ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಂಥನ

Last Updated 6 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಪ್ರಶ್ನೆ: ನಾನು ಒಂದು ಎಕರೆಯಲ್ಲಿ ನುಗ್ಗೆ ಬೆಳೆದಿದ್ದೇನೆ. ಇದರಲ್ಲಿ ಮಿಶ್ರ ಬೆಳೆಯಾಗಿ ಲವಂಗ ಬೆಳೆಯಬಹುದೇ?
 - ಎಂ.ಬಿ. ಸೋಮಶೇಖರ್ ಗೊರೂರು, ಹಾಸನ ಜಿಲ್ಲೆ

ಉತ್ತರ: ನುಗ್ಗೆ ಲವಂಗಕ್ಕಿಂತಲೂ ಅಲ್ಪಾವಧಿ ಬೆಳೆ. ಲವಂಗ ಮರಗಳು ಸುಮಾರು 75 ವರ್ಷಗಳವರೆಗೆ ಬದುಕಿ ಫಸಲು ಕೊಡುತ್ತವೆ.ಆದ್ದರಿಂದ ಲವಂಗದೊಳಗೆ ಮಿಶ್ರ ಬೆಳೆಯಾಗಿ ನುಗ್ಗೆ ಬೆಳೆಯಿರಿ. ನುಗ್ಗೆ ಒಳಗೆ ಲವಂಗ ಹಾಕುವುದು ಸರಿಯಲ್ಲ. ಲವಂಗ ಬೆಳೆಯಲು ಉಷ್ಣ ವಾತಾವರಣದ ಅಗತ್ಯವಿದೆ. ಸಮುದ್ರ ಮಟ್ಟದಿಂದ ಸಾವಿರ ಮೀಟರ್ ಎತ್ತರದ ಪ್ರದೇಶದಲ್ಲಿ ಲವಂಗ ಬೆಳೆಯಬಹುದು. ಬೇಸಿಗೆಯಲ್ಲಿ 37 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚು ಉಷ್ಣಾಂಶ ಇರಬಾರದು. ತೇವಾಂಶ ಇರಬೇಕು. ಆದರೆ ನೀರು ನಿಲ್ಲುವಂತಿರಬಾರದು. ಬೆಳೆದ ಸಸಿಗಳನ್ನು ಆರರಿಂದ ಏಳು ಮೀಟರ್ ಅಂತರದಲ್ಲಿ ನಾಟಿ ಮಾಡಬೇಕು.

ಒಣ ಹವೆ ಇದ್ದಾಗ ವಾರಕ್ಕೊಮ್ಮೆ ನೀರು ಕೊಡಬೇಕಾಗುತ್ತದೆ. ಮೊದಲ ಮೂರು ತಿಂಗಳು ಗೊಬ್ಬರ ಕೊಡಬೇಕಾಗಿಲ್ಲ. ಅನಂತರ ಪ್ರತಿ ವರ್ಷ ಸಾವಯವ ಗೊಬ್ಬರದ ಜೊತೆಗೆ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು. ಮಧ್ಯಂತರವಾಗಿ ಬೆಳೆದ ಬೆಳೆಗಳ ತ್ರಾಜ್ಯ ವಸ್ತುಗಳನ್ನು ಮತ್ತು ಒಣ ಹುಲ್ಲನ್ನು ಗುಣಿ ಸುತ್ತ ಹರಡುವುದರಿಂದ ತೇವಾಂಶ ಕಾಪಾಡಿಕೊಳ್ಳಬಹುದು. ನಾಟಿ ಮಾಡಿದ ಏಳೆಂಟು ವರ್ಷಗಳ ನಂತರ ಫಸಲು ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ಗಿಡಗಳ ನಡುವೆ ತರಕಾರಿ, ಹೂವು, ಹಸಿರು ಗೊಬ್ಬರದ ಬೆಳೆಗಳನ್ನು ಬೆಳೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯವರನ್ನು ಸಂಪರ್ಕಿಸಿ.

ಪ್ರಶ್ನೆ : ನಾನು ಎಂಟು ಎಕರೆ ಜಮೀನಿನಲ್ಲಿ ತೆಂಗು, ಮಾವು, ಸಂಪೋಟ ಬೆಳೆಸಿರುತ್ತೇನೆ. ಸಸ್ಯ ಸಂರಕ್ಷಣೆಯನ್ನು ಒಂದೇ ರೀತಿಯಲ್ಲಿ ಈ ಎಲ್ಲಾ ಬೆಳೆಗಳಿಗೂ ನಿರ್ವಹಿಸಬಹುದೇ? 
- ಎಂ.ಸಿ. ಲಕ್ಷ್ಮೀಕಾಂತ, ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು

ಉತ್ತರ : ತೋಟಗಾರಿಕೆಯಲ್ಲಿ ಮಿಶ್ರ ಬೆಳೆ ಬೆಳೆಯುವುದು ಅನೇಕ ರೀತಿಯಿಂದ ಒಳ್ಳೆಯದು. ಒಂದೊಂದು ಫಸಲಿನ ಗಿಡಗಳಿಗೆ ಒಂದೊಂದು ಬಗೆಯ ಕೀಟ ಹಾಗೂ ರೋಗಗಳು ಹಾನಿಮಾಡುತ್ತವೆ. ತೆಂಗಿಗೆ ಬೀಳುವ ಕೀಟ, ಮಾವಿಗೆ ಬೀಳದಿರಬಹುದು. ಅದೇ ರೀತಿ ಸಪೋಟಕ್ಕೆ ಬೇರೆ ರೀತಿಯ ಸಸ್ಯ ಸಂರಕ್ಷಣೆ ಅಗತ್ಯವಿರುತ್ತದೆ. ನಿಗದಿಯಾದ ಸಮಯಕ್ಕೆ ಗೊಬ್ಬರ ನೀರು ಕೊಡುವಂತೆ ಸಸ್ಯ ಸಂರಕ್ಷಣ ಕ್ರಮ ಕೈಗೊಳ್ಳಬಾರದು. ಯಾವ ಬೆಳೆಗೆ ಯಾವ ಕೀಟ ಹಾನಿ ಮಾಡಿದೆ.ಯಾವ ರೋಗ ಬಂದಿದೆ ಎಂಬುದನ್ನು ತಿಳಿದು ಅದಕ್ಕೆ ಸೂಕ್ತವಾದ ಔಷಧಿ  ಸಿಂಪಡಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಅನವಶ್ಯಕವಾಗಿ ಸಸ್ಯ ಸಂರಕ್ಷಣೆಗೆ ಹಣ ಖರ್ಚು ಮಾಡುವುದು  ಕಡಿಮೆಯಾಗುತ್ತದೆ. ಮುಂಜಾಗ್ರತೆ ಕ್ರಮವಾಗಿ ಸಸ್ಯ ಮೂಲದ ಔಷಧಿಗಳನ್ನು ಸಿಂಪಡಿಸಬೇಕು. ಬುಡಕ್ಕೆ ಬೇವಿನ ಹಿಂಡಿ ಸಾಕಷ್ಟು ಸಾವಯವ ಗೊಬ್ಬರ ನೀಡಿದಾಗ ಕೀಟ,ರೋಗಗಳು ನಿಯಂತ್ರಣಕ್ಕೆ ಬರುತ್ತವೆ. ನೀವು ಈ ಕ್ರಮಗಳನ್ನು ಅನುಸರಿಸಿ.

ಶಿಲೀಂದ್ರದಿಂದ ಬಂದ ರೋಗವಾಗಿದ್ದರೆ ಅಥವಾ ವೈರಾಣುಗಳಿಂದ ಬಂದ ರೋಗವಾಗಿದ್ದರೆ ಅವುಗಳಿಗೆ ಒಂದೇ ರೀತಿಯ ಔಷಧಿಗಳನ್ನು ಹೊಡೆಯಬಹುದು. ಉದಾಹರಣೆಗೆ ಬೂದಿ ರೋಗ, ಚಿಬ್ಬು ರೋಗ, ದುಂಡಾಣು ಎಲೆ ಚುಕ್ಕೆ ರೋಗ, ಹಾಗೇ ಅಂಗಮಾರಿ ರೋಗ ಇವುಗಳು ಬಂದಾಗ ಎಲೆಗಳ ಮೇಲೆ ಚುಕ್ಕೆಗಳು ಕಾಣಿಸಿಕೊಂಡು  ಕ್ರಮೇಣ ಎಲೆ ಒಣಗಿದಂತಾಗಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕುಂಠಿತವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಶೇ1ರ ಬೋರ್ಡೋ ದ್ರಾವಣ, ಕಾರ್ಬನ್ ಡೈಜನ್ ಮುಂತಾದ ಔಷಧಿಗಳನ್ನು ಸಿಂಪರಣೆ ಮಾಡಬಹುದು.

ಯಾವುದಕ್ಕೂ ಸಮೀಪದ ತೋಟಗಾರಿಕಾ ಅಧಿಕಾರಿಗಳಿಂದ ಅಥವಾ ಸಂಶೋಧನಾ ಕೇಂದ್ರಗಳಿಂದ ಸಲಹೆ ಪಡೆದು ಕ್ರಮ ಕೈಗೊಳ್ಳುವುದು ಒಳ್ಳೆಯದು.

ಪ್ರಶ್ನೆ : ನೂರು ಗುಣಿ ಹಾಗಲ ಬಳ್ಳಿ ಹಾಕಿದ್ದೇನೆ. 5x5 ಅಡಿ ಅಂತರದಲ್ಲಿ ನಾಟಿ ಮಾಡಿದ್ದೇನೆ. ಎಲೆಗಳು ಹಳದಿಯಾಗಿ ಕಾಯಿಗಳು ಚಿಕ್ಕದಿರುವಾಗಲೇ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದಕ್ಕೆ ಪರಿಹಾರವೇನು?
 -ಜಾನ್ ಮುಷ್ಟಿಗೇರಿ, ಯರೆಕೊಪ್ಪ, ಬಾದಾಮಿ ತಾಲ್ಲೂಕು

ಉತ್ತರ : ಇದು ಹಳದಿ ನಂಜು ರೋಗ. ಎಲೆಗಳ ಮೇಲೆ ಚುಕ್ಕೆಗಳಿದ್ದರೆ ಜೊತೆಯಲ್ಲಿ ಬೂದಿ ರೋಗ  ಇರುತ್ತದೆ. ಕೆಲವೊಮ್ಮೆ ಗಂಟು ಬೇರು,ಜಂತು ರೋಗ ಬಂದಾಗ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಎಲೆಗಳ ಮೇಲೆ ವೃತ್ತಾಕಾರದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಕೆಂಪಾದ ಎಲೆಗಳು ಉದುರಲು ಪ್ರಾರಂಭವಾಗುತ್ತದೆ. ಇದರ ನಿವಾರಣೆಗೆ ಬಿತ್ತನೆ ಮಾಡಿದ ಮೂರು ವಾರಗಳ ನಂತರ ಎರಡು ಗ್ರಾಂ ಮ್ಯಾಂಕೋಜಗ್ ಔಷಧಿಯನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಿ.

ಹೂ ಬಿಡಲು ಪ್ರಾರಂಭವಾದಾಗ ಕಾರ್ಬನ್ ಡೈಜನ್ ಔಷಧಿಯನ್ನು ಪ್ರತಿ ಲೀಟರ್ ನೀರಿಗೆ 1 ರಿಂದ 1.5 ಗ್ರಾಂ ನಂತೆ ಬೆರೆಸಿ ಸಿಂಪರಣೆ ಮಾಡಿ. ನಂಜು ರೋಗಕ್ಕೆ ತುತ್ತಾದ ಗಿಡಗಳನ್ನು ಕಿತ್ತು ದೂರ ಹಾಕುವುದು. ಬೇರಿಗೆ ತೊಂದರೆ ಕೊಡುವ ಜಂತು ಹುಳುಗಳಿದ್ದರೆ ಬೇವಿನ ಹಿಂಡಿಯನ್ನು ಬಳಕೆ ಮಾಡಿ. ಹದ ನೋಡಿಕೊಂಡು ಗೊಬ್ಬರ ಮತ್ತು ನೀರನ್ನು ಕೊಡಿ. ಇದೇ ಜಾಗದಲ್ಲಿ ಮುಂದಿನ ಸಲ ಹಾಗಲ ಬೆಳೆಯಬೇಡಿ. ಸಸ್ಯ ಸಂರಕ್ಷಣೆಯಲ್ಲಿ ಬೆಳೆ ಪರಿವರ್ತನೆ ಕೂಡ ಬಹಳ ಮುಖ್ಯ.

ಪ್ರಶ್ನೆ: ನಮ್ಮ ತೋಟದ ಬದುಗಳಲ್ಲಿ ನಾಚಿಕೆ ಗಿಡ ( ಮುಟ್ಟಿದರೆ ಮುನಿ)ಗಳು ಬೆಳೆದು ದನಗಳ ಮೇವಿಗೆ ತೊಂದರೆ ಮಾಡಿವೆ.ಕಿತ್ತು ಹಾಕಿದರೂ ಮತ್ತೆ ಮತ್ತೆ ಬೆಳೆಯುತ್ತವೆ. ಇದರ ನಿಯಂತ್ರಣಕ್ಕೆ ಏನು ಮಾಡಬೇಕು?
 -ಎ.ಎನ್. ಚಂದ್ರಶೇಖರಯ್ಯ ಹಾರನಹಳ್ಳಿ, ಅರಸೀಕೆರೆ ತಾಲ್ಲೂಕು

ಉತ್ತರ: ಸಾಮಾನ್ಯವಾಗಿ ಕೆಲವು ದೀರ್ಘಾವಧಿ ಕಳೆಗಳನ್ನು ಅಷ್ಟು ಸುಲಭದಲ್ಲಿ ನಾಶಪಡಿಸಲು ಸಾಧ್ಯವಿಲ್ಲ.  ಇವು ಬೇರುಗಳಿಂದ ಅಭಿವೃದ್ದಿ ಹೊಂದುವುದರಿಂದ ಕಳೆನಾಶಕಗಳನ್ನು ಸಿಂಡಿಸಿದರೂ ಮೇಲಿನ ಭಾಗ  ಒಣಗಿದಂತಾಗಿ ಮತ್ತೆ ಹದ ಸಿಕ್ಕಿದ ಕೂಡಲೇ ಬೆಳೆಯುತ್ತವೆ. ನೀವು ಹೇಳಿದ ಮುಟ್ಟಿದ ಮುನಿ, ಬಿಳಿ ಕಸ ಇವೆಲ್ಲ ಈ  ವರ್ಗಕ್ಕೆ ಸೇರಿದ ಕಳೆಗಳು.

ಇವುಗಳನ್ನು ಭೂಮಿ ತೇವ ಇದ್ದಾಗ ಅಗೆತ ಮಾಡಿ, ಬೇರು ಸಮೇತ ಆರಿಸಿ ಸುಡಬೇಕು. ಅನಂತರ ಮತ್ತೆ ನೀರು ಕೊಟ್ಟು ಚಿಗುರುವಂತೆ ಮಾಡಬೇಕು. ಮತ್ತೊಮ್ಮೆ ಹದವಿದ್ದಾಗ ಚಿಗುರು ಬಂದಿರುವ ಬೇರುಗಳನ್ನು ಹುಡುಕಿ ಕೀಳಬೇಕು. ಇಲ್ಲವಾದರೆ ಒಂದು ಗಿಡದಿಂದ ಒಂದು ವರ್ಷಕ್ಕೆ ಸುಮಾರು ಒಂದು ಲಕ್ಷ ಬೀಜ ಉತ್ಪತ್ತಿಯಾಗುತ್ತವೆ. ಬೀಜವೇ ಇಲ್ಲದೆ ಭೂಮಿಯೊಳಗೆ ಬೇರುಗಳು ಹಬ್ಬಿ ಬೆಳೆಯುತ್ತವೆ. ಅದಕ್ಕಾಗಿ ಎರಡು  ಸಲ ಈ ರೀತಿ ತೆಗೆದ ಮೇಲೆ ಮೂರನೇ ಸಲ ಸ್ವಲ್ಪ ಬೆಳೆಯಲು ಬಿಟ್ಟು 24ಡಿ ಕಳೆ ನಾಶಕವನ್ನು ಸಿಂಪರಣೆ ಮಾಡಿ.

ಮೊಳಕೆ ಮೇಲೆ ಬಂದ 3-4 ವಾರಗಳ ನಂತರ ಕಳೆನಾಶಕ ಸಿಂಪಡಿಸಬೇಕು. ಸಿಂಪಡಿಸಿದ 24 ಗಂಟೆಗೆ ಮೊದಲು ನೀರನ್ನು ಬಸಿದು ತೇವಾಂಶ ಮಾತ್ರ ಇರುವಂತೆ ಮಾಡಿ ಅನಂತರ ನೀರನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇದೇ ರೀತಿ ನೈಟ್ರೋಪೆನ್ ಕಳೆನಾಶಕವನ್ನು ಬಳಕೆ ಮಾಡಬಹುದು. ಯಾವುದೇ ಕಳೆನಾಶಕ ಸಿಂಪಡಿಸಿದರೂ, ಸಿಂಪರಣೆ ಮಾಡುವಾಗ ತೇವಾಂಶ ಇರಬೇಕು.

ಅನಂತರ ಇರಬಾರದು. ಈ ರೀತಿ ಎರಡು ಮೂರು ಸಲ ಕ್ರಮ ಕೈಗೊಳ್ಳುವುದರಿಂದ ಕಳೆ ಹಾವಳಿ ಕಡಿಮೆಯಾಗುತ್ತದೆ. ಇವುಗಳ ನಡುವೆ ಧಿಕ್ಕರಿಸಿ ಬೆಳೆಯುವಂತಹ ಮೇವಿನ ಬೆಳೆಗಳನ್ನು ಬೆಳೆಯಬಹುದು. ಕಳೆ ನಾಶಕಗಳನ್ನು ನೀರಿನೊಡನೆ ಚೆನ್ನಾಗಿ ಬೆರೆಸಿ ದ್ರಾವಣ ಎಲೆಗಳ ಮೇಲೆಲ್ಲ ಸರಿಯಾಗಿ ಬೀಳುವಂತೆ ಸಿಂಪಡಿಸಬೇಕು.

ಅಕ್ಕಪಕ್ಕದ ಬೆಳೆಗಳ ಮೇಲೆ ಕಳೆನಾಶಕ ಬೀಳಬಾರದು. ಮೊಳಕೆ ಬಂದ ನಂತರ ಕಳೆ ನಾಶಕಗಳನ್ನು ಬಳಸುವಾಗ ಅದಕ್ಕೆ 0.1 ರ ಟೀಪಾಲ್ ಮಿಶ್ರ ಮಾಡಿ ಉಪಯೋಗಿಸಬೇಕು. ಹೀಗೆ ಮಾಡಿದರೆ ಕಳೆಗಳು ನಾಶವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT