ಅಂಗನವಾಡಿ ಸುತ್ತ ಮುಳ್ಳಿನ ಪೊದೆ!

7

ಅಂಗನವಾಡಿ ಸುತ್ತ ಮುಳ್ಳಿನ ಪೊದೆ!

Published:
Updated:
Deccan Herald

ಕಲಕೇರಿ: ಮಕ್ಕಳ ಕಲಿಕೆಗೆ ಬುನಾದಿ ಹಾಕುವ ಗ್ರಾಮದ ವಾರ್ಡ್ ನಂಬರ್ 2ರ ಅಂಗನವಾಡಿ ಕೇಂದ್ರದ ಸುತ್ತಲೂ ಮುಳ್ಳಿನ ಪೊದೆಗಳು ಬೆಳೆದು ನಿಂತಿವೆ. ಹಂದಿಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ, ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಇಲ್ಲಿನ ತಾಂಡಾಕ್ಕೆ ತೆರಳುವ ಮುಖ್ಯರಸ್ತೆಯ ಬಳಿ, ಜಿಲ್ಲಾ ಪಂಚಾಯ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ 2015ರಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ನಿತ್ಯ 40ಕ್ಕೂ ಹೆಚ್ಚು ಮಕ್ಕಳು ಇಲ್ಲಿಗೆ ಬರುತ್ತಾರೆ.

ಮಕ್ಕಳಿಗೆ ಪಾಠದ ಜತೆಗೆ ಆಟವೂ ಅಷ್ಟೇ ಮುಖ್ಯ. ಆದರೆ, ಈ ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ಸಾಕಷ್ಟು ವಿಶಾಲವಾದ ಮೈದಾನವಿದ್ದರೂ; ಗ್ರಾಮ ಪಂಚಾಯ್ತಿಯವರು ಸರಿಯಾಗಿ ನಿರ್ವಹಿಸಿಲ್ಲ. ಹಾಗಾಗಿ, ಮೈದಾನವೀಗ ಕಲ್ಲು ಮುಳ್ಳು, ವಿಷಜಂತುಗಳ ಹಾಗೂ ಹಂದಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ.

‘ಅಂಗನವಾಡಿ ಸುತ್ತಲೂ ಮುಳ್ಳಿನ ಪೊದೆ ತುಂಬಿಕೊಂಡಿದೆ. ಇದರಿಂದ ಮಕ್ಕಳು ಆಟವಾಡುವುದಿರಲಿ, ನಡೆದುಕೊಂಡು ಮನೆಗೆ ಹೋಗುವುದು ಕಷ್ಟವಾಗಿದೆ. ಈ ಮುಳ್ಳುಕಂಠಿಗಳಿಂದ ವಿಷಪೂರಿತ ಕ್ರಿಮಿಕೀಟಗಳು ಕೇಂದ್ರದ ಸುತ್ತಲೂ ಈಚೆಗೆ ಹೆಚ್ಚಿಗೆ ಕಾಣಿಸುತ್ತಿರುವುದರಿಂದ ಮಕ್ಕಳಿಗೆ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಪಾಲಕರು ಹಿಂಜರಿಯುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ಗೋಪಾಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಗನವಾಡಿ ಸುತ್ತಲಿನ ಪ್ರದೇಶವನ್ನು ಸ್ವಚ್ಚಗೊಳಿಸುವಂತೆ ಸ್ಥಳೀಯ ಗ್ರಾಮ ಪಂಚಾಯ್ತಿಯವರಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಈರಪ್ಪ ಒತ್ತಾಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !