ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಚಂದ್ ಅವರ ಕಥೆ: ಸದ್ಗತಿ

ಮೂಲ: ಪ್ರೇಮಚಂದ್ ಕನ್ನಡಕ್ಕೆ: ಡಿ.ಎನ್. ಶ್ರೀನಾಥ್
Published 6 ಜನವರಿ 2024, 23:32 IST
Last Updated 6 ಜನವರಿ 2024, 23:32 IST
ಅಕ್ಷರ ಗಾತ್ರ

ದುಃಖಿ ಮೋಚಿ ಬಾಗಿಲ ಬಳಿ ಗುಡಿಸುತ್ತಿದ್ದ. ಅವನ ಹೆಂಡತಿ ಝುರಿಯಾ ಮನೆಯನ್ನು ಸಗಣಿಯಿಂದ ಸಾರಿಸುತ್ತಿದ್ದಳು. ಇಬ್ಬರೂ ತಮ್ಮ-ತಮ್ಮ ಕೆಲಸಗಳಿಂದ ಬಿಡುವು ಪಡೆದಾಗ ಝುರಿಯಾ ಹೇಳಿದಳು –‘ಪಂಡಿತರಿಗೆ ಹೋಗಿ ಹೇಳಬಾರದೇ? ಅವರೆಲ್ಲಿಗಾದರೂ ಹೋದ್ರೆ?’

ದುಃಖಿ –‘ಹೂಂ, ಹೋಗ್ತೀನಿ, ಆದ್ರೆ ಅವ್ರು ಯಾವುದರ ಮೇಲೆ ಕೂರುವುದು ಎಂದು ಯೋಚಿಸು.’

ಝುರಿಯಾ –‘ಎಲ್ಲಾದ್ರೂ ಒಂದು ಸಣ್ಣ ಮಂಚ ಸಿಗಲ್ವ? ಒಡತಿಯಿಂದ ಬೇಡಿ ತಗೊಂಡ್ ಬಾ.’

ದುಃಖಿ –‘ನೀನು ಆಗಾಗ, ದೇಹವೇ ಸುಟ್ಟು ಹೋಗುವಂಥ ಮಾತಾಡ್ತೀಯಾ. ಠಾಕುರರು ನನಗೆ ಮಂಚ ಕೊಡ್ತಾರಾ! ಅವರ ಮನೆಯ ಹೊರ್ಗೆ ಹೊಗೆ ಸಹ ಬರಲ್ಲ, ಇನ್ನ ಮಂಚ ಕೊಡ್ತಾರಾ! ಮನೆಗೆ ಹೋಗಿ ಒಂದ್ ಲೋಟಾ ನೀರು ಕೇಳಿದ್ರೆ ಸಿಗಲ್ಲ, ಇನ್ನು ಮಂಚ ಯಾರು ಕೊಡ್ತಾರೆ! ಮನಸ್ಸಿಗೆ ಇಷ್ಟವಾದದ್ದನ್ನು ತಗೊಂಡು ಹೋಗಲು ಅದು ನಮ್ಮ ಬೆರಣಿ, ಬೂಸಾ, ಗಲಗು, ಸೌದೆ ಅಲ್ಲ. ನಮ್ಮ ಮಂಚವನ್ನೇ ತೊಳೆದಿಡೋಣ. ಹೇಗೂ ಬೇಸಿಗೆ ದಿನಗಳು. ಅವರು ಬರುವಷ್ಟರಲ್ಲಿ ಒಣಗಿರುತ್ತೆ.’

ಝುರಿಯಾ –‘ಅವರು ನಮ್ಮ ಮಂಚದಲ್ಲಿ ಕೂರಲ್ಲ. ಅವರು ಆಚಾರವಂತರು, ನೇಮ-ನಿಷ್ಠೆಯಿಂದ ಇರೋರು ಅನ್ನೋದು ಗೊತ್ತಿದೆಯಲ್ಲ?’

ದುಃಖಿ ವ್ಯಗ್ರನಾಗಿ ಹೇಳಿದ –‘ಹೂಂ, ಇದು ಸರಿಯೇ. ಹಿಪ್ಪೆ ಮರದ ಎಲೆ ಮುರಿದು ಒಂದು ಊಟದೆಲೆ ಮಾಡ್ತೀನಿ, ಆಗ ಸರಿಯಾಗುತ್ತೆ. ಎಲೆಯಲ್ಲಿ ದೊಡ್ಡ-ದೊಡ್ಡ ಮನುಷ್ಯರು ಊಟ ಮಾಡ್ತಾರೆ. ಅದು ಪವಿತ್ರ. ಕೋಲು ಕೊಡು, ಎಲೆಗಳನ್ನು ಕೀಳ್ತೀನಿ.

ಝುರಿಯಾ –‘ಎಲೆ ನಾನು ಮಾಡ್ತೀನಿ, ನೀನು ಹೋಗು. ಅವರಿಗೆ ಆಹಾರ ಪದಾರ್ಥಗಳನ್ನೂ ಕೊಡ್ಬೇಕಾಗುತ್ತೆ. ನನ್ನ ತಟ್ಟೇಲಿ ಇಡ್ಲಾ?’

ದುಃಖಿ –‘ಇಂಥ ವಿಚಿತ್ರ ಕೆಲ್ಸ ಮಾಡ್ಬೇಡ, ಆಹಾರ ಪದಾರ್ಥಗಳೂ ಹೋಗುತ್ತೆ, ತಟ್ಟೇನೂ ಒಡೆದು ಹೋಗುತ್ತೆ! ಪಂಡಿತರು ತಟ್ಟೆ ಎತ್ತಿ ನೆಲಕ್ಕೆ ಒಗೀತಾರೆ. ಅವ್ರಿಗೆ ಬೇಗ ಸಿಟ್ಟು ಬರುತ್ತೆ. ಸಿಟ್ಟು ಬಂದಾಗ ತಮ್ಮ ಹೆಂಡ್ತಿಯನ್ನೂ ಬಿಡಲ್ಲ. ಮಗನಿಗೆ ಹೊಡೆದಿದ್ದರು, ಅವನು ಮುರಿದ ಕೈಯಲ್ಲೇ ಓಡಾಡ್ತಾನೆ. ಎಲೆಯಲ್ಲಿ ಆಹಾರ ಪದಾರ್ಥಗಳನ್ನೂ ಕೊಡು, ತಿಳೀತಾ? ನಾಣ್ಯವನ್ನು ನೀವು ಮುಟ್ಟಲೂ ಬೇಡಿ. ಭೂರಿ ಗೋಂಡನ [ಗೋಂಡ್=ಮಧ್ಯಪ್ರದೇಶದ ಒಂದು ಜಾತಿ] ಮಗಳನ್ನು ಕರ್ಕೊಂಡ್ ಹೋಗಿ ಸಾಹುಕಾರರ ಅಂಗಡಿಯಿಂದ ಎಲ್ಲಾ ವಸ್ತುಗಳನ್ನು ತಗೊಂಡ್ ಬಾ. ಆಹಾರ ಪದಾರ್ಥ ಸಾಕಷ್ಟಿರಲಿ. ಒಂದು ಸೇರು ಹಿಟ್ಟು, ಅರ್ಧ ಸೇರು ಅಕ್ಕಿ, ಒಂದು ಪಾವು ಬೇಳೆ, ಅರ್ಧ ಪಾವು ತುಪ್ಪ, ಉಪ್ಪು, ಅರಿಶಿನ ಮತ್ತು ಎಲೆಯ ತುದಿಯಲ್ಲಿ ನಾಲ್ಕಾಣೆ ಇಡು. ಗೋಂಡನ ಮಗಳು ಸಿಗದಿದ್ರೆ ಭುರ್ಜಿನ್‍ನ ಕಾಲಿಗೆ ಬಿದ್ದು ಅವನನ್ನು ಕರ್ಕೊಂಡ್ ಹೋಗು. ನೀನೇನೂ ಮುಟ್ಬೇಡ, ಮುಟ್ಟಿದ್ರೆ ಅನರ್ಥವಾಗುತ್ತೆ.’

ಎಲ್ಲವನ್ನೂ ಒಪ್ಪಿಕೊಂಡ ದುಃಖಿ ಸೌದೆ ಮತ್ತು ಅದರೊಂದಿಗೆ ಹುಲ್ಲಿನ ಒಂದು ದೊಡ್ಡ ಹೊರೆಯನ್ನು ಹೊತ್ತು ಪಂಡಿತರಲ್ಲಿ ಅರಿಕೆ ಮಾಡಿಕೊಳ್ಳಲು ಹೋದ. ಬರಿಗೈಯಲ್ಲಿ ಪಂಡಿತರ ಬಳಿಗೆ ಹೋಗಲು ಸಾಧ್ಯವೇ? ಕಾಣಿಕೆ ಕೊಡಲು ಅವನ ಬಳಿ ಹುಲ್ಲನ್ನು ಹೊರತುಪಡಿಸಿ ಬೇರೇನಿತ್ತು? ದುಃಖಿ ಬರಿಗೈಯಲ್ಲಿ ಬಂದಿರುವುದನ್ನು ನೋಡಿದರೆ ಪಂಡಿತರು ಅವನಿಗೆ ದೂರದಿಂದಲೇ ಹಿಂದಕ್ಕೆ ಹೋಗಲು ಸಂಜ್ಞೆ ಮಾಡುತ್ತಿದ್ದರು.

-2-

ಪಂಡಿತ್ ಘಾಸೀರಾಮ್ ದೇವರ ಪರಮ ಭಕ್ತರಾಗಿದ್ದರು. ಅವರು ನಿದ್ರೆಯಿಂದ ಎಚ್ಚೆತ್ತ ಕೂಡಲೇ ದೇವರ ಉಪಾಸನೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಕೈ-ಬಾಯಿ ತೊಳೆಯುವಲ್ಲಿ ಎಂಟು ಗಂಟೆಯಾಗುತ್ತಿತ್ತು, ನಂತರ ಅಸಲು ಪೂಜೆ ಆರಂಭವಾಗುತ್ತಿತ್ತು; ಇದರ ಮೊದಲ ಭಾಗವೆಂದರೆ ಭಂಗಿ ತಯಾರಿಸುವುದು. ನಂತರ ಅರ್ಧ ಗಂಟೆ ಗಂಧ ತಿಕ್ಕಿಕೊಳ್ಳುತ್ತಿದ್ದರು, ನಂತರ ಕನ್ನಡಿಯೆದುರು ನಿಂತು ಒಂದು ಹುಲ್ಲಿನಿಂದ ಹಣೆಗೆ ತಿಲಕವಿಟ್ಟುಕೊಳ್ಳುತ್ತಿದ್ದರು. ಗಂಧದ ಎರಡು ರೇಖೆಗಳ ನಡುವೆ ಶ್ರೀಚೂರ್ಣದ ಬೊಟ್ಟು ಇರುತ್ತಿತ್ತು. ನಂತರ ಎದೆ ಮತ್ತು ಭುಜಗಳ ಮೇಲೆ ಗೋಳಾಕಾರದ ಮುದ್ರೆಗಳನ್ನು ಒತ್ತಿಕೊಳ್ಳುತ್ತಿದ್ದರು. ನಂತರ ದೇವರ ವಿಗ್ರಹವನ್ನು ತೆಗೆದು ಅದಕ್ಕೆ ಸ್ನಾನ ಮಾಡಿಸುತ್ತಿದ್ದರು, ಗಂಧ ಹಚ್ಚುತ್ತಿದ್ದರು, ಆರತಿ ಎತ್ತುತ್ತಿದ್ದರು, ಗಂಟೆ ಹೊಡೆಯುತ್ತಿದ್ದರು. ಹತ್ತು ಗಂಟೆಗೆ ಪೂಜೆಯನ್ನು ಮುಗಿಸಿ ಭಂಗಿ ಸೇವಿಸಿ ಹೊರ ಬರುತ್ತಿದ್ದರು. ಅಷ್ಟು ಹೊತ್ತಿಗೆ ಮೂರ್ನಾಲ್ಕು ಜನ ಗ್ರಾಹಕರು ಬರುತ್ತಿದ್ದರು! ದೇವರ ಪೂಜೆಗೆ ತತ್ಕಾಲದಲ್ಲಿ ಫಲ ಲಭಿಸುತ್ತಿತ್ತು. ಇದೇ ಅವರ ಉದ್ಯೋಗವಾಗಿತ್ತು.

ಇಂದು ಅವರು ಪೂಜಾ-ಗೃಹದಿಂದ ಹೊರ ಬಂದಾಗ ಮೋಚಿ ದುಃಖಿ ಹುಲ್ಲಿನ ಹೊರೆಯೊಂದಿಗೆ ಕೂತಿರುವುದನ್ನು ನೋಡಿದರು. ದುಃಖಿ ಅವರನ್ನು ನೋಡಿದೊಡನೆಯೇ ಎದ್ದು ನಿಂತು ಸಾಷ್ಟಾಂಗ ನಮಸ್ಕಾರ ಮಾಡಿ ಕೈ ಕಟ್ಟಿ ನಿಂತ. ಆ ತೇಜಸ್ವಿ ಮುಖವನ್ನು ನೋಡಿ ಅವನ ಹೃದಯ ಶ್ರದ್ಧೆಯಿಂದ ತುಂಬಿತು. ಎಂಥ ದಿವ್ಯ ಮೂರ್ತಿ! ಚಿಕ್ಕ ಗೋಳಾಕಾರದ ಮನುಷ್ಯ, ನುಣುಪು ತಲೆ, ಉಬ್ಬಿದ ಗಲ್ಲಗಳು, ಬ್ರಹ್ಮತೇಜಸ್ಸಿನಿಂದ ಹೊಳೆಯುವ ಕಣ್ಣುಗಳು! ಶ್ರೀಚೂರ್ಣ ಮತ್ತು ಗಂಧ ದೇವರುಗಳ ಪ್ರಭೆಯನ್ನು ಕರುಣಿಸುತ್ತಿದ್ದವು. ಅವರು ದುಃಖಿಯನ್ನು ನೋಡಿ ತಮ್ಮ ಶ್ರೀಮುಖದಿಂದ ಹೇಳಿದರು –‘ದುಃಖಿಯಾ, ಏಕೆ ಬಂದೆ?’

ದುಃಖಿ ತಲೆ ತಗ್ಗಿಸಿ ಹೇಳಿದ –‘ಬುದ್ಧಿ, ಮಗಳ ಮದ್ವೆ ಮಾಡ್ತಿದ್ದೇನೆ. ಮುಹೂರ್ತ ನೋಡ್ಬೇಕಿತ್ತು. ಯಾವಾಗ ಬರ್ಲಿ?’
ಘಾಸೀರಾಮ್ –‘ಇವತ್ತು ನನಗೆ ಬಿಡುವಿಲ್ಲ. ಹಾಂ, ಸಂಜೆಗೆ ಬರ್ತೀನಿ.’

ದುಃಖಿ –‘ಇಲ್ಲ ಬುದ್ಧಿ, ಬೇಗ ಮುಹೂರ್ತ ಇಟ್ಕೊಡಿ. ಎಲ್ಲಾ ವಸ್ತುಗಳನ್ನು ಜೋಡಿಸಿಟ್ಟು ಬಂದಿದ್ದೇನೆ. ಈ ಹುಲ್ಲಿನ ಹೊರೆಯನ್ನು ಎಲ್ಲಿಡಲಿ?’

ಘಾಸೀರಾಮ್ –‘ಅದನ್ನು ಹಸುವಿನೆದುರು ಹಾಕು. ಕಸಪರಿಕೆ ಹಿಡಿದು ಬಾಗಿಲನ್ನು ಸ್ವಲ್ಪ ಸ್ವಚ್ಛ ಮಾಡು. ಈ ಜಗಲಿಯನ್ನು ಸಾರಿಸದೆ ತುಂಬಾ ದಿನಗಳಾಗಿದೆ. ಇದನ್ನೂ ಸಗಣಿಯಿಂದ ಸಾರಿಸು. ಅಷ್ಟರಲ್ಲಿ ನಾನು ಊಟ ಮಾಡ್ತೀನಿ. ಆಮೇಲೆ ಸ್ವಲ್ಪ ವಿಶ್ರಾಂತಿ ಪಡೆದು ಹೋಗ್ತೀನಿ. ಹಾಂ, ಈ ಸೌದೆಯನ್ನೂ ಸೀಳಿ ಹಾಕು. ಕಣಜದಲ್ಲಿ ನಾಲ್ಕು ಬುಟ್ಟಿ ಬೂಸಾ ಬಿದ್ದಿದೆ. ಅದನ್ನೂ ತಗೊಂಡ್ ಬಂದು ಕೊಟ್ಟಿಗೆಯಲ್ಲಿಡು.’

ದುಃಖಿ ಕೂಡಲೇ ಆದೇಶವನ್ನು ಪಾಲಿಸಲು ತತ್ಪರನಾದ. ಬಾಗಿಲ ಬಳಿ ಗುಡಿಸಿ ಸ್ವಚ್ಛ ಮಾಡಿದ, ಜಗಲಿಯನ್ನು ಸಗಣಿಯಿಂದ ಸಾರಿಸಿದ. ಅಷ್ಟರಲ್ಲಿ ಹನ್ನೆರಡು ಗಂಟೆಯಾಯಿತು. ಪಂಡಿತ ಘಾಸೀರಾಮರು ಊಟ ಮಾಡಲು ಹೋದರು. ದುಃಖಿ ಬೆಳಿಗ್ಗೆಯಿಂದ ಹಸಿದಿದ್ದ. ಅವನಿಗೂ ಹಸಿವೆಯಾಗುತ್ತಿತ್ತು; ಆದರೆ ಅಲ್ಲಿ ತಿನ್ನಲು ಏನಿತ್ತು? ಅಲ್ಲಿಂದ ಮನೆ ಮೈಲಿ ದೂರದಲ್ಲಿತ್ತು. ಅಲ್ಲಿಗೆ ಊಟಕ್ಕೆ ಹೋದರೆ ಪಂಡಿತರು ರೇಗುತ್ತಾರೆ. ಬಡಪಾಯಿ ಹಸಿವೆಯನ್ನು ಹತ್ತಿಕ್ಕಿಕೊಂಡು ಸೌದೆಯನ್ನು ಸೀಳಲಾರಂಭಿಸಿದ. ಸೌದೆಯ ಮೇಲೆ ದಪ್ಪ ಗಂಟಿತ್ತು, ಅದರ ಮೇಲೆ ಈ ಮೊದಲೇ ಅನೇಕ ಭಕ್ತರು ತಮ್ಮ ಶಕ್ತಿಯನ್ನು ಪರೀಕ್ಷಿಸಿದ್ದರು. ಆದರೆ ಅದು ಮಿಸುಕಾಡಿರಲಿಲ್ಲ. ದುಃಖಿ ಹುಲ್ಲು ಕೊಯ್ದು ಪೇಟೆಗೊಯ್ಯುತ್ತಿದ್ದ. ಸೌದೆ ಸೀಳುವ ಅಭ್ಯಾಸ ಅವನಿಗಿರಲಿಲ್ಲ. ಹುಲ್ಲು ಅವನ ಗುದ್ದಲಿ ಎದುರು ತಲೆ ಬಾಗುತ್ತಿತ್ತು. ಇಲ್ಲಿ ಶಕ್ತಿಮೀರಿ ಕೊಡಲಿಯಿಂದ ಪ್ರಹಾರವೆಸಗುತ್ತಿದ್ದ; ಆದರೆ ಆ ಗಂಟಿನ ಮೇಲೆ ಹೊಡೆತವೇ ಬೀಳುತ್ತಿರಲಿಲ್ಲ. ಕೊಡಲಿ ಹೊರಳುತ್ತಿತ್ತು. ದುಃಖಿ ಬೆವರಿನಿಂದ ಒದ್ದೆಯಾಗಿದ್ದ, ಏದುಸಿರು ಬಿಡುತ್ತಿದ್ದ, ದಣಿದು ಅಲ್ಲಿಯೇ ಕೂರುತ್ತಿದ್ದ, ನಂತರ ಮತ್ತೆ ಎದ್ದು ಸೌದೆ ಸೀಳಲು ಆರಂಭಿಸುತ್ತಿದ್ದ. ಕೈ ಮೇಲೆತ್ತಲು ಆಗುತ್ತಿರಲಿಲ್ಲ, ಕಾಲುಗಳು ಕಂಪಿಸುತ್ತಿದ್ದವು, ಸೊಂಟ ನೇರವಾಗುತ್ತಿರಲಿಲ್ಲ. ಕಣ್ಣುಗಳಿಗೆ ಕತ್ತಲೆ ಕವಿಯುತ್ತಿತ್ತು. ತಲೆ ಸುತ್ತುತ್ತಿತ್ತು. ಆದರೂ ಸೌದೆ ಕಡಿಯುವುದನ್ನು ಮುಂದುವರೆಸುತ್ತಿದ್ದ. ಒಂದು ವೇಳೆ ಹುಕ್ಕಾದಲ್ಲಿ ಒಂದು ಧಮ್ ಎಳೆದಿದ್ದರೆ ಸ್ವಲ್ಪ ಶಕ್ತಿ ಬರುತ್ತಿತ್ತು. ಆದರೆ ಇಲ್ಲಿ ತಂಬಾಕು ಮತ್ತು ಹುಕ್ಕಾ ಎಲ್ಲಿ ಸಿಗುತ್ತೆ ಎಂದು ಯೋಚಿಸಿದ. ಬ್ರಾಹ್ಮಣರು ನೀಚ ಜಾತಿಯವರಾದ ನಮ್ಮಂತೆ ತಂಬಾಕು ಸೇದಲ್ಲ. ಇದ್ದಕ್ಕಿದ್ದಂತೆ ಅವನಿಗೆ ಹಳ್ಳಿಯಲ್ಲಿ ಒಬ್ಬ ಗೋಂಡಾ ಜಾತಿಯವನು ಇರುವುದು ನೆನಪಾಯಿತು. ಅವನ ಮನೆಯಲ್ಲಿ ಅವಶ್ಯವಾಗಿ ತಂಬಾಕು-ಹುಕ್ಕಾ ಇರುತ್ತದೆ. ದುಃಖಿ ಕೂಡಲೇ ಅವನ ಮನೆಗೆ ಓಡಿದ. ಸದ್ಯ, ಶ್ರಮ ಸಾರ್ಥಕವಾಯಿತು. ಅವನು ತಂಬಾಕು ಮತ್ತು ಹುಕ್ಕಾ ಸಹ ಕೊಟ್ಟ. ಆದರೆ ಅಲ್ಲಿ ಬೆಂಕಿ ಇರಲಿಲ್ಲ. ದುಃಖಿ ಹೇಳಿದ –‘ಬೆಂಕಿಗೆ ಯೋಚ್ನೆ ಮಾಡ್ಬೇಡ, ನಾನು ಹೋಗಿ ಪಂಡಿತರ ಮನೆಯಿಂದ ಬೆಂಕಿ ಬೇಡಿ ತರ್ತೀನಿ. ಅಲ್ಲಿ ಈಗ ಅಡುಗೆಯಾಗ್ತಿತ್ತು.’‌‌

ಹೀಗೆಂದು ಅವನು ಹುಕ್ಕಾ ಮತ್ತು ತಂಬಾಕು ತೆಗೆದುಕೊಂಡು ಹೊರಟ; ಪಂಡಿತರ ಬಾಗಿಲ ಬಳಿ ನಿಂತು ಹೇಳಿದ –‘ಬುದ್ಧಿ, ಸ್ವಲ್ಪ ಬೆಂಕಿ ಸಿಕ್ರೆ ಹುಕ್ಕಾ ಸೇದ್ತೀನಿ.’

ಪಂಡಿತರು ಊಟ ಮಾಡುತ್ತಿದ್ದರು. ಪಂಡಿತರ ಪತ್ನಿ ಕೇಳಿದಳು –‘ಇವನ್ಯಾರು ಬೆಂಕಿ ಕೇಳ್ತಿರೋದು?’
ಪಂಡಿತರು –‘ಅವ್ನೇ ಮೋಚಿ ದುಃಖಿಯಾ. ಸ್ವಲ್ಪ ಸೌದೆ ಸೀಳೋದಕ್ಕೆ ಹೇಳಿದ್ದೇನೆ. ಬೆಂಕಿ ಇದೆಯಲ್ಲ, ಕೊಡು.’
ಪಂಡಿತರ ಪತ್ನಿ ಹುಬ್ಬು ಗಂಟಿಕ್ಕಿ ಹೇಳಿದಳು –‘ನೀವು ಪಂಚಾಂಗದ ಬಗ್ಗೆಯೇ ಚಿಂತೆ ಮಾಡ್ತೀರ; ಈ ಮಧ್ಯೆ
ನಿಮಗೆ ಧರ್ಮ-ಕರ್ಮದ ಯೋಚ್ನೆಯೇ ಇರಲ್ಲ. ಮೋಚಿ, ಧೋಬಿ, ಬೇಡ ಎಲ್ಲರೂ ನಮ್ಮ ಮನೆಗೆ ಬಂದು ಬಿಡ್ತಾರೆ. ಇದು ಹಿಂದೂಗಳ ಮನೆಯಾಗದೆ ಛತ್ರ ಆಗಿದೆ. ಅವನಿಗೆ ಸುಮ್ನೆ ಹೋಗಲು ಹೇಳಿ, ಇಲ್ದಿದ್ರೆ ಈ ಕೊಳ್ಳಿಯಿಂದ ಮುಖ ಸುಟ್ ಬಿಡ್ತೀನಿ. ಬೆಂಕಿ ಕೇಳಲು ಬಂದಿದ್ದಾನೆ!’

ಪಂಡಿತರು ತಮ್ಮ ಪತ್ನಿಗೆ ತಿಳಿ ಹೇಳಿದರು –‘ಒಳಗೆ ಬಂದ್ರೆ ಏನಾಯ್ತು, ನಿನ್ನ ಯಾವ ವಸ್ತುವನ್ನೂ ಮುಟ್ಟಲಿಲ್ಲ. ಭೂಮಿ ಪವಿತ್ರ. ಸ್ವಲ್ಪ ಬೆಂಕಿಯನ್ನೇಕೆ ಕೊಡಲ್ಲ, ಅವ್ನು ನಮ್ಮ ಮನೆ ಕೆಲ್ಸಾನೇ ಮಾಡ್ತಿದ್ದಾನೆ. ಲೋನಿಯಾ [ಉಪ್ಪು ತಯಾರಿಸುವ ಮತ್ತು ಮಾರುವ ಒಂದು ಜಾತಿ] ಇದೇ ಸೌದೆ ಸೀಳಲು ಕಡೇ ಪಕ್ಷ ನಾಲ್ಕಾಣೆ ತಗೋತಿದ್ದ.’
ಪಂಡಿತರ ಪತ್ನಿ ಗದರಿದಳು –‘ಅವನೇಕೆ ಮನೆಯೊಳಗೆ ಬಂದ!’

ಪಂಡಿತರು ಸೋತು ಹೇಳಿದರು –‘ಪಾಪಿಯ ಅದೃಷ್ಟ ಚೆನ್ನಾಗಿಲ್ಲ, ಅದ್ಕೇ ಬಂದ!’

ಪಂಡಿತರ ಪತ್ನಿ –‘ಸರಿ, ಈಗಂತೂ ಬೆಂಕಿ ಕೊಡ್ತೀನಿ, ಆದ್ರೆ ಮತ್ತೆ ಯಾರಾದ್ರು ಬಂದ್ರೆ ಅವನ ಮುಖ ಸುಡ್ತೀನಿ.’
ದುಃಖಿಯನ ಕಿವಿಗಳಿಗೆ ಈ ಮಾತುಗಳು ಮಂದವಾಗಿ ಕೇಳಿಸುತ್ತಿದ್ದವು. ವ್ಯರ್ಥವಾಗಿ ಬಂದೆ ಎಂದು ಪಶ್ಚಾತ್ತಾಪ ಪಡುತ್ತಿದ್ದ. ಪಂಡಿತರ ಪತ್ನಿ ನಿಜ ಹೇಳ್ತಿದ್ದಾರೆ, ಪಂಡಿತರ ಮನೆಯೊಳಗೆ ಮೋಚಿ ಬರಲು ಹೇಗೆ ಸಾಧ್ಯ? ಈ ಜನ ತುಂಬಾ ಪವಿತ್ರರಾಗಿರ್ತಾರೆ, ಅದ್ಕೇ ಇಡೀ ಜಗತ್ತು ಇವರನ್ನು ಪೂಜಿಸುತ್ತೆ, ಇಷ್ಟು ಮಾನ-ಮರ್ಯಾದೆ ಸಿಗುತ್ತೆ. ಇವರೇನು ಮೋಚಿ ಜನರಲ್ಲ. ನಾನು ಇದೇ ಹಳ್ಳಿಯಲ್ಲಿ ಮುದುಕನಾದೆ, ಆದ್ರೆ ಇದನ್ನು ಯೋಚಿಸುವಷ್ಟು ಸಹ ನನಗೆ ಬುದ್ಧಿ ಬರಲಿಲ್ಲ ಎಂದು ದುಃಖಿ ದುಃಖಪಡುತ್ತಿದ್ದ.

ಪಂಡಿತರ ಪತ್ನಿ ಬೆಂಕಿಯೊಂದಿಗೆ ಬಂದಾಗ, ಅವನಿಗೆ ಸ್ವರ್ಗವೇ ಸಿಕ್ಕಿದಂತಾಯಿತು. ಅವನು ಎರಡೂ ಕೈಗಳನ್ನು ಮುಗಿದು ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಹೇಳಿದ –‘ಅಮ್ಮಾ, ಮನೆಯೊಳಗೆ ಬಂದಿದ್ದು ತಪ್ಪಾಯ್ತು. ನಾನೆಷ್ಟಾದ್ರು ಮೋಚಿ, ನನಗೆ ಬುದ್ಧಿಯಿಲ್ಲ. ನಾವಿಷ್ಟು ಮೂರ್ಖರಾಗಿರದಿದ್ದರೆ, ಒದೆ ಏಕೆ ತಿನ್ತಿದ್ವಿ?’ ಪಂಡಿತರ ಪತ್ನಿ ಬೆಂಕಿಯನ್ನು ಚಿಮಟದಲ್ಲಿ ಹಿಡಿದು ತಂದಿದ್ದಳು. ಅವಳು ಐದು ಕೈ ದೂರದಿಂದ, ತಲೆಗೆ ಸೀರೆಯ ಸೆರಗನ್ನು ಹೊದ್ದು ದುಃಖಿಯೆಡೆಗೆ ಬೆಂಕಿಯ ತುಂಡನ್ನು ಎಸೆದಳು. ಅದು ಅವನ ತಲೆಗೆ ಬಿತ್ತು. ಅವನು ಕೂಡಲೇ ಹಿಂದಕ್ಕೆ ಸರಿದು ತಲೆ ಕೊಡವಿಕೊಂಡು ಮನಸ್ಸಿನಲ್ಲಿ ಹೇಳಿಕೊಂಡ, ‘ಇದು ಪವಿತ್ರ ಬ್ರಾಹ್ಮಣರ ಮನೆಯನ್ನು ಅಪವಿತ್ರ ಗೊಳಿಸಿದ್ದಕ್ಕೆ ಸಿಕ್ಕ ಫಲ. ದೇವರು ಎಷ್ಟು ಬೇಗ ಶಿಕ್ಷೆಯನ್ನು ಕೊಟ್ಟ! ಅದಕ್ಕೇ ಜಗತ್ತು ಪಂಡಿತರಿಗೆ ಹೆದರುತ್ತೆ. ಎಲ್ಲರ ಹಣವನ್ನು ಕೊಳ್ಳೆ ಹೊಡೆಯಲಾಗುತ್ತದೆ, ಅದರೆ ಬ್ರಾಹ್ಮಣರ ಹಣವನ್ನು ಯಾರೂ ಕೊಳ್ಳೆ ಹೊಡೆಯಲ್ಲ! ಕೊಳ್ಳೆ ಹೊಡೆಯುವವರ ಮನೆಯೇ ನಾಶವಾಗುತ್ತೆ, ಅವರ ಕಾಲುಗಳು ಮುರಿದು ಹೋಗ್ತವೆ.’

ದುಃಖಿ ಹೊರಗೆ ಬಂದು ಹುಕ್ಕಾ ಸೇದಿದ. ನಂತರ ಕೊಡಲಿ ಹಿಡಿದು ಸೌದೆ ಸೀಳಲಾರಂಭಿಸಿದ. ಕಡಿಯುವ ಸದ್ದು ಕೇಳಿ ಬರಲಾರಂಭಿಸಿತು.

ದುಃಖಿಯ ತಲೆಯ ಮೇಲೆ ಬೆಂಕಿ ಬಿದ್ದದ್ದರಿಂದಾಗಿ ಪಂಡಿತರ ಪತ್ನಿಗೆ ಅವನ ಮೇಲೆ ಕರುಣೆ ಮೂಡಿತು. ಪಂಡಿತರು ಊಟ ಮುಗಿಸಿದ ನಂತರ ಹೇಳಿದಳು –‘ಈ ಮೋಚಿಗೂ ತಿನ್ನಲು ಏನಾದರು ಕೊಡಿ. ಪಾಪ, ತುಂಬಾ ಹೊತ್ನಿಂದ ಕೆಲ್ಸ ಮಾಡ್ತಿದ್ದಾನೆ, ಹಸಿದಿರಬೇಕು.’
ಪಂಡಿತರು ಈ ಪ್ರಸ್ತಾವವನ್ನು ವ್ಯಾವಹಾರಿಕತೆಯಿಂದ ಪ್ರತ್ಯೇಕವಾಗಿ ಗಮನಿಸಿ ಕೇಳಿದರು –‘ರೊಟ್ಟಿಗಳಿವೆಯೇ?’
ಪಂಡಿತರ ಪತ್ನಿ –‘ಮೂರ್ನಾಲ್ಕು ಉಳಿಯಬಹುದು.’

ಪಂಡಿತರು –‘ಮೂರ್ನಾಲ್ಕು ರೊಟ್ಟಿಗಳು ಸಾಕಾಗಲ್ಲ. ಅವ್ನು ಮೋಚಿ, ಕಡೇ ಪಕ್ಷ ಒಂದು ಸೇರು ಹಿಟ್ಟಿನ ರೊಟ್ಟಿಯಾದ್ರೂ ಬೇಕಾಗುತ್ತೆ.’

ಪಂಡಿತರ ಪತ್ನಿ ಕಿವಿಗಳ ಮೇಲೆ ಕೈಯಿಟ್ಟುಕೊಂಡು ಹೇಳಿದಳು –‘ಅಯ್ಯಪ್ಪಾ! ಒಂದ್ ಸೇರು ಹಿಟ್ಟು! ಹಾಗಾದ್ರೆ ಬೇಡ ಬಿಡಿ.’

ಪಂಡಿತರು ಈಗ ರೇಗಿದರು –‘ನುಚ್ಚು-ಗಿಚ್ಚು ಇದ್ರೆ ಹಿಟ್ಟಿಗೆ ಸೇರಿಸಿ ಒಂದೆರಡು ಜಾಸ್ತಿ ರೊಟ್ಟಿ ಮಾಡಿ ಕೊಡು. ತೆಳು ರೊಟ್ಟಿಗಳಿಂದ ಈ ನೀಚರ ಹೊಟ್ಟೆ ತುಂಬಲ್ಲ. ಇವ್ರಿಗೆ ಕೆಂಡದಲ್ಲಿ ಸುಟ್ಟ ದಪ್ಪ ರೊಟ್ಟಿ ಬೇಕು.’

ಪಂಡಿತರ ಪತ್ನಿ ಹೇಳಿದಳು –‘ಹೋಗ್ಲಿ ಬಿಡಿ, ಈ ಬಿಸಿಲಲ್ಲಿ ಯಾರು ಮಾಡಿ ಸಾಯ್ತಾರೆ!’

-3-

ದುಃಖಿ ಹುಕ್ಕಾ ಸೇದಿ ಮತ್ತೆ ಕೊಡಲಿ ಹಿಡಿದ. ಧಮ್ ಎಳೆದಿದ್ದರಿಂದ ಕೈಗಳಿಗೆ ಸ್ವಲ್ಪ ಶಕ್ತಿ ಬಂದಿತ್ತು. ಅವನು ಸುಮಾರು ಅರ್ಧ ಗಂಟೆ ಕೊಡಲಿಯಿಂದ ಸೌದೆಯ ಗಂಟು ಸೀಳಲು ಪ್ರಯತ್ನಿಸಿದ. ನಂತರ ಸುಸ್ತಾಗಿ ಅಲ್ಲಿಯೇ ತಲೆ ಹಿಡಿದು ಕೂತ.

ಅಷ್ಟರಲ್ಲಿ ಅದೇ ಗೋಂಡ ಬಂದು ಹೇಳಿದ –‘ಅಣ್ಣಾ, ನಿನ್ನಿಂದ ಇದಾಗದು, ಸುಮ್ನೆ ವ್ಯರ್ಥವಾಗಿ ಕಡೀತಿದ್ದೀಯ.’
ದುಃಖಿ ಹಣೆಯ ಬೆವರನ್ನು ಒರೆಸಿಕೊಂಡು ಹೇಳಿದ –‘ತಮ್ಮಾ, ಇನ್ನೂ ಬೂಸಾ ಹೊರೋದಿದೆ.’

ಗೋಂಡ –‘ತಿನ್ನೋದಕ್ಕೆ ಏನಾದ್ರು ಸಿಕ್ತಾ ಅಥ್ವಾ ಬರೇ ಕೆಲ್ಸ ಮಾಡಿಸ್ಕೋತಿದ್ದಾರಾ? ಹೋಗಿ ಏಕೆ ಕೇಳಲ್ಲ?’
ದುಃಖಿ –‘ಏಂಥ ಮಾತಾಡ್ತಿ ಚಿಖುರಿ, ಬ್ರಾಹ್ಮಣರ ರೊಟ್ಟಿ ನಮ್ಗೆ ಅರಗತ್ತಾ!’

ಗೋಂಡ -‘ಮೊದ್ಲು ತಿನ್ನೋದಕ್ಕೆ ಸಿಗಬೇಕಲ್ಲ, ಆಮೇಲಷ್ಟೇ ಅರಗೋದು. ಒಡೇರು ಮೀಸೆ ತಿರುವುತ್ತಾ ಊಟ ಮಾಡಿ, ನಿಶ್ಚಿಂತೆಯಿಂದ ಮಲಗಿದ್ರು. ನಿನಗೆ ಮಾತ್ರ ಸೌದೆ ಸೀಳಲು ಆಜ್ಞಾಪಿಸಿದ್ರು. ಜಮೀನ್ದಾರರು ಸಹ ತಿನ್ನಲು ಕೊಡ್ತಾರೆ. ಅಧಿಕಾರಿಗಳು ಸಹ ಬಿಟ್ಟಿ ಕೆಲ್ಸ ಮಾಡ್ಸಿಕೊಂಡ್ರೆ, ಏನಾದ್ರು ಮಜೂರಿ ಕೊಡ್ತಾರೆ. ಆದ್ರೆ ಪಂಡಿತರು ಅವರಿಗಿಂತ ದೊಡ್ಡವರಾದ್ರು, ಆದ್ರೂ ಇವರು ಧರ್ಮಾತ್ಮರು...’

ದುಃಖಿ –‘ತಮ್ಮಾ, ಮೆಲ್ಲಗೆ ಮಾತಾಡು. ಕೇಳಿದ್ರೆ ದೊಡ್ಡ ಕಷ್ಟವೇ ಎದುರಾಗುತ್ತೆ.’

ಹೀಗೆಂದು ದುಃಖಿ ಮತ್ತೆ ಸಂಭಾಳಿಸಿಕೊಂಡು ಕೊಡಲಿಯಿಂದ ಸೌದೆ ಗಂಟಿಗೆ ಹೊಡೆಯಲಾರಂಭಿಸಿದ. ಚಿಖುರಿಗೆ ಅವನ ಬಗ್ಗೆ ಕನಿಕರ ಮೂಡಿತು. ಅವನು ದುಃಖಿಯಿಂದ ಕೊಡಲಿ ಪಡೆದು, ಸುಮಾರು ಅರ್ಧ ಗಂಟೆ ಶಕ್ತಿ ಮೀರಿ ಸೌದೆ ಸೀಳಲು ಪ್ರಯತ್ನಿಸಿದ; ಆದರೆ ಗಂಟು ಬಗ್ಗಲಿಲ್ಲ. ನಂತರ ಅವನು ಕೊಡಲಿ ಎಸೆದು, ಹೋಗುವಾಗ ಹೇಳಿದ –‘ನಿನ್ನ ಪ್ರಾಣ ಹೋದ್ರೂ, ಈ ಸೌದೆಯನ್ನು ನೀನು ಸೀಳಲಾರೆ.’

ಪಂಡಿತರಿಗೆ ಈ ಸೌದೆ ಎಲ್ಲಿಂದ ಬಂತು? ಇದರ ಗಂಟನ್ನು ಏನು ಮಾಡಿದರೂ ಸೀಳಲಾಗುತ್ತಿಲ್ಲವಲ್ಲ? ನಾನು ಎಷ್ಟು ಹೊತ್ತು ಸೀಳಲಿ? ಈಗ ಮನೆಯಲ್ಲಿ ಮಾಡಲು ನೂರಾರು ಕೆಲಸಗಳಿವೆ. ಮದುವೆ ವಿಷಯ, ಒಂದಲ್ಲ ಒಂದು ವಸ್ತು ಕಡಿಮೆಯೇ ಇರುತ್ತೆ; ಆದ್ರೆ ಈ ಬಗ್ಗೆ ಇವರಿಗೇನು ಚಿಂತೆ? ಈಗ ಬೂಸಾ ಹೊರೋದೊಂದೇ ಬಾಕಿ. ಬುದ್ಧಿ, ಇವತ್ತು ಸೌದೆ ಸೀಳಲು ಆಗ್ಲಿಲ್ಲ, ನಾಳೆ ಬಂದು ಸೀಳ್ತೀನಿ ಅಂತ ಹೇಳ್ತೀನಿ ಎಂದು ದುಃಖಿ ತೀರ್ಮಾನಿಸಿದ.

ದುಃಖಿ ಬೂಸಾ ತುಂಬಿದ ಬುಟ್ಟಿಯನ್ನು ಹೊತ್ತ. ಕಣಜ ಅಲ್ಲಿಂದ ಎರಡು ಫರ್ಲಾಂಗ್‍ಗಿಂತ ಕಡಿಮೆಯಿರಲಿಲ್ಲ. ಒಂದು ವೇಳೆ ಬುಟ್ಟಿಯನ್ನು ಸಂಪೂರ್ಣವಾಗಿ ತುಂಬಿಸಿಕೊಂಡು ತಂದಿದ್ದರೆ ಕೆಲಸ ಬೇಗ ಮುಗಿಯುತ್ತಿತ್ತು; ಆದರೆ ನಂತರ ಬುಟ್ಟಿಯನ್ನು ಎತ್ತಲು ಸಹಾಯ ಮಾಡುವವರು ಯಾರು? ಅವನೇ ತುಂಬಿದ ಬುಟ್ಟಿ ಅವನಿಂದ ಎತ್ತಲಾಗುತ್ತಿರಲಿಲ್ಲ. ಹೀಗಾಗಿ ಸ್ವಲ್ಪ-ಸ್ವಲ್ಪ ಬೂಸಾ ತರುತ್ತಿದ್ದ. ಸುಮಾರು ನಾಲ್ಕು ಗಂಟೆಗೆ ಬೂಸಾ ಖಾಲಿಯಾಯಿತು. ಪಂಡಿತರಿಗೂ ಎಚ್ಚರವಾಯಿತು. ಅವರು ಕೈ-ಕಾಲು ತೊಳೆದು ವೀಳ್ಯ ತಿಂದು ಹೊರ ಬಂದರು. ಆಗ ದುಃಖಿ ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ನಿದ್ರಿಸುತ್ತಿದ್ದ! ಪಂಡಿತರು ಗಟ್ಟಿಯಾಗಿ ಹೇಳಿದರು –‘ಏಯ್ ದುಃಖಿಯಾ, ನೀನು ನಿದ್ದೆ ಮಾಡ್ತಿದ್ದೀಯಾ? ಸೌದೆ ಹಾಗೆಯೇ ಇದೆ. ಇಷ್ಟು ಹೊತ್ತು ಏನ್ ಮಾಡ್ತಿದ್ದೆ? ಮುಷ್ಟಿ ಬೂಸಾ ಹೊರಲು ಸಂಜೆ ಮಾಡಿಬಿಟ್ಟೆ. ಅಲ್ದೆ ನಿದ್ದೆ ಬೇರೆ ಮಾಡ್ತಿದ್ದೀಯ. ಕೊಡಲಿ ಹಿಡಿದು ಸೌದೆ ಸೀಳು. ನಿನ್ನಿಂದ ಅಲ್ಪ-ಸ್ವಲ್ಪ ಸೌದೆಯನ್ನೂ ಸೀಳಲು ಆಗಲ್ಲ. ಕಡೆಗೆ ಮುಹೂರ್ತ ಸಹ ಹಾಗೆಯೇ ಬರುತ್ತೆ, ನನ್ನನ್ನು ದೂಷಿಸಬೇಡ!’

ದುಃಖಿ ಮತ್ತೆ ಕೊಡಲಿ ಹಿಡಿದ. ಈ ಹಿಂದೆ ಯೋಚಿಸಿದ್ದ ವಿಷಯಗಳು ಮರೆತು ಹೋದವು. ಬೆನ್ನು ಹೊಟ್ಟೆಯಲ್ಲಿ ಹೂತು ಹೋಗುತ್ತಿತ್ತು, ಇಂದು ಬೆಳಿಗ್ಗೆ ನೀರನ್ನೂ ಕುಡಿದಿರಲಿಲ್ಲ. ಸಮಯವೇ ಸಿಗಲಿಲ್ಲ. ಏಳುವುದೇ ಕಷ್ಟವಾಗಿತ್ತು. ಮನಸ್ಸಿಗೆ ಧೈರ್ಯ ಹೇಳಿಕೊಂಡು ಎದ್ದ. ಪಂಡಿತರು ಸರಿಯಾದ ಮುಹೂರ್ತ ಇಟ್ಟುಕೊಡದಿದ್ದರೆ, ಸತ್ಯನಾಶವಾಗುವುದು. ಎಲ್ಲಾ ಮುಹೂರ್ತದ ಆಟವಾಗಿದೆ. ಬೇಕಾದವರಿಗೆ ಸರಿಯಾದ ಮುಹೂರ್ತ, ಬೇಡದವರಿಗೆ ಕೆಟ್ಟ ಮುಹೂರ್ತ. ಪಂಡಿತರು ಸೌದೆಯ ಬಳಿಗೆ ಬಂದು ನಿಂತು ದುಃಖಿಯನನ್ನು ಹುರಿದುಂಬಿಸಿದರು –‘ಹೂಂ, ಹೊಡಿ, ಇನ್ನೂ ಜೋರಾಗಿ ಹೊಡಿ. ಶಕ್ತಿ ಮೀರಿ ಹೊಡಿ...ಏಯ್, ಏನ್ ಹೊಡೀತಿದ್ದೀಯ? ನಿನ್ನ ಕೈಯಲ್ಲಿ ಧಮ್ ಇಲ್ವಾ? ಹೊಡಿ-ಹೊಡಿ, ನಿಂತೇಕೆ ಯೋಚ್ನೆ ಮಾಡ್ತಿದ್ದೀಯ, ಇನ್ನೇನು ಸೀಳಬಹುದು! ಆ ಬಿರುಕಿಗೇ ಹೊಡಿ!’
ದುಃಖಿ ಸೌದೆ ಸೀಳುವಲ್ಲಿ ಮೈಮರೆತಿದ್ದ. ಅದ್ಯಾವ ಗುಪ್ತ-ಶಕ್ತಿ ಅವನ ಕೈಗಳಲ್ಲಿ ಸೌದೆಯನ್ನು ಸೀಳಿಸುತ್ತಿತ್ತೋ! ಅವನ ದಣಿವು, ಆಯಾಸ, ಹಸಿವು, ನಿಶ್ಶಕ್ತಿ ಎಲ್ಲವೂ ಓಟಕಿತ್ತವು. ಅವನಿಗೆ ತನ್ನ ಭುಜಬಲದ ಬಗ್ಗೆ ಆಶ್ಚರ್ಯವಾಗುತ್ತಿತ್ತು. ಅವನ ಒಂದೊಂದು ಹೊಡೆತ ವಜ್ರದ ಹೊಡೆತದಂತಿತ್ತು. ಅರ್ಧ ಗಂಟೆ ಇದೇ ಉನ್ಮಾದದಲ್ಲಿ ಕೊಡಲಿಯಿಂದ ಕಡಿದ; ಸೌದೆ ಮಧ್ಯದಲ್ಲಿ ತುಂಡಾಯಿತು, ದುಃಖಿಯನ ಕೈಯಿಂದ ಕೊಡಲಿ ತಪ್ಪಿ ಕೆಳಗೆ ಬಿತ್ತು. ಅದರೊಂದಿಗೆ ಅವನು ಸಹ ತಲೆಸುತ್ತಿನಿಂದ ಕೆಳಗೆ ಬಿದ್ದ. ಹಸಿದ, ಬಾಯಾರಿದ, ದಣಿದ ಶರೀರ ಸೋತಿತ್ತು.
ಪಂಡಿತರು ಕೂಗಿದರು –‘ಎದ್ದು ಕೊಡಲಿಯಿಂದ ಇನ್ನಷ್ಟು ಹೊಡಿ. ಚಕ್ಕೆ ಮಾಡು.’ ದುಃಖಿ ಎದ್ದ. ಪಂಡಿತರಿಗೆ ದುಃಖಿಯಾಗೆ ಈಗ ಇನ್ನಷ್ಟು ಕಷ್ಟ ಕೊಡುವುದು ಉಚಿತವಲ್ಲವೆಂದು ಅನ್ನಿಸಿತು. ಅವರು ಒಳಗೆ ಹೋಗಿ ಬಂಗಿ ಸೋಸಿ ಶೌಚಕ್ಕೆ ಹೋದರು, ಸ್ನಾನ ಮಾಡಿದರು, ಮಡಿಯ ಪಂಚೆ ಉಟ್ಟು ಹೊರ ಬಂದರು! ದುಃಖಿ ಇನ್ನೂ ಅಲ್ಲೇ ಬಿದ್ದಿದ್ದ. ಪಂಡಿತರು ಗಟ್ಟಿಯಾಗಿ ಕರೆದರು –‘ದುಃಖಿ, ಇನ್ನೂ ಅಲ್ಲಿಯೇ ಮಲಗಿರ್ತೀಯಾ? ನಡಿ, ನಿನ್ನ ಮನೇಗೇ ಬರ್ತಿದ್ದೀನಿ. ಎಲ್ಲಾ ವಸ್ತುಗಳು ಸರಿಯಿದೆ ತಾನೇ?’ ಆದರೂ ದುಃಖಿ ಏಳಲಿಲ್ಲ.

ಪಂಡಿತರಿಗೆ ಸ್ವಲ್ಪ ಭಯವಾಯಿತು. ಸಮೀಪಕ್ಕೆ ಹೋಗಿ ನೋಡಿದರು, ದುಃಖಿ ಸೆಟೆದುಕೊಂಡು ಬಿದ್ದಿದ್ದ. ಪಂಡಿತರು ಮನೆಗೆ ಓಡಿ ಹೋಗಿ ತಮ್ಮ ಹೆಂಡತಿಗೆ ಹೇಳಿದರು –‘ದುಃಖಿಯಾ ಸತ್ ಹೋದ.’

ಪಂಡಿತರ ಪತ್ನಿ ಗಾಬರಿಯಿಂದ ಹೇಳಿದಳು –‘ಅವನೀಗ ಸೌದೆ ಸೀಳ್ತಿದ್ದನಲ್ಲ?’

ಪಂಡಿತರು –‘ಹೌದು, ಸೌದೆ ಸೀಳ್ತಾ-ಸೀಳ್ತಾ ಸತ್ ಹೋದ. ಈಗೇನು ಮಾಡೋದು?’

ಪಂಡಿತರ ಪತ್ನಿ ಶಾಂತಳಾಗಿ ಹೇಳಿದಳು –‘ಮಾಡೋದೇನು, ಮೋಚಿಗಳ ಗಲ್ಲಿಗೆ ಹೇಳಿ ಕಳ್ಸಿ, ಹೆಣ ಎತ್ಕೊಂಡ್ ಹೋಗ್ಲಿ.’

ಒಂದು ಕ್ಷಣದಲ್ಲಿ ಇಡೀ ಹಳ್ಳಿಗೆ ವಿಷಯ ತಿಳಿಯಿತು. ಹಳ್ಳಿಯಲ್ಲಿ ಬ್ರಾಹ್ಮಣರ ಮನೆಗಳೇ ಹೆಚ್ಚಿದ್ದವು. ಅಲ್ಲಿ ಗೋಂಡನ ಒಂದು ಮನೆ ಮಾತ್ರವಿತ್ತು. ಜನ ಆ ಗಲ್ಲಿಗೆ ಬರುವುದನ್ನು ಬಿಟ್ಟರು. ಆ ಹಾದಿಯಲ್ಲಿಯೇ ಬಾವಿಯಿತ್ತು, ನೀರನ್ನು ಹೇಗೆ ತುಂಬಿಸುವುದು! ಮೋಚಿಯ ಹೆಣದ ಬಳಿಯಿಂದ ಹಾದು ನೀರು ಸೇದಲು ಹೋಗುವವರು ಯಾರು? ಓರ್ವ ವೃದ್ಧೆ ಪಂಡಿತರಿಗೆ ಹೇಳಿದಳು –‘ಈಗ ಹೆಣ ಏಕೆ ಎತ್ತಿಸಲ್ಲ? ಹಳ್ಳಿಯಲ್ಲಿ ಜನ ನೀರು ಕುಡೀಬೇಕೋ, ಬೇಡ್ವೋ?
ಅತ್ತ ಗೋಂಡ ಮೋಚಿಗಳ ಕಾಲೋನಿಗೆ ಹೋಗಿ ಎಲ್ಲರಿಗೂ ಹೇಳಿದ –‘ಯಾರೂ ಹೆಣ ಎತ್ತಲು ಹೋಗಬಾರ್ದು. ಈಗ ಪೊಲೀಸರಿಂದ ತನಿಖೆಯಾಗುತ್ತೆ. ಒಬ್ಬ ಬಡವನ ಪ್ರಾಣ ಹೋಯ್ತು. ಪಂಡಿತರು ತಮ್ಮ ಮನೆಗೆ ಪಂಡಿತರಾಗಿರಬಹುದು. ಹೆಣ ಎತ್ತಿದರೆ ನಿಮ್ಮನ್ನೂ ಬಂಧಿಸಲಾಗುತ್ತದೆ.’

ನಂತರವೇ ಪಂಡಿತರು ಮೋಚಿ ಕಾಲೋನಿಗೆ ಬಂದರು. ಆದರೆ ಯಾರೂ ಹೆಣವನ್ನೆತ್ತಿ ತರಲು ಸಿದ್ಧರಿರಲಿಲ್ಲ. ದುಃಖಿಯ ಹೆಂಡತಿ ಮತ್ತು ಮಗಳು ರೋದಿಸುತ್ತಾ ಶವದ ಬಳಿಗೆ ಹೋದರು; ಪಂಡಿತರ ಮನೆ ಬಾಗಿಲಿನಲ್ಲಿ ತಲೆ ಚಚ್ಚಿಕೊಂಡು ರೋದಿಸಿದರು. ಅವರೊಂದಿಗೆ ಇನ್ನೂ ಎಂಟ್ಹತ್ತು ಮೋಚಿ-ಮಹಿಳೆಯರಿದ್ದರು. ಕೆಲವರು ರೋದಿಸುತ್ತಿದ್ದರು, ಕೆಲವರು ಸಮಾಧಾನ ಹೇಳುತ್ತಿದ್ದರು, ಆದರೆ ಅಲ್ಲಿ ಒಬ್ಬ ಮೋಚಿಯೂ ಇರಲಿಲ್ಲ. ಪಂಡಿತರು ಮೋಚಿಗಳಿಗೆ ಗದರಿಸಿದರು, ತಿಳಿ ಹೇಳಿದರು, ವಿನಂತಿಸಿದರು; ಆದರೆ ಮೋಚಿಗಳ ಮನಸ್ಸಿನಲ್ಲಿ ಪೊಲೀಸರ ಭಯವಿತ್ತು, ಒಬ್ಬನೂ ಮಿಸುಕಾಡಲಿಲ್ಲ. ಕಡೆಗೆ ಪಂಡಿತರು ನಿರಾಸೆಯಿಂದ ಮರಳಿ ಬಂದರು.

-4-

ನಡುರಾತ್ರಿಯವರೆಗೆ ರೋದಿಸುವುದು-ಎದೆ ಬಡಿದುಕೊಳ್ಳುವುದು ನಡೆಯುತ್ತಲೇ ಇತ್ತು. ದೇವತೆಗಳು ನಿದ್ರಿಸುವುದು ಕಷ್ಟಕ್ಕಿಟ್ಟುಕೊಂಡಿತು. ಆದರೆ ಹೆಣ ಎತ್ತಲು ಯಾವ ಮೋಚಿಯೂ ಬರಲಿಲ್ಲ. ಬ್ರಾಹ್ಮಣರು ಮೋಚಿಯ ಶವವನ್ನೆತ್ತಲು ಸಾಧ್ಯವೇ! ಹೀಗೆ ಯಾವ ಶಾಸ್ತ್ರ-ಗ್ರಂಥಗಳಲ್ಲಿ ಬರೆಯಲಾಗಿದೆ? ಯಾರಾದರೂ ತೋರಿಸಲಿ.

ಪಂಡಿತರ ಪತ್ನಿ ರೇಗಿ ಹೇಳಿದಳು –‘ಈ ಮೂದೇವಿಗಳು ತಲೆ ತಿನ್ತಿದ್ದಾರೆ. ಯಾರಿಗೂ ಕನಿಕರವಿಲ್ಲ.’

ಪಂಡಿತರು ಹೇಳಿದರು –‘ಈ ಪಿಶಾಚಿಗಳು ಅಳಲಿ, ಎಲ್ಲಿಯವರ್ಗೆ ಅಳ್ತಾರೆ? ಬದುಕಿದ್ದಾಗ ಯಾರೂ ಇವನನ್ನು ಕೇಳ್ತಿರಲಿಲ್ಲ. ಸತ್ತ ಮೇಲೆ ಎಲ್ರೂ ಗಲಾಟೆ ಮಾಡಲು ಬಂದ್ರು.’

ಪಂಡಿತರ ಪತ್ನಿ –‘ಮೋಚಿ ಅಳೋದು ಅಶುಭ.’

ಪಂಡಿತರು –‘ಹೌದು, ತುಂಬಾ ಅಶುಭ.’

ಪಂಡಿತರ ಪತ್ನಿ –‘ಈಗ್ಲೇ ದುರ್ವಾಸನೆ ಬರ್ತಿದೆ.’

ಪಂಡಿತರು -ನನ್ಮಗ ಮೋಚಿ...ಈ ಮೋಚಿಗೆ ಯಾವ್ದು ತಿನ್ಬೇಕು, ಯಾವ್ದು ತಿನ್ಬಾರ್ದು ಅನ್ನೋ ವಿವೇಕವಿಲ್ಲ.’

ಪಂಡಿತರ ಪತ್ನಿ –‘ಇವ್ರಿಗೆ ಹೇಸಿಗೆ ಅಂತಲೂ ಅನ್ಸಲ್ಲ.’

ಪಂಡಿತರು –‘ಎಲ್ಲರೂ ಭ್ರಷ್ಟರು.’

ರಾತ್ರಿ ಹೇಗೋ ಕಳೆಯಿತು; ಆದರೆ ಬೆಳಗಾದರೂ ಯಾವ ಮೋಚಿಯೂ ಬರಲಿಲ್ಲ. ಮೋಚಿ-ಹೆಂಗಸರು ಎದೆಬಡಿದುಕೊಂಡು ರೋದಿಸಿ ಹೊರಟು ಹೋದರು. ದುರ್ಗಂಧ ಮೆಲ್ಲನೆ ಹಬ್ಬುತ್ತಿತ್ತು.

ಪಂಡಿತರು ಒಂದು ಹಗ್ಗ ತೆಗೆದರು. ಅದನ್ನು ಹೆಣದ ಕಾಲುಗಳಿಗೆ ಬಿಗಿಯಾಗಿ ಕಟ್ಟಿದರು. ಇನ್ನೂ ಸ್ವಲ್ಪ ಕತ್ತಲಿತ್ತು. ಪಂಡಿತರು ಹಗ್ಗ ಹಿಡಿದು ಹೆಣವನ್ನೆಳೆಯುತ್ತಾ ಹಳ್ಳಿಯ ಹೊರಗೆ ಎಳೆದು ತಂದರು. ಅಲ್ಲಿಂದ ಬಂದು ಕೂಡಲೇ ಸ್ನಾನ ಮಾಡಿದರು, ದುರ್ಗೆಯ ಮಂತ್ರ ಹೇಳಿದರು, ಗಂಗಾ ಜಲವನ್ನು ಮನೆಯಲ್ಲಿ ಸಿಂಪಡಿಸಿದರು.

ಅತ್ತ ದುಃಖಿಯ ಶವವನ್ನು ಹೊಲದಲ್ಲಿ ನರಿಗಳು, ಹದ್ದುಗಳು, ನಾಯಿಗಳು ಮತ್ತು ಕಾಗೆಗಳು ಕುಕ್ಕಿ-ಕುಕ್ಕಿ ತಿನ್ನುತ್ತಿದ್ದವು. ಇದು ಜೀವನಪರ್ಯಂತದ ಭಕ್ತಿ, ಸೇವೆ ಮತ್ತು ನಿಷ್ಠೆಗೆ ಪುರಸ್ಕಾರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT