ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಂಥನ

Last Updated 9 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಪ್ರಶ್ನೆ : ನಾನು  ಸ್ವರ್ಣಧಾರಾ ಎಂಬ ಹೊಸ ತಳಿಯ ಕೋಳಿಗಳನ್ನು ಸಾಕಬೇಕೆಂದಿದ್ದೇನೆ. ಈ ತಳಿಯ ವಿಶೇಷವೇನು? ಈ ಕೋಳಿಗಳನ್ನು ಸಾಕುವುದು ಹೇಗೆ? 
  ತಿಪ್ಪೆಸ್ವಾಮಿ,ಹಾನಗಲ್, ಮೊಳಕಾಲ್ಮೂರು ತಾಲ್ಲೂಕು

ಉತ್ತರ: ಸ್ವರ್ಣಧಾರಾ ನೂತನ ಕೋಳಿ ತಳಿಯನ್ನು ಬೀದರ್‌ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ. ಗ್ರಾಮೀಣ ರೈತರು ಕಡಿಮೆ ಖರ್ಚಿನಲ್ಲಿ ಸಾಕಾಣಿಕೆ ಮಾಡಿ ಹೆಚ್ಚು ಲಾಭ ಪಡೆಯಬಹುದು. ಕೋಳಿ ಉತ್ಪನ್ನಗಳಲ್ಲಿ ಬಹಳ ಮುಖ್ಯವಾದದ್ದು ಮೊಟ್ಟೆ. ಆರ್ಥಿಕವಾಗಿ ಹಿಂದುಳಿದ ಜನರು ಬಳಸಬಹುದಾದ ಬೆಲೆಯಲ್ಲಿ ಮೊಟ್ಟೆ ಸಿಗುವಂತೆ ಮಾಡುವುದು ಈ ತಳಿಯ ಅನ್ವೇಷಣೆಯ ಉದ್ದೇಶ. 

 ಗಿರಿರಾಜ ತಳಿಯ ಕೋಳಿಗಳಂತೆಯೇ ನಾಟಿ ಕೋಳಿಗಳನ್ನು ಹೋಲುವ ಹಿತ್ತಲಲ್ಲೇ ಸಾಕಬಹುದಾದ ಕೋಳಿಗಳ ಪ್ರಭೇದವಿದು. ವಿವಿಧ ಸಂಕರಗಳನ್ನು ಸಂಗ್ರಹಿಸಿ, ಸಂಶೋಧಿಸಿ, ದೇಶಿ ಕೋಳಿಯ ಮೂರು ಪಟ್ಟು ಹೆಚ್ಚು ಮೊಟ್ಟೆ ನೀಡುವ ತಳಿ ಸ್ವರ್ಣಧಾರಾ.

  ಈ ಕೋಳಿಗಳನ್ನು ಸಾಕಲು ವಿಶೇಷವಾದ ಮನೆಗಳ ಅಗತ್ಯವಿಲ್ಲ. ಮನೆ ಸುತ್ತಲಿನ ಪರಿಸರದ ಗಿಡಗಂಟೆಗಳಲ್ಲಿ ಮರೆಯಾಗಿ ಶತ್ರುಗಳಿಂದ ರಕ್ಷಿಸಿಕೊಳ್ಳುವ ಸ್ವಭಾವ ಈ ಕೋಳಿಗಳಿಗೆ ಇದೆ. ಮಿಶ್ರವರ್ಣ ಸಂಯೋಜನೆ, ಆಕರ್ಷಕ, ಸುಂದರ ಪುಕ್ಕಗಳು ಈ ಕೋಳಿಗಳ ವಿಶೇಷ. ಹಿತ್ತಲಿನ ತಿಪ್ಪೆ ಮತ್ತು ನೆಲ ಕೆದಕಿ ತನ್ನ ಆಹಾರವನ್ನು ತಾನೇ ಹುಡುಕಿ ತಿಂದು ಬೆಳೆಯುವ ಈ ಕೋಳಿಗಳು ಅಧಿಕ ಮೊಟ್ಟೆ ಇಡುತ್ತವೆ.

ನಮ್ಮ ದೇಶದ ಬಿಸಿಲಿನ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುವಂತೆ ಈ ತಳಿಯನ್ನು ಸಂಶೋಧಿಸಲಾಗಿದೆ. ಎರಡನೇ ವಾರದಲ್ಲಿ ಗಿರಿರಾಜ ತಳಿಗಿಂತ 300 ರಿಂದ 400 ಗ್ರಾಂ ಕಡಿಮೆ ತೂಕವುಳ್ಳ ಈ ತಳಿ ಸುಮಾರು 50 ಮೊಟ್ಟೆ ಹೆಚ್ಚಿಗೆ ಉತ್ಪಾದಿಸಬಲ್ಲದು. ಗಿರಿರಾಜ ಮತ್ತು ಸ್ವರ್ಣಧಾರಾ ಎರಡೂ ಒಂದೇ ರೀತಿಯ ತಳಿಗಳು.

ಆದರೆ ಸ್ವರ್ಣಧಾರಾ ಗಿರಿರಾಜಕ್ಕಿಂತ ಹೆಚ್ಚು ಮೊಟ್ಟೆ ಕೊಡಬಲ್ಲದು. ಇದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಕೊಕ್ಕರೆ ರೋಗ ನಿಯಂತ್ರಿಸುವ ಲಸಿಕೆ ಹಾಕಿದರೆ ಸಾಕು. ಗ್ರಾಮೀಣ ಪ್ರದೇಶದಲ್ಲಿ ಇವನ್ನು ಸಾಕಲು ಕಾರ್ಮಿಕರ ಅಗತ್ಯವಿಲ್ಲ. ಮಹಿಳೆಯರೇ ಮನೆಯಲ್ಲಿ ಸಾಕಬಹುದು.

ಈ ತಳಿಗಳ ಬಗ್ಗೆ  ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ  ಅಥವಾ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದವರನ್ನು ಸಂಪರ್ಕಿಸಬಹುದು.

ಪ್ರಶ್ನೆ: ಸುಮಾರು 25 ವರ್ಷಗಳ ಮರಗಳಿರುವ ಎರಡು ಎಕರೆ ತೆಂಗಿನ ತೋಟವಿದೆ. ಈ ಮರಗಳಲ್ಲಿ ಅಲ್ಲಲ್ಲಿ ಕೆಂಪಗೆ ಮತ್ತು ಕಪ್ಪಗೆ ರಸ ಸೋರುತ್ತದೆ. ಇದರಿಂದಾಗಿ ಎರಡು ವರ್ಷಗಳಿಂದ ಇಳುವರಿ ಕಡಿಮೆಯಾಗಿದೆ.ಇದಕ್ಕೆ ಏನು ಮಾಡಬೇಕು?
 ಪಾಪಣ್ಣ,ಯಾಳನಹಳ್ಳಿ, ಚನ್ನರಾಯಪಟ್ಟಣ ತಾಲ್ಲೂಕು

ಉತ್ತರ:  ಇದು ತೆಂಗಿನ ರಸಸೋರುವ ರೋಗ. ಇತ್ತೀಚೆಗೆ ಬಹಳಷ್ಟು ತೋಟಗಳಲ್ಲಿ ಈ ರೋಗ ಪ್ರಾರಂಭವಾಗಿದೆ.  ಈ ರೋಗ 1906ರಲ್ಲಿ  ಶ್ರಿಲಂಕಾದಲ್ಲಿ ಕಂಡು ಬಂದಿತ್ತು.

1922ರಲ್ಲಿ ನಮ್ಮ ದೇಶದಲ್ಲಿ ಕಂಡು ಬಂತು. ಈಗ ತೆಂಗು ಬೆಳೆಯುವ ಎಲ್ಲಾ ಕಡೆ ಇದರ ಹಾವಳಿ ಇದೆ. ಈ ರೋಗ ತೆಂಗಿನ ಮರದ ಕಾಂಡದ ಹೊರ ಮತ್ತು ಒಳ ತೊಗಟೆಯನ್ನು ನಾಶಮಾಡುತ್ತದೆ.

ಸಾಮಾನ್ಯವಾಗಿ ತೋಟದಲ್ಲಿ ಉಳುಮೆ ಮಾಡುವಾಗ ಅಥವಾ ಬೇರೆ ರೀತಿಯ ಕಾರ್ಯಗಳನ್ನು ನಿರ್ವಹಿಸುವಾಗ ಮರವನ್ನು ಗಾಯ ಮಾಡುತ್ತೇವೆ. ಅಲ್ಲಿ ಶಿಲೀಂದ್ರಗಳು ಸೇರಿ ರೋಗವನ್ನು ತರುತ್ತವೆ. ರಸ ಸೋರುವ ರೋಗ ಶಿಲೀಂದ್ರದಿಂದ ಬರುವುದಾದರೂ, ತೋಟದಲ್ಲಿನ ಮಣ್ಣಿನಲ್ಲಿರುವ ಆಮ್ಲತೆ ಮತ್ತು ಕ್ಷಾರತೆಗಳು ರೋಗ ಉಲ್ಬಣವಾಗಲು ಕಾರಣವಾಗುತ್ತವೆ.

ಬುಡದಿಂದ 2 ರಿಂದ 3 ಅಡಿ ಎತ್ತರದವರೆಗೆ ರಸ ಸೋರಲು ಪ್ರಾರಂಭವಾಗುತ್ತದೆ. ಅನಂತರ ಕಾಂಡದ ಬೇರೆ ಕಡೆಯೂ ರಸ ಸೋರಬಹುದು. ರಸ ಸೋರುವ ಜಾಗದ ಸುತ್ತ ಕೊಳೆಯಲು ಪ್ರಾರಂಭವಾಗುತ್ತದೆ. 

ರೋಗ ತಗಲಿದ ಮರಗಳಲ್ಲಿ ಇಳುವರಿ ಕುಂಠಿತವಾಗುತ್ತದೆ. ಮರ  ಗಾಳಿಗೆ ಮುರಿದು ಬೀಳುವ ಸಾಧ್ಯತೆ ಇದೆ. ಮರ ಚೆನ್ನಾಗಿದ್ದರೂ ಕಾಯಿಗಳು ಗಾತ್ರದಲ್ಲಿ ಸಣ್ಣದಾಗುತ್ತ ಹೋಗುತ್ತವೆ. ಕ್ರಮೇಣ ಕಾಂಡಗಳು ಸಣ್ಣದಾಗಿ ಬೇರುಗಳು ಕೊಳೆಯುತ್ತವೆ. ಅಂತಿಮವಾಗಿ ಮರ ಪೂರ್ಣ ಒಣಗಿ ಸಾಯುತ್ತದೆ.

ಈ ರೋಗವನ್ನು ತಡೆಗಟ್ಟಲು ರಸಸೋರುವ ಕಡೆಗಳಲ್ಲಿ ತೊಗಟೆ ಭಾಗವನ್ನು ಚೆನ್ನಾಗಿ ಕೆರೆದು ತೆಗೆದು ಹಾಕಬೇಕು. ಇದಕ್ಕೆ ಹರಿತವಾದ ಆಯುಧ ಉಪಯೋಗಿಸುವುದು ಒಳ್ಳೆಯದು. ಈ ರೀತಿ ತೆಗೆದ ರೋಗಪೀಡಿತ ಅಂಗಾಂಶಗಳನ್ನು ಸುಟ್ಟು ಹಾಕಬೇಕು.

ಕೆತ್ತಿದ ಭಾಗಗಳಿಗೆ ಶೇ 1 ರ ಬೋರ್ಡೋ ಮುಲಾಮನ್ನು ಬಳಿಯಬೇಕು. ಈ ರೀತಿ ಕೆತ್ತಿದಾಗ ಕಾಂಡದ ಮೇಲೆ ಆಳವಾದ ಕುಳಿಗಳು ಉಂಟಾದರೆ ಅಂತಹ ಭಾಗಗಳನ್ನು ಸ್ವಚ್ಚ ಮಾಡಿ ಸಿಮೆಂಟ್, ಮರಳು ಮತ್ತು ಮಣ್ಣಿನಿಂದ ಮುಚ್ಚಬೇಕು.

ಯಾವುದೇ ಕಾರಣದಿಂದಲೂ ತೆಂಗಿನ ಮರದ ಮೇಲೆ ಗಾಯ ಮಾಡಬಾರದು. ರೋಗಪೀಡಿತ ಮರಗಳಿಗೆ ಹೇರಳವಾಗಿ ಸಾವಯವ ಗೊಬ್ಬರವನ್ನು ಕೊಡಿ. ದ್ವಿದಳ ಜಾತಿಗೆ ಸೇರಿದ ಹಸಿರೆಲೆ ಗೊಬ್ಬರಗಳನ್ನು ಕೊಡಿ. ಇದಕ್ಕಾಗಿ ಸೆಣಬು ಮುಂತಾದ ಬೆಳೆಯನ್ನು  ಮರಗಳ ಮಧ್ಯದಲ್ಲಿ ಬೆಳೆಯಬಹುದು.
 
ಸಾವಯವ ಗೊಬ್ಬರದ ಜೊತೆಯಲ್ಲಿ ಮರವೊಂದಕ್ಕೆ ಒಂದು ಕಿಲೋ ಗ್ರಾಂನಷ್ಟು ಬೇವಿನ ಹಿಂಡಿಯನ್ನು ವರ್ಷಕ್ಕೊಮ್ಮೆ ಕೊಡಿ. ಹದವರಿತು ನೀರುಣಿಸಿ. ಇಷ್ಟು ಮಾಡಿದರೆ ತೋಟ ಸುಧಾರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT