ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಪದವಿಯ ಜಾತಿ ಕಾರಣ

Last Updated 12 ಮೇ 2013, 19:36 IST
ಅಕ್ಷರ ಗಾತ್ರ

ಹಿಂದಿನ ಮೈಸೂರು ರಾಜ್ಯ ಮತ್ತು ರಾಜ್ಯ ಪುನರ್‌ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯದಲ್ಲಿ ಈವರೆಗೆ ಒಟ್ಟು 21 ಮಂದಿ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಕೈಯಲ್ಲೇ ದೀರ್ಘಕಾಲ ರಾಜ್ಯದ ಆಡಳಿತ ಚುಕ್ಕಾಣಿ ಇತ್ತು. ಅನುಕ್ರಮವಾಗಿ ಈ ಎರಡೂ ಸಮುದಾಯಗಳ ಎಂಟು ಮತ್ತು ಏಳು ಮಂದಿ ಮುಖ್ಯಮಂತ್ರಿಗಳಾಗಿ ಅಧಿಕಾರ ಅನುಭವಿಸಿದ್ದರು. ಇಬ್ಬರು ಬ್ರಾಹ್ಮಣರು ಮುಖ್ಯಮಂತ್ರಿಗಳಾಗಿ ಎಂಟು ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಹಿಂದುಳಿದ ವರ್ಗಗಳ ನಾಲ್ವರು ಈವರೆಗೆ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ.

ದೇವರಾಜ್ ಅರಸು
ಎಸ್. ಬಂಗಾರಪ್ಪ
ವೀರಪ್ಪ ಮೊಯ್ಲಿ
ಧರ್ಮಸಿಂಗ್
ಸಿದ್ದರಾಮಯ್ಯ

ಮೈಸೂರು ರಾಜ್ಯದ ಮೊದಲ ಸರ್ಕಾರ 1947ರ ಅಕ್ಟೋಬರ್‌ನಲ್ಲಿ ಅಸ್ತಿತ್ವಕ್ಕೆ ಬಂತು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೆ.ಚಂಗಲರಾಯ ರೆಡ್ಡಿ ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ನಂತರದ ಒಂಬತ್ತು ವರ್ಷಗಳ ಕಾಲ ಮುಖ್ಯಮಂತ್ರಿಯ ಪಟ್ಟ ಒಕ್ಕಲಿಗರ ಕೈಯಲ್ಲೇ ಭದ್ರವಾಗಿತ್ತು.

1956ರಲ್ಲಿ ಎಸ್.ನಿಜಲಿಂಗಪ್ಪ ಮುಖ್ಯಮಂತ್ರಿ ಹುದ್ದೆಗೇರುವುದರೊಂದಿಗೆ ಅಧಿಕಾರದ ಗದ್ದುಗೆ ಲಿಂಗಾಯತರಿಗೆ ಹಸ್ತಾಂತರವಾಯಿತು. 1962ರವರೆಗೂ ಲಿಂಗಾಯತರೇ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ನಂತರದ ಒಂದು ವರ್ಷ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು.25 ವರ್ಷಗಳ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿಯ ಪಟ್ಟ ಹಿಂದುಳಿದ ವರ್ಗದ ನಾಯಕರೊಬ್ಬರಿಗೆ ಒಲಿಯಿತು.

1972ರಲ್ಲಿ ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾದರು. ಆಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗದ ನಾಯಕ ಆಡಳಿತದ ಚುಕ್ಕಾಣಿ ಹಿಡಿಯುವಂತಹ ಐತಿಹಾಸಿಕ ರಾಜಕೀಯ ಬೆಳವಣಿಗೆಗೆ ಅವಕಾಶ ಕಲ್ಪಿಸಿತ್ತು.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅವರು ಆರೂವರೆ ವರ್ಷ ಅಧಿಕಾರದಲ್ಲಿದ್ದರು. ಈ ಅವಧಿಯಲ್ಲಿ ಅಧಿಕಾರವನ್ನು ಹಿಂದುಳಿದ ವರ್ಗಗಳ ರಾಜಕೀಯ ಮತ್ತು ಸಾಮಾಜಿಕ ಏಳ್ಗೆಗೆ ಬಳಸಿದರು ಅರಸು. ಈ ಕಾರಣಕ್ಕಾಗಿಯೇ ಹಿಂದುಳಿದ ವರ್ಗಗಳ ಪಾಲಿಗೆ ಈಗಲೂ ಅವರು ಪ್ರಶ್ನಾತೀತ ನಾಯಕ ಮತ್ತು ನಾಯಕರಿಗೆ ಆದರ್ಶ.

ಅರಸು ಅವರು 1980ರ ಜನವರಿಯಲ್ಲಿ ಅಧಿಕಾರ ಕಳೆದುಕೊಂಡರು. ಅಂದಿನಿಂದ ಒಂದು ದಶಕ ಬ್ರಾಹ್ಮಣರು ಮತ್ತು ಲಿಂಗಾಯತರ ಬಳಿ ಅಧಿಕಾರ ಇತ್ತು. ಅರಸು ಬಳಿಕ ಬ್ರಾಹ್ಮಣ ಸಮುದಾಯದ ಆರ್.ಗುಂಡೂರಾವ್ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ನಂತರ ಅದೇ ಸಮುದಾಯದ ರಾಮಕೃಷ್ಣ ಹೆಗಡೆ ಅಧಿಕಾರದ ಚುಕ್ಕಾಣಿ ಹಿಡಿದರು. ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿ ಐದು ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿ ಇದ್ದರು.

1988ರಲ್ಲಿ ಮತ್ತೊಂದು ರಾಜಕೀಯ ಪಲ್ಲಟ ನಡೆಯಿತು. ಲಿಂಗಾಯತರಿಗೆ ಮತ್ತೆ ಅಧಿಕಾರ ಪ್ರಾಪ್ತವಾಯಿತು. ಆ ಸಮುದಾಯದ ಪ್ರಭಾವಿ ನಾಯಕ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾದರು. ಒಂಬತ್ತು ತಿಂಗಳಷ್ಟೇ ಅವರು ಈ ಹುದ್ದೆಯಲ್ಲಿದ್ದರು. ನಂತರದ ಕೆಲ ದಿನಗಳ ಕಾಲ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು. ಅದಾದ ಬಳಿಕ ವೀರೇಂದ್ರ ಪಾಟೀಲ್ (ಲಿಂಗಾಯತ) ಮುಖ್ಯಮಂತ್ರಿಯಾದರು.

ದೇವರಾಜ ಅರಸರ ನಂತರ ಹಿಂದುಳಿದ ವರ್ಗಗಳಿಗೆ ರಾಜಕೀಯ ಅಧಿಕಾರ ದೊರೆತದ್ದು ಎಸ್.ಬಂಗಾರಪ್ಪ ಅವರ ಮೂಲಕ. 1990ರ ಅಕ್ಟೋಬರ್‌ನಿಂದ 1992ರ ಅಕ್ಟೋಬರ್‌ವರೆಗೆ ಅವರು ಅಧಿಕಾರದಲ್ಲಿದ್ದರು. ಬಂಗಾರಪ್ಪ ಅಧಿಕಾರ ಕಳೆದುಕೊಂಡಾಗಲೂ ಹಿಂದುಳಿದ ವರ್ಗದವರಿಗೇ ಆ ಸ್ಥಾನ ದೊರೆಯಿತು. ಎಂ.ವೀರಪ್ಪಮೊಯಿಲಿ ಉತ್ತರಾಧಿಕಾರಿಯಾಗಿ ಬಂದರು. ಈ ಇಬ್ಬರಿಗೂ ಅಧಿಕಾರ ನೀಡಿದ್ದು ಕಾಂಗ್ರೆಸ್ ಪಕ್ಷವೇ.

ಒಕ್ಕಲಿಗರು-ಲಿಂಗಾಯತರ ಪೈಪೋಟಿ:
ಮೊಯಿಲಿ ನಿರ್ಗಮನದ ಬಳಿಕ ರಾಜ್ಯ ರಾಜಕೀಯ ಎರಡು ಪ್ರಬಲ ಸಮುದಾಯಗಳ ಹಿಡಿತಕ್ಕೆ ಸಿಲುಕಿತು. ಲಿಂಗಾಯತರು ಮತ್ತು ಒಕ್ಕಲಿಗರ ನಡುವೆಯೇ ಅಧಿಕಾರಕ್ಕಾಗಿ ಪೈಪೋಟಿ ಇತ್ತು. 1994ರಿಂದ ಈವರೆಗಿನ 19 ವರ್ಷಗಳಲ್ಲಿ ಎಂಟು ಮುಖ್ಯಮಂತ್ರಿಗಳು ರಾಜ್ಯದಲ್ಲಿ ಆಡಳಿತ ನಡೆಸಿದ್ದಾರೆ. ಅವರಲ್ಲಿ ನಾಲ್ಕು ಮಂದಿ ಒಕ್ಕಲಿಗರು. ಮೂವರು ಲಿಂಗಾಯತರು. ಹದಿನೆಂಟು ತಿಂಗಳ ಕಾಲ ಅಧಿಕಾರದಲ್ಲಿದ್ದ ಧರ್ಮಸಿಂಗ್ ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದವರು. ಆಗಲೂ, ಸಮ್ಮಿಶ್ರ ಸರ್ಕಾರದ ಮೂಗುದಾರ ಒಕ್ಕಲಿಗರ (ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ) ಬಳಿಯೇ ಇತ್ತು.

1994ರಲ್ಲಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಹುದ್ದೆಗೇರಿದ ನಂತರ ರಾಜ್ಯ ರಾಜಕೀಯದಲ್ಲಿ ಎರಡು ಸಮುದಾಯಗಳ ಹಿಡಿತ ಮತ್ತಷ್ಟು ಬಲವಾಯಿತು. ಒಂದೆಡೆ ಒಕ್ಕಲಿಗರು ಮತ್ತೊಂದೆಡೆ ಲಿಂಗಾಯತರು ಪ್ರಬಲವಾಗುತ್ತಲೇ ಹೋದರು. ಪರಿಣಾಮವಾಗಿ ಈ ಎರಡೇ ಸಮುದಾಯಗಳ ನಡುವೆ ಅಧಿಕಾರ ಹಂಚಿಕೆಯಾಗುತ್ತಾ ಬಂತು.

1999ರ ನಂತರ ಕರ್ನಾಟಕದ ರಾಜಕೀಯದಲ್ಲಿ ನಡೆದ ಕೆಲವು ಬೆಳವಣಿಗೆಗಳು ಇಲ್ಲಿ ಇನ್ನು ಹಿಂದುಳಿದ ವರ್ಗಗಳ ನಾಯಕರೊಬ್ಬರು ಅಧಿಕಾರ ಹಿಡಿಯುವು ಸಾಧ್ಯವಾಗದೇ ಇರಬಹುದೇನೋ ಎಂಬಂತಹ ಅನುಮಾನ ಬೆಳೆದು ನಿಲ್ಲಲು ಕಾರಣವಾಗಿದ್ದವು. ಜಾತಿಯ ಮತಗಳ ಧ್ರುವೀಕರಣ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ನಡೆಯುತ್ತಿದ್ದುದು ಇದಕ್ಕೆ ಕಾರಣವಾಗಿತ್ತು.

ಈಗ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷ ಮತ್ತೆ ಹಿಂದುಳಿದ ವರ್ಗಗಳಿಗೆ ಅಧಿಕಾರದ ಚುಕ್ಕಾಣಿ ನೀಡಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗದಿಂದ ಬಂದ ಐದನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರಕ್ಕೆ ಏರುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ಎಲ್ಲರೂ ಅಧಿಕಾರದ ಗದ್ದುಗೆಗೆ ಏರಿದ್ದು ಕಾಂಗ್ರೆಸ್ ಪಕ್ಷದಿಂದಲೇ.

ಉಳಿದ ಪಕ್ಷಗಳು ಪ್ರಬಲ ಜಾತಿಗಳ ಮತಬ್ಯಾಂಕ್ ಮೇಲೆ ಕಣ್ಣಿಟ್ಟು ರಾಜಕೀಯ ಅಧಿಕಾರದ ಹಂಚಿಕೆಯನ್ನು ನಿರ್ಧರಿಸುತ್ತವೆ. ಆದರೆ, ಕಾಂಗ್ರೆಸ್ ಕೆಲವೊಮ್ಮೆ ಅಚ್ಚರಿ ಎನ್ನುವಂತಹ ನಿರ್ಧಾರಗಳನ್ನು ಮಾಡಿ ಸಂಖ್ಯಾಬಲವೇ ಇಲ್ಲದ ಸಮುದಾಯಗಳಿಗೂ ಅಧಿಕಾರದ ಹಂಚಿಕೆ ಮಾಡಿದೆ.

ಹಿಂದುಳಿದ ವರ್ಗಕ್ಕೆ ಸೇರಿದ ನಾಲ್ವರು ಮುಖ್ಯಮಂತ್ರಿಗಳ ಪೈಕಿ ಅರಸು, ಮೊಯಿಲಿ ಮತ್ತು ಧರ್ಮಸಿಂಗ್ ಅವರ ಸಮುದಾಯಗಳು ರಾಜ್ಯ ರಾಜಕೀಯದ ಮೇಲೆ ಗಾಢವಾದ ಪರಿಣಾಮ ಬೀರುವಂತಹ ಸಂಖ್ಯಾ ಬಲವನ್ನೇನೂ ಹೊಂದಿಲ್ಲ. ಆದರೂ, ಅವರಿಗೆ ಆಡಳಿತದ ನೇತೃತ್ವ ವಹಿಸಿಕೊಟ್ಟ ಕಾಂಗ್ರೆಸ್, ಸಾಮಾಜಿಕ ನ್ಯಾಯದ ಗಾಲಿ ಉರುಳಲು ದಾರಿ ಮಾಡಿಕೊಟ್ಟಿತು. ಈಗ ಹಿಂದುಳಿದ ವರ್ಗಗಳಲ್ಲೇ ಪ್ರಬಲರಾದ ಕುರುಬ ಸಮುದಾಯದ ಸಿದ್ದರಾಮಯ್ಯ ಅವರಿಗೆ ಅವಕಾಶ ಕಲ್ಪಿಸಿರುವುದು ಈ ಸಮುದಾಯಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.

ಕಾಯುವಿಕೆಗೆ ಅಂತ್ಯವೆಂದು?
ರಾಜ್ಯದ 22ನೇ ಮುಖ್ಯಮಂತ್ರಿಯ ಪದಗ್ರಹಣಕ್ಕೆ ಸಿದ್ಧತೆ ನಡೆದಿದೆ. ಆದರೆ, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಈವರೆಗೂ ಮುಖ್ಯಮಂತ್ರಿ ಹುದ್ದೆ ಸಮೀಪ ಬರಲು ಸಾಧ್ಯವೇ ಆಗಿಲ್ಲ. ಇತ್ತೀಚಿನ ಕೆಲ ವರ್ಷಗಳಲ್ಲಿ ದಲಿತ ಸಮುದಾಯದ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಹಲವು ಬಾರಿ ಕೇಳಿಬಂದರೂ, ಅವರ ಕನಸು ಮಾತ್ರ ಸಾಕಾರವಾಗಿಲ್ಲ. ಅಲ್ಪಸಂಖ್ಯಾತ ಸಮುದಾಯಗಳ ನಾಯಕರು ಮುಖ್ಯಮಂತ್ರಿಯಾಗುವ ಅವಕಾಶ ಸದ್ಯಕ್ಕೆ ಬರಲಾರದೇನೋ ಎಂಬಂತಿದೆ ರಾಜ್ಯ ರಾಜಕೀಯದ ಚಿತ್ರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT