ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿರೋಧ ಆಯ್ಕೆ ಹಿಂದೆ ಚುನಾವಣೆ ಚಿತ್ತ

Last Updated 5 ಅಕ್ಟೋಬರ್ 2012, 9:00 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಅವಿರೋಧ ಆಯ್ಕೆ ನಡೆದಿದ್ದು, ಇದರ ಹಿಂದಿರುವ ಲೆಕ್ಕಾಚಾರಗಳು ಮುಂದಿನ ವಿಧಾನಸಭೆ ಚುನಾವಣೆ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬಲ ಪಡಿಸುವುದರ ಸುತ್ತವೇ ಗಿರಕಿ ಹೊಡೆಯುತ್ತಿವೆ ಎಂಬುದಕ್ಕೆ ಈ ಚುನಾವಣೆಯ ಘಟನಾವಳಿಗಳೇ ಸಾಕ್ಷಿ.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿ.ಪಂ.ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧ ವಾಗಿ ಆಯ್ಕೆ ಮಾಡುವ ಮೂಲಕ ಇಡೀ ಜಿ.ಪಂ. ತಮ್ಮ ಹಿಡಿತದಲ್ಲಿದೆ ಎಂಬ ಸಂದೇಶವನ್ನು ಬಿಜೆಪಿ ಮುಖಂಡರಿಗಷ್ಟೇ ಅಲ್ಲದೇ ಯಡಿಯೂರಪ್ಪನವರಿಗೂ ತಲುಪಿಸಿದ್ದಾರೆ.

ಅದೇ ರೀತಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಅನುಕೂಲವಾಗಲೆಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಅವರು ತಮ್ಮ ತಾಲ್ಲೂಕಿಗೆ ಉಪಾಧ್ಯಕ್ಷ ಸ್ಥಾನವನ್ನು ಹಾಗೂ ಬ್ಯಾಡಗಿ ಕ್ಷೇತ್ರದಿಂದ ಸ್ಪರ್ಧಿಸಿದರೆ ತಮಗೆ ಸಹಕಾರಿಯಾಗಲೆಂದು ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಅವರು ಅಧ್ಯಕ್ಷ ಸ್ಥಾನವನ್ನು ಬ್ಯಾಡಗಿ ತಾಲ್ಲೂಕಿಗೆ ಸಿಗುವಂತೆ ನೋಡಿ ಕೊಂಡಿದ್ದಾರೆಂದು ಪಕ್ಷದ ಮೂಲಗಳು ತಿಳಿಸುತ್ತವೆ.

ಜಿಲ್ಲಾ ಬಿಜೆಪಿಗೆ ಪರ್ಯಾಯ: ಜಿ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮಣ್ಣ ಬೇವಿನಮರದ ಸೇರಿದಂತೆ ಜಿಲ್ಲೆಯ ಮೂಲ ಬಿಜೆಪಿಯ ಯಾವುದೇ ಮುಖಂಡರು ಭಾಗಿಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲೆಯಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ಹುಟ್ಟು ಹಾಕುವ ಯತ್ನದಲ್ಲಿದ್ದಾರೆ ಎಂದು ಹೇಳಲಾಗುತ್ತದೆ.

ಪಂಚಾಯಿತಿಯಲ್ಲಿ ಯಾವ ಪಕ್ಷದ ಅಧಿಕಾರಕ್ಕೆ ಬಂದಿರುತ್ತದೆಯೋ ಆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು, ಮುಖಂಡರ, ಜನಪ್ರತಿನಿಧಿಗಳ ಹಾಗೂ ಜಿ.ಪಂ.ಸದಸ್ಯರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವುದು ರೂಢಿ, ಅದೇ ಮಾದರಿಯಲ್ಲಿ ಜಿ.ಪಂ.ನ ಮೊದಲ ಅವಧಿಯ ಅಧ್ಯಕ್ಷ,ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿತ್ತು.

ಆದರೆ, ಮೊದಲ ಅವಧಿಯ ಜಿ.ಪಂ.ಅಧ್ಯಕ್ಷ ಮಂಜುನಾಥ ಓಲೇಕಾರ ಅವರು ತಮ್ಮ ಅವಧಿ ಮುಗಿದ ಮೇಲೆ ಜಿಲ್ಲೆಯ ಶಾಸಕರ, ಸಚಿವರ ಮಾತಿಗೆ ಮನ್ನಣೆ ನೀಡದೇ ಬಿಜೆಪಿ ಜಿಲ್ಲಾ ಘಟಕದ ಅಣತಿಯಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೇಟು ಹಾಕಿದಾಗ ಆಕ್ರೋಶಗೊಂಡ ಜಿಲ್ಲೆಯ ಸಚಿವರು, ಶಾಸಕರು ಜಿಲ್ಲಾ ಬಿಜೆಪಿ ಘಟಕವನ್ನು ಗಂಭೀರವಾಗಿ ಪರಿಗಣಿಸದೇ ತಮ್ಮದೇ ಆದ ತಂತ್ರಗಾರಿಕೆಯನ್ನು ಬಳಸಿಕೊಂಡು ಓಲೇಕಾರ ವಿರುದ್ಧ ಅವಿಶ್ವಾಸ ಮಂಡಿಸಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದರು.

ನಂತರದ ಜಿ.ಪಂ.ಅಧ್ಯಕ್ಷ, ಉಪಾಧ್ಯಕ್ಷರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ತಿಳಿಸದೇ ತಾವೇ ಜಿ.ಪಂ.ಸದಸ್ಯರ ಸಭೆ ಕರೆದು, ಅವರ ಅಭಿಪ್ರಾಯದಂತೆಯೇ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾ ಬಂದರಲ್ಲದೇ ಜಿ.ಪಂ.ಸದಸ್ಯರ‌್ಯಾರಿಗೂ ನೋವಾಗದಂತೆ 10-10 ತಿಂಗಳ ಅಧಿಕಾರ ಹಂಚಿಕೆ ಸೂತ್ರದ ಮೇಲೆ ಎಲ್ಲ ಸಮುದಾಯ, ಎಲ್ಲ ಮುಖಂಡರನ್ನು ಸಮಾಧಾನ ಮಾಡುತ್ತಾ ಬರಲಾಗಿದೆ.

ಗುರುವಾರ ನಡೆದ ಚುನಾವಣೆಯಲ್ಲಿ ಜಿಲ್ಲಾ ಬಿಜೆಪಿ ಘಟಕ ಸೇರಿದಂತೆ ಜಿಲ್ಲಾ ಅಧ್ಯಕ್ಷರ ಜತೆ ಗುರುತಿಸಿಕೊಂಡ ಜಿ.ಪಂ.ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ ಅವರನ್ನು ದೂರವಿಟ್ಟು ಅಧಿಕಾರ ಹಂಚಿಕೆ ಸೂತ್ರದ ಆಧಾರದ ಮೇಲೆ ಮೊದಲ 10 ತಿಂಗಳ ಅವಧಿಗೆ ಬ್ಯಾಡಗಿ ತಾಲ್ಲೂಕಿನ ಶಿಡೇನೂರ ಜಿ.ಪಂ.ಕ್ಷೇತ್ರದ ಶಂಕ್ರಣ್ಣ ಮಾತನವರ ಅವರನ್ನು ಅಧ್ಯಕ್ಷರನ್ನಾಗಿಮ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರ ಜಿ.ಪಂ.ಕ್ಷೇತ್ರದ ಗೀತಾ ಅಂಕಸಖಾನಿ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.

ಆದರೆ, ಅಧ್ಯಕ್ಷ ಸ್ಥಾನಕ್ಕೆ ಶಂಕ್ರಣ್ಣ ಮಾತನವರ ಜತೆಗೆ ಕುರುಬ ಸಮಾಜದ ಇನ್ನೊಬ್ಬ ಸದಸ್ಯ ರಾಜೇಂದ್ರ ಹಾವೇರ ಣ್ಣನವರ, ಅಂಬಿಗೇರ ಸಮುದಾಯದ ಸದಸ್ಯ ಕೃಷ್ಣಪ್ಪ ಸುಣಗಾರ ಪ್ರಬಲ ಆಕಾಂಕ್ಷಿಗಳಾಗಿದ್ದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಅಂಕಸಖಾನಿ ಸೇರಿದಂತೆ ಏಳು ಜನ ಮಹಿಳಾ ಸದಸ್ಯರು ತೀವ್ರ ಪೈಪೋಟಿಯಲ್ಲಿದ್ದರು.

ಅಧಿಕಾರ ಹಂಚಿಕೆ ಸೂತ್ರವು ಇಬ್ಬರು ಆಕಾಂಕ್ಷಿಗಳಾಗಿದ್ದಾಗ ತಲಾ 10 ತಿಂಗಳಿ ಗೊಬ್ಬರಂತೆ ಅಧ್ಯಕ್ಷರನ್ನು ಮಾಡಲು ಸಾಧ್ಯ. ಆದರೆ, ಇಲ್ಲಿ ಮೂವರು ಆಕಾಂಕ್ಷಿಗಳಲ್ಲಿ ಇನ್ನೊಬ್ಬರನ್ನು ಅಧಿಕಾರದಲ್ಲಿ ತಂದು ಕೂಡ್ರಿಸಬಹುದು. ಆಗ ಮತ್ತೊಬ್ಬ ಆಕಾಂಕ್ಷಿ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಆರು ಜನ ಮಹಿಳಾ ಸದಸ್ಯರಲ್ಲಿ ಐವರನ್ನು ಹೇಗೆ ಸಮಾಧಾನ ಪಡಿಸುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಈಗಾಗಲೇ ಜಿಲ್ಲೆಯ ಬಹುತೇಕ ಬಿಜೆಪಿ ಶಾಸಕರು ಹಾಗೂ ಸಚಿವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಗುಂಪಿನಲ್ಲಿ ಗುರುತಿಸಿ  ಕೊಂಡಿದ್ದು, ಯಡಿಯೂರಪ್ಪನವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರಲಿದ್ದಾರೆ ಎಂಬುದಕ್ಕೆ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿರುವ ಎಲ್ಲ ಘಟನಾವಳಿಗಳು ಸಾಕ್ಷಿಯಾಗಿವೆ.

ಈಗ ಜಿಲ್ಲಾ ಬಿಜೆಪಿ ಘಟಕವನ್ನು ದೂರವಿಟ್ಟು ಜಿ.ಪಂ.ನಲ್ಲಿ ತಮ್ಮ ಬೆಂಬ ಲಿಗರನ್ನೇ ಅಧಿಕಾರದಲ್ಲಿ ಕೂಡ್ರಿಸುವ ಮೂಲಕ ಜಿಲ್ಲೆಯಲ್ಲಿ ತಮ್ಮ ಶಕ್ತಿಗೆ ಯಾವುದೇ ಧಕ್ಕೆಯಿಲ್ಲ ಎಂಬುದನ್ನು ಸಚಿವರು, ಶಾಸಕರು ಸಾಬೀತುಪಡಿಸಿದ್ದಾರೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT