ಹಸಿರು ಮನೆಯಲ್ಲಿ ಸಸ್ಯಾಭಿವೃದ್ಧಿ

‘ಮೆಕ್ಕೆಜೋಳದ ಕಣಜ’ ಎಂಬ ಖ್ಯಾತಿಯ ದಾವಣಗೆರೆ ಜಿಲ್ಲೆಯ ರೈತರ ಬೇಸಾಯ ವಿಧಾನಗಳು ನಿಧಾನವಾಗಿ ಬದಲಾಗುತ್ತಿವೆ. ಜಿಲ್ಲೆಯಾದ್ಯಂತ ರೈತರ ಜಮೀನುಗಳಲ್ಲಿ ಹಸಿರು ಮನೆಗಳು ತಲೆ ಎತ್ತುತ್ತಿವೆ. ಹಸಿರು ಮನೆಗಳಲ್ಲಿ ತರಕಾರಿ ಸಸಿಗಳನ್ನು ಬೆಳೆಸಿಕೊಂಡು ನಾಟಿ ಮಾಡಿ ಬೆಳೆಯುವ ಪದ್ಧತಿ ಜನಪ್ರಿಯವಾಗುತ್ತಿದೆ.
ಸಾಮಾನ್ಯವಾಗಿ ಜಿಲ್ಲೆಯ ರೈತರು ಮಳೆಗಾಲದಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. ಚಳಿಗಾಲ ಹಾಗೂ ಬೇಸಿಗೆಯಲ್ಲಿ ನೀರಾವರಿ ಸೌಲಭ್ಯ ಇರುವವರು ತರಕಾರಿ ಬೆಳೆಯುತ್ತಾರೆ. ತರಕಾರಿ ಬೆಳೆಗಳಿಗೆ ಬೆಳವಣಿಗೆ ಹಂತದಲ್ಲೇ ಕೀಟ, ರೋಗ ಬಾಧೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣವೇನು ಎನ್ನುವುದು ರೈತರ ಪ್ರಶ್ನೆ.
ಗುಣಮಟ್ಟದ ಎಳೆಯ ಸಸಿಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗದಿರುವುದರಿಂದ ಹೀಗಾಗುತ್ತಿದೆ ಎನ್ನುವುದು ರೈತರ ಅರಿವಿಗೆ ಬಂದಿದೆ. ಹಸಿರು ಮನೆಗಳಲ್ಲಿ ಗುಣಮಟ್ಟದ ತರಕಾರಿ ಸಸಿಗಳನ್ನು ಬೆಳೆಸಿಕೊಂಡು ನಾಟಿ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂಬುದನ್ನು ಅವರು ಈಗ ಅರಿತು ಕೊಂಡಿದ್ದಾರೆ. ಈ ಕ್ರಮ ಅನುಸರಿಸಲು ಆರಂಭಿಸಿದ ಮೇಲೆ ತರಕಾರಿ ಬೆಳೆಗಳಿಗೆ ಕೀಟ ಹಾಗೂ ರೋಗ ಬಾಧೆ ಇಲ್ಲ. ಇಳುವರಿಯೂ ಚೆನ್ನಾಗಿದೆ ಎಂಬುದು ಜಿಲ್ಲೆಯ ಅನೇಕ ರೈತರ ಅಭಿಪ್ರಾಯ.
ಪ್ರತ್ಯೇಕವಾಗಿ ಸಸಿ ಬೆಳೆಸಿಕೊಂಡು ನಾಟಿ ಮಾಡುವ ಕ್ರಮ ಹೊಸದಲ್ಲ. ಹಾಗೆ ನೋಡಿದರೆ, ಕೋಲಾರ, ಬೆಂಗಳೂರು, ಹಾಸನ ಜಿಲ್ಲೆಗಳಲ್ಲಿ ಈ ಪದ್ಧತಿ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಈ ಪದ್ಧತಿ ಆರಂಭವಾಗಲು ತೋಟಗಾರಿಕೆ ಇಲಾಖೆ ರೈತರಿಗೆ ಉತ್ತೇಜನ ನೀಡುತ್ತಿದೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಯ್ದ ರೈತರನ್ನು ಕೋಲಾರ ಜಿಲ್ಲೆಗೆ ಪ್ರವಾಸ ಕರೆದುಕೊಂಡು ಹೋಗುವ ಮೂಲಕ ಸಸ್ಯಾಭಿವೃದ್ಧಿಯ ಕ್ರಮಗಳ ಬಗ್ಗೆ ಅವರ ಗಮನ ಸೆಳೆದರು. ಕಡಿಮೆ ನೀರಿನಲ್ಲಿ ಬೇಸಾಯ ಮಾಡಿ ಹೆಚ್ಚು ಇಳುವರಿ ಪಡೆದ ಅಲ್ಲಿನ ರೈತರನ್ನು ನೋಡಿ ಹಿಂತಿರುಗಿದ ನಂತರ ನಾವೂ ಅವರಂತೆ ಸಸಿ ಬೆಳೆಸಿಕೊಂಡು ನಾಟಿ ಮಾಡಲು ನಿರ್ಧರಿಸಿದೆವು. ಹೀಗೆ ಮಾಡಿದ್ದರಿಂದ ಟೊಮೆಟೊ ಇಳುವರಿ ಹೆಚ್ಚಿತು. ಸಸಿಗಳಿಗೆ ರೈತರಿಂದ ಬೇಡಿಕೆ ಬಂತು. ಈಗ 5 ಲಕ್ಷ ಬೆಲೆ ತರಕಾರಿ ಸಸಿಗಳನ್ನು ಬೆಳೆಸುತ್ತಿದ್ದೇನೆ. ಒಂದು ಸಸಿಗೆ 50 ಪೈಸೆಯಂತೆ ಮಾರಾಟ ಮಾಡುತ್ತೇನೆ. ಪ್ರತಿ ತಿಂಗಳು ಕನಿಷ್ಠ ರಿಂದ 10 ಸಾವಿರ ಆದಾಯ ಗಳಿಸುತ್ತೇನೆ ಎನ್ನುತ್ತಾರೆ ಹೆಬ್ಬಾಳ ಗ್ರಾಮದ ರೈತರ ಮುರುಗೇಂದ್ರಪ್ಪ.
ಜಿಲ್ಲೆಯ ಮಾಯಕೊಂಡ, ನರಗನಹಳ್ಳಿ, ಆನಗೋಡು, ಬಾವಿಹಾಳ್, ಕೊಡಗನೂರು, ನೇರ್ಲಿಗೆ, ದೊಡ್ಡಮಾಗಡಿ ಮತ್ತಿತರ ಗ್ರಾಮಗಳ ರೈತರ ಹೊಲಗಳಲ್ಲಿ ಹಸಿರು ಮನೆ ನಿರ್ಮಿಸಿಕೊಂಡು ಮೆಣಸಿನಕಾಯಿ, ಟೊಮೆಟೊ, ಬದನೆ, ಅವರೆ, ಎಲೆ ಕೋಸು ಇತ್ಯಾದಿ ತರಕಾರಿ ಸಸಿಗಳನ್ನು ಬೆಳೆಸುತ್ತಿದ್ದಾರೆ.
ಹಸಿರು ಮನೆಗಳ ನಿರ್ಮಾಣಕ್ಕೆ ಸಹಾಯ ಧನ ನೀಡುತ್ತೇವೆ ಎನ್ನುತ್ತಾರೆ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಕದಿರೇಗೌಡ.ಸಾಮಾನ್ಯವಾಗಿ ಹಸಿರು ಮನೆಗಳಲ್ಲಿ ಉಷ್ಣತೆ ಹೊರಗಿನ ಉಷ್ಣತೆಗಿಂತ 5-10 ಡಿಗ್ರಿ ಸೆ. ಹೆಚ್ಚಾಗಿರುತ್ತದೆ. ಇದು ಸ್ಥಳೀಯ ಹಾಗೂ ಋತುಮಾನಗಳ ಮೇಲೆ ಅವಲಂಬಿತವಾಗಿರುತ್ತದೆ. ಚಳಿಗಾಲದ ನಂತರ ಬೇಸಿಗೆಯಲ್ಲಿ ಹಸಿರು ಮನೆಯ ಉಷ್ಣತೆಯನ್ನು ಕಡಿಮೆ ಮಾಡುವುದು ನಿರ್ವಹಣೆಯ ಮುಖ್ಯ ಅಂಶವಾಗಿದೆ ಎನ್ನುತ್ತಾರೆ ಅವರು.‘ಎಲ್ಲಾ ಕಾಲದಲ್ಲೂ ಸಸ್ಯಾಭಿವೃದ್ಧಿ ಮಾಡುತ್ತಿರುವುದರಿಂದ ನನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಹಸಿರು ಮನೆಗಳಲ್ಲಿ ಬೆಳೆಸಿದ ಸಸಿಗಳಿಗೆ ಬೇಡಿಕೆಯೂ ಹೆಚ್ಚಿದೆ’ ಎನ್ನುತ್ತಾರೆ ಮಾಯಕೊಂಡದ ರೈತ ಬಾಬು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.