ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಂಥನ

Last Updated 30 ಜನವರಿ 2012, 19:30 IST
ಅಕ್ಷರ ಗಾತ್ರ

ಪ್ರಶ್ನೆ: ನಮ್ಮದು ಕೆಂಪು ಜಂಬಿಟ್ಟಿಗೆ ಮಣ್ಣು. ಮಳೆಗಾಲದಲ್ಲಿ ಮಳೆ ಹೆಚ್ಚು, ಬೇಸಿಗೆಯಲ್ಲಿ ಬಿಸಿಲು ಹೆಚ್ಚು. ಇಲ್ಲಿ ಸೇಬು ಬೆಳೆಯಬಹುದೇ ತಿಳಿಸಿ. 
-ಸಚಿನ್‌ಕುಮಾರ್, ಶಿರಸಿ, ಉತ್ತರ ಕನ್ನಡ ಜಿಲ್ಲೆ

ಉತ್ತರ:
ಸೇಬು  ಅತೀ ಚಳಿ, ಹಿಮದ ವಾತಾವರಣದ ಬೆಳೆ. ಹಿಮಾಚಲ, ಕಾಶ್ಮೀರದಲ್ಲಿ ಜಾಸ್ತಿ. ಆದುದ್ದರಿಂದ ನಮ್ಮ ಭಾಗದಲ್ಲಿ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಹೋಗಬೇಡಿ. ಒಂದು ಪಕ್ಷ ಬೆಳೆಸಿದರೂ ಗಿಡ ಬೆಳೆಯುತ್ತದೆ. ಆದರೆ ಪರಾಗ ಸ್ಪರ್ಶವಾಗದೇ ಫಲ ನೀಡುವುದಿಲ್ಲ. ನಮ್ಮ ಭಾಗದಲ್ಲಿ ಮನೆಯ ಮಟ್ಟಿಗೆ ಎರಡು ಮೂರು ಗಿಡ ಬೆಳೆಸಿಕೊಳ್ಳುವುದಾದರೆ `ಅಮ್ರೀ ಕಾಶ್ಮೀರಿ~ ಎಂಬ ತಳಿ ಇದೆ. ಅದನ್ನು ಪ್ರಯೋಗ ಮಾಡಬಹುದು.

ಪ್ರಶ್ನೆ: ನಮ್ಮ ಜಮೀನಿನಲ್ಲಿ ಪಾರ್ಥೇನಿಯಂ ತುಂಬಿಕೊಂಡಿದೆ. ಇದನ್ನು ಕಿತ್ತು ಸುಡುತ್ತಿದ್ದೇವೆ. ಇದರ ಬದಲು ಗೊಬ್ಬರ ಮಾಡಬಹುದೇ?
- ಕೆ. ಚಂದ್ರಯ್ಯ ಮಧುಕೇಶ್ವರ,
ಉತ್ತರ:
ಪಾರ್ಥೇನಿಯಂ ಅಥವಾ ಯಾವುದೇ ಕೃಷಿ ತ್ಯಾಜ್ಯವನ್ನು ಸುಡಬೇಡಿ. ಇದರಿಂದ ಪರಿಸರ ಮಾಲಿನ್ಯವಾಗುತ್ತದೆ.  ಅಲ್ಲದೆ ಭೂಮಿಯ ಮೇಲೆ ಸುಟ್ಟಾಗ  ಭೂಮಿಯಲ್ಲಿನ ಉಪಯುಕ್ತ ಜೀವಾಣುಗಳು  ಸಾಯುತ್ತವೆ. ಭೂಮಿ ತೇವಾಂಶ ಕಳೆದುಕೊಳ್ಳುತ್ತದೆ.
ಪಾರ್ಥೇನಿಯಂನಿಂದ ಕಾಂಪೋಸ್ಟ್ ಗೊಬ್ಬರ ಮಾಡಿಕೊಳ್ಳಬಹುದು. ಅದಕ್ಕಾಗಿ  ಗಿಡಗಳು ಹೂವು ಬಿಡುವ ಮೊದಲೇ ಕಟಾವು ಮಾಡುವುದನ್ನು ಮರೆಯಬಾರದು.

ನಂತರ ಒಂದು ದಿನ ಬಾಡಿಸಿ, ಬೇರೆ ಕಾಂಪೋಸ್ಟ್ ತಯಾರಿಸುವ ರೀತಿಯಲ್ಲಿ ಕಾಂಪೋಸ್ಟ್ ಗುಂಡಿಯ ಕೆಳಗೆ, ಸಗಣಿ ಬಗ್ಗಡ ಅಥವಾ ಗೋಬರ್ ಗ್ಯಾಸ್ ಬಗ್ಗಡ ಮುಂತಾದವುಗಳನ್ನು ಹಾಕಬೇಕು. ಅದರ ಮೇಲೆ ದಪ್ಪನಾಗಿ ಪಾರ್ಥೇನಿಯಂ ಗಿಡ, ಮತ್ತೆ ಮೇಲೆ ಸ್ವಲ್ಪ ಕೆಂಪು ಮಣ್ಣು, ಸಗಣಿ ಬಗ್ಗಡ ಇವುಗಳನ್ನು ಹಾಕುವುದು. ಬೇಕಾದರೆ ಸ್ವಲ್ಪ ಅಣುಜೀವಿ ಗೊಬ್ಬರವನ್ನು ಸೇರಿಸಬಹುದು. ಹೀಗೆ ಗುಂಡಿಯನ್ನು ಸಂಪೂರ್ಣ ತುಂಬಿ ಮೂರು ತಿಂಗಳು ಬಿಟ್ಟಾಗ ಚೆನ್ನಾಗಿ ಕಳಿಯುತ್ತದೆ. ಇದನ್ನು ಗೊಬ್ಬರವಾಗಿ ಯಾವುದೇ ಬೆಳೆಗೆ ಬಳಸಬಹುದು.

ಪ್ರಶ್ನೆ: ನಮ್ಮ ಐದು ಎಕರೆ ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ಏನು ಬೆಳೆಯಬಹುದು? 
- ಎಂ.ವಿ. ಚಂದ್ರಶೇಖರ  ಅಯ್ಯರ್  ಮಿನಿಜೇನಹಳ್ಳಿ,

ಉತ್ತರ: ನಿಮ್ಮದು ಎಷ್ಟು ವರ್ಷದ ತೋಟ, ಅಂತರ ಎಷ್ಟು ಕೊಟ್ಟಿದ್ದೀರಿ ಎಂಬುದನ್ನು ಬರೆದಿದ್ದರೆ ಚೆನ್ನಾಗಿತ್ತು.  ಸಾಮಾನ್ಯವಾಗಿ 25 ಅಡಿಗಿಂತ ಜಾಸ್ತಿ ಅಂತರ  ಕೊಟ್ಟಿದ್ದರೆ  ಇದರೊಳಗೆ ಬಾಳೆ, ಹಿಪ್ಪುನೆರಳೆ, ತರಕಾರಿ, ಮೇವಿನ ಜೋಳ, ದ್ವಿದಳ ಧಾನ್ಯ ಮುಂತಾದ ಅನೇಕ ಬೆಳೆಗಳನ್ನು ಬೆಳೆಯಬಹುದು. ಒಂದು ಪಕ್ಷ ಹತ್ತಿರದಲ್ಲಿ ನೆಟ್ಟಿದ್ದರೆ ಹತ್ತು ವರ್ಷಗಳ ವರೆಗೆ ದ್ವಿದಳ ಧಾನ್ಯಗಳು, ತರಕಾರಿ ಬೆಳೆಗಳನ್ನು ಪ್ರದೇಶಕ್ಕೆ ಅನುಗುಣವಾಗಿ ಬೆಳೆಯಬಹುದು. ನಾಟಿ ಮಾಡಿದ 15 ವರ್ಷಗಳ ನಂತರ ಕೋಕೋ, ಕರಿಮೆಣಸು, ದಾಲ್ಚಿನ್ನಿ, ಜಾಯಿಕಾಯಿ, ನುಗ್ಗೆ, ಕರಿಬೇವು ಇವುಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಬಹುದು. ಆದರೆ ಇದ್ಯಾವುದೂ ತೆಂಗಿನ ಮರದ ಎರಡು ಮೀಟರ್ ಒಳಗೆ ಇರಬಾರದು.

ಇದಲ್ಲದೆ ಮಿಶ್ರ ಬೆಳೆಯಾಗಿ ಮಾವು, ಚಿಕ್ಕೂ, ಹುಣಸೆ ಮುಂತಾದ ದೀರ್ಘ ಕಾಲದ ಸ್ಪರ್ಧಾತ್ಮಕ ಬೆಳೆಗಳನ್ನು ಬೆಳೆಯಬಾರದು. ಅಂತರ ಬೆಳೆಗಳನ್ನು ಬೆಳೆದಾಗ ಅವುಗಳಿಗೆ ಸೂಕ್ತ ಪೋಷಕಾಂಶಗಳನ್ನು ನೀಡಬೇಕು. ಇವುಗಳಿಂದ ತೆಂಗಿನ ಬೆಳೆಗೆ ಅನುಕೂಲವಾಗುತ್ತದೆಯೇ ವಿನಹಃ ತೊಂದರೆಯಾಗುವುದಿಲ್ಲ. ಅಲ್ಲದೆ ಕಳೆ ನಿಯಂತ್ರಣದಲ್ಲಿ ಇರುತ್ತದೆ. ದ್ವಿದಳ ಧಾನ್ಯಗಳನ್ನು ಬೆಳೆದಾಗ ಸಾರಜನಕ ಭೂಮಿಯಲ್ಲಿ ಸೇರಿ ತೆಂಗಿಗೆ ಒಳ್ಳೆಯದಾಗುತ್ತದೆ. ಉಪ ಬೆಳೆಗಳಿಗೆ ಕೊಡುವ ನೀರು ಕೂಡ ತೇವಾಂಶವನ್ನು ಕಾಪಾಡಿ, ತೆಂಗಿಗೆ ಸಹಾಯವಾಗುತ್ತದೆ. ಆದುದರಿಂದ ಯಾವುದಾದರೂ ಒಂದು ಅಂತರ ಬೆಳೆಯನ್ನು ಬೆಳೆಯಿರಿ. 

ಪ್ರಶ್ನೆ: ನಮ್ಮ  ಮನೆಯ ಪುಟ್ಟ ಕೈ ತೋಟದಲ್ಲಿ ವಿವಿಧ  ಹೂ ಗಿಡಗಳಿವೆ. ಇದರಲ್ಲಿ ಬಳ್ಳಿಯ ಕಾಂಡ, ಎಲೆಗಳ ಮೇಲೆ ಕಪ್ಪು ಬಣ್ಣದ ರಂಧ್ರಗಳಾಗಿ ಗಿಡಗಳು ಸಾಯುತ್ತದೆ. ಇದಕ್ಕೆ ಏನು ಮಾಡುವುದು. 
 -ಕುಬೇರಪ್ಪ ಎಂ.ವಿಬೂತಿ.  ಹರಿಹರ, ಕಾಳಿದಾಸ  ನಗರ.

ಉತ್ತರ: ಕೈ ತೋಟದಲ್ಲಿ ಬೆಳೆಯುವಾಗ  ಕೆಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ.  ಸೂರ್ಯನ ಕಿರಣ, ಗಿಡಗಳ ಮೇಲೆ ಬೀಳುವಂತಿರಬೇಕು. ನೆರಳು ಬಿದ್ದಾಗ ದ್ಯುತಿಸಂಶ್ಲೇಷಣ ಕ್ರಿಯೆ ಕಡಿಮೆಯಾಗಿ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಹೂವು ಬಿಡುವುದು ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಇಲ್ಲಿ ತುಪ್ಪಳದ ರೋಗ, ಬೂದಿ ರೋಗ, ಎಲೆ ಚುಕ್ಕಿ ರೋಗಗಳು ಕಾಣಿಸುತ್ತವೆ. ಕೆಲವರು ಇದಕ್ಕೆ ಕೀಟನಾಶಕ ಸಿಂಪಡಿಸುವುದುಂಟು.

ಅದು ಸರಿಯಾದ ಕ್ರಮವಲ್ಲ. ಈ ರೀತಿಯ ಲಕ್ಷಣಗಳು ಕಂಡಾಗ ಒಂದು ಗ್ರಾಂ ಕಾರ್ಬನ್‌ಡೈಜಿನ್‌ಗೆ ಒಂದು ಲೀಟರ್ ನೀರು ಅಥವಾ ನೀರಿನಲ್ಲಿ ಕರಗುವ ಗಂಧಕವನ್ನು ಮೂರು ಗ್ರಾಂನಂತೆ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ಎಲೆ ಚುಕ್ಕೆ ರೋಗ, ಮತ್ತು ಬೇರೆ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ. ವಾತಾವರಣ  ನೋಡಿಕೊಂಡು ನಾಲ್ಕರಿಂದ ಎಂಟು  ದಿವಸಗಳಿಗೊಮ್ಮೆ ನೀರುಣಿಸಿದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT