ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಗಳಿಂದ ಪಟಕ್ಕೆ ಕಾರಂತರ ಕಾದಂಬರಿಗಳು

Last Updated 9 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಡಾ. ಶಿವರಾಮ ಕಾರಂತರ ಕರ್ಮಭೂಮಿ, ಪುತ್ತೂರಿನ `ಬಾಲವನ' ಇತ್ತೀಚೆಗೆ ಒಂದು ಅಪರೂಪದ ಕಲಾಸಂಭ್ರಮಕ್ಕೆ ತನ್ನನ್ನು ತಾನು ತೆರೆದುಕೊಂಡಿತ್ತು. ಜನವರಿ 25ರಿಂದ ಐದು ದಿನಗಳ ಕಾಲ ರಾಜ್ಯದ ವಿವಿಧೆಡೆಗಳಿಂದ ಬಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದರು ಕಾರಂತರ ಈ ನೆಲದಲ್ಲಿ ನಡೆದಾಡಿದರು, ಸಂಭ್ರಮಿಸಿದರು.

ಕಾರಂತರ ಜೊತೆಗಿನ ಒಡನಾಟಗಳನ್ನು ಮೆಲುಕು ಹಾಕಿ, ಸಾಹಿತಿಗಳೊಂದಿಗೆ ಚರ್ಚಿಸಿದರು. ಕಲಾಸಕ್ತರೊಡನೆ ಹರಟೆ ಹೊಡೆದು, ಬೆನ್ನು ಬಿದ್ದು ಕಾಡುವ ಮಕ್ಕಳಿಗೆಲ್ಲ ಸ್ಕೆಚ್ ಮಾಡಿಕೊಟ್ಟರು. ಇವೆಲ್ಲದರ ಜೊತೆ ಅದ್ಭುತವಾದ ಕಲಾಕೃತಿಗಳನ್ನು ಕ್ಯಾನ್‌ವಾಸ್ ಮೇಲೆ ರಚಿಸಿಕೊಟ್ಟರು. ಇವರನ್ನೆಲ್ಲ ಇಲ್ಲಿ ಒಂದುಗೂಡಿಸಿದ್ದು `ಡಾ. ಶಿವರಾಮ ಕಾರಂತ ಬಾಲವನ ಸಮಿತಿ' ಆಯೋಜಿಸಿದ್ದ ಒಂದು ವಿನೂತನ ಕಾರ್ಯಕ್ರಮ- `ಕಾರಂತರ ಕಾದಂಬರಿಗಳ ಬಗ್ಗೆ ಕಲಾಕೃತಿ ರಚನೆ'

ಆಹ್ವಾನಿತ ಕಲಾವಿದರಿಗೆಲ್ಲ ತಿಂಗಳ ಮೊದಲೇ ಕಾರಂತರ ಒಂದು ಕಾದಂಬರಿ ನೀಡಲಾಗಿತ್ತು ಹಾಗೂ ಕಲಾಶಿಬಿರದಲ್ಲಿ ಈ ಕಾದಂಬರಿಯ ಬಗ್ಗೆ ಕಲಾಕೃತಿಯೊಂದನ್ನು ರಚಿಸಿಕೊಡಲು ಕೇಳಿಕೊಳ್ಳಲಾಗಿತ್ತು. ಕಾರಂತರ ಕಾದಂಬರಿಗಳನ್ನು ಕ್ಯಾನ್‌ವಾಸ್ ಮೇಲೆ ತರುವ ವಿಶಿಷ್ಟ ಯೋಜನೆಯಿದು.

ಹದಿಮೂರು ಕಲಾವಿದರು ಈ ಶಿಬಿರದಲ್ಲಿ ಭಾಗಿಗಳಾದರು. ಕಾರಂತರ ಪುತ್ರಿ ಶ್ರೀಮತಿ ಕ್ಷಮಾ ರಾವ್ ಶಿಬಿರ ಉದ್ಘಾಟಿಸಿದರು. ಈ ಶಿಬಿರಕ್ಕೆ ಪೂರಕವಾಗಿ ನಾಡಿನ ಅನುಭವಿ ಸಾಹಿತಿಗಳು, ಪ್ರಾಧ್ಯಾಪಕರು, ಚಿಂತಕರು, ಕಾರಂತರ ಒಂದೊಂದು ಕಾದಂಬರಿಗಳ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ರಮೇಶಚಂದ್ರ ದತ್ತಾ, ಸುಬ್ರಾಯ ಚೊಕ್ಕಾಡಿ, ಚಿಕ್ಕಮಗಳೂರು ಗಣೇಶ್, ಲಕ್ಷ್ಮೀಶ ತೋಳ್ಪಾಡಿ, ಸುಬ್ರಹ್ಮಣ್ಯ ಭಟ್, ಪುರಂದರ ಭಟ್, ವಸಂತಕುಮಾರ್ ತಾಳ್ತಜೆ, ವರದರಾಜ ಚಂದ್ರಗಿರಿ, ನರೇಂದ್ರ ರೈ ದೇರ್ಲ, ರಾಜೇಶ್ ಬೆಜ್ಜಂಗಳ ಅವರುಗಳು ಕಾರಂತರ ಕಾದಂಬರಿಗಳ ಬಗ್ಗೆ ಮಾತನಾಡಿದರು.

ಆಯಾ ಕಾದಂಬರಿಯನ್ನು ಚಿತ್ರಿಸಲಿರುವ ಕಲಾವಿದರ ಜೊತೆ ಪ್ರತ್ಯೇಕವಾಗಿ ಆಪ್ತವಾಗಿ ಚರ್ಚಿಸಿದರು. ಕಲಾವಿದರೂ ತಮ್ಮ ಕಾಣ್ಕೆಗಳನ್ನು ಅವರೆದುರು ತೆರೆದಿಟ್ಟರು. ಸಂಜೆಯ ಹೊತ್ತಿಗೆ ಕಲಾವಿದರ ಮನಸ್ಸು ಕಥೆಯನ್ನು ಸಂಪೂರ್ಣವಾಗಿ ಮಥಿಸಿ, ಚಿತ್ರ ರಚನೆಗೆ ತಯಾರಾಗಿತ್ತು, ಸೂರ್ಯ ಮುಳುಗುವ ಮೊದಲೇ ಕೆಲವರು ರೇಖೆಗಳನ್ನು ಎಳೆಯಲು ಪ್ರಾರಂಭಿಸಿದ್ದರು.

ಮುಂದಿನ ನಾಲ್ಕು ದಿನಗಳಲ್ಲೂ ಕಲಾವಿದರು ಅಕ್ಷರಶಃ ಕಾರಂತರ ಲೋಕದಲ್ಲಿದ್ದರು. ಪುಟಪುಟಗಳಲ್ಲಿ ತುಂಬಿದ್ದನ್ನು ವರ್ಣಗಳು, ಪ್ರತಿಮೆಗಳು, ಸಂಕೇತಗಳ ಮೂಲಕ ಮೊಗೆದು ಪಟದ ಮೇಲೆ ತರುವಲ್ಲಿ ತಲ್ಲೆನರಾಗಿದ್ದರು.

ಕಲಾವಿದರನ್ನೇ ಮಾತನಾಡಿಸಿದಾಗ ತಮ್ಮ ವಸ್ತುವನ್ನು ತಾವು ಅರ್ಥೈಸಿದ ರೀತಿ, ಅದನ್ನು ಕ್ಯಾನ್‌ವಾಸ್ ಮೇಲೆ ತರುವಲ್ಲಿ ಬಳಸಿದ ತಂತ್ರಗಳ ಬಗ್ಗೆ ಕಲಾಸಕ್ತರಿಗೆ ಮುಕ್ತವಾಗಿ ವಿವರಿಸುತ್ತಿದ್ದರು. ಇದು ಇಲ್ಲಿನ ಕಲಾಸಕ್ತರಿಗೆ ಕಲೆಯನ್ನು `ನೋಡುವ ರೀತಿ'ಯನ್ನು ಪರಿಚಯಿಸುವಲ್ಲಿ ಸಹಕಾರಿಯಾಯಿತು.

ಕಾರಂತರ ಹಲವು ಕಾದಂಬರಿಗಳಿಗೆ ಮುಖಪುಟಗಳನ್ನು ಬರೆಯುವ ನೆಪದಲ್ಲಿ ಅವರ ಕಾದಂಬರಿಗಳನ್ನು ಓದಿರುವ ಕಲಾವಿದ ಪ.ಸ.ಕುಮಾರ್ ರವರಿಗೆ `ಸಮೀಕ್ಷೆ' ಕಾದಂಬರಿಗೆ ಚಿತ್ರ ಬರೆಯುವುದು ಬಹುಶಃ ಸಲೀಸಾಗಿತ್ತು. ಆದ್ದರಿಂದಲೇ ಏನೋ... ಅವರು ನಿಗದಿತ ಅವಧಿಯೊಳಗೆ ಎರಡು ಕಲಾಕೃತಿ ರಚಿಸಿದ್ದರು.
`ಆಳ ನಿರಾಳ' ಕೃತಿಯನ್ನು ಆಯ್ದುಕೊಂಡಿದ್ದ ಹಿರಿಯ ಕಲಾವಿದ ಎಂ.ಬಿ. ಪಾಟೀಲರು ಕಾರಂತರ ಲೋಕದಲ್ಲಿ ತುಂಬಾ ಆಳಕ್ಕೆ ಹೋಗಿದ್ದರು.

ಪ್ರವಾಸದ ಸಂದರ್ಭದಲ್ಲಿನ ಪಾತ್ರಗಳ ಸ್ವಭಾವ, ಸಂಬಂಧಗಳು ಬಿಚ್ಚಿಕೊಂಡಂತೆಲ್ಲ ಕಥೆಗೆ ಅನೇಕ ಕೊಂಡಿಗಳು ಸೇರುತ್ತಾ ಹೋಗುತ್ತವೆ ಎನ್ನುವ ಅವರು, ನಮ್ಮ ಕ್ಯಾನ್‌ವಾಸ್‌ನ ಮಿತಿಯೊಳಗೆ, ಪಾತ್ರಗಳ ತೂಕಕ್ಕನುಸಾರವಾಗಿ ಎಚ್ಚರಿಕೆಯಿಂದ ಚಿತ್ರಿಸಬೇಕಾಗುತ್ತದೆ ಎನ್ನುತ್ತಾರೆ. ಕಾರಂತರ ಜೊತೆ ಕಳೆದ ಕ್ಷಣಗಳನ್ನು ನೆನೆದು ಭಾವುಕರಾಗುತ್ತಾರೆ. “

ಅವರು ಹುಬ್ಬಳ್ಳಿ ಧಾರವಾಡ ಕಡೆ ಬಂದಾಗಲೆಲ್ಲ ಭೇಟಿಯಾಗುತಿದ್ದೆವು. ಭಿತ್ತಿ ಚಿತ್ರಗಳ ಬಗ್ಗೆ, ಫೋಟೊಗ್ರಫಿಯ ಬಗ್ಗೆ ರಾತ್ರೆಯಿಂದ ಬೆಳಗ್ಗಿನವರೆಗೆ ಮಾತನಾಡಿದರೂ ವಿಷಯ ಮುಗಿಯುತ್ತಿರಲಿಲ್ಲ. ಆದರೆ ಪ್ಯಾಕೇಟುಗಟ್ಟಲೆ ಸಿಗರೇಟು ಮುಗಿಯುತಿತ್ತು” ಎಂದು ನೆನಪಿಸಿಕೊಂಡರು. “ನಿಜವಾಗ್ಲೂ ಬಿಟ್ಟಿದ್ದೇ ರೀ... ಯಾಕೋ ಅವರ ಆ ನೆನಪಲ್ಲಿ ಒಂದು ಹಚ್ಚೋಣ ಅನ್ನಿಸ್ತು” ಅನ್ನುತ್ತಾ ಕೈಯಲ್ಲಿದ್ದ ಸಿಗರೇಟನ್ನು ತುಟಿಗೆ ತಂದರು.

ಕಲಾವಿದ ಎಂ.ಎಸ್. ಮೂರ್ತಿ ಅವರ ವಸ್ತು `ಮೈ ಮನಗಳ ಸುಳಿಯಲ್ಲಿ' ಕಾದಂಬರಿ. `ಹೆಣ್ಣು-ಗಂಡಿನ ಸಂಬಂಧಗಳ ಸಂಕೀರ್ಣತೆಯನ್ನು ಈ ಕಾದಂಬರಿಯಲ್ಲಿ ಅತ್ಯಂತ ಹದವಾಗಿ ಚಿತ್ರಿಸಲಾಗಿದೆ. ನಮ್ಮ ಇಂದಿನ ಅನುಭವಗಳ ಆಧಾರದ ಮೇಲೆ ಇದನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. 1970ರ ಆ ಕಾದಂಬರಿಯ ಈ ಕಾಲದ ಮುಂದುವರಿಕೆಯಾಗಿ ನನ್ನ ಈ ಕಲಾಕೃತಿಯಿದೆ' ಎನ್ನುವುದು ಅವರ ಅನಿಸಿಕೆ.

`ಬೆಟ್ಟದ ಜೀವ'ದಲ್ಲಿನ ಗೋಪಾಲಯ್ಯನ ಪಾತ್ರದಿಂದ ತುಂಬ ಕಲಾವಿದ ಕೆ.ಕೆ.ಮಕಾಳಿ ತುಂಬಾ ಪ್ರಭಾವಿತರಾಗಿದ್ದರು. `ನನ್ನ ಕೃತಿಯಲ್ಲಿ ಗೋಪಾಲಯ್ಯನೇ ಮುಖ್ಯ. ಅವನಿಗಿರುವ ವಿಶೇಷ ದೃಷ್ಟಿ, ತಲೆಯಲ್ಲಿ ತುಂಬಿರುವ ಪ್ರಕೃತಿ, ಅವನು ಕಳೆದುಕೊಳ್ಳುವ ಸಂಗತಿಗಳು... ಇವನ್ನೆಲ್ಲ ನನ್ನ ಕೃತಿಯಲ್ಲಿ ಚಿತ್ರಿಸಿದ್ದೇನೆ' ಎಂದರು ಮಕಾಳಿ.

ಕಾರಂತರ ಯಕ್ಷಗಾನ ಬ್ಯಾಲೆಯನ್ನು ಕಲಾವಿದ ರಮೇಶ್ ರಾವ್ ಚಿತ್ರರೂಪಕ್ಕೆ ತಂದಿದ್ದಾರೆ. ಅದಕ್ಕಾಗಿ ಅವರು, ಉಡುಪಿಯ ಯಕ್ಷಗಾನ ಕಲಾಕೇಂದ್ರ, ಗೋವಿಂದ ಪೈ ಸಂಶೋಧನಾ ಕೇಂದ್ರಗಳಿಂದ ವಿವರಗಳನ್ನು ಕಲೆಹಾಕಿ ಅಧ್ಯಯನ ಮಾಡಿದ್ದಾರೆ. ಕಾರಂತರ ಎಂಟು ಯಕ್ಷ ಬ್ಯಾಲೆಗಳಲ್ಲೊಂದಾದ `ಅಭಿಮನ್ಯು ವಿಜಯ'ವನ್ನು ಅವರು ಚಿತ್ರಿಸಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯಪ್ರಿಯರಾಗಿರು ಕಲಾವಿದೆ ಶ್ರೀಮತಿ ರೇಣುಕಾ ಮಾರ್ಕಾಂಡೆ, `ಸ್ವಪ್ನದ ಹೊಳೆ' ಕಾದಂಬರಿಯನ್ನು ಕ್ಯಾನ್ವಾಸ್ ಮೇಲೆ ತಂದಿದ್ದಾರೆ. ಕೃತಿರಚನೆಗಾಗಿ ಓದುವ ಅನುಭವವೇ ಬೇರೆ ಎನ್ನುವ ಅವರು ಇಡೀ ಕಥೆಯ ಸಾರವನ್ನು ಗ್ರಹಿಸಿ ಚಿತ್ರಿಸಿದ್ದೇನೆ ಎನ್ನುತ್ತಾರೆ. ಕಾರಂತರ ಕರ್ಮಭೂಮಿಯಲ್ಲಿ ಓಡಾಡಿ ಅವರದೇ ಕಾದಂಬರಿಯ ಬಗ್ಗೆ ಚಿತ್ರ ಬರೆದ ಖುಷಿ ಅವರದು.

ಕಲಾವಿದ ಚಂದ್ರನಾಥ ಆಚಾರ್ಯರಿಗೂ ಪುತ್ತೂರಿಗೂ ಹಳೆಯ ನಂಟು. ಬಾಲ್ಯದಲ್ಲಿ ಕಂಡ ಕಾರಂತರ ದಸರಾ ಕಾರ್ಯಕ್ರಮಗಳು ಈಗಲೂ ಅವರ ನೆನಪಿನಲ್ಲಿವೆ. `ಒಂದು ಕಾದಂಬರಿಯ ಸತ್ವ ನನಗೆಷ್ಟು ದಕ್ಕಿತು ಎನ್ನುವುದರ ಬಗ್ಗೆ, ಮತ್ತು ಅದರ ಅಭಿವ್ಯಕ್ತಿಯ ಬಗ್ಗೆ ನಾವು ಗಮನ ಹರಿಸಬೇಕು' ಎನ್ನುವ ಅವರು `ಚಿಗುರಿದ ಕನಸು' ಕಾದಂಬರಿಯನ್ನು ಬಣ್ಣಗಳಲ್ಲಿ ಚಿತ್ರಿಸಿದ್ದಾರೆ. ಮಡದಿ, ಮಗಳೊಂದಿಗೆ ಪುತ್ತೂರಿಗೆ ಬಂದಿದ್ದ ಅವರಿಗೆ ಮರಳಿ ಮಣ್ಣಿಗೆ ಬಂದ ಸಂಭ್ರಮ.

`ಕನ್ಯಾಬಲಿ' ಕಾದಂಬರಿ ಕಲಾವಿದೆ ರಾಣಿರೇಖಾ ಅವರ ವಸ್ತು. ಈ ಕಾದಂಬರಿ ಕುರಿತು ಲಕ್ಷ್ಮೀಶ ತೋಳ್ಪಾಡಿಯವರು ನೀಡಿದ ಒಳನೋಟಗಳು ಅವರನ್ನು ಬೆಚ್ಚಿ ಬೀಳಿಸಿದವಂತೆ. ತಮ್ಮ ಕಲಾಕೃತಿಯಲ್ಲಿ, ನೋಡುಗನಿಗೆ, ಜಗತ್ತಿಗೆ ಬೆನ್ನು ಹಾಕಿ ನಡೆಯುತ್ತಿರುವ ಹೆಣ್ಣಿನ ದೇಹದಲ್ಲಿ ಮೋಡಗಳು, ಆಕಾಶ, ಅಲೆಅಲೆಯಾಗಿ ಹರಿವ ನೀರು... ಅವಳ ಅವಸ್ಥೆಗಳ ಸಂಕೇತವಾಗಿ ರೇಖಾ ಚಿತ್ರಿಸಿದ್ದಾರೆ. ಕೆಲವೊಮ್ಮೆ ಆ ಹೆಣ್ಣು ಮೇಲಕ್ಕೆ ಬರಲಾರದ ನೀರಿನಾಳಕ್ಕೆ, ಕತ್ತಲೆಯೊಳಗೆ ಮುಳುಗುತಿದ್ದಾಳೋ ಎನ್ನಿಸುವಂತಿದೆ. ಕಥೆಯ ಸತ್ವವೂ ಇದೇ ಅಲ್ಲವೇ ಎನ್ನುವುದು ಅವರ ಪ್ರಶ್ನೆ.

`ಅಳಿದ ಮೇಲೆ' ಕಾದಂಬರಿಯಲ್ಲಿ, ಅಳಿದವರ ಹಣದಿಂದ ನಾಲ್ಕು ಮಂದಿ ಬದುಕು ಕಂಡುಕೊಳ್ಳುವ ರೀತಿಯನ್ನು ಬಣ್ಣಗಳು, ಸಂಕೇತಗಳ ಮೂಲಕ ಕಲಾವಿದ ಬಾಬುರಾವ್ ನಡೋಣಿ ಅಭಿವ್ಯಕ್ತಿಸಿದ್ದಾರೆ. ತುಂಬ ಲಹರಿಯಲ್ಲಿದ್ದಾಗ ಕ್ಯಾನ್‌ವಾಸ್ ಬಿಟ್ಟು ಕೊಳಲು ಎತ್ತಿಕೊಳ್ಳುತ್ತಿದ್ದ ಅವರು ಎಲ್ಲರಿಂದಲೂ `ಒನ್ಸ್‌ಮೋರ್' ಗಿಟ್ಟಿಸಿಕೊಳ್ಳುತ್ತಿದ್ದರು.

`ಕಾದಂಬರಿ ಹಾಗೂ ಚಿತ್ರಕಲೆ ಎರಡು ಪ್ರತ್ಯೇಕ ಭಾಷೆಗಳು. ಇವೆರಡನ್ನು ಒಟ್ಟುಗೂಡಿಸುವ ನನ್ನ ಯತ್ನ ನನಗೆ ತೃಪ್ತಿ ತಂದಿದೆ' ಎಂದರು `ಮರಳಿ ಮಣ್ಣಿಗೆ' ಕಾದಂಬರಿಯನ್ನು ಚಿತ್ರಿಸಿರುವ ಹಿರಿಯ ಕಲಾವಿದ ವಿ.ಜೆ. ಅಂದಾನಿ. ಇಲ್ಲಿನ ಕಲಾಕೃತಿಗಳೆಲ್ಲ ಸೇರಿ ವಿಶಿಷ್ಟ ಸಂಗ್ರಹಾಲಯವಾಗಲಿ ಎನ್ನುವುದು ಅವರ ಆಶಯ.

`ಕುಡಿಯರ ಕೂಸು' ಕೃತಿಯನ್ನು ಚಿತ್ರಿಸಿದ ಸುದೇಶ್ ಮಹಾನ- `ಕಾದಂಬರಿ ನನಗೆ ಕೊಟ್ಟ ಅನುಭವವನ್ನು ನನ್ನದೇ ಶೈಲಿಯಲ್ಲಿ ಚಿತ್ರಿಸಿದ್ದೇನೆ'  ಎಂದರು. ಸುರೇಶ್‌ಚಂದ್ರ ದತ್ತಾ ಅವರು ಚಿತ್ರಿಸಿದ್ದು ಸ್ವಾತಂತ್ರ್ಯಪೂರ್ವದ ಕಥಾನಕವುಳ್ಳ `ಔದಾರ್ಯದ ಉರುಳಲ್ಲಿ' ಕಾದಂಬರಿಯನ್ನು. ಕಥಾನಾಯಕನಿಗೆ ಸಿಕ್ಕಿದ ಗಾಂಧೀವಾದದ ತಕಲಿ, ಜೊತೆಗಿದ್ದವರ ಮುಖವಾಡಗಳು, ಅಂಧಕಾರ ಕವಿದ ದೇಶ, ಇವೆಲ್ಲವನ್ನೂ ಬಹುತೇಕ ಕಪ್ಪು ಬಿಳುಪಿನ ಮೂಲಕವೇ ಅವರು ತೋರಿಸಿದ್ದಾರೆ.

ಈ ವಿಶಿಷ್ಟ, ಅಪರೂಪದ ಶಿಬಿರದ ಸಂಘಟನೆಗೆ ಅಪಾರ ಶ್ರಮಪಟ್ಟವರು ಕಲಾವಿದ ಮೋಹನ ಸೋನಾ. `ಸರಸಮ್ಮನ ಸಮಾಧಿ'ಯನ್ನು ಕ್ಯಾನ್‌ವಾಸ್ ಮೇಲೆ ತಂದಿರುವ ಅವರು ತಮ್ಮ ಕೃತಿಗಿಂತ ಹೆಚ್ಚು ಕಾರಂತರ ಕಾರ್ಯಕ್ಷೇತ್ರ `ಬಾಲವನ'ದ ಬಗ್ಗೆ ಮಾತನಾಡಿದರು. ಕ್ರಿಯಾಶೀಲ ಯೋಜನೆಗಳ ಬಗ್ಗೆ ಕೊಂಕು ನುಡಿಯುವವರ ಕುರಿತು ಬೇಸರ ವ್ಯಕ್ತಪಡಿಸಿದರು. `ಬಾಲವನದಲ್ಲಿ ಅದಾಗಬಾರದು, ಇದಾಗಬಾರದು ಎನ್ನುವವರೆಲ್ಲ ಇಲ್ಲಿ ಸದ್ಯ ಏನಾಗುತ್ತಿದೆ ಎಂದು ನೋಡಬೇಕು.

ಅದಕ್ಕೆ ನಮ್ಮಿಂದ ಏನು ಕೊಡಲು ಸಾಧ್ಯ ಎಂದು ಯೋಚಿಸಬೇಕು' ಎಂದರು.  ಅವರೊಂದಿಗೆ ಈ ದೊಡ್ಡ ಯೋಜನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಚಂದ್ರ ತಳೂರು ಮಾತಿಗೆ ಸಿಗದಷ್ಟು ಕೆಲಸಗಳನ್ನು ಹೊತ್ತುಕೊಂಡಿದ್ದರು. ಕಲಾವಿದರ ಬೇಕು-ಬೇಡಗಳನ್ನು ಪೂರೈಸುವುದರಿಂದ ಹಿಡಿದು ಮಕ್ಕಳಿಗೆ ಕಥೆ ಹೇಳಿ ಚಿತ್ರ ಬಿಡಿಸಲು ಹಚ್ಚುವವರೆಗೆ ಎಲ್ಲವನ್ನೂ ನಿಭಾಯಿಸುವ ಅವರು ಅಗತ್ಯ ಬಿದ್ದಾಗ ಚಹಾ ಮಾಡಿಕೊಡಲೂ ಸಿದ್ಧರಾಗಿದ್ದರು.

ಬಾಲವನದ ಈ ಎಲ್ಲಾ ಕಾರ್ಯಕ್ರಮಗಳ ಆಧಾರ ಸ್ಥಂಭ ಅಲ್ಲಿನ ಸಹಾಯಕ ಆಯುಕ್ತರಾದ ಎಚ್.ಪ್ರಸನ್ನ ಇವರು. ಅಧಿಕಾರಿಯ ಸ್ಥಾನಮಾನಗಳನ್ನೆಲ್ಲ ಬದಿಗೊತ್ತಿ ಕಲಾವಿದರ ಜೊತೆ ಆತ್ಮೀಯವಾಗಿದ್ದ ಅವರು ಶಿಬಿರದಲ್ಲಿ ಹಿತಕರ ಭಾವ ಮೂಡಿಸಿದರು. `ಕಾರಂತರ ಕೃತಿಗಳ ಬಗ್ಗೆ ಇಂಥ ಇನ್ನೂ ಎರಡು ಶಿಬಿರಗಳು ನಡೆಯಲಿವೆ.

ಇನ್ನೂ ಕೆಲವು ಕಲಾಕೃತಿಗಳನ್ನು ತರಿಸಿ ಇಲ್ಲೊಂದು ವಿಶಿಷ್ಟ ಕಲಾಗ್ಯಾಲರಿಯನ್ನು ನಿರ್ಮಿಸಲಿದ್ದೇವೆ' ಎನ್ನುವುದು ಅವರ ಮಾತು. `ಕಲಾಕೃತಿಗಳನ್ನು ಜನರ ಕಣ್ಣಿಗೆ ತೆರೆದಿಡಬೇಕು: ಅವುಗಳನ್ನು ಆಸ್ವಾದಿಸುವ ರೀತಿಯ ಬಗ್ಗೆ ಆಸಕ್ತರಿಗೆ ಮಾಹಿತಿ ನೀಡಬೇಕು' ಎನ್ನುವುದು ಅವರ ಆಶಯ.

ಒಟ್ಟಿನಲ್ಲಿ ಪುತ್ತೂರಿನಲ್ಲಿ ನಡೆದ ಈ ಅಪರೂಪದ ಕಲಾಶಿಬಿರವು `ಪುಟಗಳಿಂದ ಪಟಕ್ಕೆ' ಇಳಿಸುವುದಕ್ಕಿಂತ ಹೆಚ್ಚಾಗಿ ಹೊಸ ಕಲಾಸಂಭ್ರಮಕ್ಕೆ ಮುನ್ನುಡಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ದೃಶ್ಯಕಲೆಯ ಹೊಸ ನೋಟಗಳಿಗೆ ಇಲ್ಲಿನ ಜನರು ತೆರೆದುಕೊಳ್ಳಲಿದ್ದಾರೆ. ಕಲಾವಿದರು, ಅಧಿಕಾರಿಗಳು, ಕಲಾಸಕ್ತರು ಒಂದುಗೂಡಿದರೆ ಏನೆಲ್ಲ ಸಾಧ್ಯವಿದೆ ಎಂಬುದನ್ನು ನಾಡಿಗೆ ಇದು ತೋರಿಸಿಕೊಡಲಿದೆ. ಹಾಗಾಗಲಿ ಎನ್ನುವುದೇ ಇಲ್ಲಿನ ಕಲಾಸಕ್ತರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT