್ಕು ಸಾವಿರ ಕೆ.ಜಿ. ಕೂದಲು ಸಂಗ್ರಹವಾಗುತ್ತಿತ್ತು. ಅವುಗಳನ್ನು ವರ್ಗೀಕರಣ ಮಾಡಿ ಚೀನಾ, ಇಂಡೊನೇಷ್ಯಾ, ಹಾಂಕಾಂಗ್‌, ಇಟಲಿಗೆ ಕಳುಹಿಸಲಾಗುತ್ತಿತ್ತು’ ಎನ್ನುತ್ತಾರೆ ಅವರು.

ಈಗ ಹಳ್ಳಿಗಳಿಗೆ ಹೋಗಿ ಕೂದಲು ಸಂಗ್ರಹಿಸುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿರುವ ಕಾರಣ ಎಲ್ಲರಿಗೂ ದೊಡ್ಡಮಟ್ಟದಲ್ಲಿ ಆದಾಯ ಸಿಗುತ್ತಿಲ್ಲ. ಬಿಳಿ ಕೂದಲು ಮತ್ತು ಕೆಂಪು ಕೂದಲಿಗೆ ಮೊದಲಿನಿಂದಲೂ ಬೇಡಿಕೆ ಕಡಿಮೆ. ಕನಿಷ್ಠ ಆರು ಇಂಚು ಉದ್ದವಿರುವ ಕಪ್ಪುಬಣ್ಣದ ಕೂದಲಿಗೆ ಸಾಕಷ್ಟು ಬೇಡಿಕೆಯಿದೆ. ಕಚ್ಚಾ ವಸ್ತುವಿಗೆ ಸಂಸ್ಕೃರಣಾ ಘಟಕಗಳು ಪ್ರತಿ ಕೆ.ಜಿ ಬಿಳಿ ಕೂದಲಿಗೆ ₹2 ಸಾವಿರದಿಂದ ₹3 ಸಾವಿರ,  ಕಪ್ಪು ಬಣ್ಣದ ಕೂದಲಿಗೆ ₹5 ಸಾವಿರದ ತನಕ ನೀಡುತ್ತವೆ.

ತಿರುಪತಿಯಲ್ಲಿ ಪ್ರತಿ ವರ್ಷ ಲಕ್ಷಾಂತರ ಕೆ.ಜಿ. ಕೂದಲು ದಾನವಾಗಿ ದೊರೆಯುತ್ತದೆ. ಪ್ರತಿ ದಿನ ಸಂಗ್ರಹವಾಗುವ ಕೂದಲನ್ನು ತೊಳೆದು ಒಣಗಿಸಲಾಗುತ್ತದೆ. ನಂತರ ಗೋದಾಮುಗಳಲ್ಲಿ ಸಂಗ್ರಹಿಸಿ ಗುಣಮಟ್ಟದ ಆಧಾರದಲ್ಲಿ ವಿಂಗಡಿಸಿ ಮಾರಾಟ ಮಾಡಲಾಗುತ್ತದೆ. ಆದರೆ, ಭಾಗ್ಯನಗರದಲ್ಲಿ ಬಿಡಿಬಿಡಿಯಾಗಿ ಸಂಗ್ರಹವಾಗುವ ಕೂದಲನ್ನು ಸರಿಯಾಗಿ ಹಿಂಜಿ ಗಂಟು ಬಿಡಿಸುತ್ತಾರೆ.

ಎಜೆಂಟರ ಹಾವಳಿ: ಕೂದಲು ಸಂಗ್ರಹಿಸುವ ಮಹಿಳೆಯರ ಬದುಕು ಈ ಕೆಲಸದಿಂದಾಗಿ ಹಸನಾದರೂ ಭಾರತದ ಕೂದಲೋದ್ಯಮಿಗಳಿಗೆ ಸರ್ಕಾರದ ಮುಕ್ತ ಮಾರುಕಟ್ಟೆ ನೀತಿ ಮತ್ತು ಭಾರತದಲ್ಲಿ ಬೇರೂರಿರುವ ವಿದೇಶಿ ಕಂಪನಿಗಳಿಗೆ ಕೂದಲು ಪೂರೈಸುವ ಮಧ್ಯವರ್ತಿಗಳ ಹಾವಳಿ ಮುಳುವಾಗಿದೆ.

ಮೊದಲು ಮನೆಮನೆಗಳಿಂದ ಸಂಗ್ರಹವಾಗುತ್ತಿದ್ದ ಕೂದಲು ಎಜೆಂಟರ ಹಾವಳಿಯಿಲ್ಲದೆ ನೇರವಾಗಿ ದೇಶಿ ಉದ್ಯಮಿಗಳ ಬಳಿಯೇ ಬರುತ್ತಿತ್ತು. ಆಗ ಹಳ್ಳಿಗಳಿಂದ ಕೂದಲು ಸಂಗ್ರಹಿಸುವ ಮಧ್ಯವರ್ತಿಗಳ ಸಂಖ್ಯೆಯೂ ಕಡಿಮೆಯಿತ್ತು. ರಫ್ತು ಮಾಡುವುದಕ್ಕೆ ಇದು ನಿಷೇಧಿತ ಸರಕಾಗಿತ್ತು. ದಶಕದ ಹಿಂದೆ ಕೇಂದ್ರ ಸರ್ಕಾರವು ಪರವಾನಗಿ ಪಡೆದ ಯಾವ ವ್ಯಾಪಾರಿ ಬೇಕಾದರೂ ಕಚ್ಚಾವಸ್ತು ನೇರವಾಗಿ ವಿದೇಶಕ್ಕೆ ಮಾರಾಟ ಮಾಡಲು ಅನುಮತಿ ಕೊಟ್ಟಾಗಿನಿಂದ ದೇಶದ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಗತ್ತಿನಾದ್ಯಂತ ‘ಇಂಡಿಯನ್‌ ಹೇರ್‌’ ಎನ್ನುವ ಬ್ರ್ಯಾಂಡ್‌ ಖ್ಯಾತಿ ಪಡೆದಿದ್ದು ಇದೇ ಕೂದಲಿನಿಂದ ತಯಾರಾದ ವಿಗ್‌ಗಳಿಗೆ ವ್ಯಾಪಕ ಬೇಡಿಕೆಯಿದೆ. ಭಾರತದ ಕಚ್ಚಾವಸ್ತು ಬಳಸಿಕೊಂಡು ವಿದೇಶಿಗರು ‘ಇಂಡಿಯನ್‌ ಹೇರ್‌ ವಿಗ್‌‘ ತಯಾರಿಸಿ ಭಾರತದ ಉದ್ಯಮಿಗಳಿಗೆ ಪೆಟ್ಟು ಕೊಡುತ್ತಿದ್ದಾರೆ.

ನಮ್ಮವರಿಂದಲೇ ಪೆಟ್ಟು:

ಮಹಿಳೆಯರು ಹಳ್ಳಿಗಳಲ್ಲಿ ಕೂದಲು ಸಂಗ್ರಹಿಸಿ ಸ್ಥಳೀಯ ವರ್ತಕರಿಗೆ ನೀಡಿ ಹಣ ಪಡೆದುಕೊಳ್ಳುತ್ತಾರೆ. ಅಲ್ಲಿಗೆ ಕೂದಲಿಗೆ ಹಾಗೂ ಅವರಿಗೂ ವ್ಯಾಪಾರದ ಸಂಬಂಧ ಮುಗಿದು ಹೋಗುತ್ತದೆ. ಅಪಾರ ಪ್ರಮಾಣದಲ್ಲಿ ಒಂದೆಡೆ ಕೂದಲು ಸಂಗ್ರಹಿಸಿದ ಸಣ್ಣ ವರ್ತಕರು ನೇರವಾಗಿ ವಿದೇಶಕ್ಕೆ ಅಥವಾ ದೇಶದಲ್ಲಿರುವ ವಿದೇಶಿ ಎಜೆಂಟರಿಗೆ ಹೆಚ್ಚಿನ ಹಣದಾಸೆಗೆ ಮಾರಾಟ ಮಾಡುತ್ತಿದ್ದಾರೆ. ಕೂದಲು ಮಾರಾಟಕ್ಕೆ ಪರವಾನಗಿ ಪಡೆಯಬೇಕು ಎನ್ನುವ ನಿಯಮವಿದ್ದರೂ ಕೆಲವರು ಅಕ್ರಮದ ಮಾರ್ಗ ಹುಡುಕಿದ್ದಾರೆ. ಭಾರತದ ಕೂದಲು ಉದ್ಯಮಿಗಳ ಒಕ್ಕೊರಲ ಆಗ್ರಹವೇ ‘ಕಚ್ಚಾವಸ್ತು ನೇರವಾಗಿ ವಿದೇಶಕ್ಕೆ ರಫ್ತು ಬೇಡ’ ಎನ್ನುವುದಾಗಿದ್ದರೂ ಸರ್ಕಾರ ಕೇಳುತ್ತಿಲ್ಲ. ಮ್ಯಾನ್ಮಾರ್ ಇದರ ಗರಿಷ್ಠ ಲಾಭ ಪಡೆದುಕೊಳ್ಳುತ್ತಲೇ ಇದೆ ಎನ್ನುವುದು ಉದ್ಯಮಿಗಳ ಆರೋಪ.

‘ಒಂದು ಕೆ.ಜಿ. ಕೂದಲು ವರ್ಗೀಕರಣ ಹಾಗೂ ಸಂಸ್ಕರಣೆಯಾಗಬೇಕಾದರೆ ಭಾರತದಲ್ಲಿ ಕನಿಷ್ಠ 35 ಜನರಿಗೆ ಕೆಲಸ ಸಿಗುತ್ತಿತ್ತು. ಆದರೆ ಈಗ ವಿದೇಶಿಗರೇ ಎಜೆಂಟರ ಮೂಲಕ ಹೈದರಾಬಾದ್‌, ಬೆಂಗಳೂರಿನಲ್ಲಿ ಕೇಂದ್ರಗಳನ್ನು ಆರಂಭಿಸಿ ಕೂದಲು ತರಿಸಿಕೊಳ್ಳುತ್ತಿದ್ದಾರೆ. ಎಜೆಂಟರು ಗುಣಮಟ್ಟದ ಕೂದಲು ವಿದೇಶಕ್ಕೆ ಕಳುಹಿಸಿ ಎರಡನೇ ದರ್ಜೆಯ ಕೂದಲು ನಮಗೆ ಕೊಡುತ್ತಾರೆ. ಭಾರತಕ್ಕೂ ಹಾಗೂ ಮ್ಯಾನ್ಮಾರ್‌ಗೂ ಒಂದು ಕೆ.ಜಿ. ಕೂದಲಿಗೆ ₹1500 ಮತ್ತು ₹2000 ವ್ಯತ್ಯಾಸವಿದೆ. ನಮ್ಮಲ್ಲಿ ಬಾಲ ಕಾರ್ಮಿಕರಿಂದ ಕೆಲಸ ಮಾಡಿಸುವಂತಿಲ್ಲ. ಆದರೆ, ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಕಟ್ಟೆಚ್ಚರ ವಹಿಸುವುದಿಲ್ಲ. ಅಲ್ಲಿ ಕಾರ್ಮಿಕರು ಕಡಿಮೆ ಸಂಬಳಕ್ಕೂ ದುಡಿಯುತ್ತಿದ್ದಾರೆ. ಇದರಿಂದ ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶದಲ್ಲಿ ಈ ಉದ್ಯಮ ವ್ಯಾಪಕವಾಗಿ ಪ್ರಗತಿ ಕಾಣುತ್ತಿದೆ. ನಮಗೆ ನಿರಂತರವಾಗಿ ನಷ್ಟವಾಗುತ್ತಿದೆ’ ಎಂದು ಶ್ರೀನಿವಾಸ ಗುಪ್ತಾ ಹೇಳುತ್ತಾರೆ.

‘ಚೀನಾಕ್ಕೆ ರಫ್ತು ಮಾಡಲು ನಾವು ಸರಕು ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಮ್ಯಾನ್ಮಾರ್‌ ದೇಶದಿಂದ ಚೀನಾಕ್ಕೆ ರಫ್ತು ಮಾಡಲು ಈ ತೆರಿಗೆ ಕಟ್ಟಬೇಕಾಗಿಲ್ಲ. ಹೀಗಾಗಿ ಆ ದೇಶದವರು ನಮಗಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದ ಭಾರತದಲ್ಲಿ ವರ್ಗೀಕರಣ ಕಂಡ ಕೂದಲಿಗೆ ಹೆಚ್ಚಿನ ಬೆಲೆಯೂ ಇಲ್ಲದಂತಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಎಲ್ಲ ಪರಿಣಾಮದಿಂದಾಗಿ ದಶಕದ ಹಿಂದೆ ವಾರ್ಷಿಕ ಸಾವಿರಾರು ಕೋಟಿ ರೂಪಾಯಿ ನಡೆಸುತ್ತಿದ್ದ ವಹಿವಾಟು ಈಗ ನೂರು ಕೋಟಿ ರೂಪಾಯಿಗೆ ಇಳಿದಿದೆ. ಕಾರ್ಮಿಕರಿಗೆ ಸರ್ಕಾರದಿಂದಲೇ ಸೌಲಭ್ಯಗಳು ಸಿಗುತ್ತಿವೆ. ಆದರೆ, ಕೂದಲು ಉದ್ಯಮದಲ್ಲಿ ನಿರತರಾದ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ಸಿಗುವುದಿಲ್ಲ.

ಭಾರತದಲ್ಲಿ ಕಚ್ಚಾ ಕೂದಲಿನಿಂದ ಒಂದು ವಿಗ್‌ ತಯಾರಾಗುವ ಹಂತದಲ್ಲಿ ಕನಿಷ್ಠ 200 ಜನರಿಗೆ ಉದ್ಯೋಗ ಲಭಿಸುತ್ತದೆ. ಕಚ್ಚಾವಸ್ತು ನಮ್ಮದೇ ಇದ್ದರೂ ಸರ್ಕಾರದ ಮುಕ್ತ ಮಾರುಕಟ್ಟೆ ನೀತಿಯಿಂದಾಗಿ ಎಜೆಂಟರ ಮೂಲಕ ಅದರ ಲಾಭ ವಿದೇಶಿಗರ ಪಾಲಾಗುತ್ತಿದೆ. ದೇಶದಾದ್ಯಂತ ಕೂದಲು ಮಾರಾಟವಾದರೂ ನಮ್ಮವರಿಗೆ ಅದರ ಲಾಭವಿರುತ್ತದೆ. ಈಗ ವಿದೇಶಿಗರ ಲಗ್ಗೆಯಿಂದಾಗಿ ಭಾರತದ ಅಂದಾಜು ಒಂದು ಕೋಟಿ ಜನ ಉದ್ಯೋಗ ಅವಕಾಶ ಕಳೆದುಕೊಂಡಂತಾಗಿದೆ ಎನ್ನುತ್ತಾರೆ ಉದ್ಯಮಿಗಳು. 

ಜಗತ್ತಿನಾದ್ಯಂತ ತಿರುಪತಿಯಲ್ಲಿನ ಕೂದಲಿಗೆ ವ್ಯಾಪಕ ಬೇಡಿಕೆಯಿದೆ. ಬೇಡಿಕೆಯಷ್ಟು ಶೇ 1ರಿಂದ 2ರಷ್ಟು ಮಾತ್ರ ಕೂದಲು ಪೂರೈಕೆ ಮಾಡಲು ಅಲ್ಲಿನ ಆಡಳಿತ ಮಂಡಳಿಗೆ ಸಾಧ್ಯವಾಗುತ್ತಿದೆ. ವಿದೇಶಿ ಕಂಪನಿಗಳು ಎಜೆಂಟರ ಮೂಲಕ ನೇರವಾಗಿ ತಿರುಪತಿಯಲ್ಲಿಯೂ ಕೂದಲು ಸಂಗ್ರಹದ ಟೆಂಡರ್‌ ಪಡೆದುಕೊಂಡಿದ್ದಾರೆ. ಸಂಸ್ಕರಣೆ ಮಾಡಿದ ಕೂದಲನ್ನು ತಿರುಪತಿಯಲ್ಲಿ ಕಾರ್ಮಿಕರು ಹಣಿಗೆ ಮೂಲಕ ಒಪ್ಪವಾಗಿ ಕೂದಲು ತಯಾರಿಸುತ್ತಾರೆ. ಇವುಗಳಲ್ಲಿ ಬಹುತೇಕ ಚೀನಾಕ್ಕೆ ಹೋಗಿ ಅಲ್ಲಿಂದ ವಿಗ್‌ ಆಗಿ ಪರಿವರ್ತಿತ ಹೊಂದುತ್ತಿವೆ.

ಬೇರೆಡೆ ಇಲ್ಲ ವ್ಯಾಪಕ: ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕೂದಲು ಸಂಗ್ರಹ ಉದ್ಯಮವಾಗಿ ಬೆಳೆದಿಲ್ಲ. ಉದ್ದ ಕೂದಲುಗಳಿಗೆ ಮಾತ್ರ ಬೇಡಿಕೆಯಿದ್ದು, ‘ಕೆಲ ಬ್ಯೂಟಿ ಪಾರ್ಲರ್‌ಗಳಲ್ಲಿ ಉದ್ದಕೂದಲನ್ನು ಸಣ್ಣದಾಗಿಸಿಕೊಳ್ಳಲು ಬರುವ ಮಹಿಳೆಯರ ಕೂದಲನ್ನು ಕಾಪಿಟ್ಟು ಕ್ಯಾನ್ಸರ್‌ ರೋಗಿಗಳಿಗೆ ವಿಗ್‌ ತಯಾರಿಸುವ ಕೇರಳದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗೆ ನೀಡಲಾಗುತ್ತದೆ’ ಎಂದು ಹುಬ್ಬಳ್ಳಿಯ ಬ್ಯೂಟಿಷಿಯನ್‌ ಪೂಜಾ ಮಹಾಜನ್‌ ಹೇಳುತ್ತಾರೆ. 

ದಕ್ಷಿಣ ಕನ್ನಡದಲ್ಲಿ ಚೆನ್ನಾಗಿರುವ ಕೂದಲು ದಾನ ಮಾಡುವ ಮತ್ತು ಸಂಗ್ರಹಿಸುವ ‘ಸೇವಾಕಾರ್ಯ’ ನಿರಂತರವಾಗಿ ನಡೆಯುತ್ತಿದೆ. ಸೀಡ್ಸ್ ಆಫ್ ಹೋಪ್‌ (ಭರವಸೆಯ ಬೀಜ) ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಸಖ್ಯಂ ಎಂಬ ಸಂಸ್ಥೆ ಕೂದಲು ಸಂಗ್ರಹಿಸಿ ವಿಗ್ ತಯಾರಿಸಿ, ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡವರಿಗೆ ವಿತರಿಸುತ್ತಿದೆ.

ರಾಜ್ಯದಲ್ಲಿ ಈಗಲೂ ಕೂದಲಿನ ಕಚ್ಚಾವಸ್ತು ಹಿಂಜುವ ಕೆಲಸವನ್ನು ಕಾರ್ಮಿಕರೇ ನಿರ್ವಹಣೆ ಮಾಡುವುದರಿಂದ ಉದ್ಯೋಗದ ಅವಕಾಶಗಳು ಉಳಿದುಕೊಂಡಿವೆ. ಆದರೆ ಹಲವು ದೇಶಿಯ ವ್ಯಾಪಾರಿಗಳು ಹೆಚ್ಚು ಹಣದಾಸೆಗೆ ವಿದೇಶಿಗರ ಸಂಪರ್ಕದಲ್ಲಿರುವ ಎಜೆಂಟರಿಗೆ ಕಚ್ಚಾಕೂದಲು ನೀಡುತ್ತಿರುವ ಕಾರಣ ಭಾರತದ ಉದ್ಯಮಿಗಳಿಗೆ ಕಚ್ಚಾವಸ್ತುವಿನ ಕೊರತೆಯಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಉದ್ಯಮಿಗಳು ಸಂಕಷ್ಟ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಜಗತ್ತಿನಾದ್ಯಂತ ಬೇಡಿಕೆಯಿರುವ ‘ಇಂಡಿಯನ್‌ ಹೇರ್‌’ ಬ್ರ್ಯಾಂಡ್‌ ಉಳಿಸಲು ಭಾರತದ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕಿದೆ. ವಿದೇಶಗಳಿಗೆ ಕಚ್ಚಾವಸ್ತು ನೇರವಾಗಿ ಮಾರಾಟ ಮಾಡುವ ವ್ಯವಸ್ಥೆಗೆ ಕಡಿವಾಣ ಹಾಕಬೇಕಿದೆ. ಇಲ್ಲವಾದರೆ ದೇಶದಲ್ಲಿ ಕುದಲೋದ್ಯಮದಲ್ಲಿ ಒಟ್ಟು ಶೇ. 40ರಷ್ಟು ಪಾಲು ಹೊಂದಿರುವ ಭಾಗ್ಯನಗರದ ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ.

ಕೊಪ್ಪಳದ ಭಾಗ್ಯನಗರದಲ್ಲಿ ಕೂದಲು ವರ್ಗೀಕರಿಸುವ ಕಾರ್ಯದಲ್ಲಿ ತೊಡಗಿರುವ ಮಹಿಳೆ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕೊಪ್ಪಳದ ಭಾಗ್ಯನಗರದಲ್ಲಿ ಕೂದಲು ವರ್ಗೀಕರಿಸುವ ಕಾರ್ಯದಲ್ಲಿ ತೊಡಗಿರುವ ಮಹಿಳೆ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕೊಪ್ಪಳದ ಭಾಗ್ಯನಗರದಲ್ಲಿ ಕೂದಲು ವರ್ಗೀಕರಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು
ಕೊಪ್ಪಳದ ಭಾಗ್ಯನಗರದಲ್ಲಿ ಕೂದಲು ವರ್ಗೀಕರಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು

‘ನಕಲಿ ಹಾವಳಿ ತಡೆಯಬೇಕು’

ಹಲವು ದಶಕಗಳಿಂದ ಕೂದಲೋದ್ಯಮ ವೃತ್ತಿಯಲ್ಲಿ ತೊಡಗಿರುವ ಕೊಪ್ಪಳದ ಗ್ಯಾನೇಶ್‌ ಹ್ಯಾಟಿ ‘ಇತ್ತೀಚೆಗಿನ ವರ್ಷಗಳಲ್ಲಿ ಈ ಉದ್ಯಮದಲ್ಲಿಯೂ ನಕಲಿ ಹಾವಳಿ ಹೆಚ್ಚಾಗಿದೆ. ಹೀಗಾಗಿ ನೈಜ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಬಹಳಷ್ಟು ಕಡೆ ಮಹಿಳೆಯರು ಊರೂರು ಅಲೆದಾಡಿ ಕೂದಲು ತಂದುಕೊಡುತ್ತಿಲ್ಲ. ಹೀಗಾಗಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಯಂತ್ರ ಹಾಗೂ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಕೃತಕವಾಗಿಯೇ ಕೂದಲು ತಯಾರಿಸುತ್ತಿರುವ ಕಾರಣ ಮೊದಲಿದ್ದ ಲಾಭವೂ ಈಗ ಇಲ್ಲ’ ಎಂದರು.

‘ನೀತಿ ಬದಲಿಸದಿದ್ದರೆ ಉಳಿಗಾಲವಿಲ್ಲ’

‘ಭಾರತದ ಕೂದಲು ಬಳಸಿಕೊಂಡು ವಿದೇಶಗಳು ವ್ಯಾಪಕ ಹಣ ಗಳಿಸುತ್ತಿವೆ. ತಮ್ಮ ದೇಶದ ಕೋಟ್ಯಂತರ ಜನರಿಗೆ ಉದ್ಯೋಗ ನೀಡುವ ಮೂಲಕ ದೇಶದ ಆರ್ಥಿಕ ಸ್ಥಿತಿಗತಿಯನ್ನೂ ಹೆಚ್ಚಿಸಿಕೊಳ್ಳುತ್ತಿವೆ. ಆದರೆ ನಮ್ಮಲ್ಲಿಯೇ ಕಚ್ಚಾವಸ್ತುವಿನ ಸಂಪನ್ಮೂಲವಿದ್ದರೂ ಬಳಸಿಕೊಳ್ಳಲು ಆಗುತ್ತಿಲ್ಲ’ ಎಂದು ಕೊಪ್ಪಳದ ಕೂದಲೋದ್ಯಮಿ ಶ್ರೀನಿವಾಸ ಗುಪ್ತಾ ಹೇಳಿದರು. ‘ಮೊದಲಿನಿಂದಲೂ ಇದೇ ಉದ್ಯಮ ಮಾಡಿಕೊಂಡು ಬಂದಿದ್ದೇನೆ ಎನ್ನುವ ಕಾರಣಕ್ಕೆ ಇದರಲ್ಲಿಯೇ ಮುಂದುವರಿದಿದ್ದೇನೆ. ಭಾಗ್ಯನಗರದಲ್ಲಿ ಈಗ ಕೂದಲು ಸಂಗ್ರಹ ಘಟಕಗಳ ಸಂಖ್ಯೆ 400ರಿಂದ ಬೆರಳೆಣಿಕೆ ಸಂಖ್ಯೆಗೆ ಇಳಿದಿದೆ. ವಾರ್ಷಿಕ ವಹಿವಾಟು ₹100 ಕೋಟಿಯಾದರೆ ಅದೇ ಹೆಚ್ಚು. ಆದ್ದರಿಂದ ಸರ್ಕಾರ ತುರ್ತಾಗಿ ರಫ್ತಿಗೆ ನೀಡಿರುವ ಮುಕ್ತ ಮಾರುಕಟ್ಟೆ ನೀತಿಯಲ್ಲಿ ಬದಲಾವಣೆ ತರಬೇಕು. ಇಲ್ಲವಾದರೆ ನಮ್ ಸಂಪನ್ಮೂಲ ಬೇರೆ ದೇಶಗಳಿಗೆ ದೊಡ್ಡ ಸಂಪತ್ತಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಪೂರಕ ಮಾಹಿತಿ: ವಿಕ್ರಂ ಕಾಂತಿಕೆರೆ ಹಾಗೂ ಹುಬ್ಬಳ್ಳಿ ಬ್ಯೂರೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT