ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಬ್ಯಾಂಕಿಂಗ್ ಬಲು ಸರಳ

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ನನ್ನ ಕಾಲೇಜು ದಿನಗಳಲ್ಲಿ (1975    ರಲ್ಲಿ) ಆರ್ಥರ್ ಹೈಲಿಯ ಕಾದಂಬರಿ `ಮನಿ ಚೇಂಜರ್ಸ್' ಓದುವ ಅವಕಾಶ ಸಿಕ್ಕಿತ್ತು. ಆ ಕಾದಂಬರಿಯಲ್ಲಿ  ಅಮೆರಿಕದ ಕ್ರೆಡಿಟ್ ಕಾರ್ಡ್ ಮತ್ತು ಎಟಿಎಂ ಬಳಕೆ ಕುರಿತ ಉಲ್ಲೇಖ ನನ್ನ ಗಮನವನ್ನು ಬಹಳವಾಗಿ ಸೆಳೆದಿತ್ತು. ಅದರ ಪ್ರಭಾವವೇನೋ ಎನ್ನುವಂತೆ ಕ್ರೆಡಿಟ್ ಕಾರ್ಡ್ ಬಳಸಿ ದೊಡ್ಡ ವಾಣಿಜ್ಯ ಮಳಿಗೆಗಳಲ್ಲಿ ಸಾಮಾನು ಖರೀದಿಸುವ ಕನಸು ಕಂಡಿದ್ದೆ'. 1995ರಲ್ಲಿ ಸರ್ಕಾರಿ ಸ್ವಾಮ್ಯದ ಒಂದೆರಡು ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ ಪರಿಚಯಿಸಿದಾಗ 20 ವರ್ಷಗಳ ಹಿಂದಿನ ನನ್ನ ಕನಸನ್ನೂ ನನಸು ಮಾಡಿ    ಕೊಂಡೆ'!

ನಂತರ 2002ರಲ್ಲಿ ಖಾತೆದಾರರು ದಿನದ ಯಾವುದೇ ಹೊತ್ತಿನಲ್ಲಿ ತಮ್ಮ ಬ್ಯಾಂಕ್ ಖಾತೆಯಿಂದ ನಗದು ಪಡೆಯಲು ಅನುಕೂಲವಾಗುವಂತೆ `ಆಟೊಮ್ಯಾಟಿಕ್ ಟೆಲ್ಲರ್ ಮೆಷಿನ್ಸ್' (ಎಟಿಎಂ) ಕೇಂದ್ರಗಳ ಬಳಕೆಗಾಗಿ ಎಟಿಎಂ ಕಾರ್ಡ್‌ಗಳ ದಾಳಿ ಶುರುವಾಯಿತು. ಪರಿಣಾಮ ಇಂದು ಎಲ್ಲರೂ ತಮ್ಮ ನಗದು ವಹಿವಾಟಿಗೆ `ಎಟಿಎಂ' ಗಳನ್ನೇ ಅವಲಂಬಿಸಿದ್ದಾರೆ. ಆದರೆ ಇದೇ (ಡೆಬಿಟ್) ಕಾರ್ಡ್ ಬಳಸಿ ವಾಣಿಜ್ಯ ಕೇಂದ್ರಗಳಲ್ಲಿ ಸಾಮಾನು ಖರೀದಿಸುವುದು ಹೆಚ್ಚು ಬಳಕೆಯಲ್ಲಿಲ್ಲ. ಕಾರಣ, ಬಹಳಷ್ಟು ವ್ಯಾಪಾರಸ್ಥರು ಗ್ರಾಹಕರಲ್ಲಿನ ಈ ಕಾರ್ಡ್‌ಗಳಿಂದ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಳ್ಳಲು ಅಗತ್ಯವಾದ `ಸ್ವೈಪಿಂಗ್   ಮೆಷಿನ್' ಹೊಂದಿಲ್ಲ.

ಇನ್ನೊಂದೆಡೆ ಎಲ್ಲಾ ವಾಣಿಜ್ಯ (ಕಮರ್ಶಿಯಲ್) ಬ್ಯಾಂಕ್‌ಗಳೂ, `ಈ ದಶಕದಲ್ಲಿಯಾದರೂ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ತಮ್ಮ ಖಾತೆದಾರರಿಗೆ ತಲುಪಿಸಲೇಬೇಕೆಂದು ಸಜ್ಜಾಗುತ್ತಿವೆ. ಇದಕ್ಕೆ ಕಾರಣವೂ ಇದೆ. ಮೊದಲನೆಯದಾಗಿ, ಬ್ಯಾಂಕಿನ ಸುಧಾರಿತ ತಂತ್ರಜ್ಞಾನ ಹಾಗೂ 2005ರಿಂದೀಚೆಗೆ ಭಾರತೀಯರಲ್ಲಿ ಮೊಬೈಲ್ ಫೋನ್ ಬಳಕೆ ಊಹಿಸಲಾಗದಷ್ಟು ಹೆಚ್ಚಿರುವುದು. ಭಾರತದ ಜನಸಂಖ್ಯೆ 120 ಕೋಟಿಯನ್ನೂ ದಾಟಿ ಮುನ್ನಡೆದಿದೆ.

ಮೊಬೈಲ್ ಫೋನ್‌ಗಳ ಸಂಖ್ಯೆಯೂ 90 ಕೋಟಿಗೆ ಹೆಚ್ಚಿದೆ. ಪ್ರತಿ ವ್ಯಕ್ತಿಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಕನಿಷ್ಠ (ಉಳಿತಾಯ ಮತ್ತು ಚಾಲ್ತಿ ಖಾತೆ ಸೇರಿಸಿ) 50 ಕೋಟಿ ಬ್ಯಾಂಕ್ ಖಾತೆಗಳಿರಬಹುದು. ಮೊಬೈಲ್ ಫೋನ್ ಮತ್ತು ಬ್ಯಾಂಕ್ ಖಾತೆ ಎರಡನ್ನೂ ಹೊಂದಿರುವವರು 25 ಕೋಟಿಗೂ ಅಧಿಕ ಮಂದಿ ಇರಬಹುದು.

ಹೀಗಿರುವಾಗ `ಮೊಬೈಲ್ ಬ್ಯಾಂಕಿಂಗ್' ಸೇವೆಯನ್ನೂ  ಏಕೆ ವಿಶಾಲ ವ್ಯಾಪ್ತಿಯಲ್ಲಿ ಜಾರಿಗೆ ತರಬಾರದು?ಇದೂ ಸಾಧ್ಯವಿದೆ. ಆದರೆ, ಈ ಸೇವೆ ಜಾರಿಯಲ್ಲಿ ಯಶಸ್ಸು ಗಳಿಸಲು ಬ್ಯಾಂಕ್‌ಗಳ ಆಡಳಿತ ವರ್ಗದ ಇಚ್ಛಾಶಕ್ತಿ ಹಾಗೂ ಸಿಬ್ಬಂದಿ ವರ್ಗದ ಆಸಕ್ತಿ- ತೊಡಗಿಸಿಕೊಳ್ಳುವಿಕೆ ಪ್ರಮುಖ ಪಾತ್ರ ವಹಿಸಬೇಕಿದೆ.

ಮೊಬೈಲ್ ಬ್ಯಾಂಕಿಂಗ್ ವಹಿವಾಟುಗಳಿಂದ ಹೆಚ್ಚುವ ಒತ್ತಡವನ್ನು ದೂರಸಂಪರ್ಕ ಸೇವಾ ಸಂಸ್ಥೆಗಳು ಎಷ್ಟು ಸಮರ್ಪಕವಾಗಿ ನಿಭಾಯಿಸುತ್ತವೆ ಎಂಬುದರ ಮೇಲೆಯೂ `ಮೊಬೈಲ್ ಬ್ಯಾಂಕಿಂಗ್' ಯಶಸ್ಸು ಅವಲಂಬಿತವಾಗಿದೆ.

ಈಗಿರುವ `ಎಟಿಎಂ'ಗಳಲ್ಲಿ ಹೆಚ್ಚಾಗಿ ನಗದು ಪಡೆಯುವ ವ್ಯವಹಾರವೇ ಪ್ರಧಾನ. ವಿದ್ಯುತ್, ನೀರು ಮೊದಲಾದ ಬಿಲ್ ಪಾವತಿ, ಮೊಬೈಲ್ ಫೋನ್ ರೀಚಾರ್ಜ್, ಎಲ್‌ಐಸಿ ಕಂತು ಪಾವತಿ ಮತ್ತಿತರ ಸೇವೆಗಳು ಕೆಲವೇ ಕೆಲವು ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಲ್ಲಿ ಇವೆ. ಹೆಚ್ಚಿನ ಎಟಿಎಂ ಕೇಂದ್ರಗಳು ನಗದು ವಿತರಿಸುವ ಸೇವೆಗೆ ಸೀಮಿತಗೊಂಡರೆ, `ಮೊಬೈಲ್ ಬ್ಯಾಂಕಿಂಗ್' ವ್ಯವಸ್ಥೆಯಲ್ಲಿ ನಗದು ವಹಿವಾಟಿಗೆ ಅವಕಾಶವೇ ಇಲ್ಲ.

ಆದರೆ, ಹಣ ವರ್ಗಾವಣೆಗೆ ನಾವು ಯಾವುದೇ ಬ್ಯಾಂಕ್ ಶಾಖೆ ಅಥವಾ ಎಟಿಎಂ ಕೇಂದ್ರ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ಆದರೆ, ಗ್ರಾಹಕ ತಾನು ಇರುವಲ್ಲಿಯೇ ತನ್ನ ಖಾತೆಯ ವಿವರ ಪಡೆಯಬಹುದು, ಖಾತೆಯಿಂದ ಖಾತೆಗೆ ಹಣ ವರ್ಗಾಯಿಸಬಹುದು, ಪೋಸ್ಟ್ ಪೇಯ್ಡ ಮೊಬೈಲ್ ಬಿಲ್ ಪಾವತಿ, ವಿಮಾ ಕಂತು ಪಾವತಿ, ಬಸ್-ರೈಲು-ವಿಮಾನ-ಸಿನಿಮಾ ಟಿಕೆಟ್ ಬುಕಿಂಗ್ ಮೊದಲಾದ ಹತ್ತು ಹಲವು ಸೇವೆಗಳನ್ನು ದಿನದ ಯಾವುದೇ ಹೊತ್ತಿನಲ್ಲಿ, ಯಾವುದೇ ಪ್ರದೇಶದಿಂದ ಬಳಸಿಕೊಳ್ಳಲು ಅವಕಾಶವಿರುತ್ತದೆ.

ಲ್ಲದೆ, ಮೊಬೈಲ್ ಬ್ಯಾಂಕಿಂಗ್ ಸೇವೆ ಬಳಸಿಕೊಳ್ಳುವುದು ಒಮ್ಮೆ ರೂಢಿಯಾದರೆ ನಂತರದಲ್ಲಿ ಬಾಳೆಹಣ್ಣನ್ನು ಸುಲಿದು ತಿಂದಷ್ಟೇ ಸುಲಭ. ಪೇಟೆಗೆ ಷಾಪಿಂಗ್ ಮಾಡಲು ಹೋಗುವಾಗ ಜೇಬಿನಲ್ಲಿ ಪರ್ಸ್, ಎಟಿಎಂ ಕಾರ್ಡ್ ಇಲ್ಲದೇ ಇದ್ದರೂ, ಕೈಯಲ್ಲಿ ಮೊಬೈಲ್ ಫೋನ್ ಇದ್ದರಾಯಿತು. ಆದರೆ, ಖಾತೆಯಲ್ಲಿ ಸಾಕಷ್ಟು ಹಣ ಇರಬೇಕು ಎಂಬುದನ್ನು ಮರೆಯುವಂತಿಲ್ಲ.

ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ
ಇದರ ಸೌಲಭ್ಯಗಳನ್ನು ಎರಡು ಬಗೆಯಾಗಿ ವಿಂಗಡಿಸಬಹುದು. ತಳ್ಳು(push)  ಮತ್ತು ಎಳೆ (PulI) ಸೇವೆ ಎನ್ನಬಹುದು.
ಗ್ರಾಹಕರ ಖಾತೆಯಲ್ಲಿ ನಿಗದಿತ ಮೊತ್ತದ (ರೂ 500 ಅಥವಾ ರೂ 1000) ಜಮಾ/ಖರ್ಚು ವಹಿವಾಟು ಆದಾಗ ಪ್ರತಿ ವ್ಯವಹಾರದ ವಿವರವೂ ಗ್ರಾಹಕರ ಮೊಬೈಲ್ ಫೋನ್‌ಗೆ `ಎಸ್‌ಎಂಎಸ್' ರೀತಿ ರವಾನೆ ಆಗುವಂತಹ ಸ್ವಯಂಚಾಲಿತ ವ್ಯವಸ್ಥೆಯನ್ನು ಬಹಳಷ್ಟು ಬ್ಯಾಂಕ್‌ಗಳು ಈಗಾಗಲೇ ಜಾರಿಗೆ ತಂದಿವೆ. ಆದರೆ, ಈ ಸೇವೆಯನ್ನು ಗ್ರಾಹಕರು ಇಚ್ಛಿಸಿದರಷ್ಟೇ ಒದಗಿಸಲಾಗುತ್ತಿದೆ. ಇದನ್ನು ತಳ್ಳು  ಸೇವೆ ಎನ್ನಲಾಗುತ್ತದೆ. ಈ ಸೌಲಭ್ಯ ಸಾಮಾನ್ಯವಾಗಿ ಉಚಿತವಾಗಿರುತ್ತದೆ.

ಖಾತೆಯಲ್ಲಿ ಹಣ ಎಷ್ಟಿದೆ ಎಂಬುದನ್ನು ತಿಳಿಯಲು ಬ್ಯಾಂಕ್‌ನ ನಿಗದಿತ ಸಂಖ್ಯೆಗೆ ಗ್ರಾಹಕರು ತಮ್ಮ ಮೊಬೈಲ್‌ನಿಂದ ನಿರ್ದಿಷ್ಟ ರೀತಿಯ ಕೋರಿಕೆ ಸಂದೇಶವನ್ನು ಕಳುಹಿಸಿದರೆ ಮರುಕ್ಷಣವೇ ಖಾತೆ ವಿವರ ಲಭಿಸುತ್ತದೆ. ಇದನ್ನು ಎಳೆಸೇವೆ ಎನ್ನುತ್ತಾರೆ. ಇಲ್ಲಿ ಎಸ್‌ಎಂಎಸ್ ಪ್ರಕ್ರಿಯೆ ಉಚಿತವೇ? ಶುಲ್ಕ ಇದೆಯೇ? ಎಂಬುದನ್ನು ಗ್ರಾಹಕ ಮೊಬೈಲ್ ಸೇವಾ ಕಂಪೆನಿಯಿಂದ ತಿಳಿದುಕೊಳ್ಳಬೇಕು.
ಈ ಪುಶ್-ಪುಲ್ ಸೇವೆಗಳಡಿ ಲಭ್ಯ ಇರುವ ಬ್ಯಾಂಕಿಂಗ್ ಸೌಲಭ್ಯಗಳನ್ನು ಇಲ್ಲಿ  ನೀಡಲಾಗಿದೆ.

1. ಖಾತೆಯಲ್ಲಿರುವ ಮೊತ್ತ ತಿಳಿಯಲು
2. ಕಡೆಯ 3 ವಹಿವಾಟುಗಳ ವಿವರ ಬೇಕಿದ್ದರೆ
3. ಖಾತೆಯಿಂದ ಖಾತೆಗೆ ಹಣ ವರ್ಗಾವಣೆ;
-ನಿಮ್ಮದೇ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ
-ನಿಮ್ಮ ಖಾತೆಯಿಂದ ನಿಮ್ಮದೇ ಬ್ಯಾಂಕ್‌ನ ಬೇರೆ ಗ್ರಾಹಕರ ಖಾತೆಗೆ ಅಥವಾ ಇತರೆ ಬ್ಯಾಂಕಿನ ಗ್ರಾಹಕರ ಖಾತೆಗೆ ಹಣ ವರ್ಗಾವಣೆ
4. ಚೆಕ್ ಪುಸ್ತಕಕ್ಕೆ ಕೋರಿಕೆ ಸಲ್ಲಿಸುವುದು
5. ಠೇವಣಿ(ಫಿಕ್ಸೆಡ್ ಡಿಪಾಸಿಟ್) ಅವಧಿ ಮುಂದುವರಿಸುವ ಇಚ್ಛೆ ಬ್ಯಾಂಕ್‌ಗೆ ತಿಳಿಸುವುದು
6. ಮೊಬೈಲ್ ಬ್ಯಾಂಕಿಂಗ್ `ಪಾಸ್‌ವರ್ಡ್' ಬದಲಾವಣೆ
7. ಆಯಾ ದಿನದ ಬಂಗಾರದ ಬೆಲೆ       ತಿಳಿಯಲು
8. ಬ್ಯಾಂಕ್‌ನ ಎಟಿಎಂ ಸಮೀಪದಲ್ಲಿ ಎಲ್ಲಿದೆ ಎಂಬುದನ್ನೂ ತಿಳಿಯಲು (ಎಟಿಎಂ ಲೊಕೇಟರ್)
9. ಮೊಬೈಲ್ ರೀಚಾರ್ಜ್
10. ರೇಲ್ವೆ ಟಿಕೆಟ್ ಕಾಯ್ದಿರಿಸುವುದು ನಿಮ್ಮ ಖಾತೆ ಇರುವ ಬ್ಯಾಂಕ್ ಶಾಖೆಗೆ ತೆರಳಿ ನಿಗದಿತ ಅರ್ಜಿ ಸಲ್ಲಿಸಿದರೆ ಇದಿಷ್ಟೂ ಸೇವೆಗಳನ್ನು ಮೊಬೈಲ್ ಫೋನ್‌ನಲ್ಲಿ ಪಡೆಯಬಹುದು.

ಸೌಲಭ್ಯ ಪಡೆಯಲು
1. ಉಳಿತಾಯ ಅಥವಾ ಚಾಲ್ತಿ ಅಥವಾ ಒವರ್‌ಡ್ರಾಫ್ಟ್ ಖಾತೆ ಹೊಂದಿರಬೇಕು. ಸ್ವಂತದ ಮೊಬೈಲ್ ಫೋನ್ ಇರಲೇಬೇಕು. ಅದರ ಸಂಖ್ಯೆ ಬದಲಾದರೆ ಬ್ಯಾಂಕ್ ಗಮನಕ್ಕೆ ತರಬೇಕು.

2. ಹಲವು ಖಾತೆಗಳಿದ್ದರೆ ಒಂದು ಖಾತೆಯನ್ನು ಮೂಲ ಖಾತೆ ಎಂದು ಸ್ಪಷ್ಟಪಡಿಸಬೇಕು(ಈ ಮೂಲ ಖಾತೆ ಮೂಲಕವಷ್ಟೇ  ಮೊಬೈಲ್ ಸೇವೆ ಲಭ್ಯವಿರುತ್ತದೆ). ಜತೆಗೆ ಯಾವ ಖಾತೆಗಳು ಈ ಸೌಲಭ್ಯಕ್ಕೆ ಒಳಪಡಬೇಕು ಎಂಬುದನ್ನೂ ಸ್ಪಷ್ಟವಾಗಿ ಬ್ಯಾಂಕ್‌ಗೆ ತಿಳಿಸಬೇಕು.

ಈ ಸೇವೆಯಡಿ ಲಭ್ಯವಿರುವ ಸೌಲಭ್ಯಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರಬಹುದು. ನಿಮಗೆ ಅಗತ್ಯವಿರುವ ಸೌಲಭ್ಯಗಳು ಲಭ್ಯವಿದೆಯೇ? ಇಲ್ಲವೇ ಮೊದಲೇ ಖಚಿತಪಡಿಸಿಕೊಳ್ಳಿರಿ.

ಬ್ಯಾಂಕ್ ನೀಡುವ ಪಾಸ್‌ವರ್ಡ್ (ಗುಪ್ತಸಂಖ್ಯೆ) ಬಳಸಿ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡುವುದು ಹೇಗೆ? ಇನ್ನಿತರ ಸೇವೆ ಬಳಸಲು, ಯಾವ ಅದೇಶ ಕಳುಹಿಸಿ  ಯಾವ ಮಾಹಿತಿ ಪಡೆಯಬಹುದು ಎಂಬುದನ್ನು ಶಾಖೆಯ ಅಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳಿರಿ. ಇದಕ್ಕೆ ಸಂಬಂಧಿಸಿದ ಕೈಪಿಡಿ ಕೇಳಿ ಪಡೆಯಿರಿ.

ಅರ್ಜಿ ಸಲ್ಲಿಸಿದ ನಂತರ ಒಂದೆರಡು ದಿನ ಅಥವಾ ವಾರದೊಳಗೆ ನಿಮ್ಮ ಮೊಬೈಲ್‌ಗೆ `ನಿಮ್ಮ ಅರ್ಜಿ ಸ್ವೀಕೃತವಾಗಿದೆ' ಎಂಬ ಸಂದೇಶದ ಜತೆಗೆ ಗುಪ್ತಸಂಖ್ಯೆ  ಬರುತ್ತದೆ.

ಗುಪ್ತಸಂಖ್ಯೆ ಬಳಸಿ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಿದರೆ ಪ್ರಕ್ರಿಯೆ ಸರಿ ಇದ್ದಲ್ಲಿ `ನಿಮಗೆ ಬ್ಯಾಂಕಿನ ಮೊಬೈಲ್ ಸೇವೆಗೆ ಸ್ವಾಗತ' ಎಂಬ ಸಂದೇಶ ಬರುತ್ತದೆ. ಈಗ ನಿಮ್ಮ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭಗೊಂಡಿದೆ ಎಂದೇ ಅರ್ಥ.  ಗುಪ್ತಸಂಖ್ಯೆ ಕಾಲಕಾಲಕ್ಕೆ ಬದಲಿಸುವುದು ಉತ್ತಮ.

ನೀವು ಆಗ್ಗಾಗ್ಗೆ ನಿಮ್ಮದೇ ಬ್ಯಾಂಕ್‌ನ ಬೇರೆ ಖಾತೆಗಳಿಗೆ ಮತ್ತು ಬೇರೆ ಬ್ಯಾಂಕಿನ ಕೆಲವು ಖಾತೆಗಳಿಗೆ ಹಣ ಪಾವತಿಸುವುದಿದ್ದರೆ ಬ್ಯಾಂಕ್ ಶಾಖೆಗೆ ತೆರಳಿ ಯಾವ ವ್ಯಕ್ತಿಗಳ ಖಾತೆಗಳಿಗೆ ಹಣ ಪಾವತಿಸಬೇಕಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಂದರೆ, ವ್ಯಕ್ತಿಯ ಹೆಸರು, ವ್ಯಕ್ತಿಗೊಂದು ಉಪನಾಮ (ಚುಟುಕಾದ ಹೆಸರು), ಶಾಖೆ ಹೆಸರು-ಸಂಖ್ಯೆ(ಐಎಫ್‌ಎಸ್ ಕೋಡ್)  ಮತ್ತು ಖಾತೆ ಸಂಖ್ಯೆಯನ್ನು ಲಿಖಿತವಾಗಿ ತಿಳಿಸಬೇಕು. ಹಣ ವರ್ಗಾವಣೆ ಮಾಡುವಾಗ ಉಪನಾಮ ಬಳಸಿದರೂ ಸಾಕು. ಪ್ರತಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣ ರವಾನೆಗೆ ಗರಿಷ್ಠ ಮಿತಿ ನಿಗದಿಪಡಿಸಿರುತ್ತವೆ. ಅದನ್ನೂ ಗ್ರಾಹಕ ತಿಳಿದಿರಬೇಕು.

ಹಣ ಪಡೆದುಕೊಳ್ಳುವವನ ಹೆಸರನ್ನು ಬ್ಯಾಂಕಿನಲ್ಲಿ ದಾಖಲಿಸುವುದು ಅನಿವಾರ್ಯ. ಆದರೆ ನಿತ್ಯದ ಇತರೆ ವ್ಯವಹಾರದಲ್ಲಿ ಯಾರು ಯಾರಿಗೆಲ್ಲ ಹಣ ಕೊಡಬೇಕಾಗುತ್ತದೆ ಎಂಬುದನ್ನು ಮೊದಲೇ ನಿರ್ಧರಿಸುವುದು  ಸಾಧ್ಯವಿಲ್ಲವಲ್ಲ. ಅಂದರೆ, ವಾಣಿಜ್ಯ ಕೇಂದ್ರಗಳಲ್ಲಿ, ಷಾಪಿಂಗ್ ಮಾಲ್‌ಗಳಲ್ಲಿ ಖರೀದಿ ನಡೆಸಿದಾಗ ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಲು ಸಾಧ್ಯವಾಗದು.

`ಹಾಗಾದರೆ ಮೊಬೈಲ್ ಬ್ಯಾಂಕಿಂಗ್ ಕ್ರಾಂತಿ ಬರೀ ಭ್ರಾಂತಿ ಆಯ್ತಲ್ಲಾ ಮಾರಾಯ್ರೇ ಅಂತೀರಾ'!
ಭ್ರಮನಿರಸನರಾಗದಿರಿ. ಅದಕ್ಕೆ ಬೇರೆಯದೇ ದಾರಿ ಇದೆ. ಅಂತರಬ್ಯಾಂಕ್ ಮೊಬೈಲ್ ಹಣ ಪಾವತಿ ಸೇವೆಯಡಿ ಇದು ಸಾಧ್ಯವಿದೆ. ಆಂಗ್ಲಭಾಷೆಯಲ್ಲಿ        (Inter Bank Mobile Payment Service)  ಇದನ್ನು `ಐಎಂಪಿಎಸ್' ಎನ್ನುತ್ತಾರೆ. ಎಲ್ಲಾ ಬ್ಯಾಂಕಿನ ಮೊಬೈಲ್ ಬ್ಯಾಂಕ್ ಹಣ ವರ್ಗಾವಣೆ ವ್ಯವಸ್ಥೆಯನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)  ನಿಭಾಯಿಸುತ್ತದೆ. ಇದಕ್ಕಾಗಿ ಗ್ರಾಹಕರೇನು ಮಾಡಬೇಕು?

ನೀವು ಮೊಬೈಲ್ ಬ್ಯಾಂಕಿಂಗ್ ಸೇವೆ ಹೊಂದಿರುವ ಶಾಖೆಯಲ್ಲಿ `ಐಎಂಪಿ' ಸರ್ವಿಸ್ ಬೇಕಿದೆ ಎಂದು ಬೇಡಿಕೆ ಸಲ್ಲಿಸಬೇಕು. ಎರಡು ಮೂರು ಖಾತೆ ಇದ್ದಲ್ಲಿ ಮೊಬೈಲ್ ಸೇವೆ ಪಡೆಯುವಾಗ ನೀಡಿದ್ದ ಖಾತೆ ಸಂಖ್ಯೆಯನ್ನು ತಿಳಿಸಬೇಕು. ಯಾವ ಖಾತೆಯಿಂದ `ಐಎಂಪಿಎಸ್'ಗೆ ಹಣ ವರ್ಗಾಯಿಸಲು ಇಚ್ಛಿಸುವಿರಿ ಅಥವಾ ನಿಮ್ಮ ಯಾವ ಖಾತೆಗೆ ಬೇರೆಯವರು ಹಣ ಪಾವತಿಸಬೇಕೆಂದು ಇಚ್ಛಿಸುತ್ತೀರಿ ಆ ಖಾತೆಯ ವಿವರ ನೀಡಿದರೆ ವಾರದೊಳಗೆ ನಿಮ್ಮ ಮೊಬೈಲ್‌ಗೆ   ಎಂಎಂಐಡಿ(ಮೊಬೈಲ್ ಮನಿ ಐಡಿಂಟಿೈಯರ್ (Mobile Money Identifier) ಸಂದೇಶ ಬರುತ್ತದೆ. ಹಣ ಕಳಿಸುವ ಮತ್ತು ಪಡೆಯುವ ವ್ಯಕ್ತಿಯ ಖಾತೆಯ ಎಂಎಂಐಡಿಯನ್ನೂ(7 ಅಂಕಿ) ಹೊಂದಿರುವುದೂ ಅಗತ್ಯ.

ರಜಾ ದಿನ ಪೇಟೆಗೆ ಹೋಗಿ ಸಾಮಾನು ಖರೀದಿಸುತ್ತೀರಿ. ಹಣ ಪಾವತಿಸಬೇಕಿದೆ. ಆದರೆ, ಪರ್ಸ್ ಮರೆತಿದ್ದೀರಿ. ಮೊಬೈಲ್ ಫೋನ್ ಇದೆಯಲ್ಲ, ಚಿಂತೆ ಏಕೆ? ಅಂಗಡಿ ಮಾಲೀಕನೂ ಮೊಬೈಲ್ ಬ್ಯಾಂಕ್ ಸೇವೆ ಹೊಂದಿದ್ದು ತನ್ನ ಖಾತೆಗೆ ಎಂಎಂಐಡಿ ಪಡೆದುಕೊಂಡಿದ್ದರೆ ಆಯಿತು. ಆಗ ನಿಮ್ಮ ಮೊಬೈಲ್ ಫೋನ್‌ನಲ್ಲಿರುವ `ಮೊಬೈಲ್ ಬ್ಯಾಂಕಿಂಗ್' ಅಪ್ಲಿಕೇಷನ್ ತೆರೆದು, `ಐಎಂಪಿಎಸ್- ನಿಮ್ಮ ಖಾತೆ ಸಂಖ್ಯೆ- ವ್ಯಾಪಾರಿಯ ಮೊಬೈಲ್ ಸಂಖ್ಯೆ ಮತ್ತು ಎಂಎಂಐಡಿ- ಪಾವತಿಸಬೇಕಿರುವ ಮೊತ್ತ ನಮೂದಿಸಿ ಕಡೆಗೆ ನಿಮ್ಮ ಮೊಬೈಲ್ ಬ್ಯಾಂಕ್‌ನ ಗುಪ್ತಸಂಖ್ಯೆ(ಪಾಸ್‌ವರ್ಡ್) ದಾಖಲಿಸಿದರೆ ಆಯಿತು.

ನಿಮ್ಮ ಖಾತೆಯಿಂದ ವ್ಯಾಪಾರಿಯ ಖಾತೆಗೆ ತಕ್ಷಣವೇ ಹಣ ವರ್ಗಾವಣೆ ಆಗಿರುತ್ತದೆ. ಹಣ ವರ್ಗಾವಣೆ ಮಾಡಿದವರು ಮತ್ತು ಪಡೆದವರು ಇಬ್ಬರ ಮೊಬೈಲ್‌ಗೂ ಹಣ ರವಾನೆ  ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಸಂದೇಶ ಬರುತ್ತದೆ.

ಬೇರೆಯವರರು ನಿಮಗೆ ಹಣ ಪಾವತಿ ಮಾಡುವುದಿದ್ದರೆ ನಿಮ್ಮ ಮೊಬೈಲ್ ಸಂಖ್ಯೆ, ಎಂಎಂಐಡಿಯನ್ನು ಹಣ ಪಾವತಿಸುವವರಿಗೆ ನೀಡಿರಿ. 
ಹೆಚ್ಚಿನ ಮೊತ್ತ ವರ್ಗಾಯಿಸುವುದಿದ್ದರೆ ನಿಮ್ಮ ಮೊಬೈಲ್ ಸೇವಾ ಸಂಸ್ಥೆಯಿಂದ ಜನರಲ್ ರೇಡಿಯೋ ಪ್ಯಾಕೆಟ್ ಸರ್ವೀಸ್ (ಜಿಪಿಅರ್‌ಎಸ್) ಸೌಲಭ್ಯ ಪಡೆಯಬೇಕು. ಆಗ ಮೊಬೈಲ್‌ನಿಂದಲೇ  ರೂ. 50000 ದವರೆಗೂ ವರ್ಗಾಯಿಸಬಹುದು.

ಜಿಪಿಅರ್‌ಎಸ್ ಸೌಲಭ್ಯದಿಂದಾಗಿ ನಿಮ್ಮ ಮೊಬೈಲ್‌ಗೆ ಅಂತರ್ಜಾಲ ಸಂಪರ್ಕವೂ ಸಾಧ್ಯವಾಗುತ್ತದೆ. ಆಗ ಕಂಪ್ಯೂಟರಿನಲ್ಲಿರುವಂತೆ `ಮೆನು'(ಸೌಕರ್ಯಗಳ ಪಟ್ಟಿ) ಲಭ್ಯವಾಗುವದರಿಂದ ಹಣ ರವಾನೆ ಸುಲಭ. ಆದರೆ, ನಿಮ್ಮ ಮೊಬೈಲ್‌ನ ಪ್ರೊಸೆಸರ್ ಹೆಚ್ಚಿನ ಸಾಮರ್ಥ್ಯದ್ದಾಗಿರುವುದು ಅವಶ್ಯ.

ಸ್ಮಾರ್ಟ್‌ಫೋನ್‌ಗಳಾದರೆ ಸೂಕ್ತ.
ಈಗ ಹೇಳಿ, ನೀವೂ `ಮೊಬೈಲ್ ಬ್ಯಾಂಕಿಂಗ್ ಸೇವೆ' ಪಡೆಯುವಿರಾ?  ಹಾಗಿದ್ದರೆ, ಒಂದೆರಡು ಎಚ್ಚರಿಕೆ ಮಾತು;
ಮನೆಯಿಂದ ಹೊರಗಿದ್ದರೆ ನಿಮ್ಮ ಮೊಬೈಲನ್ನು ಬಹಳ ಜೋಪಾನವಾಗಿ (ಆತ್ಮಲಿಂಗದಂತೆ) ಇಟ್ಟುಕೊಳ್ಳಿರಿ. ಮೊಬೈಲ್ ಫೋನ್ ಕಳೆದುಕೊಂಡಿರೋ ನಿಮ್ಮ ಪಾಡು  ರಾವಣನ ಪಾಡಿನಂತೆಯೇ ಆಗುತ್ತದೆ. 

ಮೊಬೈಲ್ ಬ್ಯಾಂಕಿಂಗ್ ಗುಪ್ತಸಂಖ್ಯೆ ಎಲ್ಲೂ ಬರೆದಿಡದೆ, ಮೊಬೈಲ್‌ನಲ್ಲೂ ದಾಖಲಿಸದೆ ನೆನಪಿನ ಕೋಶದಲ್ಲಿಯಷ್ಟೇ ಭದ್ರವಾಗಿರಿಸಿ. ಮೊಬೈಲ್‌ನಲ್ಲಿ ಅಕ್ಸೆಸ್ ಕೋಡ್ (ಪ್ರವೇಶಾಧಿಕಾರ ) ಬಳಸಿದರೆ ದುರ್ಬಳಕೆ ತಡೆಗಟ್ಟಬಹುದು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT